ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಳುಗಿಹೋಗಿದ್ದೆ ನಿನ್ನ ಕಣ್ಣ ಕೊಳದೊಳಗೆ..

ರಂಜಿನಿ ಪ್ರಭು

1

ಮುಳುಗಿಹೋಗಿದ್ದೆ
ನಿನ್ನ ಕಣ್ಣ ಕೊಳದೊಳಗೆ..
ಬಹಳ ಕಾಲ
ಅರಿವಾಗಲೇ ಇಲ್ಲ
ನನ್ನ ಪ್ರತಿಬಿಂಬವೇ
ಅಲ್ಲಿ ಮೂಡಿಲ್ಲವೆಂದು

2.
ದಾಂಪತ್ಯದ ಪಗಡೆಹಾಸು ಹಾಸಿ
ಆಡಲು ಕುಳಿತವರು
ನಾವಿಬ್ಬರು
ದಾಳಗಳನ್ನು ಯಾರುಯಾರೋ
ನಡೆಸಿದರು

3.
ಮರಕ್ಕೆ ಹಬ್ಬಿದ ಮಲ್ಲಿಗೆ ಬಳ್ಳಿ
ಆಗಲೇ ಇಲ್ಲ ಬದುಕು
ಮುಳ್ಳಿನ ಪೊದೆಯ
ಮೇಲೇ ಹೂಗಳನು
ಅರಳಿಸಿಕೊಂಡೆವು

4.
ಕಾಣಿಕೆ ನೀಡಿದೆ ನಾನು
ಗುಲಾಬಿ ತೋಟವನ್ನು
ಎಣಿಸತೊಡಗಿದೆ
ಏಕೆ
ಅದರೊಳಗಿನ
ಮುಳ್ಳುಗಳನು

5.
ಸಾವಿರ ಪದಗಳ ಕವಿತೆಗಿಂತ…
ಒಂದು ಮಾತಿನ
ಮೊನಚು ಮನವ
ತಾಕಿದ್ದು ಹೇಗೆ?

6.
ಈ ಹೃದಯದ ಚಿಂತೆ
ಇಲ್ಲ ಬಿಡು..
ಎಲ್ಲ ನೋವು ಅವಮಾನಗಳಲ್ಲೂ
ನಗಲು ಕಲಿತಿದೆ
ಹಾಳಾದ ಈ ಆತ್ಮದ್ದೇ ಕಷ್ಟ
ಸಣ್ಣ ಮುಳ್ಳಿಗೂ
ಘಾಸಿ ಆಗಿಯೇ
ಬಿಡುತ್ತೆ..

7.
ನೀನು ಸೂಚನೆ ಕೊಡುತ್ತಲೇ ಇದ್ದೆ
ತಳಪಾಯವಿಲ್ಲದ
ಮನೆಯ ಕಟ್ಟಬೇಡವೆಂದು
ದಡ್ಡಿಯಂತೆ
ಮಹಡಿಯ ಮೇಲೆ
ಮಹಡಿ ಕಟ್ಟಿ
ಭಯದಲ್ಲಿ
ಬದುಕುತ್ತಿರುವೆ
ನಾನು

8.
ಬದುಕೆಂದರೆ
ಕನಸುಗಳನು
ಕಾಣುತ್ತಲೇ
ಭ್ರಮೆಗಳನು
ಕಳಚಿಕೊಳ್ಳುವುದಾ?

9.
ಹಾಲೂಡಿದ ಎದೆಯಲ್ಲೇ
ನೋವು ಹೆಪ್ಪಾಗುವುದು
ಸಾಗರವ ಸೇರಲು
ಸುಡು ಮರಳ ಮೇಲೇ ನಡೆಯುವುದು
ನಿಸರ್ಗ ನಿಯಮವೇನೋ

10.
ನಾನೀಗ ಆ ಹಳೆಯ ನಾನಲ್ಲ
ನಾನೀಗ ಹೊಸಾ
ನಾನಾಗಿದ್ದೇನೆ
ಇವೆರಡರ ನಡುವೆ
ನನ್ನನ್ನು ನಾನು
ಕಳೆದುಕೊಂಡಿದ್ದೇನೆ

11.
ಖಾತರಿ ಇದೆ ನನಗೆ
ನಿಂತ ಮೇಲೂ
ಈ ಹೃದಯ ನಿನ್ನ
ಹೆಸರನ್ನೇ ಮಿಡಿಯುತ್ತದೆ..

‍ಲೇಖಕರು avadhi

9 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading