ಆತ ಆಸ್ಕರ್ ಶಿಂಡ್ಲರ್: ಸಂತನಾಗಿ ಹೋದ ಸ್ವಾರ್ಥಿ

ಪಾಲಹಳ್ಳಿ ವಿಶ್ವನಾಥ್

ಇನ್ನಷ್ಟು ಓದಿಗೆ ಕಾಡುವ ಪ್ರವಾಸ ಕಥನಕ್ಕೆ ಬಿ ವಿ ಭಾರತಿ ಅವರ ನಕ್ಷತ್ರಗಳ ಸುತ್ತ ನಾಡಿನಲ್ಲಿ ಓದಿ- ಇಲ್ಲಿ ಕ್ಲಿಕ್ಕಿಸಿ

ಇಂದು ನೀವು ಇಸ್ರೇಲಿನ ಜೆರುಸಲೆಮಿನ ಬೆಟ್ಟಕ್ಕೆ ಹೋಗಿ ಅಲ್ಲಿ ಸಮಾಧಿಗಳನ್ನು ನೋಡಿದರೆ, ಅನೇಕ ಸಮಾಧಿಗಳ ಮೆಲೆ ಪುಟ್ಟ ಪುಟ್ಟ ಕಲ್ಲುಗಳು ಇಟ್ಟಿರುವುದನ್ನು ಕಾಣಬಹುದು; ನಾವು ಹೂವುಗಳನ್ನಿಡುವ ತರಹ ಯಹೂದಿಗಳು ಈ ಕಲ್ಲುಗಳನ್ನು ಗೌರವಾರ್ಥವಾಗಿ ಇಡುತ್ತಾರೆ. ಗಮನಿಸಿದಾಗ ಒಂದು ಸಮಾಧಿಯ ಮೇಲೆ ಬಹಳ ಕಲ್ಲುಗಳು ಕಾಣುತ್ತವೆ. ಹತ್ತಿರ ಹೋಗಿ ಬರೆದಿರುವುದನ್ನು ನೋಡಿದರೆ ‘ಆಸ್ಕರ್ ಶಿಂಡ್ಲರ್ (1906-1974) 1200 ಯಹೂದಿಗಳನ್ನು ರಕ್ಷಿಸಿದ ಮಹಾನುಭಾವ ‘ಎಂದು ಬರೆದಿರುತ್ತದೆ.

ಶಿಂಡ್ಲರ್? ಪಕ್ಕ ಜರ್ಮನ್ ಹೆಸರಲ್ಲವೆ? ಹಾಗಿದ್ದೂ ಇಡೀ ಯಹೂದಿ ಜನಾಂಗದ ಗೌರವಕ್ಕೆ ಹೇಗೆ ಪಾತ್ರನಾದ?

 ಜರ್ಮನ್ ಸೇನೆಗೆ ಮತ್ತು ನಾಜಿ ಪಕ್ಷಕ್ಕೆ ಗೂಢಚಾರನ ಕೆಲಸ ಮಾಡುತ್ತಿದ್ದ ಆಸ್ಕರ್ ಶಿಂಡ್ಲರ್ ತನ್ನ 31ನೆಯ ವಯಸ್ಸಿನಲ್ಲಿ ದುಡ್ಡು ಮಾಡಲು 1939ರಲ್ಲಿ ಪೋಲೆಂಡಿನ ಕ್ರಾಕೋಗೆ ಬಂದಿಳಿದ.

  1. ಹಿನ್ನೆಲೆ:

ಮೊದಲನೆಯ ಮಹಾಯುದ್ಧದ ನಂತರ ಜರ್ಮನಿಯಲ್ಲಿ ಅಡಾಲ್ಫ ಹಿಟ್ಲರನ ಜನಪ್ರಿಯತೆ ಹೆಚ್ಚಾಗಲು ಶುರುವಾಗಿ 1933 ಜನವರಿಯಲ್ಲಿ ದೇಶದ ಅಧ್ಯಕ್ಷನಾಗಿ ಚುನಾಯಿತನಾದನು. ಮೊದಲಿಂದಲೂ ಪಕ್ಕದ ರಾಜ್ಯ ಪೋಲೆಂಡಿನ ಜೊತೆ ಘರ್ಷಣೆಗಳಿದ್ದು ಎರಡನಯ ಮಹಾಯುದ್ಧ ಪ್ರಾರಂಭವಾದ ನಂತರ 1939ರ ಸೆಪ್ಟೆಂಬರಿನಲ್ಲಿ ಜರ್ಮನಿ ಪೋಲೆಂಡ್ ದೇಶಕ್ಕೆ ಮುತ್ತಿಗೆಹಾಕಿತು. 35 ದಿನಗಳ ಪ್ರತಿಭಟನೆಯ ನಂತರ ಪೋಲೆಂಡಿನ ಬಹು ಭಾಗಗಳು ಜರ್ಮನಿಯ ಪಾಲಾದವು. ಬಹಳ ಹಿಂದೆಯೇತನ್ನ ಆತ್ಮಚರಿತ್ರೆ- ‘ಮೈನ್ ಕ್ಯಾಮ್ಫ’ಯಲ್ಲಿಯೇ, ಜನಾಂಗೀಯ (ಯೆಹೂದಿ) ವಿರೋಧಿ – ಆಂಟಿ ಸೆಮಿಟಿಸ್ಮ್ ವಿಚಾರಗಳನ್ನು ಹಿಟ್ಲರ್ ಪ್ರಸ್ತಾವಿಸಿದ್ದನು. ಅವನು ಅಧಿಕಾರಕ್ಕೆ ಬಂದ ನಂತರ, ಸರಕಾರವು ಯಹೂದಿಗಳನ್ನು ರಾಷ್ಟ್ರೀಯ ಜೀವನದಿಂದ ವ್ಯವಸ್ಥಿತವಾಗಿ ಹೊರಗಿಡಲು ಪ್ರಾರಂಭಿಸಿತು.

ಮಾರ್ಕ್ಸ್‌ವಾದವನ್ನು ಬೆಳೆಸಿದ ಜನತೆ ಎಂಬುದು ಒಂದು ಮುಖ್ಯ ಆರೋಪಣೆಯಾಗಿತ್ತು. ಅದಲ್ಲದೆ ಬರ್ಲಿನ್ ನಲ್ಲಿ ನೆಲಸಿದ್ದ ಖ್ಯಾತ ಯಹೂದಿ ವಿಜ್ನಾನಿ ಆಲ್ಬರ್ಟ್ ಐನ ಸ್ಟೈನ್ ರ ಮೇಲೆಆರೋಪಣೆಗಳು ಶುರುವಾಗಿ ಅವರನ್ನು ಕೊಲ್ಲುವ ಸಂಚೂ ಇದ್ದಿತು. ಇದನ್ನು ಗ್ರಹಿಸಿದ ಐನ ಸ್ಟೈನ್ 1933ರ ಸೆಪ್ಟೆಂಬರಿನಲ್ಲಿ ಇಂಗ್ಲೆಂಡಿಗೆ ತಪ್ಪಿಸಿಕೊಂಡು ಹೋದರು. ನಿಧಾನವಾಗಿ ಅನೇಕ ಯಹೂದಿ ವಿಜ್ಞಾನಿಗಳು ಮತ್ತು ಇತರ ಬುದ್ದಿ ಜೀವಿಗಳು ಜರ್ಮನಿಯನ್ನು ತೊರೆಯಲು ಪ್ರಾರಂಭಿಸಿದರು.

1935 ರಲ್ಲಿಜಾರಿಗೆ ಬಂದ ಕಾನೂನುಗಳು ಯಹೂದಿಗಳು ಮತ್ತು ಯೆಹೂದ್ಯೇತರರ ನಡುವಿನ ಮದುವೆಯನ್ನು ನಿಷೇಧಿಸಿದವು. ಹೀಗೆ ಯಹೂದಿ ವಿರೋಧ ಪ್ರಚಾರ ಸಮಾಜದಲ್ಲೆಲ್ಲಾ ಹರಡಿ ಸಾಮಾನ್ಯ ಜನರ ಮನಸ್ಸನ್ನೂ ಕಲುಷಿತಗೊಳಿಸಿತು. ಯಹೂದಿಗಳ ವಿರುದ್ಧ ಸಾಮೂಹಿಕ ಹಿಂಸಾಚಾರವನ್ನು ನಾಜಿ ಆಡಳಿತವು ಪರೋಕ್ಷವಾಗಿ ಮತ್ತು ನೇರವಾಗಿ ಪ್ರೋತ್ಸಾಹಿಸಿತು.9-10 ನವೆಂಬರ್ 1938 ರ ರಾತ್ರಿ, ಯಹೂದಿಗಳ ಹತ್ಯೆ, ಆಸ್ತಿಯ ನಾಶ ಮತ್ತು ಸಿನಗಾಗ್‌ಗಳನ್ನು ಸುಡುವುದನ್ನು ಆಡಳಿತವು ಅನುಮೋದಿಸಿತು

ಕ್ರೈಸ್ತ ಮತದ ಪ್ರಾರಂಭದಿಂದಲೂ ಯೆಹೂದಿಗಳಿಗೂ ಕ್ರೈಸ್ತರಿಗೂ ಘರ್ಷಣೆ ಇದ್ದೇ ಇದ್ದವು. ಆದರೆ ಐತಿಹಾಸಿಕ ಕಾರಣಗಳು ಎಷ್ಟು ಜನಕ್ಕೆ ಗೊತ್ತಿದ್ದವೋ? ಏಸು ಕ್ರಿಸ್ತನ ಮರಣಕ್ಕೆ ಯೆಹೂದಿಗಳು ಕಾರಣವೆಂಬುದು ಒಂದು ಮುಖ್ಯ ಕಾರಣ (ಏಸುವೂ ಒಬ್ಬ ಯೆಹೂದಿಯಾಗಿದ್ದ ಎಂಬುದನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ). ಇಬ್ಬರಿಗೂ ಬೈಬಲ್ ಪವಿತ್ರ ಗ್ರಂಥ; ಆದರೆ ಹಳೆಯ ಭಾಗ ಯೆಹೂದಿಗಳಿಗೆ, ಹೊಸ ಭಾಗ ಕ್ರೈಸ್ತರಿಗೆ. ಯೆಹೂದಿಗಳು ಲೇವಾದೇವಿ ವ್ಯವಹಾರ ಮಾಡುತ್ತಾರೆಂಬುದು ಮತ್ತೊದು ದೊಡ್ಡ ಆರೋಪಣೆ; ಆದರೆ ಯೆಹೂದಿಗಳಿಗೆ ಬೇರೆ ಕೆಲಸಗಳು ಸಿಗುತ್ತಿರಲಿಲ್ಲವಾದ್ದರಿಂದ ಅವರು ಈ ಕೆಲಸ ಮಾಡಲು ಶುರುಮಾಡಬೇಕಾಯಿತು ಎಂದು ಚರಿತ್ರೆ ಹೇಳುತ್ತದೆ.

15ನೆಯ ಶತಮಾನದ ಸಮಯದಲ್ಲಿ ಯೂರೋಪಿನ ಹಲವಾರು ದೇಶಗಳಲ್ಲಿ ಯಹೂದಿಗಳು ಕೆಂಪು ಟೋಪಿಯನ್ನು ಹಾಕಿಕೊಂಡಿರಬೆಕೆಂದು ಕಾನೂನು ಇದ್ದಿತು. ಇದಲ್ಲದೆ ಯೆಹೂದಿಗಳೆಲ್ಲ ಊರಿನ ಬೇರೊಂದು ಭಾಗದಲ್ಲಿ, ಸ್ವಇಚ್ಚೆಯಿಂದಲೋ ಅಥವಾ ಬಲಾತ್ಕಾರದಿಂದಲೋ ಬೇರೆಯಾಗಿ ವಾಸವಾಗುವ ಪದ್ಧತಿಯೂ ಶುರುವಾಗಿತ್ತು. ಶೇಕ್ಸಪಿಯರನ ಖ್ಯಾತ ನಾಟಕ ‘ವೆನಿಸಿನ ವ್ಯಾಪಾರಿ’ಯಲ್ಲಿ ಯಹೂದಿ ವರ್ತಕ ಶೈಲಾಕ್ ರೊಚ್ಚೆದ್ದು ಹೀಗೆ ಕೇಳುತ್ತಾನೆ ‘ನಮಗೆಕಣ್ಣಿಲ್ಲವೇ, ಕಾಲಿಲ್ಲವೇ? ನೀವು ತಿನ್ನುವುದನ್ನೆ ನಾವೂ ತಿನ್ನುತ್ತೇವೆ. ಚುಚ್ಚಿದರೆ ನಮ್ಮಿಂದಲೂ ರಕ್ತ ಬರುವುದಿಲ್ಲವೆ? ವಿಷ ಕುಡಿದರೆ ನಾವೂ ಸಾಯುವುದಿಲ್ಲವೆ?..’ ಇಂದಿಗೂ ಕ್ರೈಸ್ತರಲ್ಲಿ ಯಹೂದಿ ದ್ವೇಷವಿರುವವರು ಸಾಕಷ್ಟು ಮಂದಿ. ಅಮೆರಿಕ ಮತ್ತು ಯೂರೋಪಿನಲ್ಲಿ ಈ ದ್ವೇಷ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಇದು ಮಾಯವಾಗುವ ಸುಳಿವೂ ಇಲ್ಲ. ಆದರೆ 1940ರ ಮೊದಲ ದಶಕಗಳಲ್ಲಿ ಅವರು ಅನುಭವಿಸಿದ ಅಪಮಾನ ಮತ್ತು ಕ್ರೌರ್ಯ ಆ ದ್ವೇಷದ ಉತ್ತುಂಗ ಸಮಯ.

ಶಿಂಡ್ಲರ್ ಬಂದಿಳಿದ ಪೋಲೆಂಡಿನ ಕ್ರಾಕೋ ನಗರ! ಹಿಂದಿನಿಂದಲೆ ಅಲ್ಲಿ ಜನ ವಾಸಿಸಲು ಶುರುಮಾಡಿದ್ದು ಕ್ರಮೇಣ ಜನಸಂಖ್ಯೆ ಬೆಳೆದು 11ನೆಯ ಶತಮಾನದಲ್ಲಿ ಪೋಲೆಂಡಿನ ರಾಜಧಾನಿಯಾಗಿ ಮುಂದಿನ 500 ವರ್ಷಗಳು ಆ ಸ್ಥಾನವನ್ನು ಉಳಿಸಿಕೊಂಡಿತ್ತು. ಪೋಲೆಂಡಿನ ಮತ್ತೊಂದು ವಿಶೇಷವೂ ಆಸ್ಕರನಿಗೆ ಗೊತ್ತಿದ್ದಿರಬಹುದು. ಯೂರೋಪಿನಲ್ಲೆಲ್ಲಾ ಹೆಚ್ಚು ಧಾರ್ಮಿಕ ಸೌಹಾರ್ದತೆಯಿದ್ದ ದೇಶವೆಂದು ಹಿಂದಿನಿಂದಲೂ ಪೋಲೆಂಡ್ ಹೆಸರು ಗಳಿಸಿತ್ತು.

ಈ ಕಾರಣಕ್ಕಾಗಿಯೇ ಬೇರೆಯ ಕಡೆಗಳಿಂದ ಯೆಹೂದಿ ಜನತೆ ಬಂದು ಇಲ್ಲಿ ನೆಲೆಸಲು ಶುರುಮಾಡಿತು. ಆ ಕಾಲದಲ್ಲಿ ಕಟ್ಟಿದಭವ್ಯ ಸಿನೊಗಾಗು (ದೇವಾಲಯಗಳು) ಗಳನ್ನು ಇಂದೂ ನೋಡಬಹುದು ಮತ್ತು ಹಲವಾರು ಹಳೆಯ ಯಹೂದಿ ನೀತಿಕಥೆಗಳನ್ನು ಕ್ರಾಕೋ ನಗರದ ಸುತ್ತ ಹೆಣೆದಿದ್ದಾರೆ. ಹೀಗೆ ಕ್ರಾಕೋ ಯಹೂದಿ ಸಂಸ್ಕೃತಿಯ ಒಂದು ಮುಖ್ಯ ತಾಣವಾಗಿದ್ದಿತು.

ಕಾನ್ಸೆನ್ಟ್ರೇಷನ್ ಕ್ಯಾಂಪ್ ಎನ್ನುವ ಪದವನ್ನು ಕನ್ನಡದಲ್ಲಿ ಹತ್ಯಾ ಶಿಬಿರ ಎಂದು ಅನುವಾದ ಮಾಡಬಹುದೋ ಏನೋ. ಆದರೆ  ಇಂಗ್ಲಿಷ ಪದದ ಜೊತೆ ಸೇರಿಕೊಂಡಿರುವ ಕ್ರೂರತೆ ಈ ಕನ್ನಡ ಪದದಲ್ಲಿ ಕಾಣದಿರಬಹುದು. ಆಡಳಿತ ವರ್ಗಕ್ಕೆ ಬೇಡವಾದ ಜನರನ್ನು ಒಂದೇ ಸ್ಥಳದಲ್ಲಿ ಕೂಡಿಟ್ಟು ಅವರ ಮೆಲೆ ಕಠಿಣ ನಿಯಮಗಳನ್ನು ಹೇರುವುದು ಹೊಸದೇನಲ್ಲ. ಯುದ್ದಗಳಲ್ಲಿ ಖೈದಿಗಳನ್ನು ಪ್ರಾಯಶಃ ಇಂತಹ ಶಿಬಿರಗಳಲ್ಲೆ ಇಟ್ಟಿದ್ದಿರಬೇಕು. 1930ರ ದಶಕದಲ್ಲಿ ಹಿಟ್ಲರನೊಂದಿಗೆ ಈ ಕ್ರೂರ ಪದ್ದತಿ ಇನ್ನೂ ಕ್ರೂರವಾಯಿತು. ಯೂರೋಪಿನಲ್ಲಿ ಎರಡನೆಯ ಮಹಾಯುದ್ಧ ಶುರುವಾಗುವ ಮೊದಲೇಜರ್ಮನ್ ಅಧಿಕಾರಿಗಳು ತಮ್ಮ ಮೊದಲ ಶಿಬಿರಗಳಿಗಾಗಿ ಸಾವಿರಾರು ಯಹೂದಿಗಳನ್ನು ಸುತ್ತುವರಿಯಲು ಪ್ರಾರಂಭಿಸಿದರು. ಆಗ  ಅನೇಕ ಜರ್ಮನ್ ಯಹೂದಿಗಳು ದೇಶವನ್ನು ಬಿಟ್ಟು ಓಡಿಹೋದರು.  

ಈ ಶಿಬಿರಗಳು ಹಿಟ್ಲರನ ಹಲವಾರುಕ್ರೂರ ಯೋಜನೆಗಳಲ್ಲಿ ಅತಿ ಕ್ರೂರವಾದದ್ದೆಂದು ಹೇಳಬಹುದು. ಮೊದಲು ಕಮ್ಯುನಿಸ್ಟ ಪಕ್ಷದ ಸದಸ್ಯರನ್ನು ಇಂತ ಜಾಗಗಳಲ್ಲಿ ಇಡಲಾಗಿತ್ತು. ಆಗ ಜನತೆಯೂ ಇದನ್ನು ಒಪ್ಪಿತ್ತು ಮತ್ತು ಪತ್ರಿಕೆಗಳು ಬಂದಿಗಳನ್ನು ಅಪಾಯಕಾರಿ ಎಂದೂ ಬಣ್ಣಿಸಿದ್ದವು. ಜೂನ 1933ರಲ್ಲಿ ಡಾಖಾವ್ ಎಂಬ ಸ್ಥಳದಲ್ಲಿ ಶುರವಾದ ಶಿಬಿರ ಬೇರೆ ಎಲ್ಲ ಸೆರೆ ಶಿಬಿರಗಳಿಗೂ ಮಾದರಿಯಾಯಿತು. ನಿಧಾನವಾಗಿ ಬುದ್ಧಿಜೀವಿಗಳು, ಕಲಾಕಾರರೂ, ಯೆಹೂದಿಗಳನ್ನು ಆ ಶಿಬಿರಗಳೊಳಗೆ ತುಂಬಲಾಯಿತು. ಈ ಶಿಬಿರಗಳುಹೆಚ್ಚುಬೆಳೆದಿದ್ದು 1938ರ ನಂತರ, ಅಂದರೆ ಯುದ್ದ ಶುರುವಾದ ನಂತರ.

02. ಕ್ರಾಕೋವಿನಲ್ಲಿ ಶಿಂಡ್ಲರ್

 ಆಗಲೇ ಹಿಟ್ಲರನ ಕಠಿಣ ಕಾನೂನುಗಳು ಪೋಲೆಂಡಿನ ಜನಜೀವನವನ್ನು ಅಸ್ತಾವಸ್ತೆ ಮಾಡಲು ಶುರುಮಾಡಿತ್ತು. ಜರ್ಮನರು ಕ್ರಾಕೋವನ್ನು ಸುತ್ತ ಮುತ್ತ ಪ್ರದೇಶಗಳ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಸಮಯದಲ್ಲಿ ಕ್ರಾಕೋವಿಗೆ ಬಂದಿಳಿದ ಶಿಂಡ್ಲರನ ಒಂದೇ ಉದ್ದೇಶ ಹಣ ಮಾಡುವುದಾಗಿತ್ತು. ಅವನು ನಿಧಾನವಾಗಿ ಜರ್ಮನ್ ಸೇನಾಧಿಕಾರಿಗಳ ಮತ್ತು ಇತರ ಆಡಳಿತ ವರ್ಗದವರ ಸಖ್ಯವನ್ನು ಸಂಪಾದಿಸಲು ಪ್ರಯತ್ನಮಾಡುತ್ತಾನೆ.  

ವ್ಯಾಪಾರ ವಲಯದಲ್ಲಿ ಚಾಕಚಕ್ಯತೆ ಇದ್ದ ಈತನ ವಿಧಾನ ಸ್ವಾರಸ್ಯಕರವಾಗಿತ್ತು. ಒಂದು ಕೆಫೆಗೆ ಹೋಗುವುದು. ಅಲ್ಲಿ ಜರ್ಮನ ಸೇನೆಯವರನ್ನು ಕಂಡರೆ ಅವರಿಗೆ ಮದ್ಯದ ಬಾಟಲುಗಳನ್ನು ಕಳಿಸುವುದು. ಎಲ್ಲ ದರ್ಜೆಯ – ಚಿಕ್ಕ ಅಧಿಕಾರಿಗಳಿಂದ ಹಿಡಿದು ದೊಡ್ಡವರ ತನಕ ಅವರ ಸ್ನೇಹವನ್ನು ಗಳಿಸುತ್ತಿದ್ದ. ಕೆಲವು ಬಾರಿ ದುಬಾರೀ ಉಡುಗೆರೆಗಳೂ ಹೋಗುತ್ತಿದ್ದವು ಈ ಸೇನಾಧಿಕಾರಿಗಳಿಗೆ. ಹಾಗೇ ಅವರುಗಳ ಜೊತೆ ಸೇರಿ ವಿಲಾಸೀ ಜೀವನನಡೆಸಲು ಶುರುಮಾಡುತ್ತಾನೆ. ಅವನಿಗೆ ವಿವಾಹೇತರ ಸಂಬಂಧಗಳೂ ಹಲವಾರು ಇರುತ್ತವೆ.

 ಆಗ ಅವನಿಗೆ ಐಸಾಕ್ ಸ್ಟರ್ನ ಎಂಬ ಲೋಕ ವ್ಯವಹಾರ ತಿಳಿದಯಹೂದಿ ಪರಿಚಯವಾಗುತ್ತಾನೆ. ಅವನಿಂದ ಪಾತ್ರೆ ಸಾಮನುಗಳನ್ನು ಮಾಡುವ, ಆದರೆ ಆರ್ಥಿಕ ತೊಂದರೆಗಳಿರುವ, ಕಾರ್ಖಾನೆಯೊಂದರ ಬಗ್ಗೆ ತಿಳಿಯುತ್ತದೆ. ಆ ಕಾರ್ಖಾನೆಯನ್ನು ಖರೀದಿ ಮಾಡುವ ಮೂಲಕ ಶಿಂಡ್ಲರ್ ತನ್ನ ಔದ್ಯೋಮಿಕ ಜೀವನವನ್ನು ಶುರುಮಾಡುತ್ತಾನೆ. ಕ್ರಾಕೋವಿನಲ್ಲಿ ಯಹೂದಿಗಳ ಪರಿಸ್ಥಿತಿಯನ್ನು ಐಸಾಕ್ ಸ್ಟರ್ನ್ ಮುಂದೆ ಹೀಗೆ ಜ್ಞಾಪಿಸಿಕೊಂಡಿದ್ದ.

‘… ಡಿಸೆಂಬರ್ ಒಂದನೆಯ ತಾರೀಖಿನ ವರೆಗೆ, ನಮ್ಮಂಥ ಪೋಲಿಷ್ ಯಹೂದಿಗಳನ್ನು ಹೆಚ್ಚು ಕಡಿಮೆ ಏಕಾಂಗಿಯಾಗಿ ಬಿಡುತ್ತಿದ್ದರು. ಆದರೂ ಜರ್ಮನನೊಬ್ಬನು ಬೀದಿಯಲ್ಲಿ ಒಂದು ಪ್ರಶ್ನೆಯನ್ನು ಕೇಳಿದರೆ, ‘ನಾನು ಯಹೂದಿ ….’ ಎಂದು ಉತ್ತರಕ್ಕೆ ಮುಂಚಿತವಾಗಿ ನಾವು ಹೇಳಿಕೊಳ್ಳಬೇಕಾಗಿತ್ತು. ಡಿಸೆಂಬರ್ 1 ರಿಂದ ನಾವು ಡೇವಿಡ್ ನಕ್ಷತ್ರ (ಯಹೂದಿಗಳ ಚಿನ್ಹೆ)ವನ್ನು ನಮ್ಮ ಉಡುಪುಗಳ ಮೇಲೆ ಧರಿಸಬೇಕಿತ್ತು. ಯಹೂದಿಗಳಿಗೆ ಪರಿಸ್ಥಿತಿ ಕೆಟ್ಟದಾಗಿ ಬೆಳೆಯಲು ಪ್ರಾರಂಭಿಸಿತ್ತುʼ.  

ಯಹೂದಿಗಳಿಗೆ ಕಡಿಮೆ ಸಂಬಳವನ್ನು ಕೊಡಬಹುದಲ್ಲದೆ ಯಹೂದಿ ಕಾರ್ಮಿಕರು ಯಂತ್ರಗಳ ಬಗ್ಗೆ ಅಪಾರ ಪರಿಣತಿಯನ್ನು ಹೊಂದಿದ್ದರು ಎಂಬುದೂ ಆಸ್ಕರ್ ನನ್ನು ಆಕರ್ಷಿಸುತ್ತದೆ. ಆದ್ದರಿಂದ ಅವಶ್ಯ ಬಂದಾಗ ಅವರು ರಿಪೇರಿ ಕೂಡ ಮಾಡುತ್ತಿದ್ದರು. ಮಿಲಿಟರಿಗೆ ಬೇಕಾದ ಸಾಮಾನುಗಳು ಎಂದು, ಲಂಚ ಕೊಡಬೇಕಾದಾಗ ಕೊಟ್ಟು‌ ಜರ್ಮನರನ್ನು ಒಪ್ಪಿಸುತ್ತಾ, ತನ್ನ ಕಾರ್ಖಾನೆಗೆ ಕೆಲವು ಸವಲತ್ತುಗಳನ್ನು ಪಡೆಯುತ್ತಾನೆ.

ಯಹೂದಿ ಜನರನ್ನೆ ಕೆಲಸಕ್ಕೆಸೇರಿಸಿಕೊಳ್ಲುತ್ತಾ ಹೋಗುತ್ತಾನೆ. ಅವರು ಯಂತ್ರಗಳ ವಿವಿಧ ಭಾಗಗಳ ಬಗ್ಗೆ ಕೌಶಲ್ಯ ಹೊಂದಿದವರು ಎಂದು ಜರ್ಮನ ಅಧಿಕಾರಿಗಳನ್ನು ಆಗಾಗ್ಗೆಸಮಝಾಯಿಸಬೇಕಾಗುತ್ತಿತ್ತು. ಕಾರ್ಖಾನೆ ಸುಮಾರು 350 ಜನರಿಂದ ಶುರುವಾಗಿ ಅದರ ಉಚ್ಛ್ರಾಯ ಸ್ಥಿತಿಯಲ್ಲಿ 1000 ಯಹೂದಿಗಳು ಅದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ವಯಸ್ಸಾದರಿಗೆ ಕಡಿಮೆ ವಯಸ್ಸುತೋರಿಸುತ್ತ, ಮಕ್ಕಳಿಗೆ ಹೆಚ್ಚು ವಯಸ್ಸನ್ನು ತೋರಿಸುತ್ತಾ ಜರ್ಮನ್ ಅಧಿಕಾರಿಗಳನ್ನು ಹೃಗೋ ನಿಭಾಯಿಸುತ್ತ ಹೋಗುತ್ತಾನೆ. ಕ್ರಮೇಣ ಕ್ರಾಕೋವಿನ ಯಹೂದಿಗಳಿಗೆ ಅವನ ಕಾರ್ಖಾನೆಯ ಬಗ್ಗೆ ತಿಳಿದು ಅದರಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಾರೆ. ಆದಷ್ಟು ಜನರನ್ನು ಶಿಂಡ್ಲರ್ ಸೇರಿಕೊಳ್ಳುತ್ತಾನೆ.

ಕೆಲವು ಬಾರಿ ಜರ್ಮನರನ್ನು ತೃಪ್ತಿ ಪಡಿಸಲು ಶಿಂಡ್ಲರ್ ಸಣ್ಣ ಪುಟ್ಟ ನಾಟಕಗಳನ್ನೂ ಆಡಬೇಕಾಗುತ್ತದೆ. ಒಂದು ಬಾರಿ ಯಹೂದಿ ಮಹಿಳೆಯೊಬ್ಬಳು ತನ್ನ ವೃದ್ಧ ತಂದೆ ತಾಯಿಯರನ್ನು ಕೆಲಸಕ್ಕ ಸೇರಿಸಿಕೊಳ್ಳಲು ಬೇಡುತ್ತಾಳೆ. ಶಿಂಡ್ಲರ್  ಕೋಪಗೊಂಡು ತಾನು ವೃದ್ಧಾಶ್ರಮ ನಡೆಸುತ್ತಿಲ್ಲ, ತಾನೇನೂ ಯಹೂದಿಗಳ ಆಪದ್ಬಾಂಧವನಲ್ಲ ಎಂದು ಎಲ್ಲರಿಗೂ ಕೇಳುವಂತೆ  ಕೂಗಾಡುತ್ತಾನೆ. ಆದರೆ ಮಾರನೆಯ ದಿನ ಅವಳ ತಂದೆ ತಾಯಿಯರು ಕಾರ್ಖನೆಯಲ್ಲಿ ಕೆಲಸದಲ್ಲಿರುತ್ತಾರೆ! ಶಿಂಡ್ಲರನ  ಕಾರ್ಖಾನೆಯಲ್ಲೆ ಒಳ್ಳೆ ಊಟ ತಿಂಡಿಗಳ ಏರ್ಪಾಡು ಇದ್ದು   ಕೆಲಸಗಾರರನ್ನೂ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಅವನು ಹಣವನ್ನೂ ಗಳಿಸುತ್ತಿರುತ್ತಾನೆ

03. ಕ್ರಾಕೋ ಘೆಟ್ಟೊ ಮತ್ತು ಪ್ಲಾಜೋ ಶಿಬಿರ

1940 ಏಪ್ರಿಲಿನಲ್ಲಿ ಜರ್ಮನ್ ಅಧಿಕಾರಿಗಳು ಕ್ರಾಕೋವನ್ನು ‘ಶುದ್ಧ ಜರ್ಮನ ನಗರಿ’ಯನ್ನಾಗಿ ಮಾಡಬೇಕೆಂದು 50000 ಯಹೂದಿಗಳನ್ನು ಬೇರೆ ಜಾಗಗಳಿಗೆ ಹೋಗಲು ಬಲವಂತ ಮಾಡುತ್ತಾರೆ. ಯಹೂದಿಗಳು ಮೊದಲು ಪ್ರತಿರೋಧ ವ್ಯಕ್ತ ಪಡಿಸಿದರೂ, ಡಿಸೆಂಬರ ಹೊತ್ತಿಗೆ 43000 ಯಹೂದಿಗಳು ತಮ್ಮ ವಸತಿಗಳನ್ನು ತೊರೆದು ಕ್ರಾಕೋ ಬಿಟ್ಟುಹೋಗಿದ್ದರು. ಇದಲ್ಲದೆ ಮಾರ್ಚ್ 1941ರ ಹೊತ್ತಿಗೆ ಊರಿನ ಹೊರಗಡೆ ಯಹೂದಿಗಳಿಗೇ ಬೇರೆ ವಸತಿಗಳಏರ್ಪಾಡು ಆಗುತ್ತದೆ. ಅದೇ ಕುಖ್ಯಾತ ಕ್ರಾಕೋವ್ ಘೆಟ್ಟೊ! ಶತಮಾನಗಳಿಂದ ವಾಸವಾಗಿದ್ದ ಊರಿನೊಳಗಿದ್ದ ಕಾಜಿರಿಮ್ ಎಂಬ ಬಡಾವಣೆಯನ್ನು ತ್ಯಜಿಸಿ ಅವರೆಲ್ಲರೂ ಘೆಟ್ಟೊಗೆ ಹೋಗಬೇಕಾಗುತ್ತದೆ. ಅದಲ್ಲದೆ ಬೇರೆ ಊರುಮತ್ತು ಹಳ್ಳಿಗಳಿಂದ ಯಹೂದಿಗಳನ್ನು ತಂದು ಇಲ್ಲಿ ತುರುಕಲಾಗುತ್ತದೆ. ಮನೆಗಳು ಬಹಳ ಚಿಕ್ಕದಿದ್ದು 3-4 ಕುಟುಂಬಗಳು ಒಂದು ಮನೆಯಲ್ಲಿ ಇರಬೇಕಾಗುತ್ತದೆ. ಆ ಪ್ರದೇಶದ ಸುತ್ತ ಒಂದು ಗೋಡೆಯನ್ನೂ ಯಹೂದಿಗಳಿಂದಲೇ ಕಟ್ಟಿಸುತ್ತಾರೆ.

ಹೀಗೆ ಯೆಹೂದಿಗಳನ್ನೂ ಬೇರೆ ಇರಿಸಿದ್ದಲ್ಲದೆ ಅವರಲ್ಲೂ ಯಾವುದಾದರೂ ಕಸುಬಿದ್ದು ಸಮಾಜಕ್ಕೆ ಉಪಯೋಗಕ್ಕೆ ಬರುವವರು (ಘೆಟ್ಟೊ ‘ಎʼ) ಮತ್ತು ಇತರರು-ಯಾವ ಕಸುಬೂ ಗೊತ್ತಿಲ್ಲದವರು ಇತ್ಯಾದಿ (ಘೆಟ್ಟೊ ‘ಬಿʼ) ಬೇರೆ ಬೇರೆ ಮಾಡಿದ್ದರು. ವರದಿಗಳ ಪ್ರಕಾರ 15000 ಜನರು ಆ ಘೆಟ್ಟೊವಿನಲ್ಲಿ ವಾಸವಾಗಿದ್ದರು. ಈ ರೀತಿಯಲ್ಲಿ ಮಧ್ಯ ಮತ್ತು ಪೂರ್ವ ಯೂರೋಪಿನಲ್ಲಿ ಜರ್ಮನರು ಸುಮಾರು 1000 ಘೆಟ್ಟೊಗಳನ್ನ ಸೃಷ್ಟಿಸಿದರಂತೆ! ಇವುಗಳಲ್ಲೆಲ್ಲಾ ವಾರಸಾ ನಗರದ ಘೆಟ್ಟೊ ಅತಿ ದೊಡ್ಡದಾಗಿತ್ತು. ಇದರ ವಿಸ್ತೀರ್ಣ – ಮೂರೂವರೆ ಚದುರ ಕಿ.ಮೀ. ಗಳು – ಬೆಂಗಳೂರಿನ ಒಂದು ಪುಟ್ಟ ಬಡಾವಣೆಯಷ್ಟು, ಅಷ್ಟೆ! ಅದರಲ್ಲಿ 4 ಲಕ್ಷ ಜನ ವಾಸವಾಗಿದ್ದರು!

ಈ ಘೆಟ್ಟೋಗಳು ನಾಜಿಗಳ ಭಯಂಕರ ಯೋಜನೆಯ ಮೊದಲ ಹೆಜ್ಜೆ ಮಾತ್ರವಾಗಿತ್ತು. 1941ರ ಮೊದಲ ತಿಂಗಳುಗಳಲ್ಲಿ ಸಾಮೂಹಿಕ ಹತ್ಯೆಗಳ ಯೋಜನೆ ಪ್ರಾರಂಭವಾಯಿತು. ಯುದ್ದದ ಬಂದಿಗಳು ಮತ್ತುಕೆಳ ಜನತೆ ಎನಿಸಿಕೊಂಡಿದ್ದ ಯೆಹೂದಿಗಳು ನಾಜಿ ಯೋಜನೆಗಳ ಮುಖ್ಯ ಬಲಿಪಶುಗಳಾದರು. ಘೆಟ್ಟೊಗಳಿಂದ ಈ ಹತ್ಯಾಶಿಬಿರಗಳಿಗೆ ಜನರನ್ನುಕಳಿಸುವ ಯೋಜನೆ ಶುರುವಾಗುತ್ತದೆ! ಒಟ್ಟಿನಲ್ಲಿ27 ಮುಖ್ಯ ಶಿಬಿರಗಳು ನಿರ್ಮಾಣವಾಗುತ್ತದೆ (ಇಲ್ಲಿ ವಿವರಿಸುತ್ತಿರುವ ಕ್ರಾಕೋವಿನ ಘೆಟ್ಟೊ ಮತ್ತು ಅಲ್ಲಿನ ಘಟನೆಗಳು ಜರ್ಮನಿಯ ಘೋರ ನಡೆವಳಿಕೆಗೆ ಒಂದು ಉದಾಹರಣೆ ಮಾತ್ರ). ಅದರಲ್ಲಿ ಒಂದು ಶಿಬಿರ ಕ್ರಾಕೋವಿನ ಹತ್ತಿರದ ಪ್ಲಾಜೋನಲ್ಲಿ ನಿರ್ಮಾಣವಾಗುತ್ತಿದ್ದು ಅದರ ಮೇಲ್ವಿಚಾರಣೆಗೆ ಅಮೋನ್ಗೋತ್ ಎಂಬ ಜರ್ಮನ್ ಸೇನಾಧಿಕಾರಿ ಕ್ರಾಕೋವ್‌ಗೆ ಆಗಮಿಸುತ್ತಾನೆ.

ಆ ದಶಕದಲ್ಲಿ  ಜರ್ಮನರ ದೌರ್ಜನ್ಯಕ್ಕೆ ಯಾವ ಮಿತಿಯೇ ಇರಲಿಲ್ಲ. ಆದರೆ ಅವರಲ್ಲೂ ಹೆಚ್ಚು ಕುಖ್ಯಾತ ವ್ಯಕ್ತಿಯೆಂದರೆ ಈ ಬೋತ್ ಎಂಬ ನರಹಂತಕ. ಬೆಳಿಗ್ಗೆ ಎದ್ದು ತನ್ನಮನೆಯ ಬಾಲ್ಕನಿಯಿದ ಕಂಡಕಂಡವರ ಮೇಲೆ ಗುಂಡ ಹಾರಿಸುವ ಮನುಷ್ಯನೀತ! ಸ್ಲಲ್ಪವೂ ಕರುಣೆ ಅತಹವಾ ಮಾನವೀಯತೆ ಇಲ್ಲದ ರಾಕ್ಷಸ! ದಿನಕ್ಕೆ ಹಲವಾರು  ಜನರನ್ನು ಕೊಲ್ಲದೆ ಮಲಗುವವನಲ್ಲ. ಇಂತಹವನನ್ನೂ ಶಿಂಡ್ಲರ್ ಸ್ನೇಹ ಮಾಡಿಕೊಂಡು ಉಡುಗೆರೆ ಕೊಡುತ್ತ ಸಮಾಧಾನ ಪಡಿಸುತ್ತಿರಬೇಕಾಗುತ್ತದೆ.

ಪ್ಲಾಜೋ ಶಿಬಿರವು ಸಿದ್ಧವಾದಾಗ, ಕ್ರಾಕೋ ನಗರದ ಘೆಟ್ಟೋವನ್ನು13/14 ಮಾರ್ಚ 1943ರಂದು ತಕ್ಷಣವೇ ಖಾಲಿ ಮಾಡಿ ಆ ಶಿಬಿರಕ್ಕೆ ಹೋಗುವಂತ ಗೋತ್ ಯಹೂದಿಗಳನ್ನು ಬಲವಂತಪಡಿಸುತ್ತಾನೆ. ಯಹೂದಿ ಜನರ ಜೀವನ ಅಸ್ತಾವಸ್ತ್ಯೆ ಯಾಗುತ್ತದೆ. ತಡ ಮಾಡಿದವರನ್ನು, ಹಿಂಜರಿದವರನ್ನು ಜರ್ಮನ್ ಸೈನಿಕರು ಗುಂಡು ಹೊಡದು ಕೊಲ್ಲುತ್ತಾರೆ. ಎಲ್ಲೆಲ್ಲೋ ಬಚ್ಚಿಟ್ಟುಕೊಂಡ ಹುಡುಗರನ್ನೂ ಸೈನಿಕರು ಕೊಲ್ಲಲು ಹೇಸುವುದಿಲ್ಲ.

ಎರಡು ಸಾವಿರ ಯಹೂದಿಗಳನ್ನು ಶಿಬಿರಕ್ಕೆ ಸಾಗಿಸಲಾಗುತ್ತದೆ; ಮತ್ತು ಇನ್ನೂ ಎರಡು ಸಾವಿರ ಜನರನ್ನು ಸೈನಿಕರು  ಬೀದಿಗಳಲ್ಲಿ ಮನೆಗಳಲ್ಲಿ ಕೊಲ್ಲುತ್ತಾರೆ. ಆ ಸಮಯದಲ್ಲಿ  ತನ್ನ ಕಾರ್ಮಿಕರನ್ನು ರಕ್ಷಿಸಲು ಶಿಂಡ್ಲರ್ ಅವರನ್ನೆಲ್ಲ ಕಾರ್ಖಾನೆಯಲ್ಲಿಯೇ ಇರಲು ಏರ್ಪಾಡು ಮಾಡುತ್ತಾನೆ. ಮೊದಲಿಂದಲೆ ನಿಧಾನವಾಗಿ  ಶಿಂಡ್ಲರನ ಮನಸ್ಸು ಬದಲಾಯಿಸುತ್ತಿದ್ದಿರಬೇಕು. ಆದರೆ ಈ ಹತ್ಯಾಕಾಂಡದಿಂದ ಶಿಂಡ್ಲರ್‌ನ ಗಮನವು ಹಣ ಸಂಪಾದಿಸುವುದರಿಂದ ಸಾಧ್ಯವಾದಷ್ಟು ಯಹೂದಿ ಜೀವಗಳನ್ನು ಉಳಿಸುವ ಪ್ರಯತ್ನಕ್ಕೆ ಪೂರ್ತಿ ಬದಲಾಗುತ್ತದೆ.

ಅನೇಕ ಜರ್ಮನರ ಸಖ್ಯವಿದ್ದರೂ  ಅವನ ಜೀವನದಲ್ಲಿ ಆತಂಕಗಳು ಬಹಳವಿದ್ದವು. ಜರ್ಮನ್ ಗುಪ್ತಚರರಿಗೆ ಅವನ ಬಗ್ಗೆ ಅನುಮಾನಗಳು ಮೊದಲಿಂದಲೂ ಇರುತ್ತವೆ. ಆದ್ದರಿಂದ ಅವನು ಸದಾ ಜಾಗರೂಕನಾಗಿರಬೇಕಿತ್ತು. ಮೂರು ಬಾರಿಯಾದರೂ ಜರ್ಮನ್ ಅಧಿಕಾರಿಗಳು ಅವನನ್ನು ಸೆರೆಮನೆಗೆ ಕಳಿಸುತ್ತಾರೆ; ಹೇಗೋ ಅವನು ಹೊರಬರುತ್ತಾನೆ. ಅವನ ಕಾರ್ಖಾನೆಯ ಕಾರ್ಮಿಕರನ್ನೂ ಸೇನೆಯವರು ಆಗಾಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾರೆ. ಲಂಚ ಕೊಟ್ಟು ಕೊಟ್ಟು ಅವರನ್ನು ಹೇಗೋ ವಾಪಸು ಕಳಿಸುತ್ತಾನೆ.

ಇದಲ್ಲದೆ ಕ್ರಾಕೋಗೆ ಹತ್ತಿರದಲ್ಲೇ (50 ಕಿಮೀ)  ಒಂದು ದೈತ್ಯ ಹತ್ಯಾಶಿಬಿರ ತಯಾರಾಗಿರುತ್ತದೆ. ಅದೇ ಕುಖ್ಯಾತ ಆಶ್ವಿಜ್ ! ಏಪ್ರಿಲ್ 1940ರಲ್ಲಿ ಯುದ್ಧದ ಖೈದಿಗಳಿಗಾಗಿ ಈ ಶಿಬಿರ ಸ್ಥಾಫಿತವಾಗುತ್ತದೆ. 1941ರಲ್ಲೇ ಸಾಮೂಹಿಕ ಹತ್ಯೆಗಳು ಶುರುವಾಗುತ್ತವೆ. 1942ರಿಂದ 1944ರ ಕಡೆಯ ದಿನಗಳವರೆವಿಗ ವಿವಿಧ ಜರ್ಮನ್ ಕ್ಯಾಂಪುಗಳೀಂದ ಇಲ್ಲಿಗೆ 13 ಲಕ್ಷ ಜನರನ್ನು ರೈಲುಗಳಲ್ಲಿ ತರಲಾಗುತ್ತದೆ. ಇದರಲ್ಲಿ 10ಲಕ್ಷ ಮಂದಿ ಯಹೂದಿಗಳೇ ಇದ್ದರು. ಅದಲ್ಲದೆ  ಈ ಸ್ಥಳದಲ್ಲಿ ಹಿಂಸೆಗೆ, ಕೊಲೆಗೆ  ಬೇರೆ ಬೇರೆ ಹೊಸ ವಿಧಾನಗಳ ಬಗ್ಗೆ  ಸಂಶೋಧನೆಗಳೂ ನಡೆಯುತ್ತಿರುತ್ತವೆ. ಮಾನವನ ಕ್ರೂರತೆಯ ಉದಾಹರಣೆಗಳ ಪಟ್ಟಿಯಲ್ಲಿ ಆಶ್ವಿಜ್ ಹತ್ಯಾಶಿಬಿರದ ಹೆಸರು ಮೇಲು ಸ್ಥಾನದಲ್ಲಿರುತ್ತದೆ.

ಪ್ಲಾಜೋ ಶಿಬಿರದಲ್ಲಿ ಯಹೂದಿಗಳಿಗೆ ಜೀವನವು ಈವತ್ತಿದ್ದರೆ ನಾಳೆ ಇಲ್ಲ ಎನ್ನುವ ತರಹ ಇರುತ್ತದೆ. ಎಲ್ಲ ಹತ್ಯಾಶಿಬಿರಗಳಂತೆ ಯಹೂದಿಗಳನ್ನು ಕೊನೆಗಾಣಿಸುವುದೇ ಈ ಶಿಬಿರದ ಉದ್ದೇಶವೂ ಕೂಡ: ಆದರೆ ಇಲ್ಲಿ ಇನ್ನೂ ಹಳೆಯವಿದಾನಗಳನ್ನೇ ಅನುಸರಿಸುತ್ತಿರುತ್ತಾರೆ- ಗುಂಡಿನಿಂದ ಕೊಲ್ಲುವುದು  ಅಥವಾ ನೇಣು ಹಾಕುವುದು!. ಹತ್ತಿರದಲ್ಲೇ ಇರುವುದರಿಂದ ಕೆಲಸಗಾರರಿಂದ ಕೆಲಸ ಜಾಸ್ತಿ ಪಡೆಯಬಹುದು ಎಂದು ಗೋತ್ ನನ್ನು ಲಂಚ ಕೊಟ್ಟು ಸಮಝಾಯಿಸಿ ಶಿಂಡ್ಲರ್ ತನ್ನ ಕಾರ್ಖಾನೆಯನ್ನು ಶಿಬಿರದ ಒಂದು ಭಾಗಕ್ಕೆ ಸ್ಥಳಾಂತರ ಮಾಡುತ್ತಾನೆ.

ಪ್ಲಾಜೋ ಶಿಬಿರದಿಂದ ಆಗಾಗ್ಗೆ ವಯಸ್ಸಾದವರನ್ನು ಮತ್ತು ರೋಗಿಗಳನ್ನು ಆಶ್ವಿಜ್ ಗೆ ರೈಲಿನಲ್ಲಿ ರವಾನೆ ಮಾಡುತ್ತಿರುತ್ತಾರೆ. ಮೇ14, 1944 ಮತ್ತೊಂದು ಕರಾಳ ದಿನ! ಪ್ಲಾಜೋನಲ್ಲಿದ್ದ ಮಕ್ಕಳನ್ನೆಲ್ಲ ಶಾಲೆಗೆ  ಕರೆದುಕೊಂಡು ಹೋಗುವಂತೆ ಗೋತ್ ಹೊರಗೆ ಕಳಿಸುತ್ತಾನ. ಮಕ್ಕಳು ಖುಷಿಯಿಂದ ಬಸ್ಸುಗಳನ್ನು ಹತ್ತುತ್ತಾರೆ. ಅದರ ಆ ವಾಹನಗಳು ಹೋಗುವುದು ಆಶ್ವಿಜ ಗೆ! ಅಲ್ಲಿ ಅವರೆಲ್ಲರೂ ಅನಿಲದ ಕೋಣೆಯಲ್ಲಿ ಸಾಯುತ್ತಾರ!

04. ಯಹೂದಿಗಳ ಸ್ಥಳಾಂತರ.

ಇದನ್ನೆಲ್ಲ ಗಮನಿಸುತ್ತಿದ್ದಶಿಂಡ್ಲರ್ ತನ್ನ ಯಹೂದಿ ಕಾರ್ಮಿಕರನ್ನು ರಕ್ಷಿಸಲು ಆದಷ್ಟೂ ಪ್ರಯತ್ನಮಾಡುತ್ತಾನೆ. ಏನೂ ಮಾಡಲು ಆಗದಿದ್ದಾಗ ಅವರ ಬವಣೆಗಳನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಪ್ರ್ರಯತ್ನಿಸುತ್ತಾನೆ. ಒಂದು ಬಾರಿ ಆಶ್ವಿಜ್ ಗೆ ಹೋಗುವ ರೈಲೊಂದನ್ನು ಆಸ್ಕರ್ ನೋಡುತ್ತಾನೆ. ಸಾಮಾನುಗಳನ್ನು ಕಳಿಸುವ ರೈಲ್ವೆ ಡಬ್ಬಗಳಲ್ಲಿ ಯಹೂದಿ ಮಹಿಳೆಯರನ್ನು ತುಂಬಿದ್ದಾರೆ. ಕಬ್ಬಿಣದ ಪೆಟ್ಟಿಗೆಗಳಲ್ಲಿ ತುರುಕಿದಂತಿದೆ.

ಕಡು ಬೇಸಿಗೆ, ಅಪಾರ ಶಖೆ. ಎಲ್ಲರೂ ಬೆವರುತ್ತಿದ್ದಾರೆ. ಬಹಳ ದಾಹ. ಅದನ್ನು ಗಮನಿಸಿದ ಆಸ್ಕರ್ ಜರ್ಮನ್ ಅಧಿಕಾರಿಗಳಿಗೆ ಉದ್ದನೆಯ ಪೈಪುಗಳಿಂಧ ಅವರ ಮೇಲ ನೀರು ಎರೆಚಲು ಹೇಳುತ್ತಾನೆ. ಸೈನಿಕರಿಗೆ ಅದು ಆಟವಾಗುತ್ತದೆ. ಆದರೆ ಶಿಂಡ್ಲರನ ಈ ಪ್ರಯತ್ನದಿಂದ ರೈಲಿನಲ್ಲಿದ್ದ ಸುಮಾರು ಜನಕ್ಕೆ ಕುಡಿಯಲು ನೀರು ಸಿಗುತ್ತದೆ; ಅವರ ಕಷ್ಟ ಕಡಿಮಯಾಗುತ್ತದೆ. ಇನ್ನೊಂದು ಬಾರಿ ಅವನ ಮ್ಯಾನೇಜರ ಐಸಾಕ್ ಸ್ಟರ್ನ ನನ್ನು ಹಿಡಿದು ಕ್ಯಾಂಪಿಗೆ ಹೋಗುತ್ತಿದ್ದ  ರೈಲಿನಲ್ಲಿ ಕೂರಿಸಿರುತ್ತಾರೆ. ತನ್ನ ಪ್ರಭಾವದಿಂದ ಆಸ್ಕರ್ ಐಸಾಕನ್ನು ಬಿಡಿಸಿಕೊಂಡುಬರುತ್ತಾನೆ

ಯಹೂದಿಗಳ ಹತ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಅದಲ್ಲದೆ ಅವನ ಕಾರ್ಖಾನೆಯನ್ನು ಮುಚ್ಚುವ ಸುಳಿವೂ ಸಿಗುತ್ತದೆ. ಶಿಂಡ್ಲರ್ ತನ್ನ ಕೆಲಸಗಾರರನ್ನು ರಕ್ಷಿಸಿಕೊಳ್ಳಲು ಮತ್ತೊಂದು ಉಪಾಯ ಹುಡುಕುತ್ತಾನೆ. ದೂರದ ಬೊಹೀಮಿಯ (ಇಂದಿನ ಚೆಕ್ ದೇಶ)ದಲ್ಲಿ ಗುಂಡು ಮತ್ತು ಮಿಲಿಟರಿ ಉಪಕರಣಗಳನ್ನು ತಯಾರಿಸುವ ಕಾರ್ಖಾನೆಯನ್ನು ತೆರೆಯುವ ಯೋಜನೆ ಮಾಡುತ್ತಾನೆ. ಬ್ರುನಿಜ್ ಎಂಬಜಾಗದಲ್ಲಿ ಅದನ್ನು ಸ್ಥಾಪಿಸಿ ತನ್ನ ಜನರನ್ನು ಕರೆದುಕೊಂಡುಹೋಗಲು ಗೋತ್ ನನ್ನು ಕೇಳಿದಾಗಸುಮಾರು ಲಂಚ ಕೊಟ್ಟಮೇಲೆ ಅವನ ಒಪ್ಪಿಗೆ ಸಿಗುತ್ತದೆ. ಒಬ್ಬ ಯಹೂದಿಗೆ ಎಷ್ಟು ಎಂದು ನಿಗದಿಯಾಗುತ್ತದೆ. ತನ್ನ ಕಾರ್ಖಾನೆಯವರಲ್ಲದೆ ಆದಷ್ಟೂ ಬೇರೆ ಯಹೂದಿಗಳನ್ನು ಕರೆದುಕೊಂಡು ಹೋಗುವ ಏರ್ಪಾಡು ಮಾಡುತ್ತಾನೆ.

ಶಿಂಡ್ಲರ್ ಐಸಾಕನಿಗೆ ಒಂದು ಪಟ್ಟಿ ಮಾಡಲು ಹೇಳುತ್ತಾನೆ. ಐಸಾಕ್ಟೈಪು ಮಾಡುತ್ತಾ ಹೋಗುತ್ತಾನೆ. ಎಷ್ಟು ಹೆಸರು ಆಯಿತು ಎಂದು ಶಿಂಡ್ಲರ್ ಕೇಳುತ್ತಾನೆ.  300! ಸಾಲದು, ಇನ್ನೂ ಸೇರಿಸಬೇಕು!  ಮತ್ತೆ ಐಸಾಕ್ ಟೈಪು ಮಾಡುತ್ತಾ ಹೋಗುತ್ತಾನೆ. ಎಷ್ಟಾಯಿತು? 800! ಸಾಲದು. ಇನ್ನೂ ಸೇರಿಸಿ. ಕಡೆಗೆ ಪಟ್ಟಿಯಲ್ಲಿ 1200 ಜನರ ಹೆಸರು ಸೇರಿರುತ್ತೆ. ಆ ಪಟ್ಟಿಯನ್ನು ಜರ್ಮನರಿಗೆ ಕಳಿಸುತ್ತಾನೆ. ಅದರ ಜೊತೆ ಸಾಕಷ್ಟು ಹಣವೂ ಹೋಗುತ್ತದೆ. ಗಂಡಸು ಹೆಂಗಸರನ್ನು ಬೇರೆ ಬೇರೆ ಮಾಡಿ ರೈಲಿನಲ್ಲಿ ಕೂರಿಸುತ್ತಾರೆ.

15 ಅಕ್ಡೋಬರ 1944 ರಂದು ಒಂದು ರೈಲು ಬ್ರುನಿಜ್ ಗೆ ಹೋಗುತ್ತದೆ. ಆದರೆ ಹೆಂಗಸರಿದ್ದ ರೈಲು ಆಶ್ವಿಜ್ ಹತ್ಯಾ ಶಿಬಿರಕ್ಕೆ ಹೋಗುತ್ತದೆ. ಅಲ್ಲಿ ಅವರನ್ನು ಇಳಿಸಿ ಸ್ನಾನದ ಮನೆಗೆ ಕಳಿಸಿರುತ್ತಾರೆ. ಮುಂದೆ? ಅನಿಲದ ಕೋಣೆಯೇ! ಇದನ್ನು ತಿಳಿದ ತಕ್ಷಣ ಶಿಂಡ್ಲರ್ ಎಂದಿನಂತೆ ಲಂಚ ಕೊಡಲು ಹೋಗುತ್ತಾನೆ. ಆದರೆ ಆಧಿಕಾರಿಗಳು ಒಪ್ಪದಿದ್ದಾಗ ವಜ್ರಗಳನ್ನು ಕೊಟ್ಟು ಮಹಿಳೆಯರನ್ನು ಬೇರೆ ರೈಲಿನಲ್ಲಿ ಆಶ್ವಿಜ್ ನಿಂದ ಹೊರತಂದು ಬ್ರುನಿಜ್ ಗ ಕಳಿಸುತ್ತಾನೆ.

ಅಲ್ಲಿಯ ಕಾರಖಾನೆಯಲ್ಲಿ ತಯಾರಾಗುವ ಯಾವ ಮಿಲಿಟರಿ ಉಪಕರಣಗಳೂ ಒಳ್ಳೆಯ ಮಟ್ಟದಲ್ಲಿರದಂತೆ ಶಿಂಡ್ಲರ್ ನೋಡಿಕೊಳ್ಳುತ್ತಾನೆ. ಯಾವುದೂ ಯುದ್ದಕ್ಕೆ ಉಪಯೋಗವಾಗಬಾರದು ಎಂಬುದು ಅವನ ಯೋಚನೆ.

ಅಲ್ಲಿ ಇಲ್ಲಿ ಉಪಕರಣಗಳನ್ನು ಖರೀದಿಸಿ ತನ್ನ ಕಾರ್ಖಾನೆಯದು ಎಂದು ಜರ್ಮನರಿಗೆ ತೋರಿಸುತ್ತಿರುತ್ತಾನೆ. 1945ರಲ್ಲಿ ಜರ್ಮನಿ ಸೋಲನ್ನು ಒಪ್ಪಿಕೊಂಡ ನಂತರ ರಶ್ಯದ ಸೈನಿಕರು ಶಿಂಡ್ಲರನ ಕಾರಖಾನೆಯ ಕಾರ್ಮಿಕರನ್ನು ಮುಕ್ತಗಳಿಸುತ್ತಾರೆ (ಮೇ 9, 1945). ಅವರನ್ನು ಬೀಳ್ಕೊಡುವ ಸಮಯ ಬಂದಾಗ ಶಿಂಡ್ಲರ್ ಬಹಳ ಉದ್ವಿಗ್ನನಾಗುತ್ತಾನೆ. ತಾನು ವಿಲಾಸೀ ಜೀವನ ನಡೆಸಿಲ್ಲದಿದ್ದರೆ ಇನ್ನೂ ಯಹೂದಿಗಳನ್ನು ಹತ್ಯಾಶಿಬಿರಗಳಿಂದ ರಕ್ಷಿಸಬಹುದಿತ್ತು ಎಂದು ಪಶ್ಚಾತ್ತಾಪ ಪಡುತ್ತಾನೆ. ತಮ್ಮ ಹಲ್ಲುಗಳ ಚಿನ್ನದಿಂದ ತಯಾರಿಸಿದ್ದ ಉಂಗುರವನ್ನು ಕಾರ್ಮಿಕರು ಶಿಂಡ್ಲರನಿಗೆ ಕೊಡುತ್ತಾರೆ. ಅದರಲ್ಲಿ ‘ಒಬ್ಬನನ್ನು ರಕ್ಷಿಸಿದವನು ಇಡೀ ಪ್ರಪಂಚವನ್ನೇ ರಕ್ಷಿಸುತ್ತಾನೆ’ ಎಂದು ಕೆತ್ತಿರುತ್ತಾರೆ

ವಿಚಾರಣೆಯ ನಂತರ ಗೋತ್ ನನ್ನು ನೇಣು ಹಾಕಲಾಗುತ್ತದೆ. ಯುದ್ಧದ ನಂತರ ಶಿಂಡ್ಲರನ ಬಳಿ ಸ್ವಲ್ಪ ಹಣವೂ ಉಳಿದಿರುವುದಿಲ್ಲ. ಅವನಿಂದ ರಕ್ಷಿಸಲ್ಪಟ್ಟ ಯಹೂದಿಗಳು ‘ಶಿಂಡ್ಲರನ ಯಹೂದಿಗಳು’ ಎಂಬ ಅನೌಪಚಾರಿಕ ಸಂಘವನ್ನು ಶುರುಮಾಡಿಕೊಳ್ಳುತ್ತಾರೆ. ಆಗಾಗ್ಗೆ ಈ ಸಂಘದಿಂದ  ಶಿಂಡ್ಲರನಿಗೆ ಧನ ಸಹಾಯ ಸಿಗುತ್ತದೆ. ಅವನ ಜೀವನ ಅಲೆಮಾರಿಯ ಜೀವನವಾಗುತ್ತದೆ ಜರ್ಮನಿ, ಅರ್ಜೆಂಟೈನಾ ಇತ್ಯಾದಿ ದೇಶಗಳಲ್ಲಿ ಸಮಯ ಕಳೆಯುತ್ತಾನೆ. ಹಣದ ತೊಂದರೆ ಅವನನ್ನು ಯಾವಗಲೂ ಕಾಡಿಸುತ್ತಿರುತ್ತದೆ.. ಅಕ್ಟೋಬರ್ 1974ರಲ್ಲಿ, ಅವನ 66ನೆಯ ವಯಸ್ಸಿನಲ್ಲಿ, ಜರ್ಮನಿಯಲ್ಲಿ ಶಿಂಡ್ಲರನ ನಿಧನವಾಯಿತು. ಅವನ ಅಭಿಮಾನಿಗಳು ಅವನ ದೇಹವನ್ನು ಇಸ್ರೇಲಿಗೆ ತೆಗೆದುಕೊಂಡು ಹೋಗಿ ಜೆರೂಸಲಮಮಿನ ಒಂದು ಮುಖ್ಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಿದರು.

ಅವನು ಬದುಕಿದ್ದಾಗ ಸ್ಟೇನ್ ಹೌಸ್ ಎನ್ನುವವರು ಅವನ ಸಂದರ್ಶನ ನಡೆಸಿದಾಗ ಶಿಂಡ್ಲರ್ ಹೀಗೆ ಹೇಳಿದ್ದನು: ‘ಯಹೂದಿಗಳ ವಿನಾಶ ನಡೆಯುತ್ತಿತ್ತು. ನಾನು ಸಹಾಯ ಮಾಡಲೇ ಬೇಕಿತ್ತು. ಬೇರೆ ಯಾವ ಆಯ್ಕೆಯೂ ನನಗಿರಲಿಲ್ಲ’. ಅವನ ಬಗ್ಗೆ ಸ್ಟೇನ್ ಹೌಸ ಹೀಗೆ ಬರೆದಿದ್ದರು ‘ಪಶ್ಚಾತ್ತಾಪ ಪಡುವ ಅವಕಾಶವಾದಿ ಬೆಳಕನ್ನು ನೋಡಿದನು ಮತ್ತು ಅವನ ಸುತ್ತಲಿನ ಅಪರಾಧಗಳ ವಿರುದ್ಧ ದಂಗೆ ಎದ್ದನು. ಮತ್ತೂ ಹೆಚ್ಚು ಆಳವಾದ ಮತ್ತು ಗಹನವಾದ ಉದ್ದೇಶವನ್ನು ಮನೋವಿಶ್ಲೇಷಕರು ನೀಡಬಹುದು. ಆದರೆ ಆಸ್ಕರ್ ಶಿಂಡ್ಲರ್ ಜೊತ ಕಳೆದ ಒಂದು ಗಂಟೆಯ ನಂತರ  ಸರಳ ಉತ್ತರವ ಸರಿ ಎನ್ನಿಸುತ್ತದೆ..’ ಅವನ ಕಾರ್ಖಾನೆಯಲ್ಲಿ ಕೆಲಸಮಾಡಿದ ಮಹಿಳೆಯೊಬ್ಬರು ‘ನಮ್ಮನ್ನು ರಕ್ಷಿಸಲು ದೇವರೇ ಅವನನ್ನು ಕಳಿಸಿದ್ದ’ ಎಂದು ಅವನನ್ನು ನೆನೆಸಿಕೊಂಡಿದ್ದರು!

(ಆಕರ:  ಶಿಂಡ್ಲರನನ್ನು ನನಗೆ ಮೊದಲು ಪರಿಚಯಿಸಿದ್ದು  1993ರಲ್ಲಿ ಹೊರಬಂದ ‘ಶಿಂಡ್ಲರ್ಸ ಲಿಸ್ಟ’ ಚಲನಚಿತ್ರ. ಜರ್ಮನರ ಹತ್ಯಾ ಶಿಬಿರಗಳ ಬಗ್ಗ ಹಲವಾರು ಚಿತ್ರಗಳು (ಉದಾ: ದಿಸ್ ಈಸ್ ಅ ಬ್ಯೂಟಿಫುಲ್ ಲೈಫ್’) ಬಂದಿರಬೇಕು. ಆದರೆ ಯಾವುದೂ ಸ್ಪೀಲ್ಬರ್ಗರ ಈ ಚಿತ್ರದಷ್ಟು ಹೆಸರು ಮಾಡಲಿಲ್ಲ; ಪ್ರಪಂಚದ ಉತ್ತಮ ಚಿತ್ರಗಳ ಹಲವಾರು ಪಟ್ಟಿಗಳಲ್ಲಿ ಈ ಸಿನೆಮಾ ಮೇಲೇ ಇರುತ್ತದೆ.

1982ರಲ್ಲಿ ಪ್ರಕಟವಾದ ಥಾಮಸ್ ಕಿನೆಲಿ ಎಂಬುವವರ ಪುಸ್ತಕವನ್ನು ಈ ಚಲನಚಿತ್ರ ಆಧರಿಸಿತ್ತು. ಆದರೆ ಆ ಪುಸ್ತಕ ವಾಸ್ತವ ಜೀವನ ಚರಿತ್ರೆಯಾಗಿರದೆ ಕಾದಂಬರಿಯ ಧಾಟಿಯಲ್ಲಿ ಇದ್ದಿತು. ಇದಕ್ಕೆ ಮುಂಚೆಯೇ, 1948ರಲ್ಲಿಯೇ, ಶಿಂಡ್ಲರನ ಸಂದರ್ಶನ ಮಾಡಿಸ್ಟೇನ ಹೌಸ ಎನ್ನುವವರು ಲೇಖನ ಬರೆದಿದ್ದು 1994ರಲ್ಲಿ ಹೊರಬಂದಿತು. ಚಿತ್ರದ ಕಥಾವಸ್ತುವಿಗೂ ಅವರ ಲೇಖನದಲ್ಲಿ ಕಾಣಬರುವ ಶಿಂಡ್ಲರನಿಗೂ ಹಲವಾರು ವ್ಯತ್ಯಾಸಗಳಿದ್ದರೂ ಒಟ್ಟಿನಲ್ಲಿ ಶಿಂಡ್ಲರನ ಕಥೆ ಹೇಳುವುದರಲ್ಲಿ ಚಲನಚಿತ್ರ ಸಫಲವಾಗಿದೆ ಎಂದು ಹೇಳಬಹುದು. ಆದರೆ ಆ ಸಮಯವನ್ನು ಅರ್ಥ ಮಾಡಿಕೊಳ್ಳಲು ಮತ್ತು ಖಚಿತತೆಗೆ ವಿವಿಧ ವಿಶ್ವಕೋಶಗಳಲ್ಲಿನ ಹಲವಾರು ಲೇಖನಗಳನ್ನು ತಿರುವಿ ನೋಡಬೇಕಾಯಿತು. ನನ್ನ ಈ ಲೇಖನ ಚಲನಚಿತ್ರ ಮತ್ತು ಆ ವರದಿಗಳ ಮಿಶ್ರಣ.

ಅದಲ್ಲದೆ ಶಿಂಡ್ಲರನ ಕಥ ನನ್ನನ್ನು ಸೆಳೆದಿದ್ದಕ್ಕೆ ಮತ್ತೊಂದು ಕಾರಣವೂ ಇದ್ದಿತು. ನಾವು 2018ರಲ್ಲಿ ನಮ್ಮ ಪೂರ್ವ ಯೂರೋಪ್ ಪ್ರವಾಸದ ಅಂಗವಾಗಿ ಕ್ರಾಕೋವಿನಲ್ಲಿ 3 ದಿನಕಳೆದವು. ವಿಜ್ಞಾನಿ ಕೊಲಾಸ್ ಕೋಪರ್ನಿಕಸನ ಊರು ಎಂದು ನೋಡಲು ಇಚ್ಛೆಯಿತ್ತು. ಯಹೂದಿಗಳ  ಹಳೆಯ ಮೊಹಲ್ಲಾ ಕಾಜಿಮಿರ್ ನಲ್ಲಿಯೇ ಉಳಿದುಕೊಂಡೆವು. ಅದು ಸಿನೆಗಾಗುಗಳ ನಗರ. ಹಲವಾರು ಭವ್ಯ ಸಿನೆಗಾಗುಗಳನ್ನೂ ಮತ್ತು ಯಹೂದಿಗಳ ಹಳೆಯ ಕಥೆಯೊಂದರಿಂದ ನನಗೆ ಇಷ್ಟವಾಗಿದ್ದ ಐಸಾಕನ ಸಿನೊಗಾಗನ್ನೂ ನೋಡಿದೆವು. ಒಂದು ದಿನ ಆಶ್ವಿಜ್ ಕೂಡ ನೋಡಿ  ಸ್ಥಬ್ದರಾಗಿ ಬಂದೆವು. ಆದರೆ ಶಿಂಡ್ಲರನ ಕಾರ್ಖಾನೆಯನ್ನಾಗಲೀ ಘೆಟ್ಟೋಗಳನ್ನಾಗಲಿ ನೋಡಲಾಗಲಿಲ್ಲ, ಇನ್ನೆಂದು ಆಗುತ್ತದೋ ತಿಳಿಯದು)

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Palahalli R Vishwanath

    ನಾನು ಶಿಂಡ್ಲ್ರರನ ಬಗ್ಗೆ ಭಾರತಿಯವರು ಬರೆದ ಲೇಖನವನ್ನು ಈಗ ಓದಿದೆ. ನಾನು ಬರೆಯಲಾಗದ ಮತ್ತು ನನಗೆ ತಿಳಿದಿರದ ವಿಷಯಗಳನ್ನು ಬರೆದಿದ್ದಾರೆ. ಅವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: