ಸೆಳೆ ಮಿಂಚಿನ ಸುಖ
ಕಳಕೇಶ್ ಗೊರವರ
ನೀ ಏನೇ ಹೇಳು,
ನನ್ನ ಬಗೆಗಿನ ಆ ನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ
ಈಗಷ್ಟೇ ಸಾಣೆ ಹಿಡಿದ ಚೂರಿಯ ಮೊಣಚಿದೆ.
ಇರಿದಾಗಲೆಲ್ಲ ಎಂತಹದೋ ಅವ್ಯಕ್ತ ಸುಖ ಒಸರುತ್ತದೆ.
ಒರಿಸಿಕೊಂಡಷ್ಟು ಸೆಲೆಯೊಡೆಯುತ್ತಲೇ ಇದೆ.

ಅದೆಂತಹ ಮೋಜು ಈ ಅಲೆಗಳಿಗೆ?
ಕಡಲ ತಡಿಯ ಮರಳ ಮೇಲೆ ನಿನ್ನ ಹೆಸರು ಬರಿದಾಗೆಲ್ಲ ಅರೆ ಕ್ಷಣದಿ ಅಳಿಸಿ ಹಾಕುತ್ತವೆ.
ನನಗೋ ನೀನೇ ಕಡಲ ಪಾಲಾದ ದಿಗಿಲು.

ಬಿಸಿಲನ್ನೇ ಉಂಡುಟ್ಟ ಬಯಲು ಸೀಮೆಯ
ಕರಿ ನೆಲದ ಕಪ್ಪುಹುಡುಗ ನಾನು.
ಊರು ಬಿಡುವಾಗ ಮಕ್ಷರಗಟ್ಟಿಕೊಂಡು ಅಳದೇ ಇರುವುದನ್ನೂ, ಅಪ್ಪನ ಎದುರಿಗೆ ಚಹ ಕುಡಿಯುವುದನ್ನೂ ಇತ್ತೀಚೆಗೆ ಕಲಿತವನು.
ಇನ್ನು
ಒಂದೇ ಮಾತಲ್ಲಿ ಹೇಳುವುದಾದರೆ,
ಎಲ್ಲವನ್ನೂ ಹೀರಿಕೊಳ್ಳಬಲ್ಲ
ಹತ್ತಿಯ ಉಂಡಿಯಂತಿದ್ದೆ.
ಅನಾಯಾಸ ಒಲವಿನಲಿ ಅದ್ದಿದೆ. ಆ ನಿನ್ನ ಹೂ ಬೆರಳಿನಲಿ
ಊರೆಂಬ ಊರಿನ ನೆನಪುಗಳ ಹೊರೆ ಇಳಿಸಿದೆ, ಮೌನಗಳಿಗೆ ಮಾತು ಕಲಿಸಿದೆ.

ಹೌದು,
ಈ ಮೊದಲು
ಅನಾಮಿಕನಂತಿದ್ದೆ ಖರೆ,
ಆದರೇನು ಎಂದೂ ಒಂಟಿ ಅನಿಸಿರಲಿಲ್ಲ.
ಈಗ ನೋಡು, ಏಕಾಕಿತನ ಹಿಂಡಿ ಹಿಪ್ಪೆ ಮಾಡುತ್ತಿದೆ.
ಈಗೀಗ ರಾತ್ರಿಗಳು ಮುಗಿಯುವುದೇ ಇಲ್ಲವೆಂದು
ಹಠ ಹಿಡಿಯುತ್ತಿವೆ.
ಎಳೆದು ಮುಚ್ಚಿದ ಕಣ್ಣೊಳಗೆ ಕತ್ತಲು ಕಾಲಿಡದೆ ಏನೋ ಸಂಚು ನಡೆಸಿದೆ.
ನೆನಪುಗಳ ಹೆಕ್ಕಿದಾಗೊಮ್ಮೆ
ಚರ್ಮಗೀತೆ ಬರೆದ ಅನುಭವ.

ಒಂದು ನಡುಮಧ್ಯಾಹ್ನ ಹೀಗೆ ಹಠಾತ್ತನೇ ಎದ್ದು ನಡೆದ ನಿನ್ನನ್ನು
ನಿರ್ದಯಿ ಎಂದೆಲ್ಲ ಹೇಳಲಾರೆ.
ಸದ್ಯ ನಿನ್ನ ಬರುವಿಕೆಯ ಸುಳಿವೊಂದ ನೀಡು ಸಾಕು,
ಕಾಲದೊಂದಿಗೆ ಕಾಲ ಹಾಕುತ್ತ
ಕಾಯುತ್ತೇನೆ ಅನವರತ.
ನಿನಗಾಗಿ ಅಲ್ಲದಿದ್ದರೂ
ಕಾಯುವಿಕೆಯಲ್ಲಿರುವ
ಸೆಳೆ ಮಿಂಚಿನ ಆ ಸುಖಕ್ಕಾಗಿ






0 Comments