ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ –ತೊಂಬತ್ತು ವಸಂತಗಳ ಬಿಡುವಿಲ್ಲದ ಸಂಗೀತಗಾರ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

13

ಒಂಬತ್ತು ದಶಕಗಳನ್ನೂ ಮೀರಿದ ಇವರ ಪಾಲಿಗೆ, ದೇಶದಲ್ಲಾಗಲಿ ವಿದೇಶದಲ್ಲಾಗಲಿ ಹಾಡುತ್ತಿರುವುದೇ ಜೀವನವಾಗಿಬಿಟ್ಟಿತು. ಸಂಗೀತಕಛೇರಿಗಳೂ, ಗಾನ-ವ್ಯಾಖ್ಯಾನಗಳೂ, ಶಿಬಿರಗಳೂ, ತರಗತಿಗಳೂ, ಕಛೇರಿಪ್ರವಾಸಗಳೂ (ಇದರ ಜೊತೆಗೆ ಪ್ರಶಸ್ತಿ ಬಿರುದುಗಳನ್ನು ಸ್ವೀಕರಿಸುವುದೂ ಸೇರಿದಂತೆ) ಸಂಗೀತವು ಶ್ರೀಕಂಠನ್ ರವರ ಜೀವನವನ್ನೆಲ್ಲ ಮಧುರವಾಗಿ ಆವರಿಸಿಬಿಟ್ಟಿತ್ತು. ೧೯೪೭ರಲ್ಲಿ ಮೈಸೂರಿನಲ್ಲಿ ಪಡೆದ ಮೊದಲ ಪ್ರಶಸ್ತಿಯಿಂದ ಆರಂಭಿಸಿದರೆ ಅವರನ್ನು ಅರಸಿ ಬಂದ ಪ್ರಶಸ್ತಿಗಳ ಪಟ್ಟಿಯಂತೂ ಅಳತೆಗೆ ನಿಲುಕದ ಹೂಮಾಲೆ. ಇಷ್ಟೆಲ್ಲ ಪ್ರಶಸ್ತಿಗಳನ್ನು ಪಡೆದ ಅವರಿಗೆ ಯಾವುದಾದರೂ ಒಂದು ಪ್ರಶಸ್ತಿಯ ಬಗ್ಗೆ ಜನ್ಮಸಾರ್ಥಕ್ಯದ ಭಾವವುಂಟೆ?

“ಪ್ರತಿಯೊಂದು ಪ್ರಶಸ್ತಿಯೂ ನನ್ನ ಸಂಗೀತ ಸಾಕ್ಷಾತ್ಕಾರಕ್ಕೆ ಸಂದ ದೊಡ್ಡಗೌರವವೇ ಸರಿ. ಆದರೆ ಶಾಸ್ತ್ರೀಯ ಸಂಗೀತದ ಕೆಲವು ವೇದಿಕೆಗಳ ಸಮ್ಮಾನಗಳು ಹಾಗೂ ಭಾರತ ಸರ್ಕಾರದ ಪದ್ಮಭೂಷಣದಂತಹ ಪ್ರಶಸ್ತಿಗಳನ್ನು  ಪಡೆದಾಗ ಮಾತ್ರ ಮಾತ್ರ ಉತ್ಸಾಹವೂ ವಿನಮ್ರತೆಯೂ ಒಟ್ಟೊಟ್ಟಿಗೆ ನಮ್ಮನ್ನು ಆವರಿಸುತ್ತವೆ. ನನಗೆ ತುಂಬ ಧನ್ಯತೆಯ ಭಾವವನ್ನು ಕೊಟ್ಟಂತಹ ಹಲವು ಪ್ರಶಸ್ತಿಗಳಿವೆ. ಯಾವುದೋ ಒಂದನ್ನು ಹೆಸರಿಸಿ ಹೇಳುವುದು ಕಷ್ಟ.1979ರಲ್ಲಿ ಸಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಚೆನ್ನೈನ ಸಂಗೀತ ಅಕಾಡೆಮಿಯ ಘನತೆವೆತ್ತ  ‘ಕಲಾನಿಧಿ ಪ್ರಶಸ್ತಿ’, ಕರ್ನಾಟಕ ಸರ್ಕಾರದ ಕನಕ ಪುರಂದರ ಪ್ರಶಸ್ತಿ, 1981ರಲ್ಲಿ ಸಂದ ಬೆಂಗಳೂರು ಗಾಯನ ಸಮಾಜದ ಸಂಗೀತ ಕಲಾರತ್ನ ಪ್ರಶಸ್ತಿ ಮುಂತಾದವು ಸ್ಮರಣೀಯ”.

ಅಂತೆಯೇ 1983ರಲ್ಲಿ ಸಂದ ಟಿ.ಟಿ.ಕೆ. ಸ್ಮರಣಾರ್ಥವಾದ ಅತ್ಯುತ್ತಮ ಗಾಯಕ ಪ್ರಶಸ್ತಿ ಹಾಗೂ ತಿರುವನಂತಪುರದ ತುಳಸೀವನದ ಸಂಗೀತ ಪರಿಷತ್ತಿನ ಗಾಯಕ ಚೂಡಾಮಣಿ ಪ್ರಶಸ್ತಿಗಳು, 1985ರಲ್ಲಿ ಸಂದ ಮೈಸೂರಿನ ಜಿ.ಸಿ. ಅಕಾಡೆಮಿಯ ಜಯಚಾಮರಾಜೇಂದ್ರ ಸ್ಮರಣಾರ್ಥ ಪ್ರಶಸ್ತಿ, 1990ರಲ್ಲಿ ಸಂದ ಆಂಧ್ರಪ್ರದೇಶದ ಅನಂತಪುರದ ತ್ಯಾಗರಾಜ ಸಂಗೀತಸಭಾರವರ ಕಮನೀಯ ಸಂಗೀತ ಕಾಮಧೇನು ಪ್ರಶಸ್ತಿ, 1991ರಲ್ಲಿ ಸಂದ ಬೆಂಗಳೂರಿನ ಪುರಂದರ ಪ್ರತಿಷ್ಠಾನದ ಹರಿದಾಸ ಪ್ರಶಸ್ತಿ, 1992ರಲ್ಲಿ ಪರ್ಕಸಿವ್ ಆರ್ಟ್ಸ್ ಸೆಂಟರ್ ನ್ ಲಯಕಲಾನಿಪುಣ ಪ್ರಶಸ್ತಿ, ಬೆಂಗಳೂರಿನ ಅಕಾಡೆಮಿ ಆಫ್ ಮ್ಯೂಸಿಕ್ ನ  ಮೈಸೂರು ಟಿ ಚೌಡಯ್ಯ ಪ್ರಶಸ್ತಿ, ತಿರುಪತಿಯ ತ್ಯಾಗರಾಜ ಟ್ರಸ್ಟ್ ನ ಸಪ್ತಗಿರಿ ಸಂಗೀತ ವಿದ್ವನ್ಮಣಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರ್ಕಾರವಿತ್ತ ಕರ್ನಾಟಕ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಮುಂತಾದ ಘನತೆವೆತ್ತ ಪ್ರಶಸ್ತಿಗಳನ್ನೂ ಸ್ಮರಿಸುತ್ತಾರೆ. ಹೀಗೆ ಕೊನೆಯಲ್ಲಿ 2011ರಲ್ಲಿ ಸಂದ ಪದ್ಮಭೂಷಣ ಪ್ರಶಸ್ತಿಯವರೆಗೂ ಕೊನೆಯಿಲ್ಲದೆ ಸಾಗುತ್ತದೆ ಪ್ರಶಸ್ತಿ-ಬಿರುದುಗಳ ನಾಮಾವಲಿ.

“ನನ್ನನ್ನೂ ನನ್ನ ಸಂಗೀತವನ್ನೂ ಗುರುತಿಸಿ ಗೌರವಿಸಿದ ಎಲ್ಲ ಸಂಸ್ಥೆಗಳಿಗೂ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಅದನ್ನೆಲ್ಲ ಪಡೆಯುವ ಸುಯೋಗವನ್ನು ದೇವರು ನನಗೆ ಕರುಣಿಸಿದನೆನ್ನುವುದೇ ಆನಂದದ ವಿಷಯ.

ನನ್ನ ಕಚೇರಿಗಳ ಕೆಲವು ಅನುಭವಗಳು ನನ್ನನ್ನು ಭಾವುಕವನ್ನಾಗಿಸುತ್ತವೆ…..

1954ರಲ್ಲಿ ಮದ್ರಾಸಿನ ಸಂಗೀತ ಅಕಾಡೆಮಿಯಲ್ಲಿನ ಮೊಟ್ಟಮೊದಲ ಕಚೇರಿ, ಅದೇ ವರ್ಷ ದೆಹಲಿಯ ಆಕಾಶವಾಣಿ ಆಯೋಜಿಸಿದ ವಿಶೇಷ ಅಭ್ಯಾಗತರ ಸಭೆಯಲ್ಲಿನ ಗಾಯನ, 1978ರಿಂದ ಪ್ರಾರಂಭಿಸಿ ಸಾಲಾಗಿ 7ವರ್ಷಗಳ ಕಾಲ ನವರಾತ್ರ ಮಂಟಪದಲ್ಲಿ ದೇವಿಯ ಸನ್ನಿಧಿಯಲ್ಲಿ ಹಾಡಿದ್ದು (ತಿರುವಾಂಕೂರಿನ ರಾಜವಂಶದವರೂ ಹಾಗೂ ವಿಶೇಷವಾಗಿ ದಿವಂಗತ ಮಹಾರಾಣಿ ಸೇತು ಪಾರ್ವತೀಬಾಯಿರವರ ಸಮ್ಮುಖದಲ್ಲಿ ಹಾಡಿದ್ದು) ಸ್ಮರಣೀಯ. ನಾನು ರುದ್ರಪಟ್ಣಕ್ಕೆ ಹೋದಾಗ ಹುಟ್ಟೂರನ್ನು ಸೇರಿದ ಸಂತಸದಲ್ಲೋ, ಕುಲದೇವತೆಗಳಿಗಾಗಿ ಹಾಡುವ ಆನಂದದಲ್ಲೋ ಭಾವುಕನಾಗಿಬಿಡುತ್ತೇನೆ. ನನ್ನೆಲ್ಲ ಸಾಧನೆಗಳಿಗೆ ಮೂಲಕಾರಣರಾದ ನನ್ನ ಪೂರ್ವಜರನ್ನು ಸ್ಮರಿಸುತ್ತ ಪರವಶನಾಗುತ್ತೇನೆ. ಅಲ್ಲಿನ ಗ್ರಾಮೀಣರು ಶಾಸ್ತ್ರೀಯ ಕಲೆಗಳನ್ನು ಆಸ್ವಾದಿಸುತ್ತ ತಲೆದೂಗುವುದನ್ನು ಕಂಡು ಬಹಳ ಹರ್ಷವೆನಿಸುತ್ತದೆ! ಹಾಗೆಯೇ ಚಿಕ್ಕಂದಿನಿಂದ ಮಧುರಗಾನದ ತಂಗಾಳಿಯನ್ನೇ ಉಸಿರಾಡುತ್ತ ಬೆಳೆಯಲು ಅನುವು ಮಾಡಿಕೊಟ್ಟ ನನ್ನದೇ ಊರಾದ ಮೈಸೂರಿನ ಬಗ್ಗೆಯೂ ನನಗೆ ತುಂಬ ಆತ್ಮೀಯತೆ. ಕರ್ನಾಟಕದ ಒಳಗೂ ಹೊರಗೂ, ದೆಹಲಿಯಿಂದ ಕನ್ಯಾಕುಮಾರಿಯವರೆಗೂ ನಾನು ಅನೇಕಾನೇಕ ನಗರಗಳಲ್ಲೂ ಹಳ್ಳಿಗಳಲ್ಲೂ ಹಾಡಿದ್ದೇನೆ. ಬಹುಶಃ ಕರ್ನಾಟಕ ಶಾಸ್ತ್ರೀಯ  ಸಂಗೀತದ ಶ್ರೋತೃಗಳು ಎಲ್ಲೆಲ್ಲಿದ್ದಾರೋ, ಬಿಡದೆ ಅಲ್ಲೆಲ್ಲ ಹಾಡುವ ಸುಯೋಗವನ್ನು ಪಡೆದವನು ನಾನು”.

ಇಡುಕಿರಿದ ದಿನಚರಿ

ಹಿಂದೆ ಆಕಾಶವಾಣಿಯಲ್ಲಿ ಶ್ರೀಕಂಠನ್ ರವರು ಉದ್ಯೋಗನಿರತರಾಗಿದ್ದಾಗ ಇದ್ದ ಕಾರ್ಯಕ್ರಮಗಳ ಸಂಖ್ಯೆಗಿಂತಲೂ ದುಪ್ಪಟ್ಟು ಕಾರ್ಯಕ್ರಮಗಳು, ತೊಂಬತ್ತರ ವಯಸ್ಸಿನ ಶ್ರೀಕಂಠನ್ ರವರ ದಿನಚರಿಯಲ್ಲಿದ್ದವು. ಅವರ ದಿನಚರಿಯನ್ನೊಮ್ಮೆ ಪುಟ ತಿರುವಿ ನೋಡಿದಾಗ, ದೇಶದಲ್ಲೇ ಅತ್ಯಂತ ಬಿಡುವಿಲ್ಲದ ಗಾಯಕ ಅವರು ಎನ್ನುವುದು ಸ್ಪಷ್ಟವಾಗುತ್ತದೆ. 1990ರಲ್ಲಿ ಅವರು 70 ವಯಸ್ಸನ್ನು ತಲುಪುವ ಹೊತ್ತಿಗೆ ಅವರ ಕಾರ್ಯಕ್ರಮಗಳು ಗಮನಾರ್ಹವಾಗಿ  ಹೆಚ್ಚಿದವು. 1990ರ ನಂತರದ ಅವರ ಸಂಗೀತಪರ ಚಟುವಟಿಕೆಗಳು ಎಂತಹ ಯುವಕರನ್ನೂ ನಾಚಿಸುವಂತಹವು.

“ಈ ವರ್ಷ ನಾನು ಸುಮಾರು ಅರವತ್ತು ಕಛೇರಿ ಮಾಡಿರಬೇಕು” ಎಂದಿದ್ದಾರೆ 2012ರಲ್ಲಿ. ಇವುಗಳ ಪೈಕಿ ಅನೇಕ ಕಾರ್ಯಕ್ರಮಗಳು ಅಮೇರಿಕೆಯಲ್ಲಿ ನಡೆದವು. ಇದಲ್ಲದೆ ಪ್ರಶಸ್ತಿ ಸ್ವೀಕಾರಕ್ಕಾಗಿ ಅಲ್ಲೆಲ್ಲ ಸಂಚಾರ ಮಾಡಿದ ಕಾರ್ಯಕ್ರಮಗಳೂ ಸೇರುತ್ತವೆ.   ಪ್ರಾತಿನಿಧಿಕವಾಗಿ ಕೆಲವನ್ನು ಹೆಸರಿಸುವುದಾದರೆ, ಉತ್ತರ ಅಮೇರಿಕಾದ ನ್ಯೂಜರ್ಸಿಯ ಕರ್ನಾಟಕ ಸಂಗೀತ ಸಂಸ್ಥೆಯು (Carnatic Music association of North America CMANA)ಸಲ್ಲಿಸಿದ ‘ಸಂಗೀತಸಾಗರ’ ಪ್ರಶಸ್ತಿ, ಕ್ಲೀವ್ ಲ್ಯಾಂಡ್ ನ ‘ತ್ಯಾಗರಾಜ ಆರಾಧನಾ ಸಮ್ಮಾನ’, ಬೋಸ್ಟನ್ ನ ಸಾಂಸ್ಕೃತಿಕ ಕೇಂದ್ರದ ‘ಮಧುರ-ಸಂಗೀತ-ವಿಶಾರದ’ ಹಾಗೂ ‘ಮಂದಾರ ಲಲಿತ ಕಲಾರತ್ನ’ ಪ್ರಶಸ್ತಿಗಳು ಇತ್ಯಾದಿ.” ಕಡೆಯಲ್ಲಿ ಉಲ್ಲೇಖವಾದ ಪ್ರಶಸ್ತಿಗಳನ್ನು ಸ್ವೀಕರಿಸುವ ಮುನ್ನ ಅವರು ತ್ರಿಮೂರ್ತಿಗಳ ಅಪೂರ್ವ ಕೃತಿಗಳ ಹಾಗೂ ದೇವರನಾಮಗಳ ಕಾರ್ಯಾಗಾರವನ್ನು ನಡೆಸಿದ್ದು, ನೂರಾರು ಭಾರತೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದೇಶಕ್ಕೆ ಮರಳಿದ ಮೇಲೆ, ಅದೇ ವರ್ಷ ಅವರು ಪಾಲಕ್ಕಾಡಿನ ಚೆಂಬೈ ಸಂಗೀತಶಾಲೆಯಲ್ಲಿ ನಡೆಸಿದ ಮೈಸೂರು ಮಹಾರಾಜರ ಕೃತಿಗಳ ಕಾರ್ಯಾಗಾರವೂ ಕೇರಳದ ತ್ರಿಪುಣಿತುರದಲ್ಲಿ ನಡೆಸಿದ ಮೈಸೂರು ವಾಗ್ಗೇಯಕಾರರ ಕೃತಿಗಳ ಕಾರ್ಯಾಗಾರವೂ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದವು. ವಿಶಾಖಪಟ್ಟಣದ ವಿಶಾಖಾ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಅವರು ನಡೆಸಿದ ಕಚೇರಿ ಹಾಗೂ ಸಂದ ಸಮ್ಮಾನವು  ಅವರಿಗೆ ಸರಣಿಯಂತೆ ಪ್ರಶಸ್ತಿಗಳನ್ನು ತಂದುಕೊಟ್ಟವು. ಇವೆಲ್ಲವುಗಳೊಂದಿಗೆ ಸ್ಥಳೀಯ ಕಛೇರಿಗಳೂ, ಧ್ವನಿಸುರುಳಿಗಳ ಮುದ್ರಣಗಳು, ಆಕಾಶವಾಣಿಯ ಕಾರ್ಯಕ್ರಮಗಳು  ಹಾಗೂ ಮನೆಯಲ್ಲೇ ನಡೆಸುತ್ತಿದ್ದ ಸಂಗೀತ ತರಗತಿಗಳೂ ಸಾಗಿದವೆನ್ನುವುದನ್ನೂ ಗಮನಿಸಬೇಕು.

ಸಂಗೀತಕ್ಷೇತ್ರದ ಅತ್ಯಂತ ಹಿರಿಯ ಕಲಾವಿದರಾಗಿ ಅವರು ಸಂಗೀತದಲ್ಲಿನ ರಾಜಕೀಯದ ಬಗ್ಗೆ ಏನನ್ನು ಗಮನಿಸಿದ್ದಾರೆ?

“ರಾಜಕೀಯ ನುಸುಳದಂತಹ ಯಾವುದಾದರೂ ಕ್ಷೇತ್ರವಿದೆಯೆ? ಸಂಗೀತವೂ ಅಂತಹ ಒಂದು ಕ್ಷೇತ್ರ ಅಷ್ಟೆ. ನಮ್ಮ ಪಾಡಿಗೆ ನಾವು ಶುದ್ಧಸಂಗೀತವನ್ನು ಅನುಸಂಧಾನ ಮಾಡುತ್ತ ಸಾಗುತ್ತಿದ್ದು, ಯಾವ ಮನ್ನಣೆಯನ್ನೂ ಪ್ರಶಸ್ತಿಗಳನ್ನೂ ಬಯಸದೆ ಇರುವತನಕ ಯಾವ ರಾಜಕೀಯವೂ ನಮ್ಮನ್ನು ಏನೂ ಮಾಡಲಾಗದು. ನಮಗೆಲ್ಲ ಗೊತ್ತೇ ಇರುವಂತೆ ಭಾಷೆ, ಮತ, ಕುಲ ಹಾಗೂ ಪಂಗಡಗಳ ರಾಜಕೀಯ ಇಲ್ಲೂ ತಲೆಯಾಡುತ್ತದೆ. ಆದರೆ ದುಃಖದ ಸಂಗತಿಯೇನೆಂದರೆ ಸಂಗೀತವನ್ನೇ ಪೂರ್ಣಾವಧಿ ವೃತ್ತಿಯನ್ನಾಗಿಸಿಕೊಂಡವರಲ್ಲಿ ಸಹಕಾರಕ್ಕಿಂತ ಹೆಚ್ಚಾಗಿ ಮತ್ಸರವೇ ಕಾಣಬರುತ್ತದೆ” ಎನ್ನುತ್ತಾರೆ ಶ್ರೀಕಂಠನ್.

ವಿಳಂಬವಾಗಿ ಸಂದ ಮನ್ನಣೆ

“ಶ್ರೀಕಂಠನ್ ರವರ ವೃತ್ತಿಪರ ಸಾಧನೆ ಮತ್ತು ಕೀರ್ತಿಗಳು ಅವರ ತೊಂಬತ್ತನೆಯ ವಯಸ್ಸಿನವರೆಗೂ ವಿಪುಲವಾಗಿ ಮೆರೆದರೂ, ಅವರು ಹಾಗೆ ಗಮನ ಸೆಳೆದದ್ದು ಮಾತ್ರ ತುಂಬ ತಡವಾಗಿಯೇ” ಎನ್ನುತ್ತಾರೆ ಅವರ ಪುತ್ರ ರಮಾಕಾಂತ್. ಮತ್ತೋರ್ವ ಪುತ್ರ  ಕುಮಾರ್ ದನಿಗೂಡಿಸುತ್ತಾರೆ- “ಸಂಗೀತ ಸಮುದಾಯವು ಅವರ ವಿಷಯದಲ್ಲಿ ದಶಕಗಳವರೆಗೂ ಪೂರ್ಣವಾಗಿ ಕಣ್ಣುಗಳನ್ನು ತೆರೆಯಲೇ ಇಲ್ಲ. ನಮ್ಮ ತಂದೆಯವರು ಅದರ ಬಗ್ಗೆ ಏನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಬಿಡಿ.” ರಮಾಕಾಂತರು ಇನ್ನೂ ಖಚಿತವಾಗಿ ಹೀಗೆ ಹೇಳುತ್ತಾರೆ-“ಅವರ ಸಾಧನೆಯ ಪಂಕ್ತಿ (graph) ಸದಾ ಉತ್ತರೋತ್ತರವಾಗಿ ಬೆಳೆಯುತ್ತಲೇ ಇತ್ತಾದರೂ, ಅವರಿಗೆ ಸಿಕ್ಕ ಮನ್ನಣೆಯ ಪಂಕ್ತಿ ಬಹಳ ತಡವಾಗಿಯೇ ಬೆಳೆಯಲಾರಂಭಿಸಿದ್ದು ಎನ್ನುವುದನ್ನು ಯಾರು ಬೇಕಾದರೂ ಗಮನಿಸಿ ತಿಳಿಯಬಹುದಾಗಿದೆ. ಅವರು ತಮ್ಮ ಕಾಲದ ಉತ್ತಮೋತ್ತಮ ಕಲಾವಿದರನ್ನೆಲ್ಲ ಮೀರಿ ನಿಂತು ಅತ್ಯುತ್ತಮ ಯೋಗದಾನವನ್ನಿತ್ತರು ಎನ್ನುವುದು ನಿರ್ವಿವಾದ. ಆದರೆ, ಆಶ್ಚರ್ಯದ ವಿಷಯವೇನೆಂದರೆ ಕಳೆದ 25 ವರ್ಷಗಳಿಂದೀಚೆಗಷ್ಟೆ ಅವರು ರಾಷ್ಟ್ರಮಟ್ಟದ ಸಂಗೀತಸಭೆಗಳಲ್ಲಿ ಗುರುತಿಸಲ್ಪಟ್ಟದ್ದು. ಬಹುಶಃ ಚೆನ್ನೈ ಸಂಗೀತ ಅಕಾಡೆಮಿಯು 1996ರಲ್ಲಿ ಸಲ್ಲಿಸಿದ ‘ಸಂಗೀತ ಕಲಾನಿಧಿ’ ಸಮ್ಮಾನವು ರಾಷ್ಟ್ರಮಟ್ಟದಲ್ಲಿ ಜನರು ಅವರನ್ನು ಗಮನಿಸುವಂತೆ ಮಾಡಿತೆನ್ನಬಹುದು.”

ಮುಂದುವರೆಸುತ್ತ ಹೇಳುತ್ತಾರೆ ” ಕರ್ನಾಟಕದಲ್ಲಂತೂ ಸಂಗೀತದ ‘ಮಾರ್ಗದೀಪಕ’ರೆಂದೇ ಮಾನ್ಯರಾಗಿದ್ದು ಎಲ್ಲ ವೇದಿಕೆಗಳಲ್ಲೂ ಅವರಿಗಾಗಿ ಉಚ್ಚಸ್ಥಾನವು ಮೀಸಲಾಗಿದ್ದಾಗ್ಗ್ಯೂ, ಅವರ (ಸಂಗೀತ ಬೋಧನೆಯ ಕ್ರಮ ಹಾಗೂ ಹರಿದಾಸರ ಕೀರ್ತನೆಗಳಿಗೆ ಅನುಪಮವಾದ ರಾಗಸಂಯೋಜನೆ ಮಾಡಿದ) ಯೋಗದಾನವು ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆಯುವಷ್ಟು ದಾಖಲಾಗಲಿಲ್ಲ. ಸಂಗೀತವಿದ್ಯೆಯಲ್ಲಿನ ಅವರ ನಿಷ್ಠೆ-ಸಾಧನೆಗಳಿಗೆ ಹೋಲಿಸಿದರೆ ಅವರು ಪಡೆದ ವಿಶ್ವವಿಖ್ಯಾತಿಯು ಏನೇನೂ ಅಲ್ಲ. ನಮಗದರ ಬಗ್ಗೆ ಖೇದವೇನೂ ಇಲ್ಲ. ಆದರೂ ‘ಸಂಗೀತ ಸಂತೆ’ ಶ್ರೀಕಂಠನ್ ರವರ ಸಂಗೀತದ ಮಧುರ ಮಿಡಿತಕ್ಕೆ ಕಿವಿಗೊಟ್ಟದ್ದು ತಡವಾಗಿಯೇ. ಆ ಕಾಲದಲ್ಲಿ ಅತ್ಯಂತ ದೊಡ್ಡ ಹೆಸರಾಗಿದ್ದ ಸಂಗೀತಾ ಕ್ಯಾಸೆಟ್ ಕಂಪೆನಿಯು  ಶ್ರೀಕಂಠನ್ ರವರ ಮೊಟ್ಟಮೊದಲ ಧ್ವನಿ ಮುದ್ರಣ ಮಾಡಿಸಲು ಮುಂದಾಗಿದ್ದು 1974ರಲ್ಲಿ ಎಂದರೆ, ಅವರಿಗೆ 54 ವರ್ಷ ವಯಸ್ಸಾಗಿದ್ದಾಗ!”

ಪ್ರಸ್ತುತದಲ್ಲಿ

“ಶ್ರೀಕಂಠನ್ ರವರ ಪಾಲಿಗೆ ಇಂದಿನ ಪರಿಸರ ಸಾಕಷ್ಟು ಅನುಕೂಲಕರವಾಗಿಯೇ ಬದಲಾಗಿದೆ. ಇವತ್ತು ಕಚೇರಿಗಳೂ, ಗಾನ-ವ್ಯಾಖ್ಯಾನಗಳೂ ಸಮ್ಮಾನ-ಪ್ರಶಸ್ತಿಗಳೂ ನಮ್ಮ ತಂದೆಯವರ ಜೀವನವನ್ನು ಆವರಿಸಿಬಿಟ್ಟಿವೆ. ವಿಶ್ವಾದ್ಯಂತ ಅರಸಿ ಬರುವ ಬೇಡಿಕೆಗಳಿಗೆ ಬಹಳ ಯೋಚನೆ ಮಾಡಿ ಒಪ್ಪಿಕೊಳ್ಳಬೇಕಾಗಿ ಬಂದಿದೆ. ಈ ಮಧ್ಯೆ, ಈ ಸತತ ಕ್ರಿಯಾಶೀಲ ಚೇತನ ಶಾಂತವಾಗಿ ಒಂದೆಡೆ ಕುಳಿತು ಕನ್ನಡದ ಪದಗಳಿಗೆ ರಾಗಸಂಯೋಜನೆ ಮಾಡಿ, ತಮ್ಮ ಶಿಷ್ಯರಿಗೆ ಬೆರೆಗುಗೊಳಿಸುವಂತಹ ರೀತಿಯಲ್ಲಿ  ಪಾಠ ಮಾಡುವುದರಲ್ಲಿ ಮಗ್ನ”ಎನ್ನುತ್ತಾರೆ ಕುಮಾರ್. ರಮಾಕಾಂತ್ ಹೇಳುವಂತೆ ಅವರ ತಂದೆಯವರು ತಾವಾಗಿಯೇ ತಮಗಾಗಿ ಮಾರುಕಟ್ಟೆಯನ್ನು ಸೃಜಿಸಿಕೊಳ್ಳಲು ಮುನ್ನುಗ್ಗುವ ಸ್ವಭಾವದವರಲ್ಲ. “ಸಂಗೀತವನ್ನೇನೋ ‘ಒಂದು ಬಗೆಯ ಉದ್ಯಮ’ವನ್ನಾಗಿಸಿಕೊಳ್ಳಬಹುದು ನಿಜ, ಆದರೆ ಆತ್ಮನಾಶಕ್ಕೆ ಹೇತುವಾದ ಆತ್ಮಪ್ರಶಸ್ತಿಗೆ ಕಲಾವಿದರು ಕೈಹಾಕಬಾರದು” ಎನ್ನುವುದು ನಮ್ಮ ತಂದೆಯವರ ನಿಲುವು. ಹಾಗೆ ಮಾಡಿದರೆ ಸಂಗೀತಾಸ್ವಾದದ ಮುಖ್ಯ ಲಕ್ಷ್ಯ ಹಾಗೂ ಸಂಪ್ರದಾಯಶುದ್ಧಿಗಳು ಹಿಂದೆ ಬೀಳುತ್ತವೆ.ತOದೆಯವರು ಹೀಗೆ ಹೇಳುತ್ತಾರೆ-” ಕೀರ್ತಿಶಿಖರದಿಂದ ಜಾರಬಾರದೆಂದರೆ ಕೀರ್ತಿಶಿಖರಕ್ಕೆ ಒಮ್ಮೆಲೆ ಏರಬಾರದು.  ನಿಧಾನವಾಗಿ ಏರುವುದರಿಂದ ಸ್ಥೈರ್ಯವು ಬೆಳೆಯುತ್ತದೆ”.ಈ ಮಾತು ಶ್ರೀಕಂಠನ್ ರವರ ಲೌಕಿಕ ಹಾಗೂ ತಾತ್ವಿಕ ದರ್ಶನವನ್ನೇ ಪ್ರತಿಫಲಿಸುತ್ತದೆ.

ಆಯ್ದ ಆಣಿಮುತ್ತುಗಳು

ಶ್ರೀಕಂಠನ್ ರವರು ಹಲವಾರು ದಾಸರ ಪದಗಳಿಗೆ ರಾಗಸಂಯೋಜನೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ.  ಸುಮಾರು ಎರಡು ದಶಕಗಳಿಂದ ಪ್ರಸಿದ್ಧವಾಗಿರುವ  “ಹಣ್ಣು ಬಂದಿದೆ ಕೊಳ್ಳಿರೋ” ಅಥವಾ “ಕಥಾ ಶ್ರವಣ ಮಾಡೋ” ಮುಂತಾದ ಪುರಂದರದಾಸರ ಪದಗಳು ಇವರದೇ ರಾಗಸಂಯೋಜನೆಯಲ್ಲಿ ಮೈದಾಳಿವೆ. ‘ಬಂದ ನೋಡಿ ಗೋವಿಂದ’ ಹಾಡಿಗಂತೂ ಅವರು ಕಟ್ಟಿದ ವರ್ಣಮೆಟ್ಟು ದಶಕಗಳ ಹಿಂದೆಯೇ ಅಪಾರ ಮೆಚ್ಚುಗೆಯನ್ನೇ ಪಡೆದು, ಅವರ ರಾಗಸಂಯೋಜನ ಸಾಮರ್ಥ್ಯಕ್ಕೇ ಪ್ರತೀಕವಾಗಿ ನಿಂತಿದೆ.

ಶ್ರೀಕಂಠನ್ ರವರು ಪಡೆದ ಪ್ರಸಿದ್ಧಿ-ಜನಾದರಗಳ ಹಲವು ಮಜಲುಗಳನ್ನು ರಮಾಕಂತ್, ಕುಮಾರ್ ಹಾಗೂ ಸ್ವತಃ ಶ್ರೀಕಂಠನ್ ರವರೇ ಹೀಗೆ ತೆರೆದಿಡುತ್ತಾರೆ. ಸುಪ್ರಸಿದ್ಧ ಎಂ.ಎಸ್. ಸುಬ್ಬುಲಕ್ಷ್ಮೀರವರೂ ಅವರ ಪತಿ ಸದಾಶಿವಂ ರವರೂ ಇವರ ಪರಿವಾರಕ್ಕೆ ಸುದೀರ್ಘಕಾಲದಿಂದಲೂ, ಎಂದರೆ ಮೈಸೂರಿನ ದಿನಗಳಿಂದಲೂ ಬಹಳ ಆತ್ಮೀಯರು. ಮೈಸೂರಿಗೆ ಬಂದು ಹೋಗುತ್ತಿದ್ದ ಸುಬ್ಬುಲಕ್ಷ್ಮೀರವರಿಗೆ ಶ್ರೀಕಂಠನ್ ರವರ ಸಂಗೀತದ ಬಗ್ಗೆ ಅದರಲ್ಲೂ ದಾಸಸಾಹಿತ್ಯದ ಕುರಿತಾಗಿ ಇವರು ಮಾಡಿರುವ ಸಂಶೋಧನ-ಸಂಗೀತ ರಚನೆಗಳ ಬಗ್ಗೆ ಅಪಾರ ಅಭಿಮಾನವಿತ್ತು. ಮದ್ರಾಸಿನಲ್ಲೂ ಶ್ರೀಕಂಠನ್ ರವರಿಂದ ಸುಬ್ಬುಲಕ್ಷ್ಮೀರವರು ಹಲವು ದೇವರನಾಮಗಳನ್ನು ಕಲಿತಿದ್ದರು. 1980ರಲ್ಲಿ ಭಾರತೀಯ ವಿದ್ಯಾಭವನವು ಸುಬ್ಬುಲಕ್ಷ್ಮಿರವರನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಪೂರ್ಣ ದಾಸರ ಪದಗಳದ್ದೇ ಕಛೇರಿಯನ್ನು ನಡೆಸಿಕೊಡಬೇಕೆಂದು ಕೋರಿತು. ಆಗ ಆಕೆ ಭಾರತೀಯ ವಿದ್ಯಾಭವನದವರಿಗೆ  “ದಾಸರ ಪದಗಳಲ್ಲಿ ಅಧಿಕೃತರೆನಿಸುವ ಶ್ರೀಕಂಠನ್ ರವರಂಥವರು ಇರುವಾಗ ನನಗೇನು ಭಯ!” ಎಂದು ಹೇಳಿ, ಮುಂದಿನ ಒಂದು ವಾರದಲ್ಲಿ ವಿದ್ಯಾಭವನದ ವೆಂಕಟಾಚಲಂರವರ ಮನೆಯಲ್ಲಿ ಶ್ರೀಕಂಠನ್ ರವರಿಂದ ದಾಸರ ಕೃತಿಗಳನ್ನು ಕಲಿತದ್ದು ತಮ್ಮ ಕಛೇರಿಯನ್ನು ರೂಪಿಸಿಕೊಳ್ಳಲು ಸಹಾಯವಾಯಿತು ಎಂದು ಸ್ಮರಿಸಿಕೊಳ್ಳುತ್ತಿದ್ದರು.

ನಾನು ಸುಬ್ಬುಲಕ್ಷ್ಮೀರವರಿಗೆ ಸುಮಾರು 12 ದಾಸರ ಪದಗಳನ್ನು ಕಲಿಸಿಕೊಟ್ಟೆ.ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವಕ್ಕೆ ನನ್ನದೇ ರಾಗಸಂಯೋಜನೆ. ಶುದ್ಧಧನ್ಯಾಸಿರಾಗದಲ್ಲಿನ “ನಾರಾಯಣ ನಿನ್ನ ನಾಮದ ಸ್ಮರಣೆಯ,,,” ದೇವರನಾಮವನ್ನು ಎಂ.ಎಸ್. ಸುಬ್ಬುಲಕ್ಷ್ಮೀರವರು ಅದನ್ನು ಕಚೇರಿಗಳಲ್ಲಿ ಹಾಡತೊಡಗುತ್ತಲೇ ಅತ್ಯಂತ ಜನಪ್ರಿಯವಾಗಿಬಿಟ್ಟಿತು”. ಆದರೆ ಈ ದೇವರನಾಮಕ್ಕೆ ಶ್ರೀಕಂಠನ್ ರವರೇ ರಾಗಸಂಯೋಜನೆ ಮಾಡಿದ್ದು  ಎಂದು ಎಷ್ಟು ಜನರಿಗೆ ಗೊತ್ತು? ಇಂತಹ ಅಮೋಘ ಸೃಜನಶಿಲತೆಗೆ ಏಕೆ ಮನ್ನಣೆ ಸಿಗಲಿಲ್ಲ? “ಸಾವಿರಾರು ಜನ ಇದನ್ನು ಆಸ್ವಾದಿಸುತ್ತಿದ್ದಾರಲ್ಲ, ಅಷ್ಟೇ ಸಾಕು ಬಿಡಿ” ಎನ್ನುತ್ತ ಅದನ್ನು ತಳ್ಳಿಹಾಕುತ್ತಾರೆ ಶ್ರೀಕಂಠನ್.

ಶ್ರೀಕಂಠನ್ ರವರು ತಮ್ಮ ವಿನಮ್ರತೆಯಿಂದ ಮತ್ತಷ್ಟು ಎತ್ತರಕ್ಕೇರಿದ್ದಾರೆ. ಅವರ ಅಳಿಯ ಹಾಗೂ ಗಮಕಕಲಾವಿದರಾದ ಎಂ.ಎಸ್. ಪ್ರಕಾಶರು ನೆನಪಿಸಿಕೊಳ್ಳುತ್ತಾರೆ-  “1985ರಲ್ಲಿ ಬೆಂಗಳೂರಿನಲ್ಲಿ ನಾವು ಪುರಂದರದಾಸರ 500ನೆಯ ಜನ್ಮದಿನದಂದು ‘ಕರ್ನಾಟಕ ಸಂಗೀತ ಪಿತಾಮಹ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಈ ಸಂದರ್ಭದಲ್ಲಿ ಕರ್ನಾಟಕ ಸಂಗೀತದ ಸಾಮ್ರಾಜ್ಞಿಯೆನಿಸಿದ ಎಂ.ಎಸ್.ಸುಬ್ಬುಲಕ್ಷ್ಮೀರವರಿಂದಲೇ ದಾಸರ ಪದಗಳ ಕಛೇರಿಯಿರಿಸಲು ಬಯಸಿದೆವು. ನಾನು ಧೈರ್ಯಮಾಡಿ ಚೆನ್ನೈನಲ್ಲಿ ವಾಸವಿದ್ದ ಸದಾಶಿವO ದಂಪತಿಯ ಮನೆಗೇ ನೇರವಾಗಿ ಹೋದೆ. ನನ್ನ ಮನವಿಯನ್ನು ಮುಂದಿಟ್ಟೆ, ಎಂ.ಎಸ್.ಅಮ್ಮರವರು ವಿನಯದಿಂದ ಒಪ್ಪಿಯೇಬಿಟ್ಟರು. 10-15 ಅಪರೂಪದ ದಾಸರ ಪದಗಳನ್ನು ಉಚ್ಚಾರಶುದ್ಧಿಯಿಂದ ಯಾರಾದರೂ ಹಿರಿಯ ಸಂಗೀತ ಕಲಾವಿದರು ಹಾಡಿಕೊಡಬೇಕೆಂದೂ,ಅದರ ಸಾಹಿತ್ಯವನ್ನು ತಮಿಳುಭಾಷೆಯಲ್ಲಿ ಬರೆದುಕೊಡಬೇಕೆಂದೂ ವಿನಂತಿಸಿಕೊಂಡರು. ತಕ್ಷಣ ನನಗೆ ನೆನಪಾದದ್ದೇ ನಮ್ಮ ಮಾವನವರು. ಅವರೂ ಸಂತೋಷದಿಂದ ಕೂಡಲೇ ಒಪ್ಪಿದರು. “ರೆಕಾರ್ಡಿಂಗ್  ಏಕೆ? ನಾನೇ ಸ್ವತಃ ಹೋಗಿ ಕಲಿಸಿಕೊಡುತ್ತೇನೆ. ಅಂತಹ ಹಿರಿಯ ಹಾಗೂ ಪ್ರತಿಷ್ಠಿತ ಕಲಾವಿದೆಗೆ ದಾಸರಪದಗಳನ್ನು ಕಲಿಸುವ ಅವಕಾಶ ನನಗೆ ಸಿಕ್ಕಿದೆ” ಎಂದುಬಿಟ್ಟರು. ಶ್ರೀಕಂಠನ್ ರಂತಹ ಹಿರಿಯ ಕಲಾವಿದರೇ ಸ್ವತಃ ಬಂದು ದಾಸರಪದಗಳನ್ನು ಕಲಿಸುತ್ತಿದ್ದಾರೆಂದು ಗೊತ್ತಾಗಿ ಎಂ.ಎಸ್.ರವರು ಬಹಳ ಆನಂದಪಟ್ಟರು. ಸುಬ್ಬುಲಕ್ಷ್ಮೀರವರ ಚೈನ್ನೈನ ಮನೆಯಲ್ಲಿ ಅವರಿಗೆ ಇನ್ನೂ 5 ದಾಸರಪದಗಳ ಕಂತನ್ನು ಕಲಿಸಿಕೊಟ್ಟರು. ಮತ್ತೆ ಕೆಲವನ್ನು ಅಂದೇ ಧ್ವನಿಮದ್ರಣ ಮಾಡಿಕೊಟ್ಟರು. ಎಂ.ಎಸ್.ರವರು ಸಂತೋಷದಿಂದ ಉದ್ಗರಿಸಿದರಂತೆ-  “ನನ್ನ ಪರಮಾಚಾರ್ಯರು ಪುರಂದರದಾಸರನ್ನೇ ನನ್ನಲ್ಲಿಗೆ ಕಳುಹಿಸಿಕೊಟ್ಟು ಅವರ ಕೃತಿಗಳನ್ನು ಕಲಿಯುವಂತೆ ಅನುಗ್ರಹಿಸಿದ್ದಾರೆ” ಎಂದು!

ಶ್ರೀಕಂಠನ್ ರವರು ದಾಸಸಾಹಿತ್ಯವನ್ನು ಶಾಸ್ತ್ರೋಕ್ತರಾಗಗಳಲ್ಲಿ ಸಂಯೋಜಿಸುವಲ್ಲಿ ಅತ್ಯಂತ ಶ್ರದ್ಧೆಯಿಂದ ದುಡಿದಿದ್ದಾರೆ. ಅವರು ಅವುಗಳನ್ನು ಸಾಹಿತ್ಯ, ಪರಂಪರೆ ಹಾಗೂ ಲಕ್ಷಣಾದಿಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಸಮ್ಯಕ್ ಜ್ಜಾನವನ್ನು ಸಂಪಾದಿಸಿದ್ದರಿಂದ, ಅವುಗಳ ಭಾವ-ಲಕ್ಷಣಗಳನ್ನು ಅರ್ಥವರಿತು ಹಾಡುಗಳಲ್ಲಿ ಅಳವಡಿಸಲು ಸಾಧ್ಯವಾಯಿತು. ಈ ಕಾರಣದಿಂದಾಗಿಯೇ ಅವರು ಉತ್ಕೃಷ್ಟ ಶಾಸ್ತ್ರೀಯರಾಗಗಳಲ್ಲಿ ಅನುಪಮ ಶೈಲಿಯಲ್ಲಿ ಯೋಜಿಸಿದ ದಾಸರಪದಗಳು ಅವಿಚ್ಛಿನ್ನ ಧಾರೆಯಂತೆ ಹರಿದು ತಮ್ಮ ಸೌಂದರ್ಯವನ್ನು ಅಭಿವ್ಯಂಜಿಸುತ್ತವೆ. 

ವಿಮರ್ಶಕರಾದ ಎಸ್.ಎನ್. ಚಂದ್ರಶೇಖರ್ ರವರು ಹೇಳುವಂತೆ “ಕೆಲಕಾಲದ ನಂತರ ಶ್ರೀಕಂಠನ್ ರವರ ಸಂಗೀತವು ಧ್ವನಿಮುದ್ರಣಗೊಂಡು ಎಲ್ಲರಿಗೂ ಲಭ್ಯವಾಗುತ್ತಲೇ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯ ಪಠ್ಯಸಾಮಗ್ರಿಯಾಗಿ ಒದಗಿದವು. 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಶ್ರೀಕಂಠನ್ ರವರ ಸಂಗೀತಪಾಂಡಿತ್ಯವನ್ನು ಗುರುತಿಸಿ ಡಾಕ್ಟೊರೇಟ್ ಪದವಿಯನ್ನು ಇತ್ತು ಪುರಸ್ಕರಿಸಿತು. ‘ಶ್ರೀಕಂಠನ್ ರವರು ತಾವು ಕುಲಪತಿಯಾಗಿದ್ದ ಅವಧಿಯಲ್ಲೇ ಡಾ. ಶ್ರೀಕಂಠನ್ ಆದದ್ದು ತಮಗೆ ಅದೆಷ್ಟು ಸಂತಸದ ವಿಷಯ’ ಎನ್ನುವುದನ್ನು ಸ್ವತಃ ಎಂ.ಎಸ್.ತಿಮ್ಮಪ್ಪನವರೇ ಹೇಳಿಕೊಂಡಿದ್ದಾರೆ.

75ರ ವರ್ಧಂತಿಯ ಸಡಗರ

1994ರಲ್ಲಿ ತಿರುಪತಿಯ ತ್ಯಾಗರಾಜಸ್ವಾಮಿ ಟ್ರಸ್ಟ್ ಶ್ರೀಕಂಠನ್ ರವರಿಗೆ ‘ಸಪ್ತಗಿರಿ ಸಂಗೀತ ವಿದ್ವನ್ಮಣಿ’ ಪ್ರಶಸ್ತಿಯನ್ನು ಸಲ್ಲಿಸಿದಾಗ, ವಿಮರ್ಶಕರಾದ ಎಸ್.ಎನ್. ಚಂದ್ರಶೇಖರ್ ರವರು ಹೇಳಿದರು-“ಶ್ರೀಕಂಠನ್ ರವರು ತಮ್ಮ ಪ್ರತಿಭೆಯನ್ನು ತಾವಾಗಿಯೇ ಪ್ರಕಟಿಸಿಕೊಳ್ಳುವ ವಿಷಯದಲ್ಲಿ ಅಷ್ಟಾಗಿ ಉತ್ಸಾಹ ತೋರುವವರಲ್ಲ ಎಂದು”. “ನಿಮ್ಮಲ್ಲಿ ಏನಿದೆ ಎನ್ನುವುದನ್ನು ನೀವೇಕೆ ಹೇಳಿಕೊಳ್ಳುವುದಿಲ್ಲ? ಜನರಿಗೆ ಗೊತ್ತಾಗುವುದಾದರೂ ಹೇಗೆ?” ಎಂದು ವಿಸ್ಮಯದಿಂದ ಚಂದ್ರಶೇಖರರು ನುಡಿಯುತ್ತಾರೆ. ಶ್ರೀಕಂಠನ್ ರವರು ಹೀಗೆ ತಮ್ಮ ಹಿರಿಮೆಯ ಬಗ್ಗೆ ಪ್ರಕಟಣೆ ಮಾಡಿಕೊಳ್ಳದೆ ಉಳಿದದ್ದೇ ವಿಮರ್ಶಕರ ‘ವಿಮರ್ಶೆಗೆ’ ಕಾರಣವಾಯಿತೆನ್ನಬಹುದು! ಸುಮಾರು ಈ ಹೊತ್ತಿಗೆ, ಕಾಕತಾಳೀಯವಾಗಿ ಕರ್ನಾಟಕ ಸರ್ಕಾರದಿಂದ ‘ರಾಜ್ಯ ಸಂಗೀತವಿದ್ವಾನ್’ ಪ್ರಶಸ್ತಿಯೂ ಶ್ರೀಕಂಠನ್ ರವರಿಗೆ ಸಂದಿತು. “ಶ್ರೀಕಂಠನ್ ರವರನ್ನು ಸಮ್ಮಾನಿಸುವ ಸಮಿತಿಯಲ್ಲಿ ಅಧ್ಯಕ್ಷರಾಗಲು ಒಪ್ಪಿದವರು ಸ್ವತಃ ಅತ್ಯುಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಇ.ಎಸ್.ವೆಂಕಟರಾಮಯ್ಯನವರು. ಇದಕ್ಕಿಂತ ದೊಡ್ಡ ಹೆಗ್ಗಳಿಕೆ ಇನ್ನೇನಿದ್ದೀತು?”ಎನ್ನುವುದು ಚಂದ್ರಶೇಖರ್ ರವರ ಅನಿಸಿಕೆ.

1995ರಲ್ಲಿ ಶ್ರೀಕಂಠನ್ ರವರ 75ನೆಯ ವರ್ಧಂತಿಯ ಸಂದರ್ಭದಲ್ಲಿ, ಶಿಕ್ಷಣತಜ್ಞರೂ ಸಂಗೀತ ಕಲಾಪೋಷಕರೂ ಆದ ರಾಮಸುಧಾ ಛಾರಿಟಬಲ್ ಟ್ರಸ್ಟ್ ನ ಎ.ಹೆಚ್.ರಾಮರಾವ್ ರವರು, ಶ್ರೀಕಂಠನ್ ರವರ ಕುರಿತಾಗಿ ಹಲವು ಹಾಡುಗಾರರ ಹಾಗೂ ಸಂಗೀತಶಾಸ್ತ್ರಜ್ಞರ ಲೇಖನಗಳನ್ನೊಳಗೊಂಡ ವಿಶೇಷಾಂಕವನ್ನು ಪ್ರಕಟಪಡಿಸಿದರು. ಆ ಹೊತ್ತಿಗೆಯ ನಾಮಧೇಯ ‘ಶ್ರೀಕಂಠ.’  ಶ್ರೀಕಂಠನ್ ರವರ ಹಿರಿಯ ಶಿಷ್ಯರು ಒಗ್ಗೂಡಿ ಈ ಸಂದರ್ಭವನ್ನು ಅದ್ದೂರಿಯಾಗಿಯೇ ಸಮಾಚರಿಸಿದರು. ಎಲ್ಲ ಸಂಗೀತವೇದಿಕೆಗಳಲ್ಲೂ ಉತ್ಸವಗಳಲ್ಲೂ ಶ್ರೀಕಂಠನ್ ರವರು ಎಪ್ಪತ್ತು ವಯಸ್ಸಿನಲ್ಲೂ ಅತ್ಯಂತ ಬೇಡಿಕೆಯ ಹಾಡುಗಾರರಾಗಿದ್ದದ್ದು ಒಂದು ವಿಶೇಷವಾದರೆ, ಶ್ರೀಕಂಠನ್ ರವರು ತರಬೇತುಗೊಳಿಸಿದ ಅವರ ಶಿಷ್ಯರುಗಳ ಪೈಕಿ ಹಲವರು ಅತ್ಯುತ್ತಮ ಕಲಾವಿದರಾಗಿ ಮಾನ್ಯರಾಗಿರುವುದು ಮತ್ತೊಂದು ವಿಶೇಷ. ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಈ ವಯಸ್ಸಿನಲ್ಲೂ ಅವರು ಆಹ್ವಾನದ ಮೇರೆಗೆ ಹೋಗಿಬರುತ್ತಲೇ ಇರುವುದು ಅವರ ಸತ್ವಸಾಮರ್ಥ್ಯಗಳಿಗೆ ಕನ್ನಡಿ ಹಿಡಿಯುತ್ತದೆ” ಎನ್ನುತ್ತಾರೆ ಚಂದ್ರಶೇಖರ್ ರವರು. 

ಶೆಮ್ಮಂಗುಡಿಯವರ ಸಮ್ಮುಖದಲ್ಲಿ

ಶ್ರೀಕಂಠನ್ ರವರ 75ರ ವರ್ಧಂತಿಯ ಮುಖ್ಯ ಅಭ್ಯಾಗತರು ಮತ್ತಾರೂ ಅಲ್ಲ, ಸ್ವತಃ ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್ ರವರು! ಅವರು ಹೇಳುತ್ತಾರೆ- “ಶ್ರೀಕಂಠನ್ ರವರನ್ನು ಅವರ 75 ವರ್ಷಗಳ ಸಂದರ್ಭದಲ್ಲಿ ಹೀಗೆ ಗೌರವಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ. ಇವರ ಸ್ನೇಹಿತರು, ಶಿಷ್ಯರು ಹಾಗೂ ಕಲಾಬಂಧುಗಳು ಸಲ್ಲಿಸಬೇಕಾದ ಗುರುಕಾಣಿಕೆ ಇದು.” ಇವರು ರುದ್ರಪಟ್ಣದ ಸುಸಂಸ್ಕೃತ ವೇದಪಂಡಿತರ ಸಂಗೀತಗಾರರ ವಂಶದಲ್ಲಿ ಹುಟ್ಟಿಬಂದವರು, ಕಾವೇರಿಯ ಆರಾಧಕರು. ಇವರ ಕುಲದವರು ಮೈಸೂರಿನ ರಾಜಮರ್ಯಾದೆಗಳನ್ನೂ ಬಯಸದೆ ತಮ್ಮ ಪಾಡಿಗೆ ಹಳ್ಳಿಯಲ್ಲಿ ಉಳಿದವರು. ಇಂತಹ ಮಹಾತ್ಮರ ವರ್ಧಂತಿಯಲ್ಲಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ತುಂಬ ಸಂತೋಷಗೊಂಡಿದ್ದೇನೆ. ಶ್ರೀಕಂಠನ್ ರವರ 75ನೆಯ ವರ್ಧಂತಿಯ ಸುದ್ದಿ ಕೇಳುತ್ತಲೇ ನಾನು ಅವರೊಂದಿಗೆ ಇರಬೇಕೆಂದು ನಿಶ್ಚಯಿಸಿ ನಾನು ಗಂಟುಮೂಟೆ ಕಟ್ಟಿಯಾಗಿತ್ತು!” ಹೀಗೆ ಶ್ರೀಕಂಠನ್ ರವರ ವರ್ಧಂತಿಯ ಆಚರಣೆಯ ಸಂದರ್ಭದಲ್ಲಿ ಭಾರತದ ಶಾಸ್ತ್ರೀಯ ಸಂಗೀತದ ಮೊತ್ತೋರ್ವ ದಿಗ್ಗಜರೇ ಉಪಸ್ಥಿತರಿದ್ದದ್ದು ಬಹಳ ಔಚಿತ್ಯಪೂರ್ಣವಾಗಿತ್ತು. ಶೆಮ್ಮಂಗುಡಿಯವರು ಶ್ರೀಕಂಠನ್ ರವರನ್ನು ಶ್ಲಾಘಿಸಿದ್ದು ಇದೇ ಮೊದಲೇನಲ್ಲ. ಅವರು ಎಂದಿನಿಂದಲೂ ರುದ್ರಪಟ್ಣದ ಈ ‘ಉತ್ತರಾಧಿಕಾರಿ’ಯ ಸಂಗೀತದ ಶುದ್ಧಿಯ ಬಗ್ಗೆ ಮುಕ್ತಕಂಠದಿಂದ ಹೊಗಳುತ್ತ ಬಂದವರೇ.

ಶ್ರೀಕಂಠನ್ ರವರು ತಮ್ಮ ಪ್ರತಿದಿನವನ್ನೂ ಸಂಗೀತ ತರಗತಿಗಳಿಗಾಗಿ ಮೀಸಲಿಟ್ಟಿದ್ದು ಅವರ ದೊಡ್ಡ ಯೋಗದಾನವೇ ಸರಿ. “ಅವರ ಸಂಗೀತವೃತ್ತಿಯ ಜೀವನದ ಅತ್ಯಂತ ಉತ್ತಮವೂ ಫಲವತ್ತರವೂ ಆದ ಯೋಗದಾನವದು ಎನ್ನಬಹುದು” ಎನ್ನುತ್ತಾರೆ ಸ್ವತಃ ಶೆಮ್ಮಂಗುಡಿಯವರು. ಸ್ವತಃ ತಾವೂ ಹಲವು ಉತ್ತಮ ಕಲಾವಿದರನ್ನು ಬೆಳೆಸಿದ ಶೆಮ್ಮಂಗುಡಿಯವರ ಈ ನುಡಿ ಅರ್ಥಪೂರ್ಣ. ಶ್ರೀಕಂಠನ್ ರವರ ಮಗ ರಮಾಕಾಂತ್, ಮಗಳು ರತ್ನಮಾಲರಿಂದ ಹಿಡಿದು ನೂರಾರು ಶಿಷ್ಯರ ಪಟ್ಟಿ ಬೆಳೆಯುತ್ತಹೋಯಿತು.

ಈ ಸಂದರ್ಭದಲ್ಲಿ, ಶ್ರೀಕಂಠನ್ ರವರ ಶಿಷ್ಯರೆಲ್ಲರೂ ಒಗ್ಗೂಡಿ ನಿಂತರು. ಗುರುಗಳು ತಮಗೆ ನೀಡಿದ ವಿದ್ಯಾದಾನವನ್ನೂ, ತರಬೇತಿಯನ್ನೂ ಮನಸಾ ಮೆಚ್ಚಿ ಆರಾಧಿಸಲು, ಕೃತಜ್ಞತೆ ತೋರಲು,ಹಾಗೂ ಈ ಶ್ರೀಮಂತಪರಂಪರೆಯನ್ನು ಮುಂದುವರೆಸುವ ಪ್ರತಿಜ್ಞೆಗೈಯಲು ಒಮ್ಮತವಾಗಿ ನಿಂತರು. ಈ ಸಂದರ್ಭದಲ್ಲಿ ಶಿಷ್ಯರೆಲ್ಲರೂ 1.5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಶ್ರೀಕಂಠನ್ ರವರಿಗೆ ಅರ್ಪಿಸಿದರು. ಆ ಕಾಲದಲ್ಲಿ (1995ರಲ್ಲಿ) ಇದು ಸಾಕಷ್ಟು ದೊಡ್ಡಮೊತ್ತವೇ ಸರಿ. ಯಾವುದನ್ನು ವ್ಯಯಗೊಳ್ಳದಂತೆ ಎಚ್ಚರವಹಿಸಿ ನಿಭಾಯಿಸುವ ಸಂಸ್ಕಾರವುಳ್ಳ ರಮಾಕಾಂತ್ ರವರು, ತಮ್ಮ ತಂದೆಯ ಆಜ್ಞೆ ಕೋರಿ,ತಕ್ಷಣವೇ ಆ ಹಣದಿಂದ ಶಾಸ್ತ್ರೀಯ ಸಂಗೀತವನ್ನು ಉಳಿಸುವ ಬೆಳೆಸುವ ಸಲುವಾಗಿ ‘ಶ್ರೀಕಂಠನ್ ಟ್ರಸ್ಟ್’ ಅನ್ನು ನಿರ್ಮಿಸುವುದಾಗಿ ಘೋಷಿಸಿಯೇಬಿಟ್ಟರು!

ಅವರಿಗೇ ಸಲ್ಲುವಂಥದ್ದು

ದೀರ್ಘಾಯುಗಳಾಗಿದ್ದ ಇತರ ಸಂಗೀತ ವಿದ್ವಾಂಸರಿಗಿಂತ ಶ್ರೀಕಂಠನ್ ರವರು ಹೇಗೆ ಭಿನ್ನ ಮತ್ತು ವಿಶೇಷ ಎಂದರೆ, 94ರ ವಯಸ್ಸಿನಲ್ಲೂ ಅವರು ಕಛೇರಿಗಳಲ್ಲಿ ಹಾಡುವಾಗ ಅವರ ಕಂಠಶ್ರೀಯು ಅಚ್ಚುಕಟ್ಟಾಗಿದ್ದದ್ದು, ಶ್ರುತಿ ತಪ್ಪದೇ ಉಳಿದದ್ದು! ಶಾಂತಿಯನ್ನು ಸೂಸುತ್ತ ಶ್ರೀಕಂಠನ್ ರವರು ಹೀಗೆನ್ನುತ್ತಾರೆ- “ಈ ವಯಸ್ಸಿನಲ್ಲೂ ನಾನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಡಬಲ್ಲವನಾಗಿರುವುದು ದೇವರ ವರವೇ ಅಲ್ಲವೆ? ನಾನಿನ್ನೂ ನಿವೃತ್ತನೇ ಆಗಿಲ್ಲ. ನನಗಿರುವ ಅಲ್ಪಜ್ಞಾನದಿಂದ ಎಲ್ಲರನ್ನೂ ಇನ್ನೂ ಮೆಚ್ಚಿಸುತ್ತಿದ್ದೇನೆ. ಇದು ದೇವರು ಕೊಟ್ಟಿರುವ ವರವೇ ಅಲ್ಲವೆ? ನಾನು ಮಾಡುವ ಪ್ರಾಣಾಯಾಮಾದಿ ಶ್ವಾಸದ ವ್ಯಾಯಾಮಗಳೇ ನನ್ನ ಕಂಠವನ್ನು ಹೀಗೆ ಕಾಪಾಡಿವೆ ಎನ್ನಬಹುದು.”

ಶೆಮ್ಮಂಗುಡಿಯವರಿಗೆ ಧ್ವನಿಮುದ್ರಣ ಅಷ್ಟೇನೂ ಒಪ್ಪಿಗೆಯಾದ ವಿಷಯವಾಗಿರಲಿಲ್ಲ. ಮುದ್ರಣ ಮಾಡುವಾಗ ಕಲಾವಿದನ ಪೂರ್ಣ ಅಭಿವ್ಯಕ್ತಿಯು ಬರಲಾಗದು ಎನ್ನುವುದು ಅವರ ಅಭಿಮತ. ಅದಲ್ಲದೇ ಹಿಂದಿನ ತಲೆಮಾರಿನ ಕಲಾವಿದರನ್ನು ಸಂದರ್ಭವರಿತು ಯಥಾವತ್ತಾಗಿ ಮೆಚ್ಚುವುದು ಮುಂದಿನ ಪೀಳಿಗೆಗಳಿಗೆ ಸಾಧ್ಯವಾಗುವುದಿಲ್ಲವೇನೋ ಎನ್ನುವುದೂ ಅವರ ಕಾತರವಾಗಿತ್ತು. ಸ್ವತಃ ಅವರೂ 60 ವಯಸ್ಸು ದಾಟಿದ ಮೇಲೆಯೇ ತಮ್ಮ ಸಂಗೀತವನ್ನು ಮುದ್ರಣಕ್ಕೆ ಬಿಟ್ಟುಕೊಟ್ಟದ್ದು. ಆ ವಯಸ್ಸಿನ ನಂತರವೇ ತನ್ನ ಸಂಗೀತವೂ ಉನ್ನತಿಗೇರಿದ್ದು ಎನ್ನುವುದು ಅವರ ಅಭಿಪ್ರಾಯ.ಆದರೆ ಶ್ರೀಕಂಠನ್ ರವರು ಹೇಳುವುದೇನೆಂದರೆ- “ಸಭಾಕಛೇರಿಗಳಿಗೂ ಈ ಸಮಸ್ಯೆ ಅನ್ವಯವಾಗುತ್ತದೆ. ಏಕೆಂದರೆ ಪ್ರತಿಯೊಂದು ಕಛೇರಿಯೂ ಕಳೆಗಟ್ಟಿ ನವನಾವೀನ್ಯತೆಯಿಂದ ಅತ್ಯಂತ ಆಕರ್ಷಕವಾಗಿಯೇ ಇರುತ್ತದೆ ಎನ್ನಲಾಗದು. ಏರಿಳಿತಗಳು ಸ್ವಲ್ಪ ಇದ್ದೇ ಇರುತ್ತವೆ” ಎಂದು.

ಶ್ರೀಕಂಠನ್ ರವರು ಹೇಳುತ್ತಾರೆ- “ಕಂಠಸೌಷ್ಠವವನ್ನು ಕಾಪಾಡಿಕೊಳ್ಳಲು ಒಂದಷ್ಟು ಶಿಸ್ತುನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಂಗೀತಪರವಾದ ಮನೋಭಾವವನ್ನೂ ಸ್ಮೃತಿಶಕ್ತಿಯನ್ನೂ ಸಮರಸತೆಯನ್ನೂ ಕಾಪಾಡಿಕೊಳ್ಳುವುದು ಕಂಠಸೌಷ್ಠವಕ್ಕೆ ಬಹಳ ಪೂರಕವಾದ ಅಂಶಗಳು. ಪ್ರಾರ್ಥನೆ, ಧ್ಯಾನ, ಅಧ್ಯಯನ, ಅಭ್ಯಾಸಾದಿಗಳಿಂದ ಕೂಡಿದ ಉತ್ತಮ ದಿನಚರಿಯೂ ಇದಕ್ಕಾಗಿ ಅತ್ಯಗತ್ಯ”. ಲಾಲ್ಗುಡಿ ಜಿ.ಜಯರಾಮನ್ ರವರು 2012ರಲ್ಲಿ ಒಮ್ಮೆ 1960ರ ದಿನಗಳನ್ನು ಸ್ಮರಿಸುತ್ತ ಹೀಗೆಂದರು- “ಶೆಮ್ಮಂ ಗುಡಿಯವರು ಬೆಂಗಳೂರಿನಲ್ಲಿ ಕಛೇರಿ ಮಾಡಬೇಕಾಗಿ ಬಂದಾಗ ಹೇಳಿದರಂತೆ- ’ನನ್ನೊಡನೆ ವೇದಿಕೆಯ ಮೇಲೆ ಶ್ರೀಕಂಠನ್ ರವರೇ ಹಾಡಲಿ. ನಮ್ಮ ಜೋಡಿ ಚೆನ್ನಾಗಿ ಮೂಡಿಬರುತ್ತದೆ. ಅವರ ಧ್ವನಿ ಅಚ್ಚುಕಟ್ಟಾಗಿದೆ. ಅದಲ್ಲದೆ ನಾವಿಬ್ಬರೂ ಸಂಪ್ರದಾಯನಿಷ್ಠರು’ ಎಂದು.”

ಸಂಗೀತದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ                                          

ಶೆಮ್ಮಂಗುಡಿ ಹಾಗೂ ಶ್ರೀಕಂಠನ್ ರವರಲ್ಲಿದ್ದ ಮತ್ತೊಂದು ಸಮಾನ ಸ್ವಭಾವವೆಂದರೆ ಇಬ್ಬರೂ ಮಹಿಳೆಯರನ್ನು ಸಂಗೀತಕ್ಷೇತ್ರದಲ್ಲಿ ಪ್ರೋತ್ಸಾಹಿಸಿದವರು. ಲಿಂಗಭೇದವಿಲ್ಲದೆ ಇಬ್ಬರೂ ಮಹಿಳೆಯರನ್ನು ಸಭೆಗಳಲ್ಲೂ ವೇದಿಕೆಗಳಲ್ಲೂ ಭಾಗವಹಿಸುವಂತೆ ಬೆಂಬಲಿಸಿದವರು. ಸುಮಾರು 7 ದಶಕಗಳ ಹಿಂದೆಯೇ ಇವರಿಬ್ಬರೂ ಕರ್ನಾಟಕ ಸಂಗೀತಲೋಕದಲ್ಲಿ ಪ್ರಗತಿಪರತೆಯನ್ನು ಪ್ರದರ್ಶಿಸಿದವರು. ಇವರಿಬ್ಬರೂ ಹಲವಾರು ಕಲಾವಿದೆಯರಿಗೆ ಸಂಗೀತ ಕಲಿಸಿದವರು. ಎಂ.ಎಸ್. ಸುಬ್ಬುಲಕ್ಷ್ಮೀರವರಂತೂ ಶೆಮ್ಮಂಗುಡಿಯವರ ಹಲವಾರು ಪ್ರತಿಭಾನ್ವಿತ ಶಿಷ್ಯರ ಪೈಕಿ ಪಟ್ಟಶಿಷ್ಯೆಯೆನ್ನುವುದು ಗೊತ್ತೇ ಇರುವ ವಿಷಯ.

ಶ್ರೀಕಂಠನ್ ರವರ ಬಗ್ಗೆ ಅವರ ಶಿಷ್ಯೆ ಗೌರಿ ಕುಪ್ಪುಸ್ವಾಮಿರವರು ಹೇಳುವ ಒಂದು ವಿಷಯ ಗಮನರ್ಹ-

ಸ್ವಾತಂತ್ರ್ಯಪೂರ್ವದಲ್ಲಿ ತಮಿಳುನಾಡಿನ ಪುದುಕೊಟ್ಟೈ ಸಂಗೀತದ ಕೇಂದ್ರವಾಗಿತ್ತು. ಪುದುಕೊಟ್ಟೈ ಸಂಗೀತಸಭೆಯ ರೂವಾರಿಗಳಾದ ಮುತ್ತುಸ್ವಾಮಿರವರು ಗೌರಿಯವರ ಸೋದರಮಾವ. ಇವರ ಹಾಗೂ ಸಂಪ್ರದಾಯಸ್ಥೆಯಾದ ತನ್ನ ಅಜ್ಜಿಯ ಆಸರೆಯಲ್ಲಿ ಬೆಳೆದ ಗೌರಿಯವರು ಸಂಗೀತದಲ್ಲೇ ಮಿಂದೆದ್ದವರು. ತನ್ನ ಸುತ್ತಲೂ ಸಂಗೀತವೇ ತುಂಬಿದ್ದರೂ ತಾನು ಮಾತ್ರ ಸಾರ್ವಜನಿಕವಾಗಿ ಸಂಗೀತವನ್ನು ಹಾಡುವುದಕ್ಕೆ ಅವಕಾಶ ಸಿಗಲಿಲ್ಲ! ಏಕೆಂದರೆ ತೊಡೆಯ ಮೇಲೆ ತಾಳ ತಟ್ಟುವುದು ಸ್ತ್ರೀಯರಿಗೆ ಶೋಭೆಯಲ್ಲ ಎನ್ನುವುದು ಅವರ ಅಜ್ಜಿಯ ಅಭಿಪ್ರಾಯ. ವರ್ಷಗಳು ಕಳೆದಂತೆ ಆಕೆ ತನ್ನ ಸೋದರಮಾವನನ್ನು ಮನವೊಲಿಸಿ ಅಂತೂ ಇಂತೂ ಮೀನಾಕ್ಷೀ ಸಂಗೀತ ವಿದ್ಯಾಶಾಲೈನಲ್ಲಿ ಸೇರಿಕೊಂಡರು. ತಿಂಗಳಿಗೆ 1.50 ರೂಪಾಯಿ ಶುಲ್ಕ. ಅಲ್ಲಿ ಶಿಕ್ಷಕರಾಗಿದ್ದ ಎಸ್.ರಾಮನಾಥನ್ ಹಾಗೂ ಕಲ್ಕತ್ತಾ ಕೃಷ್ಣಮೂರ್ತಿರವರಿಂದ ದೈನಂದಿನ ಪಾಠಗಳನ್ನು ಮಾಡಿಸಿಕೊಂಡರು.

ಮುಂದೆ ಮೈಸೂರಿನ ಆಕಾಶವಾಣಿಯ ಸ್ಥಳೀಯ ನಿರ್ದೇಶಕರಾಗಿದ್ದ ಶ್ರೀ.ನಂದಿರವರನ್ನು ಭೇಟಿಯಾದದ್ದು ಗೌರಿಯವರ ಜೀವನದಲ್ಲಿ ಗಮನಾರ್ಹ ತಿರುವನ್ನೇ ತಂದಿತು. ಗೌರಿಯವರ ಹಾಡುಗಾರಿಕೆಯನ್ನು ಆಲಿಸಿ ವಾ.ಶ್ರೀಕಂಠನ್ ಆಕೆಯನ್ನು ತಮ್ಮ ಶಿಷ್ಯೆಯನ್ನಾಗಿ ಸ್ವೀಕರಿಸಲು ಒಪ್ಪಿದರು. ಇದನ್ನು ನೆನೆದು ಗೌರಿಯವರು ಧನ್ಯತೆಯಿಂದ ನುಡಿಯುತ್ತಾರೆ- “ ಅವರು ನನಗೆ ಪಾಠ ಹೇಳಲು ಸಂತೋಷವಾಗಿ ಒಪ್ಪಿದ್ದು ಮಾತ್ರವಲ್ಲ,  ನನ್ನ ಅತ್ತೆಯವರನ್ನು ಮಾತನಾಡಿಸಿ ನಾನು ವೇದಿಕೆಯೇರಿ ಹಾಡುವುದು ತಪ್ಪೇನೂ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಹೆಚ್ಚುಹೆಚ್ಚು ಕಛೇರಿಗಳನ್ನು ಮಾಡುವಂತೆ ಸ್ಫೂರ್ತಿಯಿತ್ತರು. ನನ್ನ ಸಂಗೀತವೃತ್ತಿಯ ಪ್ರಾರಂಭದಲ್ಲಿ ಶ್ರೀಕಂಠನ್ ರವರ ಬೆಂಬಲವು ನನ್ನ ಪಾಲಿಗೆ ದೊಡ್ಡ ಆಧಾರವೇ ಆಗಿತ್ತು” ಎಂದು.

ಅತ್ತ ತಿರುವಾಂಕೂರಿನಲ್ಲಿ ಶೆಮ್ಮಂಗುಡಿಯವರು ಸ್ವಾತಿ ತಿರುನಾಳರ ಗೀತೆಗಳನ್ನು ಬೆಳಕಿಗೆ ತರುವಲ್ಲಿ ಬಹುವಾಗಿ ಶ್ರಮಿಸಿದರೆ ಇತ್ತ ಶ್ರೀಕಂಠನ್ ರವರು ಭಕ್ತಿಸಾಹಿತ್ಯವನ್ನು ಮೆರಗುಗೊಳಿಸಿದರು. ಇಬ್ಬರೂ ಆಕಾಶವಾಣಿಯಲ್ಲಿನ ತಮ್ಮ ಸಂಗೀತ-ಸಂಯೋಜನೆಗಳ ಯೋಗದಾನಕ್ಕಾಗಿ ಪ್ರಸಿದ್ದರು. ಇಬ್ಬರೂ ಅತ್ಯಂತ ಸೃಜನಶೀಲ ಮನಸ್ಕರೂ ಸಂಗೀತಸಂಯೋಜಕರೂ ಆಗಿದ್ದು ಇಬ್ಬರ ಕೃತಿಗಳೂ ಚೆನ್ನಾಗಿ ದಾಖಲೆಯೂ ಆಗಿವೆ ಎನ್ನುವುದು ವಿಶೇಷ.

ಸಂಗೀತಕಲಾನಿಧಿ ಶ್ರೀಕಂಠನ್ ರವರ ನೆನಪುಗಳು

1995-96ರಲ್ಲಿ ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಶ್ರೀಕಂಠನ್ ರವರು ಅಧ್ಯಕ್ಷತೆ ವಹಿಸಿದರು. ಅಂಗ್ಲ ಹೊಸವರ್ಷದ ಮೊದಲ ದಿನದಂದು ಘನತೆವೆತ್ತ ಸಂಗೀತಕಲಾನಿಧಿ ಪ್ರಶಸ್ತಿಯು ಸಂದಿತು. ಈ ಸಮ್ಮಾನಕ್ಕೆ ಭಾಜನರಾದ 5 ನೆಯ ಕನ್ನಡಿಗರು ಶ್ರೀಕಂಠನ್ ರವರು!. ಇವರಿಗಿಂತ ಮುಂಚೆ ಈ ಸಮ್ಮಾನಕ್ಕೆ ಪಾತ್ರರಾದ ಕನ್ನಡಿಗರು ಮೈಸೂರು ವಾಸುದೇವಾಚಾರ್ಯರು (1935), ಮೈಸೂರು ಟಿ ಚೌಡಯ್ಯ (1957), ರಾಳ್ಳಪಲ್ಲಿ ಅನಂತಕೃಷ್ಣ ಶರ್ಮಾ (1974) ಹಾಗೂ ಮೈಸೂರು ವೀಣಾ ದೊರೈಸ್ವಾಮಿ ಐಯ್ಯಂಗಾರ್ (1984)ರವರು.

ಇಂತಹ ಉತ್ಕೃಷ್ಟ ಗಾಯಕರೂ, ನಿರ್ಮಾಪಕರೂ, ಸಂಗೀತಗುರುವೂ, ವಿದ್ವತ್ಸಂಪನ್ನರೂ, ಉದಾತ್ತ ದರ್ಶನದ ಕಲಾವಿದರೂ ಹಾಗೂ ಪ್ರತಿಭಾಶಾಲಿ ಸಂಗೀತ ಸಂಯೋಜಕರೂ ಆಗಿದ್ದ ಶ್ರೀಕಂಠನ್ ರವರಿಗೆ, ಮ್ಯೂಸಿಕ್ ಅಕಾಡೆಮಿಯ ಈ ಸಮ್ಮಾನ ಬಹಳ ತಡವಾಗಿ ಬಂತು ಎನ್ನುವುದು ಸಂಗೀತಲೋಕದಲ್ಲೆಲ್ಲರಿಗೂ ಗೊತ್ತಿದ್ದ ವಿಷಯವೇ. ಶ್ರೀಕಂಠನ್ ರವರಿಗೆ ‘ಸಂಗೀತಕಲಾನಿಧಿ’ ಪ್ರಶಸ್ತಿ ಸಲ್ಲುತ್ತಿದ್ದಂತೆ ಎಲ್ಲರೂ ಅತ್ಯಂತ ಸಂತೋಷವಾಗಿ ಅದನ್ನು ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷರು ತಮ್ಮ ಮಂಡಲಿಯವರು ಶ್ರೀಕಂಠನ್ ರವರಿಗೆ ಈ ಸಮ್ಮಾನವನ್ನು ಸಲ್ಲಿಸಬೇಕೆಂಬ ತಮ್ಮ ನಿಶ್ಚಯವನ್ನು ಶೆಮ್ಮಂಗುಡಿಯವರಿಗೆ ತಿಳಿಸಿದಾಗ ಅವರು ತಕ್ಷಣವೇ “ರೊಂಬ ನಲ್ಲಪಾಟ್ಟು. ಅವರುಕ್ಕು ಕುಡುಕ್ಕಣಂ” (ಬಹಳ ಉತ್ತಮ ಹಾಡುಗಾರಿಕೆ, ಅವರಿಗೆ ಕೊಡಬೇಕಾದದ್ದೇ) ಎಂದರು.

ಶ್ರೀಕಂಠನ್ ರವರ ಆ ಪ್ರಶಸ್ತಿಪ್ರದಾನ ಕಾರ್ಯಕ್ರಮದಲ್ಲಿ ಎಲ್ಲರಿಗಿಂತಲೂ ಮುಂಚಿತವಾಗಿ ಅಲ್ಲಿಗೆ ಶಾಲು-ಹೂವುಗಳ ಸಮೇತವಾಗಿ ಆಗಮಿಸಿದವರು ಎಂ.ಎಸ್. ಸುಬ್ಬುಲಕ್ಷ್ಮೀ ಹಾಗೂ ಸದಾಶಿವO ದಂಪತಿ. ಬಾಯಿ ತುಂಬ ಪ್ರಶಂಸೆಮಾಡುತ್ತ ‘ಈ ಶಿಸ್ತಿನ ಹಾಗೂ ಭಕ್ತಿಯ ಸಂಗೀತ ಸಾಧಕ’ನಿಗೆ ಇದೂ ಹಾಗೂ ಇದಕ್ಕಿಂತಲೂ ಹೆಚ್ಚಿನದು ಸಲ್ಲಬೇಕು ಎಂದು ಹೊಗಳಿ ಹಾರೈಸಿದರು.

ಶ್ರೀಕಂಠನ್ ರವರ ಅಳಿಯ ಪ್ರಕಾಶ್ ರವರು ಹೇಳುತ್ತಾರೆ-  “ಇವರ ಹೆಸರು ಪದ್ಮಭೂಷಣಕ್ಕಾಗಿ ಆಯ್ಕೆಯಾದಾಗ ನಾನು ಇವರನ್ನು ಅಭಿನಂದಿಸಲು ಕನ್ಯಾಕುಮಾರಿಯಿಂದ ಕರೆ ಮಾಡಿದೆ. ಆಗ ಹೆಚ್ಚು ಹಿಗ್ಗದೆ, ಬೀಗದೆ ಶಾಂತವಾಗಿ ಹೇಳಿದರು-’ಪ್ರಕಾಶ, ಇದು ನನ್ನ ಸಾಧನೆಗಳಿಗೆ ನಾದದೇವತೆಯಿತ್ತ ವರಪ್ರಸಾದವೇ ಸರಿ. ನಾನು ಕೊನೆಯುಸಿರಿರುವವರೆಗೂ ಹೀಗೆಯೇ ಹಾಡುತ್ತಲೇ ಇರುವಂತೆ ಆಗಲಿ ಎಂದು ನೀನು ಪ್ರಾರ್ಥಿಸು. ಇದೇ ನನ್ನ ಹೃದಯಾಂತರಾಳದ ಬಯಕೆ’ ”ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: