ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿನ ಈ ಸುದ್ದಿ ಕೇಳಿ..

lakshmikanth itnal

ಧಾರವಾಡದಿಂದ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಓಡಿಶಾದ ಆ ಬಡವ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿಸಿದ ದೃಶ್ಯ, ಮನಕಲಕಿತು, ಆವಧಿ ಈ ಕುರಿತು ಸ್ಪಂದಿಸಿದ್ದು, ಅದರ ಜೀವಂತಿಕೆಗೆ, ಸಾಮಾಜಿಕ ಕಳಕಳಿಗೆ ತಲೆಬಾಗುವೆ. ಪ್ರಸ್ತುತ ಈ ಸಂದರ್ಭಕ್ಕೆ ಕವನ.

ಆಂಸೂ
(ಕಂಬನಿ)

ಜಾವೇದ್ ಅಖ್ತರ್
ಅನು: ಲಕ್ಷ್ಮೀಕಾಂತ ಇಟ್ನಾಳ

ಇಂದಿನ ಈ ಸುದ್ದಿ ಕೇಳಿ, ನನ್ನ ಕಣ್ಣಲ್ಲೊಂದು
ಕಂಬನಿಯ ಹನಿಯೊಂದು ಬಂದು ಕುಳಿತಿದೆಯಲ್ಲಾ,
ಅಸಲು, ಇದೇನಿರಬಹುದು
ಈ ಕಂಬನಿ?

ಏನಿರಬಹುದು….ಈ ಕಂಬನಿ,
ಇದೊಂದು ಸಾಕ್ಷಿಯೇ
ನನ್ನ ಸಹಾನುಭೂತಿಗೆ, ಮಾನವೀಯತೆಗೆ!
ಅಥವಾ ಇನ್ನೂ ಬದುಕಿದಂತಿರುವ ನನ್ನಲ್ಲಿ,
ನನ್ನ ಎದೆಯಲ್ಲೊಂದು ಕರುಣೆಯ
ಹೃದಯವಿದೆಯೆಂದು ಹೇಳುತ್ತಿದೆಯೇ??
ಇಲ್ಲವೆ,
painಆರ್ತತೆಯ ಕರುಣಾಭರಿತ ಕಥೆಯೊಂದನ್ನು ಕೇಳಿ,
ನನ್ನೊಳಗಿನ ಕಳವಳದಲ್ಲಿ ಕುದಿಯುತ್ತಿರುವ,
ಕರಗುತ್ತಿರುವ,
ಕರುಳು ಹಿಂಡಿದ ಈ ಸ್ಥಿತಿಗೆ, ಮಮ್ಮಲ ಮರುಗುವ
ಕೋಮಲ ಮನಸೊಂದಕ್ಕೆ
ಆಧಾರವೇ!?

ಆದರೆ, ನನ್ನನ್ನೇ ಮತ್ತೊಮ್ಮೆ ಸ್ವಯಂ ಕೇಳಿಕೊಳ್ಳುವೆನು ನಾನು
ಇದೇನು ಈ ಕಥೆಯನ್ನು ಈಗ ಕೇಳಿದೆನಲ್ಲಾ,
ಈ ಕಂಬನಿಯೂ ಕೂಡ ಈಗ ಜನಿಸಿದ್ದೆ
ಇದು ಈ ಮೊದಲು ಇದ್ದಿರಲೇ ಇಲ್ಲವೆಂದು
ತಿಳಿಯಲೇ ಹೇಗೆ!

ನನಗಂತೂ ಖಂಡಿತ ಸಂಶಯವಿದೆ,
ಇದು ಈ ಮೊದಲು ಅದೆಲ್ಲೋ ಇತ್ತೆಂದು!
ಇದು ನನ್ನ ಹೃದಯ ಹಾಗು ಈ ಕಣ್ಣುಗಳ ನಡುವೆ
ಒಂದೇನು ಅಂತರವಿದಯೆಲ್ಲ, ಹಾಂ, ಅಲ್ಲಿ
ಅಲ್ಲೊಂದು ಕಲ್ಪನೆಯ ಶಹರವೊಂದು ಜೀವಂತವಿದೆ
ಮತ್ತೆ ಕನಸುಗಳ ಗೋರಿಗಳಿವೆ!
ಅಲ್ಲಿ ಪ್ರೀತಿ, ಒಲವಿನ ಪಾಳು ಉದ್ಯಾನದಲ್ಲಿ
ವಿಷಮುಳ್ಳಿನ ಜಾಲಿ ಮರಗಳಿವೆ
ಅದು ಬಿಟ್ಟು ಇನ್ನೇನೂ ಇಲ್ಲ ಅಲ್ಲಿ!

ಅಲ್ಲಿಂದಲೂ ತುಸು ಅಚೆ
ವಿಘ್ನ, ವಿಪರೀತಗಳ ದಟ್ಟ ಕಾಡು ಇದೆ
ಈ ಕಂಬನಿಯು
ಬಹುಶ: ಬಹು ದಿನಗಳಿಂದ
ಅಲ್ಲೇ ಅಡಗಿತ್ತು
ಯಾವುದು ಇದಕ್ಕೆ ಜನ್ಮ ನೀಡಿತ್ತೋ ಅದು,
ಆ ವ್ಯಸನಿತ ದು:ಖವು, ಮಸಲತ್ತಿನ ಕೈಯಲ್ಲಿ
ಅದೆಂದೋ ಕಗ್ಗೊಲೆಯಾಗಿ ಹೋಗಿತ್ತು
ಇನ್ನೇನು ಮಾಡೀತು ಈ ಬಡಪಾಯಿ ಕಂಬನಿಯು
ಯಾವ ಗರ್ವವನ್ನು ತಬ್ಬೀತು, ನಿರಾಶ್ರಿತ ಕಂಬನಿ?
ಅನಾಥ ಕಂಬನಿ, ಮುಗ್ಧ ಕಂಬನಿ,
ಭರವಸೆಯಿಲ್ಲದ,
ಬದುಕುವ ದಾರಿಗಳ ಗುರುತು ಪರಿಚಯವೇ ಇಲ್ಲದ
ದಿಕ್ಕು ದಿಶೆಗಳ ಅರಿವಿಲ್ಲದ
ನಡೆದು ನಡೆದೂ ಸುಸ್ತಾಗಿ ಹೋಗಿತ್ತು
ನಿರುಪಾಯವಾಗಿತ್ತು, ಅಸಹಾಯಕವಾಗಿತ್ತು,

ಅಲ್ಲಿಂದಲೇ ಇಂದೊಂದು ಯಾವುದೋ ದು:ಖದ
ಕಥಾನಕವೊಂದರ ಯಾತ್ರಾರ್ಥಿಗಳ ಗುಂಪೊಂದು ಹೊರಟಿತ್ತಲ್ಲಾ,
ಅನಾಥ ಕಂಬನಿಗೆ ಇದು ತಿಳಿಯುತ್ತಲೇ
ಈ ಕಥಾನಕದ ಪೋಷಣೆ ಸಿಕ್ಕರೆ
ಸಿಕ್ಕೀತು ದಾರಿಯೊಂದು
ಎಂದು ಕಥೆಯೊಂದರ ಕೈಬೆರಳೊಂದು ಹಿಡಿದು
ತನ್ನ ದು:ಖವನ್ನೆಲ್ಲಾ ತೋಡಿಕೊಳ್ಳುತ್ತ
ಇದರೊಂದಿಗೆ ಖರೆಯೊಂದೋ, ಸುಳ್ಳೊಂದೋ ಪ್ರಶ್ನೆ ಕೇಳುತ್ತ
ಇದು ಈಗ ನನ್ನ ಕಣ್ಣುಗಳವರೆಗೆ ಬಂದು ತಲುಪಿದೆ!

‍ಲೇಖಕರು Admin

28 August, 2016

* | Avadhi

6 Comments

  1. ಅಂಕ್ನಳ್ಳಿ ಜಯರಾಂ.

    ಇದನ್ನೆಲ್ಲ ನೋಡುತ್ತಿದ್ದರೆ ನಮ್ಮ ಪಯಣ ವಿರುದ್ಧ ದಿಕ್ಕಿನಲ್ಲಿದೆಯೆ?! ಎಂಬ ಅನುಮಾನ ಕಾಡುತ್ತದೆ. ಸ್ವಾತಂತ್ರ್ಯ ಕೇವಲ ಕೋಟ್ಯಾಧೀಶರ ಕೋಣೆಯಲ್ಲಿ ಮಾತ್ರ ಬಂದು ನಿಂತಿರುವಂತೆ ಭಾಸವಾಗುತ್ತಿದೆ. ಭರವಸೆಯ ಬಾಷಣಗಳ ಬೆಂಕಿಯಲ್ಲಿ ಬೆಂದು ಬೂದಿಯಾಗುತ್ತಿರುವವರು ಬಡವರು ಮಾತ್ರ ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೇ ಅಲ್ಲ; ಕರಾಳ ಸತ್ಯ.

    • Anonymous

      ಪ್ರತಿಕ್ರಿಯೆಗೆ ಧನ್ಯವಾದಗಳು ಜಯರಾಂ ಜಿ. ಮೌಲ್ಯಗಳು ಮೌಲ್ಯ ಕಳೆದುಕೊಂಡಿವೆ. ಮುಖ್ಯಮಂತ್ರಿಯಾಗಿ ವಿಧಾನಸೌಧಕ್ಕೆ ಬೈಸಿಕಲ್ ಹೊಡೆದುಕೊಂಡು ಬರುತ್ತಿದ್ದನಾಡಿನಲ್ಲಿ ಈ ಘಟನೆ ಜರುಗಿದೆ. ಆಟೋವಾಲಾನೊಬ್ಬ ಪ್ರಯಾಣಿಕರನ್ನು ಇಳಿಸಿ ಬಿಟ್ಟು ಬರುವಾಗ ತನ್ನ ಚಪ್ಪಲಿ ಕಳಚಿಬಿಟ್ಟು, ಎರಡೂ ಕೈಜೋಡಿಸಿ, ತಲೆಬಾಗಿ ವಂದಿಸುತ್ತ `ನಮೋಸ್ತೆ’ ಹೇಳುತ್ತ, ಈ ದೇಶದ ಅಪ್ಪಟ ರಾಯಭಾರಿಯಂತೆ ವರ್ತಿಸುವ ನಾಡಿನಲ್ಲಿ ಜರುಗಿದ್ದು, ಇನ್ನೂ ನೋವನ್ನುಂಟು ಮಾಡಿದೆ. ರಾಜಸ್ಥಾನ ಹಾಗೂ ಓಡಿಶ್ಶಾ ಗಳು ಈ ದೇಶದ ಸಾಂಸ್ಕೃತಿಕ ಕಿರೀಟಗಳು. ಅಲ್ಲಿ ಇದು ಘಟಿಸಿದ್ದು ನಂಬಲಾಗುತ್ತಿಲ್ಲ. ನಂಬಲಾಗುತ್ತಿಲ್ಲ ಸರ್…

  2. ರಮೇಶ ಕಾಮತ್

    ಹಾಗಾದರೆ ಮಾನವೀಯತೆ ಎಂಬುದು ಸತ್ತೇಹೋಯಿತೆ ಈ ದೇಶದಲ್ಲಿ . ಧಿಕ್ಕಾರವಿರಲಿ ಈ ಬ್ರಷ್ಟ ಆಡಳಿತ ವ್ಯವಸ್ತೆಗೆ!
    ಧಿಕ್ಕಾರವಿರಲಿ ಮೌಲ್ಯ ಕಳೆದುಕೊಂಡ ನಾಗರಿಕರಿಗೆ!

    ರಮೇಶ ಕಾಮತ್

    • Anonymous

      ಹೌದು ರಮೇಶ ಕಾಮತ ಜಿ, ತುಂಬ ವಿಷಾದನೀಯ, ನಾವೆಲ್ಲ ಅಂದೊಮ್ಮೆ ಹುಡುಕಿ ಹೊರಟ ಕನಸು ಖಂಡಿತ ಇದಾಗಿರಲಿಲ್ಲ.. ಯಾವ ಜಗವನ್ನು ಹುಡುಕಿ ತೆರಳಿದ್ದೆವು ಅಂದು ಈ ಮನೆಯಿಂದ, ಅದೇ ಮನೆಯಲ್ಲಿ ಅಸಹಾಯಕರು, ಅಪರಿಚಿತರು ಈ ವ್ಯವಸ್ಥೆಯಲ್ಲಿ, ನಾವೆಲ್ಲ ಈಗ. ಕಂಬನಿಗೂ ಕಂಬನಿ ನಿಲ್ಲುತ್ತಿಲ್ಲ…..

  3. Dinesh

    ಜಾವೇದ್ ಸಾಹೇಬರು ವರ್ಷಕ್ಕೂ ಮೊದಲು ಪಠಿಸಿದ ಈ ಕವನ (Aansu) ಪ್ರಸ್ತುತವಾಗುತ್ತ ಹೋಗುವುದು ನಮ್ಮ ಸಮಾಜದ ಜಡತೆಗೆ ಮೂಕ ಸಾಕ್ಷಿಯಾಗಿದೆ. ಇಲ್ಲಿದೆ ಪಠನ :https://www.youtube.com/watch?v=jrV9L4fLhhQ

    • ಲಕ್ಷ್ಮೀಕಾಂತ ಇಟ್ನಾಳ

      ದಿನೇಶ ಜಿ, ಪ್ರತಿಕ್ರಿಯೆಗೆ ತುಂಬು ನಮನ. ಹೌದು ಜಾವೇದ ಸಾಹೇಬರಿಂದ ಅದೆಂದೋ ಲಿಖಿತವಾದ ಈ `ಆಂಸೂ’ ಕವನವನ್ನು ಅವರು ಅನೇಕ ವೇದಿಕೆಗಳಲ್ಲಿ ಹೇಳುವುದನ್ನು ನೋಡಿರುವೆ. ತಾವು ಅದರ ತಂತುವೊಂದನ್ನು ನೀಡಿದ್ದು ತುಂಬ ಧನ್ಯವಾದಗಳು. ಈ ದೇಶದ, ನೆಲದ ಜಡತೆ, ನಿಜಕ್ಕು ನಮ್ಮನ್ನೆಲ್ಲಾ ಎಲ್ಲಿಗೆ ಎಳೆದೊಯ್ಯತ್ತೇನೋ. ಮೊನ್ನೆ ಅವಧಿಯಲ್ಲಿ ನೋಡಿದಾಗ ತಕ್ಷಣ ಅದೇಕೊ `ಆಂಸೂ’ ನೆನಪಾಗಿ ಅನುವಾದಿಸಿದ್ದೆ. ನವಯುಗ, ಕಂಪ್ಯೂಟರ್ ಯುವ, ಅಲ್ಟ್ರಾ ಮಾಡರ್ನ ಯುಗವೋ, ನಾವು ಏನೆಂದು ಕರೆದರೂ, ಒಳಗಿನ ಪ್ರಕಾಶ ಬೆಳಗದಿದ್ದರೆ, ಇಲ್ಲವೂಗಳೂ ಕತ್ತಲೆಯ ಯುಗಗಳೇ…ಈ ನಾಡು ಬೇಗ ಒಳಬೆಳಕನ್ನು ಕಾಣಲಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading