ಅಂಬಾರಕೊಡ್ಲಿನ ಪರಿಮಳದಂಗಳ

ನೆನಪು ೪೯.
ಉತ್ತರಕನ್ನಡದಲ್ಲಿ ಸಾಹಿತ್ಯ – ಸಂಸ್ಕೃತಿಯ ಪರಿಮಳ ಸೂಸಿದ ಸ್ಥಳ ಇದು. ವಿಷ್ಣು ನಾಯ್ಕರು ಪ್ರಾರಂಭಿಸಿದ ರಾಘವೇಂದ್ರ ಪ್ರಕಾಶನ ಇಲ್ಲದಿದ್ದರೆ ಬಹುಶಃ ಉತ್ತರ ಕನ್ನಡದಲ್ಲಿ ಹಲವು ಜನ ಕವಿಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ಅವರ ಜೊತೆ ನಿಂತವರು ಅವರ ಸಹೋದರರಾದ ಅನಂತ ನಾಯ್ಕ, ರಾಮ ನಾಯ್ಕ, ಕವಿತಾ ಮೇಡಂ, ಸಾವಿತ್ರಿ ನಾಯ್ಕ, ವಿದ್ಯಾ ನಾಯ್ಕ…. ಹೀಗೆ ಇಡೀ ಕುಟಂಬವೇ ವಿಷ್ಣು ನಾಯ್ಕ ಅವರ ಮಾರ್ಗದರ್ಶನದಲ್ಲಿ ಆಂದೋಲನದ ಮಾದರಿಯಲ್ಲಿ ತೊಡಗಿಸಿಕೊಂಡಿತ್ತು. ಹಲವು ವಿಚಾರಗೋಷ್ಠಿ, ಕಮ್ಮಟ, ಬೀದಿ ನಾಟಕ, ಸ್ಪರ್ಧೆಗಳು, ಪತ್ರಿಕೆ, ವಸ್ತು ಸಂಗ್ರಹಾಲಯ….. ಹೀಗೆ ಹಲವು ಸಾಹಿತ್ಯದ ಮುಖಗಳು ಪರಿಮಳದಂಗಳಕ್ಕೆ.

ಹೇಳಿ ಕೇಳಿ ದಿನಕರ ದೇಸಾಯಿಯವರ ಗರಡಿಯಲ್ಲಿ ತೊಡಗಿಸಿಕೊಂಡ ಕೈಗಳಿವು. ಮೂಲತಃ ಶಿಕ್ಷಕರಾಗಿದ್ದರು. ಮೊದಲು ಅವರು ದಾಂಡೇಲಿಯಲ್ಲಿದ್ದರು. ಆಗ ಅಣ್ಣ ಮತ್ತು ಅವರ ಸಂಬಂಧಗಳು ಹೇಗಿದ್ದವೋ ಅದರ ಪರಿಚಯ ನನಗೆ ಇಲ್ಲ. ಅಂಕೋಲೆಗೆ ಅವರು ಬಂದ ಮೇಲೆ ನಾನು ಅವರನ್ನು ನೋಡಿದ್ದು. ಅಂಕೋಲೆಗೆ ಹೋದರೆ ಅಣ್ಣನ ಮೊದಲ ಭೇಟಿ ವಿಷ್ಣು ನಾಯ್ಕ ಅವರ ಮನೆಗೆ. ಒಮ್ಮೆ ಉಳಿಯುವುದಿದ್ದರೂ ಅದೊಂದೇ ಮನೆ. ಅದು ನಂತರ ನಮಗೂ ರೂಢಿ ಆಯ್ತು.

ವಿಷ್ಣು ನಾಯ್ಕ ಅವರೂ ಕೂಡ ನೇರವಾಗಿ ಬಂಡಾಯ ಸಾಹಿತ್ಯ ಸಂಘಟನೆಯ ಪದಾಧಿಕಾರಿಗಳಾಗಿರಲಿಲ್ಲ. ಆದರೆ ಅದರೆಲ್ಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮತ್ತು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಯಾಕೆ ವಿಷ್ಣು ನಾಯ್ಕ ಅವರು ಒಮ್ಮೆಯೂ ಉತ್ತರಕನ್ನಡ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿಲ್ಲ ಎಂದು ಅಣ್ಣನನ್ನು ಕೇಳಿದ ನೆನಪು. ಆದರೆ ಉತ್ತರ ಕೊಟ್ಟಿದ್ದ. ಅದು ಈಗ ಮಸುಕಾಗಿದೆ. ಪ್ರಯತ್ನಿಸಿದರೂ ಪೂರ್ಣ ಪಾಠ ನೆನಪಿಗೆ ಬರುತ್ತಿಲ್ಲ.

ಅಣ್ಣ ಅವರಿಗೆ ಪತ್ರ ಬರೆಯುವಾಗ ಪ್ರಿಯ ‘ವಿ.ನಾ.’ ಎಂದು ಬರೆಯುವ ರೂಢಿ. ಅವರು ಅಣ್ಣನಿಗೆ ‘ಆರ್.ವಿ.’ ಅಂತ ಮಾತ್ರ ಹೇಳುತ್ತಿದ್ದರು. ಹಾಗೆ ನೋಡಿದರೆ ಅವರ ಮನೆಯಲ್ಲಿ ನಡೆದ ಬಹುತೇಕ ಕಾರ್ಯಕ್ರಮಕ್ಕೆ ಅಣ್ಣನ ಉಪಸ್ಥಿತಿ ಇರಬೇಕಾಗಿತ್ತು. ಕಾರ್ಯಕ್ರಮದ ಮುಂದಿನ ಸಾಲಿನಲ್ಲಿ ವಿ.ಜೆ. ನಾಯಕ, ಶಾಂತಾರಾಮ ನಾಯಕ, ಅಮ್ಮೆಂಬಳ ಆನಂದ, ಆರ್.ಜಿ. ಗುಂದಿ, ಮೋಹನ ಹಬ್ಬು ಅಣ್ಣ… ಹೀಗೆ ಹಿರಿಯರ ಒಂದು ಸಾಲೇ ಇರುತ್ತಿತ್ತು. ಎಲ್ಲಾದರೂ ಅಪರೂಪಕ್ಕೆ ಅಣ್ಣನ ಉಪಸ್ಥಿತಿ ಇಲ್ಲದಿದ್ದರೆ ಕೆಲವರಾದರೂ ಪತ್ರ ಬರೆದು “ಯಾಕೆ ಅಲ್ಲಿ ನಿಮ್ಮನ್ನು ಕಾಣಲಿಲ್ಲವಲ್ಲ?” ಎಂದು ಸಖೇದಾಶ್ಚರ್ಯದಿಂದ ಕೇಳುತ್ತಿದ್ದರು.

ಇಬ್ಬರೂ ಸಂಘಟಕರಾಗಿದ್ದರಿಂದ ಆ ಸಂಬಂಧವೂ ಅವರಲ್ಲಿತ್ತು. ಯಾರೇ ಅತಿಥಿಗಳು ಕೈ ಕೊಟ್ಟರೂ ಇಬ್ಬರೂ ಸ್ಥಾನ ತುಂಬಲು ಸದಾ ಸಿದ್ಧ. ಅಲ್ಲಿ ಪ್ರತಿಷ್ಠೆಯ ಲವಲೇಶವೂ ಕಾಡುತ್ತಿರಲಿಲ್ಲ. ವಿ.ನಾ. ಅವರಿಗೆ ಮಾತ್ರವಲ್ಲ ಅವರ ಇಡೀ ಕುಟುಂಬಕ್ಕೆ ಅಣ್ಣನನ್ನು ಕಂಡರೆ ಪ್ರೀತಿ, ಅಭಿಮಾನ.

ಯಾವಾಗಲಾದರೂ ಅಣ್ಣನೆದುರು ವಿಷ್ಣು ನಾಯ್ಕರನ್ನು ನಾವು ದೂರುವುದಿತ್ತು. ಯಾವುದೋ ಕಾರ್ಯಕ್ರಮದಲ್ಲಿ ಅತಿಥಿಗಳು ಸರಿ ಇಲ್ಲ ಅಂತಲೋ ಅಥವಾ ಅವರು ಪ್ರಕಟಿಸಿದ ಯಾವುದೋ ಪುಸ್ತಕ ಸರಿ ಇಲ್ಲ ಅಂತಲೋ, ಅಥವಾ ಅವರು ಅಲ್ಲಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಬಾರದಾಗಿತ್ತು ಅಂತಲೋ ಅಣ್ಣನಲ್ಲಿ ದೂರಿದ್ದಿದೆ. ಆಗೆಲ್ಲಾ ಆತನಿಗೆ ಒಳಗೊಳಗೇ ಸಿಟ್ಟು ಬಂದುಬಿಡುತ್ತಿತ್ತು. ವಿಷಯ ಬದಲಿಸುತ್ತಿದ್ದ. ಅಥವಾ ವ್ಯಂಗ್ಯವಾಗಿ ನಕ್ಕು ಸುಮ್ಮನಾಗುತ್ತಿದ್ದ. ಅಣ್ಣ ಯಾರನ್ನೂ ದೂರುತ್ತಿರಲಿಲ್ಲ ಅನ್ನುವುದು ಸತ್ಯವಾದರೂ ವಿ.ನಾ. ಅವರ ಸಂದರ್ಭದಲ್ಲಿಯಂತೂ ಎಂದೂ ಅವರ ಟೀಕೆಯನ್ನು ಆತ ಸಹಿಸುತ್ತಿರಲಿಲ್ಲ. ನಾವು ಅಂತಲ್ಲ ಬೇರೆ ಯಾರೇ ಟೀಕಿಸಿದರೂ ಆತನಿಗೆ ಅದು ಸರಿ ಕಾಣದೇ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದ.

೧೯೭೭ ರಲ್ಲಿ ಅಣ್ಣನ ಮೊದಲ ಪುಸ್ತಕ ‘ಕಣ್ಣೆ ಕಟ್ಟೇ ಕಾಡೇ ಗೂಡೆ’ (ಕವನ ಸಂಕಲನ) ಪ್ರಕಟವಾಗಿದ್ದು ರಾಘವೇಂದ್ರ ಪ್ರಕಾಶನದ ಮೂಲಕವೇ. ಅಣ್ಣನದು ಅಂತಲ್ಲ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಲೇಖಕರ ಮೊದಲ ಪುಸ್ತಕ ಬಂದಿದ್ದು ಈ ಪ್ರಕಾಶನದ ಮೂಲಕವೇ. ಈಗೆಲ್ಲಾ ಒಂದಿಷ್ಟು ಸರ್ಕಾರದ ಖರೀದಿ, ಮಾರಾಟದ ವ್ಯವಸ್ಥೆ ಇದೆ. ಆದರೆ ಹಿಂದೆ ಆ ವ್ಯವಸ್ಥೆಯೇ ಇಲ್ಲದಿದ್ದಾಗ್ಯೂ ಅವರು ನೂರಾರು ಪುಸ್ತಕ ಮಾಡಿದ್ದು ನಾವು ನೆನೆಯಲೇಬೇಕು. ಅದರಲ್ಲೂ ಮಾರಾಟವೇ ಆಗದ ಕವನ ಸಂಕಲನವನ್ನೇ ಅವರು ಹೆಚ್ಚು ಪ್ರಕಟಿಸಿದ್ದರು.
ಅನಂತರ, ಅಣ್ಣನ ಮಕ್ಕಳ ನಾಟಕ ಸಂಕಲನ ‘ಬೆಳಕಿನ ಕಡೆಗೆ’ ಪಿ.ಎಚ್.ಡಿ. ಪ್ರಬಂಧ ಕನ್ನಡ ಕಾದಂಬರಿಗಳಲ್ಲಿ ‘ವರ್ಣ ಮತ್ತು ವರ್ಗ ಸಂಘರ್ಷ’ ವಿಮರ್ಶಾ ಸಂಕಲನ ‘ಸಮಾಜವಾದಿ ವಾಸ್ತವ’ ಪುಸ್ತಕವನ್ನು ಅವರೇ ಮುದ್ರಿಸಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ನಡೆಯುವಾಗಲೂ ಇಬ್ಬರ ಸಂಬಂಧ ಇನ್ನಷ್ಟು ವೃದ್ಧಿಸಿತು. ಇಬ್ಬರಲ್ಲೂ ಇರುವ ಒಂದು ವಿಶೇಷ ಗುಣ ಕೆಲಸದಲ್ಲಿಯ ಶಿಸ್ತು ಮತ್ತು ಹಿಡಿದ ಕೆಲಸ ಸರಿಯಾಗಿ ಮುಗಿಸುವ ಹಠ.

ವಿಷ್ಣು ನಾಯ್ಕ ಅವರು ಪ್ರಕಾಶನದ ಬೆಳ್ಳಿಹಬ್ಬವನ್ನು ವಿಶಿಷ್ಟವಾಗಿ ಮಾಡಿದರು. ಹಲವು ಪುಸ್ತಕಗಳು, ಸ್ಮರಣ ಸಂಚಿಕೆ, ಕಮ್ಮಟ, ಹೀಗೆ ವೈವಿಧ್ಯಪೂರ್ಣವಾಗಿತ್ತು. ಆ ಒಂದು ವರ್ಷದ ಕಾರ್ಯಕ್ರಮದಲ್ಲಿ ಅಣ್ಣ ಪೂರ್ತಿ ತೊಡಗಿಸಿಕೊಂಡಿದ್ದ. ವಿ.ನಾ. ಅವರು ಅವನ ಪುಸ್ತಕ ಮುದ್ರಿಸಿ ಕೈ ಸುಟ್ಟುಕೊಂಡಿರಬೇಕೆಂದು ಅವನಿಗೆ ಆಗಾಗ ಅನ್ನಿಸುತ್ತಿತ್ತು. ಹಾಗಾಗಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅವನ ಪಾಲಿನ ಒಂದಿಷ್ಟು ದೇಣಿಗೆಯನ್ನು ನೀಡಿದ. ಕೆಲವರಿಗೆ ಹೇಳಿ ಹಣ ನೀಡುವಂತೆ ಒತ್ತಾಯಿಸಿದ್ದನ್ನು ಕೇಳಿದ್ದೇನೆ.

ಆಮೇಲೆ ಕೆಲವರು ಕೊಡದಿದ್ದರೆ ಅಂತ ಹೇಳಿ “ನಾನು ಈಗ ಕೊಟ್ಟಿರಲಾ? ಆಮೇಲೆ ನೀವು ನನಗೆ ಕೊಡಿ” ಎಂದು ಒಬ್ಬಿಬ್ಬರ ಹಣವನ್ನು ಹಾಗೆ ವಸೂಲಿ ಮಾಡಿದ ನೆನಪು. ಅದಕ್ಕಿಂತ ಹೆಚ್ಚು ಮಾಡುತ್ತಿದ್ದನೇನೋ; ಆದರೆ ಅವನ ಕಿಸೆಯಲ್ಲಿ ಇದಕ್ಕಿಂತ ಹೆಚ್ಚು ದುಡ್ಡಿರುತ್ತಿದ್ದಿಲ್ಲ. ಈತ ಕೇಳಿದವರು “ಆಯ್ತು ಸರ್ ನೀವು ಕೊಟ್ಟಿರಿ. ಆಮೇಲೆ ಕೊಡುತ್ತೇನೆ” ಎಂದರೆ ಇವನ ಕತೆ ಮುಗಿಯುತ್ತಿತ್ತು. ಮತ್ತೆ ಬೇರೆಡೆ ಸಾಲ ಮಾಡಬೇಕಾಗಿತ್ತು; ಅದೊಂದು ಆಗಿಲ್ಲ.

ವಿ.ನಾ. ಅವರು ‘ಸಕಾಲಿಕ’ ವಾರ ಪತ್ರಿಕೆ ಮಾಡುವ ಒಂದು ತೀರ್ಮಾನ ಮಾಡಿದರು. ಆಗ ಈತನೇ ಪತ್ರಿಕೆ ಪ್ರಾರಂಭಿಸಿದಷ್ಟು ಖುಷಿಗೊಂಡಿದ್ದ. ಪ್ರತಿವಾರಕ್ಕೆ ಒಂದು ಬರಹದಂತೆ- ಮಧ್ಯೆ ಮಧ್ಯೆ ಬಿಡುವಿರುತ್ತಿತ್ತು- ಪ್ರಕಟ ಆಗುತ್ತಿತ್ತು. ಕಾದಂಬರಿಯ ಕೇಂದ್ರ ಪಾತ್ರಕ್ಕೆ ಅಣ್ಣನ ಚಹರೆ ಇರುವ ‘ಕಣಗಿಲ’ (ಜಿ.ಎಸ್. ಅವಧಾನಿ) ಈ ಪತ್ರಿಕೆಯಲ್ಲೇ ಪ್ರಕಟ ಆಗಿತ್ತು. ಈ ಪತ್ರಿಕೆಗೆ ಚಂದಾ ಮಾಡಿಸಲೂ ಆತ ತುಂಬಾ ಪ್ರಯತ್ನಿಸಿದ್ದ. ಈತ ಅದರಲ್ಲಿ ಬರೆದ ಒಂದು ಲೇಖನ ಹಿಂದೂ ಧರ್ಮದವರ ಭಾವನೆಯನ್ನು ಘಾಸಿ ಮಾಡಿದೆ ಅಂತ ಯಾರೋ ಒಬ್ಬ ಮೂರ್ಖ ಕೋರ್ಟ್ ಕೇಸ್ ಕೂಡ ಹಾಕಿದ್ದ. ಆದರೆ ಇವನಾಗಲಿ, ವಿ.ನಾ. ಅವರಾಗಲಿ ಅವರ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಆಗ ಇ-ಮೇಲ್ ಕೋರಿಯರ್ ಇರಲಿಲ್ಲ. ಆದರೆ ಈತ ಬರೆದ ಲೇಖನ ಸರಿಯಾದ ಸಮಯಕ್ಕೆ ತಲುಪುವಂತೆ ಪೋಸ್ಟ್ ಮಾಡುತ್ತಿದ್ದ. ಬರೆದದ್ದು ತೀರಾ ಗಲಿಬಿಲಿ ಆಗಿದ್ದರೆ ಪುನಃ ಬರೆದು ಕಳಿಸುವುದು ಅವನ ರೂಢಿ.
ಸಾಮಾನ್ಯವಾಗಿ ಸಕಾಲಿಕದಲ್ಲಿ ಆತ ಬರೆದ ಲೇಖನ ಓದಿದರೆ ಆ ಅವಧಿಯ ಮುಖ್ಯ, ಸಾಂಸ್ಕೃತಿಕ ಚರ್ಚೆಗಳೇನು ಎನ್ನುವುದು ಸ್ಪಷ್ಟಗೊಳ್ಳುತ್ತಿತ್ತು. ಮತ್ತು ಬಹುತೇಕ ಲೇಖನದಲ್ಲಿ ಆತ ಮಾಸ್ತರನೇ ಆಗಿರುತ್ತಿದ್ದ.
ಅಣ್ಣ ಜೋಯ್ಡಾದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾದಾಗ ವಿ.ನಾ. ತುಂಬಾ ಮುತುವರ್ಜಿಯಿಂದ ಓಡಾಡಿದರು. ಅಣ್ಣನ ಭಾಷಣವನ್ನು ಮುದ್ರಿಸುವ ಹೊಣೆ ಹೊತ್ತು ನಿರ್ವಹಿಸಿದರು. ಆರ್.ವಿ. ಜಿಲ್ಲಾ ಸಮ್ಮೇಳನದ ಅಧ್ಯಕ್ಷ ಆದ ಮೇಲೆ ನಾನು ಅಧ್ಯಕ್ಷನಾಗುವುದು ಎನ್ನುವ ಸಂದೇಶವನ್ನು ಅವರು ಜಿಲ್ಲಾ ಸಮಿತಿಗೆ ಕೊಟ್ಟಿದ್ದರು ಎಂದು ಕೇಳಿ ಬಲ್ಲೆ. ಅಣ್ಣ ಅಧ್ಯಕ್ಷನಾದ ಮುರುವರ್ಷವೇ ಭಟ್ಕಳದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ವಿ.ನಾ ಅವರು ಅಧ್ಯಕ್ಷರಾದರು.

ಆಗ ಅಣ್ಣ ತೀವ್ರ ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿದ್ದ. ವೈದ್ಯರೊಂದಿಗೆ ಹಠ ಹಿಡಿದು ಸಮ್ಮೇಳನದ ಮೊದಲ ದಿನವೇ ಭಟ್ಕಳ ಬಂದು ತಲುಪಿದ. ಸಮ್ಮೇಳನದ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಲು ಆತನಿಗೆ ವೇದಿಕೆ ಏರಲಾಗಲಿಲ್ಲ. ಯಾರೋ ಬಂದು- ಬಹುಶಃ ರೋಹಿದಾಸ ನಾಯಕರಿರಬೇಕು- ಧ್ವಜವನ್ನು ಇವನ ಕೈಯಿಂದ ತೆಗೆದುಕೊಂಡು ಹೋಗಿ ಸಮ್ಮೇಳನದ ಅಧ್ಯಕ್ಷರಾದ ವಿ.ನಾ. ಅವರಿಗೆ ಕೊಟ್ಟರು. ಹಿಂದಿನ ಸಮ್ಮೇಳನಾಧ್ಯಕ್ಷರ ಮಾತನ್ನು ಆಡಲಾಗಲಿಲ್ಲ. ಆದರೂ ಒಂದು ಪುಟ ಬರೆದು ತಂದಿದ್ದ. ಆತನ ಪರವಾಗಿ ಅದನ್ನು ಓದಲಾಯಿತು. ಅದರಲ್ಲಿ ಮತ್ತೆ ಜೋಯ್ಡಾದ ಅಭಿವೃದ್ಧಿಯ ಹೋರಾಟವನ್ನು ಸಾಹಿತ್ಯ ಪರಿಷತ್ತು ಹೊರಬೇಕು” ಎಂದೇ ಬರೆದಿದ್ದ.

ಅಣ್ಣನ ನಿಧನಾನಂತರ ‘ಸಹಯಾನ’ (ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಪ್ರಾರಂಭ ಆದ ಮೇಲೆ ಮೊದಲ ಸಮಿತಿಯ ಮಾಡಲು ಪರಿಮಳದಂಗಳದಲ್ಲೇ ಸೇರಲಾಗಿತ್ತು. ಅವರು ಪ್ರೀತಿಯಿಂದ ಸಹಯಾನದ ಕಾರ್ಯಧ್ಯಕ್ಷರಾಗಿರಲು ಸಮ್ಮತಿಸಿದರು. ಈಗಲೂ ಸಹಯಾನ ಒಂದು ಕುಟುಂಬವಾಗಿ, ಅವರು, ಶಾಂತಾರಾಮ ನಾಯಕರು ಕುಟುಂಬದ ಹಿರಿಯರಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಣ್ಣ ತೀರಿಕೊಂಡಾಗ ಅವರು ‘ಆರ್. ವಿ. ಭಂಡಾರಿಯವರ ಬದುಕಂತೆ ಬರಹ’ ಎನ್ನುವ ಲೇಖನ ಬರೆದರು. ಸಹಯಾನದ ಉದ್ಘಾಟನೆಯಲ್ಲಿ ಅವರು ಅಣ್ಣನ ಬಗ್ಗೆ ಬರೆದ ಒಂದು ಕವಿತೆ ಓದಿದರು. ಇಬ್ಬರ ಸಂಬಂಧದ ಭಾವನಾತ್ಮಕತೆಯನ್ನು ಈ ಕವಿತೆ ಇನ್ನಷ್ಟು ವಿಸ್ತರಿಸುತ್ತದೆ.

ಒಂದು ಕಾರ್ಯಕ್ರಮಕ್ಕೆ ಬಂದರೆ ಸದಾ ಮುಂದಿನ ಸಾಲಿನಲ್ಲಿ ಕುಳಿತು ಹೊಸ ಹುಡುಗರ ಮಾತು, ಕವಿತೆಯನ್ನು ಕೇಳಿ ಹೋಗುವ ಪರಂಪರೆಯ ಕೊಂಡಿಗಳಿವರು. ಹೊನ್ನಾವರದ ಎನ್.ಆರ್. ನಾಯಕ, ಅಂಕೋಲೆಯ ವಿ.ಜಿ. ನಾಯಕ, ಶಾಂತಾರಾಮ ನಾಯಕ, ಮೋಹನ ಹಬ್ಬು, ವಿಷ್ಣು ನಾಯ್ಕ, ಆರ್.ವಿ. ಭಂಡಾರಿ… ಹೀಗೆ ಈ ಪರಂಪರೆ ಈಗ ಇಲ್ಲ. ಹಲವರು ಈಗ ಅವರ ಮಾತು ಇದ್ದಾಗ ಇರ‍್ತಾರೆ. ಅವರದು ಮುಗಿದಾಗ ಎದ್ದೋಗ್ತಾರೆ. ಹಾಗಾಗಿ ಈಗ ನಾವೇ ಬೆಳೆಯಬೇಕು. ನಮ್ಮನ್ನು ಬೆಳೆಸುವವರ, ಸಣ್ಣ ಕೆಲಸ ಮಾಡಿದರೂ ಪ್ರೋತ್ಸಾಹಿಸುವ ಪರಂಪರೆ ಕ್ರಮೇಣ ಕ್ಷೀಣಿಸುತ್ತಿದೆ.

ಅಂಕೋಲೆಯಲ್ಲಿರುವ ಮೋಹನ ಹಬ್ಬು, ಆರ್.ಜಿ. ಗುಂದಿ, ಕೃಷ್ಣ ನಾಯಕ ಹಿಚ್ಕಡ….. ಹೀಗೆ ಹಲವರ ಆತ್ಮೀಯ ಸಂಬಂಧ ಅಣ್ಣನೊಂದಿಗಿತ್ತು. ಆರ್.ಜಿ. ಗುಂದಿಯವರ ಯಕ್ಷಗಾನ ಪಾತ್ರ ನೋಡಲು ಒಮ್ಮೆ ೬-೭ ಕಿ.ಮೀ. ನಡೆದು ಹೋಗಿದ್ದ ಅಣ್ಣ. ಆಗ ನಾನೂ ಇದ್ದೆ. ನಾವು ಹೋಗಿ ಮುಟ್ಟುವುದರೊಳಗೆ ಯಕ್ಷಗಾನ ಮುಗಿದು ಹೋಗಿತ್ತು. ಆರ್.ಜಿ. ಗುಂದಿಯವರ ‘ಅವಾರಿ’ ಬಂದಾಗ ಅಣ್ಣ ಅವರಿಗೆ ಉತ್ತರ ಕನ್ನಡದ ದೇವನೂರು ಎಂದೇ ಕರೆದಿದ್ದ.

ಆ ಕಾದಂಬರಿ ಇಟ್ಟುಕೊಂಡು ನಾಟಕಕ್ಕೆ ರೂಪಾಂತರಿಸಿದ್ದ. ಇತ್ತೀಚೆಗೆ ಅವರ ಹಸ್ತಪ್ರತಿಯನ್ನು ಮೋಹನ ಹಬ್ಬು ಅವರು ತಲುಪಿಸಿದ್ದಾರೆ. ಅಮೂಲ್ಯಪ್ರತಿಯನ್ನು ನೆನಪಿಸಿ ಕೊಟ್ಟಿದ್ದಕ್ಕೆ ಕೃತಜ್ಞತೆ. ಹಾಗಾಗಿ ಹೀಗೆ ಅಂಕೋಲೆಯವರು ಉತ್ತರ ಕನ್ನಡದ ಸಾಹಿತಿಗಳಲ್ಲಿ ಅವರು ಹೆಚ್ಚು ಗೌರವಿಸಿದ್ದು ಅಣ್ಣನನ್ನು. ಬಹುಶಃ ಕೃಷ್ಣ ನಾಯಕರ ಅವರ ಕವಿತೆಯ ಮೇಲೆ ಅಣ್ಣ ಬರೆದಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ಬಂಡಾಯ ಸಮ್ಮೇಳನ ಆದರೆ ಕವಿಗೋಷ್ಠಿಗೆ ಕೃಷ್ಣ ನಾಯಕರನ್ನು ಒಳಗೊಂಡಂತೆ ಹೊಸತಲೆಮಾರಿವರ ಹೆಸರನ್ನು ಸೂಚಿಸುತ್ತಿದ್ದ.

ಹೀಗೆ ಅಂಕೋಲೆಯ ತುಂಬಾ ಅಣ್ಣನ ಪ್ರೀತಿಯ ಹೆಜ್ಜೆಗಳಿವೆ. ನಿಲ್ಲುವ ಗುತ್ತುಗಳಿವೆ. ಆತನ ಜೀವನದ ಕೊನೆಯವರೆಗೂ ಆತನನ್ನು ಪ್ರೀತಿಸಿ ಗೌರವಿಸಿದ ಜೀವಿಗಳಿವೆ. ಈ ಜೀವಭಾವದ ಸಂಬಂಧಿ ಅಂಕೋಲೆ ಸಾವಕಾಶ ಬದಲಾಗುತ್ತಿದೆ.

‍ಲೇಖಕರು avadhi

June 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. prakash konapur

    ನಾವು ಅಂದರೆ ಪ್ರಗತಿಪರ ವಿದ್ಯಾರ್ಥಿ ಕೇಂದ್ರ (ಪಿ.ವಿ.ಕೆ )ವಿದ್ಯಾರ್ಥಿ ಸಂಘಟನೆಯಿಂದ 1989 ರಲ್ಲಿ ಹಮ್ಮಿಕೊಂಡಿದ್ದ ಹಳ್ಳಿಗೆ ಹೋಗೋಣ (ವಿಲೇಜ್ ಕ್ಯಾಂಪೇನ್ )ಕೈಗಾ ಅಣು ಸ್ಥಾವರ ವಿರೋಧಿಸಿ ಅಣು ವಿಕಿರಣದ ಅಪಾಯದ ಕುರಿತ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮದ ಸಂಧರ್ಭದಲ್ಲಿ ನಮ್ಮ ಇಡೀ ತಂಡ ಸುಮಾರು 50-60 ಕಾರ್ಯಕರ್ತರಿಗೆ ವಿಷ್ಣುನಾಯಕರವರು ಮನೆಗೆ ಊಟಕ್ಕೆ ಆಹ್ವಾನಿಸಿ ನಮಗೆಲ್ಲ ಪ್ರೀತಿ ಆದರಗಳಿಂದ ಉಣಬಡಿಸಿದ್ದರು ಆಗ ವಿಷ್ಣು ನಾಯ್ಕ ಅವರ ಮನೆಯಲ್ಲಿ ನಾನು ಊಟ ಮಾಡಿದ್ದೇನೆ. ಅವರು ನನಗೊಂದು ಕವನ ಸಂಕಲನ ಉಡುಗೊರೆಯಾಗಿ ಕೊಟ್ಟಿದ್ದರು
    ವಿಷ್ಣುನಾಯಕರು ಮತ್ತು ಆರ್ ವಿ ಯವರ ಸ್ನೇಹ, ಸಾಹಿತ್ಯಿಕ ಚಟುವಟಿಕೆ ಮತ್ತು ಅವರ ವ್ಯಕ್ತಿತ್ವ ಚೆನ್ನಾಗಿ ವಿವರಿಸಿದ್ದೀರೀ ಲೇಖನ ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: