ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಸಂಜೆ

ಆರ್ ಎನ್ ದರ್ಗಾದವರ

ಆ ಸಂಜೆ…
ಮೋಡ ಮಳೆಯ ಸುರಿಸದಿದ್ದರೆ,
ನಾನಿನ್ನ ತೆಕ್ಕೆಯಲ್ಲಿ ತೊಯ್ದ ಹಕ್ಕಿ ಮರಿಯಂತೆ ಎದೆ ಕೊಟ್ಟು ಮಲಗುತ್ತಿರಲಿಲ್ಲ
ನಿನ್ನ ಎದೆಬಡಿತ ಪ್ರೇಮ ಸಂಗೀತವೆಂದು
ಪುಂಗನುಪುಂಗವಾಗಿ ಹಾಡುತ್ತಿರಲಿಲ್ಲ
ಇತ್ತೀಚಿಗೆ,
ನಿನ್ನ ಗಾಜಿನ ಬಳೆಯ ಸಪ್ಪಳವೂ
ಅಲ್ಹಾನ ಕರೆಯಂತೆ ಕೇಳುತ್ತಿದೆ
ಕಾಡಿಗೆ ಲೇಪಿಸಿದ ನಿನ್ನ ಕಣ್ಸನ್ನೆಯೂ
ಸಂಜೆಗತ್ತಲು ದೂರ ತಳ್ಳಲು ಯತ್ನಿಸುವ
ವಿದ್ಯುತ್ ಕಂಬಕ್ಕೆ ತಿಕ್ಕಿ ಹರಿತವಾದ
ಆಯುಧಗಳನ್ನು ಕೆಣಕಿಸುವಂತಿದೆ…!
ಮಕರಂಧ ಕಂಡೊಡನೆ ಪ್ರೇಮದಿಂದ
ಗುಯ್ಯಿಗುಟ್ಟುವ ದುಂಬಿಹುಳುವೀಗ
ಜಿಹಾದ್ ಎಂದು ಬಡೆದುಕೊಳ್ಳುತ್ತಿದೆ
ಅದಕ್ಕೇನು ಗೊತ್ತು…?
ಪ್ರೇಮಕ್ಕೆ ಧರ್ಮದ ಲೇಬಲ್ ನ್ನು ಅಂಟಿಸಿಕೊಳ್ಳಲು
ಮೂರು ಬೆರಳಗಲ ಹಣೆಯೂ ಇಲ್ಲ,
ಗುರುತಿಸುವದಕ್ಕೆ ಬುಟ್ಟಿಯಾಕೃತಿ
ಟೋಪಿಯು ಹಾಕಿಲ್ಲವೆಂದು
ಅಸಲಿಗೆ;
ಅದು ನಿರ್ವಿಕಾರವೆಂದು…!!

ಆ ಸಂಜೆ,
ಮೇಣದ ಬೆಳಕು ಚಲ್ಲಾಡುತ್ತಾ,
ಘಂಟೆ ಸದ್ದಿಗೆ ಅಭಿಮುಖವಾಗಿ ಬರುತ್ತಿದ್ದರೆ
ಹಠ ಹಿಡಿದು ಜಡಿಯುವ ಮಳೆಯಲ್ಲೆ
ಆಜಾನ್ ಸದ್ದಿಗೆ ಬೆದರಿ ನೀ ಅವಿತುಕೊಳ್ಳದಿದ್ದರೆ,
ಒಂದಿಷ್ಟು ಬೆಚ್ಚನೆ ಶಾಖವನ್ನಾದರು ಸಿಕ್ಕಿಸಿಕೊಳ್ಳುತ್ತಾ,
ಇಬ್ಬರಲಿದ್ದ ಭಯವಾದರೂ ದೂಡಬಹುದಿತ್ತು
ಬಹುಶಃ
ಆಜಾನ್ ಕೂಡ ಪ್ರತಿಭಟಿಸುವ ದನಿಯಂತೆ
ಕೇಳಿಸಿರಬೇಕು

ಕೆಂಡದಂತೆ ಉರಿಯುವ ಸೂರ್ಯನಿಗೂ,
ಕಿರುಬೆರಳ ಉಗುರಿನಂತಿರುವ ಚಂದ್ರನಿಗೂ ಜಾತಿಯ ಸ್ಟಿಕ್ಕರ್
ಅಂಟಿಸುವ ದೊಡ್ಡಸ್ಥಿಕೆಯ ಮನುಷ್ಯನಿಗೇನು ಗೊತ್ತು
ಪ್ರೇಮವೂ ಮುಂದೊಂದು ದಿನ
ಕೋರ್ಟಿನಲಿ ದಾವೆ ಹೂಡುವ ಕಾಲ
ಸಮೀಪಿಸುವದೆಂದು

ಆ ಸಂಜೆ,
ಬುರ್ಖಾ ತೊಟ್ಟು ನೀ ಬರದಿದ್ದರೆ,
ತಿಲಕವಿಟ್ಟು ನಾನೇಕೆ ಬರುತ್ತಿದ್ದೆ…?
ಪ್ರೇಮವೂ ತಾತ್ವಿಕವಾದಷ್ಟು
ನಾವಿಬ್ಬರೂ
ನೀತಿಗೆಟ್ಟವರಾಗುವ ಸಂಭವ ಹೆಚ್ಚು
ಮುಗಿಲೆತ್ತರ ಹಾರಿಸಲು ಪ್ರೇಮಕ್ಕೂ
ಒಂದು “ಬಣ್ಣವಲ್ಲದ ಬಣ್ಣದಿಂದ’
ಬಾವುಟ ಮಾಡಿ,
ನನ್ನೂರ ಹೃದಯಭಾಗದಲ್ಲಿ ಆಳ ತೆಗೆದು
ಕೀಳದಂತೆ ನೆಡಬೇಕು…
ಆ ಉತ್ತುಂಗದ ಮೊನಚಿನಲಿ
ಪ್ರೇಮವಾದರೂ ತೇಲಾಡಲಿ.

‍ಲೇಖಕರು Avadhi

3 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading