ಹೊಸ ಕಥೆಯೊಂದಿಗೆ ಟಿ ಎಸ್ ಶ್ರವಣ ಕುಮಾರಿ..

ನನ್ನೊಳಗೆ ಅವಳಿದ್ದು ನಿನ್ನೊಳಗೆ ಅವನಿದ್ದು…

ಟಿ ಎಸ್ ಶ್ರವಣ ಕುಮಾರಿ

ನಿದ್ರೆ ಬಾರದೆ ಹೊರಳಾಡುತ್ತಿದ್ದ ಲಾವಣ್ಯ ಮಗ್ಗುಲು ಬದಲಿಸಿ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಮಿಹಿರನನ್ನೇ ನೋಡಿದಳು. ಎರಡು ವರ್ಷದ ಮಗ ಅದೆಷ್ಟು ನೆಮ್ಮದಿಯಿಂದ ಮಲಗಿದ್ದ… ಸರಿದಿದ್ದ ಹಚ್ಚಡವನ್ನು ಸರಿಮಾಡಿ ತಲೆಯನ್ನೊಮ್ಮೆ ಸವರಿ ಅವನನ್ನೇ ನೋಡಿದಳು. ಮುದ್ದಾಗಿದ್ದರೂ, ಯಾರ ಹೋಲಿಕೆಯೆಂದು ಸ್ಪಷ್ಟವಾಗಿ ತಿಳಿಯುವುದಿಲ್ಲ… ಒಮ್ಮೊಮ್ಮೆ ತನ್ನಂತೆ, ಒಮ್ಮೊಮ್ಮೆ ಆನಂದನಂತೆ, ಕೆಲವೊಮ್ಮೆ ಯಾರಹಾಗೂ ಅನ್ನಿಸುವುದಿಲ್ಲ. ಇಂದೇಕೋ ನೋಡುತ್ತಿರುವಾಗ ʻಅವನʼ ಹಾಗೆ ಕಾಣುತ್ತಿದ್ದಾನೆಯೇ ಅನ್ನಿಸಿ ಒಂದು ಘಳಿಗೆ ಭಯವಾಯಿತು.

ತಕ್ಷಣವೇ ʻಹೇಗೆ ಸಾಧ್ಯ? ಏನೂ ಆಗಿಲ್ಲದೇ ಇರುವಾಗʼ ಅನ್ನಿಸಿ ಜೋರಾಗಿ ಆಕಳಿಸಿ ಮತ್ತೆ ಪಕ್ಕಕ್ಕೆ ತಿರುಗಿದಳು. ಗಂಟೆ ಹನ್ನೊಂದಾಯಿತೇನೋ… ಹಾಲಿನ ಗಡಿಯಾರ ಬಾರಿಸಿತಲ್ಲ… ಆನಂದ ಎದ್ದು ಬಾತ್ರೂಮಿಗೆ ಹೋದನೇನೋ. ಫ್ಲಶ್ ಆದ ಸದ್ದು… ಬಾಗಿಲೆಳೆದಂತಾಯಿತು, ಓದಿದ್ದು ಮುಗಿಯಿತೇನೋ, ಲೈಟೂ ಆರಿತು… ಹೊರಗೆ ಬಂದ ಸದ್ದು, ಇಲ್ಲಿಗೆ ಬರುವನೇ??! ಎದೆಬಡಿತ ಹೆಚ್ಚಾಯಿತು. ಕಾತರದಿಂದ ಬಾಗಿಲ ಕಡೆಗೆ ಕಣ್ಣು ನೆಟ್ಟಳು.

ಮಸಕು ಬೆಳಕಿನಲ್ಲೇ ಅಡುಗೆಮನೆಯ ಕಡೆಗೆ ಹೋದದ್ದು ಕಾಣಿಸಿತು. ನೀರು ಬಗ್ಗಿಸಿಕೊಂಡು ಕುಡಿದನೇನೋ, ಲೋಟ ಕೆಳಗಿಟ್ಟ ಸದ್ದು. ಈಗ ಬರುವನೇ? ಎದ್ದುಕುಳಿತು ತೆರೆದ ಬಾಗಿಲಿನ ಕಡೆಗೇ ಕಣ್ಣು ನೆಟ್ಟಳು. ಏನೋ ನಿರೀಕ್ಷೆಯಿಂದ ಮೈಯೆಲ್ಲಾ, ಮುಖವೆಲ್ಲಾ ಬಿಸಿಯಾಯಿತು. ಹೊರಬಂದ ಹೆಜ್ಜೆಯ ಸದ್ದು ನಿಧಾನವಾಗಿ ದೂರಾಯಿತು. ಅವನ ಕೋಣೆಯ ಬಾಗಿಲು ಮುಚ್ಚಿತು. ನಿಧಾನವಾಗಿ ಲಾವಣ್ಯಳ ಮೈ ಹಾಸಿಗೆಗೆ ಜಾರಿತು, ಕಣ್ಣಲ್ಲಿ ನೀರು ತುಂಬತೊಡಗಿತು. ಎಷ್ಟು ದಿನಗಳು ಹೀಗೆ? ಮದುವೆಯಾದ ಹೊಸತಿನ ಮಧುಚಂದ್ರದ ದಿನಗಳು ಅವಳಿಗೆ ಮರೆತೇ ಹೋದ ಹಾಗಿದೆ… ಇದನ್ನು ಹೇಗಾದರೂ ಸರಿಮಾಡಿಕೊಳ್ಳಲೇ ಬೇಕು. ಆದರೆ ಹೇಗೆಂದೇ ತಿಳಿಯುತ್ತಿಲ್ಲ. ಮಾತಿಗೇ ಸಿಗುವುದಿಲ್ಲವಲ್ಲ ಅವನು…

‘ನಂಗೆ ನಿಮ್ಮನ್ನ ಮದ್ವೆಯಾಗೋಣ ಅನ್ನಿಸ್ತಿದೆ. ಇದ್ರಲ್ಲಿ ಒತ್ತಾಯ ಏನೂ ಇಲ್ಲ; ನಿಮ್ಮಭಿಪ್ರಾಯ ತಿಳ್ಸಿ’ ಅವತ್ತು ಕಾಫಿ ಡೇನಲ್ಲಿ ಕೂತು ಬಿಸಿಬಿಸಿಲಾರ್ಜ್ ಕಾಫಿ ಹೀರುವಾಗ ಆನಂದ ಸೀದಾ ಕೇಳಿದ್ದ. ಥಟಕ್ಕನೆ ಬಿಸಿಕಾಫಿ ಬಾಯಿತುಂಬಿಕೊಂಡು ನಾಲಗೆಯೆಲ್ಲಾ ಸುಟ್ಟು ಒದ್ದಾಡಿ, ಅರ್ಥವಾಗದವಳಂತೆ ಲಾವಣ್ಯ ಅವನನ್ನೇ ನೋಡಿದ್ದಳು. ಅವನೇ ಮಾತು ಮುಂದುವರೆಸಿದ್ದ ‘ನಾವಿಬ್ರೂ ನಮ್ಮಿಬ್ರ ಚರಿತ್ರೇನ ಕೆದ್ಕೋದು ಬೇಡ. ಅದು ಅಪ್ರಸ್ತುತ ಅನ್ಸುತ್ತೆ. ಅದೇನೇ ಇದ್ರೂ, ಇಬ್ರೂ ಅದನ್ನ ಮರ್ತುಬಿಡೋಣ. ಹೊಸ ಜೀವನ ಶುರುಮಾಡೋಣ. ಯೋಚ್ನೆಮಾಡಿ, ನಿಮ್ ನಿರ್ಧಾರ ಹೇಳಿ’ ಎಂದ. ಬಿಸಿ ಕಾಫಿ ತಟಕ್ಕನೆ ಕುಡಿದ ಬಾಯಿ ಇನ್ನೂ ಉರಿಯುತ್ತಿತ್ತು. ಒಂದಷ್ಟು ಹೊತ್ತು ಇಬ್ಬರ ನಡುವೆಯೂ ಮಾತಿಲ್ಲ. ಹೀಗೇ ಕುಳಿತು ತುಂಬಾ ಹೊತ್ತಾಯಿತೇನೋ ಅನ್ನಿಸಿತು. ‘ಹೊರಡೋಣವಾ’ ಎಂದಾಗ ‘ಸರಿ’ ಎಂದೆದ್ದಿದ್ದ.

ಅಂದು ರಾತ್ರಿ ಲಾವಣ್ಯ ಬಹಳ ಹೊತ್ತು ನಿದ್ರೆ ಬಾರದೆ ಯೋಚನೆಗೆ ಬಿದ್ದಿದ್ದಳು. ಹಳೆಯದನ್ನೆಲ್ಲಾ ಮರೆಯುವುದು ಸಾಧ್ಯವೇ? ಅಷ್ಟು ಸುಲಭವೇ? ದೂರಾಗಿ ಐದು ವರ್ಷವಾದರೂ ಇನ್ನೂ ʻಅವನʼ ನೆನಪು ಅಳಿಸಿಲ್ಲ. ದೂರಾದ ಕಾರಣವಾದರೂ ಎಂಥದು… ಆ ದಿನ… ‘ನಾಳೆ ಭಾನುವಾರ ಬೃಂದಾವನ ಸುತ್ತಿ ಬರೋಣ್ವಾ’ ಎಂದಿದ್ದ ಅವನು. ಇವಳೂ ಖುಷಿಯಾಗಿ ಹೊರಟಿದ್ದಳು. ಆಗ ಅಪ್ಪ ಅಮ್ಮ ಇನ್ನೂ ಊರಲ್ಲಿದ್ದು ಕೆಲಸಕ್ಕಾಗಿ ಇವಳು ಬೆಂಗಳೂರಿಗೆ ಬಂದು ಪಿ.ಜಿ.ಯಲ್ಲಿದ್ದಿದ್ದು. ಬೈಕಿನಲ್ಲಿ ಬೆಳಗ್ಗೆ ಬೆಂಗಳೂರಿಂದ ಹೊರಟವರು ದಾರಿಯಲ್ಲಿ ತಿಂಡಿ ತಿಂದು, ಕೊಕ್ಕರೆ ಬೆಳ್ಳೂರಲ್ಲಿ ಒಂದಷ್ಟು ಕಾಲ ಕಾಳೆದು ಬಲಮುರಿಗೆ ಹೋಗಿದ್ದರು.

ನೀರಲ್ಲಿಸಾಕಷ್ಟು ಆಟವಾಡಿ ಸಂಜೆ ನಾಲ್ಕು ಗಂಟೆಗೆ ಕೆ.ಆರ್.ಎಸ್. ಸೇರಿದ್ದರು. ಸುತ್ತ ಲಕ್ಷ ಜನವಿದ್ದರೂ, ಇಡೀ ಬೃಂದಾವನದಲ್ಲಿ ಓಡಾಡುತ್ತಿರುವವರು ನಾವಿಬ್ಬರೇ ಅನ್ನುವಷ್ಟು ಸುಂದರವಾಗಿ ಕಳೆದ ದಿನವನ್ನು ಮರೆಯುವುದು ಅಷ್ಟು ಸುಲಭವೇ? ಆ ಜನಜಂಗುಳಿಯಲ್ಲೂ ಏಕಾಂತವನ್ನರಸಿ ಮುದ್ದಾಡಿದ್ದರು, ತಬ್ಬಿದ್ದರು… ಮನದ ಮಾತುಗಳನ್ನಾಡಿದ್ದರು. ಮುಂದಿನ ಜೀವನವೆಲ್ಲಾ ಈ ಸಂಗೀತ ಕಾರಂಜಿಯಷ್ಟೇ ಸುಂದರ ಅನ್ನಿಸಿಬಿಟ್ಟಿತ್ತು. ಇಬ್ಬರ ಭಾವನೆಗಳು ಅದೆಷ್ಟು ಚೆನ್ನಾಗಿ ಬೆರೆತುಹೋಗಿದ್ದವು! ಇನ್ನು ತಡಮಾಡದೆ ಆದಷ್ಟು ಬೇಗ ಮನೆಯವರನ್ನೊಪ್ಪಿಸಿ ಮದುವೆಯಾಗಿಬಿಡಬೇಕು ಎಂದು ತೀರ್ಮಾನ ಮಾಡಿದ್ದರು.

ಎರಡು ವರ್ಷದಿಂದ ಬೆಳೆದುಬಂದ ಸಂಬಂಧವನ್ನು ಸ್ಥಿರವಾಗಿಸಿಬಿಡಬೇಕು ಎಂದೆನ್ನಿಸಿತ್ತು. ರಾತ್ರಿ ಎಂಟು ಗಂಟೆಯಾಗಿತ್ತೇನೋ… ಅವನು ಕೇಳಿದ ‘ಈ ರಾತ್ರಿ ಎಷ್ಟು ಚೆನ್ನಾಗಿದೆ ನೋಡು, ಇಲ್ಲೇ ಎಲ್ಲಾದ್ರೂ ಉಳ್ಕೊಂಡು ಬೆಳಗ್ಗೆ ಹೊರಡೋಣ್ವಾ?’ ಅವನ ಕಣ್ಣುಗಳಲ್ಲಿ ದೀಪ ಉರಿಯುತ್ತಿತ್ತು! ಆದರೆ ತನಗ್ಯಾಕೋ ಅಕಾರಣ ಭಯ. ಅಕಾರಣವೇಕೆ… ನಿಜವಾಗಿಯೂ ಭಯವೇ… ತಮ್ಮಿಬ್ಬರ ನಡುವೆ ಏನೋ ನಡೆದೇ ಹೋಗಿಬಿಟ್ಟರೇ… ಅವನ ನಿರೀಕ್ಷೆ ಅದೇ ಅಲ್ಲವೇ? ಮದುವೆಯಾಗದೆ… ಅಷ್ಟೊಂದು ಮುಂದುವರಿಯುವುದು ಬೇಡ ಅನ್ನಿಸಿಬಿಟ್ಟಿತು. ಅವನ ಕಣ್ಣುಗಳನ್ನೆದುರಿಸಲಾಗದೆ ‘ಬೇಡ, ವಾಪಸ್ ಹೋಗೋಣ. ಈಗ ಹೊರಟ್ರೂ ರಾತ್ರಿ ಹನ್ನೊಂದು, ಹನ್ನೆರ್ಡು ಗಂಟೆಯೊಳ್ಗೆ ತಲುಪ್ಕೋತೀವಿ. ಹೊರಟ್ಬಿಡೋಣ’ ಎಂದಿದ್ದಳು. ‘ಯಾಕೆ ನನ್ನಲ್ಲಿ ನಂಬ್ಕೆ ಇಲ್ವಾ?’ ಅಂದ.

ಏನೇನೋ ಅನುನಯಿಸಿದ. ತಾನೊಪ್ಪಲಿಲ್ಲ. ‘ಸರಿ’ ಎಂದವನೇ ಮತ್ತೇನೂ ಹೇಳದೆ ಹೊರಬಂದು ಬೈಕ್ ಸ್ಟಾರ್ಟ್ ಮಾಡಿದ. ಹಿಂದೆ ಕೂತ ತಕ್ಷಣ ದಾರಿಯಲ್ಲಿ ಒಂದೂ ಮಾತಾಡದೆ, ಒಂದು ಕಡೆಯೂ ನಿಲ್ಲದೆ ಸೀದಾ ಹತ್ತೂವರೆಗೆ ಬಂದು ಪಿ.ಜಿ.ಯ ಹತ್ತಿರ ಇಳಿಸಿದವನೇ ‘ಥ್ಯಾಂಕ್ಸ್ ಫಾರ್ ಎವ್ವೆರಿಥಿಂಗ್’ ಎಂದವನೇ ತಿರುಗಿ ಕೂಡಾ ನೋಡದೆ ಹೊರಟೇಬಿಟ್ಟ. ಅಷ್ಟೇ… ಮತ್ತೆಂದೂ ಕಾಣಲೇ ಇಲ್ಲ. ಅವನ ಪಿ.ಜಿ.ಗೆ ತಾನೆಂದೂ ಹೋಗಿರಲಿಲ್ಲ, ಬೊಮ್ಮನಹಳ್ಳಿಯಲ್ಲಿ ಕಂಪನಿಯ ಹತ್ತಿರವೇ ಅಂದಿದ್ದ ಅಷ್ಟೇ. ಫೋನ್ ನಾಟ್ ರೀಚಬಲ್ ಆಗಿತ್ತು.

ಒಂದಷ್ಟು ದಿನ ಕಳೆದು ಅವನಿದ್ದ ಕಂಪನಿಗೆ ಕರೆ ಮಾಡಿದರೆ ‘ಹಿ ಹ್ಯಾಸ್ ಲೆಫ್ಟ್ ದಿ ಜಾಬ್’ ಎಂದು ಫೋನ್ ಕೆಳಗಿಟ್ಟಿದ್ದರು. ವಿಳಾಸವಿಲ್ಲದವನನ್ನು ಹುಡುಕುವುದಾದರೂ ಹೇಗೆ?! ನಿರೀಕ್ಷೆಯಲ್ಲೇ ಎಷ್ಟೋ ತಿಂಗಳುಗಳು ಕಳೆದುಹೋದವು… ‘ಆಡಿದ ಮಾತುಗಳಿಗೆ, ಕಳೆದ ಕ್ಷಣಗಳಿಗೆ ಅಷ್ಟೇ ಅರ್ಥವೇ? ಅವನಿಗೆ ಅಷ್ಟೊಂದು ಅವಮಾನವೆನ್ನಿಸುವಂಥದೇನನ್ನು ಮಾತಾಡಿದ್ದೆ. ನನ್ನ ಮಾತಲ್ಲಿ ಏನು ತಪ್ಪಿತ್ತು?’ ಅನ್ನಿಸಿ ಎದ್ದು ಕುಳಿತಳು. ಹಳೆಯ ನೆನಪುಗಳ ಭಾರವನ್ನೆಲ್ಲಾ ಕೊಡವಿಬಿಡಬೇಕೆನ್ನುವ ಹಾಗೆ ತಲೆಯನ್ನು ಕೊಡವಿದಳು. ಇಲ್ಲ… ನಿದ್ರೆ ಹತ್ತಿರಕ್ಕೂ ಸುಳಿಯುತ್ತಿಲ್ಲ.

ಆನಂದನ ರೂಮಿನ ಬಾಗಿಲು ತೆರೆದ ಸದ್ದು ಕೇಳಿಸಿತು… ಹೊರಗೆ ಬಂದನೇನೋ…. ಈಗಿಲ್ಲಿ ಬರ್ತಾನಾ!! ಹೀಗೆ ಕೂತಿದ್ದರೆ ಸರಿಯಿಲ್ಲ ಎಂದುಕೊಂಡು ಮಲಗಿ ನಿದ್ರೆಬಂದವಳಂತೆ ನಟಿಸತೊಡಗಿದಳು… ವರಾಂಡಾಗೆ ಹೋಗಿ ಬಾಗಿಲ ಬೀಗ ಹಾಕಿದ ಸದ್ದು ಕೇಳಿತು… ಓ! ಬೀಗ ಹಾಕುವುದು ಮರೆತಿದ್ದನೇನೋ… ಮತ್ತೆ ಹೋಗಿ ಕೋಣೆಯ ಬಾಗಿಲು ಮುಂದೂಡಿದ… ಮಲಗಿದನೇನೋ… ಮಂಚ ಕಿರ್ರೆಂದ ಸದ್ದು ಕೇಳಿಸಿತು. ನಿಟ್ಟುಸಿರಿಟ್ಟು ಮೇಲೆದ್ದು ಕಿಟಕಿಯ ಬಳಿಗೆ ಹೋಗಿ ನಿಂತಳು.

ಆನಂದ ಸಿಕ್ಕಿದ್ದಾದರೂ ಹೇಗೆ – ಆಫೀಸಿಗೆ ಹೊಸತಾಗಿ ಸೇರಿದವನು ಲಾವಣ್ಯಳ ಫ್ಲೋರಿಗೇ ಬಂದಾಗ ಗಡ್ಡ ಮೀಸೆ ಬಿಟ್ಟುಕೊಂಡು ಎಷ್ಟೋ ವರ್ಷಗಳ ವಿರಹಿಯ ಹಾಗೆ ಕಂಡಿದ್ದ. ಯಾರೊಂದಿಗೂ ಹೆಚ್ಚಿಗೆ ಮಾತಿಲ್ಲ, ತಾನಾಯಿತು, ತನ್ನ ಕೆಲಸವಾಯಿತು ಅನ್ನುವ ಹಾಗೇ ಇದ್ದ. ಬಲೆ ಬುದ್ಧಿವಂತ! ತುಂಬಾ ಬೇಗ ಮೇಲಿನವರ ವಿಶ್ವಾಸ ಗಳಿಸಿಕೊಂಡಿದ್ದ. ಅವನ ಟೀಮಿನ ಸುಪರ್ಣ ಲಾವಣ್ಯಳ ಗೆಳತಿ. ಲಾವಣ್ಯಳಿಗೆ ಯಾರ ಸುದ್ಧಿಯೂ ಬೇಡವಾದರೆ, ಸುಪರ್ಣಳಿಗೆ ತನ್ನ ಸುತ್ತ ಮುತ್ತ ನಡೆಯುವ ಪ್ರತಿಯೊಂದರ ವಿವರವೂ ಬೇಕು. ಹಾಗೇ ಇವನ ಜಾತಕವನ್ನೂ ಜಾಲಾಡಿ ತಿಳಿದುಕೊಂಡಿದ್ದಳು.

ಎಂ.ಟೆಕ್. ಅಂತೆ, ಇಂಜಿನೀರಿಂಗ್ ಕಾಲೇಜ್ ಲೆಕ್ಚರರ್ ಆಗಿದ್ದನಂತೆ. ಎಕ್ಸ್ಟರ್ನಲ್ಆಗಿ ಕನ್ನಡ ಎಂ.ಎ. ಬೇರೆ ಮಾಡಿದಾನಂತೆ. ಸ್ಟೂಡೆಂಟ್ ಯಾರೋ ಒಬ್ಳನ್ನ ತುಂಬಾ ಪ್ರೀತಿಸ್ತಿದ್ನಂತೆ. ಅವಳ ಬಗ್ಗೆ ಪ್ರೇಮಗೀತೆಗಳನ್ನು ಬರೀತಿದ್ನಂತೆ. ಪೇಪರ್ನಲ್ಲೆಲ್ಲಾ ಪ್ರಕಟವಾಗ್ತಿದ್ವಂತೆ. ಅವಳಪ್ಪ ಈ ಮದ್ವೆಗೆ ಒಪ್ಪದೆ ಬಲವಂತವಾಗಿ ಯಾರೋ ಅಮೇರಿಕಾದಲ್ಲಿದ್ದ ಹುಡುಗನಿಗೆ ಮದುವೆ ಮಾಡಿಕೊಟ್ರಂತೆ. ಅದಕ್ಕೇ ಇವ್ನಿಗೆ ಆ ಕಾಲೇಜಲ್ಲಿರೋಕೇ ಬೇಜಾರಾಗಿ ಈ ಕಂಪ್ನಿಗೆ ಬಂದು ಸೇರಿಕೊಂಡ್ನಂತೆ. ಅದೆಲ್ಲಿಂದ ಇಂತಹ ವಿಷಯಗಳ್ನೆಲ್ಲಾ ಕಲೆಹಾಕ್ತಾಳೋ?!

ದಿನಾ ಸಂಜೆ ಆಫೀಸಿನ ಪಕ್ಕದ ʻಕಾಫಿ ಡೇʼನಲ್ಲಿ ಲಾವಣ್ಯಾನೂ, ಸುಪರ್ಣಾನೂ ಅರ್ಧ ಗಂಟೆ ಕುಳಿತು ಕಾಫಿ ಕುಡಿಯುತ್ತಾ ಒಂದಷ್ಟು ಹರಟಿ ಏಳು ಗಂಟೆಗೆ ತಂತಮ್ಮ ಜಾಗಕ್ಕೆ ಹೊರಡುವ ಕ್ಯಾಬಿಗೆ ಹತ್ತಿಕೊಳ್ಳುವ ರೂಢಿ. ಹಾಗೆ ಹರಟುತ್ತಿರುವಾಗಲೇ ಅವನ ಬಗ್ಗೆ ತಿಳಿದಿದ್ದ ಒಂದೊಂದೇ ವಿಷಯಗಳನ್ನುದಿನಕ್ಕೊಂದು ಕತೆಯ ಹಾಗೆ ಹೇಳಿದ್ದಳು. ʻಇದು ತನಗೆ ಬೇಡದ ವಿಷಯ, ತನ್ನದೇ ಸಾಕಷ್ಟಿದೆʼ ಎಂದುಕೊಂಡರೂ ಲಾವಣ್ಯ ಸುಮ್ಮನೆ ಹ್ಞೂಂಗುಟ್ಟಿದ್ದಳು. ಅಂದೂ ಎಂದಿನ ಹಾಗೇ ಸುಪರ್ಣಳಿಗೆ ಕಾಯುತ್ತಾ ಕುಳಿತಿದ್ದಾಗ ಆನಂದ ಅವಳ ಮುಂದೆ ಬಂದು ಕುಳಿತು ‘ನಾನಿಲ್ಲಿ ಕೂತರೆ ನಿಮಗೆ ತೊಂದ್ರೇನಾ?’ ಎಂದು ಕೇಳಿದ್ದ.

ಸ್ವಲ್ಪ ಗಲಿಬಿಲಿಗೊಂಡವಳು ‘ಹಾಗೇನಿಲ್ಲ, ಧಾರಾಳವಾಗಿ ಕೂಡಿ’ ಎಂದಿದ್ದಳು. ತನ್ನ ಪರಿಚಯವನ್ನು ಹೇಳಿಕೊಂಡು ‘ದಿನಾ ನಿಮ್ಮನ್ನ ನೋಡ್ತಿರ್ತೀನಿ, ನಿಮ್ಮ ಪರಿಚಯ ಮಾಡ್ಕೋಬೋದಾ’ ಎಂದ. ಶಿಷ್ಟಾಚಾರಕ್ಕಾಗಿ ಲಾವಣ್ಯಳೂ ತನ್ನ ಪರಿಚಯ ಹೇಳಿಕೊಂಡಿದ್ದಳು. ಅಷ್ಟರಲ್ಲಿ ಸುಪರ್ಣಳೂ ಬಂದು ಸೇರಿಕೊಂಡಳು. ಆ ದಿನ ಮೂವರೂ ಒಂದಷ್ಟು ಕಾಲ ಹರಟಿದರು. ಅವನೆದ್ದು ಹೊರಟ ಮೇಲೆ ‘ಇವನೆಲ್ಲಿ ಸಿಕ್ಕಾಕೊಂಡ ನಿಂಗೆ’ ಎಂದ ಸುಪರ್ಣಳಿಗೆ ‘ಹೀಗಾಯ್ತು…’ ಎಂದು ಹೇಳಿ ತಮ್ಮ ಮಾಮೂಲಿನ ಹರಟೆಯನ್ನು ಮುಂದುವರೆಸಿದರು.

ಅವನು ಹೀಗೆ ಆಗೀಗ ಬಂದು ಇವರಿಬ್ಬರೊಡನೆ ಕಾಫಿ ಹೀರುತ್ತಾ ಹರಟುವುದು ಶುರುವಾಯಿತು. ಹಾಗೇ ಇಬ್ಬರಲ್ಲಿ ಯಾರೋ ಒಬ್ಬರು ಬಂದಿಲ್ಲದಾಗ ಇನ್ನೊಬ್ಬರು ಕಂಪೆನಿಗಾಗಿ ತಾವೇ ಕರೆಯುವುದೂ ಆರಂಭವಾಯಿತು. ಹೀಗೆ ಕುಳಿತಿದ್ದ ಒಂದು ದಿನವೇ ಅವನು ಲಾವಣ್ಯಳನ್ನು ‘ನಂಗೆ ನಿಮ್ಮನ್ನ ಮದ್ವೆಯಾಗೋಣ ಅನ್ನಿಸ್ತಿದೆ’ ಎಂದಿದ್ದಿದ್ದು. ಒಂದಷ್ಟು ದಿನ ಯೋಚನೆಗೆ ಬಿದ್ದ ಲಾವಣ್ಯಳಿಗೆ ಆನಂದ ಹೇಳುತ್ತಿರುವುದರಲ್ಲೂ ʻಏನೂ ಅಂತ ತಪ್ಪಿಲ್ಲʼ ಅನ್ನಿಸತೊಡಗಿತು.

ಐದು ವರ್ಷ ಕಳೆದರೂ ಇನ್ನೂ ಒಂದು ಸಲವೂ ತನ್ನನ್ನು ಯಾವ ರೀತಿಯಲ್ಲೂ ಸಂಪರ್ಕಿಸದವನನ್ನು ಇನ್ನೆಷ್ಟು ಕಾಲ ಕಾಯಬಹುದು. ಹೀಗೆ ಇಷ್ಟೊಂದು ಕಾಲ ಕಳೆದಮೇಲೂ ಅವನು ಮದುವೆಯಾಗದೇ ಉಳಿದುಕೊಂಡಿರುತ್ತಾನೆಯೇ. ತನ್ನದು ಅರ್ಥವಿಲ್ಲದ ನಿರೀಕ್ಷೆಯೇನೋ ಅನ್ನಿಸಿತು. ಸುಪರ್ಣಾಳನ್ನು ಇದರ ಬಗ್ಗೆ ಕೇಳಿದಳು. ‘ವಾರೇವಾ… ಅವನು ನಮ್ಜೊತೆ ಕಾಫಿ ಕುಡಿಯಕ್ಕೆ ಬರಕ್ಕೆ ಶುರುಮಾಡ್ದಾಗ್ಲೇ ನಂಗೇನೋ ಅನುಮಾನವಿತ್ತು. ಅದೀಗ ನಿಜವಾಯ್ತು. ನೀನು ಖಂಡಿತಾ ಇದ್ರ ಬಗ್ಗೆ ಸೀರಿಯಸ್ ಆಗಿ ಯೋಚ್ನೆ ಮಾಡು. ಯಾಕಾಗ್ಬಾರ್ದು? ಈಗ ಹಿಂದೆ ಯಾವಾಗ್ಲೋ ಏನೋ ನಡ್ದಿದ್ದಕ್ಕೆಲ್ಲಾ ಯಾರು ತಲೆಕೆಡಿಸ್ಕೋತಾರೆ? ಅವ್ನು ಹೇಗೂ ಅದು ಅಪ್ರಸ್ತುತ ಅಂದಿದಾನಲ್ಲ; ನೀನೂ ಅವನ ಚರಿತ್ರೇನ ಕೆದಕಕ್ಕೆ ಹೋಗ್ಬೇಡ. ನಾನೆಷ್ಟೋ ಸಲ ನಿಂಗೆ ಹೇಳಿದ್ದೆ. ನೀನೇ ಸುಮ್ನೆ ವೇಸ್ಟ್ ಆಗಿ ಇಷ್ಟುದಿನ ಕಾಲ ಕಳ್ದೆ. ಹೋಗ್ಲಿಬಿಡು. ಇವ್ನು ಸಿಗೋತಂಕ ನೀನು ಕಾಯ್ಬೇಕಿತ್ತೇನೋ. ಈಗ ಆ ಟೈಮ್ ಬಂದಿದ್ಯಲ್ಲಾ. ಗೋ ಅಹೆಡ್’ ಎಂದು ಹೆಬ್ಬೆಟ್ಟು ಮೇಲೆತ್ತಿದ್ದಳು.

ಮನೆಯಲ್ಲಿ ಸ್ವಲ್ಪ ʻಯಾರು, ಏನು, ಎತ್ತ…ʼ ಎಂದು ವಿಚಾರಣೆಗಳು ನಡೆದು ಅಷ್ಟೇನು ಹಾರ್ದಿಕವಾಗಲ್ಲದಿದ್ದರೂ, ಹೇಗೋ ಮದುವೆಯಾಗಕ್ಕೆ ಮನಸ್ಸು ಮಾಡಿದಾಳಲ್ಲ ಎಂದು ಒಪ್ಪಿದ್ದರು. ಅವನ ಮನೆಯಲ್ಲಾದರೂ ಅಷ್ಟೇ. ಅವರಮ್ಮನಿಗೆ ತಮ್ಮದೇ ʻಜನʼವನ್ನು ತರಬೇಕೆಂಬ ಅಭಿಲಾಷೆ ಇತ್ತೇನೋ, ಮಗನಿಗೆ ಎದುರಾಡಲಾಗದೆ, ಬಲವಂತಕ್ಕೆ ಅನ್ನುವ ಹಾಗೆ ಒಪ್ಪಿಕೊಂಡಿದ್ದರು. ಮದುವೆಯಾಗಿ ಹೋಗಿತ್ತು….

ಹೊಸತರಲ್ಲಿ ಅತ್ತೆಗಿನ್ನೂ ಕೋಪ ಕಮ್ಮಿಯಾಗಿರಲಿಲ್ಲ. ಮದುವೆಯಾದ ತಕ್ಷಣವೇ ತಮ್ಮೂರಿಗೆ ಹೊರಟು ನಿಂತಿದ್ದರು. ʻಇಲ್ಲೇ ಇರಿʼ ಎಂದು ಇಬ್ಬರೂ ಹೇಳಿದರೂ ಒಪ್ಪಿರಲಿಲ್ಲ. ‘ನೋಡೋಣ… ಮುಂದೆ ಆ ಕಾಲ ಬಂದಾಗ… ಇಷ್ಟು ದಿನ ನೀನೊಬ್ನೇ ಇದ್ದೆ ಅಂತ ನಿಂಜೊತಿಗಿದ್ದೆ. ಈಗ ಹೆಂಡ್ತಿ ಬಂದಾಯ್ತಲ್ಲ ಇನ್ನೆಂತಕ್ಕೆ ಅಮ್ಮ’ ಎಂದು ತಮ್ಮ ಅಸಮಾಧಾನ ಹೊರಗೆಡವಿ ಹೋಗಿದ್ದರು. ಹಾಗೆ ಹೋಗಿದ್ದಕ್ಕೆ ಬೇಸರವಾಗಿದ್ದರೂ ‘ಇರಲಿ ಬಿಡು, ಕೋಪ ಇಳಿದ್ರೆ ಅವ್ಳೇ ಬರ್ತಾಳೆ’ ಎಂದು ಅಮ್ಮನನ್ನು ತುಂಬಾ ಹಚ್ಚಿಕೊಂಡಿದ್ದ ಆನಂದನೂ ಸುಮ್ಮನಾಗಿದ್ದ. ಅವರು ಇದ್ದಿದ್ದರೆ ಲಾವಣ್ಯ ಅದಕ್ಕೆ ಹೊಂದಿಕೊಂಡು ಹೋಗುತ್ತಿದ್ದಳೇನೋ, ಹಾಗೆಂದು ಹೋಗಿದ್ದಕ್ಕೆ ಅವಳಿಗೆ ಬೇಜಾರೇನೂ ಆಗಿರಲಿಲ್ಲ. ದಿನನಿತ್ಯವೂ ಏನೋ ಒಂದು ಕೊಂಕನ್ನು ತೆಗೆದು ಮನೆಯಲ್ಲಿ ಉಬ್ಬಸದ ವಾತಾವರಣ ಇರುವುದಕ್ಕಿಂತಲೂ, ಒಂದಿಷ್ಟು ದಿನ ಕಳೆದು ಕೋಪ ಇಳಿದು ತಾವಾಗೇ ಬರಲಿ ಎಂದುಕೊಂಡು ಸುಮ್ಮನಾಗಿದ್ದಳು.

ಹೀಗೇ ಎರಡು ವರ್ಷಗಳುಅದು ಹೇಗೆ ಕಳೆದುಹೋದವೋ… ನಿಜಕ್ಕೂ ಪ್ರತಿದಿನವೂ ಮಧುಚಂದ್ರದ ದಿನಗಳೇ… ಆ ದಿನಗಳನ್ನು ನೆನಪಿಸಿಕೊಂಡು ಮೈಯೆಲ್ಲಾ ಬಿಸಿಬಿಸಿಯಾಗಿ ಮತ್ತೆ ಮಗ್ಗಲು ಬದಲಾಯಿಸಿದಳು ಲಾವಣ್ಯ. ಹಾಗೆಯೇ ಪೂರಾ ಜೀವನವನ್ನು ಕಳೆದುಬಿಡಲು ಸಿದ್ಧಳಿದ್ದಳವಳು. ಲಾವಣ್ಯನ ಅಮ್ಮ ‘ನಿಂಗೆ ಮೂವತ್ತು ದಾಟ್ತು, ಆದಷ್ಟು ಬೇಗ ಒಂದು ಮಗು ಮಾಡ್ಕೊಳಿ. ವಯಸ್ಸಾದ್ಹಾಗೂ ಹೆರಿಗೇನೂ ಕಷ್ಟ, ನಿಮ್ಗೂ ಬೇಗ ಜವಾಬ್ದಾರಿ ಕಳೆಯಲ್ಲ’ ಎಂದು ಸಂದರ್ಭ ಸಿಕ್ಕಾಗೆಲ್ಲಾ ಹೇಳುತ್ತಿದ್ದರೆ ʻಅಷ್ಟೊಂದು ಅವಸರವೇನು?ʼ ಎಂದೇ ಅನಿಸಿತ್ತು. ಅಂತೂ ಬಸುರಿಯಾದಾಗ ಆನಂದನೂ ಖುಷಿಪಟ್ಟಿದ್ದ.

ಬಾಣಂತನಕ್ಕೂ ಅಮ್ಮನ ಮನೆಗೆ ಕಳುಹಿಸಲು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದ. ಆಗ ಅತ್ತೆ ಮಗನಿಗೆ ತೊಂದರೆಯಾಗುವುದೆಂದು ಮತ್ತೆ ಊರಿನಿಂದ ಬಂದಿದ್ದರು. ಅಮ್ಮ ಬಂದಿದ್ದು ಆನಂದನಿಗೂ ತುಂಬಾ ಸಮಾಧಾನವಾಗಿತ್ತು. ಮಿಹಿರ ಹುಟ್ಟಿದಾಗ ಎಲ್ಲರಿಗೂ ಸಂಭ್ರಮವೇ. ದಿನವೂ ಮಾವನ ಮನೆಗೆ ಬರಲು ಸಂಕೋಚವೇನೋ, ರಜೆಯ ದಿನಗಳಲ್ಲಿ ತನ್ನಮ್ಮನನ್ನೂ ಕರೆದುಕೊಂಡು ಬರುತ್ತಿದ್ದ…ತಾಳ ತಪ್ಪಿದ್ದೆಲ್ಲಿ… ಯೋಚಿಸತೊಡಗಿದಳು ಲಾವಣ್ಯ…

ಹೆರಿಗೆಯ ರಜೆಯಿದ್ದಿದ್ದು ಬರಿಯ ಎರಡು ತಿಂಗಳು. ನಂತರ ಒಂದು ತಿಂಗಳು ತಾನು ಕೂಡಿಟ್ಟ ರಜೆಯನ್ನೂ ಹಾಕಿಕೊಂಡಾಗಿತ್ತು. ಮೂರುತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹಾಜರಾಗುವುದು ಅನಿವಾರ್ಯವಾದಾಗ ಆನಂದನ ಅಮ್ಮ ಮಗುವನ್ನು ನೋಡಿಕೊಳ್ಳಲು ತನ್ನಿಂದ ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ʻಇಲ್ಲೇ ಇದ್ದರೆ ನಾನು ನೋಡಿಕೊಳ್ತೀನಿʼ ಎಂದು ಲಾವಣ್ಯಳ ಅಮ್ಮ ಒಪ್ಪಿಕೊಂಡ ಮೇಲೆ ಅಲ್ಲೇ ಇರುವುದು ಅನಿವಾರ್ಯವಾಯಿತು. ವಾಪಸ್ಸು ಕೆಲಸಕ್ಕೆ ಹೋಗುವ ವೇಳೆಗೆ ಆನಂದ ಬೇರೆ ಪ್ರಾಜೆಕ್ಟ್ಗೆ ಹೋಗಿಯಾಗಿತ್ತು. ಈಗ ʻತುಂಬಾ ಕೆಲಸದʼ ನೆಪವೊಡ್ಡಿ ಸ್ವಲ್ಪ ಅಪರೂಪದಲ್ಲಿ ಎನ್ನುವ ಹಾಗೇ ಆಗಿಬಿಟ್ಟಿದ್ದ.

ಹೀಗೇ ಒಂದು ಸಲ ಬಂದವನು ಲಾವಣ್ಯಳೊಂದಿಗೆ ‘ಯಾಕೋ ಈ ಕೆಲಸ ನಂಗೆ ಇಷ್ಟವಾಗ್ತಿಲ್ಲ; ಮತ್ತೆ ಲೆಕ್ಚರರ್ ಆಗಿ ಎಲ್ಲಾದ್ರೂ ಸಿಕ್ಕಿದ್ರೆ ಹೋಗ್ಬಿಡೋಣ ಅಂತಿದೀನಿ’ ಎಂದಿದ್ದ. ʼಕೆಲಸದ ಜಾಗದಲ್ಲಿ ಏನೋ ಬೇಜಾರಾಗಿರ್ಬೋದುʼ ಎಂದುಕೊಂಡು ವಿಚಾರಿಸಿದಾಗ ‘ಹಾಗೇನಿಲ್ಲ, ಟೀಚಿಂಗ್ ಈಸ಼್ ಮೈ ಪ್ಯಾಷನ್. ಇಲ್ಲಿ ಬೇಕಾದಷ್ಟು ದುಡ್ಡು ಸಿಗತ್ತೆ, ಕೆಲಸದ ತೃಪ್ತಿ ಸಿಗಲ್ಲ’ ಎಂದಿದ್ದ ಬೇಜಾರಿನಿಂದ. ʻಸರಿ, ಏನೋ ಬೇಜಾರಿನಲ್ಲಿ ಹಾಗಂದಿದ್ದಾನೆ, ಅಂದುಕೊಂಡಾಕ್ಷಣ ಸಿಕ್ಬಿಡ್ಬೇಕಲ್ಲ; ಸಿಕ್ಕಾಗ ನೋಡೋಣʼ ಎಂದುಕೊಂಡು ಸುಮ್ಮನಾಗಿದ್ದಳು.

ಆದರೆ ಹದಿನೈದೇ ದಿನದಲ್ಲಿ ಗ್ಲೋಬಲ್ ಕಾಲೇಜಿನಲ್ಲಿ ಕೆಲಸ ಸಿಕ್ಕಿದೆಯೆಂದು ಹೇಳಿ ಈಗಿನ ಕೆಲಸ ಬಿಟ್ಟು ನಡೆದಿದ್ದ. ʻಹೋಗಲಿ ಬಿಡು, ಯಾರಿಗಾದರೂ ಅಷ್ಟೇ, ಅವರು ಮಾಡುವ ಕೆಲಸ ಇಷ್ಟವಾಗದಿದ್ದರೆ ಕಷ್ಟವೇ. ತಾನಂತೂ ಇದೇ ಕೆಲಸಕ್ಕೆ ಹೊಂದಿಕೊಂಡಿದ್ದೇನೆ. ಅವನಿಗೆ ಹಾಗನ್ನಿಸಿದ್ದರೆ ಅವನಿಷ್ಟʼ ಎಂದುಕೊಂಡು ‘ಒಳ್ಳೆಯದೇ ಆಯ್ತು ಬಿಡು; ನಿನ್ನಿಷ್ಟದ ಹಾಗೇ ಸಿಗ್ತಲ್ವಾ’ ಎಂದು ಅವನನ್ನು ಅಭಿನಂದಿಸಿದ್ದಳು.

ನಿಜವಾಗಿ ಲಾವಣ್ಯಳಿಗೆ ಚಿಂತೆ ಶುರುವಾಗಿದ್ದು ಮಗುವಿಗೆ ವರ್ಷವಾಗುತ್ತಾ ಬಂದರೂ ‘ನೀನ್ಯಾವಾಗ ವಾಪಸ್ಸು ಬರ್ತೀಯಾ?’ ಎಂದು ಕೇಳದಿದ್ದಾಗ. ಆ ಸಲ ಬಂದಾಗ ತಾನೇ ಮಾತು ತೆಗೆದು ‘ಮಿಹಿರನಿಗೆ ವರ್ಷವಾಗ್ತಾ ಬಂತು. ಇನ್ಮೇಲೆ ಕಂಪನಿ ಪಕ್ದಲ್ಲಿರೋ ಬೇಬಿ ಸಿಟಿಂಗಿಗೆ ಬಿಡ್ಬೋದು. ಬಂದ್ಬಿಡೋಣಾಂತಿದೀನಿ’ ಎಂದಿದ್ದಳು. ಆದರೆ ಅವನೇನೂ ಆತುರ ತೋರದೆ ‘ಅಷ್ಟು ಅವಸರ ಯಾಕೆ? ಇನ್ನೂ ಒಂಸ್ವಲ್ಪ ದಿನ ನಿಮ್ಮಮ್ಮನ ಮನೇಲೇ ಇರು. ನಿಂಗೂ ಸ್ವಲ್ಪ ರೆಸ್ಟ್ ಇರತ್ತಲ್ವಾ’ ಎಂದಿದ್ದ. ‘ಇದೊಳ್ಳೇ ಚೆನ್ನಾಗಿದೆ. ಅವ್ರು ನೋಡ್ಕೋತಾರೇಂತ ಎಷ್ಟುದಿನ ಇಲ್ಲಿರಕ್ಕಾಗತ್ತೆ? ಈಗ ಸ್ವಲ್ಪ ದೊಡ್ಡೋನಾಗಿದಾನಲ್ವಾ. ಇನ್ನು ಅವ್ರಿಗೆ ತೊಂದ್ರೆ ಕೊಡಲ್ಲ. ನಾನು ಬರೋದೇ’ ಎಂದಿದ್ದಳು.

ಅಂತೂ ಅಷ್ಟೇನೂ ಮನಸ್ಸಿಲ್ಲದೆ ‘ಸರಿ, ನಿನ್ನಿಷ್ಟ. ಒಂದು ಮಾತು ಮಾತ್ರಾ ಮೊದ್ಲೇ ಹೇಳ್ಬಿಡ್ತೀನಿ. ನಂಗೆ ಮಗೂನ ನೋಡ್ಕೊಳೋದು, ಆಡಿಸ್ಕೊಳೋದು ಇಂತವೆಲ್ಲಾ ಬರಲ್ಲ. ರಾತ್ರಿ ನಿದ್ರೆ ಕೆಟ್ರೆ ನಂಗಾಗಲ್ಲ. ನಿನ್ನೊಬ್ಳ ಕೈಲೇ ಮ್ಯಾನೇಜ್ ಮಾಡಕ್ಕಾಗತ್ತೆ ಅನ್ಸಿದ್ರೆ ನಂಗೇನೂ ತೊಂದ್ರೆಯಿಲ್ಲ. ಯೋಚ್ನೆ ಮಾಡ್ನೋಡು’ ಅಂದಿದ್ದ. ‘ಯೋಚ್ಸಕ್ಕೇನಿದೆ? ನಿಂಗೆ ಹೆಂಡ್ತಿ ಮಗು ಜೊತೇಲಿ ಇರ್ಬೇಕು ಅನ್ಸಲ್ವಾ? ಅಮ್ಮನ್ನ ಕೇಳಿ ಒಂದು ಒಳ್ಳೇ ದಿನ ನೋಡ್ಕೊಂಡು ಬರ್ತೀನಿ. ಬೇಕಾದ್ರೆ ನೀನೂ ನಿಮ್ಮಮ್ಮನ್ನ ಯಾವತ್ತು ಕರ್ಕೊಂಡ್ಬರ್ಲಿ ಅಂತ ಕೇಳ್ನೋಡು. ಮಗು ಹುಟ್ಟಿದಬ್ಬ ನಮ್ಮನ್ಲೇ ಮಾಡೋದೇ’ ಎಂದು ಮಾತು ಮುಗಿಸಿದ್ದಳು. ಮುಂದಿನ ಹತ್ತು ದಿನದಲ್ಲೇ ಇಲ್ಲಿಗೆ ಬಂದಿದ್ದಾಗಿತ್ತು.

ಬರುವ ಹೊತ್ತಿಗಾಗಲೇ ಆನಂದ ತುಂಬಾ ಹೊತ್ತು ಓದಿಕೊಳ್ಳಬೇಕಾಗಿರುವ ನೆಪವೊಡ್ಡಿ ಇನ್ನೊಂದು ರೂಮಿಗೆ ಷಿಫ್ಟ್ ಆಗಿದ್ದ. ದೀಪ ಇದ್ದರೆ ಲಾವಣ್ಯಳಿಗೆ ನಿದ್ರೆ ಬರುವುದಿಲ್ಲವೆನ್ನುವ ನೆಪವೂ ಜೊತೆಗಿತ್ತು; ಹಾಗೆಯೇ ಮಗು ಅತ್ತರೆ ತನಗೆ ತೊಂದರೆಯಾಗುತ್ತದೆನ್ನುವ ಕಾರಣ ಕೂಡಾ. ಅತ್ತೆ ಮಧ್ಯದ ಹಾಲಿನಲ್ಲಿನ ದೀವಾನದ ಮೇಲೆ ಮಲಗುತ್ತಿದ್ದರು. ಮಗು ಮನೆಗೆ ಬಂದಿದೆಯೆನ್ನುವ ಅಂತಹ ಸಂಭ್ರಮ ಇಬ್ಬರಲ್ಲೂ ಅಷ್ಟಾಗಿ ಕಾಣಲಿಲ್ಲ. ‘ಆನಂದ ಚಿಕ್ಕೋನಾಗಿದ್ದಾಗ ನಮ್ಮತ್ತೆಯೇ ಪೂರಾ ಸಾಕಿದ್ದು. ನಂಗಿಷ್ಟು ಚಿಕ್ಮಕ್ಳನ್ ನೋಡ್ಕಳಕ್ಕೆ ಬರೂದೇ ಇಲ್ಲ’ ಎಂದುಬಿಟ್ಟರು ಅತ್ತೆ. ತವರು ಮನೆಯಲ್ಲಿ ಸಂಕೋಚವೇನೋ ಎಂದುಕೊಂಡರೆ, ಇಲ್ಲೂ ಆನಂದನದು ದೂರದಿಂದಲೇ ಮಾತು. ‘ನಮ್ಮನ್ಲಿ ಮಗುವಿಗೆ ಹುಟ್ದಬ್ಬ ಮಾಡೋ ಪದ್ತೀನೇ ಇಲ್ಲ’ ಅಂದುಬಿಟ್ಟರು ಅತ್ತೆ. ʻಇದೊಳ್ಳೇ ಕತೆಯಾಯ್ತಲ್ಲ; ಹುಟ್ಟಿದಬ್ಬ ಮುಗಿಸ್ಕೊಂಡೇ ಅಲ್ಲಿಂದ ಬರ್ಬೋದಿತ್ತು; ಏಕೋ ಏನೋ ಸರಿಯಿಲ್ಲʼ ಅನ್ನಿಸಿಹೋಯಿತು ಲಾವಣ್ಯಳಿಗೆ.

ಮಗುವಿನ ಎಲ್ಲಾ ಕೆಲಸವೂ ತನ್ನ ಮೇಲೇ ಬಿದ್ದು ಸಾಕಾಗಿಹೋಯಿತು. ಕೆಲಸಕ್ಕೆ ಹೋಗುವಾಗ ಜೊತೆಗೇ ಕರೆದುಕೊಂಡು ಹೋಗಬೇಕು, ಬರುವಾಗ ಕರೆತರಬೇಕು. ಒಮ್ಮೆಯಂತೂಮಗುವಿಗೆ ಹುಷಾರಿಲ್ಲದೆ, ತನಗೆ ರಜ ಹಾಕಲಾಗದೆ ಯಾವುದೋ ತೀರಾ ಮುಖ್ಯವಾದ ಕೆಲಸವಿದ್ದಾಗಲೂ ಆನಂದನಾಗಲೀ, ಅವನಮ್ಮನಾಗಲೀ ಮಗುವನ್ನು ತಾವು ನೋಡಿಕೊಳ್ತೀವಿ ಎನ್ನಲಿಲ್ಲ. ಕಡೆಗೆ ಆ ಕೆಲಸ ಮುಗಿಯುವವರೆಗೂ ಅಮ್ಮನ ಮನೆಯಲ್ಲಿದ್ದುಕೊಂಡು ಓಡಾಡಿದ್ದಾಯಿತು. ‘ಏನೋ, ಇದು ತೀರಾ ಅತಿ ಅನ್ಸುತ್ತೆ, ತನ್ನ ಮೊಮ್ಮಗುವನ್ನು, ಅದೂ ಇಷ್ಟು ದೊಡ್ಡದಾಗಿರೋ ಮಗುವನ್ನು ಒಂದೆರಡು ದಿನ ನಿಭಾಯ್ಸಕ್ಕೆ ಆಗಲ್ಲ ಅಂದ್ರೇನು. ಎಲ್ಲಾ ಕಡೆ ಓಡಾಡ್ಕೊಂಡು, ಕೆಲ್ಸ ಮಾಡ್ಕೊಂಡು, ಗಟ್ಟಿಮುಟ್ಟಾಗಿ ಚೆನ್ನಾಗೇ ಇದಾರಲ್ವಾ. ಇನ್ನೂ ಕೋಪ್ವೇ ಅವ್ರಿಗೆ, ಮಗ ತನ್ನನ್ ಕೇಳ್ದೆ ಮದ್ವೆ ಮಾಡ್ಕೊಂಡಾಂತ’ ಎಂದಿದ್ದರು. ಲಾವಣ್ಯಳಿಗೆ ಏನು ಹೇಳಲೂ ತಿಳಿಯದೆ ಮಂಕಾಗಿದ್ದಳು. ಮನೆಯಲ್ಲಿ ಬೇರೆಯ ಕೋಣೆಯಲ್ಲಿ ಗಂಡ ಮಲಗುತ್ತಿರುವ ಬಗ್ಗೆ ತಿಳಿದರೆ ಅಮ್ಮನಿಗೆ ಇನ್ನೇನು ಅನುಮಾನ ಶುರುವಾಗತ್ತೋ ಅನ್ನಿಸಿತು. ಮಗುವನ್ನು ಬಿಡಲು ಬಂದಿದ್ದು ಬಿಟ್ಟರೆ ಅಮ್ಮ ಮತ್ತೆ ಮನೆಗೆ ಬಂದೇ ಇಲ್ಲ. ಅತ್ತೆ ಇರುವಾಗ, ಅವರು ಕರೆಯದೆ, ಏನೂ ಕಾರಣವಿಲ್ಲದೆ ಯಾಕೆ ಬರುತ್ತಾರೆ?!

ಮನೆಗೆ ಬಂದು ನಾಲ್ಕು ತಿಂಗಳಾದರೂ ಒಮ್ಮೆಯಾದರೂ ಹತ್ತಿರ ಬಂದಿಲ್ಲ. ನಡುಮನೆಯಲ್ಲೇ ಅಮ್ಮ ಮಲಗುವುದರಿಂದ ಅವರನ್ನು ದಾಟಿಕೊಂಡು ಬರಲು ಸಂಕೋಚವೇನೋ ಎಂದುಕೊಂಡರೂ, ಬರುವುದು ಹೆಂಡತಿಯ ಬಳಿ ತಾನೇ. ಅದಕ್ಕೇಕೆ ಹಿಂಜರಿಕೆ ಅನ್ನಿಸಿತು. ಇಂತಹ ಸೂಕ್ಷ್ಮ ವಿಷಯಗಳನ್ನು ಕೇಳುವುದಾದರೂ ಹೇಗೆ? ತಾನು ಆಫೀಸಿನಲ್ಲಿರುವಾಗ, ಅವನು ಕಾಲೇಜಿನಲ್ಲಿರುವಾಗ ಫೋನಿನಲ್ಲಿ ಮಾತನಾಡಲು ಸಾಧ್ಯವೇ? ಅವನೋ ಮನೆಗೆ ಬರುವುದೇ ತಡವಾಗಿ, ಬಂದವನೇ ಪುರಸೊತ್ತಿದ್ದರೆ ತನ್ನೊಂದಿಗೆ ಒಂದೆರಡು ಲೋಕಾಭಿರಾಮದ ಮಾತಾಡಿ, ಮಗು ಹೇಗಿದ್ದಾನೆಂದು ಕೇಳಿ, ಊಟ ಮಾಡಿ, ಓದಲು ರೂಮು ಸೇರಿಬಿಡುತ್ತಾನೆ.

ಲಾವಣ್ಯ ಮಗನನ್ನು ಮಲಗಿಸುವ ಹೊತ್ತಿಗೆ ಅತ್ತೆ ಬಂದು ನಡುಮನೆಯಲ್ಲಿ ಮಲಗಿರುತ್ತಾರೆ. ತಾನೇ ಎದ್ದುಹೋಗಿ ಮಾತನಾಡಲು ಏನೋ ಸಂಕೋಚ ಅಡ್ಡ ಬರತ್ತೆ. ಇದು ಸರಿಹೋಗುವುದು ಎಂದಿಗೆ?! ಒಂದು ಮಗುವಾದ ಮೇಲೆ ವೈವಾಹಿಕ ಜೀವನದ ಆಸಕ್ತಿಯನ್ನೇ ಕಳೆದುಕೊಳ್ಳಲು ಸಾಧ್ಯವೇ? ಏನು ಮಾಡಲೂ ತೋಚದೆ ಒದ್ದಾಡಿಹೋದಳು ಲಾವಣ್ಯ.

ಅಂತೂ ಆರೇಳು ತಿಂಗಳಾದ ಮೇಲೆ ಒಂದು ಭಾನುವಾರ ಅತ್ತೆ ಅವರ ನೆಂಟರ ಮನೆಯ ಕಡೆಯ ಸೀಮಂತ ಸಮಾರಂಭಕ್ಕೆ ‘ಈಗ ನಾನೇ ಹೋಗ್ತೀನಿ, ಸಂಜೆಮೇಲೆ ನೀನ್ಬಂದು ಕರ್ಕೊಂಡ್ಬಂದ್ಬಿಡು’ ಎಂದು ಮಗನಿಗೆ ಹೇಳಿ ಹೊರಟರು. ಅವರು ಹೊರಟ ಸ್ವಲ್ಪ ಹೊತ್ತಿಗೇ ಆನಂದನೂ ಏನೋ ನೆಪವೊಡ್ಡಿ ಹೊರಹೊರಟ. ಲಾವಣ್ಯಳಿಗೆ ಕೋಪವುಕ್ಕಿಬಂದು ಅವನೊಂದಿಗೆ ಜಗಳಕ್ಕೇ ನಿಂತಳು. ಅಷ್ಟು ದಿನದಿಂದ ತಡೆಹಿಡಿದಿಟ್ಟುಕೊಂಡಿದ್ದ ಅಸಹನೆಯನ್ನು ಕಾರಿಕೊಂಡಳು. ಅವನ ಈ ಅನಾದರಕ್ಕೆ ಕಾರಣವೇನು, ಇನ್ಯಾರಾದರೂ ಹೊಸತಾಗಿ ಅವನ ಜೀವನದಲ್ಲಿ ಬಂದಿದ್ದರೆ ಎನ್ನುವ ಸಂಶಯ ತೋರಿದಳು. ಕಡೆಕಡೆಗೆ ಅಳು ನುಗ್ಗಿಬಂದು ಜೋರಾಗಿ ಅಳತೊಡಗಿದಳು.

ಇದನ್ನು ನಿರೀಕ್ಷಿಸದಿದ್ದ ಆನಂದ ತಬ್ಬಿಬ್ಬಾಗಿ ‘ಅಂತದೇನಿಲ್ಲ; ಎಲ್ಲಾ ಸರಿಯಾಗಿಯೇ ಇದೆಯಲ್ಲಾ. ನೀನು ಸುಮ್ಮಸುಮ್ಮನೆ ಏನೇನಕ್ಕೋ ಅನವಶ್ಯಕವಾಗಿ ತಲೆ ಕೆಡಿಸಿಕೊಳ್ತಿದೀ ಅಷ್ಟೇ’ ಅಂದು ಅವಳ ಪಕ್ಕದಲ್ಲಿ ಕುಳಿತು ತಲೆ ಸವರಿದ, ಬೆನ್ನು ತಟ್ಟಿ ಸಮಾಧಾನ ಮಾಡಿದ. ಕುತ್ತಿಗೆ ಬಳಸಿ ಮುದ್ದಿಸಿದ ‘ನಿನ್ನ ಬಿಟ್ಟರೆ ನನಗಿನ್ಯಾರು, ಯಾಕೆ ಏನೇನೋ ನೀನುನೀನೇ ಕಲ್ಪನೆ ಮಾಡಿಕೊಳ್ತೀ. ನೀನಿಷ್ಟು ನನ್ನನ್ನ ಕೇಳ್ತಿದೀಯಲ್ಲಾ, ನಾನ್ಯಾವತ್ತಾದರೂ ನಿನ್ನ ಹಳೆಯ ಸ್ನೇಹಿತನ ಬಗ್ಗೆ ಕೇಳಿದೀನಾ’ ಎಂದಾಗ ಈ ಅನಿರೀಕ್ಷಿತ ಹೊಡೆತದಿಂದ ಲಾವಣ್ಯ ದಂಗಾಗಿ ಅವನನ್ನೇ ನೋಡಿದಳು.

‘ಇಲ್ಲಾ, ಸುಮ್ನೆ ಕೇಳ್ದೆ ಅಷ್ಟೇ. ನಂಗೊತ್ತಿಲ್ವಾ, ನೀನೇನೂಂತ. ನಾನು ಹೀಗೆ ಕೇಳ್ದಾಗ ನಿಂಗೆ ಹೇಗನ್ಸತ್ತೋ, ನೀನು ಕೇಳ್ದಾಗ್ಲೂ ನಂಗೂ ಹಾಗೇ ಅನ್ಸತ್ತಲ್ವಾ. ನಿನ್ಹತ್ರ ಮದ್ವೆ ಪ್ರಸ್ತಾಪ ಇಟ್ಟಾಗ್ಲೇ ಹೇಳಿದ್ನಲ್ವಾ, ಇಬ್ರೂ ಇಬ್ರ ಚರಿತ್ರೇನೂ ಕೆದಕ್ಬಾರ್ದೂಂತ; ಮುಂದಿನ್ ಜೀವ್ನ ಮಾತ್ರಾ ನಮ್ದೂಂತ’ ಎನ್ನುತ್ತಲೇ ಅವಳೊಳಗೆ ಯಾರಾದರೂ ಅಡಗಿ ಕುಳಿತಿದ್ದಾರೇನೋ ಎನ್ನುವಂತೆ ಕಣ್ಣಿನ ಬಾವಿಯೊಳಗೆ ಪಾತಾಳಗರಡಿ ಹಾಕಿ ಇಣುಕಿದ. ‘ನಿನ್ನಂಥವಳಿರುವಾಗ ನಾನು ಹೇಗೆ ಬೇರೆಯವರ ಹಿಂದೆ ಹೋಗಕ್ಕೆ ಸಾಧ್ಯ?! ನೀನು ನನ್ನ ಜೀವನದಲ್ಲಿ ತುಂಬಾ ಮುಖ್ಯ’ ಎನ್ನುತ್ತಾ ಏನೇನೋ ಕಾರಣಗಳನ್ನು, ಸಬೂಬುಗಳನ್ನು ಹೇಳಿದ… ಅಂತೂ ಜಗಳ ಮುಗಿಯಿತು.

ಮಗುವಿಗೆ ಊಟಮಾಡಿಸಿ ಮಲಗಿಸಿದ ಮೇಲೆ ಇಬ್ಬರೂ ಒಟ್ಟಿಗೆ ಊಟ ಮಾಡಿದರು. ಎಷ್ಟೋ ತಿಂಗಳ ಮೇಲೆ ಅಂತೂ ಲಾವಣ್ಯಳ ಬಳಿ ಬಂದ. ಎಲ್ಲಾ ಮುಗಿದ ಮೇಲೂ ಲಾವಣ್ಯಳಿಗೆ ʻಇವನು ಅಂದಿನಂತಿಲ್ಲ; ಮೊದಲಿನ ಸಂಭ್ರಮವಿಲ್ಲ, ಉತ್ಸಾಹವಿಲ್ಲ, ಕಾತುರವಿಲ್ಲ; ಆತುರವಿಲ್ಲ. ಏನೋ ಬೇರೆ ವಿಷಯವಿದೆ, ಎಲ್ಲಾ ಯಾಂತ್ರಿಕವಾಗಿದೆʼ ಅನ್ನಿಸಿಬಿಟ್ಟಿತು. ದೇಹ ದಣಿಯಿತು; ಮನ ತಣಿಯಲಿಲ್ಲ… ಅಂದಿನಿಂದ ಮತ್ತೆ ಇಂತಹ ಅವಕಾಶಗಳು ಸಿಕ್ಕಾಗ ಒಮ್ಮೊಮ್ಮೆ ಬಳಿ ಬರುತ್ತಾನೆ… ಆದರೂ ಅವನ ನಗು ಸಹಜವಾಗಿಲ್ಲ, ಮಾತಿನಲ್ಲಿ ಮೊದಲಿನ ಹಿತವಿಲ್ಲ, ಅವನ ವರ್ತನೆ ಏನೋ ತೇಪೆ ಹಾಕುವವರಂತೆಯೇ ಇದೆ. ಅನ್ನಿಸುತ್ತದೆ ಲಾವಣ್ಯಳಿಗೆ.

ಅನಂದ ಮತ್ತೆ ಕವಿತೆಗಳನ್ನು ಬರೆಯಲು ತೊಡಗಿದ್ದಾನೆ. ಅವನ ಕವಿತೆಗಳು ಕೆಲವು ಪತ್ರಿಕೆಗಳಲ್ಲೂ ಬರತೊಡಗಿವೆ. ಒಂದು ಸಲವೂ ಲಾವಣ್ಯಳಿಗೆ ತೋರಿಸಿಲ್ಲ. ಹಾಗೆ ಬಂದ ದಿನ ಒಂದಷ್ಟು ಹೊತ್ತು ಹುರುಪಿನಿಂದಿದ್ದು ಸ್ನೇಹಿತರು ಅಭಿನಂದಿಸಿದ್ದಕ್ಕೆಲ್ಲಾ ಖುಷಿಪಡುತ್ತಾ ಇರುತ್ತಾನೆ. ಹುರುಪು ಇಳಿಯುತ್ತಾ ಬಂದಹಾಗೇ ಏನೋ ಕಳೆದುಕೊಂಡವನಂತೆ ಚಡಪಡಿಸುತ್ತಿರುತ್ತಾನೆ… ಎಲ್ಲೋ ಕಳೆದುಹೋಗಿರುತ್ತಾನೆ… ಒಮ್ಮೆ ಹೀಗೇ ಪತ್ರಿಕೆಯಲ್ಲಿ ಬಂದಿದ್ದ ಅವನ ಕವಿತೆಯ ಬಗ್ಗೆ ಬೆಳಗಿನಿಂದ ಸ್ನೇಹಿತರ ಜೊತೆಗೆ ಮಾತಾಡುತ್ತಲೇ ಇದ್ದ. ಮಧ್ಯಾಹ್ನ ಊಟಮಾಡಿ ಮಲಗಿದವನು ಎದ್ದಾಗ ತುಂಬಾ ಮಂಕಾಗಿದ್ದ. ಸಂಜೆ ತಿರುಗಾಡಿ ಬರುತ್ತೇನೆಂದು ಒಬ್ಬನೇ ಹೊರಟ.

ಆಗ ಪತ್ರಿಕೆ ತೆರೆದು ಅವನೇನು ಬರೆದಿದ್ದಾನೆಂದು ಲಾವಣ್ಯ ನೋಡಿದಳು. ಸುಂದರವಾಗಿ ಯಾವುದೋ ಹುಡುಗಿಯ ವರ್ಣನೆ ಮಾಡಿದ್ದ. ಕವಿತೆಯೇನೋ ತುಂಬಾ ಚೆನ್ನಾಗಿತ್ತು ಆದರೆ ಯಾವ ವರ್ಣನೆಯೂ ತನ್ನ ರೂಪಕ್ಕಾಗಲೀ, ಗುಣಕ್ಕಾಗಲೀ ಹೊಂದುವಂತದೇ ಅಲ್ಲ. ಓದಿದ ಮೇಲೆ ಲಾವಣ್ಯಳಿಗೆ ʻಇವಳು ಅವಳಿರಬಹುದೇ?ʼ ಎನ್ನಿಸಿದ್ದು ಸುಳ್ಳಲ್ಲ. ʻಇನ್ನೂ ಅವಳು ಇವನನ್ನು ಬಿಟ್ಟು ಹೋಗಿಲ್ಲವೇ? ಇಂದಿಗೂ ಅವಳ ರೂಪವೇ, ಗುಣವೇ ಇವನಲ್ಲಿ ಅಚ್ಚೊತ್ತಿಬಿಟ್ಟಿದೆಯೇ? ಸುಮ್ಮಸುಮ್ಮನೇ ತನ್ನೊಂದಿಗೆ ನಾಟಕವಾಡುತ್ತಿದ್ದಾನೆಯೇ?ʼ ಅನ್ನಿಸಿ ಹಿಂಸೆಯಾಯಿತು.

ತಾನು ಮದುವೆಯಾಗುವಾಗಲೇ ತನ್ನ ಸ್ಲೇಟಿನಿಂದ ʻಅವನʼನ್ನು ಅಳಿಸಿಬಿಟ್ಟಂತೆ ಇವನಿಗೇಕೆ ʻಅವಳʼನ್ನು ಅಳಿಸಲು ಸಾಧ್ಯವಾಗಲಿಲ್ಲ?! ಅವನು ಅಂದು ಬರಿಯ ಮಾತಲ್ಲಿ ಹೇಳಿದ, ನಾನೋ ನಿಜವಾಗಲೂ ಅನುಸರಿಸಿದೆ ಎಂದುಕೊಂಡಳು. ಎಷ್ಟೋ ಹೊತ್ತು ಹಾಗೆಯೇ ಕುಳಿತಿದ್ದಳು. ತಿರುಗಾಟ ಮುಗಿಸಿ ಅವನು ಬಂದ. ಒಳಗೆ ಹೋಗುತ್ತಿದ್ದವನನ್ನು ಕರೆದು ಆ ಕವಿತೆಯನ್ನು ತೋರಿಸಿ ‘ಇದು ಅವಳಾ?’ ಎಂದು ಕೇಳಿಯೇ ಬಿಟ್ಟಳು. ಅವನ ಮುಖ ಕಪ್ಪಿಟ್ಟುಹೋಯಿತು. ‘ನೀನು ಹೀಗೆ ಏನೇನೋ ಕಲ್ಪನೆ ಮಾಡಿಕೊಂಡರೆ ನಾನೇನೂ ಮಾಡಕ್ಕಾಗಲ್ಲ’ ಎಂದವನು ಮಾತಿಗೆ ಸಿಗದೆ ಒಳಗೆ ಹೋದ.

ಅದಾದ ನಂತರ ಇಂದೇ ಅತ್ತೆ ಊರಿಗೆ ಹೋಗಿದ್ದು ಮನೆಯಲ್ಲಿ ನಾವಿಬ್ಬರೇ ಇರುವುದು. ಇಂದು ಬಳಿಗೆ ಬಂದರೆ ಅವನೊಂದಿಗೆ ಮನಬಿಚ್ಚಿ ಮಾತನಾಡಬೇಕೆಂದಿದ್ದಳು ಲಾವಣ್ಯ. ನಿರ್ದಿಷ್ಟವಾಗಿ ಇಂತಹದೇ ಎಂದು ಹೇಳಲಾಗದಿದ್ದರೂ ತಮ್ಮ ಸಂಬಂಧದಲ್ಲಿ ಬಿರುಕು ಮೂಡುತ್ತಿರುವುದು ಅವಳಿಗೆ ಸ್ಪಷ್ಟವಾಗಿ ತೋರುತ್ತಿದೆ. ಮೇಲ್ನೋಟಕ್ಕೆ ಗಂಡಹೆಂಡಿರಾಗೇ ಇದ್ದೇವೆ. ಆದರೆ ಎಲ್ಲೋ ಅಪಶ್ರುತಿ ಕೇಳುತ್ತಿದೆ.

ಇತ್ತೀಚೆಗೆ ಬರೆದಿದ್ದ ಇನ್ನೊಂದು ಕವಿತೆಯಲ್ಲಿ ‘ನಿನ್ನೊಳಗೆ ಅವನಿದ್ದು ನನ್ನೊಳಗೆ ಅವಳಿರಲು ಅರ್ಥವಿರದ ಸುರತ ರಸಾಭಾಸಲ್ಲವೆ?! ಹ್ಞು ಅದಕೂ ಇದಕೂ ಸಂಬಂಧವಿಲ್ಲ ಬೆಸೆದು ಬೆಸೆಗೊಳ್ಳುವುದೆ ಬದುಕು’ ಎಂದು ಬರೆದಿದ್ದ. ಅಂದರೆ ಅವನಿಗೆ ʻತನ್ನ ಮೇಲಿನ ಅನುಮಾನವೂ ಹೋಗಿಲ್ಲ; ಅವನಿಂದ ಅವಳೂ ಬಿಟ್ಟುಹೋಗಿಲ್ಲ; ನಮ್ಮ ನಡುವಿನ ಸಂಬಂಧ ಅರ್ಥವಿರದ ರಸಾಭಾಸವಾಗಿ ಅವನಿಗೂ ತೋರುತ್ತಿದೆಯಲ್ಲವೇ. ಅನಿವಾರ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದೇವೆಯೇ?ʼ ಅನ್ನಿಸಿದರೂ ಇದನ್ನು ಮಾತನಾಡಿ ಸರಿಮಾಡಿಕೊಳ್ಳಲೇಬೇಕು ಎಂದುಕೊಂಡಳು. ತಾನೇ ಏಕೆ ಅವನ ರೂಮಿಗೇ ಹೋಗಿ ಅವನನ್ನೆಬ್ಬಿಸಿ ಮಾತನಾಡಿಸಬಾರದು ಎನ್ನಿಸಿತು. ಮಗು ಮಲಗಿ ಸೊಂಪಾದ ನಿದ್ರೆಯಲ್ಲಿದ್ದ. ಲಾವಣ್ಯ ಎದ್ದು ಹೊರಟಳು.

ಆನಂದನಿಗಾಗಲೇ ನಿದ್ರೆ ಬಂದಿತ್ತೇನೋ… ಪಕ್ಕದಲ್ಲಿ ಕುಳಿತು ಎಬ್ಬಿಸಲೆಂದು ಅವನ ಭುಜದ ಮೇಲೆ ಕೈಹಾಕಿದವಳು ಒಂದು ಕ್ಷಣ ಸುಮ್ಮನೇ ಕುಳಿತು ಅವನನ್ನೇ ನೋಡಿದಳು. ಏನೋ ಕನಸು ಕಾಣುತ್ತಿರುವಂತಿತ್ತು. ಮುಖದಲ್ಲೊಂದು ನಗೆಯ ಭಾವವಿತ್ತು. ʻಅವಳುʼ ಬಂದಿದ್ದಾಳೆಯೇ ಅನ್ನಿಸಿ ಹೊಟ್ಟೆಕಿಚ್ಚಾಗಿ ಅವನ ಭುಜವನ್ನು ಅಲುಗಿಸಿದಳು. ಎದ್ದವನೇ ಇವಳ ಮುಖವನ್ನು ಕಂಡು ಒಂದು ಕ್ಷಣ ಬೆಚ್ಚಿದವನು, ‘ಓ ನೀನಾಗಲೇ ಮಲಗಿಬಿಟ್ಟಿರ್ತೀಯೇನೋಂತ ಬರ್ಲಿಲ್ಲ. ಬಾಯಿಲ್ಲಿ’ ಎನ್ನುತ್ತಾ ಮಾತಿಗೇ ಅವಕಾಶವಿಲ್ಲದಂತೆ ಅವಳನ್ನೆಳೆದುಕೊಂಡ… ಎಲ್ಲವೂ ಮುಗಿದು ಅವನು ನಿದ್ರೆಗೆ ಜಾರಿದ… ಯಾಕೋ ಪರಕೀಯಳಂತೆ ಪಕ್ಕದಲ್ಲಿ ಮಲಗುವುದು ಹಿಂಸೆಯೆನಿಸಿ ತನ್ನ ರೂಮಿಗೆ ಬಂದು ಉರುಳಿಕೊಂಡಳು… ʻಛೇ ಅವನ ಬಳಿ ಹೋಗಿ ನಾನು ಸಣ್ಣವಳಾದೆ…ʼ ಎನ್ನಿಸಿ ಇಳಿಯತೊಡಗಿದ ಕಣ್ಣೀರು ದಿಂಬನ್ನು ತೋಯಿಸತೊಡಗಿತು…

‍ಲೇಖಕರು Avadhi

May 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: