ಆ ಸುದ್ದಿ ಬರೆದವರ ಬಗ್ಗೆ ಮಾತ್ರ ಕುತೂಹಲ ಉಳಿದುಕೊಂಡಿತು..

ನಾನೂ ಲೇಖಕನಾಗಿದ್ದು ಹೀಗೆ

ಚಿದಂಬರ ಬೈಕಂಪಾಡಿ

ನಾನು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡದ್ದು ೧೯೭೧-೭೨ರಲ್ಲಿ, ಆಗ ನಾನು ಬೈಕಂಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ. ಅದಕ್ಕೂ ಮೊದಲು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳನ್ನು ನೋಡಿದ್ದೆ ಹೊರತು ಓದುವ ಹವ್ಯಾಸ ಅಥವಾ ಓದುವ ಚಟ ಅಂಟಿಸಿಕೊಂಡಿರಲಿಲ್ಲ.

ಚಂದಮಾಮವನ್ನು ಓದುವ ಮೂಲಕ ಆಸಕ್ತಿ ಬೆಳೆಸಿಕೊಂಡೆ. ಅದರಲ್ಲಿ ಬರುತ್ತಿದ್ದ ಬೇತಾಳ ಕತೆಗಳು ನನ್ನನ್ನು ಓದುವಿಕೆಗೆ ಪ್ರೇರೇಪಿಸುತ್ತಿದ್ದವು ಮಾತ್ರವಲ್ಲ ಕೊನೆಯಲ್ಲಿ ಬೇತಾಳ ತ್ರಿವಿಕ್ರಮನ ಹೆಗಲಿನಿಂದ ಚೆಂಗನೆ ಹಾರಿ ಹೋಗುವ ಮೊದಲು ಕೆಲವು ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ಸರಿಯಾದ ಉತ್ತರ ಹೇಳದೇ ಹೋದರೆ ನಿನ್ನ ತಲೆ ಸಾವಿರ ಹೋಳುಗಳಾಗುತ್ತವೆ ಎನ್ನುವ ಸಾಲುಗಳು ಮುಂದೇನಾಗುವುದೋ ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲ ಮೂಡಿಸುತ್ತಿತ್ತು. ಇದೇ ಕುತೂಹಲ ಪ್ರತಿಯೊಂದು ಬೇತಾಳ ಕತೆಯಲ್ಲೂ ಇರುತ್ತಿದ್ದ ಕಾರಣ ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಂಡೆ.

ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಪುಟ್ಟ ಕತೆಗಳನ್ನು ಬರೆಯತೊಡಗಿದೆ. ಸಿನಿಮಾ ಹಾಡುಗಳ ರಾಗವನ್ನು ಆಲಿಸಿ ಪದ್ಯ ಬರೆಯುತ್ತಿದ್ದೆ. ಈ ಕಾರಣಕ್ಕೆ ನನ್ನನ್ನು ಕಂಡರೆ ಮೇಸ್ಟ್ರು, ಟೀಚರ್‌ಗಳಿಗೆ ಅಭಿಮಾನ, ಪ್ರೀತಿ. ಆಗ ಶಾಲೆಯಲ್ಲಿ ಕೈಬರಹದ ಮ್ಯಾಗಜಿನ್ ಪ್ರಕಟವಾಗುತ್ತಿತ್ತು. ಆದರಲ್ಲಿ ಬಹುಪಾಲು ನನ್ನ ಬರಹಗಳೇ ಆಗಿದ್ದವು. ಹೆಚ್ಚಿನವರು ನನ್ನಂತೆ ಬರೆಯಲು ಹಿಂಜರಿಯುತ್ತಿದ್ದರು, ಆದ್ದರಿಂದ ಇದ್ದವರ ಪೈಕಿ ನಾನೇ ಒಂಥರಾ ಹೀರೋ ಆಗಿದ್ದೆ.

ಏಳನೇ ತರಗತಿಯಲ್ಲಿ ದಿನಕ್ಕೊಬ್ಬರಂತೆ ಪತ್ರಿಕೆಯ ಮುಖ್ಯ ಸುದ್ದಿಯನ್ನು ಕರಿಹಲಗೆಯ ಮೇಲೆ ಬರೆಯುವುದು ಶಾಲೆಯಲ್ಲಿ ಕಡ್ಡಾಯವಾಗಿತ್ತು. ಈ ಕಾರಣಕ್ಕಾಗಿ ದಿನಪತ್ರಿಕೆ ಓದುವ ಅನಿವಾರ್ಯತೆ ಉಂಟಾಯಿತು. ಉದಯವಾಣಿ, ನವಭಾರತ, ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳು ಆಗಿನ ದಿನಗಳಲ್ಲಿ ಜನಪ್ರಿಯವಾಗಿದ್ದವು. ಇರುವ ಪತ್ರಿಕೆಗಳ ಪೈಕಿ ಉದಯವಾಣಿ ಹೆಚ್ಚು ಆಕರ್ಷಣೀಯವಾಗಿರುತ್ತಿದ್ದ ಕಾರಣ ಆ ಪತ್ರಿಕೆಯ ಸುದ್ದಿಯ ಶೀರ್ಷಿಕೆಗಳನ್ನು ದೊಡ್ಡ ಅಕ್ಷರಗಳಲ್ಲಿ ಕರಿಹಲಗೆಯ ಮೇಲೆ ಬರೆಯುತ್ತಿದ್ದೆವು.

ನನ್ನ ಕೈಬರಹ ಗುಂಡು ಗುಂಡಾಗಿದ್ದ ಕಾರಣ ಮೇಸ್ಟ್ರು, ಟೀಚರ್‌ಗಳು ನನ್ನಿಂದಲೇ ಹೆಚ್ಚಾಗಿ ಸುದ್ದಿ ಬರೆಸುತ್ತಿದ್ದರು. ಸುದ್ದಿ ಬರೆಯಬೇಕಾದ ಕಾರಣಕ್ಕೆ ಪತ್ರಿಕೆಯ ಎಲ್ಲಾ ಪುಟಗಳ ಮೇಲೆ ಕಣ್ಣಾಡಿಸಲೇ ಬೇಕಾಗುತ್ತಿತ್ತು. ಮುಂದೆ ಅದೇ ಪತ್ರಿಕೆಯನ್ನು ಗಂಭೀರವಾಗಿ ಓದುವ ಹವ್ಯಾಸಕ್ಕೆ ಕಾರಣವಾಯಿತು.

ನಾನು ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯುತ್ತಿದ್ದ ದಿನ. ಪರೀಕ್ಷೆ ಹಾಲ್‌ನಲ್ಲಿ ವಿದ್ಯಾರ್ಥಿಗಳು ನಕಲು ಮಾಡದಂತೆ ಶಿಕ್ಷಕರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಓದಿನಲ್ಲಿ ಮುಂಚೂಣಿಯಲ್ಲಿದ್ದ ಕಾರಣಕ್ಕೆ ನನಗೆ ನಕಲು ಮಾಡುವ ಅನಿವಾರ್ಯತೆ ಇರಲಿಲ್ಲ, ಹಾಗೆ ಮಾಡುವಂಥ ಧೈರ್ಯವೂ ನನಗಿರಲಿಲ್ಲ. ಪರೀಕ್ಷೆ ಬರೆಯುತ್ತಿದ್ದ ನನ್ನ ಬಳಿಗೆ ಬಂದ ಪಾರ್ವತಿ ಟೀಚರ್ ಕನ್ನಡಪ್ರಭ ಪತ್ರಿಕೆ ಹಿಡಿದುಕೊಂಡು ಬಂದವರೇ ‘ಚಿದಂಬರ ನೀನು ಪತ್ರಿಕೆಗೆ ಲೇಖನ ಬರೆದು ಕಳಿಸಿದ್ದಾ ?’ ಎಂದಾಗ ಕ್ಷಣಕ್ಕೆ ಬೆಚ್ಚಿ ಬಿದ್ದೆ.

ಯಾಕೆಂದರೆ ಪರೀಕ್ಷೆ ಹಾಲ್‌ನಲ್ಲಿದ್ದ ನನಗೆ ಲೇಖನ ಬರೆಯ ಬಾರದಿತ್ತೇನೋ ಎನ್ನುವ ಭಯ ಕಾಡತೊಡಗಿತು. ನಿಜ, ನಾನು ಪತ್ರಿಕೆಗೆ ಪುಟ್ಟ ಲೇಖನ ಬರೆದು ಕಳುಹಿಸಿದ್ದೆ. ಅದೇನೂ ಘನಂಧಾರಿ ಲೇಖನವಲ್ಲ. ನಾನು ಆಗಾಗ ಕತೆ, ಕವಿತೆ, ಲೇಖನ ಬರೆಯುತ್ತೇನೆ. ಆದರೆ ಅವುಗಳನ್ನು ಪ್ರಕಟಿಸಲು ಯಾರಿಗೆಲ್ಲ ಕಳುಹಿಸಬೇಕು, ಅದಕ್ಕೆ ಕಾನೂನಿನ ತೊಡಕುಗಳಿವೆಯೇ, ಮುಂದೆ ಏನಾದರೂ ಸಮಸ್ಯೆ ಬರಬಹುದೇ ? ಎನ್ನುವ ಸಂದೇಹಗಳಿಗೆ ಪರಿಹಾರ ಕೇಳಿದ್ದೆ.

ನೀವು ಮತ್ತು ಕಾನೂನು ಎನ್ನುವ ಅಂಕಣವಿರಬೇಕು ಎನ್ನುವ ನೆನಪು. ಟೀಚರ್ ಪ್ರಶ್ನೆಗೆ ಹೌದು ಎಂದಷ್ಟೇ ಎದ್ದು ನಿಂತು ಉತ್ತರಿಸಿ ಅವರ ಮುಂದಿನ ಪ್ರಶ್ನೆ ಏನಿರಬಹುದೆಂದು ಭಯದಿಂದಿದ್ದೆ. ಅವರು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಸಂದೇಹದ ಪತ್ರವನ್ನು ತೋರಿಸಿ ಬೆನ್ನು ತಟ್ಟಿ ವೆರಿಗುಡ್, ಬರೆಯುತ್ತಿರು ಎಂದವರೇ ಅಲ್ಲಿಂದ ನಿರ್ಗಮಿಸಿದರು. ಆ ಕ್ಷಣವಂತೂ ಈಗಲೂ ನನ್ನ ಪಾಲಿಗೆ ಅವಿಸ್ಮರಣೀಯ. ಕನ್ನಡಪ್ರಭದಲ್ಲಿ ನನ್ನ ಹೆಸರಲ್ಲಿ ಪ್ರಕಟವಾದ ಮೊದಲ ಬರಹ ಅದಾಗಿತ್ತು. ಅದೇ ಗುಂಗಿನಲ್ಲಿ ಬೇಗ ಬೇಗ ಉತ್ತರ ಬರೆದು ಮತ್ತೆ ಟೀಚರ್ ಕೊಠಡಿಗೆ ಹೋಗಿ ಆ ಪತ್ರಿಕೆಯನ್ನು ಮತ್ತೆ ಮತ್ತೆ ಓದಿ ಖುಷಿಪಟ್ಟೆ. ಅಂಥ ಖುಷಿ ನನ್ನ ಜೀವಮಾನದಲ್ಲಿ ಎಂದೂ ಆಗಿಲ್ಲ.

ನನಗೆ ಪತ್ರಿಕೆಗೆ ಹೇಗೆ ಬರೆಯಬೇಕು ಎನ್ನುವ ಯಾವ ಮಾಹಿತಿಯೂ ಇರಲಿಲ್ಲ. ಪತ್ರಿಕೆಯಲ್ಲಿ ನಮ್ಮ ಬರಹವನ್ನು ಹೇಗೆ ಮುದ್ರಿಸುತ್ತಾರೆ ಎನ್ನುವುದಾಗಲೀ, ಪತ್ರಿಕೆಯಲ್ಲಿ ಕೆಲಸ ಮಾಡುವವರ ಬಗ್ಗೆಯಾಗಲೀ ಯಾವುದೇ ಮಾಹಿತಿ ಇರದವನು. ಆ ಬರಹವನ್ನು ಬರೆದು ಅಂಚೆ ಮೂಲಕ ಕಳುಹಿಸಿ ಅದೆಷ್ಟೋ ವಾರಗಳೇ ಕಳೆದುಹೋಗಿದ್ದವು. ನನ್ನ ಶಾಲೆಯ ಪಕ್ಕದ ಕೊಠಡಿಯೇ ಅಂಚೆ ಕಚೇರಿಯಿದ್ದ ಕಾರಣ ಅಂಚೆ ಮೂಲಕ ಕಳುಹಿಸಬೇಕೆನ್ನುವುದು ಗೊತ್ತಿತ್ತು ಹೊರತು ಬೇರೆ ಯಾವುದೇ ತಿಳುವಳಿಕೆ ಇರಲಿಲ್ಲ. ಈ ಬರಹ ಪ್ರಕಟವಾದ ಮೇಲೆ ನನಗೆ ಬರೆಯುವ ಉತ್ಸಾಹ ಹೆಚ್ಚಾಯಿತು.

ಒಗಟುಗಳು, ಗಾದೆ, ಮಕ್ಕಳಿಗಾಗಿ ಪುಟಾಣಿ ಕತೆಗಳನ್ನು ಬರೆಯುವುದಕ್ಕೆ ತೊಡಗಿದೆ. ಆಗ ಉದಯವಾಣಿಯಲ್ಲಿ ಭಾನುವಾರದ ಮ್ಯಾಗಜಿನ್ ಬರುತ್ತಿತ್ತು. ಅದಕ್ಕೆ ಮಕ್ಕಳ ಪುಟಕ್ಕೆ ನನ್ನ ಬರಹಗಳನ್ನು ಕಳುಹಿಸತೊಡಗಿದೆ. ಅವು ಪ್ರಕಟಣೆಯಾಗುತ್ತಿದ್ದವು. ಆ ದಿನ ಪತ್ರಿಕೆಯನ್ನು ಹಿಡಿದುಕೊಂಡು ಊರಲ್ಲೆಲ್ಲಾ ಸುತ್ತಾಡಿ ಎಲ್ಲರಿಗೂ ತೋರಿಸಿ ಖುಷಿಪಡುತ್ತಿದ್ದೆ. ಹೈಸ್ಕೂಲ್ ಸೇರಿದ ಮೇಲೆ ವೋತಪ್ರೋತವಾಗಿ ಬರೆಯತೊಡಗಿದೆ. ಪ್ರತೀ ಭಾನುವಾರ ಉದಯವಾಣಿ ಮ್ಯಾಗಜಿನ್‌ನಲ್ಲಿ ನನ್ನ ಹೆಸರು ಖಾಯಂ ಎನ್ನುವಂತಾಯಿತು. ಆಗ ಆ ಪುಟವನ್ನು ಯಾರು ನೋಡುತ್ತಿದ್ದರೋ, ಯಾರು ಪ್ರಕಟಿಸುತ್ತಿದ್ದರೋ ಒಂದೂ ತಿಳಿಯದು. ಭಾನುವಾರ ಬೆಳ್ಳಂಬೆಳಗ್ಗೆ ಬೈಕಂಪಾಡಿ ಚೆಕ್ ಪೋಸ್ಟ್ ತನಕ ನಡೆದುಕೊಂಡು ಹೋಗಿ ಉದಯವಾಣಿ ಪತ್ರಿಕೆ ತೆಗೆದುಕೊಂಡು ನನ್ನ ಬರಹ ಬಂದಿರುವುದನ್ನು ಖಾತ್ರಿ ಪಡಿಸಿಕೊಂಡು ಮನೆಗೆ ಬರುತ್ತಿದ್ದೆ. ಎಂಟನೇ ತರಗತಿಯಲ್ಲಿದ್ದರೂ ಉದಯವಾಣಿಯಲ್ಲಿ ಬರಹ ಬರೆಯುವವನಾಗಿ ಆಗಲೇ ಊರಲ್ಲಿ ಫೇಮಸ್ ಆಗಿದ್ದೆ.

ಹೈಸ್ಕೂಲ್ ದಿನಗಳಲ್ಲಿ ದಿನಪತ್ರಿಕೆ, ನಿಯತಕಾಲಿಕಗಳನ್ನು ಓದುವ ಹವ್ಯಾಸ ಹೆಚ್ಚಾಯಿತು. ೧೯೭೫ರಲ್ಲಿ ನಾನು ಒಂಭತ್ತನೇ ತರಗತಿ ವಿದ್ಯಾರ್ಥಿ. ನವಮಂಗಳೂರು ಬಂದರು ಲೋಕಾರ್ಪಣೆಯಾಗುವ ದಿನ ಶಾಲೆಗೆ ರಜೆ ಕೊಟ್ಟಿದ್ದರು. ಆಗಿನ ಪ್ರಧಾನಿ ಇಂದಿರಾಗಾಂಧಿ ಬಂದರು ಉದ್ಘಾಟನೆಗೆ ಬರುವವರಿದ್ದರು. ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮವಿತ್ತು.

ನಾನು ನನ್ನ ಗೆಳೆಯರ ಜೊತೆ ಬಂದರು ಉದ್ಘಾಟನೆಯಾಗುವ ಸ್ಥಳಕ್ಕೆ ಹೋದೆವು. ಚೆಡ್ಡಿಯ ಕಿಸೆ ತುಂಬಾ ಬುಗರಿ ಹಣ್ಣು ತುಂಬಿಸಿಕೊಂಡು ವೇದಿಕೆಯ ಹೋದೆವು. ಮುಂಭಾಗದಲ್ಲಿ ಕೆಂಪು ಕಾರ್ಪೆಟ್ ಹಾಸಿದ್ದರು. ಸಾಲಾಗಿ ಕುರ್ಚಿ ಜೋಡಿಸಿದ್ದರು. ನಾನು ಗೆಳೆಯರೊಂದಿಗೆ ಮುಂದಿನ ಸಾಲಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೋದಾಗ ಅಲ್ಲಿದ್ದವರು ನಮ್ಮನ್ನು ಎಬ್ಬಿಸಿ ಕಾರ್ಪೆಟ್ ಮೇಲೆ ಕುಳಿತುಕೊಳ್ಳಲು ಹೇಳಿದರು. ಬುಗರಿ ಹಣ್ಣು ತಿನ್ನುತ್ತಾ ವೇದಿಕೆಯ ಮುಂಭಾಗದಲ್ಲಿ ಕಾರ್ಪೆಟ್ ಮೇಲೆ ಕುಳಿತಿದ್ದೆವು. ನಾವು ಕುಳಿತಿದ್ದ ಬಲಭಾಗದಲ್ಲಿ ಅಡ್ಡಲಾಗಿ ಒಂದು ಮೇಲು ಇಟ್ಟು ಅದರ ಮೇಲೆ ಬಿಳಿ ಬಟ್ಟೆ ಹಾಸಿದ್ದರು, ಅದರ ಹಿಂದೆ ನಾಲ್ಕೈದು ಕುರ್ಚಿಗಳಿದ್ದವು. ಮೇಜಿನ ಮೇಲೆ ಪತ್ರಕರ್ತರು ಎನ್ನುವ ಬರಹವಿದ್ದ ರಟ್ಟನ್ನು ಇಟ್ಟಿದ್ದರು.

ಆಗಷ್ಟೇ ಪತ್ರಕರ್ತರು ಎನ್ನುವ ಪದ ಗಮನಕ್ಕೆ ಬಂದಿತ್ತು. ಸ್ವಲ್ಪ ಹೊತ್ತಲ್ಲಿ ಇಬ್ಬರು ಬಿಳಿಪಂಚೆ, ಜುಬ್ಬ ಧರಿಸಿದ ವಯಸ್ಸಾದವರು ಬಂದು ಕುಳಿತರು. ಮೂರು ಮಂದಿ ಅದೇ ವಯಸ್ಸಿನವರು ಪ್ಯಾಂಟ್ ಧರಿಸಿದ್ದವರು ಬಂದು ಕುಳಿತರು. ಅವರೇ ಪತ್ರಕರ್ತರು ಎನ್ನುವುದು ಖಾತ್ರಿಯಾಗಿತ್ತು. ಕೆಲ ಹೊತ್ತಲ್ಲಿ ಸಾಲುಗಟ್ಟಿ ಸೈರನ್ ಹಾಕಿಕೊಂಡು ಕಾರುಗಳು ಬಂದವು. ಅದರಲ್ಲಿ ಒಂದು ಕಾರಿನಿಂದ ಇಂದಿರಾಗಾಂಧಿ ಇಳಿದು ಕೈಮುಗಿಯುತ್ತಾ ವೇದಿಕೆಯತ್ತ ಬಂದರು. ಅಲ್ಲಿದ್ದವರೆಲ್ಲರೂ ಎದ್ದು ನಿಂತಾಗ ನಾವೂ ಎದ್ದು ನಿಂತೆವು.

ಕಾರ್ಯಕ್ರಮ ಆರಂಭವಾಯಿತು. ಈಗಿನಂತೆ ಯಾವ ಸೆಕ್ಯೂರಿಟಿಯೂ ಇರಲಿಲ್ಲ. ವೇದಿಕೆಯಲ್ಲಿ ಇಂದಿರಾಗಾಂಧಿ ಭಾಷಣ ಮಾಡುತ್ತಿದ್ದಾಗ ನನ್ನ ಎಡಭಾಗದಲ್ಲಿ ಕುಳಿತವರು ನಾವು ತರಗತಿಯಲ್ಲಿ ಡಿಕ್ಟೇಷನ್ ತೆಗೆದುಕೊಳ್ಳುತ್ತಿದ್ದಂತೆ ಬಿರುಸಾಗಿ ಬರೆಯುತ್ತಿದ್ದರು. ಅವರು ಬರೆಯುವ ಸ್ಪೀಡ್ ನೋಡುತ್ತಿದ್ದೆ. ಅವರ ಯಾರ ಪರಿಚಯವೂ ಇರದ ಕಾರಣ ಅವರು ಭಾಷಣ ಬರೆದುಕೊಳ್ಳುತ್ತಿದ್ದಾರೆ ಎಂದಷ್ಟೇ ಊಹಿಸಿದ್ದೆ. ಎಲ್ಲರೂ ವೇದಿಕೆಯಲ್ಲಿ ಇಂದಿರಾಗಾಂಧಿ ಅವರ ಭಾಷಣ ಕೇಳುತ್ತಿದ್ದರೆ ನಾನು ಮಾತ್ರ ಪತ್ರಕರ್ತರು ಬರೆದುಕೊಳ್ಳುತ್ತಿದ್ದುದನ್ನೇ ನೋಡುವುದರಲ್ಲಿ ತಲ್ಲೀನನಾಗಿದ್ದೆ.

ಇಂದಿರಾಗಾಂಧಿ ಅವರು ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸಿ ತೆರೆದ ಜೀಪಿನಲ್ಲಿ ಕೈಮುಗಿಯುತ್ತಾ ಪಕ್ಕದಲ್ಲೇ ಇದ್ದ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ ಉದ್ಘಾಟನೆಗೆ ತೆರಳಿದರು. ಅಲ್ಲಿಯವರೆಗೂ ಬರೆಯುತ್ತಿದ್ದ ಪತ್ರಕರ್ತರು ನೋಟ್ ಬುಕ್ ಮಡಚಿ ಚಿಕ್ಕ ಕೈಚೀಲದೊಳಗಿಟ್ಟುಕೊಂಡು ತೆರಳಿದರು. ಅವರು ನಿರ್ಗಮಿಸಿದ ಬಳಿಕ ನನ್ನನ್ನು ಕಾಡತೊಡಗಿದ ಪ್ರಶ್ನೆ ಪತ್ರಕರ್ತರು ಇಲ್ಲಿ ಬರೆದುಕೊಂಡದ್ದನ್ನು ಪತ್ರಿಕೆಯಲ್ಲಿ ಹೇಗೆ ಮುದ್ರಿಸುತ್ತಾರೆ ?, ಅವರು ಭಾಷಣವನ್ನು ಬರೆದುಕೊಳ್ಳಬೇಕಾದರೆ ಬಹಳವಾಗಿ ಆ ಕಲೆಯನ್ನು ಕಲಿತಿರಬೇಕಲ್ಲವೇ?. ನಾಳೆ ಪತ್ರಿಕೆ ನೋಡಬೇಕು ಎನ್ನುತ್ತಾ ಮನೆ ಸೇರಿಕೊಂಡೆ.

ಮನೆಯವರಿಗೆ ಇಡೀ ಕಾರ್ಯಕ್ರಮದ ವರದಿ ಒಪ್ಪಿಸಿ ಪತ್ರಕರ್ತರನ್ನು ನೋಡಿದ್ದಾಗಿ ಹೇಳಿಕೊಂಡೆ. ಮನೆಯವರಿಗಾದರೂ ಯಾವ ಕುತೂಹಲವೂ ಇರಲಿಲ್ಲ. ನಾನು ಹೇಳುವುದನ್ನು ಕೇಳಿಸಿಕೊಂಡು ಸುಮ್ಮನಾದರು. ಮರುದಿನ ಮುಂಜಾನೆ ಬೇಗ ಎದ್ದವನೇ ಉದಯವಾಣಿ ತರಲು ಚೆಕ್ ಪೊಸ್ಟ್ ನತ್ತ ಓಡಿದೆ. ಮುಖಪುಟದಲ್ಲಿ ಇಂದಿರಾಗಾಂಧಿ ಅವರ ಚಿತ್ರ, ಸುದ್ದಿ ದೊಡ್ಡದಾಗಿ ಪ್ರಕಟವಾಗಿತ್ತು. ಆದರೆ ಆ ಸುದ್ದಿ ಬರೆದವರ ಬಗ್ಗೆ ಮಾತ್ರ ಕುತೂಹಲ ಉಳಿದುಕೊಂಡಿತು.

‍ಲೇಖಕರು avadhi

May 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: