ಅಹವಿ ಹಾಡು : ಸತ್ತ ಸಂಬಂಧಗಳ ಬೆರಳು ಬಿಡಿಸಿಕೊಳ್ಳುವ ಕಲೆ…


ನಾವಾಗ ಹೈಸ್ಕೂಲಿನ ಕೊನೆಯ ವರ್ಷದಲ್ಲಿದ್ದೆವು. ಒಂಥರಾ ಕಂಟ್ರೋಲಿಗೇ ಸಿಗದ ಹುಚ್ಚು ಅವತಾರಿಗಳ ಥರ ಬದುಕುತ್ತಿದ್ದೆವು. ಶಂಕರನ ‘ಸೀತಾ-ರಾಮು’ ನೋಡಿದ್ದೇ ನೋಡಿದ್ದು, ನಮಗೂ ‘ಒಂದೇ ಒಂದು ಆಸೆಯು’ ಅಂತ ಶಂಕರ ಹೇಳಿಯೇ ಬಿಡುತ್ತಾನೇನೋ ಅನ್ನುವ ಹಾಗೆ ಕೈ ತುಂಬ ಬಣ್ಣ ಬಣ್ಣದ ಗಾಜಿನ ಬಳೆಗಳನ್ನು ಡಜ಼ನ್ ಲೆಕ್ಕದಲ್ಲಿ ಎರಡೂ ಕೈಗೇರಿಸಲು ಶುರು ಮಾಡಿದ್ದೆವು. ಯಾವುದೋ ಹಿಂದಿ ಸಿನೆಮಾದಲ್ಲಿ ಹೀರೋಯಿನ್ ಸಿಂಧೂರ ಹಚ್ಚಿದ್ದು ಕಂಡು, ಅದನ್ನೂ ಮೆತ್ತಿಕೊಳ್ಳಲು ಶುರು ಮಾಡಿದ್ದೆವು. ಇದಿಷ್ಟೂ ಅವತಾರ ನಮ್ಮ ಹಸಿರು ಸ್ಕರ್ಟ್, ಬಿಳಿ ಶರ್ಟ್ ಮತ್ತು ಕಪ್ಪು ಶೂನ ಯೂನಿಫಾರ್ಮ್ ಜೊತೆಗೆ! ನಿಜಕ್ಕೂ ಅದೆಷ್ಟು ಜನ ನಮ್ಮನ್ನು ನೋಡಿ ನಗುತ್ತಿದ್ದರೋ ಅಂತ ಈಗ ಅನ್ನಿಸುತ್ತದೆ. ಇಂತಹ ಅದ್ಭುತ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದ ನಾನು ಮತ್ತು ನನ್ನಿಬ್ಬರು ಸ್ನೇಹಿತೆಯರನ್ನು ಟೀಚರ್‌ಗಳು ಮಾತನಾಡಿಸುವುದೇ ಬಿಟ್ಟುಬಿಟ್ಟಿದ್ದರು. ನಮಗೋ ತುಂಬ ethnic ಆಗಿ ಡ್ರೆಸ್ ಮಾಡಿದ್ದೇವೆಂಬ ಭ್ರಮೆ! ಹಾಗಾಗಿ ಶಬನಾ ಆಜ಼್ಮಿ, ಸ್ಮಿತಾ ಪಾಟೀಲ್ ಥರ ನಾವೂ ಆಗಿ ಹೋದೆವೆನ್ನುವ ಭ್ರಮೆಯ ಲೋಕದಲ್ಲಿ ಬದುಕುತ್ತಿದ್ದಾಗಲೇ ನಮ್ಮ ಸ್ಕೂಲಿಗೆ ಅವಳ ಆಗಮನವಾಗಿದ್ದು …
ಸ್ಕೂಲು ಶುರುವಾಗಿ ಆಗಲೇ ಒಂದೆರಡು ತಿಂಗಳೇ ಕಳೆದು ಹೋಗಿತ್ತೆಂಬ ನೆನಪು. ಅಡ್ಮಿಷನ್ ಮುಗಿದು ಹೋಯ್ತು, ನಾವು ತುಂಬ ಸ್ಟ್ರಿಕ್ಟ್ ಅಂತೆಲ್ಲ ಬೆನ್ನು ತಟ್ಟಿ ಕೊಳ್ಳುತ್ತಿದ್ದ ಸ್ಕೂಲಿಗೆ ಅವಳು ಅಷ್ಟು ತಡವಾಗಿ ಸೇರಿದ್ದಾದರೂ ಹೇಗೆ ಅನ್ನುವ ಪ್ರಶ್ನೆಯೇ ನಮ್ಮನ್ನು ಅವಳ ಬಗ್ಗೆ ಅಸೂಯೆಗೊಳ್ಳುವ ಹಾಗೆ ಮಾಡಿಬಿಟ್ಟಿತ್ತು. ಜೊತೆಗೆ ಕಮಂಗಿಗಳ ಹಾಗೆ ಡ್ರೆಸ್ ಮಾಡುತ್ತಿದ್ದ ನಮ್ಮೆದುರಲ್ಲಿ ತಿದ್ದಿದ, ತೀಡಿದ, ಬಳ್ಳಿಯಂತಿದ್ದ ಮತ್ತು ತೆಳುವಾಗಿ ಲಿಪ್ ಸ್ಟಿಕ್ ಹಚ್ಚುತ್ತಿದ್ದ ಅವಳು ಹಾಜರಾದಳು. Instant ಆಗಿ ಅವಳನ್ನು ಇಷ್ಟಪಡಬಾರದು ಅಂತ ತೀರ್ಮಾನಿಸಿದ ಹಾಗೆ ಅವಳ ಕಡೆಗೆ ಹದ್ದಿನ ಕಣ್ಣು ಬಿಟ್ಟು ನೋಡಲು ಶುರು ಮಾಡಿದೆವು. ಅವಳು ಮೊಣಕಾಲಿನ ಕೆಳಕ್ಕೂ ಬರುತ್ತಿದ್ದ ಸ್ಕರ್ಟ್ ಹಾಕುತ್ತಿದ್ದಳು. ಬಿಳಿಯ ಶರ್ಟಿನ ಒಳಗಿನಿಂದ ಅವಳ ಬಣ್ಣಬಣ್ಣದ ಬ್ರಾ ಕಣ್ಣಿಗೆ ರಾಚುತ್ತಿತ್ತು. ಜೊತೆಗೆ ಸಿಕ್ಕಾಪಟ್ಟೆ ಕ್ರೀಮ್, ಪೌಡರ್ ಎಲ್ಲ ಹಚ್ಚಿ, ಕೊನೆಗೊಂದು ತೆಳು ಲಿಪ್ ಸ್ಟಿಕ್ ಹಚ್ಚಿರುತ್ತಿದ್ದಳು. ನೋಡಲು ನೀಟಾಗಿದ್ದಳು. ತುಂಬ ಸುಂದರಿಯೇನಲ್ಲ. ಆದರೂ ಅವಳು ಓಡಾಡುತ್ತಿದ್ದರೆ ನಾವು ತುಟಿ ವಕ್ರ ಮಾಡಿ ಅವಳನ್ನೇ ಪರೀಕ್ಷಿಸುವ ಹಾಗೆ ನೋಡುತ್ತಾ ನಿಲ್ಲುತ್ತಿದ್ದೆವು. ನಾವು ಕೆಟ್ಟ ಪಟ್ಟ ಅವತಾರದಲ್ಲಿ ಸ್ಕೂಲಿಗೆ ಹೋಗಿ ಟೀಚರ್‌ಗಳ ಕೈಲೆಲ್ಲ ಸಕತ್ತಾಗಿ ಉಗಿಸಿಕೊಳ್ಳುತ್ತಿದ್ದೆವು. ಆ ಹುಡುಗಿ ಈ ರೀತಿ ಸ್ಕೂಲಿಗೆ ಬಂದಾಗ ‘ಇನ್ನು ಇವಳಿಗೂ ಗ್ರಹಚಾರ ಬಿಡಿಸುತ್ತಾರೆ ನೋಡು’ ಅಂತ ನಾವು ಮಾತಾಡಿಕೊಂಡೆವು. ಆದರೆ ಹಾಗೇನೂ ಆಗಲೇ ಇಲ್ಲ!! ನಮಗೆ ಸಿಟ್ಟು, ಅಸೂಯೆ, ರೋಷ ಎಲ್ಲ ಬಂದಿದ್ದು ಈ ಕಾರಣಕ್ಕಾಗಿಯೇ ಇರಬೇಕು.
ಈ ರೀತಿ ನಾಜೂಕಾಗಿ ಡ್ರೆಸ್ ಮಾಡಿಕೊಂಡು ಬರುತ್ತಿದ್ದ ಅವಳು ಮತ್ತೂ ಒಂದು ವಿಷಯದಲ್ಲಿ ನಮಗಿಂತ ಭಿನ್ನವಿದ್ದಳು. ಆಗೆಲ್ಲ ಸ್ಕೂಲು, ಕಾಲೇಜಿಗೆ ಹೋಗಲು ನಟರಾಜ ಸರ್ವಿಸ್ ಅಥವಾ ಅಬ್ಬಬ್ಬಾ ಎಂದರೆ ಬಸ್ಸು. ಅದರಿಂದಾಚೆಯ ಸೌಕರ್ಯ ಯಾರೂ ಕಾಣುತ್ತಲೇ ಇರಲಿಲ್ಲ, ತುಂಬ ಶ್ರೀಮಂತ ಸ್ಕೂಲುಗಳಲ್ಲಿ ಇದ್ದರೋ ಏನೋ, ಆದರೆ ನಮ್ಮ ಶಾಲೆಯಲ್ಲಂತೂ ಇರಲಿಲ್ಲ. ಇವಳನ್ನು ಖುದ್ದು ಅವಳ ಅಪ್ಪ ಕಾರಿನಲ್ಲಿ ಸ್ಕೂಲಿಗೆ ಡ್ರಾಪ್ ಮಾಡಿ ಹೋಗುತ್ತಿದ್ದರು. ನಾವು ಕಾಲೆಳೆದುಕೊಂಡು ಮಧ್ಯಾಹ್ನ ಹನ್ನೆರಡಕ್ಕೆ ಶುರುವಾಗುತ್ತಿದ್ದ ಸ್ಕೂಲಿಗೆ ಬಿಸಿಲಲ್ಲಿ, ಎಣ್ಣೆ ಮುಖದಲ್ಲಿ ತಲುಪಿದರೆ ಅವಳು ಆಗ ತಾನೇ ಅರಳಿದ ಹೂವಿನ ಹಾಗೆ ಫ್ರೆಷ್ ಆಗಿ ಕಾರಿನಲ್ಲಿ ಬಂದಿಳಿದು, ಬಳುಕುತ್ತಾ ಪ್ರೇಯರ್‌ಗೆ ನಿಂತಿದ್ದ ಸಾಲಿಗೆ ಬಂದು ನಿಲ್ಲುತ್ತಿದಳು. ಒಂದು ಸೈಕಲ್ಲೂ ಗತಿಯಿಲ್ಲದ ನಾವು, ಅವಳ ಅಪ್ಪ ನಮ್ಮೆಲ್ಲರ ತಲೆಯ ಮೇಲೆ ಹೊಡೆದು, ನಮ್ಮ ಆಸ್ತಿ ಕಿತ್ತುಕೊಂಡೇ ಕಾರು ಕೊಂಡಿದ್ದಾರೇನೋ ಅನ್ನುವ ಹಾಗೆ ಅವಳನ್ನು ಸಣ್ಣಗೆ ದ್ವೇಷಿಸುತ್ತಾ, ಅದರಲ್ಲೇ ಸುಖ ಕಾಣತೊಡಗಿದೆವು!!
ನಿಜಕ್ಕೂ ಹೇಳಬೇಕೆಂದರೆ ಪಾಪದ ಹುಡುಗಿ ತುಂಬ ಸಾಧುವಾಗಿದ್ದಳು ಮತ್ತು ಸರಳವಾಗಿಯೂ ಇದ್ದಳು. ನಮಗಿಂತ ಎರಡು ವರ್ಷ ಕಡಿಮೆ ಕ್ಲಾಸಿನಲ್ಲಿದ್ದ ಅವಳು ಆಗೀಗ ಎದುರಾದಾಗ ದುರುಗುಟ್ಟಿ ನೋಡುತ್ತಿದ್ದ ನಮ್ಮ ಕಡೆಗೆ ಕಿರು ನಗು ಬೀರಿದರೆ, ನಾವು ಪಾಪಿಗಳು ಅವಳ ಕಡೆಗೆ ನೋಟವೂ ಬೀರದೇ ಮುಂದೆ ಹೋಗಿಬಿಡುತ್ತಿದ್ದೆವು. ನಮ್ಮ ರಿಯಾಕ್ಷನ್ ಈ ರೀತಿ ಇದ್ದರೆ, ನಮ್ಮ ಟೀಚರ್‌ಗಳ ಕಥೆ ನೋಡಬೇಕು. ಅವಳನ್ನು ತುಂಬ ಪ್ರೀತಿಯಿಂದ ಮಾತಾಡಿಸುವುದೇನು, ನಗುವುದೇನು! ದರಿದ್ರ ಅವತಾರದಲ್ಲಿ ಸ್ಕೂಲಿಗೆ ಬರುತ್ತಿದ್ದ ನಮ್ಮನ್ನು ಕೆಂಗಣ್ಣಿನಲ್ಲಿ ಮಾತಾಡಿಸುತ್ತಿದ್ದ ಟೀಚರ್‌ಗಳು , ಅವಳನ್ನು ಮಾತ್ರ ಆ ಈತಿ ಅನುನಯಿಸುವುದು ನೋಡಿ ಇನ್ನಿಷ್ಟು ಸಿಟ್ಟಾಗುತ್ತಿದ್ದೆವು ಮತ್ತು ಅದೇ ಕಾರಣಕ್ಕಾಗಿ ಏನೇ ಆದರೂ ಅವಳನ್ನು ಮಾತಾಡಿಸಬಾರದು ಅಂತ ಶಪಥ ತೊಟ್ಟವರ ಹಾಗೆ ಬದುಕುತ್ತಿದ್ದೆವು.
ಹೀಗಿರುವಾಗಲೇ ನಮ್ಮ ಸ್ಕೂಲ್ ಡೇ ಬಂದಿತು. ಯಾವ ಅದ್ಭುತ ಪ್ರತಿಭೆಯೂ ಇಲ್ಲದ ಸ್ಕೂಲಿನಲ್ಲಿ ಮಾಡುವ ಸ್ಕೂಲ್ ಡೇ ತುಂಬ ಸಾಧಾರಣವಾಗಿರುತ್ತಿತ್ತು. ವಾಚು ಕಟ್ಟಿದ್ದ ಕೈಯನ್ನು ಇನ್ನೊಂದು ಕೈನ ಮೇಲಿಟ್ಟು ಕೆಟ್ಟ ಪೋಸ್ ಕೊಟ್ಟು ಹಾಡುತ್ತಿದ್ದ ಒಂದೆರಡು ಭಾವಗೀತೆಗಳ ಗ್ರೂಪ್ ಸಾಂಗ್, ಬಿ. ಸರೋಜಾದೇವಿಯವರ ಥರವೇ ಕಿತ್ತೂರು ರಾಣಿ ಚೆನ್ನಮ್ಮ ಕೂಡ ಇದ್ದರೇನೋ ಅಂತನ್ನಿಸುವಂಥ ವೇಷ ಭೂಷಣ ತೊಟ್ಟು, ‘ಕಪ್ಪ , ನಿಮಗೇಕೆ ಕೊಡಬೇಕು ಕಪ್ಪ’ ಅಂತ ಅಬ್ಬರದ ಡೈಲಾಗ್ ಇದ್ದ ಒಂದು ನಾಟಕ, ಒಂದೆರಡು ಸಿನೆಮಾ ಮಾತುಗಳ ಮಿಮಿಕ್ರಿ, ಒಂದೆರಡು ದೇವರ ನಾಮದಲ್ಲಿ ನಮ್ಮ ಸ್ಕೂಲ್ ಡೇ ಮುಗಿಯುತ್ತಿತ್ತು. ಈ ಸಲ ಸ್ಟೇಜ್ ಪೂರಾ ಹೊಸ ರೂಪ ತಳೆದು ಬಿಟ್ಟಿತು. ಸಿನೆಮಾದಲ್ಲಿ ಸೆಟ್‌ಗಳಿರುತ್ತವಲ್ಲ, ಆ ರೀತಿಯ ಸ್ಟೇಜ್ ನಿರ್ಮಾಣವಾಯ್ತು. ಹಿಂದೆಲ್ಲ ಏನೇನೋ ಪರದೆಗಳು, ಸ್ಟೇಜ್ ತುಂಬ ಏನೇನೋ ಪರಿಕರಗಳು. ನಾವು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿರುವಾಗಲೇ ಬಿಳಿ ಸೀರೆಯುಟ್ಟು, ಕೊಂಡೆ ಕಟ್ಟಿ ಕನಕಾಂಬರ ಸುತ್ತಿದ, ಬಳುಕುತ್ತಿದ್ದ ಅವಳು ಹಾಜರಾದಳು. ಅಲ್ಲಿಯವರೆಗೆ ಅವಳು ನಟಿಸಬಹುದು ಅನ್ನುವ ಕಲ್ಪನೆ ಕೂಡಾ ಇಲ್ಲದ ನಾವು ದಂಗು ಬಡಿದವರಂತೆ ಅವಳನ್ನೇ ನೋಡುತ್ತಾ ಕೂತೆವು.
ಅವಳು ಅಭಿನಯಿಸಿದ್ದ ‘ಶಾಕುಂತಲ’ ನಾಟಕ ಅಂತ announce ಮಾಡಿದರು. ನಾವು ಬಾಯಿ ಬಿಟ್ಟು ನೋಡುತ್ತಿರುವಂತೆಯೇ ಅವಳ ನಾಟಕ ಶುರುವಾಯಿತು. ಅಂಥ ಅದ್ಭುತ ನಟನೆ ಅಂತ ಅನ್ನಿಸದಿದ್ದರೂ ನಮ್ಮ ಶಾಲೆಯ ಲೆಕ್ಕಕ್ಕೆ ತೆಗೆದುಕೊಂಡರೆ ಅವಳಿಗೆ ಆಸ್ಕರ್ ಪ್ರಶಸ್ತಿಯೇ ಸಿಗಬೇಕು! ಅವಳ ನಟನೆಗಿಂತ, ಆ ಸ್ಟೇಜ್ ನಾಟಕಕ್ಕೆ ತುಂಬ ಕಳೆ ಕೊಟ್ಟಿತ್ತು. ಮಾರುದ್ದದ ಡೈಲಾಗನ್ನು ಅಚ್ಚುಕಟ್ಟಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿದಳು ಮತ್ತು ನಿಜಕ್ಕೂ ನಮ್ಮ ಶಾಲೆಯ ಹೀರೋಯಿನ್ನೇ ಆಗಿಹೋದಳು! ನಮ್ಮ ಹೆಡ್ ಮಾಸ್ಟರ್ ಮುಖದಲ್ಲಿ ನಾವು ಎಂದೂ ನಗು ಅನ್ನುವುದನ್ನೇ ಆವರೆಗೆ ಕಂಡಿರಲಿಲ್ಲ. ಅಂಥವರು ಅವಳು ಎದುರಾಗಿ ಗುಡ್ ಮಾರ್ನಿಂಗ್ ಹೇಳಿದರೆ ಮುಖದ ತುಂಬ ಬೆಳದಿಂಗಳಿನ ನಗು ಹರಡಿಸಿಕೊಳ್ಳುತ್ತಿದ್ದರು. ಎಲ್ಲರ ಕಣ್ಮಣಿಯಾಗಿ ಹೋದಳು.
ಅಷ್ಟರಲ್ಲಿ ಒಂದು ಆಘಾತಕಾರಿ ಸುದ್ಧಿ ….
ರೇಷಿಮೆಯಂತ ಕೂದಲಿನ, ಮುದ್ದು ಮುದ್ದಾಗಿದ್ದ, ಅದ್ಭುತ ನಟನಾಗಿದ್ದ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ‘ನಮ್ಮ ಶಂಕರನ ಅಣ್ಣನಾಗಿದ್ದ’ ಅನಂತ್‍ ನಾಗ್ ಜೊತೆ ಅವಳು ಅಭಿನಯಿಸಿದ ಸಿನೆಮಾ ರಿಲೀಸ್ ಆಗಿತ್ತು!! ಹೀಗೊಂದು ಸಿನೆಮಾದಲ್ಲಿ ಅವಳು ನಟಿಸುತ್ತಿದ್ದಾಳೆ ಅಂತ ಕೂಡಾ ಸುಳಿವಿರದ ನಮಗೆ ಅದು ನಿಜಕ್ಕೂ ಶಾಕ್. ಅನಂತ್ ನಾಗ್ ಜೊತೆ ನಟಿಸುವಂಥ ದೊಡ್ಡ ಹೀರೋಯಿನ್ ಆಗುವಂಥವಳು ಅನ್ನುವುದು ನಾವು ಊಹಿಸಿಯೂ ಇರಲಿಲ್ಲ. ಏನೋ ಸ್ಕೂಲ್ ನಾಟಕಗಳಲ್ಲಿ ಅಭಿನಯಿಸುತ್ತಾಳಷ್ಟೇ ಅಂದುಕೊಂಡಿದ್ದವಳು ಅನಂತ್ ನಾಗ್ ಜೊತೆ ಅಭಿನಯಿಸಿ ಬಿಟ್ಟಾಗ, ಇಡೀ ಸ್ಕೂಲು ಅವಳನ್ನು ಹೊಸ ಬೆಳಕಿನಲ್ಲಿ ನೋಡಲು ಶುರು ಮಾಡಿತು. ನಾವು ಶುದ್ಧ ಅಸೂಯೆಯಿಂದ ಆ ಸಿನೆಮಾ ನೋಡಿ ಬಂದೆವು. ಅನಂತ್ ಎದುರು ಎಂಥ ಸಾಧಾರಣವಾಗಿ ಅಭಿನಯಿಸಿದ್ದಾಳೆ ಅಂತ ಮಾತಾಡಿಕೊಂಡು, ಸಮಾಧಾನ ಪಟ್ಟುಕೊಂಡೆವು! ಅಲ್ಲಿಂದ ಮುಂದೆ ನಮ್ಮ ಸ್ಕೂಲಿನ ಓದು ಮುಗಿಯಿತು. ಸ್ಕೂಲಿನಿಂದ ಕಾಲೇಜಿಗೆ ಹೊರಟಿದ್ದಾಯ್ತು.
ಅವಳು ಮರೆತೂ ಹೋದಳು. ಒಂದಿಷ್ಟು ವರ್ಷ ಕಳೆದ ಮೇಲೆ ಒಂದು ದಿನ ನಮ್ಮ ಮನೆಗೆ ಬಂದಿದ್ದ ನೆಂಟರಲ್ಲಿ ಯಾರೋ ತಂದಿದ್ದ ತಮಿಳು ಪತ್ರಿಕೆಯೊಂದರಲ್ಲಿ ಅವಳ ಫೋಟೋ ನೋಡಿ ಬೆರಗಾದೆ. ಇವಳು ಯಾರು ಅಂತ ವಿಚಾರಿಸಿದರೆ, ಅಷ್ಟು ಹೊತ್ತಿಗಾಗಲೇ ತಮಿಳಿನಲ್ಲಿ ಸಾಕಷ್ಟು ಹೆಸರು ಪಡೆದ ನಟಿಯಾಗಿ ಹೋಗಿದ್ದಳು! ಮೂಗಿನ ಮೇಲೆ ಬೆರಳಿಟ್ಟೆ. ತಮಿಳಿನ ಪ್ರಸಿದ್ಧ ನಿರ್ದೇಶಕರೊಬ್ಬರು ‘ಯಾರಿಂದ ಬೇಕಿದ್ದರೂ ನಟನೆ extract ಮಾಡಬಹುದು, ಇವಳಿಂದ ಅಸಾಧ್ಯ’ ಅನ್ನುವ ಹೇಳಿಕೆ ಕೊಟ್ಟಿದ್ದರು ಅಂತ ನನ್ನ ನೆಂಟರು ಹೇಳಿದರು. ಹಾಗಿರುವಾಗ ಅಷ್ಟು ಫೇಮಸ್ ಹೇಗೆ ಆದಳು ಅಂತ ಕೇಳಿದೆ. ಅದು ಅವರಿಗೂ ಗೊತ್ತಿರಲಿಲ್ಲ. ಅದು ಕೊನೆಯ ಬಾರಿ ನಾನು ಅವಳನ್ನು ನೆನಪಿಸಿಕೊಂಡ ಕ್ಷಣ …
ಮೊನ್ನೆ ಮೊನ್ನೆ ಯಾತಕ್ಕೋ ಅವಳು ನೆನಪಾದಳು. ಈಗ ಇಂಟರ್‌ನೆಟ್ ಅನ್ನುವ ದೇವರಿರುವಾಗ ನಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವುದು ಅದೆಷ್ಟು ಸುಲಭ! ಹಾಗಾಗಿ ಬಲೆ ಹಾಕಿ, ಅವಳ ಸುದ್ಧಿ ಸಿಗುತ್ತಾ ಅಂತ ಹೊರಟೆ. ಅವಳ ಹೆಸರಿನ ಸರ್ಚ್ ಕೊಟ್ಟ ಕೂಡಲೇ ರಾಶಿ ರಾಶಿ ರಿಸಲ್ಟ್ ನನ್ನ ಲ್ಯಾಪ್ ಟಾಪಿನ ತುಂಬ ರಾರಾಜಿಸಿತು! ನಾನು ‘ಒಹೋ! ಸಖತ್ ಫೇಮಸ್ ಆಗಿ ಹೋಗಿದಾಳೆ ಈ ಹುಡುಗಿ’ ಅಂತ ಯಾವುದೋ ಪುಟ ತೆರೆದರೆ ಹುಟ್ಟಿದ ದಿನಾಂಕದ ಜೊತೆ ಸತ್ತ ದಿನಾಂಕವೂ ಇತ್ತು!! ನನಗೆ ಮತ್ತೆ ಮತ್ತೆ ಶಾಕ್ ಕೊಡುವುದರಲ್ಲಿ ಅವಳಿಗೆ ಅದೇನು ಖುಷಿಯೋ. ಒಂದೊಂದೇ ಪುಟ ತೆಗೆದು ಓದುತ್ತಾ ಹೋದೆ ….

ಅವಳು ತಮಿಳಿನಲ್ಲಿ ಸುಮಾರು ಸಿನೆಮಾಗಳಲ್ಲಿ ನಟಿಸಿದ್ದಳು. ಆ ನಂತರ ಯಾವುದೋ ಸಿನೆಮಾ ಶೂಟಿಂಗ್‌ನಲ್ಲಿ ಅಸಾಧ್ಯ ಬೆನ್ನು ಮತ್ತು ಕಾಲಿನ ನೋವು ಶುರುವಾಗಿ ಹೋಗಿತ್ತು. ಆ ನಂತರ ಆಪರೇಷನ್ ಮಾಡಿಸಿಕೊಂಡಿದ್ದೂ ಆಯ್ತು. ಅದರಲ್ಲಿ ಸಿಕ್ಕಾಪಟ್ಟೆ complication ಆಗಿ , ನಡೆಯಲಾರದ ಸ್ಥಿತಿ ತಲುಪಿದ್ದಳಂತೆ. ಅಂದರೆ ಪೂರಾ paralysed ಸ್ಥಿತಿ! ಸುಮಾರು ದಿನ ವೀಲ್ ಛೇರ್‌ನಲ್ಲಿ ಓಡಾಡಿದ್ದಾಳೆ. ಆಪರೇಷನ್ ಸರಿಯಾಗಿ ಮಾಡಿಲ್ಲವೆಂದು ಆ ಆಸ್ಪತ್ರೆಯ ವಿರುದ್ಧ ಕೇಸ್ ಹಾಕಿದ್ದಾಳೆ ಕೂಡಾ. ಆಸ್ಪತ್ರೆ ಅವಳಿಗೆ ಆಪರೇಷನ್ ಆದ ಖರ್ಚನ್ನು ಮಾತ್ರ ಕೊಡಲು ಮುಂದೆ ಬಂದಿತಂತೆ. ಅವಳು ಅದಕ್ಕೆ ಒಪ್ಪದೇ ಹೋದಾಗ, ಆ ಆಸ್ಪತ್ರೆ ಮತ್ತೆ ಅವಳಿಗೆ ಆಪರೇಷನ್ ಮಾಡಿಸುವ ಹೊಣೆ ಹೊತ್ತುಕೊಂಡಿತಂತೆ. ಅಂತೂ ಕೊನೆಗೊಮ್ಮೆ ಅವಳು ಮತ್ತೆ ನಡೆಯಲು ಸಾಧ್ಯವಾಯ್ತಂತೆ. ಅಷ್ಟರಲ್ಲಿ ಅವಳ ಬದುಕಿನ ನಾಲ್ಕು ವರ್ಷಗಳೇ ಮುಗಿದು ಹೋಗಿದ್ದವು. ಛಲದಿಂದ ಮತ್ತೆ ಕಾಲು ಸರಿ ಪಡಿಸಿಕೊಂಡು ನಡೆಯಲು ಶುರು ಮಾಡಿದ್ದಲ್ಲದೇ, ಮತ್ತೆ ಸಿನೆಮಾದಲ್ಲೂ ನಟಿಸುವ ಅವಕಾಶ ದೊರಕಿಸಿಕೊಂಡಳಂತೆ.
ನಾನು ಕಂಡಿದ್ದ ಆ ಸೌಮ್ಯ ಮುಖದ ಕೆಳಗಿದ್ದ ಈ ಛಲಗಾತಿ ನನಗೆ ಅಪರಿಚಿತಳಾಗಿದ್ದಳು! ನಾನು ಎಲ್ಲವನ್ನೂ ಬೆರಗಿನಿಂದ ಓದುತ್ತಾ ಹೋದೆ …
ಆ ಮುಂದಿನ ಕಥೆ: ಯಾರೋ ಒಬ್ಬ ಮದುವೆಯಾಗಿದ್ದ ನಿರ್ದೇಶಕನನ್ನು ಪ್ರೇಮಿಸಿದಳಂತೆ. ಅವನಿಗೆ ಆಗಲೇ ಮದುವೆಯಾಗಿದ್ದರಿಂದ, ಅವಳನ್ನು ಮದುವೆಯಾಗುವ ಯಾವ ಸಾಧ್ಯತೆಯಿರಲು ಸಾಧ್ಯ? ಹಾಗಿದ್ದೂ ಅವನು ತನ್ನನ್ನು ಮದುವೆಯಾಗುತ್ತಾನೆ ಅಂತ ಯಾಕೆ ನಂಬಿದಳೋ? ಈ ಪ್ರೇಮ ಅನ್ನುವುದು ಒಬ್ಬ ವ್ಯಕ್ತಿಯನ್ನು ಎಂತೆಂಥ ಸ್ಥಿತಿಗೆ ಇಳಿಸಿ ಬಿಡುತ್ತದೆ. ಅವನು ತನ್ನನ್ನು ಮದುವೆಯಾಗುತ್ತಾನೆ ಅಂತ ನಂಬಿ ಅವನಲ್ಲಿನ ಪ್ರೇಮವನ್ನು ಬಿಡದೇ ಮುಂದುವರೆಸಿಕೊಂಡು ಹೋಗಿದ್ದಾಳೆ. ಯಾವುದೋ ಒಂದು ಸಿನೆಮಾ ಸಮಾರಂಭದಲ್ಲಿ ಎದುರಾಗುವ ಆತ ಅವಳನ್ನು ನೋಡಿ, ಬಾಯಿಗೆ ಬಂದಿದ್ದು ಮಾತನಾಡಿ ಹೀಯಾಳಿಸಿದ್ದಾನೆ ಮತ್ತು ಅವಳನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಅದೇ ಕಾರಣವಾಗಿ ಆಕೆ ಡಿಪ್ರೆಷನ್‌ಗೆ ಒಳಗಾಗುತ್ತಾಳೆ. ಅವನ ಜೊತೆ ಒಂದಿಷ್ಟು ರಾಜಿ ಸಂಧಾನಗಳೆಲ್ಲ ನಡೆದು, ಯಾವುದೂ ಇನ್ನು ಫಲಿಸುವುದಿಲ್ಲ ಅಂತ ಖಾತರಿಯಾದ ನಂತರ ಅವಳು ಆತ್ಮಹತ್ಯೆಗೆ ಮಾಡಿಕೊಂಡು ಸತ್ತು ಹೋದಳಂತೆ. ಸಾಯುವ ಮುನ್ನ ಒಂದು ಪತ್ರ ಬರೆದು ಅದರಲ್ಲಿ ನಂಬಿಸಿ ಮೋಸ ಮಾಡಿದ ಆ ನಿರ್ದೇಶಕ, ಅವನ ಹೆಂಡತಿ ಮತ್ತು ಇನ್ನೊಬ್ಬ ಗೆಳೆಯ ಮೂವರೂ ತನ್ನ ಸಾವಿಗೆ ಕಾರಣ ಅಂತ ಬರೆದಿಟ್ಟು ಸಾಯುತ್ತಾಳೆ. ಅಲ್ಲಿಗೆ ಅವಳ ಬದುಕು ಮುಗಿದು ಹೋಯ್ತು. ವರ್ಷಗಳ ಕಾಲ ಕೋರ್ಟಿನಲ್ಲಿ ಕೇಸ್ ನಡೆದು, ಕೊನೆಗೊಮ್ಮೆ ಅವನು ವಿವಾಹಿತನಾಗಿದ್ದರಿಂದ, ಅವನು ಮದುವೆಯಾಗಲು ಒಪ್ಪದಿದ್ದುದು ನ್ಯಾಯವೇ ಅಂತ ತೀರ್ಮಾನಿಸಿದ ಕೋರ್ಟು ಆ ಮೂವರನ್ನೂ ಬಿಡುಗಡೆ ಮಾಡಿತಂತೆ. ಯಾರಿಗೆ ಬುದ್ಧಿ ಕಲಿಸುತ್ತೇನೆ ಅನ್ನುವ ಭ್ರಮೆಯಲ್ಲಿ ಪಾಪ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಳೋ ಅನ್ನಿಸಿ ದುಃಖವಾಯಿತು. ಸತ್ತು ಯಾರಿಗಾದರೂ ಬುದ್ಧಿ ಕಲಿಸುತ್ತೇವೆ ಅನ್ನುವುದು ನಿಜಕ್ಕೂ ಸಾಧ್ಯವೇ? ಅಪ್ಪಿ ತಪ್ಪಿ ಬುದ್ಧಿ ಬಂದೇ ಬಿಟ್ಟಿತು ಅಂತಿಟ್ಟುಕೊಂಡರೂ, ನಾವೇ ಇಲ್ಲದ ಮೇಲೆ ಆ ಜ್ಞಾನೋದಯದಿಂದ ಆಗುವ ಲಾಭವೇನು?
ಯಾವುದೇ ಸಂಬಂಧವಾಗಲೀ, ಒಮ್ಮೆ ಮುಗಿಯಿತೆಂದರೆ finish! ಮತ್ತೆ ಜೀವ ಬರಿಸುವುದು ಅಸಾಧ್ಯ ಅಲ್ಲವಾ? ಮುಗಿದು ಹೋಗುವ ಸಂಬಂಧಗಳ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಟೈಟಾನಿಕ್ ಸಿನೆಮಾ ನೆನಪಾಗುತ್ತದೆ. ಆ ಹೀರೋ ಮುದ್ದು ಹುಡುಗಿ ಕೂತಿರುವ ತೆಪ್ಪಕ್ಕೆ ಆತು ಇಡೀ ರಾತ್ರಿ ನಿಂತಿರುತ್ತಾನೆ. ಸಹಾಯಕ್ಕಾಗಿ ಕಾದು ಕಾದ ಆತ ಸತ್ತು ಹೋಗಿರುತ್ತಾನೆ. ಅವರನ್ನು ರಕ್ಷಿಸಲು ದೋಣಿ ಬರುತ್ತದೆ. ಆಗ ಆ ಹುಡುಗಿಗೆ ಪ್ರೇಮಿ ಇನ್ನಿಲ್ಲ ಅಂತ ಗೊತ್ತಾಗುತ್ತದೆ. ಅವಳು ಬೆರಳು ಬಿಟ್ಟ ಕೂಡಲೇ ಆ ಹುಡುಗನ ದೇಹ ನಿಧಾನಕ್ಕೆ ಸಮುದ್ರದೊಳಗೆ ಮಾಯವಾಗಿ ಹೋಗಿಬಿಡುತ್ತದೆ. ಸಾಯುವವರೆಗೂ ಅವನ ನೆನಪಿನಲ್ಲಿ ದಿನ ಕಳೆಯಬಲ್ಲಂತ ಶಕ್ತಿ ಇರುವ ಆ ಹುಡುಗಿ, ಆ ಪ್ರೇಮಿಯ ದೇಹ ನೀರೊಳಕ್ಕೆ ಹೋಗುವಾಗ ಸುಮ್ಮನೆ ಬಿಟ್ಟುಕೊಟ್ಟು ಬಿಡುತ್ತಾಳಲ್ಲ, ಅಸಹಾಯಕತೆಯಿಂದ-ನೋವಿನಿಂದ-ದುಃಖದಿಂದ … ಅದು ಬದುಕು. ಆ ನಂತರ ಅವಳು ಆ ಕೊರೆಯುವ ನೀರಿನಲ್ಲಿ ಬಿದ್ದು, ಸತ್ತು ಬಿದ್ದಿದ್ದ ಮತ್ತೊಂದು ದೇಹದ ಹತ್ತಿರಕ್ಕೆ ಈಜಿ, ಅವನಲ್ಲಿದ್ದ ವಿಷಲ್ ಅನ್ನು ತೆಗೆದು ಇದ್ದ, ಬದ್ದ ಶಕ್ತಿ ಎಲ್ಲ ಕ್ರೋಢೀಕರಿಸಿಕೊಂಡು ಉಸಿರು ಊದಿ, ಶಬ್ಧವಾಗಿಸಿ ಕೊನೆಗೆ rescue boat ನಲ್ಲಿದ್ದವರ ದೃಷ್ಟಿಗೆ ಬೀಳಲು ಸಮರ್ಥಳಾಗುತ್ತಾಳಲ್ಲಾ, ಅದು ಬದುಕು. ಸತ್ತ ಸಂಬಂಧಗಳ ಬೆರಳು ಬಿಡಿಸಿಕೊಂಡು ಮತ್ತೂ ಹೇಗೋ ಬದುಕುವ ಆಸೆ ಮೂಡುತ್ತದಲ್ಲಾ … ಅದು ಬದುಕು! ಸತ್ತ ಸಂಬಂಧಗಳಿಗೆ ಜೋತು ಬಿದ್ದು ಅಳುವ, ದುಃಖಿಸುವ, ಅಸಹಾಯಕತೆಯಲ್ಲಿ ಕಿರುಚುವ, ಹೇಗಾದರೂ ಮಾಡಿ ಬದುಕಿಸಲು ಹರಸಾಹಸ ಪಡುವ ಆಸೆ ಮನುಷ್ಯನಲ್ಲಿ ಎಷ್ಟಿರುತ್ತದೆ! ಅದು ಅಸಾಧ್ಯ ಅಂತ ಗೊತ್ತಾದ ಮೇಲೆ ಉಸಿರು ಕೂಡಿಸಿಕೊಂಡು ಮುಂದೆ ನಡೆಯಬೇಕಷ್ಟೇ. ಅಷ್ಟೆಲ್ಲ ದೈಹಿಕ ನೋವು, ಆ ಚಲನೆಯಿಲ್ಲದ ಸ್ಥಿತಿ ಎಲ್ಲವನ್ನೂ ಸಂಭಾಳಿಸಿಕೊಳ್ಳುತ್ತಾ, ಜೊತೆ ಜೊತೆಗೆ ಕಾನೂನಿನ ಜೊತೆಯೂ ಬಡಿದಾಡುತ್ತ ಬದುಕಿದ್ದ ಹೆಣ್ಣು ಪ್ರೇಮದ ಮುಂದೆ ಮಾತ್ರ ಯಾಕೆ ಅಷ್ಟು ಅಸಹಾಯಕಳಾಗಿ ಹೋದಳು … ?
ಅಷ್ಟು ವರ್ಷದ ನಂತರ ನೆನಪಾದ ಅವಳ ದುರಂತದ ಬದುಕಿನ ಬಗ್ಗೆ ಓದಿ, ಟ್ರ್ಯಾಜಿಡಿ ಸಿನೆಮಾವೊಂದನ್ನು ನೋಡಿದ ರೀತಿ ಮೌನವಾಗಿ ಕೂತೆ … ಸತ್ತ ಸಂಬಂಧಗಳ ಬೆರಳು ಬಿಡಿಸಿಕೊಳ್ಳುವ ಕಲೆ ಎಲ್ಲರಿಗೂ ನೀಡು ಅನ್ನುವ ಹೊಸ ಪ್ರಾರ್ಥನೆ ಕಾಣದ ದೇವನಿಗೆ …

‍ಲೇಖಕರು G

February 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Shwetha Hosabale

    ಈರ್ಷ್ಯೆ, ಬೆರಗು, ಕುತೂಹಲ, ವಿಷಾದ, ನಿಟ್ಟುಸಿರು ಎಲ್ಲಾ ಬೆರೆತ ಕತೆ, ನಿರೂಪಣೆ ತುಂಬ ಆಸಕ್ತಿಯಿಂದ ಓದಿಸಿಕೊಂಡು ಹೋಯಿತು.

    ಪ್ರತಿಕ್ರಿಯೆ
  2. arathi ghatikaar

    ಬಹಳ ಚೆನ್ನಾಗಿ ಬರೆದ್ದಿದ್ದೀರ ಭಾರತಿ .ನಿಮ್ಮ ಕಥೆಯೇ ಒಂದು ಸಿನಿಮಾ ಕಥೆಯ ರೂಪದಲ್ಲಿ ಹರಿದು ಬಂದಿದೆ ,ಆದ್ರೆ ಇದರಲ್ಲ್ಲಿ ಆ ನಾಯಕಿಯ ಪಾತ್ರ ದುರಂತದಲ್ಲಿ ಕೊನೆಯಾದದ್ದು ಬೇಸರ ತಂದಿತು . ಆ ಪಾತ್ರದ ಪರಿಚಯ , ನಿರೂಪಣೆ ಮನ ಮುಟ್ಟಿತು . ಅವಳಾರು ಅನ್ನುವ ಕೂತೂಹಲ 🙂

    ಪ್ರತಿಕ್ರಿಯೆ
  3. kannika sripathy

    Bharathi nimma kate tumba sogasagi moodi bandide kelavu kade nanna school days nenapayetu,adare tragidy end madabaradittu avalu yaaru?.

    ಪ್ರತಿಕ್ರಿಯೆ
    • bharathi b v

      Tragic end maadalu, maadadiralu naanyaaru heli … Nadediddannu bareyuvudashte nanna kelasa …. 🙁

      ಪ್ರತಿಕ್ರಿಯೆ
  4. KrishnaR

    Very nicely narrated.. I am scratching my head as to who this lady actress is 🙂 Hopefully she is a real person.

    ಪ್ರತಿಕ್ರಿಯೆ
  5. renuka prakash

    nanna amma tilisidru, prati hennu ondu kate iddange;maha bharata, ramayana ellakku avale spoorti anda mele…nimma kate kuda hennina baggeye.chennagi bardidira. nice

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: