ಆತ.. ಲೈನ್‌ಮನ್ ಮಡಿವಾಳರ ಭೀಮಪ್ಪ

ಹಸಿರು ಬಟ್ಟೆಯ ಪಡೆಯಲ್ಲಿ ಬರೆದ
ಲೈನ್‌ಮನ್ ಮಡಿವಾಳರ ಭೀಮಪ್ಪನಿಗೆ -ಎಂಬ ಕವಿತೆಯ ಸುತ್ತ

ಸತೀಶ ಕುಲಕರ್ಣಿ

ಮೇ ೧, ವಿಶ್ವಕಾರ್ಮಿಕರ ದಿನಾಚರಣೆ.

ಜಗತ್ತಿನಾದ್ಯಂತ ದುಡಿಯುವ ಕೈಗಳ ವಿರಾಟ ದರ್ಶನದ ದಿನವಿದು.

ಆದರೆ ಇದೇ ಮೊದಲ ಸಲ ದುಡಿಯುವ ಕೈಗಳು ನಿತ್ರಾಣಗೊಂಡು ದಿಕ್ಕು ತೋಚದೆ ಸೋತಂತಿವೆ. ಈ ಬಾರಿಯ ಕಾರ್ಮಿಕ ದಿನಾಚರಣೆ ಮೌನಕಾಲದ ಆಚರಣೆಯಾಗಿ ಪರಿವರ್ತನೆಯಾಗಿದೆ. ಇದಕ್ಕೆ ಕಾರಣ ಕೋರೋನಾ ಎಂದು ಹೇಳಬೇಕಾಗಿಲ್ಲ.

ಜಾಗತೀಕರಣದ ಬಿರುಗಾಳಿಗೆ ತತ್ತರಿಸಿದ್ದ ಕಾರ್ಮಿಕ ವರ್ಗ ಈಗ ಕೊರೋನಾ ಹೊಡೆತಕ್ಕೆ ನಡುಗಿದೆ. ಪಟ್ಟಣ, ನಗರ, ಮಹಾನಗರ, ರಾಜಧಾನಿಗಳು ರಾತ್ರೋರಾತ್ರಿ ದುಡಿಯುವ ದಣಿಗಳನ್ನು ಹೊರಗೆ ಅಟ್ಟಿವೆ. ಸ್ತಬ್ಧಚಿತ್ರವಾಗಿರುವ ದೇಶ ಕಾಲದಲ್ಲಿ, ದುಡಿಯುವವರ ಸಂಕೇತವಾದ ಕಾರ್ಮಿಕ ದಿನಾಚರಣೆಗೆ ಉತ್ಸಾಹ ತುಂಬ ಬೇಕಾಗಿದೆ.

ಹಾಲು, ತರಕಾರಿ, ಪೇಪರು, ಸಲೂನು, ದೂಡುಗಾಡಿ ವ್ಯಾಪಾರಿಗಳು, ಹಮಾಲರು, ಹೂ ಮಾರುವವವರು, ಪೌರಕಾರ್ಮಿಕರು, ಚಪ್ಪಲಿ ಕಾಯಕದವರ ಕೈಚಳಕದಿಂದಲೇ ನಮ್ಮೆಲ್ಲರ ಬೆಳಗು ಅರಳುವುದನ್ನು ಮರೆಯಲಾಗುವುದಿಲ್ಲ. ಇಂಥ ದುಡಿಮೆಗಾರರ ಗುಂಪಿಗೆ ಕೆ.ಇ.ಬಿ ಎಂಬ ಇಲಾಖೆ, ಅದರಲ್ಲಯೂ ಅದರ ಜೀವಾಳವಾದ ಲೈನ್‌ಮನ್ನರೆಂಬ ಶ್ರಮಿಕರು.

ಒಂದು ಕ್ಷಣ ಕರೆಂಟು ಹೋದರೆ ಸಾಕು ಕಂಬಹತ್ತಿ ರಿಪೇರಿ ಮಾಡುವ ಧೈರ್ಯ ಲೈನ್‌ಮನ್ನರ ಹೊರತಾಗಿ ಯಾರಿಗೂ ಬರುವುದಿಲ್ಲ. ಒಬ್ಬ ಲೈನ್‌ಮನ್ನ ಮಾತ್ರ ಜೀವದ ಹಂಗು ತೊರೆದು ಬೆಳಕು ಕೊಡಬಲ್ಲ. ಅನೇಕ ಬಾರಿ ಜೀವ ಕಳೆದು ಕೊಂಡದ್ದು ಇದೆ.

ಇಂತವರ ಸ್ಮರಣೆಗಾಗಿ ಹಾವೇರಿ ಹೆಸ್ಕಾಂ ಕಛೇರಿಯ ಆವರಣದಲ್ಲಿ ಕಾರ್ಮಿಕ ಸ್ಮಾರಕವಿದೆ.

೨೦೦೧ ರಲ್ಲಿ ಪ್ರತಿ ಕೆ.ಇ.ಬಿ ನೌಕರನು ದೇಣಿಗೆ ಕೊಟ್ಟು ಕಟ್ಟಿಸಿದ ಕುರುಹು ಇದು. ಮುಗಿಯುವ ಕೈಗಳಿಗಿಂತ, ದುಡಿಯುವ ಕೈಗಳೇ ಮೇಲು ಎಂಬ– ಮಾತಿದೆ. ಆದರೆ ಈ ಬಾರಿ ದುಡಿಯುವ ಕೈಗಳ ಪ್ರಾಮುಖ್ಯ ಸ್ವರೂಪ ಕೂಡ ಬದಲಾಗಿದೆ. ಪೊಲೀಸರು, ವೈದ್ಯರು, ನರ್ಸ್, ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ನಾವೆಲ್ಲ ಸ್ಮರಿಸಿಕೊಂಡರೆ ಕಾರ್ಮಿಕರ ದಿನದ ತೂಕ ಹೆಚ್ಚಾಗುವುದು.

ಇಂತಹ ಕೆ.ಇ.ಬಿ ಯಲ್ಲಿ ಮೂರು ದಶಕಗಳ ಕಾಲಕ್ಕೂ ಹೆಚ್ಚು ಸೇವೆ ಸಲ್ಲಿಸಿದವನು ನಾನು. ಎಂ. ಎಸ್.ಇ.ಬಿ / ಕೆ.ಎಸ್.ಇ.ಬಿ. / ಕೆ.ಇ.ಬಿ. / ಕೆ.ಪಿ.ಟಿ.ಸಿ.ಎಲ್ / ಹೆಸ್ಕಾಂ ಹೀಗೆ ಹಲವು ಹೆಸರುಗಳಲ್ಲಿ ಮರು ಮರು ನಾಮಕರಣಗೊಂಡ ಇಲಾಖೆಯಿದು. ಹೆಸರುಗಳೆನೇ ಬದಲಾದರೂ ನನಗಂತೂ ಕೆ.ಇ.ಬಿ ಹೆಸರೆ ಇಷ್ಟ. ನಾನು ಸತತ ನಾಲ್ಕು ಅವಧಿಗೆ ಯುನಿಯನ್ ಅಧ್ಯಕ್ಷನಾದವನು. ಕರ್ತವ್ಯದ ನಾತೆಯಲ್ಲಿ ಅಕೌಂಟ್ಸ್ ಸೆಕ್ಷನ್ನಿನಲ್ಲಿ ನಿರ್ವಹಿಸಿದವನು.

ತಂತಿ ಕಂಬ ಟ್ರಾನ್ಸ್ಫಾರ್ಮರ್, ಪಾನಾ ಪಕ್ಕಡ, ಲೈಟ ಬಿಲ್ಲು, ಸ್ಟ್ರೀಟ್ ಲೈಟ್ (ಯಾವುದೇ ಊರಲ್ಲಿ ದಂಗೆ ಆರಂಭವಾದರೆ ಮೊದಲ ಕಲ್ಲು ರಸ್ತೆ ದೀಪಕ್ಕೆ, ಎರಡನೆಯದು ಕೆಂಪು ಬಸ್ಸಿಗೆ!) ಲೈನ್‌ಮನ್ನರೇ ನಮ್ಮ ಕೆ.ಇ.ಬಿ ಯ ಜೀವಧಾರೆಗಳು. ನಾನು ಹತ್ತಾರು ಕವಿತೆಗಳನ್ನು ಮತ್ತು ಐದಾರು ನಾಟಕಗಳನ್ನು ನಮ್ಮ ಕೆ.ಇ.ಬಿ ಕುರಿತೇ ಬರೆದಿದ್ದೇನೆ.

ಈ ಪೈಕಿ ಲೈನ್‌ಮನ್ನ ಮಡಿವಾಳರ ಭೀಮಪ್ಪನಿಗೆ ಎಂಬ ಕವಿತೆ ಕೂಡ.

ನಮ್ಮ ಜೊತೆಗೆ ಹಾವೇರಿಯ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಭೀಮಪ್ಪ ಮಡಿವಾಳರ ಒಬ್ಬ ಸಾಮಾನ್ಯ ಲೈನ್‌ಮನ್ನ. ಮಾತುಗಾರ ಓದಲು, ಬರೆಯಲು ಬಾರದ ಅನಕ್ಷರಸ್ಥ. ಮಾತೇ ಈತನ ಬಂಡವಾಳ. ಭಾರತಕ್ಕೆ ಸ್ವಾತಂತ್ರೆತ್ರ್ಯ ಸಿಕ್ಕು ೫೦ ವರ್ಷಗಳಾದ ಸಂದರ್ಭದಲ್ಲಿ ‘ಗಾಂಧೀ ಹಚ್ಚಿದ ಗಿಡ’ ಎಂಬ ನಾಟಕ ಬರೆದು ಅನೇಕ ಕಡೆ ಪ್ರದರ್ಶನವಾಗಿತ್ತು. ಇದರಲ್ಲಿ ನಿತ್ಯ ಸುಳ್ಳು ಹೇಳುವ ಭೀಮಪ್ಪನದೇ ಗಾಂಧೀ ಪಾತ್ರ. ಇಲಾಖೆಯ ಒಳಗೆ ಮತ್ತು ಹೊರಗೆ ಕೆ.ಇ.ಬಿ ಗಾಂಧೀ ಎಂದೇ ಪ್ರಸಿದ್ಧ. ಒಮ್ಮೆ ಛೇರಮನ್ನರಾದ ಮೀನಾ ಬಂದಾಗ ‘ಓ ಗಾಂಧೀ ಕೋ ಬುಲಾವ್’ ಎಂದು ಕರೆದು ಮಾತನಾಡಿಸಿದ್ದರು.

ಒಂದು ದಿನ ಭೀಮಪ್ಪ ಕೆಲಸದಲ್ಲಿದ್ದಾಲೇ ಅಪಘಾತಕ್ಕೆ ಈಡಾದ. ಹಾದಿಯಲ್ಲಿ ಜಿಬ್ಬಿ ಜಿಬ್ಬಿಯಾದ ಅವನ ಹೆಣ ಬಿದ್ದಿತ್ತು. ಅಂದು ಅವನ ಮೇಲೆ ಬರೆದ ಕವಿತೆಯೇ ಲೈನ್‌ಮನ್ ಮಡಿವಾಳರ ಭೀಮಪ್ಪನಿಗೆ.

ಇದು ಮಂಗಳೂರು, ಗುಲಬುರ್ಗಾ ಹಾಗೂ ಕೆಲವು ಸ್ವಾಯುತ್ತ ವಿವಿಗಳಲ್ಲಿ ಪಠ್ಯವಾಗಿಯೂ ಬಂತು. ಕವಿ ಎಚ್. ಎಸ್. ಶಿವಪ್ರಕಾಶ ಇದನ್ನು ಇಂಗ್ಲೀಷಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಹೊರತರುವ ಇಂಡಿಯನ್ ಲಿಟರೇಚರ್ ಪತ್ರಿಕೆಗೆ ಅನುವಾದ ಕೂಡ ( ಸೆಪ್ಟಂಬರ್ – ಅಕ್ಟೋಬರ್ ೨೦೦೭, ಸಂಚಿಕೆ ) ಮಾಡಿದ್ದಾರೆ.

ಈಚಿನ ಕೆಲವು ಕವಿತೆಗಳೊಂದಿಗೆ ಮುಖಾಮುಖಿ ಹೆಸರಿನಡಿ ಪದ್ಯದ ಮಾತು ಬೇರೆ. ದೇಶಕಾಲ ಪ್ರಕಾಶನ ಪ್ರಕಟಿಸಿದ ಪುಸ್ತಕದಲ್ಲಿ ( ಸಂ ಅಕ್ಷರ ಕೆ.ವಿ. ) ಡಾ. ಸರಜೂ ಕಾಟ್ಕರ್ ಕವಿತೆ ಬಗ್ಗೆ ಬರೆಯುತ್ತ ಜಾಗತೀಕರಣದ ಪರಿಣಾಮಗಳನ್ನು ಒಬ್ಬ ಸಾಮಾನ್ಯ ದುಡಿಮೆಗಾರ ಭೀಮಪ್ಪನ ಮೂಲಕ ಹಲವು ಮಜಲುಗಳಲ್ಲಿ ಕಟ್ಟಿಕೊಂಡ ಕವಿತೆ ಎಂದಿದ್ದಾರೆ. ಮೂಲ ಕವಿತೆ ಹೀಗಿದೆ –

ಲೈನಮನ್ ಮಡಿವಾಳರ ಭೀಮಪ್ಪನಿಗೆ

ಹಾದಿ ಹೆಣವಾದ
ಬೀದಿ ದೀಪಗಳ ದೊರೆಯೆ
ಬೆಳಕು ಕೊಟ್ಟು ಕತ್ತಲೆಯ ನೀ ಸೇರಿದೆಯೆ ?

ಮೆರವಣಿಗೆಗಳ
ಹುಂಬ ಹಿಂಬಾಲಕನೆ, ಕೂಗುಗಳ
ಕೊನೆಯ ದನಿಯೆ,
ಕಳೆದು ಹೋದೆ, ಇದು ಹೀಗೆ ಸರಿಯೆ ?

ಆಸೆಗಳ
ಹೊತ್ತದ ಕುರುಡು ಕುಡಿಕೆಯೆ
ನಿರಾಸೆಗಳ ಕೊಳಕು ಗಟಾರು ನೀರೆ
ರಂಗ ಬಿಟ್ಟು ಹೋದ ರೀತಿ ಇದು ಸರಿಯೆ ?

ಕಾಲು ನಿಲುಕದ ಮುರುಕು
ಸೈಕಲ್ಲು ಸರಸದಾರನೆ
ಊರೂರು ತಿರುಗಿದ ನನ್ನ
ಬೀದಿ ನಾಟಕದ ನಕಲಿ ಗಾಂಧಿಯೆ

ಕೊಳಕು ಬಟ್ಟೆ ತೊಟ್ಟು
ಮಡಿ ಬಟ್ಟೆ ಕೊಟ್ಟು
ಮಾತುಗಾರ ಮಡಿವಾಳನೆ,

ಶ್ರೀಮಂತ ನಗೆ ನಕ್ಕ
ಬಡ ಬಾದಶಹನೆ, ಈಗೆಲ್ಲಿ ನಿನ್ನ ಸಾಮ್ರಾಜ್ಯ
ಹೇಳು ನನ್ನ ದೊರೆಯೆ.

ಸಡಿಲ ಬೂಟಗಾಲ
ಮಾಟಯೋಧನೆ,
ಶಸ್ತ್ರವಿಲ್ಲದ ಅಶಕ್ತ ಸೈನಿಕನೆ

ಸಾಹೇಬರ ಸಲಾಮು ಸಿಪಾಯಿಯೆ
ಸಾಹುಕಾರರ ಬಡ ಗುಲಾಮನೆ
ಮನೆ ಮನೆಗೆ ಮುಜುರೆ ಕೊಟ್ಟೆ
ನಿನ್ನ ಮನೆಯ, ನೀ ಮರೆತು ಬಿಟ್ಟೆ
ಏ ಹುಚ್ಚ ಹಿರಿಯನೆ !


ತಗ್ಗು ಗುಂಡಿಗಳ ತೋಡಿ
ದೀಪ ಕೊನರುವ
ಕಂಬ ನೆಟ್ಟವನು ನೀನು,

ಸಾವು ತಂತಿಯ ಬಿಗಿದು
ನಿತ್ಯ
ನಾಗರಹಾವಿನೊಡನಾಡಿದವ
ನೀನು

ಸಾಹೇಬರು ಹೊರಟಿದ್ದಾರೆ
ನೋಡು
ಸಾಹುಕಾರರು ಬರುತ್ತಿದ್ದಾರೆ

ನನ್ನ ನಿನ್ನ
ಬೆಳಕು ಮನೆ ಮಾರಾಟವಾಗಿದೆ,
ನಾನು ಸಲಾಮು ಹಾಕುವ ಮೊದಲು
ಮರೆತುಬಿಡಲೆ
ಬಡ ಮಡಿವಾಳರ ಭೀಮಪ್ಪನೆ

ಯಾವಾಗಲೂ ನನ್ನನ್ನು ಕಾಡಿದ ಭೀಮಪ್ಪ ಇಂದು ವಿಶ್ವ ಕಾರ್ಮಿಕ ದಿನಾಚರಣೆಯಂದು ನೆನಪಾದ. ಅವನು ಸತ್ತ ನಂತರ ಪ್ರತಿ ವರ್ಷ ಕಾರ್ಮಿಕ ಪ್ರಶಸ್ತಿಯನ್ನು ಕೂಡ ಹಾವೇರಿಯ ಕೆ.ಇ.ಬಿ ನೌಕರರ ಸಂಘ ನೀಡುತ್ತಿದೆ. ವಿಚಿತ್ರವೆಂದರೆ ಭೀಮಪ್ಪನ ಪ್ರೇರಣೆಯಿಂದಾಗಿ ಕಳೆದ ವರ್ಷ ಚಪ್ಪಲಿ ಹೊಲೆಯುವ ರಾಣಿ ಅರ್ಜುನ್ ಸೇಲಂ ಎಂಬ ಮಹಿಳೆಗೆ ಕಾರ್ಮಿಕ ಪ್ರಶಸ್ತಿ ನೀಡಲಾಗಿತ್ತು. ಸದಾ ಪ್ರತಿಭಟನೆ ಹೋರಾಟಗಳಲ್ಲಿ ಹಸಿರು ಬಟ್ಟೆಯ ಜನರೊಂದಿಗೆ ಇರುತ್ತಿದ್ದ ನನಗೆ ಈ ದಿನ ಎಲ್ಲವೂ ನೆನಪಾದುದರಿಂದ ಒಂದಿಷ್ಟು ಬರೆದಿರುವೆ.

‍ಲೇಖಕರು avadhi

May 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: