ನಾ ದಿವಾಕರ ನೋಡಿದ ‘ಸಂಬಂಜ ಅನ್ನೋದು ನಿಜಕ್ಕೂ ದೊಡ್ಡದು ಕನಾ’

ನಾ ದಿವಾಕರ

ದೇವನೂರರ ಕಥೆಗಳ ಪರಿಣಾಮಕಾರಿ ರಂಗಾಭಿವ್ಯಕ್ತಿ ಜನಮನ ತಂಡದ ಹೆಗ್ಗಳಿಕೆ

ಭಾರತದ ಶ್ರೇಣೀಕೃತ ಸಮಾಜ ವಸಾಹತು ದಾಸ್ಯದಿಂದ ವಿಮೋಚನೆಗೊಂಡ ನಂತರ ತನ್ನ ವಾರಸುದಾರಿಕೆಯ ಅಹಮಿಕೆಗಳೆಲ್ಲವನ್ನೂ ತೊರೆದು, ಶೋಷಣೆಯ ಬೇರುಗಳನ್ನು ಕಿತ್ತೊಗೆದು, ಮನುಜ ಸಂಬಂಧಗಳನ್ನು ಬೆಸೆಯುವ ಸೋದರತೆಯ ತಂತುಗಳನ್ನು ಬೇರುಮಟ್ಟಕ್ಕೆ ಇಳಿಸುವ ಮೂಲಕ ಒಂದು ಸಮ ಸಮಾಜವನ್ನು ನಿರ್ಮಿಸುತ್ತದೆ ಎನ್ನುವುದು ಡಾ ಬಿ ಆರ್‌ ಅಂಬೇಡ್ಕರ್‌ ಅವರ ಮಹತ್ವಾಕಾಂಕ್ಷೆಯಾಗಿತ್ತು, ಹಾಗೆಯೇ ಅವರ ಪೀಳಿಗೆಯ ಹಲವಾರು ಸಾಮಾಜಿಕ-ಸಾಂಸ್ಕೃತಿಕ ಚಿಂತಕರ ಕನಸೂ ಆಗಿತ್ತು.

75 ವಸಂತಗಳನ್ನು ಪೂರೈಸಿದ ನಂತರ ಈ ಕನಸು ಸಾಕಾರಗೊಳ್ಳುವುದಿರಲಿ, ಆ ಕನಸುಗಳಲ್ಲಿ ಅಡಗಿದ್ದ ಮೂಲ ಅಶಯಗಳನ್ನಾದರೂ ನಮ್ಮ ಸಮಾಜ ಅರ್ಥಮಾಡಿಕೊಂಡಿದೆಯೇ ಎಂದು ಯೋಚಿಸಿದಾಗ ಮನಸ್ಸು ಖಿನ್ನವಾಗುತ್ತದೆ, ಅಂತರಾಳದ ಹತಾಶೆ ಆಕ್ರೋಶವಾಗಿ ಹೊರಹೊಮ್ಮುತ್ತದೆ. ಈ ಸಾತ್ವಿಕ ಆಕ್ರೋಶ ಮತ್ತು ತಾತ್ವಿಕ ಹತಾಶೆಗಳ ನಡುವೆಯೇ ಈ ದೇಶದ ತಳಸಮುದಾಯಗಳ ಇತಿಹಾಸ ಮತ್ತು ವರ್ತಮಾನದತ್ತ ಕಣ್ಣು ಹಾಯಿಸುವಾಗ ನಮ್ಮ ದೃಷ್ಟಿ ಕೆಲವು ಬೌದ್ಧಿಕ ಕಣಜಗಳತ್ತ ಹೊರಳುವುದು ಅನಿವಾರ್ಯ. ಅಂತಹ ಕಣಜಗಳಲ್ಲಿ ದೇವನೂರು ಮಹದೇವ ಅವರ ಸಾಹಿತ್ಯವೂ ಒಂದು.

75ನೆಯ ಸ್ವಾತಂತ್ರ್ಯೋತ್ಸವದ ಸಂಭ್ರಮದ ಗಳಿಗೆಯಲ್ಲೇ ರಾಜಸ್ತಾನದ ಒಂದು ಊರಿನಲ್ಲಿ ಒಬ್ಬ ದಲಿತ ಬಾಲಕ ಮೇಲ್ಜಾತಿಯವರಿಗಾಗಿ ಇಟ್ಟಿದ್ದ ನೀರು ಕುಡಿದ ಅಪರಾಧಕ್ಕಾಗಿ ʼ ಶಿಕ್ಷಕನೊಬ್ಬನಿಂದ ʼ ಹಲ್ಲೆಗೊಳಗಾಗಿ ಅಸುನೀಗಿದ್ದಾನೆ. ಮತ್ತೊಂದೆಡೆ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮೂರು ವರ್ಷದ ಹಸುಳೆಯನ್ನು ಬರ್ಬರವಾಗಿ ಕೊಂದು, ಹತ್ಯಾಕಾಂಡ ನಡೆಸಿದ ಅಪರಾಧಿಗಳನ್ನು ಬಿಡುಗಡೆಯಾದ ನಂತರ ಸಿಹಿ ಹಂಚಿ ಸ್ವಾಗತಿಸಿ ಸಂಭ್ರಮಿಸುವ ಪ್ರಸಂಗವೂ ನಡೆದಿದೆ.

ಈ ವಿದ್ಯಮಾನಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ? ಯಾವ ನೆಲೆಯಲ್ಲಿ ನಿಂತು ನಮ್ಮ ಗ್ರಹೀತಗಳಲ್ಲಿರಬಹುದಾದ ಕೊರತೆಯನ್ನು ನೀಗಿಸಿಕೊಳ್ಳಲು ಸಾಧ್ಯ ? 21ನೆಯ ಶತಮಾನದ ಡಿಜಿಟಲ್‌ ಯುಗದ ಮೂರನೆಯ ದಶಕದಲ್ಲೂ ಭಾರತೀಯ ಸಮಾಜ ತನ್ನ ಜಾತಿ ಶ್ರೇಷ್ಠತೆ ಮತ್ತು ಪುರುಷಾಧಿಪತ್ಯದ ಪೊರೆಯನ್ನು ಕಳಚಿಕೊಂಡಿಲ್ಲ ಎನ್ನುವ ದುರಂತ ವಾಸ್ತವದ ನಡುವೆಯೇ ದೇವನೂರರ ಸಾಹಿತ್ಯವನ್ನು ನೋಡಿದಾಗ, ಪ್ರಜ್ಞಾವಂತ ಮನಸುಗಳಿಗಾದರೂ ಕೊಂಚ ಮಟ್ಟಿಗೆ ವಾಸ್ತವದ ಅರಿವು ಮೂಡಲು ಸಾಧ್ಯ.

ಓದು, ಅಧ್ಯಯನ, ಚರ್ಚೆ, ವಿಚಾರ ಮಂಥನ ಮತ್ತು ವಾದ-ವಾಗ್ವಾದಗಳ ಒಂದು ಪರಂಪರೆಯನ್ನೇ ದಾಟಿ ಬಂದಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಪುರಾಣ ಮತ್ತು ಮಿಥ್ಯೆಗಳು ಇತಿಹಾಸವಾಗುತ್ತಿದ್ದು, ಚರಿತ್ರೆಯ ಹೆಜ್ಜೆಗಳೆಲ್ಲವೂ ಭ್ರಮಾತ್ಮಕವಾಗುತ್ತಿವೆ. ಅಕ್ಷರ ಪ್ರಪಂಚದಿಂದ ವಿಮುಖವಾದ ಒಂದು ಸಮಾಜ ನಮ್ಮ ನಡುವಿನ ಕಲ್ಪಿತ ಚರಿತ್ರೆ ಮತ್ತು ಊಹಾತ್ಮಕ ವಾಸ್ತವಗಳ ಲೋಕದಲ್ಲಿ ಬಂದಿಯಾಗಿದ್ದರೆ ಮತ್ತೊಂದು ಲೋಕ ತನ್ನ ಬೇರುಗಳನ್ನು ಶೋಧಿಸುವ ಸಲುವಾಗಿಯೇ ಡಾ ಬಿ ಆರ್‌ ಅಂಬೇಡ್ಕರ್‌, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಮುಂತಾದವರ ಚಿಂತನೆಗಳತ್ತ ಮುಖ ಮಾಡಿದೆ.

ಈ ಸಂದಿಗ್ಧತೆಯ ನಡುವೆಯೇ ಲಿಂಗತ್ವ ಸೂಕ್ಷ್ಮತೆ, ಸ್ತ್ರೀ ಸಂವೇದನೆ ಮತ್ತು ಮನುಜ ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಮರುಶೋಧಿಸುವ ಪ್ರಯತ್ನದಲ್ಲಿ ಈ ದೇಶದ ಬಹುಸಂಖ್ಯಾತ ಸಮುದಾಯ ತೊಡಗಿದೆ. ಮನುಜ ಸಂಬಂಧಗಳು ಸಾಪೇಕ್ಷವಾಗುತ್ತಾ ಹೋಗುತ್ತಿರುವಂತೆ ನಮ್ಮ ಸಾಂಪ್ರದಾಯಿಕ ಸಮಾಜ ನಿರ್ಮಿಸಿ ಬಿಟ್ಟಿರುವ ಮತ್ತು ನಾವೇ ನಿರ್ಮಿಸಿಕೊಂಡಿರುವ ಅಸ್ಮಿತೆಯ ಗೋಡೆಗಳನ್ನು ಕೆಡವುದರ ಬದಲಾಗಿ ಎತ್ತರಿಸುತ್ತಲೇ ಹೋಗುತ್ತಿರುವ ಈ ಸನ್ನಿವೇಶದಲ್ಲಿ ದೇವನೂರರ ಐದು ಕಥೆಗಳನ್ನಾಧರಿಸಿದ “ ಸಂಬಂಜ ಅನ್ನೋದು ದೊಡ್ಡದು ಕನಾ ” ಎಂಬ ನಾಟಕ ನಮ್ಮ ಅಂತಃಸಾಕ್ಷಿಯನ್ನು ಕದಡಿಬಿಡುತ್ತದೆ.

ದೇವನೂರು ಅವರ ʼ ಮಾರಿಕೊಂಡವರು ʼ ; ʼ ಮೂಡಲ ಸೀಮೆಲಿ ಕೊಲೆ ಗಿಲೆ ಇತ್ಯಾದಿ ʼ ; ʼ ಡಾಂಬರು ಬಂದುದು ʼ ; ʼ ಅಮಾಸ ʼ ; ಮತ್ತು ʼ ಒಡಲಾಳ ʼ ಕತೆಗಳನ್ನು ಆಧರಿಸಿ ಪ್ರೊ ರಾಜಪ್ಪ ದಳವಾಯಿ ಅವರು ನಿರೂಪಿಸಿರುವ “ಸಂಬಂಜ ಅನ್ನೋದು ದೊಡ್ಡದು ಕನಾ” ನಾಟಕ ನಿನ್ನೆ (26-8-2022) ಮೈಸೂರಿನ ಕಿರುರಂಗ ಮಂದಿರದಲ್ಲಿ ಪ್ರದರ್ಶನವಾಯಿತು. ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ನಟ ಪ್ರಕಾಶ್‌ ರೈ ಅವರ ಸಹಯೋಗದೊಂದಿಗೆ ಜನಮನ ಸಾಂಸ್ಕೃತಿಕ ಸಂಘಟನೆ ಪ್ರಸ್ತುತ ಪಡಿಸಿದ ಈ ರಂಗಪ್ರಯೋಗ ಹಲವು ಕಾರಣಗಳಿಗಾಗಿ ವಿಶೇಷ ಎನಿಸುತ್ತದೆ. ದಲಿತ ಸಮುದಾಯಗಳಲ್ಲೂ ಇಂದಿನ ಶತಮಾನದ ಪೀಳಿಗೆ ಎನ್ನಲಾಗುವ ಯುವ ಮನಸುಗಳು ಎಷ್ಟರ ಮಟ್ಟಿಗೆ ದೇವನೂರು ಅವರನ್ನು ಓದಿರುತ್ತಾರೆ ಅಥವಾ ಓದಿ ಅರ್ಥಮಾಡಿಕೊಂಡಿರುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ನಮ್ಮನ್ನು ಕಾಡುತ್ತದೆ. ಅಂತಹ ಯುವ ಮನಸುಗಳಿಗೆ ಮತ್ತು ವರ್ತಮಾನದ ಬೌದ್ಧಿಕ ಚಿಂತನಾ ವಲಯಕ್ಕೆ ಈ ಐದು ಕತೆಗಳನ್ನು ಒಂದೇ ಎಳೆಯಲ್ಲಿ ಬೆಸೆದು, ದಲಿತ ಸಮುದಾಯದ ಬದುಕು ಮತ್ತು ಸಾಮಾಜಿಕ-ಸಾಂಸ್ಕೃತಿಕ ನೆಲೆಗಳು ಇಂದಿಗೂ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು, ಕ್ಲಿಷ್ಟ ಸವಾಲುಗಳನ್ನು ರಂಗಭೂಮಿಗೆ ಅರ್ಪಿಸಿರುವುದು ಪ್ರೊ ರಾಜಪ್ಪ ದಳವಾಯಿ ಅವರ ಹೆಗ್ಗಳಿಕೆ.

ಈ ನಾಟಕ ರೂಪದ ಐದು ಕತೆಗಳನ್ನು ಎರಡು ಗಂಟೆಯ ಅವಧಿಯಲ್ಲಿ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿರಿಸುವ ದುಸ್ಸಾಹಸವನ್ನೇ ಜನಮನ ಸಾಂಸ್ಕೃತಿಕ ಸಂಘಟನೆ ಮತ್ತು ಅದರ ರೂವಾರಿಗಳಾದ ಜನಾರ್ಧನ್‌ ಜನ್ನಿ, ಸುಮತಿ ಜನ್ನಿ ಮಾಡಿದ್ದಾರೆ. ತಮ್ಮ ಈ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ ಎಂದೂ ಹೇಳಬಹುದು. ದೇವನೂರರ ಐದೂ ಕತೆಗಳು ವಿಭಿನ್ನ ಸನ್ನಿವೇಶಗಳನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಬಿಂಬಿಸುವ ಕಥಾವಸ್ತುಗಳನ್ನು ಹೊಂದಿದ್ದರೂ ಅಮಾಸನಿಂದ ಒಡಲಾಳದ ಹಿರಿಯಜ್ಜಿಯವರೆಗೆ ಮನುಜ ಸಂಬಂಧಗಳು ಹೇಗೆ ನಮ್ಮ ಶ್ರೇಣೀಕೃತ ಸಮಾಜದ ಕ್ರೌರ್ಯ ಮತ್ತು ಅಸಹನೆಯ ನಡುವೆ ಬೆಸೆದುಕೊಳ್ಳುತ್ತವೆ ಎನ್ನುವುದನ್ನು ಈ ರಂಗಪ್ರಯೋಗ ಸ್ಪಟಿಕ ಸ್ಪಷ್ಟತೆಯಿಂದ ನಿರೂಪಿಸುತ್ತದೆ. ಆಧುನಿಕ ಭಾರತದ ಸವರ್ಣೀಯ ಸಮಾಜವೊಂದು ತುಳಿತಕ್ಕೊಳಗಾದ ತಳಸಮುದಾಯದ ಯುವ ಮನಸುಗಳನ್ನೂ ತನ್ನೊಳಗೆ ಆವಾಹಿಸಿಕೊಂಡು, ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣದ ನೆಲೆಗಳಲ್ಲಿ ಶೋಷಣೆಗೊಳಗಾದವರ ಕಣ್ಣುಗಳಿಗೂ ಪೊರೆ ಬರುವಂತೆ ಮಾಡಿರುವ ವರ್ತಮಾನದ ಬದುಕಿನ ನಡುವೆ, ಶೋಷಣೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡಿರುವಂತೆಯೇ ಶೋಷಣೆಯನ್ನು ಗ್ರಹಿಸುವ ಮನಸ್ಥಿತಿಯೂ ಭಿನ್ನವಾಗಿಯೇ ಕಾಣುತ್ತಿವೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮತ್ತು ಶೋಷಿತರ ʼಒಡಲಾಳದʼ ವೇದನೆಯನ್ನು ಹೇಗೆ ಹೊರಗೆಡಹುವುದು ? ವರ್ತಮಾನದ ಸಮಾಜ ʼಮಾರಿಕೊಂಡವರ ʼ ನಡುವೆಯೇ ಬದುಕುತ್ತಿದೆ. ಆಳುವ ವರ್ಗಗಳು, ಶೋಷಕ ವರ್ಗಗಳು ಮತ್ತು ಈ ವರ್ಗಗಳಿಗೆ ಒತ್ತಾಸೆಯಾಗಿ ನಿಲ್ಲುವ ಒಂದು ಮೇಲ್ಜಾತಿ-ಮೇಲ್ವರ್ಗದ ಹಿತವಲಯ ಮತ್ತು ಶೋಷಿತ ಸಮುದಾಯದಿಂದಲೇ ಉಗಮಿಸಿರುವ ಒಂದು ಹಿತವಲಯ ಇವತ್ತಿನ ಸಮಾಜದಲ್ಲೂ ʼಅಮಾಸ ʼನನ್ನು ಸೃಷ್ಟಿಸುತ್ತಲೇ ಇದ್ದಾರೆ. ಒಂದು ಕಾಲದಲ್ಲಿ ʼಡಾಂಬರು ಬಂದುದುʼ ಎಂದು ಸಂಭ್ರಮಿಸುವ ಒಂದು ಗ್ರಾಮೀಣ ಪರಿಸರ ಇಂದು ಅಂತರ್ಜಾಲ ಮಾಧ್ಯಗಳ ಆಗಮನದೊಂದಿಗೆ ಬದಲಾಗುತ್ತಾ ಬಂದಿದೆ. ಅಧಿಕಾರ ರಾಜಕಾರಣದ ಲಾಲಸೆಗಳಿಗೆ, ಮಾರುಕಟ್ಟೆ ಆರ್ಥಿಕತೆಯ ಧನಕೂಪಗಳಿಗೆ ತಮ್ಮನ್ನು ತಾವೇ ʼಮಾರಿಕೊಂಡವರುʼ ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ಪುನರ್‌ನಿರ್ಮಿಸಲು ಮುಂದಾಗುತ್ತಿದ್ದಾರೆ. ಈ ಸವಾಲುಗಳ ನಡುವೆ ದೇವನೂರರ ʼ ಮೂಡಲ ಸೀಮೇಲಿ ಕೊಲೆ ಗಿಲೆ ಇತ್ಯಾದಿ ʼ ಇಂದು ನಡೆಯುತ್ತಿರುವ ದ್ವೇಷ ರಾಜಕಾರಣ ಮತ್ತು ಮತಾಂಧತೆಯ ಭೀಕರ ಸನ್ನಿವೇಶಕ್ಕೆ ಕನ್ನಡಿ ಹಿಡಿಯುತ್ತದೆ.

ಸಾಹಿತ್ಯ, ಕಲೆ, ಸಂಗೀತ, ನಾಟಕ ಮತ್ತು ಇತರ ಯಾವುದೇ ಸಂವೇದನಾಶೀಲ ಬೌದ್ಧಿಕ ನೆಲೆಗಳಲ್ಲಿ ಅವಶ್ಯಕವಾಗಿ ಇರಲೇಬೇಕಾದ ʼಸೃಜನಶೀಲತೆʼ ಯ ಎಲ್ಲ ಅವಯವಗಳನ್ನೂ ಹಂತಹಂತವಾಗಿ ಶಿಥಿಲಗೊಳಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ ʼಮನುಜ ಸಂಬಂಧʼ ಎನ್ನುವುದೇ ಮಾರುಕಟ್ಟೆಯ ವಸ್ತುವಾಗಿ ಪರಿಣಮಿಸುತ್ತಿದೆ. ಶೋಷಿತ ಸಮುದಾಯಗಳ ನಡುವೆಯೇ ಮನುಜ ಸಂಬಂಧದ ತಂತುಗಳು ಹಲವು ಕಾರಣಗಳಿಗಾಗಿ ಶಿಥಿಲವಾಗುತ್ತಿರುವ ವಿಷಮ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಪಂಪ ಮಹಾಕವಿಯ ʼಮನುಷ್ಯ ಜಾತಿ ತಾನೊಂದೇ ವಲಂ ʼ ಎಂಬ ಮಾತಿಗೂ , ರಾಷ್ಟ್ರಕವಿ ಕುವೆಂಪು ಅವರ ʼವಿಶ್ವಮಾನವನಾಗುವ ʼ ಸಂದೇಶಕ್ಕೂ ದೇವನೂರರ ʼ ಸಂಬಂಜ ಅನ್ನೋದು ದೊಡ್ಡದು ಕನಾ ʼ ಎಂಬ ಸಂದೇಶಕ್ಕೂ ಇರುವ ಸೂಕ್ಷ್ಮ ಸಂಬಂಧದ ಎಳೆಗಳನ್ನು ಗುರುತಿಸುವುದು ಇವತ್ತಿನ ಆದ್ಯತೆಯಾಗಬೇಕಿದೆ. ಈ ಆದ್ಯತೆಗೆ ಒಂದು ಭೂಮಿಕೆಯನ್ನು ನೀಡುವುದರಲ್ಲಿ ಗೆಳೆಯರಾದ ಜನ್ನಿ , ಸುಮತಿ ಜನ್ನಿ ಮತ್ತು ಅವರ ತಂಡ ಯಶಸ್ವಿಯಾಗಿದೆ. ರಾಜಪ್ಪ ದಳವಾಯಿ ಅವರ ಪರಿಶ್ರಮಮ ಸಾರ್ಥಕವೂ ಆಗಿದೆ.

ಐದು ಕತೆಗಳು, ಐದು ವಿಭಿನ್ನ ಸನ್ನಿವೇಶಗಳು, ಐದು ಸಾಮಾಜಿಕ ಪರಿಸರ ಮತ್ತು ಐದು ಸಾಂಸ್ಕೃತಿಕ ನೆಲೆಗಳಲ್ಲಿ ರಚಿತವಾಗಿರುವ ದೇವನೂರರ ಐದೂ ಕತೆಗಳಲ್ಲಿನ ಸಮಾನ ಎಳೆಯನ್ನು ಈ ದೇಶದ ತಳಸಮುದಾಯಗಳ ಬದುಕಿನ ನಡುವೆ ಇಂದಿಗೂ ಕಾಣಬಹುದಾಗಿದೆ. ಭೌತಿಕ ಜಗತ್ತಿನ ವಾಸ್ತವಗಳು ಮತ್ತು ಸಾಂಸ್ಕೃತಿಕ ಜಗತ್ತಿನ ಭ್ರಮೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಿದಾಗ, ಈ ಐದೂ ಕತೆಗಳಲ್ಲಿನ ಪಾತ್ರಗಳು ಮತ್ತು ಸನ್ನಿವೇಶಗಳು ವರ್ತಮಾನ ಭಾರತದಲ್ಲೂ ಜೀವಂತಿಕೆಯಿಂದಿರುವ ಜಾತಿ ಸೂಕ್ಷ್ಮಗಳನ್ನು ಬಿಡಿಸಿಡುತ್ತವೆ. ಇದನ್ನು ಒಂದೇ ಎಳೆಯಲ್ಲಿ‌ ಹೆಣೆಯುವ ರಾಜಪ್ಪ ದಳವಾಯಿ ಅವರ ಬೌದ್ಧಿಕ ಪರಿಶ್ರಮಕ್ಕೆ ಪೂರಕವಾಗಿ ಜನಮನ ತಂಡ, ನಿರ್ದೇಶಕಿ ಸುಮತಿ ಜನ್ನಿ ಮತ್ತು ಜನಾರ್ಧನ್‌ ಜನ್ನಿ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ರೀತಿಯಲ್ಲಿ ʼ ಸಂಬಂಜ ಅನ್ನೋದು ದೊಡ್ಡದು ಕನಾ ʼ ನಾಟಕವನ್ನು ಜನರ ಮುಂದಿಟ್ಟಿದ್ದಾರೆ.

200ಕ್ಕೂ ಹೆಚ್ಚು ಪಾತ್ರಧಾರಿಗಳು ಬೇಕಾಗುವಂತಹ ಒಂದು ನಾಟಕದ ಎಳೆಯನ್ನು ಮೂವತ್ತು ಯುವ ಕಲಾವಿದರೊಂದಿಗೆ ಪ್ರಸ್ತುತಪಡಿಸಿರುವುದು ಈ ತಂಡದ ಹೆಗ್ಗಳಿಕೆ. ʼ ಸಂಬಂಜ ಅನ್ನೋದು ದೊಡ್ಡದು ಕನಾ ʼ ಎಂಬ ಅಮೂಲ್ಯ ಸಂದೇಶವನ್ನು ತಮ್ಮ ಭಾವಾಭಿನಯದ ಮೂಲಕ, ಭಾವಾಭಿವ್ಯಕ್ತಿಯ ಮೂಲಕ, ಅಷ್ಟೇ ಸೂಕ್ಷ್ಮತೆಯಿಂದ ಪ್ರಸ್ತುತಪಡಿಸಿರುವ ಯುವ ಕಲಾವಿದರು ತಮ್ಮೊಳಗಿನ ಕಲಾಪ್ರತಿಭೆಯನ್ನು ಒರೆಹಚ್ಚಿ ಈ ನಾಟಕವನ್ನು ಜನರ ಮುಂದಿರಿಸಿದ್ದಾರೆ. ಆಂಗಿಕ ಅಭಿನಯವನ್ನೂ ಮೀರಿದ ಒಂದು ಭಾವನಾತ್ಮಕ ಅಭಿವ್ಯಕ್ತಿಯನ್ನು ಕಥಾಹಂದರದ ಆಶಯಗಳಿಗೆ ಪೂರಕವಾಗಿ ಹೊರಹೊಮ್ಮಿಸುವುದರಲ್ಲಿ ಎಲ್ಲ ಕಲಾವಿದರೂ ಯಶಸ್ವಿಯಾಗಿದ್ದಾರೆ. ʼ ಸಂಬಂಜ ಅನ್ನೋದು ದೊಡ್ಡದು ಕನಾ ʼ ಒಂದು ನಾಟಕ ಎಂದು ನೋಡುವುದಕ್ಕಿಂತಲೂ ರಂಗಭೂಮಿಯ ಮೂಲಕ ವರ್ತಮಾನದ ಸಮಾಜಕ್ಕೆ ಒಂದು ಸ್ಪಟಿಕಸ್ಪಷ್ಟ ಸಂದೇಶ ಎಂದು ನೋಡಬೇಕಿದೆ. ಶಿಥಿಲವಾಗುತ್ತಿರುವ ಮನುಜ ಸಂಬಂಧಗಳ ಸೇತುವೆಗಳನ್ನು ಮತ್ತೊಮ್ಮೆ ಗಟ್ಟಿಗೊಳಿಸುವ ಒಂದು ಸಾಂಸ್ಕೃತಿಕ ಪಯಣದಲ್ಲಿ ಜನಮನ ತಂಡದ ಈ ರಂಗಪ್ರಯೋಗವನ್ನು ತನ್ನೊಡನೆ ಕೊಂಡೊಯ್ಯುವ ನೈತಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಜವಾಬ್ದಾರಿ ನಮ್ಮ ಸಮಾಜದ ಮೇಲೆಯೂ ಇದೆ.

ʼಸಂಬಂಧ ಅನ್ನೋದು ದೊಡ್ಡದು ಕನಾʼ ಒಂದು ಅಪೂರ್ವ ರಂಗ ಪ್ರಯೋಗ. ಈ ಪ್ರಯೋಗದೊಡನೆ ಸಂಬಂಧ ಬೆಳೆಸಿಕೊಳ್ಳುವುದರ ಮೂಲಕ ನಾವೆಲ್ಲರೂ ಜನಮನ ತಂಡದೊಡನೆ ಹೆಜ್ಜೆ ಹಾಕಿದರೆ, ಕದಡಿಹೋಗಿರುವ ಸಮಾಜದ ಸಾಂಸ್ಕೃತಿಕ ʼ ಆಳ ಮತ್ತು ಅಗಲ ʼ ವನ್ನು ಸರಿಪಡಿಸಲು ಸಾಧ್ಯವಾಗಬಹುದು. ಮತ್ತೊಮ್ಮೆ ರಾಜಪ್ಪ ದಳವಾಯಿ, ಜನ್ನಿ, ಸುಮತಿ ಜನ್ನಿ ಮತ್ತು ಜನಮನ ತಂಡದ ಸಮಸ್ತರಿಗೂ ಅಭಿನಂದನೆಗಳು. ಎಲ್ಲರೂ ನೋಡಲೇಬೇಕಾದ ನಾಟಕ. ನೋಡಿ.

‍ಲೇಖಕರು Admin

August 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: