ನನಗೊಬ್ಬ ‘ಇಮ್ರೋಜ್’ ಬೇಕು..

ಇದು ತೀರಾ ಖಾಸ್ ಆದ ಬರೆಹ.  ನನ್ನನ್ನು ನಾನೇ ಮೈಮರೆತು ಅವನನ್ನು  ಬಯಸುವ ಬಗ್ಗೆ. ಹೀಗೆ ನಾಲ್ಕು ಹಾದಿಗಳು ಸಂಧಿಸುವ ‘ಅವಧಿ’ಯಲ್ಲಿ ನಿಂತು ನಿಮಗೆಲ್ಲ ಹೇಗೆ ಡಂಗುರ ಸಾರಲಿ? ಆದರೂ ನನ್ನನ್ನು ನಾನು ಕಳೆದುಕೊಳ್ಳದಂತೆ ಜೋಪಾನ ಮಾಡುವ ಆತನ ಬಗ್ಗೆ ಹೇಗೆ ಹೇಳದೇ ಇರಲಿ? ನನ್ನನ್ನು ನಾನೇ ಕಾಪಿಟ್ಟುಕೊಳ್ಳುವಂತೆ ಮಾಡುವ ಆ ವ್ಯಕ್ತಿಯ ಪ್ರೀತಿಯನ್ನು ಬಗ್ಗೆ ಹೇಗೆ  ಮುಚ್ಚಿಟ್ಟುಕೊಳ್ಳಲಿ? ನನಗೂ ಈತ ದಕ್ಕಿದ್ದರೆ ಎಂಬ ತಹತಹಿಕೆಯನ್ನು ಎಷ್ಟೆಂದು ಮನದಲ್ಲೇ ಅಡಗಿಸಿಡಲಿ? ಆತ ಇಮ್ರೋಜ್. ಇವರೆದುರು ತಾಜ್ ಮಹಲ್ ಎಂಬ ಪ್ರೇಮದ ಪ್ರತೀಕವೂ ಮಂಕಾಗುತ್ತದೆ. ಪ್ರತಿ ಹೆಣ್ಣಿನ ಹೃದಯದ ತುಮುಲ ಇಮ್ರೋಜ್.

ಸುಮಾರು ಮೂರು ವರ್ಷಗಳ ಹಿಂದಿನ ಮಾತು.

ಅದೊಂದು ದಿನ ಯಾಕೋ ಏನೂ ಬರೆಯಲಾಗುತ್ತಿರಲಿಲ್ಲ. ಏನು ಮಾಡುವ ಉತ್ಸಾಹವೂ ಇರಲಿಲ್ಲ. ಬರೆಯಬೇಕಾದವು ಬೆಟ್ಟದಷ್ಟಿದ್ದವು. ಅಂಕಣಗಳಂತೂ ಸಾಲುಗಟ್ಟಿ ನಿಂತಿದ್ದವು. ಆದರೆ ನಾನೋ ಬರೆಯಲು ಸಾಧ್ಯವೇ ಇಲ್ಲದ ಅಸಹಾಯಕ ಸ್ಥಿತಿಯಲ್ಕಿದ್ದೆ. ಏನು ಬರಿತಿದ್ದೀಯಾ ಎಂದ ಕೆಲವರಿಗೆ ಹೀಗೇ ಸುಮ್ಮನೆ ಎಂದು ಉತ್ತರಿಸಿದರೂ ಏನೂ ಬರೆಯುತ್ತಿಲ್ಲ ನಾನು ಎಂಬ ಸತ್ಯ ನನಗಷ್ಟೇ ಗೊತ್ತಿತ್ತು.

ಒಂದೆರಡು ಆತ್ಮೀಯರ ಬಳಿ ಬರೆಯಲಾಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದೂ ಆಯಿತು. “ಒಂದು ಹಂತದಲ್ಲಿ ಹೀಗಾಗುತ್ತದೆ. ಪ್ರಯತ್ನಪೂರ್ವಕವಾಗಿ ಬರೆಯಲು ಹೋಗಬೇಡ”  ಎಂಬ ಸಲಹೆಗಳು ಬಂದವು. “ಇದು ರೈಟರ್ಸ್ ಫಾಸ್. ಒಂದಿಷ್ಟು ಓದು, ಒಳ್ಳೆಯ ಸಂಗೀತ ಕೇಳು. ಒಂದಿಷ್ಟು ರಿಲಾಕ್ಸ್ ಆಗು. ನಿನ್ನ ಪ್ರೀತಿಯ ಕಾಡಿಗಾದರೂ ಹೋಗು.” ಎಂಬ ಸಲಹೆ ತುಂಬಾ ಇಷ್ಟವಾದರೂ ಅದನ್ನು ಪಾಲಿಸುವುದು ಕಷ್ಟವಾಗಿತ್ತು.

ಅಂಕಣಗಳನ್ನು ಕಳಿಸಲು ಡೆಡ್ ಲೈನ್ ಎದುರಿಗಿತ್ತು. ಹೀಗಾಗಿ  ಸುಮ್ಮನೆ ಗಾಡಿ ತೆಗೆದು ನನ್ನ ಕಾಳಿಯನ್ನು ಹುಡುಕಿ ಹೊರಟೆ. ನನ್ನ ಮನಸ್ಸಿನ ನೋವಿಗೆ ಒಂದಿಷ್ಟು ಔಷಧ ಕೊಡುವವಳು ಕಾಳಿಯಷ್ಟೇ. ಕಾಳಿ ನಿಧಾನಕ್ಕೆ ಕಡಲನ್ನು ಕೂಡುತ್ತಿದ್ದರೆ ಸುತ್ತೆಲ್ಲ ಅಬ್ಬರಿಸುತ್ತ ಬೋರ್ಗರೆಯುತ್ತಿದ್ದ ಕಡಲು ಅಲ್ಲಿ ಮಾತ್ರ  ನೊರೆ ನೊರೆಯಾಗಿ ಉಕ್ಕುತ್ತ ಸಂತೃಪ್ತಿ ಸೂಸುವ ಭಂಗಿಯೇ ನನಗೆ ನಿತ್ಯ ನೂತನ.

ಪ್ರತಿದಿನದವೂ ಈ  ಸಂಗಮವನ್ನು ನೋಡಿಯೇ ನೋಡುತ್ತೇನಾದರೂ ಪ್ರತಿದಿನದ ನೋಟಕ್ಕಿಂತಲೂ  ಬೇರೆಯದೇ ಆದ ಏನೋ ಇರುವಂತೆ ಭಾಸವಾಗುತ್ತದೆ. ಪ್ರತಿ ಸಲ ಅದನ್ನು ಉದ್ದೇಶಪೂರ್ವಕವಾಗಿ ನೋಡಿದಾಗಲೂ ನನಗೆ ಹೊಸತೇ ಆದದ್ದೊಂದು ದಕ್ಕಿದಂತಾಗುತ್ತದೆ.  ಅದರಲ್ಲೂ ಅಂದು ಕಾಳಿಯ ಸ್ನಿಗ್ಧತೆಯಲ್ಲೂ ಏನೋ ಮಾದಕತೆ. ಕಡಲಲ್ಲಿ ಉನ್ಮಾದದ ಛಳಕು.

ಮನಸ್ಸು ಒಂದಿಷ್ಟು ತಹಬಂದಿಗೆ ಬಂದಿತೆಂದು ಎದ್ದು ಹೊರಟೆ. ಕಾರವಾರದ ರಂಗ ಮಂದಿರದ ಬಳಿ ಬಂದಾಗ ರವಿವಾರದ ಆ ಮಟಮಟ ಮಧ್ಯಾಹ್ನದಲ್ಲೂ ರಂಗ ಮಂದಿರದ ಬಾಗಿಲು ತೆರೆದಿತ್ತು. ಥಟ್ಟನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಬಸವರಾಜ ಹೂಗಾರ್  ನೆನಪಾಗಿ ರಂಗ ಮಂದಿರದ ಒಳ ನುಗ್ಗಿದೆ. ಹೇಳದೇ ಕೇಳದೇ ಒಳನುಗ್ಗಿದವಳನ್ನು ತಮ್ಮ ಎಂದಿನ ನಗುಮುಖದಿಂದಲೇ ಸ್ವಾಗತಿಸುತ್ತ “ನಿಮ್ಮನ್ನೆ ನೆನಪಿಸಿಕೊಂಡೆ ಮೇಡಂ” ಎಂದು ರೇಣುಕಾ ನಿಡಗುಂದಿಯವರ ಅಮೃತ ನೆನಪುಗಳು ಪುಸ್ತಕವನ್ನು ಕೈಗಿತ್ತರು.

“ಈಗಷ್ಟೇ ಅಕ್ಷತಾ ಹುಂಚದಕಟ್ಟೆ ಕಳಿಸಿದರು. ನೀವು ಬಂದರೆ ಕೊಡಬಹುದಿತ್ತು ಎಂದು ಯೋಚಿಸುತ್ತಿದ್ದೆ” ಎಂದೂ ಸೇರಿಸಿದರು. “ನನಗೀಗ ಏನನ್ನೂ ಓದುವ ಮನಸ್ಸಿಲ್ಲ. ಮನಸ್ಸು ಕೆಟ್ಟು ಹೋಗಿದೆ.” ನಾನು ಪುಸ್ತಕ ಅಲ್ಲಿಯೇ ಟೇಬಲ್ ಮೇಲಿಟ್ಟೆ. “ಈಗಲೇ ಓದು ಎಂದವರು ಯಾರು? ಈ ಪುಸ್ತಕ ನಿಮಗೇನೇ. ನನ್ನ ಬಳಿ ಇನ್ನೊಂದು ಕಾಪಿ ಇದೆ. ನಿಧಾನವಾಗಿ ಓದಿ. ಓದಿದ ತಕ್ಷಣ ಮನಸ್ಸು ಸರಿಯಾಗುತ್ತದೆ.” ಪುಸ್ತಕ ಕೈಗೆ ಬಂದಮೇಲೆ ಓದದೇ ಸುಮ್ಮನಿರುವವಳಲ್ಲ ಎಂಬುದು ಅವರಿಗೂ ಗೊತ್ತಿರುವುದರಿಂದ ಎಂದಿನ ನಗು ಅವರ ಮುಖದಲ್ಲಿ.

ಮಾತನಾಡುವ ಮೂಡ್ ಕೂಡ ಇಲ್ಲದಿರುವುದರಿಂದ ಪುಸ್ತಕ ಹಿಡಿದು ಎದ್ದು ಹೊರಟೆ. ಮನೆಗೆ ಬಂದರೆ ಅಮೃತಾ ಕಾಡತೊಡಗಿದರು. ಅಲ್ಲಿಂದೀಚೆಗೆ ಮನಸ್ಸು ಕೆಟ್ಟು ಕುಳಿತಾಗಲೆಲ್ಲ ಇಮ್ರೋಜ್ ನೆನಪಾಗುತ್ತಾರೆ. ನನಗೂ ಒಬ್ಬ ಇಂತಹ ಇಮ್ರೋಜ್  ಸಿಕ್ಕಿದ್ದರೆ ಎಂದು ಹಳಹಳಿಸುತ್ತಲೇ ಪುಸ್ತಕ ಕೈಗೆತ್ತಿಕೊಳ್ಳುತ್ತೇನೆ. ಈ ಮೂರು ವರ್ಷದಲ್ಲಿ ಏನಿಲ್ಲವೆಂದರೂ ಕನಿಷ್ಟ ಹನ್ನೆರಡರಿಂದ ಹದಿನೈದು ಸಲ ಓದಿದ್ದೇನೆ. ಪ್ರತಿ ಸಲ ಓದಿದಾಗಲೂ ಇಮ್ರೋಜ್ ರನ್ನು ಹೊಸದಾಗಿ ಎದೆಗಿಳಿಸಿಕೊಂಡಿದ್ದೇನೆ. ಮತ್ತೆ ಮತ್ತೆ ಇಮ್ರೋಜ್ ರಲ್ಲಿ ನಾನೂ ಕಳೆದು ಹೋಗಿದ್ದೇನೆ.

    ಖಂಡಿತಾ ಮರಳಿ ನಿನ್ನನ್ನು ಭೇಟಿಯಾಗುತ್ತೇನೆ

ಎಲ್ಲಿ ಹೇಗೆ ಎಂದು ಈಗಲೇ ಹೇಳಲಾರೆ

ಸಾಧ್ಯವಾದರೆ ನಿನ್ನ ಬಣ್ಣಗಳು ಅಪ್ಪಿಕೊಳ್ಳುವ

ಎಳೆಬಿಸಿಲಿನ ಒಂದು ಸೂರ್ಯ ಕಿರಣವಾಗುತ್ತೇನೆ

-ಅಮೃತಾ ಪ್ರೀತಂ

ಹೀಗಾಗಿಯೇ ಕಾಳಿ ಹಾಗು ಕಡಲಿನ ಸಂಗಮ ನನಗೆ ಯಾವಾಗಲೂ ಅಮೃತಾ-ಇಮ್ರೋಜ್ ರ ಪ್ರೇಮ ಸಂಗಮದಂತೆಯೇ ಭಾಸವಾಗುತ್ತದೆ. ಮೊನ್ನೆ ಮೊನ್ನೆ ಭೇಟಿ ಕೊಟ್ಟ ಗಂಗಾವಳಿ ಹಾಗೂ ಅರಬ್ಬಿಯ ಮಿಲನವೂ ಮತ್ತೆ ಮತ್ತೆ ಅಮೃತಾ-ಇಮ್ರೋಜ್ ರನ್ನೇ ನೆನಪಿಸಿದ್ದು ಯಾಕೋ….

ಪುಸ್ತಕದ ಹೆಸರೇನೋ ಅಮೃತ ನೆನಪುಗಳು. ಅಂದರೆ ಇಮ್ರೋಜ್ ನೆನೆದಂತೆ ಅಮೃತಾ ಪ್ರೀತಮ್. ಆದರೆ ಪುಸ್ತಕ ಓದಿದಂತೆ ನಮ್ಮೊಳಗೆ ಹಾಸುಹೊಕ್ಕಾಗುವುದು ಮಾತ್ರ ಇಮ್ರೋಜ್ ಎಂಬ “ಚಲತಾ ಫಿರತಾ ತಾಜ್ ಮಹಲ್”.  ಪುಸ್ತಕದ ಮೊದಲ ಪುಟದಲ್ಲೇ ಬರುವ ಈ ಮೇಲಿನ ಅಮೃತಾರ ಸಾಲುಗಳಲ್ಲಿಯೂ ಕಾಣುವುದು ಇಮ್ರೋಜ್ ಎಂದು ಅಮೃತಾರೇ ಪ್ರೀತಿಯಿಂದ ಹೆಸರಿಟ್ಟು ಕರೆದ ಚಿತ್ರಕಾರನೇ. ಈ ಅದ್ಭುತ ಚಿತ್ರಕಾರನ ಬಣ್ಣಗಳನ್ನು ಅಪ್ಪಿಕೊಳ್ಳಬಯಸುವ ಅಮೃತಾ ಸಾಲುಗಳೇ ಇವರಿಬ್ಬರ ಅದ್ಭುತ ಪ್ರೀತಿಗೆ ಧ್ಯೋತಕವಾಗಿ ನಿಲ್ಲುತ್ತವೆ.

ರೇಣುಕಾ ನಿಡಗುಂದಿ ಹೇಳಿದಂತೆ ಅಂಗೂರಿಯನ್ನು ಎದೆಯಲ್ಲಿಟ್ಟುಕೊಂಡು ಬೆಳೆದವರಲ್ಲಿ ನಾನೂ ಒಬ್ಬಳು. ‘ಕಾಡಿನ ಬೇರು’ ಪುಸ್ತಕ ನನ್ನ ಕಪಾಟು ತಲುಪಿದಾಗ ಹಿಂದಿಯ ಅತಿ ದೊಡ್ಡ ಕವಿಯತ್ರಿಯ ಕಥೆಗಳು ಹೇಗಿರಬಹುದು ಎಂದು ಕುತೂಹಲದಿಂದಲೇ ಓದಿದ್ದೆ. ಅದೂ ನಾನು ಸೆಕೆಂಡ್ ಪಿಯುಸಿಯ ಪರೀಕ್ಷೆ ಬರೆಯುವ ಸಮಯದಲ್ಲಿ.

ಅಂತಹುದ್ದೊಂದು ಕಾಡಿನ ಬೇರು ಅಂಗೂರಿಯ ಕೈಯಿಂದ ಜಾರಿ ನನ್ನ ಕೈಗಾದರೂ ಬಂದಿದ್ದರೆ ಎಂಬ ಆಲೋಚನೆಯಲ್ಲಿಯೇ ಅಂಗೂರಿ ಎದೆಗಿಳಿದು ನನ್ನ ಫಿಸಿಕ್ಸ್ ನ್ನು ಆಪೋಷಣ ತೆಗೆದುಕೊಂಡುಬಿಟ್ಟಿದ್ದಳು. ಅದಾದ ನಂತರ ಎಷ್ಟೋ ವರ್ಷಗಳವರೆಗೆ ಕಾಡಿನ ಬೇರು ಎಲ್ಲೋ ಅಡಗಿ ಕುಳಿತು ಬಿಟ್ಟಿತ್ತಾದರೂ ಆಗಾಗ ಅಂಗೂರಿ ಬೇರನ್ನು ಹಿಡಿದುಕೊಂಡು ಕಾಡುವುದು ಮಾತ್ರ ನಿಂತಿರಲಿಲ್ಲ.

ರೇಣುಕಾ ನಿಡಗುಂದಿಯವರ ಈ ಪುಸ್ತಕ ಓದಿದ ಮೇಲೆ ಮತ್ತೆ ಕಾಡಿನ ಬೇರನ್ನು ಹುಡುಕಿ ಓದಿದೆ. ಇಮ್ರೋಜ್ ರೊಂದಿಗೆ ಅಂಗೂರಿ ಮತ್ತೆ ಉಸಿರಾಗತೊಡಗಿದಳು. ಒಂದು ಪುಸ್ತಕದ ಮಹತ್ವವಿರುವುದೇ ಅದು ಮತ್ತೊಂದು ಪುಸ್ತಕದ ಹಾದಿ ತೋರುವುದರಲ್ಲಿ. ಹೀಗಾಗಿಯೇ ಮತ್ತೆ ಕಾಡಿನ ಬೇರನ್ನು ಓದಿಸಿದ ರೇಣುಕಾ ಅಕ್ಕ ಇಲ್ಲಿ ಗೆದ್ದಿದ್ದಾರೆ.

ಹೇಗೆ ಪ್ರತಿ ಗಂಡಸಿನ ಮನದ ಆಳದಲ್ಲಿ ಒಂದು ಹೆಣ್ಣಿನ ಚಿತ್ರ ಸ್ಥಾಪಿತವಾಗಿರುತ್ತದೆಯೋ ಹಾಗೆಯೇ ಪ್ರತಿಯೊಂದು ಹೆಣ್ಣಿನ ಆಳದಲ್ಲೂ ಇರುವುದು ತನ್ನನ್ನು ಅತಿಯಾಗಿ ಪ್ರೀತಿಸುವ ಒಬ್ಬ ಪರಿಪೂರ್ಣ ಗಂಡಸು. ಇಲ್ಲ, ಹಾಗೇನಿಲ್ಲ ಎಂದು ಬಾಯಿ ಮಾತಿಗೆ ಹೇಳಿದರೂ, ಮನಸ್ಸಿನ ಆಳದಲ್ಲಿ ಸುಪ್ತವಾಗಿಯಾದರೂ ಅಂತಹುದ್ದೊಂದು ನೆರಳು ಕಾಡುವುದು ಸುಳ್ಳಲ್ಲ. ಆ ನೆರಳು ಒಬ್ಬ ವ್ಯಕ್ತಿಯಾಗಿರಬಹುದು ಅಥವಾ  ಬರೀದೇ ಕಲ್ಪನೆಯೂ ಆಗಿರಬಹುದು. ಒಟ್ಟಿನಲ್ಲಿ ಇಬ್ಬರಲ್ಲೂ ಅಂತಹುದ್ದೊಂದು ಕೋರಿಕೆ ಇರುವುದು ಮಾತ್ರ ಸುಳ್ಳಲ್ಲ. ಹಾಗೆಂದ ಮಾತ್ರಕ್ಕೆ ಇದನ್ನು ಹಾದರ ಎಂದು ತಿಳಿಯಬೇಕಿಲ್ಲ. ಅನೈತಿಕತೆ ಎಂಬ ಹಣೆಪಟ್ಟಿ ಅಂಟಿಸಬೇಕಿಲ್ಲ. ಅದೊಂದು ಸಹಜವಾದ ಸುಪ್ತ ಬಯಕೆ ಅಷ್ಟೆ.

ಪ್ರತಿ ಮಕ್ಕಳಿಗೂ ಸಣ್ಣವರಿರುವಾಗ ಕೇಳುವ ಯಕ್ಷಿಣಿಯರ ಕಥೆಗಳು ಮನದಾಳದಲ್ಲಿ ಹಾಸುಹೊಕ್ಕಾಗಿರುತ್ತದೆ. ಮಹಾಭಾರತ ರಾಮಾಯಣದ ಕಥೆಗಳಂತೆ ರಾಕ್ಷಸರಿಂದ ತೊಂದರೆಗೊಳಗಾಗುವ ಫೇರಿ ಟೇಲ್ ಗಳು ಕನಸಿನಲ್ಲೂ ಕನವರಿಸುವಂತೆ ಮಾಡುತ್ತದೆ. ಏಳು ಸುತ್ತಿನ ಕೋಟೆಯಲ್ಲಿ ಬಂಧಿಸಲಪಟ್ಟ ರಾಜಕುಮಾರಿಯನ್ನು ಮಲ್ಲಿಗೆಯ ಹಾಗೆ ಎತ್ತಿಕೊಂಡು ಹೋಗುವ ರಾಜಕುಮಾರನ ಕನಸಿರುತ್ತದೆ, ಪ್ರತಿ ಗಂಡಸಿಗೂ ತನ್ನಿಂದ ಕರೆದೊಯ್ಯಲ್ಪಡುವ ಸಿಂಡ್ರೆಲಾ ಕಾಡುವಂತೆ.

ಹೀಗಾಗಿಯೇ ಬಾಲ್ಯದ ಕಲ್ಪನೆಯ ರಾಜನ್ ಅಮೃತಾರಿಗೆ ಜೀವನವಿಡೀ ಕಾಡಿದರೆ, ಪಂಜಾಬಿಯನ್ನು ಕಲಿಯುವ ಮುನ್ನವೇ ಹದಿಹರಯ ಹೊಸ್ತಿಲೊಳಗೆ ಅಂಜುತ್ತ ಕಾಲಿಡುವಾಗಲೇ ಅಪ್ಪ ಎಲ್ಲಿಂದಲೋ ತಂದು ಮನೆಯ ಗೋಡೆಗೆ ಅಂಟಿಸಿದ್ದ ಅಮೃತಾರ ಫೋಟೋ ಇಂದ್ರಜಿತ್ ಎಂಬ ಬಾಲ್ಯ ಕಳೆದವನ ಕನಸಿನೊಳಗಷ್ಟೇ ಅಲ್ಲ ಮನದ ಗೋಡೆಯಲ್ಲೂ ಅಚ್ಚೊತ್ತಿ ನಿಂತುಬಿಡುತ್ತದೆ. ಆ ಹದಿಮೂರು ವರ್ಷದ ಹುಡುಗನ ಎದೆಯೊಳಗೆ ತಲ್ಲಾನ  ಹಾಡಿದ ಅಮೃತಾ ಎಂಬ ಹೆಣ್ಣು ಅದಾಗಲೇ ಮದುವೆಯಾಗಿ ಪ್ರೀತಂ ಎಂಬ ಉದ್ಯಮಿಯ ಮುದ್ದಿನ ಪತ್ನಿಯಾಗಿ  ಇಬ್ಬರ ಮಕ್ಕಳ ತಾಯಿಯೂ  ಆಗಿರುತ್ತಾಳೆ. ಬಹುಶಃ ಅಂತಹುದ್ದೊಂದು ಪ್ರೀತಿಯನ್ನು ಬೆಳೆಸಿಕೊಳ್ಳಲು ಮತ್ತು ಪಡೆದುಕೊಳ್ಳಲು ಇಮ್ರೊಜ್ ಮತ್ತು ಅಮೃತಾರಿಗೆ ಮಾತ್ರವೇ ಸಾಧ್ಯವೇನೋ…

ಯಾಕೋ ಈ ಪುಸ್ತಕವನ್ನು ಮೊದಲ ಸಲ ಓದಿದಾಗ ನೆನಪಾಗಿದ್ದು  ಕೃಷ್ಣ ಮತ್ತು ರಾಧೆಯರ ಪ್ರೀತಿ. ಮದುವೆಯಾಗಿ ಇನ್ನೊಬ್ಬನ ಪತ್ನಿಯಾಗಿದ್ದ ರಾಧೆ ಕೃಷ್ಣನ ಸಂಗಾತಿಯಾಗಿದ್ದು ಕೇವಲ ಕಾಮಕ್ಕೋಸ್ಕರ ಅಲ್ಲ. ಅವರಿಬ್ಬರದ್ದು ಆತ್ಮ ಸಾಂಗತ್ಯ. ಹಾಗೆಂದೇ ಇದನ್ನು ಮೊದಲ ಸಲ ಓದಿದಾಗ ಎದೆಯೊಳಗೆ ಮೊಳೆತ ಇಮ್ರೋಜ್

 ಬದುಕಿನಲ್ಲಿ ಎಲ್ಲವೂ ಇದೆ

ಆದರೂ ನೀನು ಬೇಕೆಂಬ  ಹಳಹಳಿಕೆ

ನಿನ್ನ ನೆನಪಾದಾಗಲೆಲ್ಲ ಕೃಷ್ಣನೂ ನೆನಪಾಗುತ್ತಾನೆ

ನೂರಾರು ಹೆಣ್ಣುಗಳೊಂದಿಗೆ ಸುಖಿಸಿದ್ದಕ್ಕಲ್ಲ

ಬೇರೊಬ್ಬನ ಹೆಂಡತಿ

ಎಂಬ ವಾಸ್ತವದ ಅರಿವಿದ್ದರೂ

ರಾಧೆಯನ್ನು ಇನ್ನಿಲ್ಲದಂತೆ ಪ್ರೇಮಿಸಿದ್ದಕ್ಕಾಗಿ

ಎಂದು ನನ್ನಿಂದ  ಗೀಚಿಸಿದ ನೆನಪು. ಹೀಗಾಗಿ ರೇಣುಕಾ ಅಕ್ಕ “ಪ್ರತಿಯೊಂದು ಹೆಣ್ಣಿನ ಬದುಕಿನಲ್ಲೂ ಇಮ್ರೋಜ್ ರಂತಹ ಗಂಡು ಇರಬೇಕು” ಎಂದಾಗ  ಯಾವ ಅಚ್ಚರಿಯೂ ಆಗದೇ ಅದು ನನ್ನದೇ ಮಾತುಗಳು ಅನ್ನಿಸಿಬಿಟ್ಟಿತ್ತು. ಇಡೀ ಪುಸ್ತಕದ ತುಂಬ ಇಮ್ರೋಜ್ರನ್ನು ರೇಣುಕಾ ಅದೆಷ್ಟು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಅಲ್ಲಲ್ಲಿ ಇಮ್ರೋಜ್ ರವರ ಮಾತುಗಳು ಕಣ್ಣಂಚನ್ನು ಒದ್ದೆ ಮಾಡದೇ ಇರದು.

ಲಾಹೋರ್ ನಿಂದ ದೆಹಲಿಗೆ ಬಂದ ಇಂದ್ರಜಿತ್ ಎಂಬ ಯುವಕನಿಗೆ ವಿಭಜನೆಯ ಕಾಲದಲ್ಲಿ ಅದು ಹೇಗೋ ಜೀವ ಉಳಿಸಿಕೊಂಡು ಗಂಡ ಮತ್ತು ಮಕ್ಕಳನನ್ನು ಎದೆಗವಚಿಕೊಂಡು  ಬಂದ ತನ್ನ ಬಾಲ್ಯದ ಕನಸಿನ ರಾಣಿ ಅಮೃತಾರನ್ನು ಭೇಟಿ ಆಗಬೇಕೆಂಬ ಆಸೆ. ಆದರೆ ಏನೂ ಆಗದೇ, ಏನನ್ನೂ ಸಾಧಿಸದೇ ಅವರನ್ನು ಭೇಟಿ ಆಗುವುದು ಹೇಗೆಂಬ ಅಳುಕು.

ಕೊನೆಗೂ ಅವರು ಅಮೃತಾರನ್ನು ಭೇಟಿ ಆದಾಗ ಹಿಂದಿನ ಕನಸೆಲ್ಲವೂ ಸಾಕಾರವಾದ ಅನುಭವ.  ಪ್ರೀತಂರ ಪತ್ನಿ, ಎರಡು ಮುದ್ದು ಮಕ್ಕಳ ತಾಯಿ ಆಗಿದ್ದ ಅಮೃತಾ ಅಷ್ಟು ಹೊತ್ತಿಗಾಗಲೇ ಸಾಹಿರ್ ರವರ ಪ್ರೇಯಸಿಯೂ ಆಗಿದ್ದರು. ಕುಳಿತಲ್ಲಿ ನಿಂತಲ್ಲಿ ತೋರು ಬೆರಳಿನಿಂದ ಸಾಹಿರ್ ಹೆಸರು ಬರೆಯುವ ಗೀಳನ್ನು ಅಂಟಿಸಿಕೊಂಡಿದ್ದ ಅಮೃತಾ ಸ್ಕೂಟರ್ ಮೇಲೆ ಹೋಗುವಾಗಲೂ  ಇಮ್ರೋಜ್ ರ ಬೆನ್ನ ಮೇಲೂ ಸಾಹಿರ್ ಎಂದು ಬರೆಯುತ್ತಲೇ ಸಾಗುತ್ತಿದ್ದರಂತೆ.

ಆದರೆ ಅದು ಇಮ್ರೋಜ್ ರವರಿಗೆ ಗೊತ್ತಿರಲಿಲ್ಲ. ಒಮ್ಮೆ ಅಮೃತಾ ಈ ವಿಷಯವನ್ನು ಪತ್ರಕರ್ತರ ಬಳಿ ಹೇಳಿದಾಗ ಅವರು ಇಮ್ರೋಜ್ ರ ಬಳಿ ಪ್ರಸ್ತಾಪಿಸಿ “ನಿಮಗೆ ಬೇಸರವಾಗುತ್ತಿರಲಿಲ್ಲವೇ?” ಎಂದಾಗ. ನನ್ನ ಸ್ನೇಹಿತೆ ಆಕೆಯ ಸ್ನೇಹಿತನ ಹೆಸರನ್ನು ಬರೆದರೆ ನಾನು ಯಾಕೆ ಬೇಸರ ಮಾಡಿಕೊಳ್ಳಲಿ?” ಎಂದು ಮರುಪ್ರಶ್ನೆ ಹಾಕಿ ನಕ್ಕಿದ್ದರು. ತಮ್ಮ ಕವಿತೆಯೊಂದರಲ್ಲಿ ಆಕೆ ತಮ್ಮ ಮೇಲೆ ಸಾಹಿರ್ ಎಂದು ಬರೆಯುವಾಗ ಸಾಹಿರ್ ನನ್ನ ಹೆಸರೇ ಆಗಿ ಹೋಯಿತು ಎನ್ನುತ್ತಾರೆ. ಇದೆಂತಹ ಪ್ರೀತಿ?

ತಾನು ಪ್ರೀತಿಸುವಾಕೆ ಇನ್ನೊಬ್ಬನೊಂದಿಗೆ ಒಂದು ಮುಗುಳ್ನಗೆಯಾಡಿದರೂ ಆಕಾಶವೇ ಕಿತ್ತು ಬಿದ್ದಂತೆ ವರ್ತಿಸುವ ಯುವಕರಿಗೆ ಇಮ್ರೋಜ್ ಒಂದು ಪ್ರೇಮದ ಐಕಾನ್. ಪ್ರೇಮವೆಂದರೆ ಹೇಗಿರಬೇಕು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಮ್ಮೆದುರು ನಿಲ್ಲುತ್ತಾರೆ. ತಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ ಎಂದು ಭ್ರಮಿಸಿದ್ದ ಸಾಹಿರ್ ಗೋಸ್ಕರ ಪತಿ ಪ್ರೀತಂರಿಂದ ದೂರವಾದ ಮೇಲೆ ಅಮೃತಾರಿಗೆ ಜೊತೆಯಾಗಿ ನಿಂತದ್ದು ಇದೇ ಇಮ್ರೋಜ್.

ಆದರೆ ಅಷ್ಟರಲ್ಲಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸಾಹಿರ್ ಗೆ ಅಮೃತಾರನ್ನು ಮದುವೆಯಾಗಿ ಸಂಸಾರದ ಬಂಧನದಲ್ಲಿ ಕಟ್ಟಿ ಬೀಳುವ ಯಾವ ಆಲೋಚನೆಗಳೂ ಇದ್ದಿರಲೇ ಇಲ್ಲ. ಅಮೃತಾ ಸಾಹಿರ್ ರನ್ನು ಅರ್ಥ ಮಾಡಿಕೊಂಡಿದ್ದಕ್ಕಿಂತ ಇಮ್ರೋಜ್ ರವರಿಗೇ ಸಾಹಿರ್ ಹೆಚ್ಚು ಸ್ಪಷ್ಟವಾಗಿದ್ದ. ಯಾವತ್ತೂ ಮದುವೆ ಆಗುವ ಇರಾದೆಯೇ ಇಟ್ಟುಕೊಂಡಿರದಿದ್ದ ಸಾಹಿರ್ ರ ಪ್ರೇಮದ ವಿಫಲತೆಯಲ್ಲಿ ಅಮೃತಾ ಹತಾಶೆ, ನಿರಾಶೆಯಿಂದ ಬದುಕುತ್ತ ಡಿಪ್ರೆಶನ್ ನತ್ತ ಸಾಗಿದ್ದರು.

ಹೀಗಾಗಿ ಇಮ್ರೋಜ್ ಅಮೃತಾ ಜೊತೆಗೆ ಇರಲೇ ಬೇಕಾಗಿತ್ತು. ಸಾಹಿರ್ ರ ಮನಸ್ಸು ಅಷ್ಟಿಷ್ಟು ಅರ್ಥವಾಗತೊಡಗಿದ ಮೇಲೆ ಅಮೃತಾ ಹಾಗು ಇಮ್ರೋಜ್ ಒಳ್ಳೆಯ ಸ್ನೇಹಿತರಾದರು, ಆತ್ಮ ಸಂಗಾತಿಗಳಾದರು. ಇದೆಲ್ಲಕ್ಕಿಂತ ಹೆಚ್ಚಾಗಿ ಜೀವಮಾನದ ಕೊನೆಯವರೆಗೂ ಒಮ್ಮೆ ಕೂಡ ಪ್ರೀತಿಸುತ್ತೇನೆ ಎಂಬ ಮಾತನ್ನೇ ಆಡದೇ ಒಬ್ಬರನ್ನೊಬ್ಬರು ತೀವ್ರವಾಗಿ ಪ್ರೀತಿಸಿದರು. ಅಷ್ಟೇ ಸಂಪನ್ನವಾಗಿ ಒಬ್ಬರಿಗೊಬ್ಬರು ಸ್ಥಳವನ್ನೂ ನೀಡಿದರು. ಹೀಗಾಗಿ ಇವರಿಬ್ಬರ ಪ್ರೇಮ ಉಸಿರುಗಟ್ಟಿಸಲಿಲ್ಲ. ಪ್ರೇಮ ಪಕ್ಕಾ ಗೆಳೆಯರನ್ನು ಜೊತೆಗೂಡಿಸಿದಂತೆ ಅಗೋಚರ ಬಂಧವಾಗಿ ಇಬ್ಬರನ್ನು ಒಂದಾಗಿಸಿತ್ತು.

ಪ್ರೇಮವನ್ನು ಮಾತುಗಳಲ್ಲಿ ಇಬ್ಬರೂ ತೋಡಿಕೊಳ್ಳಲಿಲ್ಲ. ಆದರೆ ಅದನ್ನು ಅನುಭವಿಸಿದರು. ಯಥೇಚ್ಛವಾಗಿ. ಹಿಂದೆಂದೂ ಯಾರೂ ಕಂಡರಿಯದ ರೀತಿಯಲ್ಲಿ. ಹೀಗಾಗಿ ಸಮಾಜದ ಮಾತುಗಳು, ಗುಸುಗುಸು, ಪಿಸಪಿಸ ಅವರಿಬ್ಬರನ್ನು ತಾಕಲೇ ಇಲ್ಲ. ನನ್ನ ಸಮಾಜ ನೀನು, ನಿನ್ನ ಸಮಾಜ ನಾನು ಎಂಬಂತೆ; ಹೊರ ಜಗತ್ತಿಗೆ ಇವರಿಬ್ಬರ ಸಂಬಂಧದ ಬಗ್ಗೆ ಮಾತನಾಡುವ ಯಾವ ಅರ್ಹತೆಯೂ ಇಲ್ಲ ಎಂಬಂತೆ. ಸಮಾಜದ ಎಲ್ಲಾ ಕುಹಕದ ಮಾತುಗಳಿಗೂ ಇಮ್ರೋಜ್ ಹೆಬ್ಬಂಡೆಯಂತೆ ನಿಂತುಬಿಟ್ಟರು. ಅವರನ್ನು ದಾಟಿ ಆ ಕುಹಕವು ಅಮೃತಾರನ್ನು ತಾಗದಂತೆ ತಡೆದರು. ತಾವು ಮಾತ್ರ ಅದೇ ಮಗುವಿನ  ಸುಂದರ ಮನಸ್ಸಿನೊಡನೆ ಪ್ರೇಮಿಸುತ್ತಿದ್ದರು.

ಇಂತಹ ಇಮ್ರೋಜ್ ರನ್ನು ಯಾವ ಹೆಣ್ಣು ಬೇಡ ಎನ್ನಲು ಮನಸ್ಸು ಮಾಡಬಹುದು ನೀವೇ ಹೇಳಿ. ಹೀಗಾಗಿಯೇ ಇದನ್ನು ಓದಿದಾಗಲೆಲ್ಲ ನನ್ನ ಇಮ್ರೋಜ್ ಯಾರು ಎಂದು ಹುಡುಕಬೇಕು ಎಂಬ ತೀವ್ರವಾದ ವಾಂಛೆಯೊಂದು ನನ್ನ ಮನಸ್ಸಿನಲ್ಲಿ ಹುಟ್ಟಿಬಿಡುವುದನ್ನು ತಡೆಯಲು ನನಗೆ ಸಾಧ್ಯವೇ ಆಗುವುದಿಲ್ಲ.

“ಪ್ರತಿ ಹೆಣ್ಣೂ ಇಮ್ರೋಜ್ ರಂತಹ ಸಂಗಾತಿ ಬಯಸುತ್ತಾಳೆ” ರೇಣುಕಾ ಅಕ್ಕನ ಮಾತಿಗೆ “ಎಲ್ಲರಿಗೂ ಅಮೃತಾ ಆಗಲು ಸಾಧ್ಯವೇ? ಅಷ್ಟು ಸುಲಭವಲ್ಲ ಅಮೃತಾ ಆಗಲು.” ಎಂದು ಇಮ್ರೋಜ್ ಹೇಳಿದ ಮಾತು ಸದಾಕಾಲ ನನ್ನ ಮನಸ್ಸಿಗೆ ಅಂಟಿಕೊಂಡಿರುತ್ತದೆ. ಅಮೃತಾರನ್ನು ಪಡೆಯಲು  ಬಾಲ್ಯದಿಂದಲೂ ಒಂದು ಅದಮ್ಯ ಆಸೆಯನ್ನು ಹೊತ್ತುಕೊಂಡಿದ್ದ ಇಮ್ರೋಜ್ ಅದೊಂದು ಅದೃಷ್ಟ ಎಂದರೆ ಯಾವತ್ತೂ ನಂಬುವುದಿಲ್ಲ.  ವಿಧಿ ಬರೆಹದಲ್ಲಿ ಆಸಕ್ತಿ ಇರದ ಇಮ್ರೋಜ್ ಎಂದೂ ದೇವಸ್ಥಾನ, ಗುರುದ್ವಾರಗಳ ಮೆಟ್ಟಿಲು ಹತ್ತಿದವರಿಲ್ಲ. ಅವರದ್ದು ಪ್ರೇಮವೇ ದೇಗುಲ. ಅದರಲ್ಲಿ ಅಮೃತಾ ಮಾತ್ರವೇ ಗರ್ಭಗುಡಿಯಲ್ಲಿರುವ ದೇವತೆ. ಅಷ್ಟೆ.

ಪ್ರತಿಯೊಂದಕ್ಕೂ ದೇವರು ಧರ್ಮವನ್ನು ಮುಂದಿಟ್ಟುಕೊಂಡು ಬಡಿದಾಡುವ ನಾವು ಇಮ್ರೋಜ್ ರವರ ಮಾತನ್ನು ಕೇಳಲೇ ಬೇಕು. “ಸಮಾಜವೆಂದರೇನು? ಹಿಂಸೆ ಯಾಕಾಗಿ ನಡೆಯುತ್ತದೆ? ಗೀತೆಯಲ್ಲಿ ಹೇಳಿದ್ದನ್ನೇ ಕುರಾನಿನಲ್ಲಿ, ಬೈಬಲ್ಲಿನಲ್ಲಿ ಹೇಳಿದೆ. ಸುಮ್ಮದೇ ದಿನಾ ದೇವಸ್ಥಾನಕ್ಕೆ ಹೋದರೇನು ಬಂತು?” ಎಂದು ವ್ಯಾಕ್ಯುಲರಾಗಿ ಕೇಳುತ್ತಾರೆ. “ಕಿಸ್ಮತಿ, ಡೆಸ್ಟಿನಿ ಎಲ್ಲವೂ ಸುಳ್ಳು. ಅಸಲಿಗೆ ಮನುಷ್ಯ ಜೀವನ ಪೂರ್ತಿ ತನ್ನ ಸುಳ್ಳನ್ನು ಬದುಕುತ್ತಾನೆ. ಸುಳ್ಳನ್ನೇ ಜೀವಿಸುತ್ತಾನೆ, ಸುಳ್ಳಿನಲ್ಲಿಯೇ ಸಾಯುತ್ತಾನೆ…” ಎನ್ನುವಾಗ ಪ್ರಸ್ತುತ ಸನ್ನಿವೇಶಗಳು ಕಣ್ಣೆದುರು ಗಿರಕಿ ಹೊಡೆಯುತ್ತ ರುದ್ರ ನರ್ತನ ಪ್ರಾರಂಭಿಸುತ್ತದೆ. ನಿಜವಾದ ಪ್ರೀತಿಯಿದ್ದರೆ ಯಾವ ನಸೀಬು ತಾನೇ ಏನು ಮಾಡೀತು?

ತಪ್ಪು ಮಾಡಿದರೆ ದೇವರನ್ನು ಸಮಾಧಾನ ಮಾಡಲು ದೇವಸ್ಥಾನಕ್ಕೆ ಹೋಗಬೇಕು. ಆದರೆ ನಾನೆಂದೂ ತಪ್ಪೇ ಮಾಡಿಲ್ಲ. ನಾನು ಬರೀ ಪ್ರೀತಿಸಿದ್ದೇನಷ್ಟೇ. ಹೀಗಾಗಿ ದೇವಸ್ಥಾನಕ್ಕೆ ಹೋಗಬೇಕಾದ ಅಗತ್ಯವೇ ನನಗೆ ಬೀಳಲಿಲ್ಲ” ಎಂದು ಮಗುವಿನ ಮನಸ್ಸಿನಿಂದ ಹೇಳುವ ಇಮ್ರೋಜ್  ಇವತ್ತಿನ ದೇವಸ್ಥಾನ-ಮಸೀದಿ-ಚರ್ಚನ ಬೀದಿ ಜಗಳಕ್ಕೆ ಸರಳವಾದ ಪರಿಹಾರವನ್ನು ಸೂಚಿಸಿಬಿಡುತ್ತಾರೆ.

ಹೀಗಾಗಿಯೇ ಅವರಿಗೆ ಯಾವ ಹಬ್ಬವೂ ವಿಶೇಷವಾದುದುಲ್ಲ.

ಜಬ್ ವೋ ಹಸ್ತಿ ಹೈ

ತೋ ಮೇರಾ ಈದ್ ಹೈ

ಜಬ್ ವೋ ನಹಿ ಹಸತಿ ತೋ

ಮೇರಾ ರೋಜಾ ಹೋತಾ ಹೈ

ಎನ್ನುತ್ತಾರೆ ಇಮ್ರೋಜ್. ಎಂತಹ ಅದ್ಭುತ ಕಲ್ಪನೆ. ಅವರ ಹಬ್ಬ, ಸಂತೋಷ, ನಲಿವು ಎಲ್ಲವೂ ಅಮೃತಾರ ನಗುವನ್ನೇ ಅವಲಭಿಸಿಕೊಂಡಿತ್ತು.

ಮತ್ತೊಮ್ಮೆ ಯಾವುದೋ ಜೋತಿಷಿಯ ಮಾತಿಗೆ ಬೇಸರ ಮಾಡಿಕೊಂಡಿದ್ದ ಅಮೃತಾರಿಗೆ ಒಳ್ಳೊಳ್ಳೆಯ ಮತ್ತು  ಆಕೆಗೆ ಇಷ್ಟವಾದ ಶಬ್ಧಗಳನ್ನು ಬರೆದುಕೊಡಲು ಹೇಳಿ ಆ ಶಬ್ಧಗಳನ್ನು ಜೋಡಿಸಿ ಒಂದು ಸುಂದರವಾದ ಕುಂಡಲಿಯನ್ನು ತಯಾರಿಸಿಕೊಟ್ಟಿದ್ದರಂತೆ. ಅದಕ್ಕೆ ಚೌಕಟ್ಟು ಹಾಕಿಸಿ ಅದನ್ನೊಂದು ಕಲಾಕೃತಿಯನ್ನಾಗಿಸಿದ್ದಾರಂತೆ ಇಮ್ರೋಜ್. ಈ ಭಾಗ್ಯ  ಯಾರಿಗುಂಟು ಯಾರಿಗಿಲ್ಲ?

ಚೌಕಾಕಾರದ ಖಾನೆಗಳಲ್ಲಿ ಈ ಗ್ರಹಗಳನ್ನು ಕೂರಿಸಿ, ರಾಹುವಿಗೆ ಕೇತುವಿನ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದೆಲ್ಲ ಗ್ರಹದ ಬಗ್ಗೆ ಹೇಳುತ್ತಾರಲ್ಲ? ಈ ಗ್ರಹಗಳೆಲ್ಲ ಯಾಕೆ ಒಂದರ ಮೇಲೊಂದು ಕೆಟ್ಟ ದೃಷ್ಟಿ ಬೀರಬೇಕು?” ಎಂದು ಪ್ರಶ್ನಿಸುತ್ತಾರೆ. ಕುಂಡಲಿಯನ್ನು ನೋಡಿ ಮುವತ್ತೆರಡು ಗುಣಗಳು ಹೊಂದಿಕೆ ಯಾಗುತ್ತದೆ. ದೀರ್ಘ ಕಾಲದ ಸುಖ ಸಂಸಾರ ಎಂದು ಮಾಡಿದ ಮದುವೆ ಎರಡೇ ತಿಂಗಳಲ್ಲಿ ಮುರಿದು ಬೀಳುವುದು, ಜಾತಕ, ಕುಂಡಲಿ ಯಾವುದು ಇಲ್ಲದ ಮದುವೆ ಸುಖವಾಗಿ ಸಂಸಾರ ಮಾಡುವುದು ಇವೆಲ್ಲ ಕಣ್ಣೆದುರಿಗೇ ನಡೆಯುತ್ತಿರುವಾಗ ಪ್ರತಿದಿನ ಬೆಳಿಗ್ಗೆ ಎಲ್ಲಾ ಛಾನೆಲ್ ಗಳೂ ಒಬ್ಬೊಬ್ಬ ಜೋತಿಷಿ ಎಂಬ ಹಗಲು ವೇಷದವರನ್ನು ಕುಳ್ಳಿರಿಸಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಭವಿಷ್ಯ, ಬ್ರಿಟನ್, ಫ್ರಾನ್ಸ್ ನ ಅದ್ಯಕ್ಷರ ಭವಿಷ್ಯ ಹೀಗೆ ಯಾರ್ಯಾರದ್ದೋ ಭವಿಷ್ಯ ನುಡಿಯುವಾಗ ಇಮ್ರೋಜ್ ಮತ್ತೆ ಮತ್ತೆ ನೆನಪಾಗುತ್ತಾರೆ.

ಇಮ್ರೋಜ್ ರ ಮೂಲ ಹೆಸರು ಇಂದ್ರಜಿತ್ ನ್ನು ಬದಲಿಸಿ ಇಮ್ರೋಜ್ ಎಂದು ಕರೆದ್ದೂ ಅಮೃತಾರೇ. ಇಮ್ರೋಜ್  ಎಂದರೆ ಪಾರಸಿ ಭಾಷೆಯಲ್ಲಿ ‘ಇಂದು’ ಎಂದರ್ಥವಂತೆ. ನಿನ್ನೆ ಮತ್ತು ನಾಳೆಯ ಹಂಗಿಲ್ಲದ ವರ್ತಮಾನ. ಸದಾ ವರ್ತಮಾನದಲ್ಲಷ್ಟೆ ಬದುಕುವ ಇಮ್ರೋಜ್ ರ ಪ್ರೀತಿಯ ಹಾದಿಗೆ ಅಮೃತಾರ ನಿನ್ನೆಗಳು ಯಾವತ್ತೂ ತೊಡಕಾಗಲೇ ಇಲ್ಲ.

ಪ್ರೀತಂ ಎಂಬ ಪತಿ, ಇಬ್ಬರು ಮಕ್ಕಳನ್ನು ಯಾವತ್ತೋ ತನ್ನವರನ್ನಾಗಿಸಿಕೊಂಡ ಇಮ್ರೋಜ್ ಸಾಹಿರ್ ರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲಿಲ್ಲ. ಹಾಗೊಂದು ವೇಳೆ ಸಾಹಿರ್ ರನ್ನು ಮದುವೆ ಆಗಿದ್ದರೆ ಅವರ ಮನೆಯಲ್ಲಿ ನಮಾಜು ಮಾಡುತ್ತಿದ್ದ ಅಮೃತಾರನ್ನು ಹೊತ್ತುಕೊಂಡೇ ಬರುತ್ತಿದ್ದೆ ಎನ್ನುವ ಇಮ್ರೋಜ್ ರಿಗೆ ಅಮೃತಾ ಬಿಟ್ಟು ಬೇರೆ ಬದುಕಿಲ್ಲ. ಅಮೃತಾ ಸಿಗದಿದ್ದರೂ ಅವಳಿಗಾಗಿಯೇ ಬದುಕುತ್ತಿದ್ದೆ ಎನ್ನುತ್ತಾರೆ. ಬದುಕು ಅಮೃತಾ ಕೊಟ್ಟಿದ್ದು. ಮಕ್ಕಳು ಅಮೃತಾ ಹಾಗೂ ಪ್ರೀತಂ ನೀಡಿದ್ದು ಎನ್ನುವ ಇಮ್ರೋಜ್  ಅಮೃತಾರ ಪ್ರೇಮದಲ್ಲಿ ಅದೆಷ್ಟು ತಾದ್ಯಾತ್ಮ? ಹೀಗಾಗಿಯೇ ಒಮ್ಮೆ ನಿನ್ನ ಕೋಣೆಯ ಬಾಗಿಲನ್ನೂ ನಾನು ಬಡಿಯಬೇಕಾದ ಪರಿಸ್ಥಿತಿ ಬಂತೆ? ಎಂದು ಅಮೃತಾ ಕೇಳಿದಾಗ ಆ ಕೋಣೆಯ ಚಾವಿಯನ್ನೇ ಆಕೆಯ ಕೈಗಿಟ್ಟು ಕೋಣೆ ಮನೆಯಾಗಲಿ ಎಂದು ಕಾತರಿಸುತ್ತ ನಿಂತವರು ಅವರು.

ಕೆಲವು ದಿನಗಳ ಹಿಂದೆ ಸ್ನೇಹಿತನೊಬ್ಬ “ನಾನು ಚಹಾ ಬಿಟ್ಟೆ” ಎಂದಿದ್ದ. “ನಿಜಕ್ಕೂ?” ನನ್ನ ಧ್ವನಿಯಲ್ಲಿ ಕುತೂಹಲವಿತ್ತು. “ಈ ಹೊತ್ತು ಗೊತ್ತಿಲ್ಲದ ಚಹಾ ಸೇವನೆಯಿಂದಾಗಿ ಪಿತ್ಥ ಜಾಸ್ತಿ ಆಗಿದೆ. ರಾತ್ರಿಯಿಡಿ ಓದು ಬರೆಹ ಸೇರಿಕೊಂಡು ರಕ್ತ ಬರ್ತಿದೆ.” ಯಾಕೋ ಈ ಚಹಾ ದೊಡ್ಡದೊಂದು ಆರೋಪಕ್ಕೆ ಗುರಿ ಆಯ್ತಲ್ಲ. ನಾನು ನೊಂದುಕೊಂಡೆ. ಸುಮಾರು ಹದಿನೈದು ದಿನ ಬಿಟ್ಟು “ಚಹಾ ಕುಡಿತಿದ್ದೀನಿ.” ಎಂದವನ ಮಾತಿಗೆ ನಗು ಬಂತು. “ಚಹಾ ಬಿಟ್ಟಿದ್ದು….” ನನ್ನ ಮಾತು ಪೂರ್ತಿಯಾಗಲು ಬಿಡದೇ “ಚಹಾ ಬಿಡೆಂದರೆ ಬಿಡೋದು ಹೇಗೆ…?” ಎಂದಿದ್ದ.

ಅಮೃತಾ ನನಗೆ ಮನಸ್ಸಿನಲ್ಲಿ ಕುಳಿತು ಬಿಡಲು ಮುಖ್ಯ ಕಾರಣವೇ ಚಹಾ ಎಂಬ ಮತ್ತೊಂದು ಅಮೃತ. ನನ್ನಂತೆ ಅಮೃತಾ ಕೂಡ ಚಾಯ್ ಪ್ರೇಮಿ. ಎಷ್ಟು ಸಲ ಚಹಾ ತಂದು ಎದುರಿಗಿಟ್ಟರೂ ಚಹಾ ಬೇಡವೆಂದವರೇ ಅಲ್ಲ. ಆದರೆ ಇಮ್ರೋಜ್ ದಿನದಲ್ಲಿ ಒಮ್ಮೆ ಮಾತ್ರ ಚಹಾ ಕುಡಿಯುವವರು. ಅಂತೆಯೇ ಅಮೃತ ಸಿಗರೇಟು ಸೇದುತ್ತಿದ್ದರು. ಇಮ್ರೋಜ್ ಎಂದೂ ಸಿಗರೇಟು ಸೇದಿದವರಲ್ಲ. ಆದರೆ ಅಮೃತಾಗಾಗಿ ಪದೇ ಪದೇ ಚಹಾ ಮಾಡುತ್ತಿದ್ದರು. ತಾವೇ ಸ್ವತಃ ಸಿಗರೇಟು ಕೊಂಡು ತರುತ್ತಿದ್ದರು. ಯಾವತ್ತೂ ಒಬ್ಬರಿಗೊಬ್ಬರು ಒತ್ತಡ ಹೇರಿಕೊಂಡವರೇ ಅಲ್ಲ ಇಬ್ಬರೂ. ಪ್ರೇಮವೆಂದರೆ ಅಂಗೈಯ್ಯಲ್ಲಿರುವ ಹಕ್ಕಿಯಂತೆ ಜೋಪಾನ ಮಾಡಿಕೊಂಡವರು. ಬಿಗಿಯಾಗಿ ಹಿಡಿದು ಉಸಿರುಗಟ್ಟಿಸಿ ಸಾಯಿಸದೇ, ಎಲ್ಲೆಂದರಲ್ಲಿ ಹಾರಲೂ ಬಿಡದೆ ಪ್ರೇಮದ ಸೂತ್ರವನ್ನು  ಮನಸ್ಸಿಗೆ ಕಟ್ಟಿಕೊಂಡವರು.

ಪುರಾಣದಲ್ಲೊಂದು ಕತೆಯಿದೆ. ಗಣೇಶ ಮತ್ತು ಷಣ್ಮುಖನಿಗೆ ಯಾರು ಶೂರರು ಹಾಗೂ ಬುದ್ಧಿವಂತರು ಎಂಬ ತಕರಾರು ಪ್ರಾರಂಭವಾಗಿ ಒಂದು ಸ್ಪರ್ಧೆ ಏರ್ಪಡುತ್ತದಂತೆ. ಇಬ್ಬರಿಗೂ ಜಗತ್ತನ್ನು ಪ್ರದಕ್ಷಿಣೆ ಹಾಕಿಕೊಂಡು ಬರಲು ಶಿವ ಹೇಳುತ್ತಾನಂತೆ. ಯಾರು ಮೊದಲು ಬಂದು ಸೇರುತ್ತಾರೋ ಅವರು ಶುರರು ಹಾಗೂ ಬುದ್ಧಿವಂತರು ಎಂದು ತಿಳಿಸುತ್ತಾನಂತೆ. ತಕ್ಷಣ ತನ್ನ ವಾಹನವಾದ ನವಿಲನ್ನು ಹತ್ತಿ ಕಾರ್ತಿಕೇಯ ವೇಗವಾಗಿ ಹೋದರೂ ಗಣಪತಿ ಕುಳಿತಲ್ಲೇ ಕುಳಿತಿರುತ್ತಾನೆ. ನಂತರ ಎದ್ದು ಶಿವ ಪಾರ್ವತಿಯರನ್ನು ಪ್ರದಕ್ಷಿಣೆ ಮಾಡಿ ಜಗತ್ತಿನ ಪ್ರದಕ್ಷಿಣೆ ಮುಗಿಯಿತು ಎನ್ನುತ್ತಾನಂತೆ ಹಾಗೆಯೇ ಆ ಪಂದ್ಯದಲ್ಲಿ ಜಯಗಳಿಸಿಯೂ ಬಿಡುತ್ತಾನಂತೆ.

ಇಲ್ಲಿ ಇಮ್ರೋಜ್ ಕೂಡ ಅಷ್ಟೆ. ಎರಡು ಮಕ್ಕಳ ತಾಯಿಯಾದ ತನ್ನನ್ನು ಅಗಾದವಾಗಿ ಪ್ರೀತಿಸುವ ಇಮ್ರೋಜ್ ರ ಭವಿಷ್ಯದ ಚಿಂತೆ ಅಮೃತಾರಿಗೆ. ಹೀಗಾಗಿ ಅವರ ಪ್ರೇಮವನ್ನು ಒಪ್ಪಕೊಳ್ಳುವ ಮೊದಲು ಲೋಕವನ್ನು ಕಂಡು ಬರಲು ಹೇಳುತ್ತಾರೆ. ಆದರೆ ಇಮ್ರೋಜ್ ಹಿಂದೆ ಮುಂದೆ ಯೊಚಿಸದೇ  ಅಮೃತಾರ ಸುತ್ತ ಒಂದು ಪ್ರದಕ್ಷಿಣೆ ಹಾಕಿ “ಆಯಿತು, ಲೋಕವನ್ನು ಕಂಡು ಬಂದಾಯಿತು. ನನ್ನದೇನಿದ್ದರೂ ನಿನ್ನೊಂದಿಗೆ ಬದುಕು ಇನ್ನು” ಎಂದರಂತೆ. ಓದುತ್ತ ಓದುತ್ತ ಒಮ್ಮೆ ಕಣ್ಣಂಚಲ್ಲಿ ಹನಿ ಜಿನುಗಿತು. ತನ್ನ ಜಗತ್ತೇ ನೀನು ಎಂದು ಇದಕ್ಕಿಂತ ಸುಲಭವಾಗಿ, ಇದಕ್ಕಿಂದ ಚೆಂದವಾಗಿ ಬೇರೆ ಹೇಗೆ ತೋರಿಸಿಕೊಡಲು ಸಾಧ್ಯ. ಹೆಣ್ಣಾದವಳ ಹೆಮ್ಮೆಗೆ ಇದಕ್ಕಿಂತ ಹೆಚ್ಚೇನು ಬೇಕು?

ಹೀಗಾಗಿಯೇ ಅನಾರೋಗ್ಯ ಪೀಡಿತ ಪ್ರೀತಂರನ್ನು ಮನೆಗೆ ಕರೆತಂದು ಯಾವ ಬೇಸರವೂ ಇಲ್ಲದೇ ಸೇವೆ ಮಾಡಲು ಅವರಿಗೆ ಸಾಧ್ಯವಾಗಿದೆ. ನಂತರ ಅಮೃತಾ ಪೂರ್ತಿ ಹಾಸಿಗೆ ಹಿಡಿದಾಗಲೂ ಇಮ್ರೋಜ್ ರನ್ನು ಪಕ್ಕದಲ್ಲೇ ಕುಳಿತಿರಲು ಒತ್ತಾಯಿಸುತ್ತಿದ್ದರಂತೆ ಒಂದೆರೆಕ್ಷಣವೂ ಬಿಡದೇ ಕೈ ಹಿಡಿದುಕೊಂಡಿರುತ್ತಿದ್ದ ಅಮೃತಾರಿಗೆ ಸಾವೇ ಬಂದರೂ ಅದು ಇಮ್ರೋಜ್ ರ ಕೈಯ್ಯೊಳಗೆ ಆಗಲಿ ಎಂಬ ಆಸೆ ಇತ್ತೇನೋ… ಹೀಗಾಗಿಯೇ ಇಮ್ರೋಜ್ “ನಿನ್ನೊಡನಿದ್ದಾಗ ಮಾತ್ರ ಎಚ್ಚರಾಗಿದ್ದೆ” ಎಂದು ಅಮೃತಾರಿಗೆ ಹೇಳುತ್ತಾರೆ. ಅಮೃತಾ ಹೋದ ನಂತರವಷ್ಟೇ ಇಮ್ರೋಜ್ ಕವನ ಬರೆಯಲಾರಂಭಿಸುತ್ತಾರೆ.

ಅಮ್ಮನ ಚಿತ್ರ ಬಿಡಿಸುತ್ತೇನೆ ಎಂದು ಹೊರಡುವ ನನ್ನ ಮಗ ಯಾವಾಗಲೂ ಚಿತ್ರದ ಮೂಲೆಯಲ್ಲಿ ತನ್ನ ಹೆಸರನ್ನು ಚೆನ್ನಾಗಿ ಕಾಣುವಂತೆ ಬರೆಯುತ್ತಾನೆ. ಅದೇಕೆ ಹಾಗೆ ಎಮದು ಕೇಳಿದರೆ ಅವನು ಬಿಡಿಸಿದ ಚಿತ್ರವನ್ನು ತನ್ನದೆಂದು ಅವರಣ್ಣ ಹೇಳುತ್ತಾನಂತೆ. ಯಾಕೋ ಚಿತ್ರಕಾರ  ಕಲಾಕೃತಿಯ ಮೂಲೆಯಲ್ಲಿ ತನ್ನ ಹೆಸರನ್ನು ಬರೆದು ಅದನ್ನು ಕಮರ್ಶಿಯಲ್ ಮಾಡುವುದರ ಕುರಿತು ವಿರೋಧಿಸುವ ಇಮ್ರೋಜ್ ರ ಮಾತು ನನಗೆ ಈ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿತು. ಒಮ್ಮೆ ಚಿತ್ರ ಬಿಡಿಸಿದ ಮೇಲೆ ಮುಗಿಯಿತು. ಅದಕ್ಕೆ ತನ್ನ ಹೆಸರಿನ ಮೊಹರು ಹಾಕಿಕೊಳ್ಳುವುದೇಕೆ ಎನ್ನುತ್ತಲೇ ಹೆಣ್ಣಿನ ನಗ್ನ ಚಿತ್ರವನ್ನು ಬಿಡಿಸಿ ಅದೇ ಉತ್ತಮ ಕಲಾಕೃತಿ ಎನ್ನುವವರ ಕುರಿತೂ ಸಾತ್ವಿಕ ಸಿಟ್ಟನ್ನು ತೋರಿಸುತ್ತಾರೆ.

ಹೆಣ್ಣು ಎಂಬ ದೇಹವೇ ಕಾಮದ ಗಣಿಯಾಗಿ ರೂಪುಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಇಮ್ರೋಜರ ಮಾತು ತೀರಾ ಪ್ರಸ್ತುತವೆನ್ನಿಸುತ್ತಿದೆ. ಆರು ತಿಂಗಳ ಹಸುಗೂಸಿನಿಂದ ಹಿಡಿದು ಎಂಬತ್ತರ ವೃದ್ಧೆಯ ದೇಹವೂ ಕೇವಲ ಕಾಮದ ಬಾಧೆ ತೀರಿಸುವ  ಒಂದು ವಸ್ತುವಾಗಿ ಕಾಣುತ್ತಿರುವಾಗ ಅದ್ಭುತವಾಗಿ ಪ್ರೇಮಿಸಿದ, ಪ್ರೀತಿಯನ್ನೇ ಉಸಿರಾಡುತ್ತಿರುವ ಇಮ್ರೋಜ್ ರ ಮಾತು ಶಾಸನದಂತೆ ಕೆತ್ತಿಡಬೇಕಾದ ದೇವವಾಕ್ಯವಾಗಿ ಕಾಣುತ್ತದೆ.

ಹೆಣ್ಣು ಎಂದರೆ ಗಂಡಿಗೆ ಕಾಮ ಎಚ್ಚರಗೊಳ್ಳುತ್ತದೆ. ಆಕೆಯ ಶರೀರ ಮಾತ್ರ ಕಾಣುತ್ತದೆ. ಕಾಮಿಸಬೇಕೆನ್ನುವ ದೃಷ್ಟಿಯಿಂದ ಮಾತ್ರ ಗಂಡಸು ನೋಡುತ್ತಾನೆ. ಯಾಕೆ ಆಕೆಯೊಬ್ಬ ಮನುಷ್ಯಳಾಗಿ ಕಾಣಿಸುವುದಿಲ್ಲ? ಯಾಕೆ ಹೊರ ಬರಲಾಗುವುದಿಲ್ಲ ಇಷ್ಟವಿಲ್ಲದ ಚೌಕಟ್ಟಿನಿಂದ” ಎನ್ನುತ್ತಾರೆ.

ಅವರ ಕವನದಲ್ಲಿ ಒಂದು ಕಡೆ “ಶರೀರದೊಂದಿಗೆ ಮಲಗಬಹುದು, ಆತ್ಮದೊಂದಿಗೆ ಅಲ್ಲ” ಎನ್ನುತ್ತಾರೆ. ಪ್ರೇಮವೆಂದರೆ ಇಮ್ರೋಜ್ ರಿಗೆ ಶರೀರವಲ್ಲ. ಪ್ರೀತಿಯೆಂದರೆ ಬರೀ ಕಾಮವಲ್ಲ. ಅದೊಂದು ಆತ್ಮ ಸಂಗಾತ. ಪರಿಶುದ್ಧ ಪ್ರೇಮ ಾತ್ಮದಷ್ಟೇ ಸದಾ ಜಾಗ್ರತ ಎನ್ನುವ ರೇಣುಕಾ ನಿಡಗುಂದಿಯವರ ಮಾತು ಅದೆಷ್ಟು ಸತ್ಯ. ಅಮೃತಾಳೊಂದಿಗೆ ಮಾತ್ರ ಎಚ್ಚರವಾಗಿದ್ದ ಇಮ್ರೋಜ್ ಆಕೆ ಗತಿಸಿದ ಮೇಲೂ ಆಕೆಯ ಆತ್ಮದೊಂದಿಗೆ ಎಚ್ಚರವಾಗಿಯೇ ಇದ್ದಾರೆ.

ಎಂತಹ ಅದ್ಭುತ ಪ್ರೀತಿಯನ್ನು ನೀಡಿ, ಪಡೆದೂ ಎಂದೂ ಪರಸ್ಪರ ಐ ಲವ್ ಯು ಎಂದು ಹೇಳಿಕೊಳ್ಳದ ಇಮ್ರೋಜ್ರನ್ನು ಯಾವ ಹೆಣ್ಣು ಬಯಸದೇ ಇರಲು ಸಾಧ್ಯ.? ಜಿಸ್ಮ ಛೋಡಾ ಹೈ; ಸಾಥ್ ನಹಿ ಎನ್ನುವ ಇಮ್ರೋಜ್ ರ ಪ್ರೇಮಕ್ಕೆ ನಾನು ಯಾವುದನ್ನು ಹೋಲಿಸಿದರೂ ಅದು ಕಡಿಮೆಯೇ.

ಸಾಕು. ಇವತ್ತಿಗೆ ಇಷ್ಟೇ ಸಾಕು.  ನಾನು ಇಮ್ರೋಜ್ ರ ಬಗ್ಗೆ ಮತ್ತೂ ಹೇಳುತ್ತ ಹೋದರೆ ನನಗಾಗಿ ಇಮ್ರೋಜ್ ರನ್ನು, ಅಥವಾ ಅವರಂತ ಒಬ್ಬಾತನನ್ನು ಸೃಷ್ಟಿಸದೇ ಹೋಗಿದ್ದಕ್ಕಾಗಿ ಆ ದೇವರನ್ನು  ನಾನು ಶಪಿಸಬೇಕಾದೀತು.

ಒಂದು ವೇಳೆ ನೀವು ಈ ಪುಸ್ತಕವನ್ನು ಓದದೇ ಇದ್ದರೆ ಈಗಲೇ ಓದಿ. ನಿಮ್ಮೊಳಗೊಂದು ಇಮ್ರೋಜ್ ಅಥವಾ  ಒಬ್ಬ ಅಮೃತಾ ಮುಗುಳ್ನಕ್ಕು ನನಗೂ ಇದ್ದಿದ್ದರೆ ಎಂಬ ಆಸೆಯನ್ನು ಚಿಕ್ಕದಾಗಿಯಾದರೂ ಹುಟ್ಟಿಸದಿದ್ದರೆ ಹೇಳಿ ಬಿಡಿ. ನಾನು ನನಗೊಬ್ಬ ಇಮ್ರೋಜ್ ಬೇಕೆಂಬ ನನ್ನ ಕನಸನ್ನು ಮರೆತು ಬಿಡುತ್ತೇನೆಂದು ಶಪಥ ಮಾಡುತ್ತೇನೆ.

‍ಲೇಖಕರು avadhi

May 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. ಮುರ್ತುಜಾಬೇಗಂ

    ಹೌದು ಶ್ರೀ ನಾನು ಆ ಪುಸ್ತಕಓದಿರುವೆ. ತುಂಬಾ ಕಾಲ hangoveನಲ್ಲಿದ್ಡೆ. ಇಮ್ರೋಜ್ ರಂತಹ ಪ್ರೀತಿಸುವ ಜೀವ ಇನ್ನೊಂದಿರಲಾರದು. ಅದೇ ಹಳವಂಡದಲ್ಲಿ ಇಮ್ರೋಜ್ ಮತ್ತು ನನ್ನ ಪ್ರಶ್ನೆಗಳು ಎಂಬ ಕವನವೂ ಮೂಡಿಬಂತು

    ಪ್ರತಿಕ್ರಿಯೆ
  2. ರಾಜು ಪಾಲನಕರ

    ಶ್ರೀದೇವಿ ಮೇಡಂ ಅವಧಿಯಲ್ಲಿ ನಿಮ್ಮ ಶ್ರೀದೇವಿ ರೆಕಮೆಂಡ್ಸ್ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ ನನಗೆ ನಿಮ್ಮ ಈ ಅಂಕಣ ತುಂಬಾ ಇಷ್ಟ….ನಿಮ್ಮ ಮೆಚ್ಳಿನ ಕಾರವಾರದ ಕಾಳಿ ನದಿಯ ಸಂಗಮದ ಕುರಿತು ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು ನನಗೂ ಕೂಡ ಕಾಳಿನದಿ ಸಂಗಮ ತುಂಬಾ ಇಷ್ಟ…. ರೇಣುಕಾ ನಿಡಗುಂದಿ ಅವರ ಅಮ್ರತ ನೆನಪುಗಳು ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  3. ರಮೇಶ ಗಬ್ಬೂರ್

    ಈ ಪುಸ್ತಕ ನನ್ನಲ್ಲಿದ್ದರೂ ಓದಲಾಗಿರಲಿಲ್ಲ. ಶ್ರೀದೇವಿ ಕೆರೆಮನೆಯವರ ಪುಸ್ತಕ ಪರಿಚಯ ಮಾಡಿಕೊಟ್ಟ ಮೇಲೆ ಓದಲೇಬೇಕು ಅಂತ ಅನಿಸ್ತದೆ.. ಗರ್ಭಗುಡಿ ಪ್ರೀತಿ ಎಂಬ ಶಬ್ದ ನನ್ನನ್ನು ಸೆಳೆದಿದೆ…ಇಮ್ರೋಜ್ ನನ್ನು ನಾನು ಕಾಣಬೇಕಿದೆ…. ಹೀಗೆ ಓದಿಸುವ ಮೂಲಕ ಕೆರೆಮನೆಯವರ ಓದಿನ ಪ್ರೀತಿ ಆಕಾಶದಷ್ಟೇ ಮಿತಿ…. ಹ್ಯಾಟ್ಸಪ್ ಟು ಕೆರೆಮನೆ ಸಿರಿಯವರಿಗೆ….
    ರಮೇಶ ಗಬ್ಬೂರ್

    ಪ್ರತಿಕ್ರಿಯೆ
  4. Rekha Rani

    ಓದುತ್ತಾ ಓದುತ್ತಾ ಎಲ್ಲರನ್ನೂ ಆತ್ಮಕ್ಕೆ ಹೊದ್ದುಕೊಳ್ಳುತ್ತಾ ಕಡೆಗೆ ಶ್ರಿದೇವಿಯೂ ನಾನೇ ಆಗಿಬಿಟ್ಟೆ. ಬಹಳ ದಿನಗಳು ಬೇಕು…ಈ ಗುಂಗಿನಿಂದ ಹೊರಬರಲು.

    ಪ್ರತಿಕ್ರಿಯೆ
  5. SUDHA SHIVARAMA HEGDE

    ನಾನು ಅಮೃತಾಳ ಪ್ರೇಮದಲ್ಲಿ ಬಿದ್ದು ನನ್ನ ಪ್ರೀತಂಗಾದಷ್ಟೇ ವಯಸ್ಸಾಯಿತು…..

    ಪ್ರತಿಕ್ರಿಯೆ
  6. ಋತಊಷ್ಮ

    ಇಮ್ರೋಜ್ ನ ಭಾಷೆ ಮನಮುಟ್ಟಿತು. ಅದೇನೋ ಪ್ರೀತಿ – ಪ್ರೇಮದ ವಿಷಯಗಳು ಬಂದಾಗ ಇಡಿಯಾಗಿ ಬುದ್ಧಿ ಮತ್ತು ದೇಹ ಎಲ್ಲಿಲ್ಲದ ಲವಲವಿಕೆಯೊಂದಿಗೆ ಚಿಗುರುತ್ತದೆ. ಚಿಗುರಿ ಹೊಸತನವ ತನ್ನದಾಗಿಕೊಳ್ಳುತ್ತದೆ. ಇಮ್ರೋಜ್ ಕುತೂಹಲವನ್ನು ಮೂಡಿಸುತ್ತಿದೆ, ಬೇಗ ನನ್ನದಾಗಿಸಿಕೊಳ್ಳುವೆ. ಥ್ಯಾಂಕ್ಯೂ ಮ್ಯಾಮ್.

    ಪ್ರತಿಕ್ರಿಯೆ
  7. Maithri

    ❤ ಮತ್ತೆ ಅಮೃತಾ -ಇಮ್ರೋಜ್ ರ ನೆನಪು ಮಾಡಿ ಕೊಟ್ಟಿರಿ… ಬಹಳ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ‌ ಲೇಖನ.
    ರೇಣುಕಾ ನಿಡಗುಂದಿಯವರ “ಅಮೃತ ನೆನಪುಗಳು” ಪುಸ್ತಕ ಅದಾಗಲೇ 2 ವರುಷಗಳ ಹಿಂದೆ ಓದಿದ್ದೆ..ನೀವು ಹೇಳಿದಂತೆ.. ನನಗೂ ಇಂಥಾ ಇಮ್ರೋಜ್ ಸಿಗಬಾರದೇ ಎನ್ನುವ ಆ ಆಸೆ.. ಕಾಡದೇ ಇರಲಿಲ್ಲ.. ಪ್ರತೀ ಹೆಣ್ಣೂ ಒಬ್ಬ ಇಮ್ರೋಜ್ ನನ್ನು ಬಯಸದೇ ಇರಲಾರಳು. ಮತ್ತೊಮ್ಮೆ ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಮೇಡಮ್.❤

    ಪ್ರತಿಕ್ರಿಯೆ
  8. Vijayavaman

    ಶ್ರೀದೇವಿಯವರೇ
    ಲೇಖನ ಚೆನ್ನಾಗಿದೆ. ಆದರೆ ಉರ್ದುವಿನಲ್ಲಿ ಪ್ರೇಮಿಸಬೇಕು ಕಣ್ರೀ. ಆಗ ಇಮ್ರೋಜ್,ಸಾಹಿರ್,ಅಮ್ರತಾ, ಫೈಜ್,ಸುಧಾಮಲ್ಹೋತ್ರ ಮುಂತಾದವರು ಸಿಗ್ತಾರೆ. ಬೇಗ ಸ್ವಲ್ಪವಾದರೂ ಉರ್ದು ಕಲೀರಿ. ಚೆನ್ನಾಗಿ ಬರೀತೀರಾ. ಥ್ಯಾಂಕ್ಸ್.

    ಪ್ರತಿಕ್ರಿಯೆ
  9. Sreedhar

    ಮೇಡಂ ,

    ಲೇಖನ ತುಂಬಾ ಚೆನ್ನಾಗಿತ್ತು . ನಿಜಕ್ಕೂ ಪಾತ್ರಗಳು ಚೆನ್ನಾಗಿತ್ತು .ಅಮೃತಾ ಸುಪ್ತ ಮನಸ್ಸಿನಿಂದ ಹೋರಬಂದಳು.

    ಪ್ರತಿಕ್ರಿಯೆ
  10. Deshpande Raghavendra

    ಮನ ಕಲಕಿದ ಲೇಖನ…

    ನಾನೂ ಒಬ್ಬ ಇಮ್ರೋಜ್ ಆಗಿರುವೆನಾ? ಅಥವಾ ಆಗಬಾರದೇಕೆ ಎನ್ನುವ ಕಲ್ಪನಾ ಲೋಕದಲ್ಲಿ ತೆಲುತಿರುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: