ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ಹೀಗೊಂದು ವಾಸ್ತವವಾಗದ ಕಥೆ…


‘ಅಯ್ಯೋ ಈ ಹಾಳು ನೈಟಿ ಹಾಕ್ಕೊಂಡು ನನ್ನ ಜೊತೆ ಬರ್ತೀಯಾ? ಥೂ ಥೂ ಮೊದಲು ಹೋಗಿ ಬಟ್ಟೆ ಬದಲಿಸಿಕೊಂಡು ಬಾ. ಅಂದ್ರೇನೇ ನಾನು ನಿನ್ನ ಕರೆದುಕೊಂಡು ಹೋಗೋದು’ ಅವನ ಮಾತಿನ್ನೂ ಮುಗಿದೇ ಇರಲಿಲ್ಲ ಅವಳು ಅಷ್ಟರಲ್ಲೇ ಅವನನ್ನು ಪರಚುವಂತೆ ದುರುಗುಟ್ಟಿ ನೋಡಿ ‘ನೋಡೋ ನೀ ಏನು ನನ್ನ ಬಟ್ಟೆ ನೋಡಿ ನನ್ನ ಅಳತೆ ಹಾಕೋದು? ನಾ ಬರೋದೇ ಹೀಗೆ. ಬೇಕಿದ್ರೆ ಕರ್ಕೊಂಡು ಹೋಗು, ಇಲ್ಲಾಂದ್ರೆ ನಾನು ನಡೆದೇ ಹೋಗುವವಳು …’. ‘ಅಲ್ಲಮ್ಮಾ ಬಟ್ಟೆ ನೋಡಿ ಅಳತೆ ಅಂತ ಅಲ್ಲ. ನೋಡು, ಆ ಮೊಣಕಾಲಿನವರೆಗಿನ ನೈಟಿ ಎಷ್ಟು ಅಸಹ್ಯವಾಗಿದೆ. ಅದನ್ನ ಎಸೀಬಾರದಾ ಅತ್ಲಾಗೆ? ಶ್ರಿಂಕ್ ಆಗಿ ಅಷ್ಟು ಕೆಟ್ಟದಾಗಿದೆ. ಅದನ್ನೇ ಹಾಕಿ ಯಾಕೆ ಓಡಾಡ್ತೀ?’ ಅವನ ಅನುನಯದ ದನಿ.
ಅವಳು ಇನ್ನಿಷ್ಟು ಸಿಟ್ಟಾಗಿ ‘ಹಲೋ! ನಾನು ತಗೊಂಡಾಗ ಅದು ಕಾಲು ಪೂರ್ತಿ ಮುಚ್ಚುತಿತ್ತು. ಅದ್ಯಾವ್ನೋ ದರಬೇಸಿ ಟೋಪಿ ಹಾಕಿದ್ದ. ಒಂದು ಸಲ ಒಗೆದ ಕೂಡಲೇ ಮೊಣಕಾಲಿಗೆ ಬಂತು! ಹಾಗಂತ ಬಿಸಾಕಿ ಬಿಡೋದಿಕ್ಕೆ ಆಗತ್ತಾ? ಒಂದು ಕೆಲಸ ಮಾಡಿ ಬಿಡ್ತೀನಿ ಇರು, ಒಂದು ರೇಶ್ಮೆ ಲಂಗ – ದಾವಣಿ ಇದೆ. ಅದನ್ನ ಹಾಕ್ಕೊಂಡು ಬರ್ತೀನಿ’ ಅವಳ ಮಾತು ವ್ಯಂಗ್ಯಕ್ಕೆ ತಿರುಗಿದಾಗ ಅವನು ಇದು ಬಗೆಹರಿಯುವ ಕತೆಯಲ್ಲ ಅಂದುಕೊಂಡು ‘ಅಬ್ಬಾ ಅದೇನು ಫಸ್ ಮಾಡ್ತೀಯೇ? ಇಷ್ಟು ಮಾತಾಡೋ ಟೈಮಿನಲ್ಲಿ ಒಂದಿಪ್ಪತ್ತು ಸಲ ಬಟ್ಟೆ ಬದಲಿಸಿ ಬರಬಹುದಿತ್ತು’ … ‘ಹ್ಞೂ ಹ್ಞೂ ಮದ್ವೆ ಮನೆಗೆ ಕರ್ಕೊಂಡು ಹೋಗ್ತಿದೀಯಾ ನೋಡು … ಅದಕ್ಕೆ ಇಪ್ಪತ್ತು ಸಲ ಬಟ್ಟೆ ಬದಲಿಸಿ ಹೀರೋಯಿನ್ ಥರ ಬರ್ತೀನಿ. ನೀನು ಇಷ್ಟು ಮಾತಾಡೋ ಟೈಮಿನಲ್ಲಿ ನಾವು ಇಪ್ಪತ್ತು ಸಲ ಹೋಗಿ ವಾಪಸ್ ಕೂಡಾ ಬರಬಹುದಿತ್ತು. ಹೋಗ್ತಿರೋದು ನೋಡಿದ್ರೆ ದೋಸೆ ಹಿಟ್ಟಿನ ಗ್ರೈಂಡರ್ ಅಂಗಡಿಗೆ ರುಬ್ಬಕ್ಕೆ ಕೊಟ್ಟಿದ್ದ ಹಿಟ್ಟು ತರಕ್ಕೆ. ಅದಕ್ಕೆ ಇಷ್ಟೆಲ್ಲಾ ಮಾತು!
ಈಗೇನು ಫೈನಲ್ಲಾಗಿ ಹೇಳಿಬಿಡು, ಕರ್ಕೊಂಡು ಹೋಗ್ತೀಯಾ, ಇಲ್ಲ ನಾನು ಹೋಗಲಾ?’ ತನ್ನ ಕೆಲಸಕ್ಕೆ ಅಂತ ಅವನು ಬರುತ್ತಿದ್ದರೂ ಇಷ್ಟು ಧಿಮಾಕಿನ ಮಾತು ಅಂತ ಬಯ್ದುಕೊಂಡ … ಮುದ್ದಿನಿಂದ! ಸರಿ, ನಡೆದೇ ಹೋಗು ಅಂತ ಅಪ್ಪಿತಪ್ಪಿ ಹೇಳಿಬಿಟ್ಟರೆ ಮುಂದಿನ ಮೂರು ಘಂಟೆ ಜಗಳ ಕಾಯುತ್ತಾಳೆ ಅಂತ ಅವನಿಗೆ ಗೊತ್ತು. ಅವನು ಹೋಗು ಅಂತ ಹೇಳುವುದಿಲ್ಲ ಅಂತ ಸೆಟೆದು ನಿಂತ ಅವಳಿಗೂ ಗೊತ್ತಿತ್ತು! ಆ ಥರ ಸೊಂಟದ ಮೇಲೆ ಕೈಯಿಟ್ಟು ಸವಾಲು ಹಾಕಿದ ಅವಳನ್ನೇ ನೋಡುತ್ತಾ ‘ಹಾಳಾಗಿ ಹೋಗಲಿ. ಕೂತ್ಕೋ ತೆಪ್ಪಗೆ’ ಅಂದ. ನಗುತ್ತಾ ಕೂತಳು ಬೈಕಿನಲ್ಲಿ ಅವನ ಹಿಂದೆ. ಇದೇನು ಮೊದಲ ಸಲವಲ್ಲ, ಕೊನೆಯ ಸಲವೂ ಅಲ್ಲ ಅನ್ನುವುದೂ ಇಬ್ಬರಿಗೂ ಗೊತ್ತಿದ್ದೇ…
ಅವಳ ಸ್ವಗತ: ನನ್ಗೆ ಅವನನ್ನು ಕಂಡರೆ ತುಂಬ ಇಷ್ಟ. ಅವನಿಗೆ? ಯಾರಿಗೆ ಗೊತ್ತು?! ನಾನು ನೋಡಲು ಚೆಂದವಿಲ್ಲ. ಹಾಗಾಗಿ ನನ್ನನ್ನು ಪ್ರೀತಿಸುವುದು ಅನುಮಾನವಪ್ಪಾ. ಹಾಳಾದೋನು ಒಂದೇ ಒಂದು ದಿನಕ್ಕೂ ಪ್ರೀತಿಸ್ತೀನಿ ಅಂತೆಲ್ಲ ಹೇಳಿಯೂ ಇಲ್ಲ. ನಾನು ಕೇಳಿ ಅವನು ಹೋಗೇ, ನನಗೆ ಆ ತರ ಎಲ್ಲ ಏನೂ ಅನ್ನಿಸಲ್ಲ ಅಂತ ನಕ್ಕುಬಿಟ್ಟರೆ? ಆಮೇಲೆ ಅವನ ಜೊತೆ ಆರಾಮವಾಗಿ ಹೇಗೆ ಮಾತಾಡೋದು? ಅಯ್ಯೋ! ಸಾಧ್ಯವಿಲ್ಲ. ಬೇಡ ಬಿಡು, ಒಂದಿನ ಕಾಲ ಬರುತ್ತೆ … ಆಗ ಅವನಿಗೆ ಹೇಳ್ತೀನಿ. ಸದಾಕಾಲ ಎಳೆಮಗುವನ್ನು ಮಾತಾಡಿಸುವ ಹಾಗೆ ಮಾತಾಡುತ್ತಾನೆ, ಗದರುತ್ತಾನೆ. ಅದು ಪ್ರೀತಿಯೇ? ಉಹ್ಞೂ, ಸಲಿಗೆ ಮಾತ್ರ ಅಂತ ಕಾಣುತ್ತದೆ…
ಅವನ ಸ್ವಗತ: ಈ ಹಾಳು ಹುಡುಗಿ ಯಾಕೆ ಇಷ್ಟು ಇಷ್ಟವಾಗುತ್ತಾಳೋ! ಒಂದು ಸಣ್ಣ ವಿಷಯಕ್ಕೂ ಕಾಲ್ಕೆರೆದು ಜಗಳಕ್ಕೆ ನಿಲ್ಲುತ್ತಾಳಲ್ಲ ಆಗ ಯಾಕೋ ತುಂಬ ಮುದ್ದು ಬರುತ್ತೆ. ಕೊನೆಗೆ ಹಿಟ್ಟು ರುಬ್ಬಿದ್ದನ್ನು ತರೋ ಕೆಲಸಕ್ಕೂ ನನ್ನನ್ನ ಹಚ್ಚಿಕೊಂಡು ಬಿಟ್ಟಳು. ಈಗ್ಲೇ ಹೀಗಾದ್ರೆ ಮುಂದೆ ಮದುವೆ ಆದ್ಮೇಲೆ house husband ಮಾಡ್ಕೊಂಡು ಬಿಡ್ತಾಳೆ ಅನ್ನಿಸತ್ತೆ ತಾಟಗಿತ್ತಿ! ಇರಲಿ ಬಿಡು ಕರೆದುಕೊಂಡು ಹೋಗಿದ್ದು ‘ಅವಳನ್ನು’ ತಾನೇ. ನನಗೆ ಅವಳನ್ನು ಕಂಡರೆ ಇಷ್ಟ ಅಂತ ತಾನೇ ಅವಳು ಹೇಳಿದ್ದೆಲ್ಲ ಮಾಡುವುದು. ಯಾವಳೋ ಕರೆದಿದ್ದರೆ ನಾನು … ‘ನಾನು’ ಹೋಗಿಬಿಡುತ್ತಿದ್ದೆನಾ?! ಇವಳು ಕರೆದಳು ಅಂತ ತಾನೇ ಹೋದೆ …. ಆದರೂ ಯಾಕೋ ಈ ಘಟವಾಣಿ ಇಷ್ಟವಾಗುತ್ತಾಳಪ್ಪಾ ….!

***

‘ಬರ್ತೀಯಾ ಒಂದೈದು ನಿಮಿಷ?’ ಅವನು ಕೂಗಿದ್ದು ಕೇಳಿಸಿ ಓಡುತ್ತಾಳೆ. ಯಾತಕ್ಕೆ ಕರೆದನೋ ಅಂತ ಮನೆಯೊಳಗೆ ಕಾಲಿಟ್ಟವನ ಜೊತೆ ಇನ್ನೊಬ್ಬ ಯಾರೋ ಅಪರಿಚಿತ ಅವನ ಹೆಂಡತಿಯ ಜೊತೆ ಕೂತಿದ್ದು ನೋಡಿ ಅವಳು ತಬ್ಬಿಬ್ಬಾಗುತ್ತಾಳೆ. ಅವನು ಅವರಿಬ್ಬರನ್ನೂ ಅವಳಿಗೆ ಪರಿಚಯಿಸುತ್ತಾನೆ. ಕೆಲಸದವಳು ಚಕ್ಕರ್ ಹಾಕಿದ್ದಕ್ಕೆ ಕಾಲೇಜು ಮುಗಿಸಿ ಬಂದ ಮೇಲೆ ಅವಳಿಗೆ ಪಾತ್ರೆ ತೊಳೆಯುವ ಡ್ಯೂಟಿ ಬಿದ್ದಿತ್ತು. ಬಟ್ಟೆಯ ಮೇಲೆಲ್ಲಾ ಪ್ಲೇಟ್ ಪೌಡರಿನ ಕಲೆಗಳು. ಅರ್ಧಕ್ಕರ್ಧ ಒದ್ದೆಯಾದ ಬಟ್ಟೆ. ಆ ಬಟ್ಟೆಯೋ ಅಮ್ಮನ ಹಳೆಯ ರೇಶ್ಮೆ ಸೀರೆಯನ್ನು ಕಟ್ ಮಾಡಿ ಹೊಲೆಸಿದ್ದ ಮಿಡಿ. ಅಮ್ಮನೇ ವರ್ಷಗಳ ಕಾಲ ಉಟ್ಟು ಜೀರ್ಣ ಮಾಡಿದ್ದಾಗಿತ್ತು. ಈಗಂತೂ ಅದು ವಿರೂಪ ತಾಳಿತ್ತು. ಅವನು ಕರೆದ ದನಿಯಲ್ಲಿ ಏನೋ ತರಾತುರಿ ಕೆಲಸ ಇರಬೇಕು ಅಂದುಕೊಂಡು ಓಡಿ ಬಂದಿದ್ದವಳನ್ನು ಅದೇ ಸ್ಥಿತಿಯಲ್ಲಿ ಪರಿಚಯ ಮಾಡಿಸಿದ ಕೂಡಲೇ ಅವಳು ಅವಮಾನದಿಂದ ಚಡಪಡಿಸಿದಳು. ಹಾಗಂತ ಎದ್ದು ಬರುವ ಹಾಗಿಲ್ಲವಲ್ಲ! ಕಾಟಾಚಾರಕ್ಕೆ ಏನೋ ಮಾತಾಡುತ್ತಾ ಅಲ್ಲೇ ಕೂತಳು. ಗೆಳೆಯನ ಹೆಂಡತಿ ಅವಳನ್ನು ಪಕ್ಕ ಕೂರಿಸಿಕೊಂಡು ಹರಟಿದಳು. ಇವಳೂ ಮನಸಿಲ್ಲದ ಮನಸ್ಸಿನಿಂದ ಮಾತಾಡಿದಳು. ಅಂತೂ ಕೊನೆಗೊಂದು ಸಲ ಅವರಿಬ್ಬರೂ ಹೊರಟರು.
ಅವಳಂತೂ ಕಾಯ್ದು ನಿಂತಿದ್ದವಳಂತೆ ‘ಎಷ್ಟು ಅಸಯ್ಯದ ಬಟ್ಟೆ ಹಾಕ್ಕೊಂಡಿದೀನಿ. ಈ ಅವಸ್ಥೇನಲ್ಲಿ ಅದೇನೋ ಆಕಾಶ ತಲೆ ಮೇಲೆ ಬಿದ್ದೋಗೋ ಹಂಗೆ ಕಿರುಚಿದ್ದು ನೋಡಿ ಏನಾಯ್ತೋ ಅಂತ ಓಡಿಬಂದೆ. ಅಬ್ಬಾ ಥೂ ಅವಮಾನ ಆಗೋಯ್ತು’ ಅಂತ ಅವಳು ಜಗಳ ಶುರು ಹಚ್ಚಿಕೊಂಡಳು. ‘ಅಯ್ಯೋ ರಾಮಾ ನೀನೇನು ಬೀದೀಲಾ ಹೋಗ್ತಿದ್ದಿ? ಮನೆ ಒಳಗೆ ತಾನೇ ಮೀಟ್ ಮಾಡಿದ್ದು. ದೋಸೆ ಹಿಟ್ಟು ತರಕ್ಕೆ ಆ ಕೆಟ್ಟ ಮುಖದ ನೈಟಿ ಹಾಕ್ಕೊಂಡು ಬರ್ತೀ. ಈಗ ಮನೆ ಒಳಗೆ ನನ್ನ ಫ಼್ರೆಂಡ್ಸ್ ಇಬ್ಬರನ್ನ ಮೀಟ್ ಮಾಡಕ್ಕೆ ಬಟ್ಟೆ ಬದಲಿಸಿಕೊಂದು ಬರ್ತಾಳಂತೆ. ಅದೇನು ಮಾತಾಡ್ತೀಯೋ ನೀನು’ ಅವನೂ ಎಗರಾಡಿದ. ಇವಳು ತೆಪ್ಪಗಾಗುವವಳಾ?! ‘ಹಲೋ ಮಿಸ್ಟರ್ ಆ ರೋಡಲ್ಲಿ ಓಡಾಡೋರು ನನಗೆ ಸಂಬಂಧ ಇಲ್ದೇ ಇರೋರು. ಅವರು ಏನೇ ಅಂದುಕೊಂಡರೂ ನನಗೇನೂ ಅವಮಾನವಿಲ್ಲ. ಆದ್ರೆ ನಿನ್ನ ಫ಼್ರೆಂಡ್ಸ್ ಎದುರು ಈ ತರ ಅವತಾರದಲ್ಲಿ ಬಂದ್ರೆ ಅವಮಾನ ಆಗತ್ತೆ ಕಣೋ. ನಿನಗ್ಯಾಕೆ ಇಷ್ಟು ಸಣ್ಣ ವಿಷಯವೂ ಅರ್ಥ ಆಗಲ್ವಲ್ಲಾ’ ಅಂತ ಅವಳ ಸಿಟ್ಟಿನ ವಾದ. ‘ಸಾಕ್ ಸುಮ್ನಿರೇ ಫ಼್ರೆಂಡ್ಸ್ ಎದುರು ಇನ್ನೂ ನಾವು ಆರಾಮವಾಗಿ ನಮ್ಮ ಹಾಗೆ ಇರಬೇಕು. ಬೀದಿಯೋರ ಎದುರೇ ಡೀಸೆಂಟಾಗಿ ಕಾಣಬೇಕು ಅಷ್ಟೇ’ ಅವನೂ ಸೋಲದೆ ವಾದಕ್ಕಿಳಿದ.
‘ಹಾಂ! ನನ್ನ ಡೀಸೆಂಟಾಗಿಲ್ಲದವಳು ಅಂತೀಯಾ? ಹೌದೋ, ನಾನು ಇನ್‌ಡೀಸೆಂಟೇ. ಆಯ್ತಾ? ಇನ್ಮೇಲೆ ನಿನ್ನ ಫ಼್ರೆಂಡ್ಸ್ ಬಂದಾಗ ನನ್ನ ಕರೀಲೂ ಬೇಡ. ನಾನು ಬರೋದೂ ಇಲ್ಲ. ನಿನ್ನ ಫ಼್ರೆಂಡ್ಸಿಗೆ ನನ್ನ ಯಾಕೆ ಪರಿಚಯ ಮಾಡಿಕೊಡ್ಬೇಕು ನೀನು? ಎಂತದ್ದೂ ಬೇಕಾಗಿಲ್ಲ. ಆಯ್ತಾ?’. ‘ಅಬ್ಬಾ ನೀನು ಡೀಸೆಂಟಾಗಿಲ್ಲ ಅಂತ ನಾನು ಅಂದೆನೇನೇ? ಇಲ್ಲದ್ದೆಲ್ಲ ಯಾಕೆ ಮಾತಾಡಿ ಬಾಯಿ ಬಡೀತೀಯ. ಸರಿ ಮಾರಾಯ್ತಿ. ಮುಂದೆ ನನ್ನ ಫ಼್ರೆಂಡ್ಸ್ ಬಂದಾಗ ಹೇಳ್ತೀನಿ…ನನ್ನ ಫ಼್ರೆಂಡ್ಸ್ ಬಂದಿದಾರೆ. ನೀಟಾಗಿ ಡ್ರೆಸ್ ಮಾಡಿ ಬಾ ಅಂತ. ಆಗ ಮತ್ತೆ ನೀನೇನಾದ್ರೂ ನಿನ್ನ ಫ಼್ರೆಂಡ್ಸ್ ಬಂದ್ರೆ ನಾನು ಯಾಕೋ ಡ್ರೆಸ್ ಮಾಡ್ಕೊಂಡು ಬರ್ಬೇಕು?! ನಾನು ಇರೋ ಹಾಗೇನೇ ಬರ್ತೀನಿ ಅಂತ ಜಗಳಕ್ಕೆ ನಿಂತರೆ ಪರಿಣಾಮ ನೆಟ್ಟಗಿರಲ್ಲ ನೋಡು’ ಅವನು ಮಾತು ಮುಗಿಸುವ ಉದ್ದೇಶದಿಂದ ಶಾಂತಿ ಸಂಧಾನಕ್ಕಿಳಿದ. ಮನಸ್ಸಿನಲ್ಲೇ ಮುಸಿ ಮುಸಿ ನಗುತ್ತಾ ಕದನ ವಿರಾಮ ಘೋಷಣೆ ಮಾಡಿದಳು!
ಅವಳ ಸ್ವಗತ: ಥೂ ನಾವಿಬ್ಬರೂ ನೆಟ್ಟಗೆ ಮಾತಾಡಿದ್ದಕ್ಕಿಂತ ವಾದ ವಿವಾದಗಳಲ್ಲಿ ಸೆಟೆದು ನಿಂತದ್ದೇ ಹೆಚ್ಚು! ಇವನು ನನ್ನ ಪ್ರೀತಿಸಲ್ಲ ಬಿಡು. ಪ್ರೀತಿಸ್ತಿದ್ರೆ ಈ ಥರ ಜಗಳ ಕಾಯ್ತಾ ಇರಲಿಲ್ಲ. ಈ ಥರ ಕೆಟ್ಟ ಪರಿಸ್ಥಿತೀಗೆ ನನ್ನ ಸಿಕ್ಕಿಸ್ತಾನಲ್ಲ. ಅಲ್ಲಾ, ಅವನ ಫ಼್ರೆಂಡು ಮತ್ತೆ ಅವನ ಹೆಂಡ್ತಿ ಬಂದರೆ ನನ್ನನ್ನ ಯಾಕೆ ಅವರಿಗೆ ಪರಿಚಯ ಮಾಡಿಕೊಡ್ಬೇಕು ಇವನು? ಮಾಡಕ್ಕೆ ಕೆಲಸ ಇಲ್ಲ ಇವನಿಗೆ. ಸುಮ್ನೇ ಅವಮಾನ ಮಾಡ್ತಾನೆ. ಇನ್ನೊಂದ್ಸಲ ಕರೆದ್ರೆ ನಾನು ಹೋಗ್ತೀನಾ ನೋಡು!
ಅವನ ಸ್ವಗತ: ಅಯ್ಯೋ ಹಾಳು ಹುಡುಗಿಯ ಜೊತೆ ಒಂದು ಜನ್ಮ ಪೂರ್ತಿ ಜಗಳ ಕಾಯುವುದೂ ಚೆಂದವೇ. ಮಾತಿಗೆ ಮಾತು ಸೇರಿಸುತ್ತಾ ಸೊಂಟದ ಮೇಲೆ ಕೈಯಿಟ್ಟು ಜಗಳವಾಡ್ತಾಳಲ್ಲ … ಎಂತ ಮಜವಾಗಿರತ್ತೆ. ನಾನು ಕರೆದ ಕೂಡಲೇ ಓಡಿ ಬರ್ತಾಳೆ. ಹಾಳಾದ್ದು ಎಷ್ಟೊಂದು ಪ್ರೀತಿ ಮಾಡತ್ತೆ ನನ್ನ. ನನ್ನ ಬೆಸ್ಟ್ ಫ಼್ರೆಂಡಿಗೆ ನಾನು ಮದುವೆಯಾಗೋ ಹುಡ್ಗೀನ ತೋರಿಸಬೇಕು ಅಂತಿತ್ತು… ತೋರಿಸಿದ್ದೂ ಆಯ್ತು. ಆದರೂ ಆ ಮಿಡಿ ಏನೂ ಅಂತ ಕೆಟ್ಟದಾಗಿ ಇರಲಿಲ್ಲ. ಚೆನ್ನಾಗೇ ಕಾಣ್ತಿದ್ದಳು. ಸುಮ್‌ಸುಮ್ನೇ ಕಿರಿ ಕಿರಿ ಮಾಡ್ಕೊಳ್ತಾಳೆ ಪಾಪಿ. ಇನ್ನೇನು ಮದುವೆಯಾದ ಮೇಲೆ ಮನೇಲಿ ಯಾವಾಗ್ಲೂ ನೀಟಾಗಿ ಅಲಂಕಾರ ಮಾಡ್ಕೊಂಡಾ ಕೂತಿರ್ತಾಳಾ! ಇದೇ ತರ ತಾನೇ ಇರೋದು…

***

‘ಕುಡಿಯೋ ನೀರು ಬೇಕು ಕಣೋ … ಹಿಡ್ಕೊಂಡು ಹೋಗ್ತೀನಿ …’ ಅಂತ ಬರುತ್ತಾಳೆ. ‘ಇರೇ ಭಾರ ಹೊತ್ಕೊಂಡು ಹೋಗ್ಬೇಡ. ನಾನು ತಂದುಕೊಡ್ತೀನಿ’ ಅಂತ ಕೊಡ ಇಟ್ಟು ಬರುತ್ತಾನೆ ಅವಳ ಮನೆಯಲ್ಲಿ.
‘ನಾನು ಹೊರಗೆ ಹೋಗಿ ಬರ್ತೀನಿ’. ‘ಊಟ ಮಾಡಿದ್ಯಾ?’ ಗೆಳತಿಯರ ಜೊತೆ ಓದಿನಲ್ಲಿ ಮಗ್ನಳಾಗಿದ್ದ ಸಮಯದಲ್ಲೂ ಅವಳಿಂದ ಈ ಪ್ರಶ್ನೆ. ‘ಇಲ್ಲ. ಆಮೇಲೆ ಮಾಡ್ತೀನಿ’. ‘ಆಮೇಲೇನು ಮಾಡೋದು. ಅಮ್ಮ ಸಾರು, ಚಪಾತಿ, ಬದನೆಕಾಯಿ ಪಲ್ಯ ಮಾಡಿಟ್ಟಿದಾಳೆ. ಊಟ ಮಾಡಿ ಹೋಗು’ ಅಂತ ಗದರುತ್ತಾಳೆ. ಅವನು ಊಟ ಮಾಡಿಯೇ ಹೊರಟಿದ್ದು ಅಂತ ಹೇಳುವ ಅಗತ್ಯವಿಲ್ಲ ಅಲ್ಲವಾ?!
‘ನನ್ನ ಫ಼್ರೆಂಡು ಇವಳು, ಸರಳಾ ಅಂತ. ಇವನು …’ ಪರಿಚಯಿಸುತ್ತಾಳೆ. ಅವಳು ಫ಼್ರೆಂಡಿನ ಜೊತೆ ಕಣ್ಣಲ್ಲೇ ಏನೋ ಮಾತಾಡಿಕೊಂಡಿದ್ದನ್ನು ಕಂಡು ಅವನು ನಗುತ್ತಾನೆ ಮನಸಿನಲ್ಲೇ. ಏನು ಹೇಳಿರಬಹುದು ನನ್ನ ಬಗ್ಗೆ? ನಾವಿಬ್ಬರೂ ಮದುವೆಯಾಗ್ತೀವಿ ಅಂತ…? ‘ಹೇಯ್ ಅವನು ನಿಜಕ್ಕೂ ನಿನ್ನ ಇಷ್ಟ ಪಡ್ತಾನೆ ಕಣೆ. ಅವನನ್ನು ನೋಡಿದ್ರೇನೇ ಗೊತ್ತಾಯ್ತು’ ಮರೆಯಾಗುತ್ತಿದ್ದ ಅವನನ್ನೇ ನೋಡುತ್ತಾ ಸರಳಾ ಪಿಸುಗುಟ್ಟುತ್ತಾಳೆ. ‘ಶ್ ಶ್ ಶ್ ಶ್! ಸುಮ್ನಿರು. ನನಗೆ ಗೊತ್ತಾಗದ್ದು ನಿನ್ಗೆ ಹೇಗೆ ಗೊತ್ತಾಯ್ತು’ … ಅವಳು ಗದರುತ್ತಾಳೆ ….
ವಿಚಿತ್ರ ಕೀಳರಿಮೆಯ ಅವಳಿಗೆ ಯಾವತ್ತೂ ಅವನು ಪ್ರೀತಿಸುತ್ತಾನೆ ಅನ್ನುವ ನಂಬಿಕೆ ಬರಲಿಲ್ಲ. ತನ್ನ ಪ್ರೀತಿ ಅವಳಿಗೆ ಗೊತ್ತಾಗಿದೆ, ಓದು ಮುಗಿಯಲಿ. ಆಮೇಲೆ ಮದುವೆಯ ಮಾತು ಎತ್ತೋಣ ಅಂತ ಅವನು ಸುಮ್ಮನುಳಿದ.
ಯಾರೋ ನೋಡಲು ಬಂದವನು, ಒಪ್ಪಿಬಿಟ್ಟಿದ್ದಾನೆ. ಇವನೆಲ್ಲಿ ಹೋದ ಹಾಳಾದವನು. ಈಗ ಒಪ್ಪಿರುವ ಗಂಡನ್ನು ಮದುವೆಯಾಗೋದಿಕ್ಕೆ ಮನಸ್ಸು ಬರ್ತಿಲ್ಲ. ಅವನನ್ನು ಕೇಳಲು ಇದು ಸರಿಯಾದ ಸಮಯ. ಆದರೆ ಇವನು ಊರಿಗೆ ಹೋಗಿ ಒಂದು ತಿಂಗಳಾಯ್ತು. ಇನ್ನೂ ಎಷ್ಟು ದಿನ ಕಾಯುವುದು? ಆಮೇಲೆ ಅವನು ನನಗೆ ನಿನ್ನ ಮೇಲೆ ಆ ಥರ ಭಾವನೇನೆ ಇರ್ಲಿಲ್ಲ ಅಂದುಬಿಟ್ಟರೆ?
ಅವನು ಅಲ್ಲಿಂದ ಮುಂದೆ ಎರಡು ತಿಂಗಳು ಬರಲೇ ಇಲ್ಲ … ಅವಳ ಮದುವೆ ಮುಗಿಯಿತು …
ಯಾಕೆ ಹೀಗೆ ಮಾಡಿದಳು? ಏನಾಯ್ತು ಅವಳಿಗೆ? ಅವಳನ್ನು ಪ್ರೀತಿಸೋದು ಗೊತ್ತಿದ್ದೂ …. ಅಂತ ಅವನು ನಿಟ್ಟುಸಿರಿಟ್ಟ…

***

‘ನಾನು ಬರೋದಿಲ್ಲ ಕಣೋ ನಿಮ್ಮನೆ ಫಂಕ್ಷನ್ನಿಗೆ. ನನ್ನ ಮಗಳು ತುಂಬ ಗಲಾಟೆ ಮಾಡ್ತಾಳೆ’ ಅವಳೆಂದಳು. ‘ನಾನು ಅವಳನ್ನ ನೋಡಿಕೊಳ್ತೀನಿ ಮಾರಾಯ್ತಿ. ಬಾ ಸುಮ್ನೆ’ ಅವನು ಗದರಿದ.
ಇಡೀ ದಿನ ಅವಳ ಮಗಳನ್ನು ಹೊತ್ತು ಅವನು ತಿರುಗಾಡಿದ. ಊಟಕ್ಕೆ ಕೂತಾಗಲೂ ತೊಡೆಯ ಮೇಲೆ ಕೂರಿಸಿಕೊಂಡೇ ಊಟ ಮಾಡಿದ. ಸಂಕೋಚದಿಂದ ಆರಾಮಕ್ಕೆ ಊಟ ಮಾಡು ನೀನು. ಅವಳನ್ನ ನನ್ನ ಕೈಗೆ ಕೊಡು ಅಂದಾಗ ಇಲ್ಲ, ತೊಂದರೆಯೇನೂ ಇಲ್ಲ ಅಂತ ಅವಳ ಮಗಳನ್ನು ಮುದ್ದಿಸಿದ. ನಿನ್ನ ಹಾಗೇ ಇದ್ದಾಳೆ ನಿನ್ನ ಮಗಳು ಅಂದ …
ನೀನು ನನ್ನ ಪ್ರೀತಿಸಿರಲಿಲ್ಲ… ಪ್ರೀತಿಸಿದ್ದೇ ಆಗಿದ್ರೆ ಭಗ್ನಪ್ರೇಮಿಯ ಹಾಗೆ ಸಂಕಟ ಆಗ್ತಿತ್ತು. ಭಗ್ನಪ್ರೇಮಿ ನಿನ್ನ ಹಾಗೆ ನನ್ನ ಮಗಳನ್ನು ಮುದ್ದು ಮಾಡ್ಕೊಂಡು ಕೂತ್ಕೊಳಲ್ಲ. ಸಧ್ಯ ನಿನ್ನನ್ನ ಕೇಳದಿದ್ದದ್ದೇ ಒಳ್ಳೆದಾಯ್ತು. ಕೇಳಿದ್ರೆ ಇವತ್ತು ಈ ರೀತಿ ಆರಾಮವಾಗಿ ಮಾತಾಡ್ಕೊಂಡು ಇರಕ್ಕೂ ಆಗ್ತಿರಲಿಲ್ಲ ಅಂದುಕೊಂಡಳು ಅವಳು …
 

‍ಲೇಖಕರು avadhi

27 June, 2013

ನಿಮಗೆ ಇವೂ ಇಷ್ಟವಾಗಬಹುದು…

9 Comments

  1. santosh

    mdm tumbha ole story ede bhgna premawdru sukhantya vide..! vry nic…

  2. Shwetha Hosabale

    ಒಂಥರಾ ಚೆನ್ನಾಗಿದೆ:-)

  3. sujathalokesh

    ಎಲ್ಲಾ ಪ್ರೀತಿಯೂ ಮದುವೆಯಲ್ಲೇ ಎಂಡ್ ಆಗಬೇಕಾಗಿಲ್ಲ !!!! ಒಂಥರಾ ಚೆನ್ನಾಗಿದೆ 🙂

  4. suguna mahesh

    chennagide … preeti maduveyalle muktayavaagabekilla 🙂

  5. Sarala

    ishta aitu bharati

  6. Sandhya Bhat

    wow…!!! tumbaa chennaagide…

  7. ಸತೀಶ್ ನಾಯ್ಕ್

    ಅವ್ಯಕ್ತ ಭಾವನೆಗಳ ಅರ್ಥ ಮಾಡಿಕೊಳ್ಳೋ ಕಲೆ ಎಲ್ಲರಿಗೂ ಅಷ್ಟು ಸುಲಭಕ್ಕೆ ಬರೋದಿಲ್ಲ. ಮುಖ ನೋಡಿ ಮೊಳ ಹಾಕೋರು ಸಿಕ್ತಾರೆ ಆದ್ರೆ ಮನಸು ನೋಡಿ ಮಣೆ ಹಾಕೋರು ಕಡಿಮೆ. ಅವನ ಪ್ರೀತಿಯನ್ನ ಅವಳು ಒಂದಿಷ್ಟು ಅರ್ಥ ಮಾಡ್ಕೊಂಡಿದ್ದರೆ.. ಅವನೇ ಅವನ ಪ್ರೀತಿಯನ್ನ ಅವಳ ಬಳಿ ಹೇಳಿಕೊಂಡು ಬಿಟ್ಟಿದ್ದರೆ.. ಅವಳೇ ಒಂದು ಸಂಯಮ ಮೀರಿ ಅವಳ ಪ್ರೀತಿಯನ್ನ ಅವನ ಬಳಿ ಹೇಳಿ ಬಿಟ್ಟಿರುತ್ತಿದ್ದರೆ.. ನಮ್ಮೆಲ್ಲರ ಮನಸುಗಳಲ್ಲಿ ಮೊಳೆತ ಹೂವು ಅವರ ಕತೆಯ ಫಲಿತಾಂಶ ಆಗುತ್ತಿತ್ತು. ಆದರೂ ಕಥೆ ಇಷ್ಟ ಆಗದೆ ಉಳಿಯೋಲ್ಲ ಅನ್ನೋ ಹಟಕ್ಕೆ ಬಿದ್ದು ಇಷ್ಟವಾಯ್ತು. ತುಂಬಾನೇ.
    “ನೀನು ನನ್ನ ಪ್ರೀತಿಸಿರಲಿಲ್ಲ… ಪ್ರೀತಿಸಿದ್ದೇ ಆಗಿದ್ರೆ ಭಗ್ನಪ್ರೇಮಿಯ ಹಾಗೆ ಸಂಕಟ ಆಗ್ತಿತ್ತು. ಭಗ್ನಪ್ರೇಮಿ ನಿನ್ನ ಹಾಗೆ ನನ್ನ ಮಗಳನ್ನು ಮುದ್ದು ಮಾಡ್ಕೊಂಡು ಕೂತ್ಕೊಳಲ್ಲ. ಸಧ್ಯ ನಿನ್ನನ್ನ ಕೇಳದಿದ್ದದ್ದೇ ಒಳ್ಳೆದಾಯ್ತು. ಕೇಳಿದ್ರೆ ಇವತ್ತು ಈ ರೀತಿ ಆರಾಮವಾಗಿ ಮಾತಾಡ್ಕೊಂಡು ಇರಕ್ಕೂ ಆಗ್ತಿರಲಿಲ್ಲ ಅಂದುಕೊಂಡಳು ಅವಳು”
    ಭಗ್ನ ಪ್ರೇಮಿಗಳು ಅಂದ್ರೆ ದೇವದಾಸ್ ಆಗಿರಲೇ ಬೇಕಾ..?? ಭಗ್ನಪ್ರೇಮಿಗಳು ಡೀಸೆಂಟ್ ಆಗಿ ಇರಲೇಬಾರದಾ..?? ಹೋಗ್ಲಿ ಅವರ ಪ್ರೀತಿಯನ್ನ ಭಗ್ನ ಪ್ರೇಮ ಅಂದುಕೊಳ್ಳಲೇ ಬೇಕಾ..?? ಅವರಿಬ್ಬರ ಒಡನಾಟದ ಸುಂದರ ಮೆಲುಕುಗಳು ಆಗಬಾರ್ದಿತ್ತಾ..?? ಆ ಹುಡುಗಿ ಯಾಕೆ ಹಾಗೆ ಆ ಹುಡುಗನ ಬಗ್ಗೆ ಒಂದು ಲಿಮಿಟೆಡ್ ಕಲ್ಪನೆಗಳನ್ನಷ್ಟೇ ಕಾಣಬೇಕಿತ್ತು..?? ಹುಡುಗ ಎಷ್ಟ್ ಒಳ್ಳೆಯವನಿದ್ದ.. ಹುಡುಗೀನು ಒಳ್ಳೆಯವಳು ಅನ್ನಿಸಿದ್ದು ಕಲ್ಪನೆಯಾ..??
    ಕಡೆಯ ಸಾಲುಗಳು ಹೀಗೊಂದಿಷ್ಟು ಪ್ರಶ್ನೆಯನ್ನ ಮನಸಲ್ಲಿ ಹುಟ್ಟುಹಾಕಿ ತಮ್ಮ ಪಾಡಿಗೆ ತಾವು ಶಾಂತವಾದವು.

  8. Sandhya

    Woww..chennagide, tumba hattira annisitu nanage 🙂

  9. Suma manjunath

    ಕತೆ ಇಷ್ಟ ಆಯಿತು..ಕಳೆದ ಸಮಯ ತಿರುಗಿ ಬರಲಾರದು..ಭೂತಕಾಲದ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಇರೋದೇ ಉತ್ತಮ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading