ಅಲ್ವೇ, ಶ್ರೀಕಲಾ?

ಶ್ಯಾಮಲಾ ಮಾಧವ

ಪ್ರಿಯ ಶ್ರೀಕಲಾ ,

ನಮಸ್ತೆ. ನಿಮ್ಮ ‘ಬಾಳಂತಿ ಪುರಾಣ’ ಈಗಷ್ಟೇ ಓದಿ ಮುಗಿಸಿದೆ. ಪುನಃ ಎಲ್ಲವನ್ನೂ ಫ್ರೆಶ್ ಆಗಿ ಅನುಭವಿಸಿದಂತಾಯ್ತು. ಆದರೆ ಕೆಲವು ವ್ಯತ್ಯಾಸಗಳು.
ನಮ್ಮಲ್ಲಿ ಬಾಣಂತಿ ಎನ್ನುತ್ತಾರೆ.

ನನಗೆ  ಹದಿನೇಳರಲ್ಲಿ ಮದುವೆಯಾಗಿ ಮತ್ತೆರಡು ವರ್ಷಗಳ ಕಾಲೇಜ್ ಪೂರೈಸಿ ಮುಂಬೈಗೆ ಬಂದ ಮೇಲೆ ಬಸುರಿಯಾಗಿ 21 ವರ್ಷಕ್ಕೆ ತಾಯಾದೆ. ಮೂರು ದಿನಗಳ ಹೆರಿಗೆ ನೋವಲ್ಲಿ ಪ್ರತಿ ನೋವಿಗೂ ವಾಂತಿಯಾಗಿ ಮಗು ಮತ್ತೆ ಮೇಲೆ ಹೋಗುತ್ತಿತ್ತು. ಕೊನೆಗೂ ಫೋರ್ಸೆಪ್ಸ್ ಮಾಡುವಂತಾಯ್ತು. ಮಮತಾಮಯಿ ಡಾ.ಸಲ್ಡಾನಾ ಬಳಿ ನಿಂತು, “ಇನ್ನೂ ಸ್ವಲ್ಪ ಪ್ರಯತ್ನಿಸು; ಫೋರ್ಸೆಪ್ಸ್ ಮಾಡಿದರೆ ಸುಮ್ಮನೆ ನನಗೆ  60 ರೂಪಾಯಿ ಕೊಡಬೇಕು. ಆ ಹಣದಲ್ಲಿ ನಿನಗೊಂದು ಸಿಲ್ಕ್ ಸೀರೆ ಕೊಳ್ಳಬಹುದು” ಎಂದು ಅನುನಯಿಸುತ್ತಿದ್ದರು. ಆದರೆ ನನ್ನಲ್ಲಿ ಶಕ್ತಿಯೇ ಉಳಿದಿರಲಿಲ್ಲ. ಈಗ ನಾರ್ಮಲ್ಲ್ ಡೆಲಿವರಿಗೇ ಲಕ್ನ ರೂಪಾಯಿ!  ಸಲ್ಡಾನಾರಂಥ ಡಾಕ್ಟರ್ಸ್ ಕೂಡ ಈಗಿಲ್ಲ, ಅಲ್ವೇ?

ನಿಮ್ಮ ‘ಸಾರ್ಥಕ’ ತುಂಬ ಚಂದ! ಅವನು ಮರದ ಕೆಳಗೆ ಸುರಿದಿದ್ದ ಬಿಳಿಯ ಹೂಗಳನ್ನು ಹೆಕ್ಕಿ ತಂದ ಬಗ್ಗೆ ಬರೆದಿದ್ದೀರಿ. ಅವು ರೆಂಜೆಯ ಹೂಗಳೇ?
ನನ್ನ ಪ್ರಥಮ ಬಾಣಂತಿ ಸ್ನಾನದಲ್ಲಿ ಬಚ್ಚಲಿನ ಬಾಗಿಲನ್ನು ಸ್ವಲ್ಪ ತೆರೆದಿಟ್ಟು ಆ ಬಿಸಿ ನೀರನ್ನು ತಪಲೆಯಲ್ಲಿ ಮೊಗೆದು ಹೊಟ್ಟೆಗೆ ರಾಚಿದಾಗ, ಏನೂ ಅರಿಯದ ನಾನು ಇದು ಭೂತ ಬಿಡಿಸುವುದೇನೋ ಎಂದುಕೊಂಡಿದ್ದೆ. (ಭೂತಕ್ಕೆ ಓಡಲು ಬಾಗಿಲು ತೆರೆದಿಟ್ಟು )

ಉಗುರು ಬೆಚ್ಚಗೆ ಮಾತ್ರ ಮೀಯುವ ನನಗೆ ಇದು ಸಹಿಸಲಸಾಧ್ಯವಾಗಿತ್ತು. ಪುಣ್ಯಕ್ಕೆ ನಮ್ ಮಂಗಳೂರ ಸೆಖೆಗಾಲ ಇನ್ನೂ ಕಾಲಿರಿಸಿರಲಿಲ್ಲ.
ಸ್ನಾನದ ಬಳಿಕ ಒಲೆಯೆದುರು ಕಂಬಳಿ ಮುಚ್ಚಿ ಕೂರುವುದು ನಿಮ್ಮ ಮಲೆನಾಡಲ್ಲಿ ಸಾಧ್ಯವೇನೋ. ನಮ್ಮಲ್ಲಿ ಊಹಿಸಲೂ ಅಸಾಧ್ಯ! ತೂರಾಡತ್ತಾ ಒಳಗೆ ಬಂದು – ಕರೆ ತಂದು – ಕಂಬಳಿ ಹೊದ್ದು ಮಲಗಿ ಸಂಪೂರ್ಣ ಬೆವತು ಹೋಗಬೇಕು. ಮತ್ತೆ ಎಬ್ಬಿಸಿ ದೊಡ್ಡ ಕಂಚಿನ ಲೋಟ ತುಂಬ ಕುಡಿಸುವ ಓಲೆಬೆಲ್ಲದ ಕಾಫಿ ಅಮೃತ ಸಮಾನ.

ನಾನು ನಿಮ್ಮಂಥ ಒಳ್ಳೆಯ ಮಗುವಲ್ಲ. ಬೆಳ್ಳುಳ್ಳಿ ಮದ್ದು ಮತ್ತು ಲೇಹ ಮದ್ದು ಬಿಟ್ಟರೆ ಮತ್ತೆಲ್ಲವನ್ನೂ ಸಿಡಿಮಿಡಿಗುಟ್ಟುತ್ತಾ, ಬೇಡವೆಂದು ಕಿರಿಕಿರಿ ಮಾಡುತ್ತಿದ್ದವಳು. ಕಹಿ ನನಗೆ ವರ್ಜ್ಯ. ಮೆಣಸು ತಿಂದ ಮೊದಲ ದಿನ ರಾತ್ರಿಯ ಆಹಾರ ಏನೆಂದು ನೀವು ಹೇಳಿಲ್ಲ.

ದುಂಡು ಮಲ್ಲಿಗೆಸೊಪ್ಪು -ದುಂಡು ಮಲ್ಲಿಗೆ ಹೂವಿನದೇ ಏನು? ಹೇಗೆ ಮಾಡುವುದು, ಹೇಳಬಹುದೇ? ಊರಲ್ಲಿ ಬೇಕಷ್ಟು ಸೊಪ್ಪಿದೆ. ಮಿಟ್ಲೆ ಸೊಪ್ಪು ಯಾವುದು? ಸೋರ್ಲೆ ಕುಡಿ?

ನೀವಂದ ದೇಹ ನಾವು ಟ್ಯೂನ್ ಮಾಡಿದಂತೆ ಇರುವುದುಎಂಬ ಮಾತೇ ನನ್ನದೂ ಕೂಡಾ. ಎಲ್ಲರೂ ಕಾಫಿ, ತುಪ್ಪ, ರಾತ್ರಿಯಲ್ಲಿ ಮೊಸರು, ಮಜ್ಜಿಗೆ ಕೆಟ್ಟದೆಂದರೆ, ನನಗವು ಬೇಕೇ ಬೇಕು. ಅವೇ ನನ್ನ ಆರೋಗ್ಯ. ಸಿಹಿ ಕೂಡಾ ಧಾರಾಳ. ನಮ್ಮಮ್ಮನಿಗೆ 97. ಹಿಪ್ ಜಾಯಿಂಟ್ ಸವೆದುದು ಬಿಟ್ಟರೆ  ಮತ್ತೆಲ್ಲ ಆರೋಗ್ಯ. ಮಾತು, ನೆನಪು ಎಲ್ಲವೂ. ನಾವಿಬ್ರೂ ಸಿಹಿ ಪ್ರಿಯರು.

ಮಜ್ಜಿಗೆ ಎಷ್ಟೂ ಕುಡಿಯುವ ನಾನು ನೀರು ಕುಡಿಯುವುದು ರಾತ್ರಿ ಎದ್ದಾಗಲೇಲ್ಲ ಒಂದೊಂದು ಗುಟುಕು ಮಾತ್ರ. ನಮ್ಮಮ್ಮನ ಮಾವನಿಗೆ ನೂರು ತುಂಬಿತು ಅವರು ನೀರು ಕುಡಿಯುವುದೇ ಇಲ್ಲ.  ಸಕ್ಕರೆ, ಬಿ.ಪಿ.ಯಾವ ಖಾಯಿಲೆಯೂ ಇಲ್ಲ. ಆರೋಗ್ಯವಾಗಿದ್ದಾರೆ.
ನನ್ನ ಸೋದರತ್ತೆ, ದೊಡ್ಡಮ್ಮ, ಚಿಕ್ಕಮ್ಮ, ಅಮ್ಮಂದಿರೆಲ್ಲ ಸೇರಿ ನನಗೆ ಕಡೆವ ಕಲ್ಲಿನಲ್ಲಿ ಬಾಣಂತಿ ಮದ್ದಿಗಾಗಿ ಅರೆಯುವಾಗ, ಎಷ್ಟು ಕೆಲಸವಪ್ಪಾ ಎಂದು ನೋಡಿಯೇ ಸಾಕಾಗುತ್ತಿತ್ತು

“ಅಮ್ಮ ಊಟಕ್ಕೆ ಎದ್ದಳು ಅಂತ ಅವನಿಗೆ ಗೊತ್ತಾಯ್ತು” ಅಂತ ನಗುತ್ತಿದ್ದರು, ಮನೆಯ ಹಿರಿಯರು, ಅದೇ ಮುಹೂರ್ತವೆಂದು ಮಗು ಎದ್ದು ಅಳತೊಡಗುವಾಗ. ಮಗುವಿಗೆ ಲೋಭಾನ ಹಿಡಿವ ಪರಿಮಳದಷ್ಟು ಆಪ್ಯಾಯಮಾನವಾದುದು ಬೇರೇನೂ ಇರಲಿಲ್ಲ. ಅಜ್ಜನ ಬಿಳಿ ವೇಷ್ಟಿ ಬಟ್ಟೆಯಲ್ಲಿ ಸುತ್ತಿ, ಬಿಳಿಮುಂಡಾಸು ಬಿಗಿದು ಮಲಗಿಸಿದ ಮಗು ಎಷ್ಟು  ಉದ್ದ ಬೆಳೆದನೆಂದು ನೋಡಲು, ಅವನ  ಮಾವ-  ನನ್ನ ತಮ್ಮ ಮುರಲಿ  ನನ್ನ ಬಿಳಿಯ ಚೆಲ್ವ ಕೃಷ್ಣನ ಮೂರ್ತಿಯನ್ನು ತಂದು ಪಕ್ಕದಲ್ಲಿ ಮಲಗಿಸಿ  ಅಳೆಯುತ್ತಿದ್ದ.
ಮುಸ್ಸಂಜೆಯಲ್ಲಿ ಕೆಲವೊಮ್ಮೆ ವಿನಾಕಾರಣ ಮಗು ಅತ್ತಾಗ ಹಿರಿಯರ ಗಡಿಬಿಡಿ , ಧಾವಂತ  – ದೃಷ್ಟಿ ನಿವಾಳಿಸುವುದು , ಚಿನ್ನದ ಉಡಿದಾರದ  ಒಳಗೆ ಇರುವೆಯೇನಾದರೂ ಹೋಗಿದೆಯೇನೋ ಎಂದು ತಡಕಾಡುವುದು , ತೊಡೆ ಸಂದಿಯಲ್ಲಿ  ಇದೆಯೇ   ಎಂದು  ನೋಡುವುದು !
ಮಗುವಿನ ಕಣ್ರೆಪ್ಪೆಯಲ್ಲಿ ಕನಸು ಸಂಚರಿಸುವ ಆ ನೋಟದ ಬಗ್ಗೆ ಬರೆದಿರುವಿರಿ. ನನಗು ಅದರಷ್ಟು ಚಂದ ಬೇರಿಲ್ಲ. i.
ಮಗುವನ್ನು ನಾನು ದಿಟ್ಟಿಸಿ ನೋಡುತ್ತಿದ್ದರೆ, ಹಾಗೆ ನೋಡಬಾರದು, ದೃಷ್ಟಿ ಆಗುತ್ತದೆ ಎಂದು ಹಿರಿಯರು ಹೇಳಿದರೆ, ಹೆತ್ತಮ್ಮನ  ದೃಷ್ಟಿ ತಗಲೀತು  ಎಂಬ ಮಾತನ್ನು ಒಪ್ಪಲು ನಾನೆಂದೂ ಸಿದ್ಧಳಿರಲಿಲ್ಲ.

ಮೊದಲ ಬಸಿರಿನಲ್ಲೇ ಹೆಣ್ಣು ಮಗುವನ್ನು ಬಯಸಿದ ನನಗೆ ಆದದ್ದು ಗಂಡು. ಏಳು ವರ್ಷಗಳ ಬಳಿಕ ಬಂದ ಸಿ.ಕೆ.ನಾಗರಾಜಯ್ಯನವರ ಕೃತಿ ‘ಪಟ್ಟಮಹಾದೇವಿ ಶಾಂತಲಾದೇವಿ’  ಹೆಣ್ಣುಮಗುವಿಗಾಗಿ ಪುನಃ ಹಾರೈಸುವಂತೆ ಮಾಡಿದರೂ ಬದಲಿಗೆ ಬಂದವನು ಹರ್ಷವರ್ಧನ.. .

ಮೊದಲ ಬಸಿರಿನಲ್ಲೇ ಹೆಣ್ಣು ಮಗುವನ್ನು ಬಯಸಿದ ನನಗೆ ಎರಡೂ ಹೆಣ್ಣಾಗದ ನಿರಾಸೆ.
ದಿನವಿಡೀ ನೋವು ತಡೆದು ಮನೆಯಲ್ಲೇ ಉಳಿದು ಸಂಜೆ ಹೋದರೂ, ಮಧ್ಯರಾತ್ರಿಗೆ ಜನಿಸಿ ಬಂದ ಮಗು, ತಲೆ, ಕುತ್ತಿಗೆ ಹೊರಬಂದು ಅಲ್ಲೇ  ಸಿಕ್ಕಿಕೊಂಡಿತ್ತು.  ಮುಂದೆ ಪುಶ್ ಮಾಡುವ ಶಕ್ತಿ ನನ್ನಲ್ಲಿ ಉಳಿದಿರಲಿಲ್ಲ. ಡಾಕ್ಟರ್ ಗೆ ಡಿಸ್ಟ್ರೆಸ್ ಕರೆ ಹೋಗಿ, ಮತ್ತೆ ಕಟ್ ಮಾಡಿ ದಾರಿ ಮಾಡಬೇಕಾಯ್ತು. ಸ್ಟಿಚ್ ನೋವು ಎಂದು ಹೇಳಿಕೊಂಡರೆ ಡಾಕ್ಟರ್ ಖುಶಿಯಿಂದ ಸ್ಟಿಚ್ ಬಾತ್ ಕೊಡಿ ಎಂದು ಆದೇಶಿಸಿದರು!  ಅಬ್ಬಬ್ಬಾ! ಆ ಬಿಸಿನೀರಲ್ಲಿ ಕುಳಿತುಕೊಳ್ಳುವ ಕಷ್ಟ! ಯಾಕಾದರೂ ಹೇಳಿದೆನೋ ಎಂಬ ಪರಿತಾಪ!
ಡಾ. ಸಲ್ದಾನಾ ನರ್ಸಿಂಗ್ ಹೋಮ್ ಹೆಸರು “ಗ್ಲೆನ್  ವ್ಯೂ” ಅಚ್ಚುಕಟ್ಟಾದ ಸುಂದರ ಮನೆ. ವಿಶಾಲ ಕೋಣೆಗಳು. ಹತ್ತುದಿನ ಹಾಸಿಗೆಯಲ್ಲೇ ಮಲಗಿ ರಾಜಾತಿಥ್ಯ! ಕಾಫಿ, ತಿಂಡಿ, ಊಟ ಎಲ್ಲವು ಡಾಕ್ಟರ್ ಮನೆಯಿಂದ. ಸವಿಯಾದ ಬಿಸಿಯಡುಗೆಯನ್ನು ಪ್ರೀತಿಯಿಂದ ಬಡಿಸುವ ಆಯಾಗಳು , ಮಂಗಳೂರು ಲೈಟ್ ಹೌಸ್ ಹಿಲ್ ಕೆಳಗಿನ  ರಸ್ತೆಯಲ್ಲಿ ವಿಶಾಲ ಮರಗಳಿಂದಾವರಿತ, ಸೊಗಸಾದ ಹೂತೋಟವಿರುವ ಮನೆ. ಕಾಫಿ, ಹಾಲಿನಂತೆ ಬಾರ್ಲಿ ನೀರು, ಪುಡ್ಡಿಂಗ್ ಗಳೂ  ನಿತ್ಯದೂಟ .
ಡಾಕ್ಟರ್ ಸಲ್ದಾನಾ ತೀರಿಕೊಂಡಿದ್ದಾರೆ. ನರ್ಸಿಂಗ್ ಹೋಮ್ ಕೆಡವಲ್ಪಟ್ಟಿದೆ..  ಮನೆ ಮತ್ತು ಆ ಅಗಾಧ ಮಾವಿನ ಮರಗಳು ಮಾತ್ರ ಉಳಿದುಕೊಂಡಿವೆ.
ಪುಸ್ತಕದ ಬೆಸ್ಟ್ ವಾಕ್ಯ – ತಮ್ಮ ಮೊಮ್ಮಗುವನ್ನು ಎತ್ತಿಕೊಳ್ಳುವ ಅಪ್ಪ ಅಮ್ಮನ ಕಣ್ಣಿನ ಆಳವನ್ನು ನಿರುಕಿಸುವ ಅದೃಷ್ಟ ಜಗತ್ತಿನ ಎಲ್ಲ ಹೆಣ್ಣು ಮಕ್ಕಳಿಗೂ ಒಲಿಯ ಬೇಕು. ನಾನು ಫೋರ್ಸೆಪ್ಸ್ ನ ಅರಿವಳಿಕೆಯಿಂದ ಮರಳಿ ಪ್ರಜ್ಞೆಗೆ ಬಂದಾಗ ನನ್ನ ತಂದೆಯ ಕಣ್ಣಲ್ಲೂ ನೀರಿತ್ತು!. ಇದು ನನ್ನ ಬಾಳಿನ ಅಮೂಲ್ಯ ಕ್ಷಣ!

ಮಗುವನ್ನು ತೊಟ್ಟಿಲಲ್ಲಿ ತೂಗುತ್ತಾ ಹಾಡುವುದು ನನಗೆ ತುಂಬ ಇಷ್ಟ. ಮಂಗಳೂರಲ್ಲಿ ಡಾ.ಶಾಸ್ತ್ರಿ ತೈಲ, ಮಾತ್ರೆ, ಮದ್ದು, ಅರಿಷ್ಟ, ಕ್ಷೀರಬಲ , ಡಾ.ಮಥಾಯಸ್ ಮಕ್ಕಳ ತೈಲ ಎಲ್ಲ ಸಿಗುತ್ತಿತ್ತು.  ನಮ್ಮಜ್ಜಿ ಕೇಪಳ ಹೂವಿನ ಎಣ್ಣೆ ಕಾಸುತ್ತಿದ್ದರು.
ಶ್ರೀಕಲಾ, ಸಾರ್ಥಕ, ಸಂಪನ್ನ ಇಬ್ಬರಿಗೂ ನನ್ನ ಪ್ರೀತಿ.

ನನ್ನ “ಗಾನ್ ವಿಲ್ ದ ವಿಂಡ್” ನಲ್ಲಿ ಮಗು ಬಾನಿ ಹುಟ್ಟಿದಾಗ ರೆಟ್ ಹೇಳುವ ಮಾತು – ”
Tha happiest days are the days when babies come!”
ಅಲ್ವೇ, ಶ್ರೀಕಲಾ?

ಪ್ರೀತಿಯಿಂದ,
ಶ್ಯಾಮಲಾ

ಪುಸ್ತಕ ಕೊಳ್ಳಲು-

ಆನ್ ಲೈನ್ ಖರೀದಿಯ ಲಿಂಕ್-
https://www.bahuroopi.in/Baalanti-Purana-p135791872

https://www.amazon.in/…/pro…/8193853377/ref=cx_skuctr_share…

ಅಂಕಿತ, ನವಕರ್ನಾಟಕ, ಆಕೃತಿ, ಐ ಬಿ ಎಚ್, ಸ್ನೇಹ ಪ್ರಕಾಶನ ಸೇರಿದಂತೆ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯ.
#ನನ್ನಮೊದಲಪುಸ್ತಕ
#ಬಾಳಂತಿಪುರಾಣ

www.bahuroopi.in

‍ಲೇಖಕರು avadhi

April 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shreekala

    ಶ್ಯಾಮಲಾ ಮಾಧವ್ ಅವರೇ,
    ಇಷ್ಟು ಸವಿಸ್ತಾರವಾಗಿ ಬರೆದ ನಿಮ್ಮ ಪ್ರೀತಿಯ ಕಂಡು ಬೆರಗಾಗಿದ್ದೇನೆ. ಧನ್ಯವಾದ ಇಂತಹ ಪುಸ್ತಕ ಪ್ರೀತಿಗೆ.
    ಹೌದು… ನೀವು ಹೇಳಿದ ಸಲ್ಡಾನಾರಂತಹ ಡಾಕ್ಟರ್ ಈಗ ವಿರಳಾತಿ ವಿರಳ.
    –ಸಾರ್ಥಕ ಆಯ್ದು ತದ ಬಿಳಿ ಹೂಗಳು ರಂಜೆಯಲ್ಲ. ಅದು ಯಾವುದೆಂದು ನನಗೂ ಗೊತ್ತಿಲ್ಲ. ಹಾಗಾಗಿ ಬಿಳಿಹೂಗಳು ಎಂದಷ್ಟೇ ಪುಸ್ತಕದಲ್ಲಿ ಹೇಳಿದ್ದೇನೆ.
    –ದುಂಡು ಮಲ್ಲಿಗೆ ಸೊಪ್ಪಿನಿಂದಲೇ ಮಾಡುವಂಥದ್ದು. ನಾನು ಅಜ್ಜಿಯ ಬಳಿ ಕೇಳಿ ಅದನ್ನು ಮಾಡುವ ವಿಧಾನ ಬರೆದಿಟ್ಡಿದ್ದೇನೆ. ಸದ್ಯದಲ್ಲೇ ಫೇಸ್ ಬುಕ್ನಲ್ಲಿ ಶೇರ್ ಮಾಡುವೆ. ನಿಮ್ಮಂತೆಯೇ ಮಾಡುವ ವಿಧಾನ ತಿಳಿಯಬಯಸಿದ ಇತರರಿಗೂ ಸಹಾಯವಾಗುತ್ತದೆ.
    –ಮಿಟ್ಲೆಸೊಪ್ಪು, ಸೋರ್ಲೆ ಕುಡಿಗೆ ಬೇರೆ ಹೆಸರು ತಿಳಿದಿಲ್ಲ. ಗೊತ್ತಾದರೆ ತಿಳಿಸುವೆ. ನನ್ನ ಅಜ್ಜಿ, ಅತ್ತೆಯರಿಗೆಲ್ಲ ಇದು ತುಂಬಾ ಚೆನ್ನಾಗಿ ಪರಿಚಯವಿರುವ ಎಲೆಗಳು. ಮಲೆನಾಡಿನ ಮನೆಗಳಲ್ಲಿ ಇವುಗಳ ತಂಬಳಿ ಮಾಡುವುದು ಸರ್ವೇ ಸಾಮಾನ್ಯ. ಅಲ್ಲಿಗೆ ಹೋದಾಗ ಗಿಡದ ಫೋಟೊ ಕ್ಲಿಕ್ಕಿಸಿ ನಿಮಗೆ ಕಳಿಸುವೆ.
    –ಮೆಣಸನ್ನು ಸಾಮಾನ್ಯ ರಾತ್ರಿ 11-12ರ ಹೊತ್ತಿಗೆ ಕೊಡಲಾಗುತ್ತದೆ. ಅದರ ಮರುದಿನದ ಆಹಾರ ವಿಧಾನ ತಿಳಿಸಿದ್ದೇನೆ. ಮರುದಿನ ರಾತ್ರಿಗೆ ಆಹಾರ ಕ್ರಮ ನಾರ್ಮಲ್ ವಿಧಾನಕ್ಕೆ ಬಂದಿರುತ್ತದೆ.

    ಪ್ರತಿಕ್ರಿಯೆ
  2. Lalitha Siddabasavaiah

    ನನಗೆ ಈಗ ಈ‌ “ಬಾಳಂತಿ” ಓದಲೇಬೇಕೆನ್ನಿಸಿದೆ. ಮೊದಲು
    ” ಅಯ್ಯೋ ನಾವು ಕೇಳದ ಪುರಾಣವಾ , ಅನುಭವಿಸಿದ್ದೆ ಸಾಲದೋ ” ಎಂದುಕೊಂಡಿದ್ದೆ. ಈ ಶ್ಯಾಮಲಾ ಬರಹ, ಇಲ್ಲಿಲ್ಲ ಇದನ್ನೊಂದು ಸಲ‌ ಓದಲೇ ಬೇಕೆನಿಸುವಂತೆ ಮಾಡಿದೆ. ಧನ್ಯವಾದಗಳು ಶ್ಯಾಮಲಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: