ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಹದಿನಾರರ ಅಂಕಿಗಳು..

ಮೇಘ ಶ್ರೀ

ಲೆಕ್ಕದೊಳಗಿನ ರಿಂಗಣಕ್ಕೆ ಬಿದ್ದ,
ಹದಿನಾರರ ಅಂಕಿ ಗೊಂದಲಕ್ಕೆ ಬಿದ್ದಂತಿದೆ,
ರಮಿಸಿ ಆಡಿಸಿದ ಒಂದರಿಂದ ಹನ್ನೆರಡರ,
ಮಗ್ಗಿಗಳು ಇಂದೇಕೋ ಸಪ್ಪೆಯೆನಿಸಿವೆ,

ಹನ್ನೆರಡು ಹದಿನಾಲ್ಕುಗಳು
ಹುಡದಿಯಾಡುವ ಬೊಗಸೆಗಳಲಿ
ನವನೀತ ಕನಸುಗಳ ಜೋಡಿಸಿ
ನೋಡಿದಾಗ ಜಗವೆಲ್ಲ ಹೊಸಚಿಗುರಿನ
ಹೂನಗೆಯಲಿ ನಿಂತಂತಾಗಿದೆ.

ಗುಣಿಸಿದ, ಗಣಿತಕ್ಕೆ ಮುಗುಳು ಬಿರಿದ
ಮುಂಗುರುಳಿನದೇ ಚಿಂತೆ, ಹದಿನೈದು ಮೆಟ್ಟಲ್ಹತ್ತುವಾಗ
ತಾಳೆಯಾಗದ ಅಧರಗಳ ಕಂಪನ ಮತ್ತು ನಯನಗಳಾಟ,
ಕುಡಿಯಂಚಿನಲ್ಲಿ ಕೊಂಕು ನೋಟಕ್ಕೆ ಭಾಗಾಕಾರವಾಗುತ್ತಿದೆ
,
ವಕ್ರನೋಟದಲ್ಲಿ ಮೈಮರೆತು ಬಾಗಿದ ಕುಡಿಹುಬ್ಬು,
ಭಾಗಿಸಿ ಉಳಿಸಿದ ಶೇಷವೇನು ?

ಕೂಡಿಸುವ ಧಾವಂತದಲಿ
ಕಳೆದವೇನೋ ಆ ಹದಿನಾಲ್ಕು ಹದಿನೈದು
ಈಗ ಹಳೆ ಪೊರೆಯ ಕಳಚಿ ಕಾಲ್ಬೆರಳಗಳಲಿ ಅಧ್ಯಯನ
ನಡೆಸಿ ಏನೋ ಕೂಡಿಸುವ ಹಂಬಲ ಹದಿಮೂರಕ್ಕೆ

ಉತ್ತರವೇ ಸಿಗದ ಪ್ರಶ್ನೆಗಳ ಒಟ್ಟಾಗಿ ಕೂಡಿಸಿದರೂ  ,
ಮಿಂಚಂತೆ ಮಾಯವಾಗುತ್ತಿದೆ
ಸಮಸಂಖ್ಯೆಗಳೊಂದಿಗೆ. ಪೈಪೋಟಿಗೆ ಬಿದ್ದ,
ಬೆಸಸಂಖ್ಯೆಗಳು ಬೆಚ್ಚಿಬಿದ್ದಿವೆ.
ಅವು ವಿಷಮಗಳಂತೆ.

ಮಾರ್ಜಾಲದ, ಭಾಗಲಬ್ಧಕ್ಕೆ ಪೂರ್ಣವಾಗದೆ
ಹೊಸ ನಾಚಿಕೆ ಆ ಹೆಬ್ಬೆರಳಿಗೆ,
ಅಡ್ಡಗೆರೆ ಗೀಚಿದರೆ ಕೂಡಿಸಿ ಕಳೆದು ಭಾಗಿಸಿದರೂ,
ಅಗಣಿತ ಹದಿನಾರರ ಅಂಕಿ ಕನ್ನಡಿಯೊಳಗಿನ,
ಶೂನ್ಯಕ್ಕಾಗಿ ಎಡತಾಗುತ್ತಲೇ ಮತ್ತೆಯೂ ಕನಸುಗಳ
ಬಿತ್ತುತ್ತಿವೆ,ಬೀಜ ಗಣಿತದ ಹೊಲದಲ್ಲಿ
ರೇಖಾ ಗಣಿತವೀಗ ಹದಿನಾರು ಚದರಡಿ ಕ್ಷೇತ್ರಫಲಕ್ಕೆ
ಮೇಕಪ್ ನಲ್ಲಿ ಮೈ ಮರೆತಿದೆ

‍ಲೇಖಕರು avadhi

24 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading