ಅಹವಿ ಹಾಡು : ನನ್ನ ಸೇಲಂ ದಿನಗಳು

ಸೇಲಮ್‌ನಲ್ಲಿದ್ದ ನನ್ನ ಮಾಮನಿಗೆ ಇಬ್ಬರು ಮಕ್ಕಳು. ಶೀನ ನನಗಿಂತ 4 ವರ್ಷ ದೊಡ್ಡವನು ಮತ್ತು ನಿಮ್ಮಿ ನನ್ನ ಜೊತೆಯವಳು. ಶೀನಿ ಅಕ್ಕನ ದೋಸ್ತು. ನಿಮ್ಮಿ ನನ್ನ ಜೊತೆಯವಳು. ನಾವಿಬ್ಬರೂ ಸಣ್ಣ ವಯಸ್ಸಿನಿಂದ ಭಾರೀ ಪ್ಯಾಲಿ ಪ್ಯಾಲಿ. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಯಲ್ಲಿ ಝಾಂಡಾ ಹೊಡೆಯುತ್ತಿದ್ದ ದಿನಗಳಲ್ಲಿ ನಮ್ಮಿಬ್ಬರ ಮಧ್ಯೆ ತುಂಬ ಸ್ನೇಹ ಬೆಳೆದಿತ್ತು. ದೊಡ್ಡ ಹಂಡೆಯ ಒಲೆ ಉರಿ ಇದ್ದ ಬಚ್ಚಲಿನಲ್ಲಿ ಜಾಯಿಂಟ್ ವೆಂಚರ್ ಸ್ನಾನಮಾಡುವುದು, ಮನೆಯ ಅಂಗಳದಲ್ಲಿದ್ದ ಆಕಾಶಮಲ್ಲಿಗೆ ಹೂಗಳನ್ನು ಹೆಕ್ಕುವುದು (ಅಂಥಾ ಮುದ್ದಾದ ಆಕಾಶ ಮಲ್ಲಿಗೆ ಅನ್ನುವ ಹೆಸರು ಬಿಟ್ಟು, ಅದನ್ನು ಪೀಪಿ ಹೂವು ಎನ್ನುತ್ತಿದ್ದಂಥ ಅರಸಿಕ ಶಿಖಾಮಣಿಗಳು ನಾವು!), ಆ ಊರಿನ ಗೆಳತಿಯರ ಬಗ್ಗೆ ಗಾಸಿಪ್ ಮಾಡುವುದು, ಪುಸ್ತಕ ಕೊಂಡೊಯ್ದ ಗೆಳತಿ ಅದನ್ನು ವಾಪಸ್ ಮಾಡಲಿಲ್ಲವೆಂದು ಕೊಲೆ ಸಂಚು ಹೂಡುವುದು … ಇವೆಲ್ಲ ನಮ್ಮ ಮಧ್ಯದ ಬಂಧವನ್ನು ಹೆಚ್ಚಿಸಿದ್ದವು!

ಅದಾದ ನಂತರ ಅಜ್ಜ ಕೊಳ್ಳೆಗಾಲದ ಆ ಮನೆಯನ್ನು ಮಾರಿ ಊರು ಬಿಟ್ಟಾಗಿನಿಂದ, frequent ಭೇಟಿ ಇಲ್ಲದೆ ನಮ್ಮ ಸ್ನೇಹ ಸ್ವಲ್ಪ ಮಂಕಾಗಿತ್ತು. ಆದರೆ, ಅವಳು ಸೆಕೆಂಡ್ ಪಿಯುಸಿ ಮುಗಿಸಿದವಳು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೇರುವ ಉದ್ದೇಶದಿಂದ, ನಮ್ಮ ಮನೆಗೆ ಬಂದು ಸ್ವಲ್ಪ ದಿನವಿದ್ದಳು. ಹೊರನಾಡ ಕನ್ನಡಿಗರಿಗೆ ಮೀಸಲಾಗಿದ್ದ ಸೀಟಲ್ಲಿ ಒಂದನ್ನು ಪಡೆಯುವುದು ಅವಳ ಉದ್ದೇಶವಾಗಿತ್ತು. ಆಗ ಕನ್ನಡದ ಗಂಧ ಗಾಳಿ ತಿಳಿಯದ ಅವಳಿಗೆ ಅಕ್ಷರಗಳನ್ನು ಬರೆದುಕೊಟ್ಟು ಅಭ್ಯಾಸ ಮಾಡಿಸುತ್ತಿದ್ದೆ ನಾನು. ಅವಳು ತಿದ್ದುವ ಸಮಯದಲ್ಲಿ ನಾನೊಬ್ಬಳೇ ಸುಮ್ಮನೆ ಕೂತಿರಬೇಕಲ್ಲಾ ಅನ್ನುವ ಬೇಜಾರಿಗೆ ನಾನೂ ತಮಿಳು ಅಕ್ಷರಗಳನ್ನು ಕಲಿಯಲು ಶುರು ಮಾಡಿದ್ದೆ. ಆಮೇಲೆ ವಿಷ್ಣುವರ್ಧನನ ನಾಗರಹಾವು ಮತ್ತೆ ಥಿಯೇಟರಿಗೆ ಬಂದಿದೆ ಅಂತ ಗೊತ್ತಾಗಿ, 7 ಸಲ ಹೋಗಿ ಟಿಕೆಟ್ ಇಲ್ಲದೇ ಜೋಲು ಮೋರೆ ಹಾಕಿ ವಾಪಸ್ಸಾಗಿ, ಆ ನಂತರ ಎಂಟನೆಯ ಸಲಕ್ಕೆ ಟಿಕೆಟ್ ಬ್ಲ್ಯಾಕಿನಲ್ಲಿ ಕೊಂಡು ಕುಡಿಮೀಸೆಯ ವಿಷ್ಣುವನ್ನು ನೋಡಿ ಬೆಚ್ಚಗಾಗಿದ್ದೆವು ಒಟ್ಟೊಟ್ಟಿಗೇ! ದಿನಾ ಭಾಷ್ಯಂ ಸರ್ಕಲ್ಲಿಗೆ ವಾಕಿಂಗ್ ಹೋಗಿ, ಎದುರಾಗುವ ಸುಂದರರನ್ನು ಕಂಡು ಪುಳಕಿತರಾದೆವು ಒಟ್ಟೊಟ್ಟಿಗೇ … ಇದೆಲ್ಲದರ ಕಾರಣದಿಂದ ನಮ್ಮಿಬ್ಬರ ಮಧ್ಯೆ ಮತ್ತೆ ಸ್ನೇಹ ಗಟ್ಟಿಯಾಗಿ ಹೋಗಿತ್ತು.

ಅವಳು ಊರಿಗೆ ವಾಪಸ್ ಹೊರಡಬೇಕಾಗಿ ಬಂದಾಗ, ಮತ್ತೆ ಶುರುವಾಗಿದ್ದ ಈ ನಂಟಿನ ಕಾರಣವಾಗಿ ನನ್ನನ್ನೂ ಸೇಲಮ್‌ಗೆ ಬರಲು ಬಲವಂತ ಮಾಡಿದಳು. ಬೇಸಿಗೆಯ ರಣ ಉರಿಯಲ್ಲಿ ಸೇಲಮ್! ಎಂಥಾ ಒಳ್ಳೆಯ ಪ್ಲ್ಯಾನರ್‌ಗಳು ನಾವು! ಆದರೆ ಆ ಯೌವನದ ಉತ್ಸಾಹದಲ್ಲಿ ಬಿಸಿಲು, ಛಳಿ, ಮಂಜು ಎಲ್ಲ ಗೊತ್ತಾಗುತ್ತಲೇ ಇರಲಿಲ್ಲ. ಅವಳು ತೀರಾ ಬಲವಂತ ಮಾಡಿ ನನ್ನನ್ನೂ ಜೊತೆಗೆ ಕರೆದುಕೊಂಡು ಹೋದಳು. ಅಲ್ಲಿ ಅಜ್ಜಿ, ಅಜ್ಜ ಕೂಡಾ ಇದ್ದಿದ್ದರಿಂದ ನಾವೆಲ್ಲ ಸೇರಿ ಮಜದ ದಿನಗಳನ್ನು ಕಳೆಯಲು ಶುರು ಮಾಡಿದೆವು. ನಮ್ಮ ಅತ್ತೆಯಂತೂ ಸಿಕ್ಕಾಪಟ್ಟೆ ಒಳ್ಳೆಯವರು. ಅವರು ಒಂದು ದಿನಕ್ಕೆ ತಿನ್ನಲು ಹಾಕುತ್ತಿದ್ದುದು ಮುಂದಿನ ಮೂರು ದಿನಕ್ಕೆ ಸಾಲುವಷ್ಟಿರುತ್ತಿತ್ತು. ಒಂದು ಸಲಕ್ಕೆ ಬಟ್ಟಲಿನಲ್ಲಿ ಆರು ಜಾಮೂನು ಇಡುತ್ತಿದ್ದಂಥ ಅತ್ತೆ, ಸಂಜೆಯಾದರೆ ಉದ್ದಿನ ವಡೆ-ಪಕೋಡಾ-ಕೇಸರಿ ಬಾತು ಅಂತ ಮಾಡಿ ನಮ್ಮ ಕಂಠದವರೆಗೂ ತುರುಕುತ್ತಿದ್ದರು. ಇದ್ದಕ್ಕಿದ್ದ ಹಾಗೆ ರಾತ್ರಿ ಮಲಗಿದ್ದ ನಮ್ಮನ್ನು ಎಬ್ಬಿಸಿ, ‘ಡಿಕಾಕ್ಷನ್ ಉಳಿದು ಹೋಗಿದೆ ಅಂತ ಕಾಫಿ ಮಿಕ್ಸ್ ಮಾಡಿಬಿಟ್ಟಿದೀನಿ. ಕುಡಿದು ಬಿಡ್ರೋ’ ಅನ್ನುತ್ತಿದ್ದರು! ಹೊತ್ತಲ್ಲದ ಹೊತ್ತಲ್ಲಿ, ಗೊತ್ತಾದ ಕೆಲಸವಲ್ಲದೇ ಮತ್ತೇನನ್ನೋ ಮಾಡುವುದು ನನಗೆ ಇಂದಿಗೂ ತುಂಬ ಪ್ರಿಯವಾದ ಕೆಲಸ! ಹಾಗಾಗಿ ಆ ನಡು ರಾತ್ರಿಯಲ್ಲಿ ಕೊಳಗ ಕಾಫಿ ಕುಡಿದು, ಮತ್ತಿಷ್ಟು ಹೊತ್ತು ಹರಟಿ ಮಲಗುತ್ತಿದ್ದೆವು. ನನ್ನ ಮಾಮ ಮಾತ್ರ ತುಂಬ ಭಯದ ಸ್ವಭಾವದವರು. ಅದಕ್ಕೆ ದನಿಗೂಡಿಸಲು ನನ್ನ ಪುಕ್ಕಲು ಅಜ್ಜಿಯೂ ಇದ್ದರು. ಹಾಗಾಗಿ ಹೊರಗಡೆ ತಿರುಗಾಡುವುದಕ್ಕೆ ಮಾತ್ರ ಮಾಮ ಬಿಡುತ್ತಲೇ ಇರಲಿಲ್ಲ. ನಾವು ಭಂಡತನಕ್ಕೆ ಬಿದ್ದು ಹೊರಟು ಬಿಡುತ್ತಿದ್ದೆವು. ಆದರೆ, ಹೋದವರು ಸ್ವಲ್ಪ ಸಮಯದಲ್ಲಿ ವಾಪಸ್ ಬಾರದಿದ್ದರೆ, ಸೆಖೆಗೆ ಬನಿಯನ್, ಶರ್ಟು ಎಲ್ಲ ಕಳಚಿ ಕೂತಿರುತ್ತಿದ್ದ ಮಾಮ ಹಾಗೆಯೇ ನಮ್ಮನ್ನು ಹುಡುಕಲು ಹೊರಟು ಬಿಡುತ್ತಿದ್ದರು! ಒಂದು ದಿನ ಶಾವಿಗೆ ತರಲು ಹೋದ ನಮಗೆ ಒಬ್ಬಳು ಗೆಳತಿ ಸಿಕ್ಕಿಬಿಟ್ಟಳು. ಒಂದರ್ಧ ಘಂಟೆ ತಡವಾಗಿಹೋಗಿ, ನಾವಿಬ್ಬರೂ ಅರ್ಜೆಂಟಿನಲ್ಲಿ ವಾಪಸ್ ಬರುತ್ತಿದ್ದರೆ, ಕತ್ತಲಿನಲ್ಲಿ ಬರೀ ಪಂಚೆ ಧರಿಸಿದ್ದ ಒಂದು ಆಕಾರ ಎದುರಾಯ್ತು. ನಾವು ‘ನೋಡು ಬರೀ ಪಂಚೇಲಿ, ಕಾಲಿಗೆ ಚಪ್ಪಲಿಯೂ ಇಲ್ದೇ ಯಾರೋ ಬೀದಿ ಸುತ್ತುತ್ತಿರೋದು’ ಅಂತ ಆಡಿಕೊಂಡ ನಂತರ ಬೆಳಕು ಮುಖದ ಮೇಲೆ ಬಿದ್ದಾಗ ನೋಡಿದರೆ ಅದು ನನ್ನ ಮಾಮ! ಅಬ್ಬಾ, ಅವತ್ತು ಅದಕ್ಕಾಗಿ ತುಂಬ ಇರಿಟೇಟ್ ಆಗಿದ್ದೆವು ನಾವಿಬ್ಬರೂ, ಆದರೆ ಇವತ್ತು ಆ ಮಾಮನ ಪ್ರೀತಿ ನೆನೆದು ಖುಷಿಯೆನ್ನಿಸುತ್ತದೆ. ಇಂಥಾ ಸುಖದ ವಾತಾವರಣದಲ್ಲಿ ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ನಾನು ಬೆಂಗಳೂರನ್ನು ಮರೆತು ಅಲ್ಲೇ ಝಾಂಡಾ ಊರಿದೆ!

ಹಾಗೊಂದು ದಿನ ನಾನು ಮತ್ತು ನಿಮ್ಮಿ ಪಟ್ಟಾಂಗ ಹೊಡೆಯುತ್ತಿರಬೇಕಾದರೆ ಶೀನನ ಫ಼್ರೆಂಡ್ ಒಬ್ಬ ಬಂದ. ಕಿಸಿ ಪಿಸಿ ನಗುತ್ತಾ, ಮಾತಾಡುತ್ತ ಕೂತಿದ್ದ ನಾವಿಬ್ಬರೂ ‘ಶ್ರೀನಾಥ್ ಇದ್ದಾನ?’ ಅಂತ ದನಿ ಬಂದ ಕಡೆ ತಿರುಗಿದವರೇ ಅವನನ್ನು ಕಂಡು ಸ್ತಬ್ಧರಾಗಿ ಹೋಗಿದ್ದೆವು … ಕಡೆದ ಕಲ್ಲಿನಂತಿದ್ದ ಅವನು! ಸ್ವಲ್ಪ ಕಪ್ಪು ಅನ್ನಬಹುದಾದ ಬಣ್ಣ, ಬಾವುಟದಂಥ ಮೂಗು, ಮುದ್ದಾದ ನಗು … ದೇವರೇ! ಸಂಪೂರ್ಣ ವಶೀಕರಣಕ್ಕೊಳಗಾದೆವು ನಾವಿಬ್ಬರೂ. ಅವನು ವಿಜಿ, ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆ ತೆಗೆದುಕೊಂಡಿದ್ದನಂತೆ. ಹಾಗಾಗಿ ರಜೆಗೆ ಅಮ್ಮನ ಮನೆಗೆ ಬಂದಿದ್ದವನು, ಗೆಳೆಯನನ್ನು ನೋಡಲು ಬಂದಿದ್ದ. ಬಂದವನು ಆರಾಮವಾಗಿ ನಮ್ಮಿಬ್ಬರ ಜೊತೆ ಮಾತಿಗೆ ಕೂತೇಬಿಟ್ಟ. ಭಲೇ ಸರಸಿ ಮಾತುಗಾರ. ನನಗೋ ಆಗ ಇಂಗ್ಲೀಷ್ ಆರಾಮವಾಗಿ ಮಾತಾಡಲು ಬರುತ್ತಿರಲಿಲ್ಲ ಬೇರೆ. ಅವನೋ ಇಂಗ್ಲೀಷ್ ಸರಸ್ವತಿ! ಕೀಳರಿಮೆಯಲ್ಲೇ ಅವನೆದುರು ಕೆಟ್ಟ ಪಟ್ಟ ಇಂಗ್ಲೀಷ್ ಮಾತಾಡುತ್ತ ಕೂತೆ. ನಿಮ್ಮಿ ಅವನನ್ನು ಚಿಕ್ಕಂದಿನಿಂದ ನೋಡುತ್ತ ಬೆಳೆದವಳು, ಆದರೂ ಈಗ ಅವನನ್ನು ಕಂಡು ಮರುಳಾಗಿ ಹೋಗಿದ್ದಳು! ಅಬ್ಬಾ .. ಯೌವನದ ಕರಾಮತ್ತೇ!!! ಶೀನ ಹೊರಗೆ ಹೋಗಿದ್ದವನು ವಾಪಸ್ ಬಂದ. ಆದರೆ ನಮ್ಮ ಜೊತೆ ಹರಟುತ್ತ ಕೂತ ವಿಜಿ ಏಳುವ ಲಕ್ಷಣ ತೋರಿಸಲಿಲ್ಲ! ಅವನನ್ನು ಹೊರಡಿಸುವ ಪ್ರಯತ್ನ ಮಾಡಿದ ನಮ್ಮ ಶೀನ ಕೊನೆಗೆ ಅದು ವ್ಯರ್ಥ ಅಂತ ಅರ್ಥವಾಗಿ ಸುಮ್ಮನಾಗಿದ್ದ. ಆ ರಾತ್ರಿ ನಾನು ಮತ್ತು ನಿಮ್ಮಿ ತುಂಬ ಹೊತ್ತು ನಿದ್ರಿಸಲಿಲ್ಲ…..!!

ಮರು ದಿನದಿಂದ ಅವನು ದಿನವೂ ಬರಲು ಶುರು ಮಾಡಿದ. ನಾವು ರೂಮಿನಲ್ಲಿ ಕೂತಿದ್ದರೆ ಸೀದಾ ಅಲ್ಲಿಗೇ ಬಂದು ಹರಟಲು ಶುರು ಮಾಡಿದ. ನನ್ನ ಮಾಮ ತುಂಬ ಸ್ಟ್ರಿಕ್ಟ್, ಜೊತೆಗೆ ಅಜ್ಜ-ಅಜ್ಜಿ ಬೇರೆ ಸಪೋರ್ಟಿಗೆ. ಅವರಿಗೆಲ್ಲ ಗಂಡೊಬ್ಬನು ಹೆಣ್ಣು ಹೈಕ್ಳ ಜೊತೆ ರೂಮಿಗೇ ಬಂದು ಕೂತು ಇಷ್ಟೆಲ್ಲ ಮಾತಾಡುವುದು ಇರಿಸು ಮುರುಸಾಗುತ್ತಿತ್ತು. ಆದರೆ ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ. ಶೀನಿಗೂ ಬಹುಶಃ ಇಷ್ಟವಿರಲಿಲ್ಲ ಅನ್ನಿಸುತ್ತದೆ. ಹಾಗಾಗಿ ವಿಜಿ ಬರುವ ಮೊದಲೇ ಇವನೇ ಅವರ ಮನೆಗೆ ಹೋಗಲು ಶುರು ಮಾಡಿದ! ಆ ಭಂಡ ವಿಜಿ ‘ಅವ್ರಿಬ್ರೂ ಬರ್ಲಿಲ್ವಾ? ಸರಿ ನಡಿ, ನಾನೇ ನಿಮ್ಮನೆಗೆ ಬರ್ತೀನಿ’ ಅಂತಂದು ಬಂದು ಬಿಡುತ್ತಿದ್ದ. ಇವ ವಿಧಿಯಿಲ್ಲದೇ ಅವನನ್ನು ಕರೆ ತರುತ್ತಿದ್ದ. ಹರಟೆ, ಹರಟೆ, ಹರಟೆ … ಜೊತೆ ಜೊತೆಗೆ ಸಿಕ್ಕ ಸಿಕ್ಕ ತಮಿಳು ಸಿನೆಮಾ ಎಲ್ಲ ನೋಡಲು ಶುರು ಮಾಡಿದೆವು … ಅವನೂ ಜೊತೆಗಿರುತ್ತಿದ್ದ ಅನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಅಲ್ಲವಾ!!

ಬರ ಬರುತ್ತಾ ಮನೆಯಲ್ಲಿ ದೊಡ್ಡವರ ಮುಖದಲ್ಲಿ ಸ್ವಲ್ಪ ಬೇಸರ ಕಾಣಿಸಲು ಶುರುವಾಯ್ತು. ವಿಜಿಯ ವಶೀಕರಣದಲ್ಲಿದ್ದ ನಮಗೆ ಅದೆಲ್ಲ ಅರ್ಥವಾಗುತ್ತಿದ್ದರೂ ಅವನು ಬಂದರೆ ಮಾತಾಡದೇ ರೂಮಿನಲ್ಲಿ ಉಳಿಯಲು ಆಗುತ್ತಲೇ ಇರಲಿಲ್ಲ. ಈ ಮನೆಯಲ್ಲಿನ ಅಶಾಂತಿ ತಪ್ಪಿಸಲು ನಾವಿಬ್ಬರೂ ಅವನು ಬರುವ ಮೊದಲು ನಾವೇ ಅವನ ಮನೆಯ ಕಡೆ ಹೊರಟು ಬಿಡಲು ಶುರು ಮಾಡಿದೆವು. ದೇವಸ್ಥಾನಕ್ಕೋ, ಎಲ್ಲಿಗೋ ಹೋಗುತ್ತೇವೆ ಅಂತ ಹೇಳಿ ಸುಳ್ಳು ಹೇಳಿದ್ದಕ್ಕೆ ದೇವರು ಶಾಪ ಕೊಟ್ಟಾನೆಂಬ ಹೆದರಿಕೆ. ಹಾಗಾಗಿ ಬರಬರನೇ ದೇವರಿಗೊಂದು ನಮಸ್ಕಾರ ಹಾಕಿ ಅವನ ಮನೆಯ ಮುಂದೆ ಬರುತ್ತಿದ್ದೆವು. ಅದು ಹೇಗೋ ವಿಜಿ ಸಾಧಾರಣವಾಗಿ ಹೊರಗೆ ನಿಂತಿರುತ್ತಿದ್ದ. ನಮ್ಮನ್ನು ಒಳ ಬರಲು ಕರೆಯುತ್ತಿದ್ದ. ನಾವು ಅವನ ಮನೆಗೇ ಹೋಗಿ ಹರಟಲು ಶುರು ಮಾಡಿದೆವು. ಅವನ ತಾಯಿ ಮತ್ತು ಮನೆಯ ಉಳಿದ ಸದಸ್ಯರೆಲ್ಲ ತುಂಬ ಆರಾಮ ಜೀವಿಗಳು. ನಾವು ಹೋದರೆ ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಮನೆಯವರು ಮಾತ್ರ ಯಾಕೆ ಹೀಗೆ ಅಂತ ತಲೆ ಕೆಡಿಸಿಕೊಳ್ಳುತ್ತಿದ್ದೆವು. ಉತ್ತರ ಸಿಗಲಿಲ್ಲ. ಒಂದೊಂದು ಸಲ ಅವನು ‘ಹೊರಗೆ ವಾಕಿಂಗ್ ಹೋಗೋಣ್ವಾ?’ ಅನ್ನುತ್ತಿದ್ದ. ನಾವಿಬ್ಬರೂ ವಾಕಿಂಗ್ ಏನು … ಅವ ಕರೆದರೆ ಸೈಬೀರಿಯಾಕ್ಕೂ ಹೋಗಲು ತಯಾರಾಗಿದ್ದೆವು! ಕುಣಿಯುತ್ತಾ ಅವನ ಜೊತೆ ಹೊರಡುತ್ತಿದೆವು. ಅವ ದಾರಿಯುದ್ದಕ್ಕೂ ಸಿಗರೇಟು ಹಚ್ಚಿ, ಸೇದುತ್ತಾ ಬರುತ್ತಿದ್ದ. ಸಿಗರೇಟು ಸೇದುವವರನ್ನು ಕಂಡರೆ ನನಗೆ ತುಂಬ ಪ್ರೀತಿ ! ಅವನನ್ನು ಬಿಟ್ಟ ಕಣ್ಣಿಂದ ನೋಡುತ್ತಾ ನಡೆಯುತ್ತಿದ್ದೆ … ಬ್ಯಾಕ್ ಗ್ರೌಂಡಿನಲ್ಲಿ ‘ಅಂದಿ ಮಳೈ ಪೊಳಿಗಿರದು …’ ಅನ್ನುವ ರಾಜ ಪಾರ್ವೈ ಸಿನೆಮಾದ ಹಾಡು ಪ್ಲೇ ಆಗುತ್ತಿತ್ತು …ಸೇಲಮ್‌ನ ಉರಿ ಬೆರೆತ ಬಿರು ಬೇಸಿಗೆಯಲ್ಲೂ …!

ಅವನು ಮನೆಗೆ ಬರುವುದು ಕಡಿಮೆ ಮಾಡಿದ. ನಾವು ಅವನು ಸಿಕ್ಕಿದ್ದನ್ನು ಹೇಳುತ್ತಲೇ ಇರಲಿಲ್ಲ. ಹಾಗಾಗಿ ಮನೆಯಲ್ಲಿ ಶಾಂತಿ ನೆಲೆಸಿತು. ಆ ಕಾಲ ನೆನೆಸಿಕೊಂಡರೆ ನಗು ಬರುತ್ತದೆ. ಮಾಮನ ಮಗ ಶೀನಿಗೆ ಮಾತ್ರ ಗೊತ್ತಿತ್ತು, ಆದರೂ ಸುಮ್ಮನಾಗಿ ಬಿಟ್ಟಿದ್ದ ಪಾಪದವನು. ಒಂದು ದಿನ ಮಾತ್ರ ಅವನ ಅಸಹನೆ ಇನ್‍ಡೈರೆಕ್ಟ್ ಆಗಿ ಹೊರಬಿದ್ದಿತ್ತು. ವಿಜಿ ಸಿಗರೇಟು ಸೇದುವುದನ್ನು ಕಂಡ ನಮಗೆ, ನಾವೂ ಒಂದು ಸಲ ಅದನ್ನು ಸೇದಿ ಹೇಗಿರುತ್ತೆ ಅಂತ ನೋಡಿಬಿಡುವ ಆಸೆ ಹುಟ್ಟಿಬಿಟ್ಟಿತು! ಶೀನಿ ಧರ್ಮಭೀರು. ತುಂಬ ಸಾಧು. ಸಿಗರೇಟು ಮುಟ್ಟಿದವನೂ ಅಲ್ಲ. ಅಂಥ ಪಾಪದವನಿಗೆ ನಾವು ಒಂದು ಸಿಗರೇಟು ತಂದುಕೊಡು ಅಂತ ದುಂಬಾಲು ಬಿದ್ದೆವು. ಅವನು ‘ನಿಮ್ಮಿಬ್ರಿಗೆ ತಲೆ ಕೆಟ್ಟಿದೆಯೇನ್ರೇ’ ಅಂತ ಉಗಿದು ಸೊಪ್ಪು ಹಾಕಿದ. ನಾವಿಬ್ಬರೂ ಹಠಕ್ಕೆ ಬಿದ್ದೆವು. ಅವನು ಸಾಧ್ಯವಿಲ್ಲ ಅಂತ ನಿರಾಕರಿಸಿದ. ನಾವು ‘ಈಗೇನಪ್ಪಾ ಫೈನಲ್ಲಾಗಿ ಹೇಳು, ತರ್ತೀಯೋ ಇಲ್ವೋ’ ಅಂತ ಈಗಿನ ರೌಡಿ ಸಿನೆಮಾಗಳಲ್ಲಿ ಮಾತಾಡುವ ರೀತಿ ಬೆದರಿಕೆ ಹಾಕಿದಾಗ ಅವನಿಗೆ ಸಿಟ್ಟು ನೆತ್ತಿಗೇರಿ ‘ತರಲ್ಲ ಹೋಗ್ರೇ’ ಅಂತ ನಿರಾಕರಿಸಿ ಬಿಟ್ಟ. ‘ಇದೇ ಮಾತಾ? ಸರಿ ಬಿಡು ವಿಜಿಗೆ ಹೇಳಿದ್ರೆ ತಂದುಕೊಟ್ಟು, ಅವನೇ ಸೇದೋದೂ ಕಲಿಸ್ತಾನೆ’ ಎಂದು ಬಿಟ್ಟೆವು! ಶೀನಿ ‘ಅಯ್ಯೋ ಏನೋ ಹೇಳ್ತಿದಾವೆ. ಅಷ್ಟೆಲ್ಲಾ ಧೈರ್ಯ ಎಲ್ಲಿಂದ ಬರಬೇಕು’ ಅಂದುಕೊಂಡು ಅದನ್ನೇ ಸವಾಲಾಗಿ ಸ್ವೀಕರಿಸಿ ‘ಸರಿ, ಅವನ ಹತ್ರ ಹೋಗಿ ಕಲಿತ್ರೆ ನಿಮ್ಗೆ ಹತ್ತು ರೂಪಾಯಿ ಕೊಡ್ತೀನಿ, ಬೆಟ್ಸ್?’ ಅಂದ. ನಾವಿಬ್ಬರೂ ಆ ಬೆಟ್ಸನ್ನು ಸ್ವೀಕರಿಸಿದೆವು ಕಣ್ಣು ರೆಪ್ಪೆ ಕೂಡಾ ಪಿಳುಕಿಸದೇ. ಅವನು ಹೋಗಿ ಮಲಗಿದ ಮೇಲೆ ಅನ್ನಿಸಿರಬೇಕು ‘ಈ ಹೆಮ್ಮಾರಿಯರು ಅವನನ್ನು ಕೇಳಿದರೂ ಆಶ್ಚರ್ಯ ಇಲ್ಲ’ ಅಂತ. ಮಲಗಿದ್ದವನು ಮಧ್ಯರಾತ್ರಿಯಲ್ಲಿ ರೂಮಿಗೆ ಬಂದು ‘ನನ್ನ ಬೆಟ್ಸ್ ವಾಪಸ್ ತಗೊಂಡಿದೀನಿ. ಅವನನ್ನ ಕೇಳ್ಬೇಡ್ರೇ … ಹೋಗಿ ಆಮೇಲೆ ಎಲ್ಲ ಫ಼್ರೆಂಡ್ಸ್‌ಗೂ ಹೇಳ್ಕೊಂಡು ಬರ್ತಾನೆ. ನೀವಿಬ್ಬರೂ ಪೀಡೆಗಳು ಸುಮ್ಮನಿರಿ’ ಅಂದಿದ್ದ!

ಹೀಗಿರುವಾಗ ಒಂದು ದಿನ ಅಲ್ಲಿಂದ 30-40 ಕಿಲೋಮೀಟರ್ ದೂರದಲ್ಲಿದ್ದ ಏರ್ಕಾಡಿಗೆ ಹೋಗುವ ಪ್ಲ್ಯಾನ್ ಹಾಕಿದೆವು. ಬೆಳಿಗ್ಗೆಯೇ ಎದ್ದು ಬಿಸಿಬೇಳೆ ಬಾತ್ ಮಾಡಿ ಡಬ್ಬಿಗೆ ಹಾಕಿಕೊಟ್ಟ ಅತ್ತೆ ‘ವಿಜಿನ ಕರೀಬೇಡಿ’ ಅಂದರು! ನಮ್ಮ ಅಜ್ಜ-ಅಜ್ಜಿ-ಮಾಮ ಎಲ್ಲರ spokesperson ಆದ ನಮ್ಮತ್ತೆಯ ಮಾತದು ಅನ್ನುವುದು ನಮಗೆ ಗೊತ್ತಿತ್ತು. ನಾವು ಒಳಗೊಳಗೇ ನಗುತ್ತಾ ‘ಅವನು ಬರ್ತಿಲ್ಲ’ ಅಂದೆವು. ಶೀನಿ ಕೂಡಾ ಆ ಪ್ರೋಗ್ರಾಮನ್ನು ಗುಟ್ಟಾಗಿಟ್ಟಿದ್ದ ವಿಜಿಗೆ ತಿಳಿಯದಂತೆ. ಆದರೆ ದೇವರು ನಮ್ಮ ಪರವಾಗಿದ್ದ ! ನಾವೆಲ್ಲ ಮನೆಯಿಂದ ಮೂಲೆಗೆ ಬಂದು ಎಡಕ್ಕೆ ತಿರುಗಿದರೆ ಬಸ್ ಸ್ಟಾಪ್ ಮತ್ತು ನೇರಕ್ಕೆ ಹೋದರೆ ಅಲ್ಲೂ ಒಂದು ಬಸ್ ಸ್ಟಾಪ್. ಆದರೆ ನೇರಕ್ಕೆ ಹೋದರೆ ವಿಜಿಯ ಮನೆ ಸಿಗುತ್ತಿತ್ತು. ಹಾಗಾಗಿ ಶೀನಿ ಎಡಕ್ಕೆ ತಿರುಗಲು ಹೇಳಿದ. ನಾವು ಎಡಕ್ಕೆ ಇನ್ನೇನು ತಿರುಗಬೇಕು … ಅಷ್ಟರಲ್ಲಿ ವಿಜಿ ಎದುರಾಗಿಬಿಟ್ಟ! ನನ್ನ ಮತ್ತು ನಿಮ್ಮಿಯ ಕಣ್ಣಲ್ಲಿ ನಕ್ಷತ್ರ! ಅವನು ಎಲ್ಲಿಗೆ ಅಂತ ಕೇಳಿದ ನಂತರ ಕೂಲಾಗಿ ‘ಏರ್ಕಾಡಿಗಾ? ನಾನೂ ಬರ್ತೀನಿ’ ಅಂದವನೇ ನಿಂತ ಕಾಲಲ್ಲಿ ನಮ್ಮ ಜೊತೆ ನಡೆಯಲು ಶುರು ಮಾಡಿದ. ಶೀನಿ ಬೇಡ ಅಂತ ಹೇಗೆ ಹೇಳಲು ಸಾಧ್ಯ? ಸುಮ್ಮನಾಗಿಬಿಟ್ಟ. ನಾನು, ನಿಮ್ಮಿ, ಶೀನಿ ಮತ್ತು ವಿಜಿ ಏರ್ಕಾಡಿನ ಬಸ್ ಹತ್ತಿದೆವು. ಮನೆಯವರಾರಿಗೂ ಅದರ ಸುಳಿವೂ ಇಲ್ಲ!

ಅಲ್ಲಿ ಓಡಾಡಿದೆವು, ಕಾರ್ಡ್ಸ್ ಆಡಿದೆವು, ನಕ್ಕೆವು, ಒಗಟು ಹೇಳಿಕೊಂಡೆವು. ತೆಲುಗಿನವನಾದ ಅವನು ತೆಲುಗು ತ್ಯಾಟ ಅಂತಲೂ, ನಾನು ಕನ್ನಡ ಕಸ್ತೂರಿ ಅಂತಲೂ ಹೋರಾಡಿದೆವು. ತೆಲುಗು ಮಾತೃಭಾಷೆಯ ನಾನು ‘ಅದೇನಂಥಾ ತ್ಯಾಟ ಇಲ್ಲ ಬಿಡು’ ಅಂತ ಹರಕು ಮುರುಕು ಇಂಗ್ಲೀಷಿನಲ್ಲಿ ರೇಗಿಸಿದೆ. ಊಟ ಮಾಡಿದೆವು. ಕ್ವೀನ್ಸ್ ಪಾಯಿಂಟ್ ಅಂತನ್ನಿಸುತ್ತದೆ, ಆ ಹೆಸರಿನ ಜಾಗದಲ್ಲಿ ಕೂತು ಅದರ ಸೌಂದರ್ಯದಲ್ಲಿ ಕಳೆದು ಹೋದೆವು. ಆ ಜಾಗವೇ ಚೆಂದವಿತ್ತೋ, ವಿಜಿ ಇದ್ದ ಅಂತ ಅಷ್ಟೊಂದು ಚೆಂದವಾಗಿ ಕಂಡಿತೋ ನನಗೆ ಇವತ್ತಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಬೆಳಿಗ್ಗೆ ಹೋದವರಿಗೆ ಕತ್ತಲು ಆವರಿಸಿದ್ದೂ ಗೊತ್ತಾಗದ ಹಾಗೆ ಮಾತಿನಲ್ಲಿ ಮುಳುಗಿ ಹೋಗಿದ್ದೆವು. ಕತ್ತಲಾದ ಮೇಲೆ ಮನೆಯ ನೆನಪಾಯ್ತು. ಬನಿಯನ್ನು, ಶರ್ಟು, ಚಪ್ಪಲಿ ಇಲ್ಲದೇ ಬಸ್ ಸ್ಟಾಪಿನ ಪಕ್ಕ ನಿಂತಿರುವ ಮಾಮನ ಚಿತ್ರ ಕಣ್ಣೆದುರು ಬಂತು. ಗಾಭರಿಯಾಗಿ ಸೇಲಮ್ ಬಸ್ಸು ಹಿಡಿಯಲು ಹೊರಟೆವು. ಆ ಅಂಕು ಡೊಂಕಿನ ಹಾದಿಯಲ್ಲಿ ಆ ಬಸ್ಸು ಅಲ್ಲಾಡಿಕೊಂಡು ಊರು ತಲುಪುವಷ್ಟರಲ್ಲಿ ಕತ್ತಲಾಗಿ ಎರಡು ಘಂಟೆ ಕಳೆದು ಹೋಗಿತ್ತು. ನಾವು ಬಯ್ಗುಳ ಸುರಿಮಳೆಯ ನಿರೀಕ್ಷೆಯಲ್ಲಿ ಮನೆಯ ಕಡೆ ಓಡಿದೆವು…

ಕಾಂಪೌಂಡಿನಲ್ಲಿ ಖುರ್ಚಿ ಹಾಕಿ ಕೂತ ಅಜ್ಜ-ಅಜ್ಜಿ, ಅತ್ತಿಂದಿತ್ತ ಓಡಾಡುತ್ತಿದ್ದ ಮಾಮ ಮತ್ತು ಮೆಟ್ಟಿಲ ಮೇಲೆ ಕೂತಿದ್ದ ಅತ್ತೆ ಕಂಡರು. ಅರ್ರೆ! ಮಾಮ ನಮ್ಮನ್ನು ಹುಡುಕಲು ಹೋಗಿಲ್ಲದೇ ಮನೆಯಲ್ಲೇ ಇದ್ದಾರೆ!! ನಮಗಂತೂ ಆಶ್ಚರ್ಯ. ನನ್ನ ಮಾಮನ ಸ್ವಭಾವದ ಲೆಕ್ಕಕ್ಕೆ ತೆಗೆದುಕೊಂಡರೆ ಅಷ್ಟು ಹೊತ್ತಿಗೆ ಪೊಲೀಸ್ ಕಂಪ್ಲೇಂಟೇ ಕೊಟ್ಟಿರಬೇಕಿತ್ತು! ಮತ್ತೆ … ಇದು ಹೇಗೆ … ಈ ಶಾಂತಿ … ಈ ನೆಮ್ಮದಿ … ಈ ವಾತಾವರಣ! ನಾವು ಗೇಟಿನೊಳಗೆ ಕಾಲಿಡುತ್ತಿರುವಂತೆಯೇ ಮಾಮ ಬಯ್ಯಲು ಶುರು ಮಾಡಿದರು. ಆದರೆ ಆ ದನಿಯಲ್ಲಿ ಗಾಭರಿಯಿರಲಿಲ್ಲ, ಚೂರು ಸಿಟ್ಟು ಮಾತ್ರವಿತ್ತು! ಹೇಗೆ.. ಯಾಕೆ ..ಸಾಧ್ಯವೇ ಅಂತೆಲ್ಲ ಮತ್ತೆ ಆಶ್ಚರ್ಯ. ಅವರು ‘ಇಷ್ಟು ಹೊತ್ತು ಮಾಡಿ ಬಂದಿದೀರಲ್ಲ, ನಿಮಗೆ ಒಂಚೂರಾದ್ರೂ ಬುದ್ಧಿ ಬೇಡ್ವಾ? ಅಲ್ಲೆಲ್ಲಾ ಕತ್ತಲಾದ ಮೇಲೆ ಹುಡುಗಿಯರಿದ್ರೆ ಏನೇನೆಲ್ಲಾ ನಡೆಯತ್ತೆ ಅಂತ ಕೇಳಿದೀವಿ. ಬೆಳಕಿರುವಾಗ ಎದ್ದು ಬರಬೇಕು ಅಂತ ಜ್ಞಾನ ಬೇಡ್ವಾ? ನಾನು ತಲೆ ಕೆಟ್ಟು ಮೂರು ಸಲ ಬಸ್ ಸ್ಟ್ಯಾಂಡಿಗೆ ಹೋಗಿ ಬಂದೆ (ಹಂಗೆ ಹೇಳಿ ಮತ್ತೆ!). ಟೆನ್ಷನ್ನಲ್ಲಿ ಒದ್ದಾಡ್ತಿರುವಾಗ ಎದುರು ಮನೆ ಹುಡುಗಿ ವಿಜಿ ನಿಮ್ಮ ಜೊತೆ ಹೋಗೋದ್ನ ನೋಡಿದ್ದವಳು ಹಾಗಂತ ಹೇಳಿದ್ಲು. ಆಮೇಲೆ ನಮಗೆ ಸಮಾಧಾನ ಆಯ್ತು ನೋಡು. ಆ ಹುಡುಗ ತುಂಬ ಧೈರ್ಯಸ್ಥ, ಒಳ್ಳೆ ಶಕ್ತಿ ಕೂಡಾ. ದೇಹ ಕೂಡಾ ಗಟ್ಟಿಮುಟ್ಟಾಗಿದೆ (ನಾನು-ನಿಮ್ಮಿ ಸಣ್ಣ ನಗೆ ವಿನಿಮಯ ಮಾಡಿಕೊಂಡೆವು!) ಯಾರಾದ್ರೂ ತೊಂದರೆ ಕೊಡಕ್ಕೆ ಬಂದ್ರೂ ನಿಮ್ಮನ್ನ ಕಾಪಾಡ್ತಾನೆ ಅಂತ ನೆಮ್ಮದಿ ಆಯ್ತು ನೋಡು … ಇಲ್ಲಾಂದ್ರೆ ಇಷ್ಟು ಹೊತ್ಗೆ ನಮ್ಮ ಗತಿ ಏನಾಗಿರ್ತಿತ್ತು ….’ ಅವರು ಹೇಳುತ್ತ ಹೋದರು …. ನಾವು ಚಲನೆಯಿಲ್ಲದೇ ನಿಂತಿದ್ದೆವು! ಯಾವ ವಿಜಿಯನ್ನು ಕಂಡರೆ ಉರಿಯುತ್ತಿದ್ದರೋ, ಇವತ್ತು ಅದೇ ವಿಜಿ ನಮ್ಮ ಜೊತೆ ಇದ್ದಾನೆ ಮತ್ತು ಕಷ್ಟ ಬಂದರೆ ನಮ್ಮನ್ನು ಕಾಪಾಡ್ತಾನೆ ಅಂತ ನೆಮ್ಮದಿ ಪಡೆದರಂತೆ !! ಮನುಷ್ಯರು ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆಲ್ಲಾ ವರ್ತಿಸುತ್ತೇವೆ ಅನ್ನುವ ಅರಿವಿನಲ್ಲಿ ದಿಗ್ಭ್ರಾಂತರಾಗಿ ನಿಂತಿದ್ದೆವು …

ಅವತ್ತು ನಮ್ಮ ರಕ್ಷಕನಾಗಿ ಕಂಡ ವಿಜಿ ಮರುದಿನದಿಂದ ನಮ್ಮ ಮನೆಯೊಳಗೆ ಮತ್ತೆ ಮುಕ್ತ ಪ್ರವೇಶ ಪಡೆದ ಅಂದುಕೊಳ್ಳುತ್ತಿರಬೇಕು ನೀವು… ಇಲ್ಲ, ಅವನ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಮತ್ತೆ ನಾನು ಊರಿಗೆ ವಾಪಸ್ಸಾಗುವ ದಿನದವರೆಗೂ ಅವನನ್ನು ಅವನ ಮನೆಯಲ್ಲಿ, ಸಿನೆಮಾ ಥಿಯೇಟರಿನಲ್ಲಿ, ರಸ್ತೆಯಲ್ಲಿ ಮಾತ್ರವೇ ಭೇಟಿಯಾದೆವು ಮತ್ತು ಆ ನಂತರ ಮತ್ತೆಂದೂ ಭೇಟಿಯಾಗಲಿಲ್ಲ ….

 

‍ಲೇಖಕರು G

February 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Renuka Nidagundi

    🙂 ಎಂಥೆಂಥ ಹುಚ್ಚುಗಳು…ಮೋಹಗಳು…‘ಅಂದಿ ಮಳೈ ಪೊಳಿಗಿರದು’ …ಸುಂದರವಾದ ಬರಹ..:)

    ಪ್ರತಿಕ್ರಿಯೆ
  2. sarala

    hareyada dinagala pulakagalanna eshtu chennagi bareddidderi Bharathi. lekhana mudagolisitu 🙂

    ಪ್ರತಿಕ್ರಿಯೆ
  3. Badarinath Palavalli

    ಮಾವನ ಸಿಟ್ಟು ಒತ್ತೊಟ್ಟಿಗಿಟ್ಟರೂ ಬಿಸಿಬೇಳೆ ಬಾತ್ ಎಂದೊಡನೆ ಬಾಯಲ್ಲಂತೂ ನೀರು ಬಂದಿತು ಭಾರ್ತಕ್ಕ!

    ಪ್ರತಿಕ್ರಿಯೆ
  4. Anuradha.B.Rao

    ಚೆನ್ನಾಗಿದೆ . ವಿಜಿ ಮುಂದೆಂದೂ ಸಿಕ್ಕಲೇ ಇಲ್ಲ ಎನ್ನುವುದು ಸ್ವಲ್ಪ ಬೇಸರದ ವಿಷಯ !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: