ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂಗ್ಲೆಂಡಿನಲ್ಲಿ ಕಾಸರವಳ್ಳಿ ಕಮ್ಮಟ..

ಚಿತ್ರ ಲೇಖನ- ಡಾ. ಪ್ರೇಮಲತ ಬಿ.

“ಈಗಿನ ಕಾಲದಲ್ಲಾಗಿದ್ದರೆ ನನ್ನ 7-8 ಚಿತ್ರಗಳನ್ನು ಬ್ಯಾನ್ ಮಾಡಲಾಗುತ್ತಿತ್ತೋ ಏನೋ “ ಎಂದು ಕಳವಳ ಪಟ್ಟವರು  ಕನ್ನಡದ ಹೆಮ್ಮೆಯ ಸಿನಿಮಾ ನಿರ್ದೇಶಕರಾದ ಡಾ. ಗಿರೀಶ್ ಕಾಸರವಳ್ಳಿಯವರು.

14 ಕನ್ನಡ ಚಿತ್ರಗಳನ್ನು ನಿರ್ಮಿಸಿ ಪ್ರತಿ ಚಿತ್ರಕ್ಕೂ ಪ್ರಶಸ್ತಿಯನ್ನು ಪಡೆದ ಜಗತ್ತಿನ ಅತಿ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ, ಪದ್ಮಶ್ರೀ ವಿಜೇತ ಕಾಸರವಳ್ಳಿಯವರು ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿ ಸಿನಿಮಾರಂಗದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು.

ಇಂಗ್ಲೆಂಡಿನಲ್ಲಿ ಯುಗಾದಿ ಹಬ್ಬದ ಸಲುವಾಗಿ ಕನ್ನಡ ಬಳಗ ಡಾಂಕಾಸ್ಟೆರ್ ಎಂಬ ನಗರದಲ್ಲಿ ಕನ್ನಡ ಸಮುದಾಯಕ್ಕಾಗಿ ಒಂದು ಸಮ್ಮಿಲನವನ್ನು ಹಮ್ಮಿಕೊಂಡಿತ್ತು. ವರ್ಷಕ್ಕೆರಡು ಬಾರಿ ಯುಗಾದಿ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕನ್ನಡ ನಾಡಿನ ಪ್ರಖ್ಯಾತ  ಕಲಾವಿದರನ್ನು, ಸಾಹಿತಿಗಳನ್ನು, ಸಂಗೀತಕಾರರನ್ನು  ಕರೆಸುವುದು ನಡೆದುಬಂದಿರುವ ವಾಡಿಕೆ. ಇದೇ ತಿಂಗಳು 13 ರಂದು ಆಮಂತ್ರಣವನ್ನು ಸ್ವೀಕರಿಸಿ ಇಂಗ್ಲೆಂಡಿಗೆ ಆಗಮಿಸಿದ ಕಾಸರವಳ್ಳಿಯವರನ್ನು ಕಾಣುವ ಸದಾವಕಾಶ ಇಲ್ಲಿನ ಕನ್ನಡಿಗರಿಗೆ ಒದಗಿ ಬಂದಿತ್ತು.

ರೂಪಕ (Metaphor) ಗಳನ್ನು ಬಳಸಿ, ಒಂದೇ ಸಿನಿಮಾದಲ್ಲಿ  ಹಲವು ಕಥೆಗಳನ್ನು ಹೇಳುವ ಅಪ್ರತಿಮ ಕಲೆ ಕಾಸರವಳ್ಳಿಯವರದ್ದು.  ಪ್ರತಿ  ಪಾತ್ರದ/ಜೀವದ ನೂರು ಭಾವಗಳನ್ನು, ಪ್ರತಿಮೆ, ನಿಶ್ಯಬ್ದ, ರೂಪಕ, ನೆರಳು ಬೆಳಕಿನಾಟಗಳಲ್ಲಿ ಹೇಳುತ್ತ, ಚಿತ್ರದ ಕಥೆಯ ಲಯವನ್ನು ಒಂದು ದೇಸಿ ಸಂಗೀತ ಸಾಧನದ ಧ್ವನಿಯಲ್ಲಿ  ಮರುಧ್ವನಿಯಾಗಿಸುವ  ಅಸದಳ ತಂತ್ರಗಳಿಂದ ಕೂಡಿದ ಇವರ ಚಿತ್ರಗಳು ಜೀವನದ ಅಪರಿಪೂರ್ಣತೆಯ ಪ್ರತಿಬಿಂಬದಂತೆ, ಹಾಗಂತ ಬೇಕಂತಲೇ ಮಾಡಲ್ಪಟ್ಟವು.

ಕಾಲಚಕ್ರದಲ್ಲಿ ಹೊಡೆತಕ್ಕೆ ಒಳಗಾಗುವ ಜೀವಗಳ ಪುನರುದ್ದೀಪನದ ಸಂಕೇತಗಳು. ಇವರ ಚಿತ್ರಗಳಲ್ಲಿ  ಸಮಾಜ ಮತ್ತು ಸಂಸ್ಕೃತಿಯ ಕೊನೆಯ ಕೊಂಡಿಗಳಾದ ಬುಡಕಟ್ಟು ಜನರ, ಅಲ್ಪ ಸಂಖ್ಯಾತರ, ದಮನಿತರ ಮತ್ತು ಅತಿ ಸಾಧಾರಣರ  ಜನರ ಕಚ್ಛಾ ಜೀವನ ಶೈಲಿಯ, ಸಂಪ್ರದಾಯಸ್ಥರ, ಮಧ್ಯಮ ವರ್ಗದ ಮೀಡಿಯೋಕರ್ಗಳ ಜೀವನ ದಾಖಲೆಗಳಿವೆ. ಸಮಾಜದ ಆಚರಣೆಗಳು, ಧರ್ಮದ ಸಂಸ್ಥೀಕರಣದ ಪರಿಣಾಮಗಳು, ಜಾಗತೀಕರಣದ ಉಪಧ್ವ್ಯಾಪಗಳು, ರಾಜಕೀಯದ ಹುನ್ನಾರಗಳು, ಅಸಹಾಯಕ ಜೀವಗಳ ತಳಮಳಗಳು, ಮನು ಸಂಸ್ಕೃತಿಯ ಕೋಟಲೆಗಳು, ಮಹಿಳೆಯರ ಮನಸ್ಸಿನಲ್ಲಿ ಏಳುವ ತಳಮಳಗಳು, ಸೃಷ್ಟಿಗೇ ಶಕ್ತಿಯಾಗುವ ಅವಳ ಮನಃ ಸಂಕಲ್ಪಗಳು, ರಾಷ್ಟ್ರೀಯತೆಯ ಹೆಸರಲ್ಲಿ ನಡೆಯುವ ಸ್ಥಳೀಯ ಅವಘಡಗಳು, ಸಂಪ್ರದಾಯಗಳನ್ನು ಪ್ರಶ್ನಿಸುವ ಕಾಲದಂತೆಯೇ ಕಾಣುವ ಪಾತ್ರಗಳು ಎಲ್ಲವೂ ಇವೆ.

ಪ್ರತಿಪಾತ್ರಗಳು ಇವರ ಚಿತ್ರದಲ್ಲಿ ಮುಖ್ಯವಾಗುತ್ತವೆ ಅನ್ನಿಸುವಾಗಲೇ ಚಿತ್ರದ ಪಾತ್ರಗಳಾಗುವ ಮಕ್ಕಳು, ಮುದುಕರು, ಹೆಂಗಸು, ಗಂಡಸು, ಮನೆ , ಮಳೆ ಎಲ್ಲವೂ ಪ್ರತಿಮೆಗಳಾಗಿ ಬಿಡುತ್ತಾರೆ. ಕಥೆಯೇ ಪ್ರಧಾನವಾಗಿಬಿಡುತ್ತದೆ. ದೃಶ್ಯಮಾಧ್ಯಮದಲ್ಲಿ ಈ ಬಗೆಯ ಕುಶಲತೆಯನ್ನು ತೋರಿಸಲು ಗಿರೀಶ್ ಕಾಸರವಳ್ಳಿಯವರಿಗಿರುವ ಸಾಹಿತ್ಯಕ ಆಳ-ಹರಿವುಗಳು, ಕಲೆಗಾರಿಕೆ, ಕಲಾವಿದರನ್ನು ಬಳಸಿಕೊಳ್ಳುವ ನಿರ್ದೇಶನದ ಕಲೆ, ಪರಿಶ್ರಮ, ಸಂಕಲ್ಪ, ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳದ  ಧ್ಯೇಯ, ಅದನ್ನು ಸಾಧಿಸುವ ಹಟ, ವ್ಯವಸ್ಥೆ ಒಡ್ಡುವ ಹಾಲಾಹಲವನ್ನು ನುಂಗಿಯೂ ಕಾಯ್ದುಕೊಳ್ಳಬೇಕಾದ ಸಹನೆ, ಜನಸಾಮಾನ್ಯರೊಡನೆ ಮಾಡಿಕೊಳ್ಳುವ ಸರಳ ಹೊಂದಾಣಿಕೆ ಎಲ್ಲವೂ ಇವೆ.ಅಂತರ್ಮುಖಿ ವ್ಯಕ್ತಿತ್ವ ಎಂದು ಕೇಳಿಬಂದಿತ್ತಾದರು, ಅವರಿಗಿರುವ ಹಾಸ್ಯಪ್ರಜ್ಞೆಯೂ ಸೇರಿ ಅವರು ಎಲ್ಲ ಸ್ತರದ ಜನರಿಗೆ ತಲುಪಿದ್ದು ಅವರ ಸರಳತೆಯ ಕಾರಣವೇ ನಿಜ. ಪರಿಪಕ್ವ ಕಲಾವಿದನಿಗಿರುವ ನಿರುಮ್ಮಳತೆಯೂ ಅವರಲ್ಲಿ ಹೇರಳವಾಗಿ ಕಂಡುಬಂದಿತು. ಎಡಬಿಡದೆ ಅವರೊಡನೆ ಸಂಭಾಷಿಸಲು ಪ್ರಯತ್ನಿಸಿದ ಎಲ್ಲರಿಗೂ ಅವರು ಕಂಡದ್ದು ಬಹಳ ಸರಳ ವ್ಯಕ್ತಿಯಂತೆ. ಶಾಂತವಾಗಿರುವ ಆಳ ಶರಧಿಯಂತೆ !

ಕನ್ನಡ ಚಿತ್ರರಂಗ ಹುಟ್ಟಿದ್ದು, ಬೆಳೆದದ್ದು ಪರನಾಡಿನಲ್ಲಿ, ಹಾಗಾಗಿ ತನ್ನ ಬೇರುಗಳನ್ನು ಕಾಣಲು, ಕೀಳಿರಿಮೆಯನ್ನು ಕಳೆದುಕೊಳ್ಳಲು ಕನ್ನಡ ಚಿತ್ರರಂಗಕ್ಕೆ  ಬಹು ಕಾಲ ಬೇಕಾಯ್ತು ಎನ್ನುವುದನ್ನು ನೆನೆದ ಇವರು ಪರದೇಶಿ ನಿರ್ಮಾಪಕರು, ನಿರ್ದೇಶಕರು ಕನ್ನಡ ಚಿತ್ರರಂಗವನ್ನು ಕೇವಲ ಒಂದು ಮಾರುಕಟ್ಟೆಯನ್ನಾಗಿ  ಮಾತ್ರ ನೋಡಿದರೇ ಹೊರತು, ಕನ್ನಡ ಚಿತ್ರ, ಕನ್ನಡ ಸಂಸ್ಕೃತಿಯ ಒಂದು ಭಾಗ ಎಂದು ಪರಿಗಣಿಸದಿದ್ದುದೇ ಕನ್ನಡ ಚಿತ್ರರಂಗಕ್ಕೆ ಆಳ ಬೇರಿಲ್ಲದೇ ಹೋದ ಅನಾಹುತಕ್ಕೆ ಕಾರಣ ಎಂದು ಹೇಳಿದರು. ಕನ್ನಡ ಚಿತ್ರರಂಗ  ಮತ್ತು ಸಾಹಿತ್ಯಕ್ಕೆ ನಂಟು ಬೆಳೆದದ್ದು 1960 ರ ನಂತರ  ಎಂದು ನೆನೆದ ಕಾಸರವಳ್ಳಿಯವರು ತಮ್ಮ ಭಾಷಣದಲ್ಲಿ ಇಂದಿಗೂ ಕನ್ನಡ ಚಿತ್ರರಂಗವನ್ನು ಕುಣಿಸುವ ಸೂತ್ರಗಳು ಚೆನ್ನೈ, ಹೈದ್ರಾಬಾದ್ ಗಳಲ್ಲಿಯೇ ಇವೆ ಎಂಬ ಬಗ್ಗೆ ಖೇದ ವ್ಯಕ್ತಪಡಿಸಿದರು.

ವೀರೇಂದ್ರ ಪಾಟೀಲರ ಸರಕಾರದಲ್ಲಿ ವಿತ್ತ ಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಹಣ ಸಹಾಯ ಮಾಡಿ ಬೆಂಗಳೂರಿಗೆ  ಚಿತ್ರೋದ್ಯಮ  ಒಂದು ಮಟ್ಟಕ್ಕೆ ಬರುವಂತೆ ಮಾಡಿದ್ದನ್ನು ನೆನೆದರು. ಆದರೆ  ಅದಕ್ಕೆ 35 ವರ್ಷಗಳು ಬೇಕಾಯ್ತು ಎನ್ನುವ ವಿಶಾದ ವ್ಯಕ್ತಪಡಿಸಿದ ಇವರು ಮಲೆಯಾಳಂ ಚಿತ್ರ ರಂಗಕ್ಕೂ, ದಕ್ಷಿಣ ಭಾರತದ ಇತರೆ ಭಾಷಾ ಚಲನ ಚಿತ್ರಗಳನ್ನು ಉಲ್ಲೇಖಿಸಿ ವ್ಯತ್ಯಾಸವನ್ನು ತಿಳಿಸಿದರು. ನಿರ್ಮಾಪಕರ ಸಂಘಗಳು ಮಾತ್ರ ಸಿನಿಮಾವೊಂದನ್ನು ಸ್ಪರ್ಧೆಗೆ ಕಳಿಸುವ ಹಕ್ಕನ್ನು ಹೊಂದಿರುವುದಾಗಿ ತಿಳಿಸಿದ ಅವರು ಚಿತ್ರವೊಂದನ್ನು ಆಸ್ಕರ್ ನಂತಹ ಸ್ಪರ್ಧೆಗಳಿಗೆ ಕಳಿಸುವಾಗ ಹೇಗೆ ಪ್ರಾಂತೀಯ ಮೇಲುಗಾರಿಕೆ, ಉತ್ತರ -ದಕ್ಷಿಣಾದಿ ತಾರತಮ್ಯಗಳು ಜರುಗುತ್ತವೆ ಎಂದು ವ್ಯಾಖ್ಯಾನಿಸಿದರು.

ಕನ್ನಡ ಚಿತ್ರ ರಂಗಕ್ಕೆ ಇದೇ ಕಾರಣಕ್ಕೆ ಇರುವ ಕೀಳಿರಿಮೆ, ಸಿನಿಮಾ ಮತ್ತು ಜಾನಪದ ಕಲೆಗಳನ್ನು ನಮ್ಮ ಕನ್ನಡ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿ ಬೆಳೆಸುವ ಬಗ್ಗೆ ಇಲ್ಲದ ಅರಿವನ್ನು ವಿಶ್ಲೇಷಿಸ ಬೇಕಾದ ಅಗತ್ಯವನ್ನ ಒತ್ತಿ ಹೇಳಿದರು. ಸಿನಿಮಾ ಮತ್ತು ಕಲೆಗಳು  ಕನ್ನಡ ಸಂಸ್ಕ್ಕೃತಿಯ ಅವಿಭಾಜ್ಯ ಅಂಗವಾಗಿ ಗಟ್ಟಿಯಾಗಿ ಬೆಳೆಯಲು ಬೇಕಾದ ಮೂರು  ಬಗೆಯ ಲೋಹಿಯಾ ಅವರ ನೋಟಗಳ ಬಗ್ಗೆ ಹೇಳಿದ ಕಾಸರವಳ್ಳಿಯವರು ಕನ್ನಡ ಚಿತ್ರರಂಗಕ್ಕೆ ತಾನು ನಡೆದುಬಂದ ದಾರಿಯ ಹಿನ್ನೋಟ,  ಭವಿಷ್ಯದ ಮುನ್ನೋಟ ಮತ್ತು ಅಕ್ಕ ಪಕ್ಕದ ನೋಟ ಬೇಕು ಎಂದು ಹೇಳಿದರು.  ಕನ್ನಡ ಸಂಸ್ಕೃತಿಯನ್ನು ಬರಿಯ ಹಣದ ಯಶಸ್ಸಿನಿಂದ ನೋಡದೆ ಸಂಸ್ಕೃತಿಯಾಗಿ ಬೆಳೆಸಬೇಕಾದ ಅವಶ್ಯಕತೆಯ ಬಗ್ಗೆ ಎಚ್ಚರಿಸಿದರು, ಸಾಮಾಜಿಕ ಪರಂಪರೆಯ ಅರಿವಿಲ್ಲದೆ, ಭವಿಷ್ಯದ ಆಸೆಯಿಲ್ಲದೆ, ಬರಿಯ ಅಕ್ಕ ಪಕ್ಕದವರ ಅನುಕರಣೆಯೇ ಕನ್ನಡ ಚಿತ್ರರಂಗದ ಇಂದಿನ ಗುಣ ಮಟ್ಟಕ್ಕೆ ಕಾರಣ ಎಂದು ಮುಖ್ಯ ಸಂದೇಶವನ್ನು ವಿಭಜಿಸಿದರು.

ಜಗತ್ತಿನ ಇತರೆ  ಪ್ರಸಿದ್ದ ಕಲಾತ್ಮಕ ನಿರ್ದೇಶಕರುಗಳಂತೆಯೇ ಪ್ರೌಢ ಪ್ರಭುದ್ದ ಚಿತ್ರಗಳನ್ನು ನೀಡಿರುವ ಕಾಸರವಳ್ಳಿಯವರು, ಸತ್ಯಜಿತ್ ರೇಯವರ ಚಿತ್ರಗಳು ಸ್ಪರ್ಧೆಗೆ ಕಳಿಸಲ್ಪಡದಿದ್ದರೂ ಜೀವಮಾನ ಸಾಧನೆಗಾಗಿ ಆಸ್ಕರ್ ಪ್ರಶಸ್ತಿಯೇ ಸತ್ಯಜಿತ್ ರೇ ಯವರ ಮನೆಗೆ ತಲುಪಿದ ಕಾರಣಕ್ಕೆ ಬೆಳಕನ್ನು ಚೆಲ್ಲಿದರು. ಹಲವು ಅಂತರರಾಷ್ಟ್ರೀಯ  ಪ್ರಶಸ್ತಿಗಳೂ ಸೇರಿದಂತೆ ರೇ ಯವರನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅತಿ ಹೆಚ್ಚಿನ ರಾಷ್ತ್ರಪತಿಗಳ ಸ್ವರ್ಣ ಕಮಲ ಪ್ರಶಸ್ತಿ (೪ ಸ್ವರ್ಣ ಕಮಲ, ೭ ರಜತ ಕಮಲ) ಪಡೆದಿರುವ ಏಕೈಕ ನಿರ್ದೇಶಕರಾದ ಈ ಅಪ್ಪಟ ಕನ್ನಡಿಗರ ಎಲ್ಲ ಚಿತ್ರಗಳು ಸಾಹಿತ್ಯಕ ಕೃತಿಗಳಿಂದ ಪ್ರೇರೇಪಿತವಾದವು. ಆದರ ಇವರದೇ ದೃಷ್ಟಿಯಲ್ಲಿ ಅರಳಿ ಹಲವು ಆಯಾಮಗಳನ್ನು ಪಡೆದು ಕೊಂಡಂತವು.

ಕಲಾತ್ಮಕ ಅಥವಾ ಪರ್ಯಾಯ ಚಿತ್ರಗಳನ್ನು ನಿರ್ಮಿಸಲು ಮುಂದೆ ಬರುವ ಕೆಲವೇ ಮಂದಿಯನ್ನು ನೆನೆದ ಅವರು ಉಮಾಶ್ರೀಯವರ ಅಭಿನಯ ಕುಶಲತೆಯನ್ನು ಮೆಚ್ಚಿದರು. ಸೌಂದರ್ಯಳ ಬದ್ದತೆಯನ್ನು ನೆನಪಿಸಿಕೊಂಡರು. ನಾಸಿರುದ್ದೀನ್ ಶಾನೊಂದಿಗೆ ಕೆಲಸ ಮಾಡಿದ ದಿನಗಳನ್ನು ನೆನೆದರು. ಪುಣೆಯ ಸಿನಿಮಾ ಮಾಧ್ಯಮದಲ್ಲಿ ಓದುತ್ತಿರುವಾಗ ಆದ ಘಟನೆಗಳು, ಡಿಪ್ಲೊಮಾಗಾಗಿ  ವಿದ್ಯಾರ್ಥಿಯಾಗಿ ಮಾಡಿದ ಅವಶೇಷ್ ಎನ್ನುವ ಚಿತ್ರವನ್ನು ಕೂಡ ಕನ್ನಡದಲ್ಲಿಯೇ ಮಾಡಿ ಆ ವಿಭಾಗಕ್ಕಿದ್ದ ರಾಷ್ಟ್ರಪತಿಗಳ ರಜತ ಕಮಲ ಪ್ರಶಸ್ತಿಯನ್ನು ಪಡೆದ ದಿನಗಳನ್ನು ನೆನೆದರು.

ಇದೇ ದಿನ ಗಿರೀಶ್ ಕಾಸರವಳ್ಳಿಯವರ ಹಲವು ಚಿತ್ರಗಳ ಬಗ್ಗೆ ಕಮ್ಮಟವನ್ನೂ ನಡೆಸಲಾಯ್ತು. ’ಕಾಫಿ ವಿಥ್ ಕಾಸರವಳ್ಳಿ” ಎನ್ನುವ ಹೆಸರಲ್ಲಿ ನಡೆದ  ಒಂದು ಘಂಟೆಗೂ ಹೆಚ್ಚಿನ ಕಾರ್ಯಕ್ರಮದಲ್ಲಿ ಅವರ ಹಲವು ಚಿತ್ರಗಳ ತುಣುಕನ್ನು ಜನರಿಗೆ ತೋರಿಸಿ, ಸಿನಿಮಾ ವಿಶೇಷಣೆಗಳನ್ನು ವಿಷ್ಲೇಶಿಸಲಾಯ್ತು. ಮರುದಿನ  ’ತಾಯಿ ಸಾಹೇಬ’ ಸಿನಿಮಾ ಪ್ರದರ್ಶನವನ್ನು ಮಾಡಿ ನಿರ್ದೇಶಕರೊಡನೆ ಸಂವಾದ ನಡೆಸಲಾಯ್ತು.

ಅಭಿವ್ಯಕ್ತಿಯ ಕಲಾತ್ಮಕತೆಯನ್ನು ಇನ್ನಿಲ್ಲದಂತೆ ತಮ್ಮ ಸಿನಿಮಾಗಳಲ್ಲಿ ತೋರಿಸಿರುವ ಕಾಸರವಳ್ಳಿಯವರ ಸಿನಿಮಾಗಳ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗಬೇಕು. ದೇಶದ, ಸಮಾಜದ ಎಲ್ಲ ಸಮುದಾಯಗಳ, ರಾಜಕೀಯದ ಎಲ್ಲ ಆಗು ಹೋಗುಗಳನ್ನು ಮನ ಕಲಕುವಂತೆ ಪ್ರೇಕ್ಷಕರ ಮುಂದಿಟ್ಟು ಉತ್ತರಗಳನ್ನು ಸಮಸ್ಯೆಯ ಮೂಲಕವೇ ಬಿಚ್ಚಿಟ್ಟು ಪ್ರೇಕ್ಷಕರನ್ನೇ ಅದನ್ನು ಕಂಡುಕೊಳ್ಳಲು ಪ್ರೇರೇಪಿಸುವ ಇವರ ಸಿನಿಮಾಗಳು ಮತ್ತೆ ಮತ್ತೆ ಜನರನ್ನು ತಲುಪಬೇಕು. ಕನ್ನಡಲ್ಲಿ ಈ  ಹಿಂದೆ ಬಹುಶಃ ಮುಂದೆಯೂ ಇರುವವರು ಕನ್ನಡಕೊಬ್ಬರೇ ಆದ , ಶತಕೋಟಿಗೊಬ್ಬ  ಕಾಸರವಳ್ಳಿ ಎನ್ನುವುದನ್ನು ಮನಗಾಣುವ ಪ್ರಯತ್ನಗಳಾಗಲಿ, ಭಾರತಕ್ಕೆ ಮತ್ತು ಅಂತರ ರಾಷ್ಟ್ರೀಯ  ಸಿನಿಮಾ ರಂಗಕ್ಕೆ ಸಂದಿರುವ ಈ ಅಪ್ಪಟ ಕಲಾ  ಗಾರುಡಿಗನ ಪ್ರತಿಭೆ ಮತ್ತೊಬ್ಬರಿಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಚಿತ್ರಗಳ ಮೂಲಕ  ಕಲಿಯುವ ಮತ್ತು   ನಲಿಯುವ ಜನರು ಹೆಚ್ಚಾಗಲಿ.

‍ಲೇಖಕರು avadhi

23 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading