ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಡಿದ ಮಾತುಗಳೆಲ್ಲ ವಚನಗಳೇನಲ್ಲ..

 

ಕು ಸ ಮಧುಸೂದನ ನಾಯರ್ / ರಂಗೇನಹಳ್ಳಿ

 

ಸ್ವರ್ಗದ ಕುರುಹಿಲ್ಲವಿಲ್ಲಿ!

 

ಆಡಿದ ಮಾತುಗಳೆಲ್ಲ ವಚನಗಳೇನಲ್ಲ

ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ

ರಕ್ತ ಒಸರುವ ಗತದ ಗಾಯ

ಮುಲಾಮುಗಳಿಗೆಲ್ಲ ಮಾಯುವುದಿಲ್ಲ

ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ

ನರಕದ ಭಯ ಯಾರಿಗಿದೆ ಇಲ್ಲೀಗ?

ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ

ದೇಹವೇ ದೇಗುಲವೆಂಬುದು ನೆನಪಾದೊಡನೆ

ದೂರವಾಗಿ ಮೈಥುನದಾಸೆ

ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ

ಗುಂಪುಗಳಿಂದ ದೂರನಿಂತ

ತರುಣಿಯರ

ತೊಡೆಗಳಿಂದೊಸರುವ ರಕ್ತದಲಿ

ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು

ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ

ಮಸ್ತಕಕ್ಕಿಳಿಸದೆ

ಸುಮ್ಮನೆ ನಡೆದು ಬಿಡು ಅಲೆಮಾರಿಯಂತೆ

ಇಲ್ಲಿ ಸಿಗಲಾರದ್ದು ನಿನಗಿನ್ನೆಲ್ಲಯೂ ಸಿಗಲಾರದು.

ಹಡೆಯುವ ಬಯಕೆಗೆ

 

ಸಂಜೆ ಹುಯ್ಯುವ ಬಿಸಿಲು ಮಳೆ

ಕೃತಕವೆನಿಸಿ

ಕಾಮನಬಿಲ್ಲೂ ಕ್ಷಣಭಂಗುರವೆನಿಸಿ

ತಳಮಳಿಸಿದ ಮನಸು

ಹೊಕ್ಕುಳಾದಳದೊಳಗೆಲ್ಲೊ

ಕಡೆಗೋಲು

ಮಜ್ಜಿಗೆ ಕಡೆದಂತಾಗಿ

ಬಿಟ್ಟ  ಉಸಿರು ನೀಳವಾಗಿ

ಎದೆಬಡಿತ ಜೋರಾಗಿ

ನಿಂತರೆ ಸಾಕು ಮಳೆ

ಬಂದರೆ ಮತ್ತೆ ರವಷ್ಟು ಬಿಸಿಲು

ಮೈಕಾಯಿಸಿಕೊಳ್ಳಬೇಕು

ಸ್ಖಲಿಸಿಕೊಳ್ಳದೆ

ಬಸುರಾಗದೆ

ಹಡೆಯಲಾಗದೆ

ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು

ಉಳಿಸಿಕೊಳ್ಳಬೇಕು

ಮರುಹಗಲು ಬರುವ ಬಿಸಿಲಿರದ

ಬೋರ್ಗರೆಯುವ ಬಿರು ಮಳೆಗೆ

ಸಾದ್ಯವಾದರೆ ಸಂಕೋಚವಿರದೆ

ತುಂಬಿಸಿಕೊಳ್ಳಬೇಕು

ಹಡೆಯುವ ಸಡಗರಕೆ ಸಾಕ್ಷಿಯಾಗಲು….

‍ಲೇಖಕರು avadhi

26 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading