ಪಾತ್ರ
ಭವ್ಯ ಎಚ್

ಅಲ್ಲಿ
ಆ ದಾರಿಯಲ್ಲಿ
ಕಲ್ಲಾದ ಅಹಲ್ಯೆಯರಿದ್ದಾರೆ
ಉಂಗುರ ಕಳೆದ ಶಕುಂತಲೆಯರೂ
ಕಳ್ಳ ಇಂದ್ರ ಮಾರುವೇಷದಲ್ಲಿ
ಹೊಂಚು ಹಾಕುತ್ತಿದ್ದಾನೆ
ರಾಮನ ಮಾತಿಗೆಳೆದ ವಿಶ್ವಾಮಿತ್ರ
ಬೇಕೆಂತಲೇ ತಡ ಮಾಡುತ್ತಾನೆ
ಕಲ್ಲುಗಳೋ ಹಾಗೇ ಇವೆ
ನೆನಪುಗಳು ಸತ್ತ ಮೀನಿನೊಳಗೆ
*
ಊರ್ಮಿಳೆ ಗೊತ್ತಲ್ಲ
ಹ್ಞಾಂ! ಅವಳೇ ಪಾಪದವಳು
ಇಲ್ಲೇ ಇದ್ದಾಳೆ
ಆಗಿಂದಲೂ ಅವಳದು ತಪೋನಿದ್ರೆ
ಕನಸಿನಲ್ಲಿ ಬರಬಹುದು ಲಕ್ಷ್ಮಣ
ಆದರೇನು?
ಕನಸಿಂದ ಕನಸುಗಳು ಹುಟ್ಟುತ್ತವಾ
*
ಆ ದಾರಿಯಲ್ಲೆಲ್ಲಾ ಹಾಗೇ
ಕನ್ನಡಿ ತೋರಿಸಿ ಚಂದ್ರ ಎನ್ನುತ್ತಾರೆ
ನಂಬುವವನು ರಾಮ
ಪರವಾಕ್ಯ ಪರಿಪಾಲಕ
ಸತಿಯ ಅಟ್ಟಿದ ಕಾಡಿಗೆ
ಸೀತಾದೇವಿ ಹೋಗೇ ಹೋದಳು
ಬೆಂಕಿಗೆ – ಕಾಡಿಗೆ – ಭೂಮಿಗೆ
ಅಲ್ಲೊಂದು ಕಡೆಯಂತೂ ಅವೇ ಗುರುತು
ಅಕಾರಣ ಬೂದಿಯಾದ ಕೊರಡಿನದು
ಬಿಕ್ಕುತ್ತಾ ಬಿರಿದ ಭೂಮಿಯದು
ನಿನಗೆ ಆ ದಾರಿ ನಿಜಕ್ಕೂ ಬೇಡ
*
ಸುಖದ ಎಷ್ಟು ಪಾಲಿದೆಯೋ
ಪಾಪದ್ದೆಲ್ಲಾ ಪಾಲು ಮಾತ್ರ ಕಳಚಿದ ಸೀರೆ ಕುಪ್ಪಸಕ್ಕೇ
ಕಳಚಿದವರು ಸದಾ ಕ್ಷೇಮ
ಸಾಕ್ಷಿಗೆ ಮೊಳೆಯುತ್ತೇವಲ್ಲ ಪಾಪದ ವೀರ್ಯಗಳಿಗೆ
ಆದರೂ ಪ್ರಯೋಜನವಿಲ್ಲ
ಅಹಲ್ಯೆ ಕಲ್ಲಾಗಲೇಬೇಕು
ಪತಿವ್ರತಾ ಧರ್ಮ..
ಕಲ್ಪಿಸಿಯೇ ಕೆಡುತ್ತಾಳೆ ರೇಣುಕೆ
ಧರ್ಮಪತ್ನಿಯ ಕರ್ಮ
**
ಬದಲಾಗಿತ್ತು ಯುಗ
ರಘುರಾಮನಿಂದ.. ಘನಶ್ಯಾಮನಿಗೆ
ಬದಲಾಗಿದ್ದು ಹೊಸದೇನೂ ಅಲ್ಲ
ಇಲ್ಲಿ ಹೆಣ್ಣ ಗೆದ್ದೇ ತರಬೇಕಿಲ್ಲ
ಕದ್ದೂ ತರುತ್ತಾನೆ ಕೃಷ್ಣ
ಹಂಚಿಕೊಳ್ಳಬಹುದು ಹೆಂಡತಿಯ
ಬಿಡು ಇದೆಲ್ಲಾ ದೇವರ ವಿಷಯ
ಮಾಡಿಕೊಳ್ಳಲಿ ಬೇಕಾದ್ದು
ಆದರೂ ಇದೇ ಹಾದಿಯಲ್ಲೆಲ್ಲೋ
ಅಳುತ್ತಾ ಕೂರುವ ದ್ರೌಪದಿಗೆ ನನ್ನ ಕನಿಕರವಿದೆ
ಆ ಏಕಾಂತದ ಘಳಿಗೆಯಲ್ಲವಳು ಅರ್ಜುನನ ವಧು
ಪಾಂಚಾಲಿಯಲ್ಲ
*
ಹೌದೇ..
ಇಲ್ಲಿ ಸಂಸಾರದ ಹೆಸರಿನಲ್ಲಿ ತ್ಯಾಗವಿದೆ
ತ್ಯಾಗದ ಹೆಸರಿನಲ್ಲಿ ಪಲಾಯನವಾದ
ಬಿಳಿಕುದುರೆಯ ರಾಜಕುಮಾರ ಇಷ್ಟಿಷ್ಟೆ ಸಾಯುವಾಗ
ಸಾವಿರ ಸಾವಿರ ಮಾದ್ರಿಯರು ನಿತ್ಯ ಸತಿ ಹೋಗುತ್ತಾರೆ
ನಿಯತಿಗಳಿಗೆಲ್ಲ ಅಲ್ಲಿ ಗಾಂಧಾರಿ ಪಟ್ಟಿ
ನಿನಗೇಕೇ ಆ ದಾರಿ… ಹೋಗಬೇಡ
*
ಸಿಡಿದ ಜ್ವಾಲಾಮುಖಿ ನೀರಾಗಿ ಹರಿಯುತ್ತಿದೆ ಇಲ್ಲಿ
ಸುಡುವ ಪಾದಗಳ ಉರಿ ಲೆಕ್ಕಿಸದೇ ಸುಮತಿ
ನಿತ್ಯ ತರುತ್ತಾಳೆ ಗಂಡನ ಹೊತ್ತು ಕೆಂಪುದೀಪದ ಮನೆಗೆ
ಮೋಸದ ವೈಧವ್ಯಕ್ಕೆ ತಾರೆ ಬಿಕ್ಕುತ್ತಲೇ ಇದ್ದಾಳೆ
ತನ್ನೊಳಗೆ ಸೀತೆ ಹುಡುಕುವ ಮಂಡೋದರಿ
ಕನ್ನಡಿಯ ಸುಳ್ಳೇ ದ್ವೇಷಿಸುತ್ತಾಳೆ
ಎಲ್ಲರೂ ಪತಿವ್ರತೆಯರೇ
ಯಾರೂ ಸುಖವಿಲ್ಲ ಈ ದಾರಿಯೊಳಗೆ
ಬೇಡ ನೀನಿಲ್ಲಿ
ಕಥೆ ಶುರುವಿಡುವುದಷ್ಟೇ ಗೊತ್ತು ಕಲಿಯುಗಕ್ಕೆ
ಪಾತ್ರಗಳು ಸದಾ ಅದಲಿ ಬದಲಿ
ನಾವಿರುವುದೇ ಸಾಕು
ಪುರಾಣಗಳ ಹಳೇ ವೇಷವಾಗಿ
ಸೀತಾ, ಸುಮತಿ, ಸಾವಿತ್ರಿ ಯಾರಾಗಲಿಲ್ಲ
ಕೊನೆಗೂ ಸ್ವಂತ ಹೆಸರಾಗಲಿಲ್ಲ
ನೀನಾದರೂ ಉಳಿ ಅಲ್ಲೇ
ಬದುಕಿಡು ಹೊಸ ಪುರಾಣದ ಮೊದಲ ಪುಟ






olleya kavite ; pratime – vishaya visleshane – niroopane dittavaagi niveditavaagive ; GOOD !!
ಕಥೆ ಶುರುವಿಡುವುದಷ್ಟೇ ಗೊತ್ತು ಕಲಿಯುಗಕ್ಕೆ
ಪಾತ್ರಗಳು ಸದಾ ಅದಲಿ ಬದಲಿ…
Waw… keep it up
manatattuva kavite..nice very nice..
Good 🙂