ಇಂದು ದೇವನೂರು ಮಹಾದೇವ ಪುಸ್ತಕ ಬಿಡುಗಡೆ

ಮಾನ್ಯರೇ

ಅನಂತಮೂರ್ತಿ ಅವರಿಗೆ ೮೦  ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಅಭಿನವ ಅಭಿನಂದನಾಪೂರ್ವಕವಾಗಿ ಗೌರವ ಮಾಲಿಕೆಯನ್ನು ಪ್ರಕಟಿಸುತ್ತಿದೆ.ಇದರ ಮೊದಲ ಪುಸ್ತಕವಾಗಿ ದೇವನೂರ ಮಹಾದೇವರ ‘ನೆಲಕ್ಕೆ ಬಿದ್ದ ಅಕ್ಷರ ’ ಬಿಡುಗಡೆಗೊಳ್ಳಲಿದೆ.

ಇವತ್ತು ಬೆಳಿಗ್ಗೆ ೧೧ರಿಂದ ರಾತ್ರಿ೮ರವರೆವಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯ ಮಳಿಗೆ ಸಂಖ್ಯೆ ೨೦೮ ರಲ್ಲಿ ಪುಸ್ತಕ ಕೊಳ್ಳುಗರಿಂದ ಪುಸ್ತಕ ಬಿಡುಗಡೆ ಮಾಡಿಸಲಾಗುವುದು.

ದಯಮಾಡಿ ಬನ್ನಿ ಪುಸ್ತಕ ಬಿಡುಗಡೆಯ ಭಾಗ್ಯ ನಿಮ್ಮದೂ ಆಗಿರಲಿ

ಷ. ಶೆಟ್ತರ್, ಎನ್. ಏ. ಎಂ ಇಸ್ಮಾಯಿಲ್, ನ. ರವಿಕುಮಾರ

ಮತ್ತು ಅಭಿನವ ಬಳಗ

 

ಯು. ಆರ್. ಅನಂತಮೂರ್ತಿ ಗೌರವಮಾಲಿಕೆ -1

ಕಳೆದ ಆರು ದಶಕಗಳ ಅವಧಿಯಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಪ್ರಮುಖ ವಾಗ್ವಾದಗಳ್ಯಾವನ್ನೂ ಅನಂತಮೂರ್ತಿಯವರಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಹುಮುಖ್ಯವಾದ ಕೆಲವು ವಾಗ್ವಾದಗಳನ್ನು ಅವರೇ ಆರಂಭಿಸಿದ್ದರೆ ಇನ್ನು ಕೆಲವು ವಾಗ್ವಾದಗಳಿಗೆ ಹೊಸ ತಿರುವು ನೀಡಿದ್ದಾರೆ. ಅನಂತಮೂರ್ತಿಯವರ ಸ್ಪಂದನೆಯೆಂಬುದು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕಾರಣವನ್ನು ಅವರು ಚಿಕಿತ್ಸಕ ಮನೋಭಾವದೊಂದಿಗೆ ಎದುರಾಗಿದ್ದಾರೆ. ಚಳವಳಿಗಳು ಕನ್ನಡ ಸಂಸ್ಕೃತಿಯ ಮೂಲಗುಣವಾದ ಸಹಿಷ್ಣುತೆಯನ್ನು ಮರೆತು ಮುಂದುವರಿದಾಗ ಬಹಳ ಧೈರ್ಯದಿಂದ ಪ್ರತಿಭಟಿಸಿ ಹೊಸ ಚಿಂತನೆಯೊಂದರ ಹುಟ್ಟಿಗೆ ಕಾರಣರಾಗಿದ್ದಾರೆ. ಅನಂತಮೂರ್ತಿಯವರಿಗೆ ಎಂಬತ್ತು ತುಂಬುತ್ತಿರುವ ಈ ಹೊತ್ತಿನಲ್ಲಿ ಅವರ ಬೌದ್ಧಿಕ ಧೀಮಂತಿಕೆಯನ್ನು ಗೌರವಿಸುವ ಉದ್ದೇಶ ನಮ್ಮದು. ಇದಕ್ಕಾಗಿ `ಅಭಿನವ’ ಅನಂತಮೂರ್ತಿ ಗೌರವ ಮಾಲೆಯ ಪ್ರಕಟಣೆಗೆ ಮುಂದಾಗಿದೆ. ಇದರ ಪ್ರಧಾನ ಸಂಪಾದಕತ್ವದ ಹೊಣೆ ಡಾ.ಎಸ್. ಶೆಟ್ಟರ್ ಅವರದ್ದು.

ಮುಂದಿನ ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 12 ಪುಸ್ತಕಗಳನ್ನು ಈ ಮಾಲೆಯಡಿಯಲ್ಲಿ ತರುವ ಉದ್ದೇಶ ನಮ್ಮದು. ತನ್ನ ಕಾಲಕ್ಕೆ ಸ್ಪಂದಿಸುತ್ತಲೇ ಶಾಶ್ವತವಾದ ಆದರ್ಶವೊಂದರತ್ತ ತುಡಿಯುವುದು ಅನಂತಮೂರ್ತಿಯವರ ಬರೆಹ ಮತ್ತು ಮಾತಿನಲ್ಲಿರುವ ಸ್ಥಾಯಿ ಗುಣ. ಇದು ಜೀವಂತ ಬುದ್ಧಿಜೀವಿಯೊಬ್ಬನ ಉಸಿರಾಗಿಬಿಟ್ಟಿರುವ ಗುಣವೂ ಹೌದು. ಇದನ್ನು ಗಮನದಲ್ಲಿಟ್ಟುಕೊಂಡು ಶಾಶ್ವತದ ಆದರ್ಶದತ್ತ ತುಡಿಯುತ್ತಲೇ ಭೂತ/ವರ್ತಮಾನವನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ, ವಿಮರ್ಶಿಸುವ ಮತ್ತು ಈ ಮೂಲಕ ಹೊಸ ಒಳನೋಟಗಳನ್ನು ನೀಡಬಲ್ಲ ಬರೆಹಗಳು ಈ ಮಾಲೆಯಲ್ಲಿ ಪ್ರಕಟವಾಗಬೇಕೆಂಬ ಆಶಯ ನಮ್ಮದು.

ಈಗಾಗಲೇ ಕನ್ನಡದ ಉತ್ಕೃಷ್ಟ ಮನಸ್ಸುಗಳು ನಮ್ಮ ಜೊತೆ ಕೈ ಜೋಡಿಸುವ ಭರವಸೆ ನೀಡಿವೆ. ಇತಿಹಾಸ, ಸಾಹಿತ್ಯ, ಭಾಷೆ, ಅಭಿವೃದ್ಧಿ ಮೀಮಾಂಸೆ, ರಾಜಕೀಯ ಮೀಮಾಂಸೆ, ಪರಿಸರ, ಅನುಭವ ಕಥನ, ಹೊಸ ತಾತ್ವಿಕತೆಗಳ ಪರಿಚಯ ಎಂಬ ವಿಶಾಲವಾದ ವಿಷಯ ಚೌಕಟ್ಟೊಂದನ್ನು ಈ ಮಾಲೆಯ ಪುಸ್ತಕಗಳಿಗಾಗಿ ಅಳವಡಿಸಿಕೊಂಡಿದ್ದೇವೆ. ಹಾಗೆಂದು ಇದು ವಿಷಯ ಸೂಚಿಯಲ್ಲ. ನಮ್ಮ ಉದ್ದೇಶವಿರುವುದು ಅನಂತಮೂರ್ತಿಯವರು ಆರು ದಶಕಗಳಿಂದ ನಿರ್ವಹಿಸುತ್ತಾ ಬಂದಿರುವ ಜೀವಂತ ಬುದ್ಧಿಜೀವಿಯ ಕೆಲಸವನ್ನು ಪ್ರತಿನಿಧಿಸುವ ವಿಷಯಗಳನ್ನು ಈ ಚೌಕಟ್ಟಿನೊಳಗೆ ತರಬೇಕೆಂಬುದಷ್ಟೇ. ಇದಕ್ಕೆ ತಮ್ಮ ಸಲಹೆಗಳ ಅಗತ್ಯವೂ ಇದೆ.

ಪ್ರಧಾನ ಸಂಪಾದಕರಾದ ಷ. ಶೆಟ್ಟರ್ ತಮ್ಮದೊಂದು ಕೃತಿಯನ್ನು ಈ ಮಾಲೆಯಡಿಯಲ್ಲಿ ಪ್ರಕಟಿಸಲು ಒಪ್ಪಿದ್ದಾರೆ. ಹಾಗೆಯೇ ಲಕ್ಷ್ಮೀಶ ತೋಳ್ಪಾಡಿ, ಜಿ. ರಾಜಶೇಖರ್, ದೇವನೂರ ಮಹಾದೇವ, ರಹಮತ್ ತರೀಕರೆ, ಕೆ.ವಿ. ತಿರುಮಲೇಶ್, ತಾರಾನಾಥ್, ಚಿರಂಜೀವಿಸಿಂಗ್, ಗಿರೀಶ್ ಕಾಸರವಳ್ಳಿ ಅವರ ಕೃತಿಗಳೂ ಪ್ರಕಟಣಾ ಪಟ್ಟಿಯಲ್ಲಿವೆ. ಇವುಗಳ ಹೊರತಾಗಿ ಎರಡು ಭಿನ್ನ ಖಂಡಗಳ, ಭಿನ್ನ ಬಗೆಯ ಶೋಷಣೆಯ ಇತಿಹಾಸವುಳ್ಳ ಆದಿವಾಸಿ ಸಂಕಥನಗಳನ್ನು ಮುಂದಿಡುವ ಅನುವಾದವೊಂದನ್ನು ಮಾಲೆಯ ಸಂಪಾದಕರಲ್ಲಿ ಒಬ್ಬರಾದ ಎನ್. ಎ. ಎಂ. ಇಸ್ಮಾಯಿಲ್ ಸಿದ್ಧಪಡಿಸುತ್ತಿದ್ದಾರೆ.

ಈ ಮಾಲಿಕೆಯ ಮೊದಲ ಪುಸ್ತಕವಿದು.

ಅನಂತಮೂರ್ತಿಯವರನ್ನು ಅಭಿನಂದಿಸುವ ಈ ಮಾಲೆಯಲ್ಲಿ ಯಾರದ್ದೆಲ್ಲ ಪುಸ್ತಕಗಳಿರಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡಾಗ ಮೊದಲು ಹೊಳೆದ ಹೆಸರು ದೇವನೂರ ಮಹಾದೇವರದ್ದು. ಈ ಮಾಲೆಯನ್ನು ರೂಪಿಸುವ ನೀಲನಕಾಶೆಯನ್ನು ರೂಪಿಸುತ್ತಾ ಕುಳಿತಿದ್ದ ಮೂವರ ತಲೆಯಲ್ಲೂ ಏಕಕಾಲದಲ್ಲಿ ಈ ಹೆಸರು ಸ್ಫುರಿಸಲು ಏನು ಕಾರಣವಿರಬಹುದು ಎಂದು ಯೋಚಿಸುತ್ತಾ ಹೋದಂತೆ ಅನಂತಮೂರ್ತಿ ಮತ್ತು ದೇವನೂರರ ನಡುವಣ ಅನೇಕ ಸಾಮ್ಯತೆಗಳು ಗೋಚರಿಸುತ್ತಾ ಹೋದವು.

ಇಬ್ಬರ ಸಾಮಾಜಿಕ ಹಿನ್ನೆಲೆಗಳು ಬೇರೆ, ಇಬ್ಬರ ಚಿಂತನೆಗಳ ಆರಂಭಿಕ ಬಿಂದುವೂ ಭಿನ್ನವೇ. ಆದರೆ ಅದು ತಲುಪಲು ತುಡಿಯುವ ಗುರಿ ಮತ್ತು ಅದಕ್ಕೆ ಆರಿಸಿಕೊಳ್ಳುವ ಮಾರ್ಗ ಮಾತ್ರ ಒಂದೇ. ಇದೊಂದು ವಿಶಿಷ್ಟ ಸಾಮ್ಯತೆ. ಇಬ್ಬರ ಮೇಲೂ ಲೋಹಿಯಾ ಪ್ರಭಾವವಿದೆ. ಇಬ್ಬರೂ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ದೇವನೂರು ಅಂಬೇಡ್ಕರ್ ಚಿಂತನೆಗಳ ಬೆಳಕಿನಲ್ಲಿ ಗಾಂಧಿ ಮಾರ್ಗವನ್ನು ಆರಿಸಿಕೊಂಡರೆ ಅನಂತಮೂರ್ತಿ ಗಾಂಧಿ ಚಿಂತನೆಗಳ ಒಳಗಿರುವ ಅಂಬೇಡ್ಕರ್ ರನ್ನೂ ಹುಡುಕುವ ಪ್ರಯತ್ನ ಮಾಡುತ್ತಾರೆ.

ಚಿಂತನೆಯಲ್ಲಿನ ಸಾಮ್ಯತೆ ಇದೆ ಎಂದ ಮಾತ್ರಕ್ಕೆ ಇಬ್ಬರೂ ಒಂದನ್ನೇ ಹೇಳುತ್ತಿದ್ದಾರೆ ಎಂಬ ಸರಳೀಕೃತ ತೀರ್ಮಾನಕ್ಕೆ ಬಂದಂತಲ್ಲ. ಇಬ್ಬರ ನಡುವಣ ವ್ಯತ್ಯಾಸವನ್ನು ಸ್ವತಃ ದೇವನೂರು ಅವರೇ ವಿವರಿಸಿದ ಘಟನೆಯೊಂದನ್ನು ಬಳಸಿ ಅರ್ಥ ಮಾಡಿಕೊಳ್ಳಬಹುದು ಎನಿಸುತ್ತದೆ: `ಅನಂತಮೂರ್ತಿಯವರ ಆರೋಗ್ಯ ಬಿಗಡಾಯಿಸಿ ದೆಹಲಿ ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದಾಗ, ಅವರು ನನಗೆ ಗಾಯತ್ರಿ ಮಂತ್ರವನ್ನು ಹೇಳಿಕೊಟ್ಟಂತೆ ಬೋಧೆಯಾಯ್ತಂತೆ. ಅವರು ಇದನ್ನು ನನಗೆ ಹೇಳಿದಾಗ ನಾನೆಂದೆ- ‘ಸಾರ್, ಇದು ಮಾಮೂಲಿ ನಡಿಗೆ. ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಾದರೂ ನಾನು ನಿಮಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೆ?’ ಎಂದೆ. ಅವರು ಮೌನವಾದರು”.

ಅನಂತಮೂರ್ತಿಯವರು ಈ ಪ್ರತಿಕ್ರಿಯೆಯನ್ನು ಸ್ವೀಕರಿಸುವ ಬಗೆಯೂ ವಿಶಿಷ್ಟವಾದುದು. ಅವರದೇ ಮಾತುಗಳನ್ನಿಲ್ಲಿ ಉಲ್ಲೇಖಿಸುವುದಾದರೆ : `ನಾನೆಷ್ಟೇ ಪ್ರಜ್ಞಾಪೂರ್ವಕವಾಗಿ ಬ್ರಾಹ್ಮಣ್ಯವನ್ನು ಕಳಚಿಕೊಂಡಿದ್ದೇನೆಂದು ಹೇಳಿದರೂ ಅದು ಸುಪ್ತವಾಗಿ ನನ್ನೊಳಗೆ ಉಳಿದುಕೊಂಡಿರಬಹುದು ಎಂಬ ಸಂಶಯ ನನಗಿರಬೇಕು ಎಂಬುದನ್ನು ಮಹಾದೇವನ ಮಾತಿನಲ್ಲಿ ಕಂಡೆ’.

ದೇವನೂರು ಮತ್ತು ಅನಂತಮೂರ್ತಿಯವರ ನಡುವಣ ಮತ್ತೊಂದು ಸಾಮ್ಯತೆ ಎಂದರೆ, ಇಬ್ಬರ ಟೀಕಾಕಾರರೂ ಅವರ ಮೇಲೆ ಮಾಡುವ ದೊಡ್ಡ ಆರೋಪವೆಂದರೆ, ಇವರ ಮಧ್ಯಮ ಮಾರ್ಗ ರ್ಯಾಡಿಕಲ್ ಆದ ಬದಲಾವಣೆಗಳಿಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸುತ್ತದೆ ಎಂಬುದು. ಕುತೂಹಲಕಾರಿ ಸಂಗತಿಯೆಂದರೆ ಈ ರ್ಯಾಡಿಕಲ್ ಬದಲಾವಣೆಗೆ ಪ್ರಯತ್ನಿಸುವವರೆಲ್ಲರೂ ಗುರಿಯನ್ನು ತಲುಪುವ ಸುಲಭ ಮಾರ್ಗಗಳನ್ನು ಆರಿಸಿಕೊಂಡು ಗುರಿಯನ್ನೇ ಮರೆಯುತ್ತಿರುವುದು.

ಮೀಸಲಾತಿ ಮತ್ತು ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದಂತೆ ದೇವನೂರು ಮತ್ತು ಅನಂತಮೂರ್ತಿಯವರು ಬೇರೆ ಬೇರೆ ನೆಲೆಗಳಿಂದ ಮಾತನಾಡಿದರೂ ಅವರ ನಿಲುವುಗಳಲ್ಲಿರುವ ನಿರಂತರತೆ ಮತ್ತು ಸಾತತ್ಯ ಯಾವತ್ತೂ ಬದಲಾಗಿಲ್ಲ. ಕನ್ನಡ ಮಾಧ್ಯಮವೆಂಬುದು ಇಬ್ಬರಿಗೂ ಕೇವಲ ಒಂದು ಭಾಷಿಕ ಅನನ್ಯತೆಯ ಪ್ರಶ್ನೆಯಲ್ಲ. ಅದೊಂದು ಸಮಾನತೆಯನ್ನು ಖಾತರಿ ಪಡಿಸುವ ಪರಿಕರ. ಜ್ಞಾನವನ್ನು ಸುಲಭವಾಗಿ ಪಡೆಯುವ ಮತ್ತು ಹಂಚುವ ಮಾರ್ಗ. ಬಾಲ್ಯವನ್ನು ಸಹನೀಯವೂ ಎಲ್ಲವನ್ನೂ ಒಳಗೊಳ್ಳುವ ಸಮಗ್ರ ಕಲಿಕೆಯಾಗಿ ಮಾರ್ಪಡಿಸುವ ಮಾರ್ಗ.

ಮೀಸಲಾತಿಯ ಕುರಿತಂತೆ ಅನಂತಮೂರ್ತಿಯವರು ಮುಂದಿಡುವ ವಾದದ ಬಹುಮುಖ್ಯ ಅಂಶವೆಂದರೆ ಅದು ಕೇವಲ ದುರ್ಬಲರಿಗೆ ಅವಕಾಶ ಕಲ್ಪಿಸುವ ಮಾರ್ಗ ಮಾತ್ರ ಅಲ್ಲ. ಉಳ್ಳವರು ತಮಗೆ ಅರಿವೇ ಇಲ್ಲದ ಒಂದು ಲೋಕವನ್ನು ತಿಳಿದುಕೊಳ್ಳಲು ಕಲ್ಪಿಸುವ ಅವಕಾಶವೂ ಹೌದು. ಇದಕ್ಕೆ ಸಂಬಂಧಿಸಿದಂತೆ `ನಮಗೆಂಥ ಮೀಸಲಾತಿ ಬೇಕು’ ಲೇಖನದಲ್ಲಿ ಅವರು ಪ್ರಸ್ತಾಪಿಸುವ ವಿಚಾರವೊಂದು ಬಹಳ ಕುತೂಹಲಕಾರಿಯಾಗಿದೆ. ಲೆದರ್ ಟೆಕ್ನಾಲಜಿಯ ಒಂದು ರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟುಹಾಕಿ ಅದರಲ್ಲಿ ಪ್ರವೇಶ ಪಡೆಯಲು ಎಸ್ ಎಸ್ ಎಲ್ ಸಿಯಲ್ಲಿ ಗಳಿಸಿರಬೇಕಾದ ಅಂಕ ಮತ್ತೆ ಪ್ರವೇಶ ಪರೀಕ್ಷೆಯಲ್ಲಿ ಪಡೆಯಬೇಕಾದ ಸ್ಥಾನ ಮುಂತಾದುವುಗದಳನ್ನೆಲ್ಲಾ ಮಾನದಂಡವನ್ನಾಗಿ ಇಟ್ಟರೆ ಅಲ್ಲಿ ಯಾವೊಬ್ಬ ಸಮಗಾರನ ಮಗನಿಗೂ ಪ್ರವೇಶ ದೊರೆಯುವುದಿಲ್ಲ. ಅಲ್ಲಿ ಪ್ರವೇಶ ಪಡೆದು ಲೆದರ್ ಟೆಕ್ನಾಲಜಿ ಕಲಿಯುವವರೆಲ್ಲರೂ ಮ್ಯಾನೇಜ್ಮೆಂಟ್ ಆಗಿ ಪರಿವರ್ತನೆಗೊಂದು ಸಮಗಾರರನ್ನು ದುಡಿಸಿ ಲಾಭಗಳಿಸುವವರಾಗುತ್ತಾರೆ ಎಂದು ಅನಂತಮೂತರ್ಿ ಮೆರಿಟೋಕ್ರಸಿಯ ಮಿತಿಯನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ. ಕಲಿಸುವಿಕೆ ಎಂಬುದು ಟಿಛಿಟಣತಜ ಆಗದಿರುವುದರ ಅಪಾಯವನ್ನು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾ ಅನಂತಮೂರ್ತಿ  ಮೀಸಲಾತಿಯ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ಇದೇ ಸಂದರ್ಭದಲ್ಲಿ ಅವರು ದೈಹಿಕವಾದ ಕೌಶಲವನ್ನು ಒಂದು ಅರ್ಹತಾ ಮಾನದಂಡವನ್ನಾಗಿಟ್ಟರೆ ಅಂಕಗಳಲ್ಲಿ ಮೆರಿಟ್ ಗಳಿಸಿದವರ ಸ್ಥಿತಿ ಏನಾಗಿಬಿಡಬಹುದು ಎಂಬ ಪ್ರಶ್ನೆಯನ್ನು ಎತ್ತುತ್ತಾ ಅರ್ಹತಾ ಮಾನದಂಡಗಳಲ್ಲಿ ಅನುಸರಿಸಬಹುದಾದ ಪರ್ಯಾಯವನ್ನೂ ಮುಂದಿಡುತ್ತಾರೆ.

ಖಾಸಗಿ ಕ್ಷೇತ್ರದ ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡುವ ದೇವನೂರು ಹೇಳುವ `ತಾರತಮ್ಯವನ್ನು ಮೌಲ್ಯ ಮಾಡಿದ ನಮ್ಮ ಸಮಾಜದಲ್ಲಿ, ವಂಚಿತರ ಭಾಗವಹಿಸುವಿಕೆ ಇಲ್ಲದಿದ್ದರೆ ನಾವು ಅನಾಗರೀಕರು ನಾವು ವಂಚಕರು ಎಂದು ಅನ್ನಿಸಿದರೆ ಮಾತ್ರ ನಮ್ಮ ಕಣ್ಣು ತೆರೆಯುತ್ತದೆ’ ಎನ್ನುವ ಮಾತು ಮೀಸಲಾತಿಯ ಅಗತ್ಯವನ್ನು ಮತ್ತೊಂದು ರೀತಿಯಲ್ಲಿ ಧ್ವನಿಸುತ್ತದೆ.

ಅನಂತಮೂರ್ತಿ ಹಾಗೂ ದೇವನೂರರ ಚಿಂತನೆಗಳ ಸಾಮ್ಯತೆಗಳು ಹಲವು. ಆದರೆ ದೇವನೂರರ ಬರೆಹಗಳು ಈ ಮಾಲಿಕೆಯ ಪುಸ್ತಕವಾಗುವುದಕ್ಕೆ ಈ ಸಾಮ್ಯತೆ ಮಾತ್ರ ಕಾರಣವಲ್ಲ. ಪ್ರಖರ ಚಿಂತನೆಗಳನ್ನು ತನ್ನೆಲ್ಲಾ ಮುಗ್ಧತೆ ಮತ್ತು ಮುಕ್ತ ಮನಸ್ಸಿನೊಡನೆ ತೆರೆದಿಟ್ಟಿರುವ ದೇವನೂರರ ಬರೆಹಗಳು ಅನಂತಮೂರ್ತಿಯವರ ಬರೆಹ ಮತ್ತು ನಿಲುವುಗಳಲ್ಲಿ ಹಾಸು ಹೊಕ್ಕಾಗಿರುವ `ಒಳಗೊಳ್ಳುವಿಕೆ’ಯನ್ನು ದಲಿತತ್ವದ ಮೂಸೆಯಲ್ಲಿ ವಿಶ್ಲೇಷಿಸಿ, ವಿಮರ್ಶಿಸಿ,  ಪ್ರಶ್ನಿಸುತ್ತಾ ಧ್ವನಿಸುತ್ತವೆ.

ದೇವನೂರರ ಈ ಕೃತಿ ‘ಅಭಿನಂದನಾ ಮಾಲೆ’ಯ ಮೊದಲ ಪುಸ್ತಕವಾಗುತ್ತಿರುವುದು ಅನಂತಮೂರ್ತಿಯವರಿಗೆ ಸಲ್ಲಿಸುತ್ತಿರುವ ಈ ಪುಸ್ತಕಾಭಿನಂದನೆಯನ್ನು ಹೆಚ್ಚು ಅರ್ಥಪೂರ್ಣಗೊಳಿಸುತ್ತಿದೆ.

 

‍ಲೇಖಕರು G

December 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Satya

    ಯು ಆರ್ ಅನಂತಮೂರ್ತಿಯವರಿಗೆ ೮೦ ವರ್ಷಗಳು. ಲೇಖನದಲ್ಲಿಯಂತೆ ೯೦ ಅಲ್ಲ. ಅಂಚೆ ಚೀಟಿಯ ಚಿತ್ರದಲ್ಲಿ ಸರಿಯಾಗಿದೆ.

    ಪ್ರತಿಕ್ರಿಯೆ
  2. devappa y. myageri gajendragad. Tq: Rom Dist: Gadag

    pustka bidugade yagutiruvudake khusiyagide

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: