ನಮ್ಮಜ್ಜಮ್ಮ ಇತ್ತಲ್ಲ, ಅದು ನಮ್ಮ ಅಜ್ಜಯ್ಯಂಗೆ ಎರಡನೆ ಹೆಂಡತಿ..

ಅಬ್ಬನದ ಅತ್ತೆ

ನಮ್ಮಜ್ಜಮ್ಮ ಇತ್ತಲ್ಲ, ಅದು ನಮ್ಮ ಅಜ್ಜಯ್ಯಂಗೆ ಎರಡನೆ ಹೆಂಡತಿ.

ಆಗ, ನಮ್ಮಪ್ಪಂಗೆ ಎರಡು ವರ್ಷ. ದೊಡ್ಡತ್ತೆಗೆ ಮೂರೆ ತಿಂಗಳು. ಆಗ್ಲೆ ಅವರ ತಾಯಿ ತೀರಿ ಹೋದ ಕಾರಣ ನಾವು ಕಂಡಿರೊ ಅಜ್ಜಮ್ಮನ್ನ, ಅಜ್ಜ ಎರಡನೆ ಮದ್ವೆ ಮಾಡ್ಕಂಬಂದ್ರಂತೆ. ತನ್ನ ಬಲ ಮಕ್ಕಳನ್ನು ಸಾಕಿದ ಅಜ್ಜಮ್ಮ, ಮನೆ ಅನ್ನೋದನ್ನ ಎತ್ತಿ ನಿಲ್ಲುಸ್ತು.

ಅಜ್ಜಮ್ಮಂಗೆ ತನ್ನದು ಅಂಥ ಒಂದು ಕುಡಿ ಹೊಟ್ಟೇಲಿ ಚಿಗುರಲಿಲ್ಲ. ಆದರೂವೆ ಆಸೆಯಿಂದ ಎರಡು ಬಲ ಮಕ್ಕಳನ್ನು ಸಾಕಿ ಮದ್ವೆನೂ ಮಾಡ್ತು. ಜವಾಬ್ದಾರಿ ಮುಗಿತಲ್ಲ. ತನ್ನದು ಒಂದು ಛಾಯೆ ಉಳಿಸಿ ಹೋಗಬೇಕು ಅನ್ನ ವಾಂಛೆ ಎಲ್ಲ ಹೆಣ್ಣು ಮಕ್ಳಿಗೂ ಇರತ್ತಲ್ಲ! ಅದಕ್ಕೆಅಂಥಲೆ ತನ್ನ ವಾರಗಿತ್ತಿ ಮಗಳನ್ನ ಸಾಕಂತು. ಅಕ್ಕ ಪಕ್ಕದಲ್ಲೆ ನಮ್ಮ ಅಣ್ಣತಮ್ಮರ ಮನೆ ಇದ್ವಲ್ಲಾ?  ಚಿಕ್ಕ ಅಜ್ಜಯ್ಯನ ಮನೇಲಿ ಒಂಭತ್ತು ಹೆಣ್ಣುಮಕ್ಳು. ನಮ್ಮ ಅಜ್ಜಯ್ಯಂಗೆ ನಮ್ಮಪ್ಪ ಒಬ್ನೆ ಮಗ. ಮನೇಲಿ  ಹೆಣ್ಣು ಮಕ್ಕಳು ಓಡಾಡದ ಕಂಡ್ರೆ ಅಪ್ಪಂಗೂ ಅಕ್ಕರೆ. ಮೂರು ಮನೆ ತಂಗೀರ್ಗೂ ನಮ್ಮಪ್ಪ ಬಾಳ ಪಿರೂತಿ ಅಣ್ಣನೆ ಆಗಿತ್ತು.

ಭೇದ  ಭಾವ ಇಲ್ಲದ ಕಾಲ ಅದು. ಆಚೆ ಮನೆ ಈಚೆ ಮನೆ ಅಂತ ಸಲಿಗೇಲಿ ಎಲ್ರೂ ಓಡಾಡ್ಕಂಡಿದ್ದರು. ನಮ್ಮವ್ವನ್ನ ನಾದಿನಿರು, ಅತ್ತಿಗೆ, ಅನ್ಕಂಡು ಪ್ರಾಣ ಬಿಡರು. ಹಂಗೆ ಆಚೆ ಮನೆ ಗೌರತ್ತೆ ಅನ್ನೊ ಕೊನೆ ಮಗಳು ನಮ್ಮನೇಲೆ ಅಜ್ಜಮ್ಮನ ಜೊತೆ ಮಲಗಕ್ಕೆ ಶುರುವಾತು. ‘ಚಿಗವ್ವ’ ಅನ್ನದು ಬಿಟ್ಟು ‘ಅವ್ವ ಅವ್ವಾ’ ಅಂತಿದ್ದಂಗೆ ನಮ್ಮಜ್ಜಮ್ಮ ಹಿರಿ ಹಿರಿ ಹಿಗ್ಗಿ  ಹಂಗೆ, ಹೀರೆ ಹೂವಾಯ್ತು. ಅದನ್ನ ತಾನೆ ಸಾಕ್ಕಂತು. ಇಂಗೆ ಆಚೆ ಮನೆ ಗೌರತ್ತೆ ನಮ್ಮನೆ ಸಾಕು ಮಗಳಾಯ್ತು.

village warliನನ್ನ ಅಕ್ಕಾರೆಲ್ಲ ದೊಡ್ಡವರಾದ ಮೇಲೆ  “ಏನಮ್ಮ(ಅಜ್ಜಿ) ನೀನು? ಅಂಥ ಚಂದೊಳ್ಳಿ ಅತ್ತೆರನೆಲ್ಲಾ ಬುಟ್ಟು, ಈ ಹುಬ್ಬಲ್ಲು ಸುಬ್ಬಾಚರಿ ಅತ್ತೆಯ ಸಾಕಂದೆ. ಇನ್ನೂ ಉಳಿದ ಎಂಟು ಜನ ಅತ್ತೆರನ್ನೂ ನೋಡು. ದೇವತೆರಿದ್ದಂಗವ್ರೆ.” ಅಂತೇನಾರು ಕುಶಾಲ ಮಾಡುದ್ರೆ, ಮುಗಿತು. ಅಜ್ಜಂಮ್ಮಂಗೆ ಮುನಿಸು ಬಂದು, ಮಾತ ಬಿಟ್ರೆ, ಪಂಚೇರು ಬೆಣ್ಣೆ ಹಚ್ಚಿದ್ರೂ ಮಾತಾಡಸದು ಕಷ್ಟಾಗದು.

ನೋಡಕ್ಕಷ್ಟು ಚೆನ್ನಾಗಿಲ್ಲದಿದ್ರೂವೆ, ಗೌರತ್ತೆಗೆ ಒಳ್ಳೆ ಮನೆತನದ ಸಂಬಂಧನೆ ಒದಗಿ ಬಂತು. ಮಾವ ಸ್ಫುರದ್ರೂಪಿ. ಒಳ್ಳೆ ಮನುಶ. ನಾವು ದೊಡ್ದವರಾದ ಮೇಲೆ ಅಕ್ಕರೆ ಮಾಡ್ತಿದ್ದ ಗೌರತ್ತೆ ಗಂಡ ಅಂದ್ರೆ ನಮ್ಮಾವನ ಹತ್ರ ಸಲುಗೆಯಿಂದ ಕೇಳ್ತಿದ್ವಿ. ಆ ಕಾಲ್ದಲ್ಲಿ ಎಲ್ಲರೂವೆ, ಮಾವದೀರು,ಭಾವದೀರನ್ನ ಅಕ್ಕರೆ ಮಾಡದಷ್ಟೇ ಕಾಲನ್ನು ಎಳೆಯೋರು. ಅವ್ರು ಸರಿ. ಸೇರಿಗೆ ಸವ್ವಾಸೇರಂಗೆ ಉತ್ತರ ಕೊಟ್ಟುಕೊಂಡು ನಗೆಚಾಟಿಕೆ ಮಾಡೋರು.

“ನೀನು ಇಷ್ಟು ಚೆನ್ನಾಗಿದಿಯಾ? ಈ ಅತ್ತೆನ ಹೆಂಗೆ ಮಾಡ್ಕಂದ್ಯಪ್ಪ?” ನಾನು ಮಾವಂಗೆ ಅಂದಿದ್ದೆ ತಡ ನಗಾಡ್ತಾ ಹುಸಿನಗೆಲಿ ಹೇಳೊದು,

” ಯಾವುದೋ ಮದ್ವೆಗೆ ಬಸನಳ್ಳಿಗೆ ಹೋಗಿದ್ದೆ. ಮದ್ವೆ ಮನೇಲಿ ಇವಳ್ ನೋಡದೆ. ಓ! ಆವತ್ತು ರಾಕ್ಸಿ(ರಾಕ್ಷಸಿ) ಕಂಡಂಗೆ ಕಂಡ್ಲು ಕಣವ್ವಾ”

ರಾಕ್ಷಸಿರು ಅಂದ್ರೆ ಸುಂದರೀರು ಅಂಥ ನಮ್ಮಾವನ ಆಡು ಭಾಷೆ. ರಾಕ್ಷಸೀರು ಸುಂದರವಾಗೆ ಇರ್ತಾರೆ ಅಂದಂಗಾಯ್ತು.  ಅಥವಾ ಅಷ್ಟು ದೊಡ್ಡದಾಗಿ ಚಂದ ಕಂಡ್ರು ಅಂತಲು ಇರಬಹುದು. ಅದೇನೆ ಇರಲಿ. ಸಂಸಾರ ಅನ್ನೋದು ಸಾಗರ.

“ಕಟ್ಕಂದೋರಿಗೆ ಕೋಡಂಗಿನೂ ಮುದ್ದಲ್ವೆ? ” ನಗುತ್ತ ಹೇಳುವ ಮಾವನ ಮುಖದಲ್ಲಿ ಸುಂದರ ದಾಂಪತ್ಯದ ಕಳೆ ಇತ್ತು. ಗೌರತ್ತೆ ಒಳ್ಳೆ ಮನಸಿ. ಮಗಿನಂಥೋಳು. ನಮ್ಮಜ್ಜಮ್ಮನ್ನ, ಅಜ್ಜಯ್ಯನ್ನ, ಅಣ್ಣ ಅತ್ತಿಗೆ ಅಂಥ ನಮ್ಮ ಅಪ್ಪಾವ್ವನ್ನ, ಕಂಡ್ರೆ ಪ್ರಾಣ ಅವ್ಳಿಗೆ. ತವರಿನ ಕುಡಿಗಳಾದ ನಮ್ಮನ್ನು ಕಂಡರಂತೂ ಸದಾ ಅಚ್ಚಟೆ ಮಾಡಳು. ಅವಳ್ನ ಅಬ್ಬನಕ್ಕೆ ಮದುವೆ ಮಾಡಿದ ಮೇಲೆ ನಾವು, ಎಲ್ಲರೂ, ಗೌರತ್ತೆ ಅನ್ನದ ಮರ್ತು ಅಬ್ಬನದತ್ತೆ  ಅಬ್ಬನದತ್ತೆ ಅಂತ ಕೂಗತಿದ್ವಿ.

ಅಬ್ಬನ ಅನ್ನೋ ಊರು ನಮ್ಮೂರಿಂದ ಕೇವಲ ಏಳೆಂಟು ಮೈಲಿ ಅಷ್ಟೆ. ನಮಗಿಂತಲು ಅಲ್ಲಿ ಮಲೆನಾಡಿನ ಪ್ರಕೃತಿ ಬಹಳ ಹತ್ರ ಆಗಿತ್ತು. ಅಲ್ಲಿಂದಲೇ ಕಾಡು ದಟ್ಟವಾಗ್ತಾ ಹೋಗೋದು. ನಾನು ಅದನ್ನೆಲ್ಲಾ ಯೋಚಿಸ್ತ ಇರೊವಾಗಲೆ ಅಕ್ಕಿ ಹಸನು ಮಾಡಕ್ಕೆ ಅಂತ ಲಕ್ಕಿ ಅನ್ನೊ ಆಳುಮಗಳು ಬಂದ್ಲು. ಊಟ ಮಾಡಿದ್ಲು. ತಟ್ಟೆ ಬೆಳಗಿ, ಸೂರಿನ ಪಕ್ಕಾಸಿನ ನಡುವಲ್ಲಿ ಸಿಗಹಾಕದ್ಲು. ಅಕ್ಕಿ ರಾಶಿ ಮುಂದೆ ಅವ್ಳು ಕೂರದನ್ನೆ ಕಾದು ಕೂತಿದ್ದ ನಾನು ಅವಳ ಪಕ್ಕಕ್ಕೆ ಹೋದೆ. ಅಕ್ಕಿ ಝರಡಿ ಎರಡು ಕೈಲು ಹಿಡದು ದುಂಡೂರುಕ್ಕೆ ತಿರುಗುವಾಗ ಅಕ್ಕೀಲಿ ಉಳಿದು ಹೋಗಿರೊ ಬತ್ತನೆಲ್ಲಾ ನಡುಮಧ್ಯಕ್ಕೆ ಬರೊಸೊಳು. ಆವಾಗ, ಅವಳು, ನನ್ ಕಣ್ಣಿಗೆ ಮಾಯಕಾತಿ ಹಂಗೆ ಕಾಣೋಳು, ಆ ಝರಡಿ.

ವಳೀಗೆ ಅಕ್ಕಿಪಡಿ ವಾಲಾಡೊ ಲಯದ ಸದ್ದಿಗೆ ನಾನು ಬಾಯ್ ಕಳಕಂದು ಅದನ್ನೆ ನೋಡ್ತಾ ಕುಂತೆ. ಅವಳೂ ಅದರ ಸದ್ದಿಗೆ ಪುಂಗಿ ಹಿಡ್ದಿರೊ ಹಾವಾಡಿಗನಂಗೆ ತಲೆ ಮೈಯ ಜೋಲಾಡುಸ್ತಿದ್ಲು. ವಂದ್ರಿ ಅನ್ನದು ತನ್ನ ನೂರಾರು ಕಣ್ಣ ಬಿಟ್ಕಂದು ಅಕ್ಕಿ ನುಚ್ಚ, ಮೋಡ ಮಳೆ ಹನಿ ನೆಲಕ್ಕೆ ಇಳಿಬಿಟ್ಟಂಗೆ ಬಿಡ್ತಿತ್ತು. ಆ ಸೋಕಿಗೆ ಚಾವಡಿ ಅನ್ನದು ಮೈ ಮರ್ತು ನಿದ್ದೆಗೆ ಒಲಿತಿತ್ತು. ಇದು ತೆಗಿ  ಮುಗಿಯಲ್ದು ಅಂತ ತಪಸ್ಸನ್ನ ಭಂಗ ಮಾಡೊ ಹಂಗೆ ಎಚ್ಚೆತ್ಕಂದೆ. ಆ ಬೆಳಿಗ್ಗೆ ಅವಳು ನಿಲ್ಸಿ ಹೋಗಿದ್ದ ಮಾತ ತಿರುಗಿಸಿ ಮಗಚ್ ಹಾಕ್ದೆ. ಅವಳಿಗೆ ಹೇಳಿ ನೆನಸ್ದೆ.

“ಓ ಇನ್ನೂ ಮರಿನಿಲ್ಲ ನಿಮ್ಮ ಅಬ್ಬನದತ್ತೆಯ ನೀವು. ಅದಕ್ಕೆ ಅವ್ರು ನಿಮ್ಮ ಸೊಸೆ ಮಾಡ್ಕತೀನಿ ಅಂತ  ಆಸ್ಯಾಗವರೆ” ಅಂದು ಆಕ್ಲಾಸ ಮಾಡದ್ಲು. ಅದ ನೋಡಿ ನಂಗೆ ನಿಜಕ್ಕೂ ಸಿಟ್ಟೆ ಬಂತು.

ನಿನ್ನೆ ದಿನ ನಮ್ಮನೆ ಕುರುಬೋಳಿ ಅನ್ನೋ ಹಸುನ ಬೆಳಿಗ್ಗೆ ಸಂತೇಲಿ, ಮಾರಿ ಬಂದಿದ್ರು. ಆದ್ರೆ ಅದು ರಾತ್ರಿಲೆ ನಮ್ಮನೆ ಬಾಗಲಲ್ಲಿ ವಾಪಾಸ್ ಬಂದು ನಿಂತಿತ್ತು. ಅದನ್ನ ಇವತ್ ಬೆಳಿಗ್ಗೆ ವಾಪಾಸ್ ಹೊಡಕೊಟ್ಟು ಬಂದ್ರು. ಅದನ್ನ ನೋಡಿ ಇವತ್ತು ಬೆಳಿಗ್ಗೆ ಲಕ್ಕಿ “ನಿಮ್ಮನೆ ಜನ ದನ ಎಲ್ಲಾ ಯಾಕಿಂಗೆ?  ನಿಮ್ಮ ಅಬ್ಬನದ ಅತ್ತೆ ಗೌರವ್ವರಂಗೆ, ಈ ಕುರುಬೋಳಿನೂವೆ ವಾಪಾಸ್ ಬಂದೈತಲ್ಲ,” ಅಂಥ ಹೇಳಿದ್ಲು.

“ಅದೇನು ಹೇಳೆ ಮುಂದಕ್ಕೆ” ಅಂತ ನಾನು ಕೇಳುದ್ದಕ್ಕೆ

“ಮಧ್ಯಾಹ್ನ ಅಕ್ಕಿ ಮಾಡಾಕೆ ಬಂದಾಗ ಹೇಳ್ತಿನಿ”ಅಂತ ಅವಳ್ ಅಂದಿದ್ಲು. ಬಂದು ಕಥೆ ಹೇಳ್ತಾಳೆ ಅಂತ ಕಾಯ್ತಿದ್ನಲ್ಲಾ? ಅವಳು ಕಥೆ ಶುರು ಮಾಡಲೆ ಇಲ್ಲ. ಸಿಟ್ಟು ಬಂದು ಮಾತಾಡದೆಯ  ಸುಮ್ಮಗ್ ಕೂತೆ.

” ಸಿಟ್ಟು ಬಂತೆನಿ ಸುಜವ್ವರೆ. ನಿಮ್ಮಜ್ಜಮ್ಮ ಎಲ್ಲಿತೆ ಮತ್ತೆ ನೋಡ್ಕಬನ್ನಿ ” ಅಂದ್ಲು. ನಾನು ಓಡಿ ಹೋಗಿ ನೋಡಿ ಬಂದೋಳೆ fish” ಈರನ ಹೆಂಡ್ತಿ ಸೀಗಡಿ ವಣಗಕ್ಕೆ ಹಾಕಿದಳಂತಲ್ಲ. ಬಾವಿ ಕಟ್ಟೆ ಹತ್ರ. ಹಳೆಮರಸಿನ ಹೊಲಗೇರಿಗೆ ತರಾಕೆ ಹೋಗಿತಂತೆ ಕಣೆ. ಥೂ! ಅದು ಗಬ್ಬು ವಾಸನೆ. ಅದನ್ ಯಾಕ್ಕಾರು ತರುತ್ತಪ್ಪ ನಮ್ಮಮ್ಮ .” ಅಂದೆ.

“ನೀವಾಗೊ ಹೊತ್ತಿಗೆ ಹೇಳುದ್ರಿ ಕನಿ. ಹಸಿ ತೊಗರಿ ಕಾಳುನೂ ಹುರಿದ ಹಾಕಿದ ಸೀಗಡೀನು, ಹುಳಿಕಾರದ ಸಾರ ಮಾಡಿ ಕಲ್ಲು ಒಗ್ಗರಣ್ಣೆ ಕೊಟ್ಟ ಅಂದ್ರೆ, ಮನೆಯೆಲ್ಲ ಘಮ್ ಅನ್ಬೆಕು. ನಿಮ್ಮವ್ವಾರು ಏನ್ ಚೆನಾಗಿ ಮಾಡ್ತಾರೆ… ಕನಿ. ಅದಕ್ಕೆ ಅಜ್ಜಮ್ಮಾರು ತರಾಕೆ ಓಗವ್ರೆ. ಮನ್ನೆ ಜಿನ ಏಸು ಸಿಕ್ಕಿದ್ವು ಅನ್ಕಬೇಡಿ ಮೀನು ಮಿಡ್ಚಿ ಅನ್ನವು.

ಒಂದು ಮಂಕರಿ ಹೊತ್ಕಬಂದನೆ ಈರ. ಮಳೆ ಬಂತು ಅಂದ್ರೆ ಸಾಕು, ಕೂಣಿ ತಗಂಡು ಹೊರಡತಾನೆ. ರಾತ್ರಿ ಅನ್ನಕುಲ್ಲ. ಹಗಲು ಅನ್ನಕುಲ್ಲ. ದೆಯ್ಯ ದೆವ್ವ ಯಾತಕ್ಕೂ ಹೆದ್ರಕುಲ್ಲ ಅವ್ನು. ಪುತುಂಡಿನ ಕೂಣಿ ಅಂಡಿಗೆ ಕಟ್ಟಿ ಕೆರೆ ಕೋಡಿಗೆ ಕೂಣಿ ಬಾಯ ಒಡ್ಡಿ ಬಂದ ಅಂದ್ರೆ, ಅಂಗೆ, ಮೀನನ್ನ ಹೊರಲಾರ್ದೆ ಹೊತ್ಕಬತ್ತನೆ ಕಣಿ. ಗೋರಿ ತಗಂಡು ಹೋದ ಅಂದ್ರು ಅಷ್ಟೆಯಾ! ಎಂಗೆ ಗೋರ್ತನೆ ಮೀನ ಅಂತೀರ. ಅವ ವಂಶ … ಹಾಳಾಗ. ಆ ಮೀನು ಅನ್ನವು, ತುಪುತುಪನೆ ಅವನ ಬೊಗಸೆಗೆ ಅಂಗೇ… ಬಂದು ಬೀಳ್ತಾವೆ. ಅಂಥ ಎತ್ತಿದ್ ಕೈಯಿ ಅವನದ್ದು” ಅಂತ ಈರನ ಗುಣಗಾನ ಮಾಡ್ಕಂಡೇ ಬಾಯನೀರ ಸುರಸುದ್ಲು.

“ಸಾಕು ನಿನ್ನ ಸೀಗಡಿ ಪುರಾಣ, ಹೋಗೆ ನೀನು. ಹೇಳೆ ಅಂದ್ರೆ”  ನನ್ನ ಅಸಹನೆ ನೋಡಿ ಅವ್ಳು ನಗವಾಗ್ಲೆ ಅವ್ವನೂ ಬಂದು ಬತ್ತ ಆಯಕ್ಕೆಅಂತ ಕುಂತ್ಕಂತು.

ಗೋಡೆ ಮೇಲಿದ್ದ ದೇಶಭಕ್ತರ ಫೋಟೋ ಹಿಂದೆ ಗೂಡು ಕಟ್ಟಿ  ಕೂತಿದ್ದ ಗುಬ್ಬಿಅನ್ನವು, ಪುರ್ರನೆ ಹಾರ್ಕ್ಂದು ಬಂದು ಬಂದು, ಆಯ್ದು ಎಸೆದ ಬತ್ತಾನ ಪಣಕ್ಕನೆ ಕೊಕ್ಕ ವಳಗೆ ಆರಿಸಿಕೊಂಡು ಮಾಯ ಮಾಡ್ಕಂದು ಮತ್ತೆ ಪುರ್ರನೆ ಹಾರ್ಕಂದು ಚಾವಡೀಲಿ ಕಣ್ಣಿಗೆ ಕಾಣದಂಗೆ ಹಾಯತಿರೊ ಗಾಳಿ ರೆಕ್ಕೆ ಮೇಲೆ ಚಿತ್ರ ಬರಿತಿದ್ವು. ಅಂಗೆ ಕಂಡುದ್ದ ಕಾಣಿಸದಂಗೆ ಅಳಿಸಿಕಂತ… ಮರೆಯಾಗಿ ಹೋಯ್ತಿದ್ವು.

” ಅಯ್ಯವ್ವಣ್ಣಿ, ಏನ್ ಚಂದಕ್ಕೆ ಮಾಡೋನೊ ಆ ಪರಮಾತ್ಮ ಈ ಗುಬ್ಬಿ ಅನ್ನವ!” ಲಕ್ಕಿ ಮಾತು ಶುರುವಾತು.

“ನಿಮ್ಮತ್ತೆ ಇದಾರಲ್ಲಾ ಅವರು ಮದ್ವೆ ಆದ್ರಾ… ನಿಮಪ್ಪಾರು ಎಂಗ್ ಮದುವೆ ಮಾಡ್ಕೊಟ್ರು  ಅಂತೀರಾ? ನಮ್ಮೂರರು ಬೂಂದಿ ಪಾಯ್ಸ ಕಂಡಿದ್ದೆ ಆವತ್ತು ಅಂತೀನಿ… ಸೀ ಬೂಂದಿ, ಖಾರ ಬೂಂದಿ, ನಾವು ಕಂಡಿರ್ನಿಲ್ಲ ಕನಪ್ಪ ಅಲ್ಲಿ ಮಟ!

ಏನು ಊರಟ್ಟಿನ ಹಂಡೆ ಅನ್ನವು ತುಂಬಿ ತುಳುಕೊ ಹಂಗೆ ಮಾಡ್ಸಿದ್ರಾ… ನನ್ನ ಹುಡ್ಲು ವಸಿ ತಿಂದ್ವೇನಿ ರಂಗವ್ವರೆ” ಅವಳ ಮಾತಿಗೆ ಅವ್ವ ಹೂಂಕಂತು.

ಅವಳು ಮೀನು ಬಿಟ್ಟು ಈಗ ಬೂಂದಿ ಪಾಯ್ಸಕ್ಕೆ ಹೋದ್ಲು. ಮತ್ತೆ, ನನ್ನ ಮುಖ ನೋಡಿ ತಿರುಗಿ ಕಥೆ ಕಡೆಗೆ ಬಂದ್ಲು.

“ಇಂಗೆ, ಮದ್ವೆ ಮಾಡಿ ಹೆಣ್ಣ ಹೊರುಡುಸುದ್ರು. ಬ್ಯಾಡ ಕನಿ ಗೋಳು. ಅವ್ವೋ ಅವ್ವಾಲೇ… ಅಂತ, ಅವರು ಅಳದು, ಕೆರೆ ಏರಿ ಮೇಲೆ ದಿಬ್ಬಣ ಅನ್ನದು ಹೋತಿದ್ರೆ, ಗೌರವ್ವರು ಎಳೆಯೋ ರಾಗ ಆ ಚಿಟ್ ಮೇಳವ ವತ್ತರಸಿ, ಊರಿನ ಮನೆ ಮನೆ ಕಿವಿಗೂ ಬಂದು ಬಡಿಯೋದು. ಅಂಗೆಯಾ… ಗೌಡ್ರು, ತಂಗೆ ಅಬ್ಬರ ನೋಡಲಾರದ್ದೆ, ಊರ ಬಾಗ್ಲಲ್ಲಿ ಮಾರಮ್ಮನ ಗುಡಿ ಮುಂದೆನೆ ಹೆಣ್ಣು ಗಂಡಿನ ಕೈ ಬದಲಾಸಿ ಕೊಡಮಾಡುದ್ರಾ… ಅತ್ಲಾಗೆ ಗದ್ದೆ ಕಡಿಕೆ ಹೋಗುಬುಟ್ರು. ಇನ್ನ ಕಳ್ಸಾಕೆ ಅಂತ ದಿಬ್ಬಣದ ಹಿಂದೆ ಅಳ್ತಾ ಹೋಗಿದ್ದರ… ಎಲ್ಲಾರೂವೆ ಅವ್ರು ವಾಪಾಸ್ ಬರೊವಾಗ ಬಿದ್ದೂ ಬಿದ್ದೂ ನಗ್ತ ಇದ್ರು ಕನಿ. ನಿಮ್ಮಜ್ಜಮ್ಮ…ಅಷ್ಟು ಮುದ್ದು ಮಾಡಿ ಮಾಡಿ, ಆ ಹೆಣ್ಣ ದಡ್ಡಿ ಮಾಡಾಕಿತ್ತು. ಹೆಣ್ಣು ಯಾವ ಒತ್ನಲ್ಲಿ ಎಂಗಿರಬೇಕೊ ಹಂಗಿದ್ರೆ ಲಕ್ಷಣ ಅಲ್ವೆನಿ?”

“ಮೆಲ್ಲಗೆ ಮಾತಾಡೆ ತಾಯಿ ನಮ್ಮವ್ವ, ಕೇಳುಸ್ಕಂಡ್ರೆ ಇನ್ನ ಆಡ್ಕತಾರೆ ನನ್ನ ಮಗಳ ಅನ್ಕಂದು ಮೂರ ದಿನ ಊಟ ಬಿಟ್ಟು ಮಲ್ಕತಾರೆ ಕನವ್ವ ಅತ್ತೆಮ್ಮ” ಅಂತಾವ ಹಣ್ ಹಣೆ ಚಚ್ಕಂದು ತಕ್ಷಣಲೆ ಅವ್ವ ಎಚ್ಚರಿಕೆ ಕೊಡ್ತು.

ಅಲ್ಲೇ ಇದ್ದ ನನ್ನಣ್ಣ ಬಲೇ ಮೋಜುಗಾರ. ನಗ್ತಾ ಹೇಳದ

“ಗಾಂಧಿ ಮಹಾತ್ಮನ್ನ ನೋಡಿ ಅಜ್ಜಮ್ಮ ಉಪವಾಸ ಸತ್ಯಾಗ್ರಹ ಮಾಡದ ಕಲ್ತೀರಬೇಕು.” ಅಂತು. ಆ ಮಾತ ಕೇಳಿದ್ದೆ ಎಲ್ರೂ ನಕ್ಕರು. ಲಕ್ಕಿ ಕಥೆ ಮುಂದುವರ್ಸುದ್ಲು.

“ಇನ್ನ ಅದ ಆಯ್ತ, ಅತ್ತೆ ಮನಿಂದ ಗೌರವ್ವರನ್ನ ತವರ ಮನಿಗೆ ಕರೆಯಾದು ಕಳಸಾದು ಮಾಡ್ಬೇಕು ಅಂದ್ರೆ ಮತ್ತೆ  ಇದೇ ಗೋಳು. ಹತ್ತ ಹೆಜ್ಜೆ ಮುಂದಕ್ಕೆ ಹೋದ್ರೆ ನಮ್ಮ ಬಾಣೆದೇವ್ರು ಹಿಂದಕ್ಕೆ ಗಣ ಪೂಜೇಲಿ ವಾಪಾಸ್ ಓಡಿಬರತ್ತಲ್ಲ ಹಂಗೆ ಬಂದಿದ್ದೆ, ಅವರವ್ವನ ಕೊಳ್ಳ ತಬ್ಕಂಡಿದ್ದೆ “ಅವ್ವೋ, ನಾ ಇವ್ನ ಕುಟೆ ಹೋಗಕುಲ್ಲೋ….” ಅಂತ ರಾಗ ಎಳುದ್ರೆ… ನಿಮ್ಮ ಮಾವ ಸುಬ್ಬೇಗೌಡ್ರು ಅಂಗೇ… ನಾಚಿ ನೀರಾಗೋಗರು.

hands3ಊರ ಹೆಣ್ಣುಮಗಳ ಮಡ್ಲಕ್ಕಿ ಹುಯ್ದು ಮಂಟಪದ ತಗ್ಗಿನವರ್ಗೂ ಕಳಿಸಿಬರಾನ, ಅಂತ ಹೊಂಟಿರೊರ? ಆಚೀಚೆ ಮನೆರೆಲ್ಲ, ಚಿಕ್ಕಮ್ಮನ ಹಲಸಿನ ಮರದ ತಾವಲಿಂದಲೆ ನಗೆ ತಡಿನಾರದೆಯ, ವಾಪಾಸ್ ದೌಡು…  ಕೊನಿಗೆ ಕಲ್ತ ಬುದ್ದಿನೆಲ್ಲಾ ಖರ್ಚು ಮಾಡಿ ನಿಮ್ಮಜ್ಜಮ್ಮಾರು ’ನಾಳಿಕೆ ನಿನ್ನ ನೋಡೋಕೆ ಬತ್ತೀನಿ ನಡ್ಯವ್ವ ನಾಳೀಕೆ ಬತ್ತೀನಿ ಕಣೆ’ ಅಂದು, ಆಣೆ ಪ್ರಮಾಣ ಮಾಡಿ ಕಳಿಸಿ ಬರಾರ? … ಎರಡೇ ದಿಸ. ಅಜ್ಜಮ್ಮಾರು ನೋಡೋಕೆ ಅಂತ ಹೊರಡಾರು. ಅವ್ರ ಜತೇಲೆ ವಾಪಾಸು ನಿಮ್ಮತ್ತೆ ಮತ್ತೆ ಇಲ್ಲಿಗೆಯ… ಬರಾರು. ಇಬ್ರಿಗೂವೆ ಅಬ್ಬನದೂರಿನ ಹಾದಿ ಅನ್ನದು ನೀರ ಹೊಳೆ ಹಾದಿ ಅನ್ನ ಹಂಗಾಗಿತ್ತು.” ಅವ್ಳು ನೆನಸ್ಕಂಡು ನಗ್ತಾ ನಗ್ತಾಲೆ ಮುಂದುವರ್ಸುದ್ಲು.

“ಆ ಬುಡ್ಡೆಗೌಡನ ಮನೆ ಕಥೆ ಏನ್ ಆಗಬೇಕ್ರೆ ನಿಮ್ಮ ದೊಂಬರಾಟದಲ್ಲಿ …? ” ಅಂತ  ನಿಮ್ಮಜ್ಜಯ್ಯಾರು ಬೀಗರು ನೆನಸ್ಕ್ಂದು ಅಂಗೆಯ ಮಲಮಲನೆ ಮರಗರು.

“ಇನ್ನ, ಇವರು ತವರು ಬುಟ್ಟು, ಒಂಜಿಸಲೂವೆ, ಅಲುಗತಿರ್ನಿಲ್ವಾ ತಾಯಿ ನಮ್ಮವ್ವಾ. ಪಾಪಾ ಆತನೆ ಇಲ್ಲಿಗೆ ಬರರು. ಉಂಡ ಆಗವರ್ಗೂ ಹೆಂಗೋ ಕಥೆ ನಡ್ಯಾದು. ನಿಮ್ಮನೆರು ಅಳಿಮಯ್ಯತನ ಭರ್ಜರಿ ಮಾಡರು ಅನ್ನಿ. ಆದ್ರೆ ಮಗ್ಗಲಿಗೆ ಗೌರವ್ವರೆ ಹೋಗ್ಬೇಕಲ್ಲ!  ಆಗ ನೋಡಿ ಶುರುವಾಗದು. ಅವ್ವ ಮಕ್ಕಳು ದೊಂಬರಾಟ. ಅಜ್ಜಮ್ಮರು ಒಳಗೆ ಬೆಂಟರು. ನಡಿಯೆ ನಡಿಯೆ ಅಂತವ. ಇವ್ರು ನಾನು ಹೋಗುಕಲ್ಲ ಅನ್ನರು. ಇನ್ನೂ ಹೆಚ್ಚಿಗೆ ಏನಾದ್ರೂ ಹೇಳುದ್ರಾ… ಎಲ್ಲಾರಗೂ ಕೇಳ್ಸೊ ಹಂಗೇಯ

” ನೀನೆ ಹೋಗು ಬೇಕಾರೆ” ಅಂತ ಕೂಗಿ ಚಂಡಿ ಬೀಳೊವ್ರು. ಆಳುಕಾಳು, ಎಲ್ಲಾರು ಕೇಳುಸ್ಕಂಡು ನಗಾಡರು. ಅಯ್ಯೋ! ಪಾಯಿ ! ನಿಮ್ಮ ಮಾವರು ಬಗ್ಸಿದ್ ತಲೆ ಮ್ಯಾಕ ಎತ್ತಿರಲಿಲ್ಲ. ಅವರ ಕಷ್ಟ ನೋಡಿ, ಯಾವತ್ತೂ ತಂಗಿ ಮೇಲೆ ರೇಗದೆ ಇರೊ ಗೌಡ್ರು ಒಂದಿನ ರೇಗುದೇಟ್ಗೆ ಗೌರವ್ವರು ಕಣ್ಣೀರ ಬಳುದ್ರು. ಬಳುದ್ರು. ಅಂಗೆ ಸೋನೆ ಮಳೆ ಹಿಡ್ಕಂದಂಗೆ… ಮೂರು ದಿಸ ಆದ್ರೂ ಬಿಡ್ಲಿಲ್ಲಾ …ಅಂಗೆ, ಅತ್ತರು ಕನಿ. ‘ಅಣ್ಣ ಬಯ್ದ. ಅಣ್ಣ ಬಯ್ದ…’ ಅನ್ಕಂದು ರಾಗ ಎಳ್ಕಂದು…ಆವತ್ನಿಂದ, ಅಳಿಮಯ್ಯ ಮನೆಗೆ ಬಂದ್ರೆ ಅವ್ರೇ ಸರ್ ಹೋಗ್ಲಿ ಅಂತವ ಗೌಡ್ರು ಅತ್ಲಾಗೆ ನಿಮ್ಮದೊಡ್ಡಜ್ಜಾರ ಮನಿಗೆ ಮಲಕ್ಕಳಕ್ಕೆ ಹೋಗ್ಬುಡೋರು. ಮನೆವಳಗೆ ಈ ರಂಪಾಟ ನೋಡಕಾಗದೇಯ. ನಿಮ್ಮಜ್ಜಯ್ಯಂತೂ ಅವ್ವ ಮಗಳು ಇಬ್ರಗೂವೆ “ಅಯ್ಯೋ ಎಡಗ ಮುಂಡೆವ” ಅನ್ನದು. ಇದ್ಯಾವದೂ ಗೋಜಿಲ್ಲದ ಹಂಗೆ ಆಚೆ ಮನ್ಯೋರು ನೋಡಿ, ಆರಾಮಾಗಿ ಮಲಕ್ಕೊಂಡು ಗೊರಕೆ ಗೊರ್ಯೋರು.”

“ಅಂಗಾರೆ ಯಾವಾಗ ಹೋಯ್ತವ್ವ ಗೌರತ್ತೆ ಅಬ್ಬನಕ್ಕೆ. ಇಲ್ಲೆ ಇತ್ತಾ?” ನಾನು ಅವ್ವನ್ನ ಕೇಳಿದ್ದಕ್ಕೆ ಲಕ್ಕಿನೆ ಮಾತು ಮುಂದವರ್ಸುದ್ಲು.

“ಅಯ್ಯೋ, ಇವತ್ತು ಹೋಯ್ತೀನಿ.ನಾಳಿಕೆ ಹೋಯ್ತಿನಿ ಅನ್ನರ. ನಾನು ಅಕ್ಕಿ ಕುಟ್ಟಿ ಕೊಡುವೆ. ನಿಮ್ಮವ್ವರೂ ರಾತ್ರಿ ನಿದ್ದೆಗೆಟ್ಟು ನೆಂಟರ ಮನಿಗೆ ಕೈಕುಟ್ಟೆ ಅಂತವ ಎಣ್ಣೆ ತಿಂಡಿ ಬೇಯ್ಸರ. ಇದು ಹೊರಡ್ತಿರ್ನಿಲ್ಲ .ಮಕ್ಳು ಮರಿ ಇರ ಮನೆಲಿ ಉಳಿತವ ಏಳಿ ಮತ್ತೆ. ಮಕ್ಕಳು ತಿನ್ಕಳವು.ಮತ್ತೆ ನಿಮ್ಮವ್ವರಿಗೆ ಇನ್ನೆರಡು ದಿನಕ್ಕೆ ನಿದ್ದಗೇಡು. ನನಗೆ ರಟ್ಟೆ ನೋವು. ಮತ್ತೆ ಚಕ್ಕಲಿ ವತ್ಬೇಕು. ಬೇಯಸಬೇಕು. ಅಂತು ಇಂತೂ ಗೌರವ್ವ ಮನೆ ಬುಟ್ಟು ಅಬ್ಬನದ ಅತ್ತೆ ಮನಿಗ್ ಹೋಗಿದ್ದು ಮಕ್ಳು ಬೆಳುದು ದೊಡ್ಡರಾದ ಮೇಲೆಯ. ಅಷ್ಟೊತ್ತಿಗೆ ಆರು ಮಕ್ಕಳಾಗಿದ್ವು. ನಿಮ್ಮಪ್ಪರ್ದು ನಿಮ್ಮವ್ವರ್ದು ಹೆಣ ಬಿದ್ದೋಗಿತ್ತು ಇಲ್ಲಿ. ಸಧ್ಯ, ಸುಬ್ಬೇಗೌಡ್ರು ನಿಮ್ಮಪ್ಪ ಅವ್ವಾ, ಅಜ್ಜಯ್ಯರ ಮುಖ ನೋಡಿ ಎಲ್ಲನೂ ಸೈರಸಕಂಡ್ರು ಅನ್ನಿ. ಬನ್ನಿ ಎದ್ದು, ಮೂಟೆ ಹಿಡ್ಕಳಿ. ಈಗ, ಅಕ್ಕಿ ತುಂಬನ “ಅಂದ್ಲು. ಅವ್ವ ಮಾತ ಸೇರುಸ್ತು.

“ಇಲ್ಲಾಕನಗೀ, ಆ ಮನುಶನೆ ಒಳ್ಳೆ ಮನುಶ. ನಿಧಾನ ಸ್ವಭಾವದೋನು. ಬೀಗರು ಅನ್ನೋರು ಮಾತ್ರವ ಥೋ. ತಾಳಿ ಬಾಳಿ ಬದುಕದವರು. ಹೆಂಗೊ ನಿಭಾಯ್ಸಕಂದ್ರು. ಸಧ್ಯ ಎಲ್ಲ ಸರಿ ಹೋಯ್ತು. ಇಂಥೋರು ಸಿಗಬೇಕಾದ್ರೆ ಅವ್ಳು ದೇವರ ಮುಂದಿಂದ  ಒಂದು ಒಳ್ಳೆ ಹೂವ ತಂದಿದ್ಲು ಅನ್ನಕ”

ನಾನು ಮೂಟೆ ಹಿಡ್ಕಂಡೆ. ಮಾತು ಮಾತಲ್ಲೆ ಅಕ್ಕಿ ರಾಶಿ, ಹಸನಾಗಿ, ಮೂಟೆಗೆ ಸೇರಿದ್ದ  ನೋಡಿ ನಾನು “ಅಯ್ಯಬ್ಬ! ಲಕ್ಕಿ ಎಷ್ಟೊಂದು ಕೆಲ್ಸ ಮಾಡ್ತಾಳಪ್ಪ”. ಅನ್ಕಂಡೆ.

ಅವಳು ಹೋದ ಮೇಲೂನು ನನಗೆ ಅಬ್ಬನದ ಅತ್ತೆ ನೆನಪು ಹೋಗಲಿಲ್ಲ. ಯಾರದೋ ಸಾವಿಗೆ ಬಂದಾಗ ನಮ್ಮ ಅಬ್ಬನದತ್ತೆ,

“ನನ್ನ ಸಾವಿಗೆ ತವರನೋರು ನೀವು ಎಲ್ಲರೂ ಹಿಂಗೆ… ಬಂದು ಹೋಗ್ರವ್ವಾ.” ಕಣ್ಣಲ್ಲಿ ನೀರ ಕಚ್ಕಂಡು ಅಂದದ್ದ ನೆನೆಸಿಕೊಂಡೆ. ಬಾಯ ತುಂಬ ಹಲ್ಲ ಬಿಟ್ಕಂದು ನಮ್ಮನ್ನ ಮುದ್ದು ಮಾಡ್ತಿದ್ದ  ಅಬ್ಬನದ ಅತ್ತೆ, ಸತ್ತು ಮಲಗಿದ ದಿನ, ಅದರ ಮಣ್ಣಿಗೆ ಎಲ್ಲರೂ, ಅದರ ಮಾತಿನಂತೆ ಹೋಗಿದ್ವಿ. ಅತ್ತಿದ್ದಕ್ಕಿಂತ ನಕ್ಕೊಂಡು ಬಂದಿದ್ದೆ ಆವತ್ತು ಹೆಚ್ಚಾಗಿತ್ತು. ಎಲ್ಲಾರಂಗೆ ಅದು ಕೂಡ ತುಂಬು ಬಾಳನ್ನೆ ಮುಗಿಸಿತ್ತು.

ತವರು ಬಿಟ್ಟಿರಕಾಗದಿರೊ ನಮ್ಮ ಕುರುಬೋಳಿ ಹಸು ಹಾಗೂ ಅಬ್ಬನದತ್ತೆ ನಡೆ, ನಮ್ಮ ಮನೆ ವಳಗೆ ನಗೆ ಮಾತಾಗಿ ಉಳದೋಯ್ತು . ಇತ್ತೀಚಿನ ತಲೆಮಾರಿನ  ನಮ್ಮನೆ, ಅಳಿಮಯ್ಯನರೊಬ್ಬರು ಹಿಂಗೆ ಹೊರಡೊ ಹೊತ್ತಿಗೆ ಮಲಗ್ಬಿಡೋದು. ಇಲ್ಲಾಂದ್ರೆ ಮಾರನೆ ದಿನಕ್ಕೆ ಹೊರೊಡೊದು, ಹಿಂಗೆ  ಮಾಡ್ತಾರೆ.  ಆಗ ಎಲ್ಲರೂ ” ಅವರು ನಮ್ಮ ಅಬ್ಬನದತ್ತೆ ಸಾಲು ಬಾ ” ಅಂತಾರೆ. ಆಗ ಎಲ್ಲರಿಗೂ ಅತ್ತೆ ನೆನಸಿಕೊಂಡು ನಗು ಬರುತ್ತೆ. ನಮ್ಮ ಅಳಿಮಯ್ಯರು ನಗ್ತಾರೆ. ಸಾಲಿಗೆ ಸಾಲು… ವಾಲೆಗೆ ಮುತ್ತು. ವೇದ ಸುಳ್ಳಾದ್ರೂ… ಗಾದೆ ಮಾತು ಸುಳ್ಳಾಗುತ್ತಾ…?ಹೇಳಿ ಮತ್ತೆ.

‍ಲೇಖಕರು admin

August 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Vijay Hanakere

    One of the best and heartly touching , i have ever read.. Felt very very emotional .. Feeling like talking to writer..

    ಪ್ರತಿಕ್ರಿಯೆ
  2. lalitha sid

    ಬಹಳ ಚೆನ್ನಾಗಿ ವಿವರಿಸಿದ್ದೀರಿ ಸುಜಾತ. ಧನ್ಯವಾದಗಳು ನಿಮಗೆ.
    ನಮ್ಮ ಕುಟುಂಬದಲ್ಲೂ ಇಂತದೊಂದು ಅತ್ಯವ್ವ ಇತ್ತಂತೆ. ಬಹಳ ಬಹಳ ಹಳೆಯ ಮಾತು. ನಮಗೆ ಅರ್ಥವಾಗುವ ಪ್ರಾಯ ಬರೋ ಹೊತ್ತಿಗಾಗಲೇ ಅದು ದಂತಕತೆಯ ತರಹ ಆಗಿಬಿಟ್ಟಿತ್ತು. ”ಸರ್ವಮ್ಮನ್ನ ಪ್ರಸ್ತದ ಮನೆಗೆ ಬಿಟ್ಟಂಗೆ ” ಅಂತ ಆಡಾಡಿಕೊಂಡು ಹಿರೆಹೆಂಗಸರು ಸೆರಗು ಬಾಯಿಗಡ್ಡ ಮಾಡಿಕೊಂಡು ನಗುತ್ತಿದ್ದರು. ಸರ್ವಮ್ಮನ ಪ್ರಸ್ತ ಏಳು ಸಾರಿ ಅರೇಂಜ್ ಆಗಿ ಏಳೂ ಸಾರಿಯೂ ಫೇಲ್ ಆಗಿತ್ತಂತೆ. ಚಕ್ಕುಲಿ ಕಜ್ಜಾಯ ಮುಗಿಯೋವರೆಗೆ ಒಳಗಿರುತ್ತಿದ್ದ ಸರ್ವಮ್ಮನವರು ಆಮೇಲೆ ಲಬೊಲಬೊ ಬಾಯಿ ಬಡಿದುಕೊಳ್ಳುತ್ತ ಓಡಿ ಹೊರಗೆ ಬಂದು ಬಿಡುತ್ತಿದ್ದರಂತೆ. ಸರಿ , ಒಂದಿಪ್ಪತ್ತು ದಿನ ಬಿಟ್ಟು ಮತ್ತದೆ ಚಕ್ಕುಲಿ ಕಜ್ಜಾಯ , ಕೋಣೆ, ಅದೇ ಬಾಯಿಬಡಿತ. ಹುಡುಗಿಗೆ ಭಯ ಎಂದುಕೊಂಡು ಹುಡಗನ ಮನೆಯವರೂ ಅನುಸರಿಸಿ ಅನುಸರಿಸಿ ಒಂದು ಸರ್ತಿ ಬೇಸರದಿಂದ ” ನಿಮ್ಮುಡುಗೀನ ಅತ್ತ ಕಜ್ಜಾಯಕ್ಕೇ ಕೊಟ್ಟು ಮದುವೆ ಮಾಡಿದ್ದರೆ ನಿಸೂರಾಗಿತ್ತಮ್ಮ ,ಹೆಂಗೊ ನಮ್ಮುಡಗನಾದರೂ ಬದಿಕ್ಕಂತಿದ್ದ ” ಅಂದರಂತೆ. ಆಮೇಲೆ ಎಂತೋ ಅಂತೂ ಸರಿಹೋಯಿತು. ಆದರೂ ಈ ವಾರ್ತೆ ಕಜ್ಜಾಯದ ವಾಸನೆಯಂತೆ ನೆಂಟರೊಳಗೆಲ್ಲ ಪಸರಿಸಿ ನಗೆಪಾಟಲೂ ಆಯ್ತು. ಇದನ್ನು ಎಷ್ಟು ಸರ್ತಿ ಹೇಳಿಕೊಂಡು ನಕ್ಕರೂ ಹೇಳುವವರಿಗೂ ಕೇಳುವವರಿಗೂ ನಗೆ ಮುಗಿಯುತ್ತಿರಲಿಲ್ಲ. ನನಗೆ ಅರ್ಥವಾಗುವ ಹೊತ್ತು ಬಂದಾಗ ಅಯ್ಯೋ ಪಾಪವೇ ಅನ್ನಿಸಿತ್ತು,, ಸರ್ವಮ್ಮನ ಬಗ್ಗೆ ಅಲ್ಲ ,ಏಳೂ ಸರ್ತಿ ಕೋಣೆಯೊಳಗೆ ಏಕಾಗಿ ಬಂದಿಯಾಗಿಸಲ್ಪಟ್ಟ ಆಕೆಯ ಹುಡುಗ ಗಂಡನನ್ನು ನೆನೆದು :):):)

    ಇದೆಲ್ಲ ಈ ಲೇಖನ ಓದಿ ನೆನಪಾದವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: