ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಎನ್ ದರ್ಗಾದವರ ಹೊಸ ಕವಿತೆ – ‘ಹಸಿವಿಗೆ ಹಲವು ಪೋಷಾಕು’

ಆರ್ ಎನ್ ದರ್ಗಾದವರ

**

ತಂತಿ ಬೇಲಿಗೆ

ಊರ್ಧ್ವಪಾದದ ಕೋಗಿಲೆಯ ನಿರ್ಜಿವ ದೇಹ

ಕೊನೆ ಉಸಿರು ಬಿಟ್ಟದ್ದು

ಬೇಟೆಗಾರ ಹೂಡಿದ ಬಾಣಕ್ಕೋ,

ಮೋಜುಗಾರ ಬೀಸಿದ ಕಲ್ಲಿಗೋ

ಅಥವಾ

ಲೋಕ ದರುಶನ ಬಗೆಗೆ ಇಹಲೋಕ ತ್ಯಾಗವೋ

ವಸಂತಕಾಲದ ಸನಿಹವೇ,

ಶೋಕಗೀತೆ ರಾಗ ತಪ್ಪಿ ಹಾಡುತ್ತಿರುವ

ಕೋಕಿಲ ಸಂತತಿಗಳ ಹಿಂಡು

ಕಳೆದುಕೊಂಡಿದ್ದು ಒಂದಾದರೂ

ಖಾಲಿಯಾದದ್ದು ಊರು ಸುತ್ತಣ ಮರಗಳ

ಟೊಂಗೆಗೆ ಅಂಟಿಕೊಂಡಿರುವ ಸಪ್ತರಾಗದ ಗುನುಗು

ತಡವಾಗಿ ಸುದ್ದಿ ಮುಟ್ಟಿ ಚಲ್ಲಾಪಿಲ್ಲಿಯಾದ

ಇರುವೆಗಳ ಶಿಸ್ತು ಸಾಲು

ಸಾಗಿದ್ದು ಮರಣಯಾತ್ರೆಗಾದರೂ

ಮೆತ್ತಿಕೊಂಡಿದ್ದು ಮಾಂಸಮುದ್ದೆಗೆ

ಇನ್ನೇನು ತಂತಿಬೇಲಿಯಿಂದ ದುಬಕ್ ಎಂದು

ಮಣ್ಣಲ್ಲಿ ಮಣ್ಣೇ ಆಗುವ ಜಾದೂಗಾರ ಹೊತ್ತು

ಎತ್ತಲೋ ಅವಿತ ಕರಿನಾಯಿ ಅಪ್ಪಳಿಸುತ್ತದೆ

ತನ್ನದೇ ನೆರಳ ನಕಲಿನಂತೆ

ಮುರಿದ ಟೊಂಗೆಯಲಿ ಜೋತು ಬಿದ್ದ ಗಿಡುಗ

ಪಾಲು ಕೇಳುವ ಮುನ್ನ ಬಾಯಿ ಹೊಲಿದು

ತೂರಿ ಬಿಡಬೇಕು

ನೆತ್ತರ ವಾಸನೆ ಹರಡದಂತೆ ಗಾಳಿಯನು

ಬಂಧಿಸಬೇಕು

ಇಲ್ಲಿ

ಒಂದೇ ನಮೂನೆ ಹಸಿವಿಗೆ ತರಹ ತರಹ

ಪೋಷಾಕುಗಳು

ಹಸಿವೊಂದಿರದಿದ್ದರೆ

ನದಿಯು ಸಹ ಜಿದ್ದಿಗೆ ಬಿದ್ದು

ಸಾಗರವನ್ನು ಬಯಸುತ್ತಿರಲಿಲ್ಲ

ಕೆಲವು ಸಲ ಹಿಮ್ಮುಖ ಪ್ರಯತ್ನವೂ

ಮಾಡುತ್ತಿತ್ತು

ಹಂಚಿ ತಿನುವ ಕೋಗಿಲೆ ಕೊನೆ ಕೊನೆಗೆ

ತನದೇ ದೇಹವನ್ನು ಹಂಚಿಕೊಳ್ಳತ್ತಲೇ ಹೇಳುತ್ತದೆ;

‘ನೀನಾದರೂ ಬದುಕು’

ಇಲ್ಲಿ ಉಸಿರಿಟ್ಟುಕೊಂಡು ಹೊಯ್ದಾಡಿ

ಜೀವಿಸುವದಕ್ಕಿಂತ

ಉಸಿರು ಕಟ್ಟಿ ಮಣ್ಣಾಗಿರುವದೇ ಲೇಸು.

‍ಲೇಖಕರು Admin MM

2 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading