ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕಾಂಕ್ಷಾ ಶೇಖರ್ ಕವಿತೆ- ಕವಿತೆಯೊಂದು!

ಆಕಾಂಕ್ಷಾ ಶೇಖರ್

ಕವಿತೆಯೊಂದು ಹುಟ್ಟುವ ಮೊದಲೇ
ಸತ್ತು ಹೋಯಿತು!
ಅರ್ಧ ಸತ್ತ ನೆನಪುಗಳಿಗೆ
ದನಿಯಾಗಲಾರದೆ!

ಗಾಢ ಮೌನವ ಹೀಗೆ
ಕೆರಳಿಸುವ ಮುನ್ನ;
ಕವಿತೆ ನೀ
ಒಂದು ಮಾತ
ಕೇಳಬಾರದಿತ್ತೆ!?

ಮಾಗಲು ಅಣಿಯಾಗಿದ್ದ ಗಾಯಕ್ಕೆ ನೀ ತುಪ್ಪ ಸುರಿದ್ದಿದ್ದಾದರೂ ಏಕೆ?
ಹೂತಾಕಿಬಿಟ್ಟಿದ್ದ ಕನಸುಗಳ
ಸಮಾಧಿಗೆ ಕೊಕ್ಕೆಯಾಕಿ
ನನ್ನ ಅರ್ಧಜೀವವನ್ನಾಗಿ ಮಾಡಿದ್ದಾದರೂ ಏಕೆ?

ಭಯವಾಗತಿದೆ ಭಾವನೆಗಳ
ಹರಿಬಿಡಲು ನಿನಗೆ,
ಈಗಷ್ಟೇ ಪ್ರಶಾಂತವಾದ ಹೃದಯಕೆ ಕೋಡಿ ಬಿದ್ದರೆ ಹೇಗೆ?

ಉಳಿದು‌ಹೋಗಲಿ ಬಿಡು
ಅರ್ಧ ಸತ್ತು ಅರ್ಧ ಬದುಕಿರುವ
ನೆನಪುಗಳು!
ನನ್ನಿಂದಲೇ ಹಳತಾಗಿ-ಹತವಾದ ಕನಸುಗಳು!
ಬೇಕಾಗಬಹುದು ಇವು
ಮಳೆಗಾಲದ ಮುಸ್ಸಂಜೆಗೆ;
ಆಪ್ತ ಸ್ನೇಹಿತನೊಬ್ಬ ಆಚನಾಕ್ಕಾಗಿ ಸಿಕ್ಕಾಗ ಮಾತಿಗೆ ;
ಕೊನೆಗಾಲದ ಏಕಾಂತಕೆ!

ನನಸಾಗದ ಕನಸುಗಳಿಗೆ,
ಹಳತಾಗಿರುವ ನೆನಪುಗಳಿಗೆ
ಅಕ್ಷರರೂಪವ ಕೊಟ್ಟು ಮತ್ತಷ್ಟು ಬೇಗುದಿಯಲಿ ಬೆಂದು ಹೋಗಲಾರೆ…

ಆಗಲೇ ಕಪಿಯಂತಾಗಿರುವ ಈ ಹೃದಯದ ನೋವ ಕೆರೆದು‌ ಇನ್ನಷ್ಟು ಹುಣ್ಣಾಗಿಸಿಕೊಂಡರೆ ನಾ ಉಸಿರಾಡುವುದಾದರೂ ಹೇಗೆ?

ಹೇಳಬೇಕಾದ ಮಾತುಗಳನು ಗಂಟಲಲ್ಲೇ ಕಟ್ಟಿ‌ ಹಾಕಿ ಗದ್ಗದಿತಳಾಗಿರುವೆ…
ಕ್ಷಮಿಸಿಬಿಡು ಕವಿತೆ,
ನೀ ಹುಟ್ಟುವ ಮುನ್ನವೇ ನಿನ್ನನ್ನು ಕೊಂದಿದ್ದಕ್ಕೆ!

‍ಲೇಖಕರು Admin

28 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading