ಇದು ‘ಅನಾಮಿಕಾ’ ಯುಗಾದಿ : ಅಪ್ಪನ ಮುಂಗೈ ಮೇಲೆ ನನ್ನ ಕೈ ಇಟ್ಟೆ..

ಒಲವೆಂದರೆ ಯುಗಾದಿ ಬೇವು ಬೆಲ್ಲವಲ್ಲ, ಅದು ಬಾಳಿನ ಉಪ್ಪು

ಅನಾಮಿಕಾ

ಜಿಡ್ಡು ಕೃಷ್ಣಮೂರ್ತಿ ಅವರ ‘Education & the Significance of Life’ ಪುಸ್ತಕದ ಕೊನೆಯ ಭಾಗ ‘Art, Beauty And Creation’ ಶುರುವಾಗುವುದು, ‘ತಮ್ಮ ಕೈಯಿಂದ ತಾವೇ ಪಾರಾಗಲು ಯತ್ನಿಸುವವರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ…’ ಎಂದು. ಖರೆ ಎಂದುಕೊಂಡು ಸಾಗಬಹುದಾಗಿದ್ದ ಸಾಲುಗಳು ನನ್ನನ್ನು ಹಿಡಿದು ನಿಲ್ಲಿಸಲು ಕಾರಣ ಅದು ಐವತ್ತರ ದಶಕದ ಪುಸ್ತಕ ಮತ್ತು ಇವತ್ತು ನಾನು ಅದೆ ದಾರಿಯಲ್ಲಿದ್ದೇನೆ ಎನ್ನುವುದು!

ತಿಳಿವಳಿಕೆ ಬಂದ ದಿನದಿಂದ ನನ್ನದು ಯಾರ ಬಂಧನವೂ ಇಲ್ಲದ ಬೇಲಗಾಂ ಜೀವನವಾದರೂ, ಎಲ್ಲ ಸಂಬಂಧಗಳಲ್ಲು ನಾನು ಅತಿ ಹೆಚ್ಚು ಬಳಸಿದ ಪದ ‘ಇಲ್ಲಿಂದ ಓಡಿ ಹೋಗಿ ಬಿಡಬೇಕು’ ಎನ್ನುವುದು. ಅದನ್ನು ಅಕ್ಷರಶಃ ಜಾರಿಗೆ ತಂದಿದ್ದೇನೆ.

ಜೀವಿ-ಜೀವಿಗಳ ನಡುವಿನ ಪ್ರಕೃತಿ ಸಹಜ ಭಾವನಾತ್ಮಕ ಸಂಘರ್ಷದಲ್ಲಿ ಬದುಕದಂತೆ ಮಾಡುವ, ಜಗಳ ವಿಷಯಕ್ಕೆ ಸಂಬಂಧಿಸಿದ್ದು ಮಾತು ಸಂವಹನಕ್ಕಿರೋದು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳುವ ಬದಲು ವ್ಯಕ್ತಿಗಳಿಂದಲೆ ದೂರ ಓಡುವುದನ್ನು ಕಲಿಸುವ ಶಿಕ್ಷಣ ಸೃಷ್ಟಿಯ ಮೊದಲ ಶತ್ರು.

ನಾವು ಕಾಡಿಗೆ ವಲಸೆ ಹೋದ ವರ್ಷ ಸಿಕ್ಕಾಪಟ್ಟೆ ಮಳೆ. ಕಿರಾಣಿ, ಗಿರಣಿಗು ಹೊರಗೆ ಹೋಗಲು ಸಾಧ್ಯವಾಗದಂತೆ ಕಾಡಿಗು ನಾಡಿಗು ಇದ್ದ ಸಂಬಂಧ ಕಡೆದು ಹೋಗಿತ್ತು. ಅಪ್ಪ ತಿರುಗಿಸುತ್ತಿದ್ದ ದೊಡ್ಡ ಬೀಸೋ ಕಲ್ಲಿಗೆ ಅವ್ವ ಹಾಡುತ್ತ ಮುಕ್ಕು ಹಾಕುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಮಳೆ ಬಂದರೆ ಕೇಡಲ್ಲ ಮಕ್ಕಳು ಉಂಡರೆ ಕೇಡಲ್ಲ ಎಂದು ತಮಗೆ ತಾವೆ ಸಮಾಧಾನ ಮಾಡಿಕೊಂಡು, ಅಷ್ಟ ಜನ ಆಳುಮಕ್ಕಳ ದೇಖರೇಖಿಗೆ ಬೇಕಾದ ಸಹನೆ ಅವರಿಗೆ ಬಂದಿದ್ದು ಎಲ್ಲಿಂದ?

ಇಪ್ಪತ್ತೈದು ವರ್ಷಗಳ ಹಿಂದೆ ಲೋಕಾರೂಢಿಯಂತೆ ಕೂಡು ಕುಟುಂಬ ಬೇರೆಯಾಗುವ ಪ್ರಸಂಗ ಬಂದಾಗ ದೊಡ್ಡವರಾದ ಅಪ್ಪ, ಆಸ್ತಿಯಲ್ಲಿ ಸಣ್ಣವರು ಬಿಟ್ಟಿದ್ದನ್ನು ತೆಗೆದುಕೊಳ್ಳುವುದು ಎನ್ನುವುದಾಯಿತು. ಅವ್ವನ ಬಂಗಾರ ಮಾರಿ ತಮ್ಮಂದಿರಿಗೆ ಆಸ್ತಿ ಮಾಡಿಟ್ಟಿದ್ದ ಅಪ್ಪ, “ಮನೆಯ ಸಾಮಾನುಗಳನ್ನು ಸಾಗಿಸುತ್ತಿದ್ದ ತಮ್ಮಂದಿರ ಹೆಂಡತಿಯರಿಗೇನಾದರು ಈ ಸಾಮಾನು ನಮಗಿರಲಿ ಎಂದರೆ ನನ್ನಾಣೆ,” ಎಂದು ಅವ್ವನಿಗೆ ತಾಕೀತು ಮಾಡಿದ್ದರು.

ಹಿಸೆ(ಸ್ಸೆ)ಯ ಕೊನೆಯ ಹಂತ ಎಂಬಂತೆ ಕಾಕೂಗಳಿಬ್ಬರು ಅಡಿಗೆ ಮನೆ ಒಲೆಯಲ್ಲಿ ಉರಿಯುತ್ತಿದ್ದ ದೊಡ್ಡವೆರಡು ಜಾಲಿ ಕಟ್ಟಿಗೆ ತುಂಡುಗಳನ್ನು ಆ ಮಧ್ಯರಾತ್ರಿ ಎತ್ತಿಕೊಂಡು ಹೋಗುವಾಗಲು ಇಬ್ಬರು ತುಟಿ ಬಿಚ್ಚಲಿಲ್ಲ. ಬೆಳಗಾದರೆ ಅವ್ವನ ಶ್ರಾವಣದ ಗೌರಿ ಪೂಜೆಗೆ ದೊಡ್ಡಮನೆಯಲ್ಲಿ ಉಳಿದಿದ್ದು ಎರಡೇ ಸಾಮಾನು. ಒಂದು, ಪಡಸಾಲೆಯ ಗೋಡೆಯ ಮೇಲೆ ತೊಲೆ ಮರೆಯಲ್ಲುಳಿದ ನಮ್ಮನ್ನಾಡಿಸಿದ ತೊಟ್ಟಿಲು. ಇನ್ನೊಂದು, ಹತ್ತಿ ತುಂಬುವ ಕೋಣೆಯ ಕಿಟಕಿಯಲ್ಲಿನ ಗೋಣಿಚೀಲ ಹೊಲೆಯುವ ದಬ್ಬಳ(ಣ).

ಸಂಜೆ ಶುರುವಾಗಿದ್ದ ಜಿಟಜಿಟಿ ಮಳೆ ರಾತ್ರಿಗೆ ಗುಡುಗು, ಸಿಡಿಲು ಸಮೇತ ಆರ್ಭಟಿಸುತ್ತಿದ್ದಾಗ, ನಾಲ್ಕು ಮಕ್ಕಳನ್ನು ತೋಳಿನಲ್ಲಿ ಅವಚಿ ಹಿಡಿದ ಅಪ್ಪ-ಅವ್ವ ಏಕಕಾಲದಲ್ಲಿ ‘ದೇವರಿಚ್ಛೆ’ ಎಂದರು. ಎಷ್ಟೆಲ್ಲ ಓದಿದ್ದೇನೆ, ಕೆಲಸವಿದೆ, ಸಂಬಳವಿರುವ ನನಗೆ ಶಾಲೆ ಕಲಿಯದ ಸಂಬಳವಿಲ್ಲದ ಅವರಿಬ್ಬರಿಗೆ ಜೊತೆ ಇರುವ ಯಾರ ಬಗ್ಗೆಯೂ ಆಕ್ಷೇಪಣೆಯೆ ಇಲ್ಲದಂತೆ ಬಂದಿದ್ದನ್ನು ಮೌನವಾಗಿ ಎದುರಿಸುವ ಗಟ್ಟಿತನ ಕೊಟ್ಟ ಆ ನಂಬಿಕೆ ಯಾವುದು ಎನ್ನುವುದು ಈಗಲೂ ಒಗಟು.

ಮೊನ್ನೆ ಕೂಡ, ಬರಿದಾಗಿರುವ ಮನದ ನೋವನ್ನು ಶ್ರಮ, ತತ್ತ್ವಜ್ಞಾನ ಯಾವುದರ ಮೂಲಕ ಮಾಗಿಸುವುದು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದರ ಮೊದಲ ಭಾಗವಾಗಿ ಎಲ್ಲರಿಂದ ಎಲ್ಲದರಿಂದ ಸ್ವಯಂ ಗಡಿಪಾರಾಗಿ, ಹೊಲ ಸೇರಿ ಮಾಡಿದ್ದು ಎರಡೆ ಕೆಲಸ ಕೃಷಿ ಮತ್ತು ಓದು. ಕಬ್ಬಕ್ಕಿಯಂತೆ ಕಾಡಿದವರನ್ನೆಲ್ಲ ಬಿಟ್ಟು ಒಬ್ಬಳೆ ಹೊಲಕ್ಕೆ ಬಂದು ಕಾವಲು ಚಪ್ಪರದ ಮೇಲಿಂದ ಹಕ್ಕಿಗಳನ್ನು ಓಡಿಸಿಕೊಂಡಿದ್ದೆ. “ನೀನು ನನಗೆ ಕೊಟ್ಟ ಸಂತೋಷವನ್ನು ಯಾರು ಬೇಕಾದರೂ ಕೊಡಬಹುದು. ಆದರೆ ನೀನು ನನಗೆ ಕೊಟ್ಟ ದುಃಖವನ್ನು ಇನ್ಯಾರೂ ಕೊಡಲಾರರು,” ಎಂದು ಸಂಕಟಕ್ಕೆ ಮಾತಿನ ರೂಪ ಕೊಟ್ಟವರ ಬಗ್ಗೆ ನನಗು ನೋವಿದೆ. ಆದರೆ ಏನು ಮಾಡಲಿ?

ಸದಾ ಅತಿರೇಕದ ಅಂಚಿನಲ್ಲಿ ಬದುಕುವ ನಾನು ಪ್ರತಿ ಸಲ ಸಂಬಂಧವೊಂದರ ಜತೆ ಒಡನಾಡುವುದು ಮುಳುಗುವವರು ಉಸಿರಾಟಕ್ಕಾಗಿ ಹೋರಾಡುವಷ್ಟು ತೀವ್ರತೆಯಿಂದಲೆ. ಈ ತೀವ್ರತೆ ಸುಳ್ಳಲ್ಲ ಆದರೆ ಸಮಸ್ಯೆ ಕೂಡ ತೀವ್ರತೆಯದ್ದೆ. ಆದರೆ ನನಗೆ ಹೀಗಲ್ಲದೆ ಬೇರೆ ರೀತಿ ಇರಲು ಬರುವುದಿಲ್ಲ.

ಎದೆಗೆ ಬೆಂಕಿ ಬಿದ್ದಾಗಲೆಲ್ಲ ನನ್ನ ಈ ವರ್ತನೆ ಪುನರಾವರ್ತನೆ ಆಗುತ್ತಿದ್ದರೂ ನನ್ನನ್ನು ನಾ ಶಿಕ್ಷಿಸಿಕೊಳ್ಳುವ ಇಷ್ಟು ಧೀರ್ಘದ ಅವಧಿಯನ್ನು ಅಪ್ಪ ನೋಡಿಲ್ಲ. ಮೊನ್ನೆ ಕತ್ತಲಾದರೂ ಎಲೆ ತೋಟದ ನಡುವಿನಲ್ಲಿದ್ದೆ. ನಾಷ್ಟಾ, ಊಟ ತಂದಾಗಲೂ ಸುಮ್ಮನಿರುತ್ತಿದ್ದವಳು, ಯಾವುದಕ್ಕೊ ನಾನಿಲ್ಲದ್ದಲ್ಲಿಗೆ ಬಂದ ಅಪ್ಪನಿಗೆ ಏನೋ ಹೇಳಬೇಕೆನಿಸಿ, ಮಾತಿಗಿಳಿದೆ.

ನನಗೆ ಪದೇ ಪದೇ ಎಲ್ಲರಿಂದ ತಪ್ಪಿಸಿಕೊಳ್ಳಬೇಕು ಎನಿಸುತ್ತದೆ. ಸಂಬಂಧಗಳಲ್ಲಿ ನಿಷ್ಠೆಗೆ ಸಂಬಂಧಿಸಿದ ಬಾಹ್ಯ ಬೇಡಿಕೆಗಳು ಒಲವನ್ನು ಪ್ರಾಮಾಣಿಕ ಅನುರಾಗ-ಅಕ್ಕರೆಯಾಗಿಸುವ ಬದಲಿಗೆ ಕರ್ತವ್ಯದ ಮಟ್ಟಕ್ಕೆ ಇಳಿಸಿ ಬಿಡುತ್ತವೆ. ನನಗದು ಇಷ್ಟವಾಗುವುದಿಲ್ಲ. ಹಾಗಂತ ನಾನು ಜವಾಬ್ಜಾರಿಯಿಂದ ನುಣುಚಿಕೊಳ್ಳುವ ಹೊಣೆಗೇಡಿಯೇ? ಇದೆಲ್ಲ, ಒಲವು? ಸಾಂಗತ್ಯ? ಸಾಧನೆ? ಅಸ್ಮಿತೆಯ ಹುಡುಕಾಟ? ನನಗೆ ಬೇಕಿರುವುದಾದರೂ ಏನು ಎನ್ನುವುದು ಸ್ಪಷ್ಟವಾಗದೆ ಉಂಟಾದ ಹಪಾಹಪಿಯೆ? ಮೈಗೆಲಸವಾಗಲಿ, ಮನಸಿನ ಕೆಲಸವಾಗಲಿ ಬಲವಂತವಾಗಿ ಮಾಡಿ ಗೊತ್ತಿಲ್ಲದ ನನ್ನ ಸ್ವತಂತ್ರ ಮನಸ್ಥಿತಿಯ ದ್ವಂದ್ವ ನಿಮಗೆ ವಿಚಿತ್ರವೆನಿಸಬಹುದು ಅಥವಾ ಅರ್ಥವಾಗದೆಯೂ ಹೋಗಬಹುದು.

ನೀವಾಗಿಯೆ ಯಾವತ್ತು ಕೇಳಿಲ್ಲ. ಈ ಸಲ ನಾನಾಗಿಯೆ ಹೇಳದಿರಲು ಕಾರಣ, ಇಬ್ಬರಿಗೂ ತಲೆಮಾರಿನ ಅಂತರ ಇರುವುದರಿಂದ ಈ ವಿಷಯದಲ್ಲಿ wavelength ಹೊಂದಾಣಿಕೆ ಆಗಲ್ಲ ಎನ್ನುವ ನನ್ನ ಭ್ರಾಂತಿ ಇರಬಹುದು ಎಂದೆ.

ಈ ಭ್ರಮೆಯ ಪರದ ಸರಿಯುವಂತೆ ಮಾತನಾಡಲು ಶುರು ಮಾಡಿದ ಅಪ್ಪ, “ಒಲವಿಗೆ ಹೆಸರು, ಅವತಾರಗಳೂ ಬಹಳಷ್ಟು, ಒಲವಿನ ಹುಡುಕಾಟ ನಿರಂತರ ವ್ಯಾಧಿ. ಆದರೂ, ಪ್ರತಿ ತಲೆಮಾರು ಮುಂದಿನ ತಲೆಮಾರಿಗೆ ಬಿಟ್ಟು ಹೋಗುವ ಅಲಿಖಿತ ಉಯಿಲಾಗಿರುವುದರಿಂದ ಅದನ್ನು ನಮ್ಮ ಮೂಗಿನ ನೇರಕ್ಕೆ ಅರ್ಥೈಸುವುದು ಒಳ್ಳೆಯ ಬೆಳವಣಿಗೆಯಲ್ಲ.

ಒಲವು ನೀಡಿದ ನೋವಿನ ಸೌಂದರ್ಯ ಅನುಭವಿಸಲೂ ಸರಿಯಾದ ದೃಷ್ಟಿಬೇಕು. ಯಾಕೆಂದರೆ ಒಲವಿನ ಜತೆ ನಿಕಟವಾಗಿದ್ದಾಗ ಅದರ ಅಂದಚೆಂದವನ್ನು ಮುಟ್ಟಿ-ತಟ್ಟಿ ನಲಿದಿದ್ದೇವೆ. ಜೀವಗಳ ಮೈಮೇಳೈಸಿದಾಗ ಮೈದೋರಿ ನಿಂತ ರಸಿಕತೆಯಲ್ಲಿ ಭಗವಂತನನ್ನು ಕಂಡಷ್ಟೇ ಆನಂದಗೊಂಡಿದ್ದೇವೆ. ಒಲವೆಂದರೆ ಯುಗಾದಿ ಬೇವು-ಬೆಲ್ಲವಲ್ಲ, ಅದು ಬಾಳಿನ ಉಪ್ಪು. ಬಿಟ್ಟು ಬಂದಿದ್ದಕ್ಕೆ ಉಂಟಾಗುವ ವ್ಯಾಕುಲವನ್ನು ಲೆಕ್ಕಕ್ಕಿಡಬೇಡ. ಬದುಕ ಬೇಟದಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಲಹರಿ.

ಯಾಚನೆ ಮತ್ತು ನಿರಾಕರಣೆ ಒಲವಿನ ಎರಡು ಮುಖಗಳು. ಹಾಗೆಂದು ಅದರಿಂದ ಹಿಮ್ಮೆಟ್ಟಲು ಸಾಧ್ಯವೆ? ವಯಸ್ಸು ಮತ್ತು ತಲೆಮಾರಿನ ತಳಮಳದಿಂದ ನಾವು ನಾವೆ ಪಾರಾಗಬೇಕು. ವೈಯಕ್ತಿಕ ಅಗತ್ಯಗಳೆಲ್ಲವು ಸಾಮಾಜಿಕ ಮನ್ನಣೆ ಪಡೆದಿರಬೇಕೆಂದಿಲ್ಲ. ನೀನು ಬದುಕುವ ಕ್ರಮವೊಂದನ್ನು ಆರಿಸಿಕೊಂಡಿರುವೆ. ಅದರ ಬಗ್ಗೆ ಅನುಮಾನಗಳು ಶುರು ಆಗುವುದು ಸಹಜ. ನಿನ್ನ ನಂಬಿಕೆಗಳು ನಿನಗೆ convince ಆಗಿದ್ದರೆ ಸಾಕು. ನಿನಗೆ ತಿಳಿದ ಮಟ್ಟಿಗೆ ನೀನು ಸರಿಯಾಗಿ ನಡೆದಿರುವೆ. ನಾನು ಇದನ್ನ ಸರಿ ಎನ್ನಲಾರೆ. ವ್ಯವಸ್ಥೆ ಕೂಡ ಸರಿ ಎನ್ನದೆ ಹೋಗಬಹುದು.

ಆದರೆ, ಲೋಕವನ್ನು ಮಾಡಿದ ಶಕ್ತಿಯೆ ನಿನ್ನನ್ನು ಮಾಡಿರುವುದರಿಂದ ‘ಅಲ್ಲಿ’ ಎಲ್ಲವು ಸರಿ. ನಿನ್ನ ಸರಿ ತಪ್ಪುಗಳ ಹೊಣೆ ನಮ್ಮದು. ನೀ ಮಿಡುಕುವುದನ್ನು ನೋಡಲಾರೆ. ನಗುತ್ತಿದ್ದರೆ ನೋಡೋಕೆ ಖುಷಿ ಎನಿಸುತ್ತದೆ ಎಂದಿದ್ದು ನನ್ನ ಜೀವನದ ಅತ್ಯಂತ ಸಮಾಧಾನದ ಗಳಿಗೆ.

ನೋವಿನ ಮಾಗಿ ಕಾಲವನ್ನು ನಿರುದ್ವಿಗ್ನವಾಗಿ ನೋಡು ಎನ್ನುವಂತೆ ಒಣಗಿದ ಮರದ ಕಡೆಗೆ ದೃಷ್ಟಿ ನೆಟ್ಟಿದ್ದ ಅಪ್ಪನ ಮುಂಗೈ ಮೇಲೆ ನನ್ನ ಕೈ ಇಟ್ಟೆ. ಅಂಗೈಗೆ ಸೋಕಿದ ನೆರಿಗೆಗಟ್ಟಿದ ಚರ್ಮದ ಒಳಗಿನ ನರಗಳು, ನೆಲದ ಋತುಗಳು ಬದಲಾಗುವಂತೆಯೆ ನನ್ನೆದೆಯ ಋತುಗಳು ಬದಲಾಗುವುದನ್ನು ಒಪ್ಪಿಕೊಳ್ಳಲು ಬೇಕಾಗುವ ಚೈತ್ರಚೈತನ್ಯವನ್ನು ಹೃದಯಕ್ಕೆ ರವಾನಿಸುತ್ತಿವೆ ಎನಿಸಿ ಮನಸು ಸ್ವಸ್ಥವಾಯಿತು. ಚಿನ್ಮಯ ಪದ ಹಿಡಿಸುವ ವಸಂತದ ಹೊಸತಿನಲ್ಲಿ ಏಕಾಂತ ಸ್ವಸುಖ ಧ್ಯಾನಿಸುತ್ತಿದ್ದಾಗ ಬೆಳಗಿನೊಳು ಘನಬೆಳಗಾಯಿತು.

‍ಲೇಖಕರು avadhi

March 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: