ಇಂತಿಪ್ಪ ನನ್ನಜ್ಜಿಗೆ ಕೇಳಬೇಕಾ ಈ ಎಮ್ಮೆ ಹಾಡು!

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಇದು ನನ್ನ ನೆನಪಿನ ರಂಗೋಲಿ.  ರಾಜಕುಮಾರ್ ರವರ ಸಿನೇಮಾಗಳು ನೋಡುತ ಎಂಟು ವಷ೯ದ ಹಿಂದೆ ನಾ ಒಬ್ಬಂಟಿಯಾದಾಗ ನನ್ನ ದುಃಖವನ್ನು ಮರೆಸಿದ ನನ್ನ ಜೀವನದ ಮಹಾನ್ ವ್ಯಕ್ತಿ ಅವರು.

ಯಾರೆ ಕೂಗಾಡಲಿ
ಊರೆ ಹೋರಾಡಲಿ
ಎಮ್ಮೇ..ನಿನಗೆ ಸಾಟಿ ಇಲ್ಲ…..

cbd9721e36737cf954bc7e74b190e94bಈ ಹಾಡು ಈ ದಿನ ಅದೆಷ್ಟು ನೆನಪಾಗುತ್ತಿದೆ.  ಕನ್ನಡದ ಕಣ್ಮಣಿ ವರನಟ ಡಾ|| ರಾಜಕುಮಾರವರು ತಾವೇ ಸ್ವತಃ ಹಾಡಿ ನಟಿಸಿದ ಎಲ್ಲರ ಬಾಯಲ್ಲೂ “ಎಮ್ಮೆ ಹಾಡು” ಅದರಲ್ಲೂ ಹಳ್ಳಿ ಕಡೆ ಅತ್ಯಂತ ಪ್ರಸಿದ್ಧಿ ಪಡೆದ ಹಾಡಿದು.  ಆಕಾಶವಾಣಿ ವಿವಿಧ ಭಾರತಿಯಲ್ಲಿ ಈ ಹಾಡು ಬಂದರೆ “ಜೋರಾಗಿ ಹಾಕೆ ಕೇಳ್ತಿಲ್ಲೆ” ಅನ್ನುವ ನನ್ನಜ್ಜಿ.  ಆಗ ಟೀವಿ ಇಲ್ಲ, ಟೇಪರಿಕಾರ್ಡ ಇಲ್ಲ.  ಎಲ್ಲದಕ್ಕೂ ರೆಡಿಯೊ.

ಆಗಿನ್ನೂ ನಾನು ಚಿಕ್ಕವಳು.  ಹುಡುಗಾಟಿಗೆ ಬುದ್ದಿ.  ನಮ್ಮನೆಯಲ್ಲಿ ಹಸು, ಕರು,ಎಮ್ಮೆ ಎಲ್ಲ ಸಾಕಿದ್ದರು.  ಅದೊಂದು ಚಿಕ್ಕ ಹಳ್ಳಿ ಬೇರೆ.  ಆಗ ಅಲ್ಲಿ ಕರೆಂಟಿಲ್ಲ.  ಡಾಂಬರ ರಸ್ತೆ ಇಲ್ಲ.  ಊರಿಗೆ ಬಸ್ಸು ಬರುತ್ತಿರಲಿಲ್ಲ. ಹಳ್ಳಿಯಲ್ಲಿ ಐದೇ ಐದು ಮನೆ.  ಹತ್ತಿರದಲ್ಲಿ ಒಕ್ಕಲಿಗರ ಒಂದತ್ತು ಮನೆ ಇರುವ ಕೇರಿ.

ಹಳ್ಳಿಯ ಸುತ್ತ ಮುತ್ತ ಎಲ್ಲಿ ನೋಡಿದರೂ ಹಸಿರೆ ಹಸಿರು.  ಸರಕಾರದವರಿಂದ ಊರಿನ ಎಮ್ಮೆ ಹಸು ಮೇಯಿದು(ಹುಲ್ಲು ತಿನ್ನಲು)ಕೊಂಡು ಬರುವುದಕ್ಕೆ ಸುಮಾರು ಎಕರೆ ಜಾಗ ಖಾಲಿ ಬಿಟ್ಟಿದ್ದರು.  ಇದಕ್ಕೆ ಗೋಮಾಳ ಜಾಗ ಎಂದು ಕರೆಯುತ್ತಿದ್ದರು.  ಅಲ್ಲಿ ಬಿದ್ದಿರುವ ಸಗಣಿ ಆಯ್ದು ಬುಟ್ಟಿ ತುಂಬಿ ತಂದು ಬೆರಣಿ ತಟ್ಟೋದು ಮಾರಿ ಜೀವನ ನಡೆಸೋದು ಕೆಲವು ಹೆಂಗಸರ ಕಸುಬು.

ನನ್ನ ಅಜ್ಜಿಗೊ ಹಸು ಕರು ಅಂದರೆ ಪಂಚ ಪ್ರಾಣ.  ಒಂದು ಬೆಳಗ್ಗೆ ಅವುಗಳ ಚಾಕರಿ(ಕೆಲಸ)ಶುರುವಾದರೆ ಸಾಯಂಕಾಲ ಮಲಗೊವರೆಗೂ ಮುಗಿಯೋದಿಲ್ಲ.  ಮಕ್ಕಳನ್ನಾದರೂ ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ ಇಲ್ಲವೊ.  ಅವುಗಳ ಲಾಲನೆ ಪಾಲನೆಯಲ್ಲಿ ತಮ್ಮ ಜೀವನವನ್ನೆ ಸವೆಸಿದರವರು.

ಇಂತಿಪ್ಪ ನನ್ನಜ್ಜಿಗೆ ಕೇಳಬೇಕಾ ಈ ಎಮ್ಮೆ ಹಾಡು!  ಅದೆಷ್ಟು ಇಷ್ಟ ಪಡುತ್ತಿದ್ದರೆಂದರೆ ಈ ಹಾಡು ಅವರ ಬಾಯಲ್ಲಿ ಯಕ್ಷಗಾನದ ದಾಟಿಯಲ್ಲಿ” ರಾಜಕುಮಾರ ಎಮ್ಮೆ ಮೇಲೆ ಕುಳಿತ ಬಂಗಿ, ಅರೆ ಹೊಯ್, ಅರೆ ಹೊಯ್” ತಾಳ ಹಾಕಿ ಮುಖ ಇಷ್ಟಗಲ ಮಾಡಿಕೊಂಡು ಹೇಳುತ್ತಿದ್ದರು.  ಈ ಸಿನೇಮಾದ ಮುಂದೆ ಯಾವುದೂ ಇಲ್ಲ ಬಿಡು.  “ನೋಡ್ದ್ಯೆನೆ ಆ ರಾಜಕುಮಾರಂಗು ಯನ್ನ ಹಂಗೆ ಎಮ್ಮೆ ಕಂಡರೆ ಎಷ್ಟು ಪ್ರೀತಿ.  ಅದೆಷ್ಟು ಚಂದ ಎಮ್ಮೆ ಮೇಲೆ ಕೂತಗಂಡು ಹಾಡಿದ್ನೆ.  ಯಂಗೆಂತು ಇನ್ನೂ ಒಂದೆರಡು ಸರ್ತಿ ಸಿನೇಮಾ ನೋಡವು ಕಾಣ್ತೆ.  ಪಾಪ ಆ ಏಮ್ಮ್ಯರು ಅವನ ಹೊತ್ಗಂಡು ಓಡಾಡಿದ್ದಲೆ.  ಅದೂ ಇಷ್ಟಗಲ ಕೋಡ ಬಿಟ್ಡಂಡು ಹ್ಯಾಂಗಿದ್ದೆ. ಲಾಯ್ಕಿದ್ದು ಎಮ್ಮೆ.”

ಇದು ಸಿನೇಮಾದಲ್ಲಿ ಅಭಿನಯಿಸಿರುವುದು ಅನ್ನುವ ಅಭಿಪ್ರಾಯ ಅಜ್ಜಿಯ ಮನದಲ್ಲಿ ಇರಲಿಲ್ಲ.  ಅಬ್ಬಾ ಅವರ ಅಭಿನಯ, ಆ ಹಾಡು ಯಾವತ್ತೂ ನಿಜಕ್ಕೂ ಮರೆಯಲು ಸಾಧ್ಯ ಇಲ್ಲ.  ನೋಡುಗರ ಮನದಲ್ಲಿ ನಿಜವೆಂದು ಉಳಿಯುವಂತ ಅಭಿನಯ.

cd26dd415e002d077c8063e99150573fಅದು ಮಳೆಗಾಲ.  ಸುಮಾರು ಹನ್ನೊಂದು ಗಂಟೆಗೆ ಎರಡು ಎಮ್ಮೆ ಹೊಡಕೊಂಡು(ಕರೆದುಕೊಂಡು) ಮೇಯಿಸಲು ಸ್ವತಃ ಹತ್ತಿರ ಅಂದರೆ ಸುತ್ತ ಮುತ್ತ ಒಂದು ಎರಡು  ಕಿಲೋ ಮೀಟರ್ ಹೋಗುತ್ತಿದ್ದರು.  ನನಗೂ ಹೋಗೊ ಆಸೆ.  ಶಾಲೆಗೆ ರಜೆ ಬೇರೆ ಇತ್ತು.  ಬೇಡ ಅಂದರೂ ಕೇಳದೆ ಕಂಬಳಿ ಕೊಪ್ಪೆ (ಮಳೆಗಾಲದಲ್ಲಿ ಬಳಸುವ ಕಂಬಳಿಯ ವಿಶಿಷ್ಟ ಮಡಿಕೆಯ ಧಿರಿಸು) ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದು ಹೊರಟೆ.
ಜಿಟಿ ಜಿಟಿ ಮಳೆ.  ಕಾಲಲ್ಲಿ ಚಪ್ಪಲಿ ಇಲ್ಲ.  ಅಜ್ಜಿಯಂತೂ ಚಪ್ಪಲಿ ಹಾಕುತ್ತಿರಲಿಲ್ಲ.  ನಾನು ಹಾಗೆ ಇರಬೇಕು.”ಎಂತ ಆಗ್ತಿಲ್ಲೆ ಬಾ.  ಸ್ವಲ್ಪ ನೆಲ ನೋಡ್ಕಂಡು ನಡೆಯವು.  ಬರಿ ಕಾಲಲ್ಲಿ ನಡದ್ರೆ ಚಮ೯ ಗಟ್ಟಿ ಆಗ್ತು.  ನೋಡು ಯನ್ನ್ ಕಾಲಿಗೆಂತಾಜೆ ” ಅವರ ಮಾತು.

ಎಮ್ಮೆ ಕೊರಳಿಗೆ ಹಗ್ಗ ಇಲ್ಲ.  ಹೆಸರಿಡಿದು ಮೂಕ ಪ್ರಾಣಿಗಳನ್ನು ಮಾತನಾಡಿಸಿ ಕನ್ನಡ ವಿದ್ಯೆ ಕಲಿಸಿ ಪಳಗಿಸಿದ್ದರು.  ಆಗಿನ ಕಾಲವೆ ಹಾಗಿತ್ತು.  ಮನೆಯ ಎಲ್ಲ ಕೆಲಸ ತಾವೆ ಮಾಡುವ ಪರಿಪಾಠ.  ಇನ್ನು ಆಸ್ತಿ ಮನೆ ಚೆನ್ನಾಗಿ ಇದ್ದವರಾದರೆ ಒಂದು ಆಳಿನ ಕುಟುಂಬಕ್ಕೆ ಬಿಡಾರ(ಮನೆ)ಅವರೆ ಕಟ್ಟಿಸಿ ವಷ೯ವೆಲ್ಲ ಅವರದೆ ಮನೆಯ ತೋಟದ ಕೆಲಸ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು.  ಆದರೆ ನಮ್ಮ ಹವ್ಯಕರಲ್ಲಿ ಸ್ಥಿತಿ ವಂತರು ಆಸ್ತಿ ತುಂಬಾ ಇದ್ದವರು ಕಡಿಮೆ.

ಹೀಗೆ ಎಮ್ಮೆ ಮೇಯಿಸ್ತಾ ದಾರಿ ಉದ್ದಕ್ಕೂ ಹೊ…ಹೊ…ಬಾ..ಬಾ.‌..ಎಂದು ಅವುಗಳನ್ನು ಕಂಟ್ರೋಲ್ ಮಾಡುತ್ತ ಎಮ್ಮೆ ಮೇಯಿಸುವ ಅಜ್ಜಿಯ ವೈಖರಿ.  ಅವುಗಳೂ ಅಷ್ಟೆ ಮೆಂದು ಮೆಂದು ಸಾಕಾಗಿ ಹುಲ್ಲಿನ ಮೇಲೆ ಸುಖಾಸೀನವಾಗಿ ತಿಂದ ಹುಲ್ಲು ಮೆಲುಕು(ಪುನಃ ಜಗಿಯುವ ವಿಚಿತ್ರ : ದೇವರ  ವರ)ಹಾಕುತ್ತ ಕೆಲವು ಸಮಯ ಕಾಲ ಕಳೆಯುತ್ತವೆ.  ನನಗೊ ಅಲ್ಲಿಯ ಸುಂದರ ಪರಿಸರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ಆ ಪರಿಸರದಲ್ಲಿ ಸಿಗುವ ಹಣ್ಣು ದಾಸಾಳಣ್ಣು, ಸಂಪಿಗೆ ಹಣ್ಣು ,ಕೌಳೀ ಹಣ್ಣು, ಬಿಕ್ಕೆ ಹಣ್ಣು, ಗೇರಣ್ಣು, ನೇರಳೆ ಹಣ್ಣು, ನೆಲ್ಲಿ ಕಾಯಿ ಒಂದಾ ಎರಡಾ.  ಹಾಗೆ ನೇರಳೆ ಮರದ ಎಲೆ ಕಿತ್ತು ಸುರಳಿ ಸುತ್ತಿ ಬಾಯಲ್ಲಿ ಇಟ್ಟು ‘ಪೀ^^^^ ಅಂತ ಸ್ವರ ಹೊರಡಿಸೋದು.  ಸಖತ್ತಾಗಿತ್ತು.  ಒಂಥರಾ ಮಜಾ ಫುಲ್ ಫ್ರೀಡಮ್ಮು.  ಮನೆಯಲ್ಲಿ ಇದ್ದರೆ ಓದು ಬರಿ ಕೆಲಸ ಮಾಡು.  ನನಗೊ ಇದ್ಯಾವುದು ಬೇಡ.  ಹೀಗೆ ಎಮ್ಮೆ ಕಾಯೊ ಕಾಯಕ ಅಜ್ಜಿ ಜೊತೆಗೆ ಆಗಾಗ ನಾನೂ ಹೋಗುತ್ತಿದ್ದೆ.  ಎಲ್ಲಾ ಕಡೆ ಸುತ್ತಾಡಿ ಸುಸ್ತಾಗಿ ಮನೆಗೆ ಹೊತ್ತು ಮುಳುಗುವುದರೊಳಗೆ ಬರೋದು.   ಇವೆಲ್ಲ ಎಷ್ಟು ವಷ೯ದ ಹಿಂದಿನ ಕಥೆ.

ಆದರೆ ಈಗ ನಮ್ಮ ಹಳ್ಳಿಯ ಪರಿಸರ ಸಂಪೂರ್ಣ ಬದಲಾಗಿದೆ.  ಸುತ್ತ ಮುತ್ತ ಗೋಮಾಳ ಜಾಗದಲ್ಲಿ ಅಲ್ಲಲ್ಲಿ ಬೇರೆ ಊರಿಂದ ಬಂದ ಕೆಲಸಗಾರರು ಅಥವಾ ಅಲ್ಲಿನ ಕೆಲಸಗಾರರಿಂದ  ಹೀಗೆ ಹಲವಾರು ಮನೆ ಎದ್ದು ನಿಂತಿದೆ.  ಸರಕಾರ ಕೂಡ ಬಡವರಿಗೆ ಮನೆ ಕಟ್ಟಿ ಕೊಟ್ಟಿದೆ.  ಈಗ ಸಣ್ಣ ಹಳ್ಳಿ ಹೋಗಿ ಸಿಟಿ ಆಗಿದೆ.  ಆಧುನಿಕ ಸೌಲಭ್ಯಗಳು ಸೇರಿಕೊಂಡಿವೆ.  ಜಗದಗಲ ಊರಗಲವಾಗಿದೆ. ಆ ಹಸಿರು ವನ ರಾಶಿ ಇಲ್ಲವೆ ಇಲ್ಲ.

ಎಮ್ಮೆಯ ಹಾಡು ಹೇಳುವ ನನ್ನ ಅಜ್ಜಿನೂ ಇಲ್ಲ; ಈ ಹಾಡು ಹಾಡಿ, ನಟಿಸಿ ಎಲ್ಲರ ಮನೆ ಮಾತಾದ ರಾಜಣ್ಣನೂ ಇಲ್ಲ.  ಈಗ ಎಲ್ಲವೂ ಬರಿ ನೆನಪಷ್ಟೆ.

‍ಲೇಖಕರು admin

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸಾವಿತ್ರಿ ವೆಂ ಹಟ್ಟಿ

    ಅವೆಲ್ಲಾ ಸುವರ್ಣಯುಗದ ನೆನಪುಗಳು ಮೇಡಮ್…. ಈಗ ನೆನೆ ನೆನೆದು ಸಾಯುವುದಷ್ಟೆ…

    ಪ್ರತಿಕ್ರಿಯೆ
  2. ಸಾವಿತ್ರಿ ವೆಂ ಹಟ್ಟಿ

    ಅವೆಲ್ಲಾ ಸುವರ್ಣಯುಗದ ನೆನಪುಗಳು ಮೇಡಮ್…. ಈಗ ನೆನೆ ನೆನೆದು ಸಾಯುವುದಷ್ಟೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: