ಎಂ ಆರ್ ಗಿರಿಜಾ ಪ್ರವಾಸ ಕಥನ : 'ಪೋಲಾಂಡ್ ಹುಡುಗಿಯ ಧ್ಯಾನ ಮುಗಿಯಲೆಂದು ಕಾಯುತ್ತಾ…’

(ಇಲ್ಲಿಯವರೆಗೆ…)

ಆ ಬೆಟ್ಟದ ಏರು ದಾರಿಯ ನಂತರ ಸಮತಟ್ಟಾದರಸ್ತೆ ಸಿಗುತ್ತದೆ. ಅದಾದ ಬಳಿಕ ಮೆಟ್ಟಿಲು ದಾರಿ ಆರಂಭ. ಈ ಮೆಟ್ಟಿಲು ದಾರಿ ಕೆಳಗಿಳಿದು ಮತ್ತೆ ಮೇಲಕ್ಕೆ ಹತ್ತುತ್ತಾ ಹೋದರೆ ಅಲ್ಲೇ ಸಿಗುತ್ತದೆ ತಕ್ಸಂಗ್. ಈಗ ಮೆಟ್ಟಿಲು ಶುರುವಾಗುವ ಮೊದಲು ಅದರ ಒಳ್ಳೆಯ ನೋಟ ಸಿಕ್ತು. ಇದು ಎರಡನೇ ವ್ಯೂಪಾಯಿಂಟ್.
ನಾವು ನಾಲ್ವರು ಒಬ್ಬರಾದ ಮೇಲೆ ಒಬ್ಬರು ಫೋಟೋ ಕ್ಲಿಕ್ಕಿಸಿಕೊಂಡ್ವಿ. ಮೊದಲು ಮೆಟ್ಟಿಲುಗಳು ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಮೆಟ್ಟಿಲುಗಳನ್ನು ಮಾಡಿ, ಹ್ಯಾಂಡ್ ರೇಲಿಂಗ್ ಹಾಕಿದ್ದಾರೆ. ಹಿಂದೆ ಇದನ್ನು ಏರುವುದು ಇನ್ನೂ ಕಷ್ಟ ಇದ್ದು ಒಂದಿಬ್ಬರ ಪ್ರಾಣಾನೂ ಹೋಗಿತ್ತಂತೆ. ಮತ್ತೆ ನನ್ನ ಎಂಜಿನಿಯರಿಂಗ್ ಬುದ್ಧಿ ತಲೆ ಎತ್ತಿತು. ಈ ಎತ್ತರದಲ್ಲಿ, ದುರ್ಗಮವಾಗಿದ್ದ ದಾರಿಯಲ್ಲಿ ಇಂತಹ ಮೊನಚು ತುದಿಯಲ್ಲಿ ಮೊನೆಸ್ಟರಿ ಅದು ಹೇಗೆ ಕಟ್ಟಿದರು ಅಂತ ಮನಸ್ಸು ಅವಾಕ್ಕಾಯಿತು.
ಪೋಲಾಂಡ್ ಟೀಂನ ಗೈಡ್ ಹೇಳುತ್ತಿದ್ದ-ಅದನ್ನು ಕಟ್ಟಲು ಅತಿ ಮಾನುಷ ಶಕ್ತಿಗಳು ಸಹಾಯ ಮಾಡಿವೆ ಅಂತ. ಇರಬಹುದು ಅಂದುಕೊಂಡೆ. ಕೂಡಲೆ ಕೆ.ವಿ.ಅಯ್ಯರ್ ಶಾಂತಲಾ ಕಾದಂಬರಿಯಲ್ಲಿ ಹಳೇಬೀಡಿನ ದೇವಾಲಯದಲ್ಲಿ ಕಲ್ಲು ಬಸವಗಳು ಬಂದು ನೆಲಸಿದ ಪ್ರಕರಣದ ಕನಸಿನ ರೂಪದ ನಿರೂಪಣೆ ನೆನಪಿಗೆ ಬಂತು. ಈ ತಕ್ಸಂಗ್ ಭೂತಾನಿಗರ ಹೆಮ್ಮೆಯ ಪ್ರತೀಕ.
ಮೆಟ್ಟಿಲಿಳಿದು ಹತ್ತುವ ಮೊದಲು ಒಂದು ಜಲಪಾತವಿದೆ.ಇದನ್ನು ಡಾಕಿನಿ ಫಾಲ್ಸ್ ಅಂತಾರೆ. ಇಲ್ಲಿ ಹಿಮದ ಬಂಡೆಗಳಿದ್ದವು. ನಾವೇ ಮೊನೆಸ್ಟರಿ ತಲುಪಿದ ಆ ದಿನದ ಮೊದಲ ಪ್ರವಾಸಿಗರು. ಬ್ಯಾಗ್ ಗಳನ್ನು ಅಲ್ಲಿಯ ಲಾಕರ್ನಲ್ಲಿಟ್ಟು ಬರಿಗೈಯಲ್ಲಿ ಒಳಗೆ ಹೋಗಬೇಕು.ಇಲ್ಲಿ ವಿಪರೀತ ಚಳಿ. ನಾನು ಮೂರು ಲೇಯರ್ಗಳಲ್ಲಿ ಬಟ್ಟೆ ಹಾಗು ಕೋಟ್ ಧರಿಸಿದ್ದರೂ ಭಯಂಕರ ಚಳಿ ಆಗ್ತಾ ಇತ್ತು. ಕೈಗೆ ಗ್ಲೌಸ್ ತರೋದು ಮರೆತು ಬಂದಿದ್ದೆ. ನಡೆಯುವಾಗ ದೇಹ ಬಿಸಿ ಆಗಿತ್ತು. ಹೀಗಾಗಿ ಗೊತ್ತಾಗ್ತಾ ಇರಲಿಲ್ಲ. ನನ್ನ ಚಳಿ ತಡೆಯೋ ಶಕ್ತಿ ತುಂಬಾ ಕಡಿಮೆ.

ಈ ಇಡೀ ಆವರಣದಲ್ಲಿ ಮೂರು ಪ್ರಮಖ ದೇವಾಲಯಗಳು ಹಾಗೂ ಬೌದ್ಧ ಸಂನ್ಯಾಸಿಗಳಿಗೆ ಉಳಿದುಕೊಳ್ಳಲು ಬೇರೆ ವ್ಯವಸ್ಥೆಯಿದೆ. ಹಿಂದೆ ದೇವಾಲಯಕ್ಕೆ ಬೆಂಕಿ ಬಿದ್ದು ಸಣ್ಣಪುಟ್ಟ ಹಾನಿಯಾದಾಗಿನಿಂದ ದೇವಾಲಯದಲ್ಲಿ ಯಾರೂ ಉಳಿಯುವಂತಿಲ್ಲ. ಇದಲ್ಲದೆ ನಾವು ನಿಂತಿದ್ದ ಎತ್ತರಕ್ಕೂ ಇನ್ನೂ ಮೇಲೆ ಕೆಲವು ಕಟ್ಟಡಗಳಿದ್ದವು.ಅಲ್ಲಿ ಕೂಡ ಬೌದ್ಧ ಸಂನ್ಯಾಸಿಗಳು ಉಳಿದುಕೊಳ್ಳುತ್ತಾರೆ. ಅದು ಹೇಗೆ ಆ ಎತ್ತರದಲ್ಲಿ ಇರುತ್ತಾರೋ ಎಂದು ವಿಸ್ಮಿತಳಾದೆ.
ಭೂತಾನಿಗೆ ಬೌದ್ಧಧರ್ಮವನ್ನು 7ನೇ ಶತಮಾನದಲ್ಲಿ ತಂದ ಮಹಾನ್ ಪುರುಷ ಗುರು ಪದ್ಮಸಂಭವ ಅಥವಾ ಗುರು ರಿಂಪೋಚೆ. ಬಹುತೇಕ ಎಲ್ಲಾ ಮೊನೆಸ್ಟರಿಗಳಲ್ಲೂ ಇವರ ಪೇಂಟಿಂಗ್ ಅಥವಾ ವಿಗ್ರಹಗಳಿರುತ್ತವೆ. ಟಿಬೆಟಿನಿಂದ ಭೂತಾನಿಗೆ ಬಂದ ಎಂದು ಹೇಳಲಾದ ಈ ಯೋಗಿ ವಜ್ರಯಾನವನ್ನು ಭೂತಾನಿಗೆ ತಂದವನು. ಇವನನ್ನು ಎರಡನೇ ಬುದ್ಧ ಎಂದು ಇಲ್ಲಿನವರು ಆರಾಧಿಸುತ್ತಾರೆ. 7 ನೇ ಶತಮಾನದಲ್ಲಿ ಈ ಪ್ರಾಂತ್ಯದಲ್ಲಿದ್ದ ಅಸುರ ಶಕ್ತಿಗಳನ್ನು ನಿರ್ಣಾಮ ಮಾಡಲು, ಡೋರ್ಜ್ ಡೋಲೋ ಎಂಬ ಭಯಂಕರ ರೂಪಧಾರಣೆ ಮಾಡಿಕೊಂಡು ತನ್ನ ಸಹಚರಿ ಸಖಿಯನ್ನು ಹುಲಿಯಾಗಿ ಪರಿವರ್ತಿಸಿಕೊಂಡು ಅದರ ಮೇಲೆ ಸವಾರಿ ಮಾಡಿ ಹಾರಿ ಕೊಂಡು ಇಲ್ಲಿಗೆ ಬಂದಿದ್ದನಂತೆ. ಅದಕ್ಕೇ ಈ ಜಾಗಕ್ಕೆ ಟೈಗರ್ಸ್ ನೆಸ್ಟ್ ಎನ್ನುತ್ತಾರೆ. ಇಲ್ಲಿ ಬಂದು 3 ವರ್ಷ 3 ತಿಂಗಳು 3 ದಿನ ಇಲ್ಲಿಯ ಗುಹೆಯೊಂದರಲ್ಲಿ ಧ್ಯಾನಾಸಕ್ತರಾಗಿದ್ದರಂತೆ. ಗುರು ಹರಸಿದ ಜಾಗ ಇದೆಂಬುದು ಇವರ ನಂಬುಗೆ. ಗುರು ರಾಂಪೋಚೆ ಟೈಗರ್ಸ್ ನೆಸ್ಟ್ಗೆ ಬರುವ ಮೊದಲು ಎರಡು ಬಾರಿ ಭೂತಾನ್ ಗೆ ಬಂದರೆಂಬ ಹಲವಾರು ಕತೆಗಳಿವೆ.
ಭೂತಾನಿನ ಮೊನೆಸ್ಟರಿಗಳೆಂದರೆ ಕತೆ, ಉಪಕತೆ, ಪವಾಡಗಳು ಹಾಗೂ ಜನ್ಮ- ಪುನರ್ಜನ್ಮದ ಕಥನಗಳು. ಅವರ ಎಲ್ಲಾ ಯೋಗಿ, ಸಂತರೂ ಜನ್ಮಗಳ ಮೇಲೆ ಜನ್ಮ ಎತ್ತುತ್ತಾರೆ. ನನಗೆ ಈ ಕತೆಗಳೆಲ್ಲಾ ಬಹಳ ಗೊಂದಲ ಹುಟ್ಟಿಸಿಬಿಟ್ಟವು. ಬುದ್ಧನಿಗೆ ಸಂಬಂಧಿಸಿದ ಲಿಂಕ್ಗಳು ಕೊನೆಗೂ ತಲೆಗೆ ಹತ್ತಲಿಲ್ಲ. ಇಲ್ಲಿ ಆಯಸ್ಸಿನ ಹೆಚ್ಚಳದ ಬುದ್ಧ,ವಿವೇಕದ ಬುದ್ಧ, ಕಾರುಣ್ಯದ ಬುದ್ಧ ಹೀಗೆ ಹತ್ತಾರು ಬುದ್ಧಗಳಿದ್ದಾರೆ. ನಮ್ಮ ದೇಶದಲ್ಲಿ ಬುದ್ಧ ಅಂದರೆ ಬುದ್ಧ ಅಷ್ಟೆ. ಗುರು ರಿಂಪೋಚೆ ಧ್ಯಾನ ಮಾಡಿದ್ದರೆನ್ನಲಾದ ಗುಹೆ ಇರುವ ಜಾಗ ಇಲ್ಲಿಯ ಮುಖ್ಯ ದೇವಾಲಯ. ಈ ದೇವಾಲಯವಿರುವುದೇ ಗುಹೆಯಲ್ಲಿ, ಅದರ ಒಳಗೇ ಒಂದು ಸಣ್ಣ ಗುಹೆಯಿದ್ದು ಈ ಗುಹೆಯನ್ನು ಕೆಲವು ವಿಶೇಷ ದಿನಗಳಲ್ಲಿ ಮಾತ್ರ ತೆರೆಯಲಾಗುತ್ತದಂತೆ.
ನನ್ನ ಜೊತೆ ಬಂದಿದ್ದ ಪೋಲಾಂಡ್ ಹುಡುಗಿ ಇಲ್ಲಿ ಧ್ಯಾನ ಮಾಡುತ್ತೀನಿ ಅಂತ ಕುಳಿತುಬಿಟ್ಟಳು. ನಾನು ಅವಳ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಹೊರಗೆ ಕುಳಿತಿದ್ದೆ.ಅದೇನು ಧ್ಯಾನ ಮಾಡ್ತಾರೋ ಧ್ಯಾನ ಮಾಡೋ ಫ್ಯಾನ್ಸಿನೋ ತಿಳಿಯಲಿಲ್ಲ. ಧ್ಯಾನ, ಸೂಫಿ, ತಂತ್ರ ಎಲ್ಲಾ ಇವತ್ತು ಫ್ಯಾಷನ್ ಆಗಿದೆ ಅಂತ ಆಗಾಗ ಅನಿಸುತ್ತದೆ. ಅನೇಕ ಸಲ ಈ ವಿದೇಶಿಯರ ಧ್ಯಾನ , ಮಂತ್ರ , ಗುರು ಪ್ರೀತಿ ನೋಡಿದರೆ ನಗು, ಸಿಟ್ಟು ಬರುತ್ತೆ. ಪುಸ್ತಕ ಓದಿ ಕೊಂಡು ಅಲ್ಲಿ ಇಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಅದನ್ನು ಇಲ್ಲಿ ಆವಾಹಿಸಿಕೊಳ್ಳಲು ನೋಡುತ್ತಾರಾ ಅಂತ ಒಂದು ಅನುಮಾನ. ಅವರು ಪೂರ್ವವನ್ನು ಕುರಿತು ನಿಗೂಢ ಮಾಡಿ ಬರೆದ ಬರವಣಿಗೆಗಳನ್ನು ನಾವು ಓದಿ ಅದನ್ನು ಇನ್ನೂ ಕಷ್ಟ ಮಾಡಿಕೊಂಡು ಒದ್ದಾಡುತ್ತೇವೆ ಅನಿಸಿತು.
ನನಗೆ ಚಳಿಗೆ ಕೈ ಮರಗಟ್ಟಿಕೊಳ್ಳಲು ಶುರುವಾಯಿತು. ಈ ಮಹಾರಾಯಿತಿ ಇನ್ನು ಧ್ಯಾನದಿಂದ ಏಳ್ತನೇ ಇರಲಿಲ್ಲ. ಬಾಡಿ ಬಿಸಿ ಮಾಡ್ಕೊಳ್ಳೋಕೆ ನಾನು ನೆಗೀತ ಕುಣಿತ ನಿಂತಿದ್ದೆ. ಕೊನೆಗೂ ಅವಳು ಎದ್ದು ಬಂದ ಮೇಲೆ ಮತ್ತೊಂದು ದೇವಾಲಯದೊಳಗೆ ಹೋದ್ವಿ, ಅಲ್ಲಿ ಗುರು ಪದ್ಮಸಂಭವನ ರೂಪದ ವಿಗ್ರಹವಿದೆ, ಇದನ್ನು ಮಾತನಾಡುವ ಮೂರ್ತಿ ಎನ್ನುತ್ತಾರೆ. ಸಿಕ್ಕಾಪಟ್ಟೆ ಭಾರ ಇರೋ ಈ ಮೂರ್ತಿಯನ್ನು ಪಾರೋದಿಂದ ಹೊತ್ತು ತರೋದು ಕಷ್ಟ ಆಯ್ತಂತೆ. ಆಗ ಅದನ್ನು ಭಿನ್ನ ಮಾಡಿ ಮೇಲೆ ತಂದು ಜೋಡಿಸುವ ಯೋಚನೆಯಲ್ಲಿದಾಗ ಮೂರ್ತಿ ಮಾತನಾಡಿ ಇದನ್ನು ಇಲ್ಲೇ ಬಿಟ್ಟು ಹೋಗಿ, ನಾಳೆ ಯಾರೋ ಬಂದು ಸಾಗಿಸಿಕೊಡುತ್ತಾರೆ ಎಂದಿತಂತೆ. ಮರುದಿನ ಒಬ್ಬಾತ ಬಂದು ಹೂ ಎತ್ತಿದಂತೆ ಮೂರ್ತಿಯನ್ನು ಅದು ಈಗಿರುವ ಜಾಗಕ್ಕೆ ತಂದಿಟ್ಟು ಅದೃಶ್ಯನಾದನಂತೆ.

ಗುರುವಿನ 8 ಅವತಾರಗಳ ಚಿತ್ರಣವು ಗೋಡೆಯ ಮೇಲೆಲ್ಲಾ ಪೇಂಟಿಂಗ್ ರೂಪದಲ್ಲಿ ಮೂಡಿದೆ.ಭಿತ್ತಿ ಚಿತ್ರಕಲೆ ಇಲ್ಲಿ ಮಾಮೂಲು. ಶಬ್ರದುಂಗ್ ಟಿಬೇಟಿಯನ್ನರ ಹುಟ್ಟಡಗಿಸಿದ ಸುಂದರ ಚಿತ್ರಗಳಿವೆ.ಇನ್ನೊಂದು ಕಟ್ಟಡದಲ್ಲಿದ್ದ ದೇವಾಲಯ, ಸಂಪತ್ತಿನ ದೇವತೆಗೆ ಮೀಸಲು. ಈ ದೇವತೆ ಕುಬೇರನ ಸಹೋದರನಂತೆ ಎಂದು ಕೊಂಡೆ!ಇದು ತಕ್ಸಂಗ್ ಅನ್ನು ಕಾಯುವ ದೇವತೆಯೂ ಹೌದು.
ನಾನು ನಿಂತಿದ್ದ ದೇವಾಲಯದ ಕೆಳಗೆ ಮತ್ತೊಂದು ಗುಹೆಯಿದ್ದು ಅಲ್ಲಿ ಒಬ್ಬ ಯೋಗಿಯ ಸಮಾಧಿಯಿದೆ. ನಿಂತ ನೆಲದ ಕೆಳಗೆ ಒಂದು ಮುಚ್ಚಿರುವ ಬಾಗಿಲು ಇದ್ದು ಅದಕ್ಕೆ ನಾವು ಗೈಡ್ ಹೇಳಿದಂತೆ ದುಡ್ಡು ಹಾಕಿದೆವು. ಅದನ್ನು ವರ್ಷದಲ್ಲಿ ಯಾವುದೋ ವಿಶೇಷ ದಿನದಂದು ಮಾತ್ರ ಅಲ್ಲಿ ಜಮಾ ಆದ ಹಣವನ್ನು ಆ ದೇವಾಲಯದ ಲಾಮಾ ತೆಗೆಯುವರು.

ಇಡೀ ತಕ್ಸಂಗ್ ನ ಆವರಣ ಸಂಕೀರ್ಣವಾಗಿ ವಿನ್ಯಾಸಗೊಂಡಿದೆ. ಬಹುಪಾಲು ಗುಹೆಗಳೆ ಆಗಿವೆ. ಕಲ್ಲಿನ ಗೋಡೆಗಳ ಜೊತೆಗೆ ಹೊಸದಾಗಿ ಗೋಡೆಯನ್ನು ಕಟ್ಟಿ ವಿನ್ಯಾಸ ಮಾಡಿದ್ದಾರೆ. ಗುರು ಇಲ್ಲಿಗೆ ಬಂದದ್ದು 7ನೆ ಶತಮಾನದಲ್ಲಿಯಾದರೂ ಈ ದೇವಾಲಯ ತಲೆ ಎತ್ತಿದ್ದು ಬರೋಬರಿ ಅಲ್ಲಿಂದ 1000 ಸಾವಿರ ವರ್ಷಗಳ ನಂತರ. ಹನ್ನೊಂದನೇ ಶತಮಾನದಲ್ಲಿ ಮಹಾಯೋಗಿ ಮಿಲರೇಪಾ ಇಲ್ಲಿಗೆ ಬಂದು ಧ್ಯಾನ ಮಾಡಿದ್ದ ಎನ್ನುತ್ತಾರೆ. ತಕ್ಸಂಗ್ ನಲ್ಲಿ ಮಾಡುವ ಒಂದು ನಿಮಿಷದ ಧ್ಯಾನ ಬೇರೆ ಕಡೆ ಮಾಡುವ ತಿಂಗಳಾನುಗಟ್ಟಲೆ ಧ್ಯಾನಕ್ಕೆ ಸಮ ಎಂದು ಜನ ನಂಬಿಕೆ ಇದೆ.
(ಮುಂದುವರಿಯುವುದು…)
 

‍ಲೇಖಕರು avadhi

May 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಭೂತಾನ್ ಗೆ ಕೈ ಬೀಸುತ್ತಾ.. « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಭೂತಾನ್ ಗೆ ಕೈ ಬೀಸುತ್ತಾ.. May 21, 2014 by avadhinew (ಮುಂದುವರಿಯುವುದು…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: