ಆನಂದ ಪಾಟೀಲ ಓದಿದ ‘

ಮಲೆನಾಡಿನ ಮತ್ತಷ್ಟು ಮತ್ತಷ್ಟು ದಟ್ಟ ಹಸಿರಿನ ಪುಟಗಳು ತೆರೆದುಕೊಳ್ಳುತ್ತ…

ಆನಂದ ಪಾಟೀಲ

ಮಕ್ಕಳು ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುತ್ತಿದ್ದ ಅಜ್ಜ ಕೈ ಬಿಚ್ಚಿ ತೋರಿಸಿ ಎನ್ನುತ್ತಿದ್ದುದು, ಮಕ್ಕಳು ಅದಕ್ಕಾಗೇ ಶಾಯಿಯನ್ನು ಕೈಗೆ ಬಳಿದುಕೊಂಡು ಸಿದ್ಧವಾಗಿರುತ್ತಿದ್ದ ಬಲು ಸಹಜದ ಬಾಲ್ಯದೊಂದಿಗೆ ತರೆದುಕೊಳ್ಳುವ ಈ ಡೈರಿ ಪುಟಗಳು ಬದುಕಿನ ಕಳೆದುಹೋದ ದಿನಗಳ ಮೆಲುಕು ಹಾಕುತ್ತವೆ. ಅವನ್ನು ಹಿರಿಯರಾಗೇ, ಅಜ್ಜನಾಗೇ ತಮ್ಮಣ್ಣ ಅವರು ಮಕ್ಕಳ ಮುಂದೆ ಉಚ್ಚಿಕೊಂಡಿದ್ದಾರೆ. ಮಕ್ಕಳಿಗೆ ಗದ್ಯ ಎಂದರೆ ಕತೆ ಎನ್ನುವಂತಾಗಿದೆ, ಇಲ್ಲಿ ಹಾಗಾಗದೆ ಕಳೆದ ಹೋದ ದಿನಗಳನ್ನು ಕತೆಮಾಡಿ ಚೆಂದದಲ್ಲಿ ಮಕ್ಕಳ ಮುಂದೆ ಹೇಳುತ್ತ ಹೋದುದು ಕಾಣುತ್ತದೆ.

ನಮ್ಮ ದೊಡ್ಡವರ ಸಾಹಿತ್ಯದಲ್ಲಿ ಇಂಥದೆಲ್ಲ ಸಾಕಷ್ಟು ಬಂದಾಗಿದೆ. ನಾನಾ ಬಗೆಯ ಅಪರೂಪದ ಕೃತಿಗಳು ಹಾಗೆ ಸಿಗುತ್ತವೆ. ತಮ್ಮಣ್ಣ ಲಲಿತವೆನ್ನುವ ಪ್ರಬಂಧಗಳನ್ನು ಈಗಾಗಲೇ ನೀಡಿದುದಿದೆ. ಈಗ ಇದು ಇನ್ನೊಂದು ಬಗೆಯದು. ಅವರ ಈ ಮೊದಲಿನ ಮಲೆನಾಡಿನ ಬಾಲ್ಯದ ದಿನಗಳ ನೆನಪುಗಳನ್ನು ತಂದ ಕೃತಿಗಿಂತ ತುಸು ಬೇರೆಯಾಗಿ ಇಲ್ಲಿ ಒಂದಿಷ್ಟೆಲ್ಲ ಮಕ್ಕಳಿಗೆ ಹೆಚ್ಚು ವಿಸ್ತಾರಕ್ಕಿಳಿದ, ಅನುಭವಗಳ ಬಗೆಬಗೆಯ ಉಣ ಸು ಸಿಗುತ್ತದೆ. ಮಕ್ಕಳೊಡನೆ ಮಾತನಾಡುತ್ತ ಲವಲವಿಕೆಯಲ್ಲಿ ಪ್ರಸ್ತುತಗೊಳ್ಳುತ್ತಲೂ ಈ ಬರಹಗಳು ಆಪ್ತವಾಗುತ್ತ ಹೋಗಿವೆ. ಮಕ್ಕಳಿಗೆ ವಿವಿಧ ಉಣ ಸು ಬೇಕು.

‘ಪುಟ್ಟಜ್ಜನ ಡೈರಿಯಲ್ಲಿ ಹಳ್ಳಿಯೇ ತುಂಬಿಕೊ೦ಡಿದೆ’ ಎಂದುಕೊAಡೇ ತೊಡಗಿಕೊಳ್ಳುವ ಇಲ್ಲಿನ ಬರವಣ ಗೆ ಹಳ್ಳಿವಾಡದ ಪರಿಸರದಲ್ಲಿಯೇ ಹುಟ್ಟಿಕೊಂಡುದು. ಅದೂ ಮಲೆನಾಡಿನ ಹಿಂದಿನ ನೆನಪುಗಳನ್ನು ಹಿಡಿದಿಡಲು ನೋಡಿರುವುದು. ಈ ಡೈರಿ ಹಾಗೆ ನೋಡಿದರೆ ಬರೆದಿಟ್ಟುದಲ್ಲ, ಬದಲಿಗೆ ಅಜ್ಜನತಲೆಯಲ್ಲಿ ಬಚ್ಚಿಟ್ಟುಕೊಂಡು ಮಕ್ಕಳಿಗಾಗಿ ಹೆಕ್ಕಿ ಹೆಕ್ಕಿ ತೆಗೆದು ಹೇಳುತ್ತ ಹೋದುದು.

ನಮ್ಮ ನಡುವೆ ಕಾಲ ಬಹುಬೇಗ ಹೆಜ್ಜೆ ಹಾಕುತ್ತಿದೆ, ಏನೇನೋ ಸಂಗತಿಗಳು ನಮ್ಮ ನಡುವೆ ಲಗುಬಗೆಯಲ್ಲಿ ನಡೆಯುತ್ತ ದಿನದಿನವೂ ಮತ್ತೇನು ಎನ್ನುವಂತಾಗುತ್ತಿದೆ. ಹೀಗಿರುವಾಗ ಇಂದಿನ ಮಕ್ಕಳಿಗೆ ಈ ಬಗೆಯ ಹಳೆಯ ನೆನಪು ಒಂದು ಸುಂದರ ತಣ್ಣಗಿನ ತಾಣವಾಗುವಲ್ಲಿ ಸಂಶಯವಿಲ್ಲ.

ಇಲ್ಲಿನ ಪ್ರಬಂಧಗಳಲ್ಲಿ ಅಂದಿನ ನೆನಪಿನ ಬಳಿವಿಡಿದು ಬರುವ, ಈಗ ಮಕ್ಕಳ ಮುಂದಿರದ ಸಾಕಷ್ಟು ನೆನಪುಗಳು ಇರುವುದರೊಂದಿಗೆ, ಸ್ವಾರಸ್ಯದ ಅನುಭವ ಸೇರಿಕೊಂಡಿರುವುದು ಈ ಬರವಣ ಗೆಗೆ ಬಾಲ್ಯದ ಸಂವೇದನೆಗಳ ಆಪ್ತ ಸ್ಪರ್ಷ ಸಿಗುವಂತಾಗಿದೆ. ಕೊಟ್ಟಿಗೆಯಲ್ಲಿ ಹಸುವಿನೊಡನೆ ಕಳೆಯುತ್ತಿದ್ದ ಎಂದಿನ ಸಮಯವು ವಿಶೇಷವಾಗುವುದು ‘ಇದೆಲ್ಲ ನಾನು ಪ್ರಯೋಗ ಮಾಡಿದ್ದು ಹಸುವಿನಂತಹ ಗುಣದ ಹಸುವಿನಲ್ಲಿಯೇ. ಅದು ಒದೆಯದು, ಆ ಕಡೆ ಈ ಕಡೆ ಓಡಾಡದು, ಸಿಟ್ಟಿನಿಂದ ತನ್ನ ಸುಂಡಿಯನ್ನು ತಿರುಗಿಸಿ ದೂಡಿ ಹಾಕದು, ಕೋಡಿನಿಂದ ಇರಿಯದು, ಸಗಣ ರಾಡಿಯಲ್ಲಿ ಅದ್ದಿದ ಬಾಲದಿಂದ ಮುಖಕ್ಕೆ ಹೊಡೆಯದು ಎಂದೆಲ್ಲಾ ಖಾತ್ರಿ ಇದ್ದಾಗ ಮಾತ್ರ. ಆದರೆ ನಾನು ದೊಡ್ಡವನಾದ ಮೇಲೆ ಅನಿವಾರ್ಯವಾಗಿ ಯಾರದೋ ಮನೆಯಲ್ಲಿ ಇದ್ದಾಗ… ಹಾಲು ಕರೆಯಲು ಯಾರೂ ಇಲ್ಲ, ಎಲ್ಲರೂ ತಮಗೆ ಬಾರದು ಎಂದು ಕೈಚಲ್ಲಿ ಕುಳಿತಾಗ ಎಮ್ಮೆಯ ಹಾಲು ಹಿಂಡಿ ಹೀರೋ ಆದದ್ದೂ ಇದೆ’ ಎನ್ನುವಂಥ ಮಾತುಗಳನ್ನ ಹಂಚಿಕೊಳ್ಳುವುದರಿ೦ದ. ಆಲೆಮನೆಯ ಸುತ್ತ ಹರಿಯುವ ಅಂದಿನ ಪರಿಸರವನ್ನ ನಿಡಿದಾಗಿಯೇ ಹರವಿಕೊಳ್ಳುತ್ತ ನಡುನಡುವೆ ‘ಆಲೆಮನೆ ಎಂದ ಕೂಡಲೇ ನನಗಂತೂ ನೆನಪಾಗುವುದು ನೊರೆ ಬೆಲ್ಲ. . . . ಕುದಿಯುತ್ತಿರುವ ಬೆಲ್ಲದ ಕೊಪ್ಪರಿಗೆಯನ್ನು ಒಲೆಯಿಂದ ಮೇಲೆ ಎತ್ತಿ ಬೆಲ್ಲವನ್ನು ಕೊಪ್ಪರಿಗೆಯಿಂದ ಖಾಲಿ ಮಾಡುವುದು ತುಂಬಾ ಎಚ್ಚರಿಕೆ ಬೇಡುವ ಕೆಲಸ. ಆಗ ಮಕ್ಕಳನ್ನು ದೂರಕ್ಕೆ ಓಡಿಸುತ್ತಿದ್ದರು. ಆದರೂ ಕೆಲವರು ಉರಿಯುವ ಒಲೆಯ ಹತ್ತಿರ ಬಂದು ನಿಂತು ನೋಡಲು ಪ್ರಯತ್ನಿಸುವುದೂ ಇತ್ತು. ಉರಿಯುವ ಒಲೆಗೇನಾದರೂ ಜಾರಿದರೆ… ಎಂಬುದು ನೆನಪಾದರೆ ಭಯವಾಗುತ್ತದೆ. ಯಾರು ಒಲೆಯ ಹತ್ತಿರ ಬಂದು ನಿಲ್ಲುತ್ತಾರೋ ಅಂತಹ ಮಕ್ಕಳನ್ನು ದೊಡ್ಡವರು ಹಿಂದಿನಿ೦ದ ನಿಧಾನವಾಗಿ ಬಂದು ಹಿಡಿದು ತೆಳ್ಳನೆಯ ಕೋಲಿನಿಂದ ಎರಡು ಹೊಡೆದೇ ಆಚೆಗೆ ಕಳುಹಿಸುತ್ತಿದ್ದರು. ಪೆಟ್ಟು ತಿಂದವರು ಸ್ವಲ್ಪ ಹೊತ್ತು ಅತ್ತು ನಂತರ ಗರಟೆ ಹಿಡಿದು ಬೆಲ್ಲ ತಿನ್ನಲು ವಾಪಸ್ಸಾಗುತ್ತಿದ್ದರು’ ಎನ್ನುವಂಥ ಮರೆಯಲಾಗದೆ ಉಳಿದು ಬಿಡುವ ನೆನಪುಗಳು ಬೆರೆತುಕೊಂಡೇ ಬರತೊಡಗುತ್ತವೆ. ಇಂಥವು ಕೇವಲ ಮಕ್ಕಳಿಗೆ ವಿಶೇಷದ ಸಂಗತಿಗಳಾಗದೆ ದೊಡ್ಡವರಿಗೂ ಕಳೆದುಹೋದ ದಿನಗಳ, ಬಾಲ್ಯದ ಹಳವಂಡಗಳನ್ನ ತಂದುಕೊಳ್ಳುವAತೆ ಮಾಡತೊಡಗುತ್ತವೆ. ಹಳೆಯ ಎಷ್ಟೋ ಪ್ರೇಮ-ಕಾಮಗಳಿಂದ ತುಂಬಿದ ಸಿನಿಮಾ ಹಾಡುಗಳನ್ನದೇನೋ ಹುಚ್ಚಿನಿಂದ ಈಗ ಕೇಳುವಾಗಲೆಲ್ಲ ಕಳೆದು ಹೋದ ಬಾಲ್ಯದ ದಿನಗಳು ಕಣ್ಣಮುಂದೆ ಹರಿದಾಡುವುದೇ ದೊಡ್ಡದಾಗಿಬಿಟ್ಟಿರುತ್ತದೆ. ಹಾಗೆಯೇ ಇಲ್ಲಿನ ಬಾಲ್ಯದ ದಿನಗಳ ಬಗೆಬಗೆಯ ಸರಕು ಮಕ್ಕಳಿಗಾಗುವಂತೆ ದೊಡ್ಡವರಿಗೂ. ಕಬ್ಬಿನ ಸಿಪ್ಪೆಯ ರಾಶಿಯ ಸುತ್ತಲಿನ ಅನುಭವ ಹಂಚಿಕೊಳ್ಳುತ್ತ ನೀಡುವ ವಿವರವಾದ ಸಂಗತಿಗಳು ಓದುವುದಕ್ಕೆ ಬಲು ಮುದನೀಡುತ್ತವೆ ಃ ‘ಈ ಕಬ್ಬಿನ ಸಿಪ್ಪೆಯ ರಾಶಿಯಲ್ಲಿ ಆಡುವ ಮಜಾ ನೀವು ಅನುಭವಿಸಿಲ್ಲ ಎನಿಸುತ್ತದೆ. ನಾವು ಐದಾರುಜನ ಮಕ್ಕಳು ನಾಲ್ಕೂ ಕಾಲುಗಳನ್ನು ಬಳಸಿ ಈ ರಾಶಿಯ ತುದಿಗೆ ಏರುತ್ತಿದ್ದೆವು. ನಮಗಿರುವುದು ಎರಡೇ ಕಾಲು ಮತ್ತೆ ನಾಲ್ಕು ಕಾಲು ಎಲ್ಲಿಂದ ಬಂತು ಅಂದುಕೊ೦ಡಿರಾ… ಕಾಲಿನ ಜೊತೆಗೆ ಕೈಗಳನ್ನೂ ಉಪಯೋಗಿಸಿ ನಾಲ್ಕು ಕಾಲಿರುವ ಪ್ರಾಣ ಗಳಂತೆ ಮೇಲಕ್ಕೆ ಹತ್ತುತ್ತಿದ್ದೆವು. ಅದಕ್ಕಾಗಿ ಹಾಗೆ ಬರೆದೆ. ರಾಶಿಯ ತುದಿಗೆ ಹತ್ತಿ ನಿಂತು ಕಾಲಿನಿಂದ ಒತ್ತಿ ಒತ್ತಿ ಅಲುಗಿಸಿದರೆ ಇಡೀ ರಾಶಿಯೂ ತೂಗಿದಂತೆ ಆಗುತ್ತಿತ್ತು. ಇದು ನಮಗೆ ತುಂಬಾ ಮಜವೆನಿಸುತ್ತಿತ್ತು.

ನಂತರ ರಾಶಿಯಿಂದ ಕೆಳಕ್ಕೆ ಜಿಗಿಯುವುದು ಪ್ರಾರಂಭವಾಗುತ್ತಿತ್ತು. ಕೆಳಗೆ ಬಿದ್ದಾಗ ಏನೂ ಆಗುತ್ತಿರಲಿಲ್ಲ. ಮತ್ತೆ ಮತ್ತೆ ಮೇಲಕ್ಕೆ ಹತ್ತುವುದು ಕೆಳಕ್ಕೆ ಜಿಗಿಯುವುದು. ಎಷ್ಟುಸಾರಿ, ಎಷ್ಟು ಹೊತ್ತು ಹೀಗೆ ಮಾಡುತ್ತ ಇರುತ್ತಿದ್ದೆವು ಎಂಬುದು ಗಣನೆಗೇ ಬರುತ್ತಿರಲಿಲ್ಲ. ನಂತರ ಪಲ್ಟಿ ಹೊಡೆಯುವುದು, ಕಬ್ಬಿನ ಸಿಪ್ಪೆಯ ರಾಶಿಯನ್ನು ಸೀಳಿಕೊಂಡು ಒಳಕ್ಕೆ ಹೊಕ್ಕು ಮಲಗುವುದು ಎಲ್ಲ ನಡೆಯುತ್ತಿತ್ತು. ಸಿಪ್ಪೆಯ ರಾಶಿಯ ಒಳಗೆ ತೂರಿಕೊಂಡರೆ ಒಂದು ರೀತಿಯ ಮುಗ್ಗಿದ ವಾಸನೆ ಬರುತ್ತಿತ್ತು ಮತ್ತು ಒಳಗೆ ತುಂಬಾ ಬಿಸಿ ಬಿಸಿಯಾಗಿ ಇರುತ್ತಿತ್ತು. ಅದಕ್ಕೆಲ್ಲಾ ಅಲ್ಲಿ ನಡೆಯುವ ಜೈವಿಕ ಕ್ರಿಯೆ ಕಾರಣ ಎಂದು ಈಗ ಗೊತ್ತಾಗಿದೆ. ಆಡುತ್ತ ಆಡುತ್ತ ಕತ್ತಲಾದದ್ದೂ ನಮಗೆ ತಿಳಿಯುತ್ತಿರಲಿಲ್ಲ. ಅಷ್ಟರಲ್ಲಿ ದೊಡ್ಡರ‍್ಯಾದರೂ ಕೋಲಿನೊಂದಿಗೆ ಬಂದು ಮೊದಲು ಸಿಕ್ಕಿದವರಿಗೆ ಒಂದು ಪೆಟ್ಟು ಹಾಕುತ್ತಿದ್ದಂತೆ ಎಲ್ಲರಿಗೂ ಗೊತ್ತಾಗಿ ಅವರಿಗೆ ಸಿಗದಂತೆ ಓಡಿ ಮನೆ ಸೇರುತ್ತಿದ್ದೆವು. ಮನೆ ಸೇರಿದ ಮೇಲೆ ಮೈಯಲ್ಲಾ ಮುಟ್ಟಿ ನೋಡಿಕೊಂಡರೆ ಕಬ್ಬಿನ ರಸ ಮೈಗೆ ಅಂಟಿಕೊ೦ಡು ಅಂಟು ಅಂಟಾಗಿರುತ್ತಿತ್ತು. ಆದರೆ ಬರಿ ಕೈಕಾಲನ್ನಷ್ಟೇ ತೊಳೆದುಕೊಳ್ಳುತ್ತಿದ್ದ ನಾವು ಮಧ್ಯಾಹ್ನ ಸ್ನಾನ ಮಾಡಿದವರು ರಾತ್ರಿ ಸ್ನಾನ ಮಾಡುತ್ತಲೇ ಇರಲಿಲ್ಲ. ಆದರೆ ನೆಲದ ಮೇಲೆ ಒಂದು ಕಂಬಳಿ ಹಾಗೂ ಯಾವುದಾದರೂ ತೆಳ್ಳನೆಯ ಬಟ್ಟೆ (ಅಮ್ಮನ ಸೀರೆ ಇತ್ಯಾದಿ) ಹಾಕಿಕೊಂಡು ಮಲಗುತ್ತಿದ್ದ ನಮಗೆ ರಾತ್ರಿ ಇರುವೆ ಕಚ್ಚಿದಾಗ ಎಚ್ಚರವಾಗುತ್ತಿತ್ತು.’

ಇಲ್ಲಿನ ಅನುಭವವೆಲ್ಲ ಮಲೆನಾಡಿನ ಹಸಿರಿನ ನಡುವೆ, ಗುಡ್ಡಗಳ ನಡುವೆ ನಡೆಯುವುದರಿಂದ ಅದರದೇ ಆದ ಪ್ರತ್ಯೇಕತೆ ಉಂಟಾಗಿದೆ. ಹಳ್ಳಕ್ಕೆ ಮನೆಮನೆಯಿಂದ ಬಿದಿರು ಬಂಬುಗಳನ್ನು ತಂದು ಕಟ್ಟು ಕಟ್ಟುವ ಸಾಮೂಹಿಕ ಕ್ರಿಯೆ, ಕಾಲುವೆಯಿಂದ ನೀರು ಹರಿಸುತ್ತಿದ್ದುದು, ಜಮೀನುಗಳಿಗೆ ಅದರಿಂದ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದುದು ಹೀಗೆಲ್ಲಾ ಅನೇಕ ಕವಲು ಕವಲುಗಳಾಗಿ ಇಲ್ಲಿ ವಿವರಗಳು, ನಿರೂಪಣೆಗಳು ಸಾಗುತ್ತ ಹೋಗಿವೆ. ಬೇಸರಬರದ ಹಾಗೆ ಓದುತ್ತ ಕೂರುವ ಚೆಂದ ತಮ್ಮಣ್ಣ ಅವರ ಬರವಣ ಗೆಯಲ್ಲಿದೆ. ಅವರು ಮಕ್ಕಳನ್ನು ಬಲು ನಿರ್ದಿಷ್ಟವಾಗಿ ಮುಂದಿರಿಸಿಕೊ೦ಡು ಬರೆಯುತ್ತ ಹೋಗುವುದರಿಂದ ಸಾಕಷ್ಟು ಕಾಳಜಿ ತೋರುತ್ತಾರೆ.

ಜೊತೆಗೇ ನಿರೂಪಣೆಯೊಂದಿಗೆ ಸಾಗುವ ಗುಂಗು ಅವರನ್ನ ಆವರಿಸುವುದನ್ನ ನೋಡುತ್ತಲೇ ಇರುತ್ತೇವೆ. ಅದು ಬರವಣ ಗೆಗೆ ಒಂದು ಚೆಂದದ ಹರಿವನ್ನು ನೀಡುತ್ತಿರುತ್ತದೆ. ಜೊತೆಗೇ ಆಗೆಲ್ಲ ನಡೆಯುತ್ತಿದ್ದ ತೊಂದರೆದಾಯಕ ಅನೇಕ ಸಂಗತಿಗಳನ್ನು, ಮನುಷ್ಯರ ಸ್ವಾಭಾವಿಕ ತೆವಲುಗಳನ್ನು ಎಲ್ಲವನ್ನೂ ಸಾಧ್ಯವಾದಷ್ಟೂ ತಂದುಕೊಳ್ಳುತ್ತಲೇ ಹೋಗಿದ್ದಾರೆ. ಅದರೊಟ್ಟಿಗೆ ಇಂದಿನ ಬದಲಾದ ಪರಿಸರಕ್ಕೂ ಆ ಹಿಂದಿನ ದಿನಕ್ಕೂ ಹೋಲಿಸುತ್ತ ಹೋಗುವುದು ಕೂಡ ನಡೆಯುತ್ತದೆ. ‘ಆಗ ನೀರಿನ ಶುದ್ಧತೆ ಕುರಿತು ತಿಳುವಳಿಕೆ ಇಲ್ಲದವರು ಮಾಡಿದ ಕೆಲಸ. ಈಗ ನಮ್ಮೂರಲ್ಲಿ ಬಾವಿ, ಪಂಪು ನಲ್ಲಿಗಳೆಲ್ಲ ಆಗಿದ್ದು ಅಂತಹ ತೊಂದರೆಗಳಿಲ್ಲ. ಆದರೆ ನೀರು ಹಾಳಾಗಲು ಈಗ ಎಲ್ಲಕಡೆಗಳಲ್ಲಿ ತಿಳಿದವರೇ ಮಾಡುವ ಬೇರೆ ಬೇರೆ ಕಾರಣಗಳಿವೆ..’ ಅನ್ನುವಂಥ ಕಟಕಿ ಮಾತುಗಳೂ ಸೇರಿಕೊಂಡಿರುವುದು ಸ್ವಾರಸ್ಯವನ್ನು ಹೆಚ್ಚಿಸಿದೆ.

ಸೈರೋಬ ಕೂದಲು ಕತ್ತರಿಸಲು ಬಂದಾಗಿನ ವಿವರಗಳು ಬಲು ಸೆಳೆದವು. ‘ನಾನೇ ಮೊದಲು ಅಂಗಿ ತೆಗೆದಿಟ್ಟು ತಲೆಯ ಮುಂದಿನ ಕೂದಲನ್ನು ಜಗ್ಗುತ್ತ ಇಷ್ಟು ಉದ್ದವಿದೆ, ಅದನ್ನು ಬಹಳ ಸಣ್ಣದಾಗಿಸ ಬಾರದು ಎಂಬ ಸೂಚನೆ ನೀಡುತ್ತ ಹೋಗಿ ಕುಳಿತೆ. ಆಗಲೇ ಸೈರೋಬ ಒಂದು ಬೀಡಿ ಹಚ್ಚಿ ಬಾಯಿಯ ಒಂದು ಬದಿಯಲ್ಲಿ ಇಟ್ಟು ಕೊಂಡು ಅದನ್ನು ಕೈಯಿಂದ ಮುಟ್ಟದೆ ಹಾಗೆಯೇ ಉಸಿರನ್ನು ಜಗ್ಗಿ ಜಗ್ಗಿ ಹೊಗೆ ಕುಡಿದು ಬಾಯಿಯ ಇನ್ನೊಂದು ಬದಿಯಿಂದ ಹೊಗೆಯನ್ನು ಬುಸ್ ಎಂದು ಬಿಡುತ್ತ ಕಣ್ಣಂಚಿನಲ್ಲಿಯೇ ನನ್ನನ್ನು ಹತ್ತಿರ ಕರೆದು ಕೂಡ್ರಿಸಿಕೊಂಡ. ತಲೆಯನ್ನು ಎರಡೂ ಕೈಗಳಿಂದ ಒತ್ತಿ ಕೂದಲೊಳಗೆ ಬೆರಳನ್ನು ತೂರಿ ಮೇಲೆತ್ತಿ ಕೂದಲು ಬಹಳ ದೊಡ್ಡದಾಗಿದೆ… ಎನ್ನುವಂತೆ ಅಪ್ಪಯ್ಯನಿಗೆ ಸನ್ನೆ ಮಾಡಿದ.

ಈಗ ಬಾಯಿಂದ ಬೀಡಿ ತೆಗೆದು ಅದರ ತುದಿಯನ್ನು ನಿಧಾನವಾಗಿ ನೆಲಕ್ಕೆ ಒತ್ತಿ ಬೆಂಕಿ ಆರಿಸಿದ. ಬೆಂಕಿ ಆರಿದ ಬೀಡಿ ಮೋಟನ್ನ (ತುಣುಕನ್ನು) ಆಮೇಲೆ ಮತ್ತೆ ಸೇದುವುದಕ್ಕಾಗಿ ತನ್ನ ಕಿವಿಯ ಸಂದಿನಲ್ಲಿ ತೂರಿಕೊಂಡ. ಈಗ ನನ್ನ ತಲೆಯ ಕೂದಲನ್ನು ಕತ್ತರಿಸಲು ಪ್ರಾರಂಭಿಸಿದ. ಅವನ ಕತ್ತರಿ ಸಾಣೆ ಹಿಡಿಯದೇ ಹರಿತ ಕಡಿಮೆ ಆದದ್ದರಿಂದ ಕೂದಲ್ಲು ಕತ್ತರಿಸುವಾಗ ಕೂದಲು ಜಾರಿದಂತಾಗಿ ಜಗ್ಗಲ್ಪಡುತ್ತಿತ್ತು. ಇದರಿಂದ ಕೂದಲನ್ನು ಕತ್ತರಿಸುವಾಗ ನೋವಾಗುತ್ತಿತ್ತು. ಆಗ ಒಂದಿಷ್ಟು ಅಲ್ಲಾಡಿದರೆ… ಸಿಟ್ಟು ಮಾಡುತ್ತ ಸುಮ್ಮನೇ ಕೂತಿರಬೇಕು ಎಂದು ಹೇಳುತ್ತಿದ್ದ. ಸೈರೋಬ ಎಲ್ಲೆಲ್ಲಿ ಕೂದಲನ್ನು ಕತ್ತರಿಸುತ್ತಾನೋ ಅದು ಅವನಿಗೆ ಸರಾಗವಾಗಿ ಕತ್ತರಿಸಲು ಸಾಧ್ಯ ಆಗುವಂತೆ ನಾವೇ ಅವನು ಹೇಳಿದಂತೆ ತಿರುಗುವುದಾಗಿತ್ತು. ಒಂದು ಸಾರಿ ತಲೆ ಎತ್ತುತ್ತಿದ್ದ. ಇನ್ನೊಂದು ಸಾರಿ ತಲೆ ಕೆಳಕ್ಕೆ ಒತ್ತಿ ಹಾಗೇ ಕೂಡ್ರಿಸುತ್ತಿದ್ದ. ಆಗೆಲ್ಲ ಶಾಲೆಯಲ್ಲಿ ಪಾಠ ಓದದ ನಮ್ಮ ಗೆಳೆಯರನ್ನು ಬಗ್ಗಿನಿಲ್ಲಿಸಿ ನಮ್ಮ ಗುರುಗಳು ನೀಡುತ್ತದ್ದ ಶಿಕ್ಷೆಯ ನೆನಪಾಗುತ್ತಿತ್ತು. ಆದರೆ ಶಾಲೆಯಲ್ಲಿ ಹಾಗೆ ನಿಂತಿರುವವರು ಒಬ್ಬರಿಗಿಂತ ಹೆಚ್ಚು ಜನರಿರುತ್ತಾರೆ ಹಾಗೂ ಅಲ್ಲೇ ಅವರು ಒಬ್ಬರೊಂದಿಗೊಬ್ಬರು ಮಾತಾಡಿ ಮಜಾ ಮಾಡಿ ಖುಷಿಪಡಬುದಾಗಿತ್ತು. ಆದರೆ ಇಲ್ಲಿ ಹಾಗಲ್ಲ. ಒಂದಿಷ್ಟು ಅಲುಗಾಡಲೂ ಆಗದು. ಸೈರೋಬನಿಗೆ ಅಪ್ಪಯ್ಯ ತನ್ನ ಕಣ್ಣು ಹುಬ್ಬಿನಲ್ಲಿಯೇ ಕೂದಲು ಸಣ್ಣ ಮಾಡುವುದನ್ನು ಮುಂದುವರಿಸು ಎಂದು ಸನ್ನೆ ಮಾಡಿದುದನ್ನು ನಾನು ಓರೆಗಣ್ಣಂಚಿನಲ್ಲಿಯೇ ನೋಡಿದೆ. ಇದರಿಂದ ನನ್ನ ತಲೆ ಈಸಾರಿ ಬೋಳಾಗುವುದು ಗ್ಯಾರಂಟಿ ಎಂದು ನನಗೆ ಅನಿಸಿತು. ಕುತ್ತಿಗೆಯೂ ನೋಯಲು ಪ್ರಾರಂಭವಾಗಿತ್ತು. ಪಾಪ ಸೈರೋಬನ ಕೈ ನಡುಗುತ್ತಿತ್ತು. ನಾನು ಒಂದಿಷ್ಟು ತಲೆ ಅಲ್ಲಾಡಿಸಿದೆ. ಸರಿಯಾಗಿ ನಿಲ್ಲು ಎನ್ನುತ್ತ ಸೈರೋಬ ತಲೆಯನ್ನು ಗಟ್ಟಿಯಾಗಿ ಒತ್ತಿ ಕತ್ತರಿ ತೂರಿ ಕಿವಿಹತ್ತಿರದ ಕೂದಲನ್ನು ಕತ್ತರಿಸ ತೊಡಗಿದ. ಒಮ್ಮೆಗೇ ಚುರಕ್ ಅಂದ೦ತಾಗಿ ತಲೆಯನ್ನು ಜಗ್ಗಿಕೊಂಡೆ. ಕಿವಿ ಉರಿಯುತ್ತಿತ್ತು. ಕಿವಿಯನ್ನು ಮುಟ್ಟಿದೆ. ಕೈಗೆ ನೀರು ತಾಗಿದಂತಾಗಿ ಕೈ ಕೆಳಗಿಳಿಸಿ ಬೆರಳ ತುದಿಯನ್ನು ನೋಡಿದರೆ ರಕ್ತ ಅಂಟಿ ಬೆರಳು ಒದ್ದೆಯಾಗಿತ್ತು.’ ಹೀಗೆ ಸಾಗುವ ಸಹಜ, ಆದರೆ ವಿವರಗಳಿಂದ ಕೂಡಿದ ನಿರೂಪಣೆ ಅಂದಿನ ದಿನಗಳ ನೆನಪನ್ನ ತರುವುದರೊಂದಿಗೆ, ಮಾನವೀಯ ಸಂಬ೦ಧಗಳನ್ನು, ಬಾಲ್ಯದ ಬಗೆಬಗೆಯ ಸಂವೇದನೆಗಳನ್ನು ಒಂದಿಗೇ ಸವರಿಕೊಂಡು ಜೀವಂತಿಕೆ ತಂದುಕೊಟ್ಟಿವೆ.

ಊರಿಗೆ ‘ನಾಟಾ ಗಾಡಿ ಬಂತು’ ಎಂದು ರೋಚಕವಾಗಿಸಿಯೇ ತೊಡಗಿಕೊಳ್ಳುವ ಅಧ್ಯಾಯ ಕಟ್ಟಿಕೊಡುವ ವಿದ್ಯಮಾನ ಅಂದಿನ ಸಾಮಾಜಿಕ ಪರಿಸರ ಕಂಡುಕೊಳ್ಳುತ್ತಿದ್ದ ಬದಲಾವಣೆಗಳು, ಅವುಗಳಿಂದ ಉಂಟಾಗುವ ಪರಿಣಾಮಗಳು ಎಲ್ಲವಕ್ಕೆ ಕಿಟಕಿಯಾಗುವಂತೆ ತೆರೆದುಕೊಳ್ಳುವುದು ಈ ಪ್ರಬಂಧದ ಇನ್ನೊಂದೇ ಆದ ಮಗ್ಗಲನ್ನು ಹೇಳಿದಂತಿದೆ. ‘ಹೌದು ಆದಿನ ಲಾರಿ ಬಂತು. ಲಾರಿಯ ಹಿಂಬದಿಯಲ್ಲಿ ಹತ್ತು ಹದಿನೈದುಜನ ನಿಂತುಕೊ೦ಡಿದ್ದರು. ಫೋಂ ಫೋಂ ಎಂದು ಧ್ವನಿಮಾಡಿದ್ದು ಒಂದು ಕಿಲೋಮೀಟರ ಅಷ್ಟು ದೋರದಲ್ಲಿ ಇರುವಾಗಲೇ ಮಕ್ಕಳಿಗೆ ಕೇಳಿದ್ದಲ್ಲದೆ ಘಂ ಎಂದು ಪೆಟ್ರೋಲ ವಾಸನೆಯೂ ಬಂತು. ಈಗ ಮನೆಯ ಬುಡದಲ್ಲಿಯೇ ವಾಹನಗಳು ಓಡಾಡುತ್ತಿದ್ದರೂ ಪೆಟ್ರೋಲ ವಾಸನೆ ನಮಗೆ ತಿಳಿಯದು. ಅಂದರೆ ಆ ವಾಸನೆಗಳಿಗೆಲ್ಲ ನಮ್ಮ ಮೂಗು ವಗ್ಗಿ ಹೋಗಿದೆ ಅನಿಸುತ್ತದೆ. ಲಾರಿಗೆ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ತುಂಬುವಾಗ ಅವರು ಹೊಹೊ ಐಸಾ, ಹೊಹೊ ಐಸಾ ಒಂದುರೀತಿ ಲಯಬದ್ಧವಾಗಿ ಹಾಡು ಹೇಳಿದಂತೆ ಹೇಳುತ್ತ ಕಟ್ಟಿಗೆ ಮೇಲಕ್ಕೆ ಏರಿಸುತ್ತಿದ್ದುದೆಲ್ಲ ಪುಟ್ಟನಿಗೆ ಈಗಲೂ ನೆನಪಾಗುತ್ತದೆ’ ಮರಗಳನ್ನು ಕಡಿಯತೊಡಗಿದುದು, ಅವನ್ನ ಪೇರಿಸಿ ಪೇರಿಸಿ ಇಡುತ್ತಿದ್ದುದು, ಯಾವುದೋ ದೂರದ, ಭಾಷೆ ಗೊತ್ತಾಗದ ಜನ ಬಂದು ಇದನ್ನೆಲ್ಲ ಮಾಡುತ್ತಿದ್ದುದು, ಅವರ ಲಾರಿಗೋಸ್ಕರವಾಗಿಯೇ ದಾರಿ ಸಿದ್ಧವಾದುದು ಎಲ್ಲ ಇಲ್ಲಿ ಬಾಲ್ಯದ ಕಣ್ಣಂಚಿನ ಬೆರಗಿನಲ್ಲಿ ಕಾಣ ಸಿಕೊಂಡಿದೆ.

‘ದಿನಾಲು ನಮ್ಮ ಮನೆಯ ಅಂಗಳದಲ್ಲಿ ಕಪ್ಪು ಮೈಮೇಲೆ ಎರಡೂ ಕಡೆ ಬಿಳಿ ರೆಕ್ಕೆ ಇರುವ ಹಕ್ಕಿಯೊಂದು ಬೆಳಗಾಗುತ್ತಲೇ ಕಾಣ ಸುತ್ತಿತ್ತು. ಅದರ ದೇಹಕ್ಕೆ ಉದ್ದವೇ ಎನ್ನುವಂತಹ ಬಾಲವಿತ್ತು. ಮನೆಯ ಸುತ್ತೆಲ್ಲ ಓಡಾಡುತ್ತ… ಏನೋ ಹುಡುಕಿ ತಿನ್ನುತ್ತಿತ್ತು. ಅದು ಓಡಾಡುವುದನ್ನು ನೋಡುವುದೇ ಒಂದು ಮಜ. ಅದರ ಬಾಲ ಯಾವಾಗಲೂ ಮೇಲಕ್ಕೂ ಕೆಳಕ್ಕೂ ನಿರಂತರವಾಗಿ ಕುಣ ಯುತ್ತಲೇ ಇರುತ್ತಿತ್ತು. “ಅದು ಬಾಲ ಕುಣ ಸುವ ಹಕ್ಕಿ, ಮುಂಜಾನೆಯೇ ಬಂದು ಮನೆ ಸುತ್ತಲೂ ಸ್ವಚ್ಛತಾ ಕೆಲಸ ಮಾಡಿ ಹೋಗುತ್ತದೆ” ಎಂದು ಅಬ್ಬೆ ಹೇಳುತ್ತಿದ್ದಳು’ ಎಂದು ತೆರೆದುಕೊಳ್ಳುವ ಮಲೆನಾಡ ಹುಡುಗನ ಹಕ್ಕಿ ಲೋಕ ಮತ್ತೊಂದು ಬಣ್ಣವನ್ನ ಈ ಸಂಕಲನಕ್ಕೆ ನೀಡಿದೆ.

ಮದುವೆ ಮನೆಯ ವಾತಾವರಣ ಊಟ ತಿಂಡಿಗಳ ಸುತ್ತಲೇ ಹೆಚ್ಚು ಹರವಿಕೊಳ್ಳುತ್ತ ಸ್ವಾರಸ್ಯವಾಗಿ ಕಾಣ ಸಿಕೊಂಡಿರುವುದು ಇನ್ನೊಂದಿಷ್ಟು ಪುಟಗಳಲ್ಲಿದೆ. ‘ಕುಚ್ಚನ ನೆನಪು ಈಗಲೂ ಖುಷಿಯ ಜೊತೆಗೆ ಅದರ ಸಾವಿನ ನೋವನ್ನು ತರುತ್ತದೆ.’ ಎನ್ನುತ್ತ ಕುಚ್ಚ ಎನ್ನುವ ನಾಯಿ ಹೇಗೆಲ್ಲ ಅವರೊಳಗೊಂದಾಗಿಹೋಗಿತ್ತು ಎನ್ನುವುದನ್ನ ಹಚ್ಚಿಕೊಂಡೇ ಬರೆದಂತೆ ಆಗಿದೆ. ಜೊತೆಗೇ ಅಜ್ಜೀಮನೆಯ ಒಡನಾಟದ ದಿನಗಳ ನೆನಪುಗಳೂ ದಟ್ಟವಾಗಿವೆ.
ಇಲ್ಲಿನ ಪ್ರಬಂಧಗಳು ಅಂದಿನಬಗೆಬಗೆಯ ನೆನಪುಗಳನ್ನ ಹಂಚಿಕೊಳ್ಳುವುದರೊ೦ದಿಗೆ, ಮನುಷ್ಯ ಬದುಕಿನ ನಾನಾ ಮಗ್ಗಲುಗಳನ್ನು ಇಡುತ್ತ ಹೋಗುತ್ತವೆ. ಸುತ್ತಲಿನ ಪರಿಸರ, ಪ್ರಾಣ ಜಗತ್ತು ಎಲ್ಲ ಎಲ್ಲ ಇಲ್ಲಿ ಭಾಗವಹಿಸುತ್ತ ಕಳೆದು ಮರೆಗೆ ಸರಿದ ಒಂದು ಒಟ್ಟಂದದ ಸಂವೇದನಾಲೋಕ ಇಲ್ಲಿ ಪುಟಪುಟಗಳಲ್ಲಿ ಅಂಟಿಕೊ೦ಡಹಾಗೆ ಆಗಿದೆ. ಇದು ಮಕ್ಕಳ ಎದುರಿಗೇ ವಿಶೇಷವಾಗಿ ಉದ್ದೇಶಪಟ್ಟು ಉಚ್ಚಿಕೊಳ್ಳುವುದರಿಂದ ಬಾಲ್ಯದ ಅಪರೂಪದ ಮನೋಲೋಕ ಇಲ್ಲಿ ನಿಡಿದಾಗಿ ಹಬ್ಬಿಕೊಂಡಿದೆ. ಮಕ್ಕಳಿಗೆ ನಿಜಕ್ಕೂ ಸೊಗಸಿನ, ಆರಾಮವಾಗಿ ಕುಳಿತು, ರಜೆಯ ದಿನಗಳನ್ನ ಸಂಪದ್ಭರಿತವಾಗಿಸುವ ಹೊತ್ತಿಗೆ ಇಲ್ಲಿ ಸಿದ್ಧವಾಗಿದೆ. ತಮ್ಮಣ್ಣ ಬೀಗಾರ ಮಲೆನಾಡನ್ನ ಮಕ್ಕಳ ಸಾಹಿತ್ಯದ ಪುಟಪುಟಗಳಲ್ಲಿ ತುಂಬಿಸುತ್ತಿರುವುದು ತನ್ನದೇ ಆದ ಬಗೆಯಲ್ಲಿ, ಅದು ಇಲ್ಲಿ ಮತ್ತಷ್ಟು ಮತ್ತಷ್ಟು ಕಾಣ ಸಿಕೊಂಡಿದೆ. ಕನ್ನಡ ಮಕ್ಕಳ ಸಾಹಿತ್ಯಕ್ಕೆ ಇದು ಇನ್ನಷ್ಟು ಮೆರುಗು.

‍ಲೇಖಕರು Admin

October 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: