ಜಿ ಲೋಕೇಶ
ಕವಿತೆಗಳನ್ನು
ಹಡೆದ ತಕ್ಷಣ
ಆನಾಥವಾಗಿಸುತ್ತೇನೆ
ಎತ್ತಿಕೊಳ್ಳುವ ಅವಸರವೇ
ಇಲ್ಲವೆಂದ ಮೇಲೆ
ಸಾಕಿಕೊಳ್ಳುವುದು ದೂರದ ಮಾತು !
ಇಷ್ಟವಾದರೆ ಸಾಕಿಕೊಳ್ಳುವ
ಇಷ್ಟವಾದವರೂ ಬಹು ಇದ್ದಾರೆ
ಅವರಿಗೇನೋ ಪ್ರೀತಿ
ನೀ ಸಿಗದೆ ಹೋದರೂ ನಿನ್ನ
ಕವಿತೆಗಳಲ್ಲಿ ನಿನ್ನನ್ನೇ ಕಾಣುವೆ
ಎಂಬ ಉದಾರತೆ

ನನ್ನದೇನೂ ತಕರಾರಿಲ್ಲ
ಕೆಲವರು ಬದುಕಿನೊಡನೆ
ಜೇಬಿಗಿರಿಸಿಕೊಳ್ಳುತ್ತಾರೆ
ಕೆಲವರು ಮುಚ್ಚಿಟ್ಟು
ಡೈರಿಯೊಳಗೆ ಸಾಕಿಕೊಳ್ಳುತ್ತಾರೆ.
ಕೆಲವರು ಓದಿ ಅಭಿಪ್ರಾಯ ತಿಳಿಸಿ
ಡಿಲೀಟ್ ಮಾಡಿಕೊಳ್ಳುತ್ತಾರೆ.
ಕೆಲವರು ಯಾರಿಗೋ ಬರೆದಿದ್ದು
ಎಂದು ಜಗಳವಾಡುತ್ತಾರೆ.
ಮತ್ತೆ ಮತ್ತೆ ಕವಿತೆಗಳನ್ನು
ಹಡೆದು ಅನಾಥವಾಗಿಸುವ
ನಾನು ಅವರ ದೃಷ್ಟಿಯಲ್ಲಿ
ಆಪ್ತ ಕವಿ ಹೇಗೆ ಆದೆನೆಂಬುದೆ
ನನ್ನ ಬಗೆಹರೆಯದ ಪ್ರಶ್ನೆ!






0 Comments