ಹೇಳಿಕೊಳ್ಳಲು ನನ್ನ ಡೈರಿ ಪುಟಗಳು ಮಾತ್ರ ನನ್ನೊಂದಿಗಿದ್ದವು.

ಶೋಭಾ ಹಿರೇಕೈ ಕಂಡ್ರಾಜಿ

**

ಅಂದು ಮುಂಜಾನೆ ಎದ್ದವಳಿಗೆ ಊರಲ್ಲಿ ತಳವಾರರ ಸಾರುವ ಸದ್ದು ಕಿವಿ ತಲುಪಿತ್ತು. “ಗಾಂವಾಂಚಾ ಸಗಳೇ ಲೋಕ ದೇವಾಚ ಮಂದಿರ್ ಕಡೆ ಏಯಲಾ ಪಾಯಜೆ” (ಊರಿನ ಎಲ್ಲರೂ ದೇವಾಲಯದ ಬಳಿ ಬರಬೇಕು) ಈ ರೀತಿಯ ತಳವಾರರ ಸಂದೇಶಗಳು ವರುಷಕ್ಕೆ ಒಂದು ಹತ್ತು ಸಲವಾದರೂ ಕಿವಿಗೆ ಬೀಳುತಿತ್ತು ಅಥವಾ ಇನ್ನೂ ಹೆಚ್ಚಿನ ಸಲ! ಹುಟ್ಟಿಗೆ, ಸಾವಿಗೆ ಊರ ಹಬ್ಬಗಳಿಗೆ, ಸಾರ್ವಜನಿಕ ಕೆಲಸಕ್ಕೆ ಅಲ್ಲದೆ, ಕರಡ ಕಡಿಯಲು ಕಾಡಿಗೆ ಹೋಗಲು, ಬೇಟೆಯಾಡಲು ಕಣಿವೆಗಿಳಿಯಲು, ಈ ಕೆಲಸ ಕಾರ್ಯಗಳಿಗೆಲ್ಲ ಊರ ತಳವಾರನ ಡಂಗುರವೇ ಊರ ಜನರನ್ನೆಲ್ಲ ಮಂದಿರದ ಬಳಿ ಸೇರಿಸಿ ಅಲ್ಲಿಂದ ಮುಂದೆ ಕದಲಿಸುತಿತ್ತು.

ಒಮ್ಮೊಮ್ಮೆ ನಂಗೆ ತಳವಾರರ ಸಾರುವಿಕೆ ಒಂದು ರಾಗಬದ್ಧ ಹಾಡಾಗಿ ಕೇಳಿಸುತ್ತಿತ್ತೇ ವಿನ: ಅದರ ತಲೆಬುಡ ಅರ್ಥವಾಗುತ್ತಿರಲಿಲ್ಲ. ಆಗೆಲ್ಲ ಮರಾಠಿ ಊರಿನ ಕನ್ನಡ ಪದಕೋಶದಂತಿರುವ ನಾನಾರ ಬಳಿ ಅರ್ಥ ಕೇಳುತಿದ್ದೆ. ಒಮ್ಮೆ ಕರಡ ಕಡಿಯಲು ಊರವರೆಲ್ಲಾ ಕಾಡ ಅಂಚಿಗೆ ಹೋಗಬೇಕಿತ್ತು. ನಮ್ಮ ಕಡೆಯಂತೆ ಅಡಿಕೆ ತೋಟದ ಜಮೀನಿಗೆ ಇಂತಿಷ್ಟು ಬೆಟ್ಟ, ಬೇಣ ಅಂತ ಆ ಊರಲ್ಲಿ ಇರಲಿಲ್ಲ. ಮನೆ ಕಟ್ಟಲು ಒಂದಿಷ್ಟು ಜಾಗ ಬಿಟ್ಟರೆ ಮತ್ತೆ ಬೇರೆ ಏನು ಸ್ಥಳಾವಕಾಶವೇ ಅಲ್ಲಿ ಇಲ್ಲ. ಹೀಗಿರುವಾಗ ಸಾಕಿಕೊಂಡ ಒಂದೆರಡು ಹಸು ಕರುಗಳನ್ನು ಅಂಗಳದಂಚಿಗೆ ಕಟ್ಟಿಕೊಂಡು ಸಾಕೋರು.. ಅದಕ್ಕೆ ತಿನ್ನಲು ಒಂದಿಷ್ಟು ಒಣ ಕರಡದ ಮೂಟೆಯನ್ನು ಕಾಡಿನ ಅಂಚಿಗೆ ಹೋಗಿ ಕಡಿದುಕೊಂಡು ಬರೋರು. ಈ ಕೆಲಸ ಕೂಡಾ ಒಂದೇ ದಿನ ಆಗಬೇಕು. ಬೇಕಾಬಿಟ್ಟಿ ಹೋಗಿ ಕಡಕೊಂಡು ಬಂದರೆ ಊರಿನ ಎಲ್ಲರಿಗೂ ಸಮಪಾಲು ಸಿಗುವುದಿಲ್ಲವೆಂದು ನಾನಾರಿಂದ ತಿಳಿಯಿತು. ಮತ್ತು ಅದಕ್ಕೆ ಆ ದಿನ ತಳವಾರರು ದೇವಾಲಯದ ಬಳಿ ಸೇರಲು ಊರವರಿಗೆ ಕರೆದಿದ್ದರು. ಇದಷ್ಟು ವಿವರಿಸಿ ನಾನಾ ಒಳಗೆ ಹೋದರು.

ಸ್ವಲ್ಪ ಹೊತ್ತಲ್ಲೇ ಒಳಗಡೆಯಿಂದ ಜೋರು ಜೋರು ದನಿಯಲ್ಲಿ ಮಾತುಕತೆ ಕೇಳಲು ಶುರುವಾಯಿತು. ನಾನಾರ ಹೆಂಡತಿ ಆಯಿಯದ್ದು ಯಾವಾಗಲೂ ದೊಡ್ಡ ಬಾಯಿ. ಅವರ ಪ್ರೀತಿಯ ಮಾತು ಕೂಡಾ ಏರು ದನಿಯಲ್ಲೇ ಇರುತಿತ್ತು. ಅದರಲ್ಲೂ ಅವರ ಗಾಂವಟಿ ಮರಾಠಿಯ ಜೋರು ಮಾತು ನನಗಂತೂ ಕಾಡಲ್ಲಿ ಮಳೆ ಹೊಯ್ದ ರೀತಿ… ಆದರೆ ಈ ಸಲ ಅವರ ಮಾತು ಮಾತ್ರ ಅವರಿಬ್ಬರ ನಡುವೆ ಜಗಳ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತಿತ್ತು. ಆದರೆ ಕಾರಣ ಮಾತ್ರ ಹೊಳೆಯಲಿಲ್ಲ. ಅರ್ಥ ಆಗುವಂತೆ ಅವರು ಮಾತಾಡುತ್ತಲೂ ಇರಲಿಲ್ಲ.

ನಾನಾ ಮಾತ್ರ ದಡದಡ ಎದ್ದವರೇ ಅಂಗಿ ಹಾಕಿಕೊಂಡು ಹೊರಟೇ ಹೋದರು. ಎಲ್ಲಿ ಎತ್ತ ಹೋದರು ಒಂದೂ ಗೊತ್ತಾಗದೆ ನಾನು ಸಹ ಕಂಗಾಲಾದೆ. ಬಿಸಿಲು ಮುಖ ತೋರುವ ಮೊದಲೇ ಊರವರೆಲ್ಲಾ ಮಾವುಲಿ ಮಂದಿರದಲ್ಲಿ ಜಮಾಯ್ಸಿ ಅಲ್ಲಿಂದ ಮುಂದೆ ಕಾಡಿನ ಕಡೆ ಹೋದರು. ಕೈಯಲ್ಲಿ ಬುತ್ತಿಗಂಟು, ನೀರಿನ ಬಾಟಲಿಗಳು ಮತ್ತೆ ಮಡಚಿ ಸುತ್ತಿಟ್ಟುಕೊಂಡ ಹಗ್ಗದ ಕಟ್ಟು (ಕರಡದ ಹೊರೆ ಬಿಗಿದು ಕಟ್ಟಲು) ಮತ್ತು ಕುಡುಗೋಲು ಇದ್ದವು. ನಾನಾರನ್ನು ಆ ಗುಂಪಿನಲ್ಲಿ, ಹೋಗುವ ಸಾಲಲ್ಲಿ ನಾನು ಮತ್ತೂ ಆಯಿ ಇಬ್ಬರೂ ಹುಡುಕಿದೆವು. ಎಲ್ಲಿಯೂ ನಾನಾರ ಸುಳಿವಿಲ್ಲ. ಎತ್ತ ಹೋದರು ಎಂದು ಗೊತ್ತಾಗದೆ ನಾನು ಮತ್ತು ಆಯಿ ಚಿಂತೆಯಿಂದ ಕುಳಿತೆವು.ನಾನು ಆಯಿಯ ಕಡೆ ವಿಚಾರಿಸಿದೆ “ಏನಾಯಿತು ಆಯಿ? ಜಗಳ ಯಾಕೆ”ಎಂದೆ. ಅವರು “ಕಾಯ್ ನಾಹಿ ಸೋಭಾ ಬಾಯಿ, ಅತ್ತ ಸಧ್ಯ ಪಿಯಾಯ್ಚ ಜೋರ್ ಕೆಲೆ. ಥೋಡಾ ಕಮಿ ಕರಾ ಮಣೂನ್ ಸಾಂಗಿತ್ಲೋ (ಏನು ಇಲ್ಲ ಸೋಬಾ ಬಾಯಿ. ನನ್ನನ್ನು ಆಯಿ ಸೋಬಾ ಬಾಯಿ ಎಂದೇ ಕರೆಯುತಿದ್ದರು. ಕುಡಿಯೋದು ಈಗೀಗ ಬಹಳ ಕಲಿತಿದ್ದಾರೆ , ಕಡಿಮೆ ಮಾಡಿ ಅಂದೆ) ಅಂತ ಹೇಳಿದರು.ನಾನು ಹೌದು ಎಂದು ನಂಬಿದೆ.

ಅಂದು ಊರಲ್ಲಿ ಎಲ್ಲರ ಮನೆಯಲ್ಲೂ ಹೆಂಗಸರು ಮಕ್ಕಳು ಮಾತ್ರ ಇದ್ದೆವು. ರವಿವಾರವಾದ್ದರಿಂದ ನಾನೂ ಮನೆಯಲ್ಲೇ ಇದ್ದೆ. ಆಯಿ ಸಹ ನಾನಾರನ್ನು ಕಾಣದೆ ತಲೆ ಮೇಲೆ ಕೈ ಹೊತ್ತು ಕುಳಿತರು. ನಾನು ಸಹ ದಿಕ್ಕು ತೋಚದಂತೆ ಕುಳಿತೆ. ನಾನು ನನ್ನ ಸ್ನೇಹಿತೆಯ ಮನೆಗೆ ಹೋಗಿ ಬರುವೆ ಎಂದರೂ ಆಯಿ ಬಿಡುತ್ತಿಲ್ಲ. ನಾನೆಲ್ಲಿ ಇವರ ಜಗಳದ ವಿಷಯ ಹೇಳಿ ಬಿಡುವೆನೋ ಎಂದು.ಮೊದಲೇ ಹಾಗೇ ತಾಕೀತು ಸಹ ಮಾಡಿಯೇ ಬಿಟ್ಟಿದ್ದರು. ಯಾರ ಬಳಿಯೂ ಹೇಳಬೇಡ ಎಂದು. ಮನೆ ಬಳಿ ಬಂದವರಾರೂ ನಾನಾರ ವಿಚಾರವನ್ನು ಕೇಳುತ್ತಿಲ್ಲ. ಯಾಕೆಂದರೆ ಅವರೆಲ್ಲರೂ ನಾನಾ ಕಾಡಿಗೆ ಹೋಗಿದ್ದಾರೆ ಎಂದೇ ನಂಬಿಕೊಂಡಿದ್ದರು. ಆಯಿಗೆ ಇದ್ದ ವಿಷಯ ಹೇಳಲು ಆಗುತ್ತಿಲ್ಲವಾದರೂ.. ಅವರ ಒಳಗಿನ ತೊಳಲಾಟ ನನಗೆ ಅರ್ಥ ಆಗುತಿತ್ತು.ಅವರಷ್ಟೇ ನನಗೂ…ಆ ವೇಳೆಯನ್ನು ಕಳೆಯುವುದು ಕಷ್ಟವಾಗುತಿತ್ತು. ಅರೆಯದೂರಲ್ಲಿ ಯಾರ ಕೇಳುವುದು ನಾನು ?ಅಲ್ಲದೆ ಆಯಿಯ ನಿರ್ಬಂಧ ಬೇರೆ!

ಅಷ್ಟರಲ್ಲೇ ಇದ್ದೂರಲ್ಲೇ ಮದುವೆಯಾಗಿದ್ದ ನಾನಾರ ಹಿರಿಯ ಮಗಳು ಮನೆಗೆ ಬಂದರು. ಅವಳಿಗೋ ನಾನಾ ಮನೆಯಲ್ಲಿ ಇಲ್ಲದ್ದು ನೋಡಿ ತಾಯಿ ಮೇಲೆಯೇ ಸಿಟ್ಟು.ಅವಳು ತಂದೆಗೂ ಸಹ ನಾನಾ ಎಂದೇ ಕರೆಯುತಿದ್ದಳು. ಮತ್ತೆ ತಾಯಿಗೆ ಹೇಳಿದಳು” ಆಯಿ ನಾನಾರನ್ನು ಯಾಕೆ ಕಾಡಿಗೆ ಕಳಿಸಬೇಕು ನೀನು? ಅವರಿಗೆ ಈ ವಯಸ್ಸಲ್ಲಿ ಕೆಲಸ ಮಾಡಲು ಆಗುತ್ತದ? ಇದ್ದ ಎರಡು ಎತ್ತನ್ನು ಮಾರಿದರೆ ಆಗೋದಿಲ್ಲವಾ ನಿನಗೆ? ನಾನಾರ ಪೆನ್ಷನ್ ದುಡ್ಡು ಸಾಲಲ್ಲವಾ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ,ಆರೋಪ ಮಾಡುತ್ತಲೇ ಹೋದ ಮಗಳಿಗೆ ಆಯಿ ನಿಜ ಹೇಳಲೇ ಬೇಕಾಯಿತು. ನಾನಾ ಸಿಟ್ಟುಕೊಂಡು ಎಲ್ಲೋ ಹೊರಟು ಹೋದ ವಿಷಯ!

“ಹೌದಾ ದೀದಿ”? ಎಂದು ನನ್ನ ನೋಡಿದರೆ ನಾನಾದರೂ ಏನು ಹೇಳಿಯೇನು! ಅಳುವೊಂದು ಬಿಟ್ಟು ಒಂದೇ ಒಂದು ಮಾತನ್ನು ಆಡಲು ನನ್ನಿಂದ ಆಗಲಿಲ್ಲ. ” ತಂಗ್ಯವ್ವ…ಎಂದು ಕರೆವ ಅಪ್ಪನಂಥ ಅಪ್ಪ , ಎಲ್ಲೋ ಹೊರಟು ಹೋದರೆ ಈ ಮಗಳಿಗೆ ಸಹಿಸಲು ಸಾಧ್ಯವೇ? ದೀದಿ ಮತ್ತು ನಾನು ತಕ್ಷಣವೇ ಕಣಿವೆ ಕಡೆ, ಮತ್ತು ಶಾಲೆಯ ಮುಂದಿನ ಬಯಲು, ಗದ್ದೆ ಕಡೆ ಎಲ್ಲಾ ಹೋಗಿ ನೋಡಿ ಬಂದೆವು. ಮಧ್ಯಾಹ್ನ ದಾಟಿತ್ತು.ಕನಕುಂಬಿಗೆ ಹೋಗಿರಬಹುದು ಸಂಜೆ ಬರಬಹುದು ಕಾಯೋಣ ಎಂದು ನಾನೇ ಸಮಾಧಾನ ಹೇಳಿದೆ. ಧೈರ್ಯ ಕ್ಕೆ ದೀದಿ ನಮ್ಮ ಹತ್ತಿರವೇ ಉಳಿದರು.ಮಧ್ಯಾಹ್ನ ಅಂದು ಯಾರೂ ಊಟ ಮಾಡಲಿಲ್ಲ.

ಅಂದು ನನಗೆ ಒಂದೊಂದು ಕ್ಷಣವೂ ಯುಗವಾದ ಅನುಭವ.ಅಂತೂ ಸಂಜೆ ಐದಾಗಿರಬೇಕು… ನಾನು ಮತ್ತು ದೀದಿ ಕನಕುಂಬಿಯ ದಾರಿಯತ್ತ ಕಣ್ಣು ನೆಟ್ಟೇ ಇದ್ದೆವು .ದೂರದಲ್ಲಿ ಬಿಳಿ ಅಂಗಿಯ ನಾನಾ ಕಣ್ಣಿಗೆ ಬಿದ್ದರು.ನಮಗೆಲ್ಲಾ ಹೋದ ಜೀವ ಬಂದ ಹಾಗೇ…
ನಮ್ಮೊಂದಿಗೇ ಇದ್ದ ಜೀವಗಳು ಈ ರೀತಿಯಲ್ಲಿ ಆತಂಕ ಹುಟ್ಟಿಸಿ ಕಣ್ಮರೆಯಾಗುವ ಸಂದರ್ಭಗಳು ಯಾರಿಗೂ ಬರದಿರಲಿ ದೇವರೇ ಎಂದು ನಾನು ಅಲ್ಲಿಯ ಮಾವುಲಿ ತಾಯಿಯಲ್ಲಿ ಪ್ರಾರ್ಥಿಸಿ ಒಳಹೋದೆ.

ಮನೆಯಲ್ಲಿ ದುಗುಡ ಕಳೆದು ನಿರಾಳತೆ. ಆಯಿ ಒಲೆಗೆ ಬೆಂಕಿ ಹೊತ್ತಿಸಿ ಕಣ್ಣು ಚಹ ಮಾಡಿ ನಾನಾರ ಬಳಿ ಇಟ್ಟರು. ನನ್ನ ಸಹ ಚಹ ಕುಡಿಯಲು ಕರೆದರು. ದೀದಿ ಮತ್ತು ನಾನಾ ಏನೇನೋ ಮಾತಾಡಿಕೊಳ್ಳುತ್ತಿದ್ದರು. ಎತ್ತುಗಳಿಗೆ ತಿನ್ನಲು ಸಾಕಾಗುವಷ್ಟು ಬಿಳೆಹುಲ್ಲು ಇದೆ. ಮತ್ತೆ ಯಾಕೆ ಕಾಡಿನ ಕರಡ ತರುವುದು ಎಂದು ನಾನಾ ದೀದಿಯ ಬಳಿ ಕೇಳುತಿದ್ದರು. ದೀದಿ ಆಯಿಗೇ ಒಂದಿಷ್ಟು ಬುದ್ಧಿ ಹೇಳಿ ಮಾತಾರವಾಡಿ..( ಮೇಲಿನ ಕೇರಿಯ ಹೆಸರು) ಯತ್ತ ಹೊರಟರು. ಆಯಿ ಸ್ವಲ್ಪ ಉಮೇದು ಹೊತ್ತು ಅಡಿಕೆ ಎಲೆ ಬಾಯ್ತುಂಬ ತುಂಬಿಕೊಂಡು ನೀರು ತರಲು ಹೋದರು.

ನಾನು” ನಾನಾ ಹೇಳದೇ ಕೇಳದೆ ಎಲ್ಲಿಗೆ ಹೋಗಿಬಿಟ್ರಿ?” ಅಂದೆ. ” ತಂಗ್ಯವ್ವ… ನಾನು ಮತ್ತೆ ಕಾಡಿನಿಂದ ಕರಡ ತಂದರೆ ನೀನಿರುವ ರೂಮಿನಲ್ಲೇ ಸರಿಯಬೇಕು. ಬೇರೆ ಜಾಗ ಇಲ್ಲ. ನಿನಗೆ ಸರಿಯಾದ ಬಾಡಿಗೆ ಮನೆ ಸಿಗುವವರೆಗೂ ಕರಡ ತರೊಲ್ಲ ಅಂದೆ. ಜಗಳ ಆಯ್ತೆ ಯವ್ವ ನಿನ್ನ ತಂದೆ ತಾಯಿ ವಹಿಸಿದ ಜವಾಬ್ದಾರಿ ನನ್ ಕೂಡೆ ಇದೆಯವ್ವ, ತಂಗ್ಯವ್ವ ನೀನು ಬ್ಯಾಸರ ಪಡಬೇಡ” ಎಂದು ಹೇಳಿ… ಹೋಗಿ ಮಲಗಿ ಬಿಟ್ಟರು.

ನಾನೋ ಮಾತಾಡದೆ ಮೂಕಳಾಗಿದ್ದೆ. ಆಯಿಯ ಟೊಂಕದಲ್ಲಿ ಕೊಡದ ತುಂಬಾ ನೀರಿತ್ತು…. ನನ್ನ ಕಣ್ ಕೊಡ ತುಂಬಿ ತುಂಬಿ ತುಳುಕುತಿತ್ತು. ಆ ದಿನದ ನೋವನ್ನು ಹೇಳಿಕೊಳ್ಳಲು ಡೈರಿ ಪುಟಗಳು ಮಾತ್ರ ಇದ್ದವು ನನಗೆ.ಕಣ್ಣೊರೆಸುವ ಕೈ ಇರಲಿಲ್ಲ!

ಕತ್ತಲಾಗುತ್ತ ಬಂದಿತ್ತು… ಕಾಡಿಗೆ ಹೋದವರು ತಲೆ ಮೇಲೆ ದೊಡ್ಡ ದೊಡ್ಡ ಹೊರೆ ಹೊತ್ತು ಮರಳುತ್ತಿದ್ದರು.
ಮನೆ ದಾಟಿ ಹೋಗುವವರೆಲ್ಲ ಕೇಳುತ್ತಿದ್ದರು…

ನಾನಾ ಯಾಕೆ ಬರಲಿಲ್ಲ? ?

ನಾನಾರು ಮಾತ್ರ ಅವರಿಗಿಂತ ಭಾರವಾದ ಹೊರೆ ಹೊತ್ತು ಮಲಗಿದ್ದರು.

‍ಲೇಖಕರು avadhi

April 4, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: