ಚಂದ್ರಿಕಾರಿಗೆ ಅಭಿನಂದನೆಗಳು..

‘ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ‘ಚಿಟ್ಟಿ’ ಜನಮನ ಗೆದ್ದಿದೆ

ಪಿ ಚಂದ್ರಿಕಾ ಅವರ ಚೊಚ್ಚಲ ಕಾದಂಬರಿ ಇದು.

ಈ ಕೃತಿ ಬಿಡುಗಡೆ ಇಂದು ಸಂಜೆ ೬ ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ. ಬನ್ನಿ

ಈ ಕೃತಿಗೆ ಕೆ ಸತ್ಯನಾರಾಯಣ ಅವರು ಬರೆದ ಬೆನ್ನುಡಿ ನಿಮ್ಮ ಓದಿಗಾಗಿ 

k satyanarayana

ಕೆ ಸತ್ಯನಾರಾಯಣ

`ಎಲ್ಲ ಚಿತ್ರಗಳನ್ನು ಎದೆಯಲ್ಲಿ ತುಂಬಿಕೊಳ್ಳುವುದಷ್ಟೆ ನಮಗಿರೋದು’

-ಚಂದ್ರಿಕಾರ ಈ ನೋಟ ಕಾದಂಬರಿಯ ಧ್ವನಿಯನ್ನೂ, ತಾತ್ವಿಕ ಪ್ರೇರಣೆಯನ್ನೂ ಒಟ್ಟಿಗೇ ಸೂಚಿಸುತ್ತದೆ.

ಮಕ್ಕಳು ದೊಡ್ಡವರು, ಮುಗ್ಧರು, ಬಲಿಯಾದವರು, ಸ್ವಪ್ರಜ್ಞೆಯುಳ್ಳವರು, ಸೋತವರು, ಗೆದ್ದವರು ಎಲ್ಲರಿಗೂ ಬದುಕಿನಲ್ಲಿ ಕೊನೆಗೂ ಸಾಧ್ಯವಾಗುವುದು ಇಷ್ಟೇ ಎಂಬ ಚಂದ್ರಿಕಾರ ಗಾಢ ನಂಬಿಕೆಯಿಂದಾಗಿ ಈ ಕೃತಿ ಕನ್ನಡ ಕಾದಂಬರಿಗಳ ಲೋಕದಲ್ಲಿ ಅಪರೂಪವೆನ್ನಿಸುವ ಹಲವು ವೈಶಿಷ್ಟ್ಯತೆಗಳನ್ನು ತನ್ನದಾಗಿಸಿಕೊಂಡು ನಮ್ಮಲ್ಲಿ ವಿನಯವನ್ನೂ, ಬೆರಗನ್ನೂ ಮೂಡಿಸುತ್ತದೆ.

chitti inviteಬೆಳೆಯುವ ಮಕ್ಕಳ ಲೋಕ ನಾವೆಲ್ಲಾ ಕ್ಲೀಷೆಯಿಂದ ತಿಳಿದಿರುವಂತೆ, ತಪ್ಪಾಗಿ ನಂಬಿರುವಂತೆ ತೀರಾ ಮುಗ್ಧವಾದುದೇನಲ್ಲ. ಮುಗ್ಧತೆ ಎನ್ನುವುದು ನಾವು ಬಾಲ್ಯವನ್ನು ಕುರಿತು ಆರೋಪಿಸುವಂಥದ್ದು. ಮಕ್ಕಳು ನೋಡುವ, ಗ್ರಹಿಸುವ, ಅನುಭವಿಸುವ ಕ್ರಮದಲ್ಲೇ ಒಂದು ರೀತಿಯ ಸಂಕೀರ್ಣತೆ, ತಿಳುವಳಿಕೆ ಮತ್ತು ಪ್ರಾಂಜಲತೆಯಿರುತ್ತದೆ. ಇದು ಪ್ರಬುದ್ಧರ ತರ್ಕಕ್ಕೆ ವಿಶ್ಲೇಷಣೆಗೆ ಸುಲಭವಾಗಿ ಸಿಗುವಂಥದ್ದಲ್ಲ. ಈ ದೃಷ್ಟಿಕೋನವನ್ನು ನಮಗೆ ಕಾಣಿಸುವ ಇಲ್ಲಿನ ಬರವಣಿಗೆಯಲ್ಲಿ ಚಿಟ್ಟಿಯ ಮನೋಲೋಕ ಸಾಮಾಜಿಕಲೋಕ ಮಾತ್ರವಲ್ಲ ಉಳಿದ ಮಕ್ಕಳಲೋಕವೂ ಸಮಾನವಾದ ಪ್ರಾಶಸ್ತ್ಯ ಪಡೆಯುವುದರಿಂದ ಕಾದಂಬರಿಗೆ ಬಹುತ್ವ ಮತ್ತು ವೈವಿಧ್ಯ ಪ್ರಾಪ್ತವಾಗುತ್ತದೆ.

ಹೆಣ್ಣುಮಕ್ಕಳ ಬಾಲ್ಯ, ಕೌಮಾರ್ಯಾವಸ್ಥೆಗಳ ಮನೋಲೋಕದ ವಿಕಾಸ ಕುರಿತಂತೆ ಅಧಿಕೃತ-ಆಪ್ತ ಚಿತ್ರವನ್ನು ಕೊಡುವಲ್ಲಿ ಕನ್ನಡ ಕಾದಂಬರಿಗಳಲ್ಲಿ ಮಾತ್ರವಲ್ಲ ಭಾರತೀಯ ಭಾಷೆಗಳ ಮಟ್ಟಿಗೂ ಈ ಕೃತಿ ಪ್ರಥಮವೂ ಹೌದು, ಆಳವಾದದ್ದೂ ಹೌದು. ಮೊದಲ ಕಾದಂಬರಿಯ ಮೂಲಕವೇ ಚಂದ್ರಿಕಾ ಕನ್ನಡದ ಮುಖ್ಯ ಕಾದಂಬರಿಕಾರರ ಸಾಲಿನಲ್ಲಿ ಏಕೆ ನಿಲ್ಲುತ್ತಾರೆ ಎಂಬುದಕ್ಕೆ ಈ ಕಾದಂಬರಿಯಲ್ಲಿ ಹಲವು ಪುರಾವೆಗಳು ಸಿಗುತ್ತವೆ.

ಜೀವನವನ್ನು ಯಾವುದೇ ನಿಲುವಿನ ಸಾರಾಂಶವಾಗಿಯೋ, ಪ್ರಮೇಯವಾಗಿಯೋ ನೋಡದೆ ಹೋದಾಗ ಮಾತ್ರ ಜೀವನವು ನಮಗೆ ಅದರ ನಿಜವಾದ ಗತಿಯಲ್ಲಿ, ಪಲುಕುಗಳಲ್ಲಿ, ವ್ಯವಧಾನದಲ್ಲಿ ದಕ್ಕುತ್ತದೆ ಎನ್ನುವ ಸಾರ್ಥಕ ಕಾದಂಬರಿ ಮೀಮಾಂಸೆ ಇಲ್ಲಿಯ ಪುಟಗಳಲ್ಲಿ ಅಂತರ್ಗತವಾಗಿದೆ. ಕಥನದ ದರ್ಶನವನ್ನು ಕಥನದ ಗತಿಯಲ್ಲೇ ಸೂಚಿಸುವ ಅಭಿಜಾತ ಬರವಣಿಗೆಯ ಕ್ರಮ.

ತಾನು ಹೇಳುತ್ತಿರುವ ಕಥೆ ಮಾತ್ರವೇ ನಿಜವಲ್ಲ, ತಾನು ಕಾಣಿಸುತ್ತಿರುವಷ್ಟು ಬದುಕು ಮಾತ್ರವೇ ಪೂರ್ಣವಲ್ಲ ಎಂಬುದನ್ನು ಇಲ್ಲಿಯ ಕಥನ ತನ್ನ ಸಾರ್ಥಕವಾದ ಆದರೆ ಅಷ್ಟೇ ತೀವ್ರವಾದ ಗತಿಯಲ್ಲಿ ಮನವರಿಕೆ ಮಾಡಿಕೊಡುತ್ತಾ ನಾವು ಮತ್ತಷ್ಟು ಕಥನ ಮತ್ತು ಬದುಕಿಗೆ ಹಂಬಲಿಸುವಂತೆ ಮಾಡುತ್ತದೆ. ಮೇಲು ನೋಟಕ್ಕೆ ಚಿಟ್ಟಿಯ ಪಾತ್ರ ಚಿತ್ರಣದಂತೆ ಮಾತ್ರವೇ ಕಾಣುವ ಚಂದ್ರಿಕಾರ ಬರವಣಿಗೆ ದಾರ್ಶನಿಕತೆ ಮತ್ತು ತಾತ್ವಿಕತೆಯನ್ನು ತನ್ನಲ್ಲೇ ಹುದುಗಿಸಿಕೊಂಡಿರುವ ಕ್ರಮವಿದು.

ಈಚಿನ ಕನ್ನಡ ಕಾದಂಬರಿಗಳು ತಮ್ಮ ಸ್ಥೂಲಗ್ರಹಿಕೆ ಮತ್ತು ಅತಿಯಾದ ಸಮಸ್ಯೀಕರಣದಿಂದಾಗಿ ಓದುಗರನ್ನು ಬಳಲಿಸಿವೆ. ಜೀವನವನ್ನು ನಿರ್ಮಮವಾಗಿ ನೋಡುವಂತೆ ನಮ್ಮನ್ನು ಈ ಕಾದಂಬರಿ ಮೂಲಕ ಪ್ರೇರೇಪಿಸುತ್ತಿರುವ ಚಂದ್ರಿಕಾರಿಗೆ ಅಭಿನಂದನೆಗಳು.

ಬೆನ್ನುಡಿಯಿಂದ 

‍ಲೇಖಕರು Admin

August 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: