ಶ್ವೇತಾ ಮಂಡ್ಯ
**
ನಾನು ಪ್ರೀತಿಸಲಿಲ್ಲ,
ನಿನಗೆ ದಕ್ಕಲಿಲ್ಲವೆಂದು
ಹತ್ತಾರು ಕನಸುಗಳ
ಹೊತ್ತು ಕಾಲೇಜು ಗೇಟು
ದಾಟುವಾಗಲೇ ಅಟ್ಟಾಡಿಸಿ
ಚುಚ್ಚಿ ಚುಚ್ಚಿ ಕೊಲ್ಲುವ ಬದಲು
ಅಮ್ಮನ ಮಡಿಲಲ್ಲಿ
ಜೋಪಡಿಯ ತಡಿಯಲ್ಲಿ
ದುಡಿದು ಅಮ್ಮನಿಗೊಂದು
ಸೂರು ಕಟ್ಟುವ
ಭವಿಷ್ಯದ ಕನಸು ಕಾಣುತ್ತ
ಮಲಗಿದ್ದಾಗ
ಮೆಲ್ಲನೆ ಸದ್ದಿಲ್ಲದೆ ಇರಿದು
ಕೊಲ್ಲುವ ಬದಲು
ಹದಿನೆಂಟು ತುಂಬದ
ನನ್ನ ಮದುವೆಯ ನೊಗಕ್ಕೆ
ಕಟ್ಟುವ ನಿನ್ನ ಹುನ್ನಾರ
ಕೈ ತಪ್ಪಿದ್ದಕ್ಕೇ ರೊಚ್ಚಿಗೆದ್ದು
ನನ್ನ ರುಂಡ ಕಡಿದು
ಮನೆ ಬಾಗಿಲಿಗೇ
ಹಿಡಿದು ತರುವ ಬದಲು
ಕೊಳಕು ವ್ಯವಸ್ಥೆಯನ್ನು
ಅದರ ಕೊಳಕನ್ನೂ
ಅಮ್ಮ ಪ್ರತಿಭಟಿಸುತ್ತಾಳೆ
ಎಂಬ ಜಿದ್ದಿಗೆ,
ನನ್ನದೂ ಅದೇ ರಕ್ತ
ಗುಣವೆಂಬ ಹಗೆತನಕ್ಕೆ
ನಡು ಮನೆಯಲ್ಲೇ
ಹೀಗೆ ಕುತ್ತಿಗೆ ಕುಯ್ಯುವ
ಬದಲು
ಗರ್ಭದಲ್ಲಿರುವಾಗಲೇ
ಹೆಣ್ಣೆಂದು ಕೊಲ್ಲುವ
ನಿಮ್ಮ ಹಂತಕತನವೇ
ವಾಸಿ..
ಆಗ;
ಎಲ್ಲವೂ
ಸಲೀಸು ನಿಮಗೂ,
ಮತ್ತು
ಹೆತ್ತ ಕರುಳಿಗೂ,
ನಮ್ಮ ಯಾತನೆಗೂ..!
0 ಪ್ರತಿಕ್ರಿಯೆಗಳು