ಅಹವಿ ಹಾಡು : ’ಸಂಬಂಧಗಳು ಯಾಕೆ ಹೀಗೆ ಕೊನೆಯುಸಿರೆಳೆಯಬೇಕು…?

ನನ್ನ ಮತ್ತು ನನ್ನ ಗೆಳತಿಯ ಮೆಚ್ಚಿನ ಜಾಗ ಕಾಫಿ ಡೇ. ಅಲ್ಲಿರುವ ಕಾಫಿ, ಕಾಫಿಯಂತಿರದೇ ಬೋರ್ನ್‌ವಿಟಾದ ರೀತಿ ಇರುತ್ತದೆಯಾದರೂ ನಾವು ಭೇಟಿ ಆಗಬೇಕೆಂದರೆ ಅದೇ ಸ್ಥಳದಲ್ಲಿ ಆಗುತ್ತೇವೆ. ಸಾಧಾರಣವಾಗಿ ಯಾವುದೇ ಹೋಟೆಲ್‌ನಲ್ಲಿ ಕೂತರೂ ಅಲ್ಲಿನ ವೇಟರ್‌ಗಳು ಬಡಬಡನೆ ಕಾಫಿ, ತಿಂಡಿ ಸಪ್ಲೈ ಮಾಡಿ ನಾವು ಪಟ್ಟಂತ ಎದ್ದು ಹೊರಡುವುದನ್ನೇ ಕಾಯುತ್ತಿರುತ್ತಾರೆ. ನಾವು ಅಗತ್ಯಕ್ಕಿಂತ ಚೂರು ಹೆಚ್ಚು ಹೊತ್ತು ಕೂತೆವೋ, ಆಗ ಅವರು ನಮ್ಮ ಸುತ್ತ ಸುಳಿದಾಡುತ್ತ ನಮ್ಮನ್ನು uncomfortable ಮಾಡಿ, ಕೊನೆಗೆ ನಾವು ಎದ್ದು ಹೊರಡಲೇ ಬೇಕು ಅನ್ನುವ ಸ್ಥಿತಿ ತರಿಸಿಡುತ್ತಾರೆ. ಆದರೆ ಈ ಕಾಫಿ ಡೇ ಹಾಗಲ್ಲ. ನಾನೇ ಎಷ್ಟೊಂದು ಸಲ ಅಂದುಕೊಳ್ಳುತ್ತೇನೆ ‘ಎರಡು ಘಂಟೆ ಕೂತು 80-100 ರೂಪಾಯಿಯ ಬಿಸಿನೆಸ್ ಕೊಟ್ಟು ಎದ್ದು ಹೋಗುವ ಗಿರಾಕಿಗಳನ್ನು ಕಟ್ಟಿಕೊಂಡು ಅದು ಹೇಗೆ ಬಿಸಿನೆಸ್ ಮಾಡುತ್ತಾರೋ ಪಾಪ’ ಎಂದು. ಆದರೆ ಮಾತ್ರ ಅಲ್ಲಿ ಹೋಗಿ ಬಿಟ್ಟರೆ ಮಾವನ ಮನೆಯ ಥರ ಠಿಕಾಣಿ ಹೂಡಿ ಬಿಟ್ಟರೂ ಯಾರೂ ತೊಂದರೆ ಕೊಡುವುದಿಲ್ಲ. ನಮಗಿಷ್ಟ ಬಂದಷ್ಟು ಹೊತ್ತು ಹರಟುತ್ತಾ ಮಾತಾಡುತ್ತಿರಬಹುದು. ಆ ಕಾರಣಕ್ಕಾಗೇ ಬೋರ್ನ್‌ವಿಟಾ ಥರದ ಕಾಫಿ ಕುಡಿಯುವ ಶಿಕ್ಷೆಗೂ ನಾನು ಸಿದ್ಧ!
ನಾನು, ನನ್ನ ಗೆಳತಿ ಭೇಟಿಯಾಗುವುದು ಆರು ತಿಂಗಳಿಗೆ ಒಂದು ಸಲ. ಹಾಗಾಗಿ ಮೂರು ನಾಲ್ಕು ಘಂಟೆ ಮಾತಾಡಿದರೂ ನ್ಯೂಸ್ ಹೆಡ್‌ಲೈನ್ಸ್ ಕೂಡಾ ಮುಗಿಯುವುದಿಲ್ಲ. ಇನ್ನು news in detail ಮಾತಾಡುವಷ್ಟು ಸಮಯ ನಮಗಿದೆ ಅಂತ ಎಂದೂ ಅನ್ನಿಸೇ ಇಲ್ಲ! ಈಗಿನ್ನೂ ಕೂತೆವು ಅನ್ನುವಷ್ಟರಲ್ಲಿ ಕತ್ತಲಾವರಿಸಿ, ಅಯ್ಯೋ ಮನೆಗೆ ಹೋಗಬೇಕಲ್ಲಾ ಅಂತ ಹಳಹಳಿಸಿ, ಕೊನೆಗೆ ‘ಏನೂ ಮಾತಾಡಿದ ಹಾಗೇ ಆಗ್ಲಿಲ್ಲ’ ಅಂತ ಎದ್ದು ಬರುವುದು ನಮ್ಮ ವರ್ಷಗಟ್ಟಳೆಯ ಮಾಮೂಲು ಕಥೆ.
ಇವತ್ತೂ ಇಬ್ಬರೂ ಭೇಟಿಯಾಗಿ, ಒಬ್ಬರನ್ನೊಬ್ಬರು ಅಪ್ಪಿ, ಸಣ್ಣ ಮಕ್ಕಳ ಥರ ನಗುತ್ತಾ ಕಾಫಿ ಡೇ ಒಳಗೆ ನಮ್ಮ ಮಾಮೂಲು ಜಾಗ ಆಕ್ರಮಿಸಿದೆವು. ನಾವಿಬ್ಬರೂ ಎಂದೂ ಎದುರು ಬದಿರಾಗಿ ಕೂಡುವುದಿಲ್ಲ. ಆ ರೀತಿ ಕೂತರೆ ಎಷ್ಟೊಂದು ಮೈಲಿಗಳ ದೂರ ಕೂತಿದ್ದೀವೇನೋ ಅನ್ನಿಸಿಬಿಡುತ್ತದೆ. ಹಾಗಾಗಿ ಕುರ್ಚಿ ಎಳೆದುಕೊಂಡು ಅವಳ ಪಕ್ಕವೇ ನಾನೂ ಕೂತುಕೊಳ್ಳುತ್ತೇನೆ. ಇವತ್ತೂ ಹಾಗೆಯೇ ಕುರ್ಚಿ ಎಳೆದುಕೊಂಡು ಅವಳ ಪಕ್ಕ ಕೂತು, ಇಬ್ಬರೂ ನಮ್ಮದೇ ಲೋಕದಲ್ಲಿ ಮುಳುಗಿದೆವು. ನಮ್ಮಿಬ್ಬರ ಗೆಳೆತನ ಶುರುವಾಗಿದ್ದು ನಾನು ಹನ್ನೆರಡರ ಪುಟ್ಟ ಹುಡುಗಿಯಾಗಿದ್ದಾಗ. ಹಾಗಾಗಿ ತುಂಬ ವರ್ಷಗಳ ಸ್ನೇಹ. ನಮ್ಮಿಬ್ಬರ ಮಧ್ಯೆ ಯಾವ ತೆರೆ ಮರೆಯ ಕಥೆಯೇ ಇಲ್ಲ. ಅವಳೆದುರು ಕೂತು ಮಾತಾಡುತ್ತಿದ್ದರೆ ನಾಲಿಗೆಗೆ ಯಾವ ಸೆನ್ಸಾರ್ ಕೂಡಾ ಇರೋದಿಲ್ಲ. ಅವಳಿಗೂ ಅಷ್ಟೇ. ಹದಿಹರೆಯದಲ್ಲಿ ಮಾತಾಡುತ್ತಿದ್ದ ಹಾಗೆಯೇ ಇವತ್ತಿಗೂ ಇಬ್ಬರೂ ಕಿಸಿ ಪಿಸಿ ಅನ್ನುತ್ತಾ ಎಂದಿನಂತೆ ಮಾತಿನಲ್ಲಿ ಮುಳುಗಿದೆವು.
ಆಡಿದೆವು … ಆಡಿದೆವು … ಆಡಿದೆವು … ಬಾಯಿ ಒಡೆಯುವಷ್ಟು ಮಾತಾಡಿದೆವು. ಆಮೇಲೆ ಇಬ್ಬರಿಗೂ ಜಾಗ ಕೊಟ್ಟ ಕಾಫಿ ಡೇಯ ಮೇಲೆ ಕರುಣೆ ಬಂತು. ಪಾಪ ಒಂದು ರೂಪಾಯಿ ಬಿಸಿನೆಸ್ ಕೊಡದೇ ಕೂತಿದ್ದೀವಲ್ಲ ಅನ್ನಿಸಿ ಆರ್ಡರ್ ಕೊಟ್ಟೆವು. ಆಗ ಮಾತಿಗಿಷ್ಟು ಬ್ರೇಕ್ ಬಿತ್ತಲ್ಲ … ಆಗ ಗಮನಿಸಿದೆ ಎದುರು ಟೇಬಲ್ಲಿನ ಮೇಲೆ ತಲೆಯಿಟ್ಟು ಅಳುತ್ತಿದ್ದವಳನ್ನ. ಅತ್ತೂ, ಅತ್ತೂ ಮುಖವೆಲ್ಲ ಊದಿಕೊಂಡು ಬಿಟ್ಟಿತ್ತು. ಅಷ್ಟೊಂದು ಊದಿರ ಬೇಕಾದರೆ ಅವಳು ತುಂಬ ಹೊತ್ತಿನಿಂದ ಅಳುತ್ತಿದ್ದಿರಬೇಕು. ಮಾತಿನಲ್ಲಿ ಮುಳುಗಿದ್ದ ನಮ್ಮಿಬ್ಬರಿಗೆ ಅದು ಸ್ವಲ್ಪವೂ ಗಮನಕ್ಕೆ ಬಾರದೇ ಹೋಗಿತ್ತು! ಯಾಕೋ ಎದುರು ಕೂತವಳ ಮುಖದ ಅಸಹಾಯಕತೆ ಎದೆ ತಟ್ಟಿ ಬಿಟ್ಟಿತು. ಎಂಥ ದಯನೀಯವಾಗಿ ಕೂತಿದ್ದಳು. ಅವಳೆದುರು ಒಬ್ಬ ಕೂತಿದ್ದ. ಅವನು ನಿರ್ಲಿಪ್ತನಂತೆ ಏನೋ ಹೇಳುತ್ತಾ ಕೂತಿದ್ದ. ಸಾಧಾರಣವಾಗಿ ಬೇರೆಯವರ ಬದುಕಿನಲ್ಲಿ ಮೂಗು ತೂರಿಸದ ನನಗೆ ಯಾಕೋ ಅವಳಿಗೆ ಏನಾಗಿದೆ ಅಂತ ತಿಳಿದುಕೊಳ್ಳಬೇಕು ಅನ್ನಿಸಿ ಬಿಟ್ಟಿತು. ಪಕ್ಕದಲ್ಲಿದ್ದವಳಿಗೆ ಮೆಲ್ಲನೆ ಎದುರು ಟೇಬಲ್ಲಿನವಳ ಕಡೆ ನೋಡು ಅನ್ನುವಂತೆ ಸನ್ನೆ ಮಾಡಿದೆ. ಅವಳೂ ನನ್ನದೇ ಥರ ಪಕ್ಕದ ಟೇಬಲ್ಲಿನ ಹೆಂಗಸಿನ ಮುಖ ನೋಡುತ್ತಾ ಕೂತು ಬಿಟ್ಟಳು. ನಮ್ಮಿಬ್ಬರಲ್ಲಿ ಆವರೆಗೆ ಇದ್ದ ಮಾತಾಡುವ ಉತ್ಸಾಹ ಯಾಕೋ ಬತ್ತಿಹೋಯ್ತು. ಇಬ್ಬರೂ ಮೌನವಾಗಿ ಬಿಟ್ಟೆವು. ಎದುರಿಗೆ ಒಬ್ಬಳು ಆ ರೀತಿ ಅಳುತ್ತಿರುವಾಗ ನಾವು ನಗುವುದೂ ತಪ್ಪೇನೋ ಅನ್ನುವಂಥ ಗಿಲ್ಟ್ ಬಂದುಬಿಟ್ಟಿತು ಮನಸ್ಸಿಗೆ. ಕಾಫಿ ಡೇನಲ್ಲಿ ಟೇಬಲ್ಲುಗಳ ಮಧ್ಯೆ ಹೆಚ್ಚು ಅಂತರ ಇರೋದಿಲ್ಲ. ಹಾಗಾಗಿ ನಾವಿಬ್ಬರೂ ಮೌನವಾದ ಕೂಡಲೇ ಅವರಿಬ್ಬರ ಮಾತು ಕತೆ ನಮ್ಮ ಕಿವಿಗೆ ಬೀಳುವುದಕ್ಕೆ ಶುರು ಮಾಡಿತು.
ಅವರಿಬ್ಬರಿಗೂ ನಮ್ಮದಿರಲಿ, ಸುತ್ತ ಕೂತಿದ್ದ ಯಾರದ್ದೂ ಪರಿವೆಯಿರಲಿಲ್ಲ. ಅವಳು ಅಳುತ್ತ ‘ಯಾಕೆ ಹೋಗುತ್ತೀ ನೀನು? ನನ್ನನ್ನು ಒಬ್ಬಳೇ ಬಿಟ್ಟು ಹೋಗಬೇಡ ಕಣೋ ಪ್ಲೀಸ್. ನನಗೆ ನೀನು ಜೊತೆ ಆದ ದಿನದಿಂದ ಒಬ್ಬಳೇ ನಡೆಯುವುದು ಮರೆತೇ ಹೋಗಿದೆ. ಈಗ ನೀನು ದೂರವಾದರೆ ನಾನು ಕುಸಿದೇ ಹೋಗುತ್ತೇನೆ’ ಅಂದಳು ಬೇಡುವ ದನಿಯಲ್ಲಿ. ಅವನು ನಿರ್ಲಿಪ್ತವಾಗಿ ‘ಏನು ಮಾಡೋದಿಕ್ಕಾಗತ್ತೆ ಹೇಳು. ಬೇರೆ ದಾರಿಯಿಲ್ಲ. ನಾನು ಹೋದೆ ಅಂತ ನೀನು ಕುಸಿದೇನೂ ಹೋಗೋದಿಲ್ಲ. ಯಾರೂ ಯಾರಿಗೋಸ್ಕರವೂ ಸಾಯೋದಿಲ್ಲ. ಎಲ್ಲರಿಗೂ ಅವರವರ ಬದುಕು ಮುಖ್ಯ. ಈ ರೀತಿ ನೀನಿಲ್ಲದೇ ಇರೋದಿಕ್ಕಾಗೋದಿಲ್ಲ ಅನ್ನೋ ಮಾತೆಲ್ಲ ಸುಮ್ಮನೇ ಬಾಯಿ ಮಾತು ಅಷ್ಟೇ’ ಅಂದ. ನನಗೆ ಯಾಕೋ ಅವನ ಬಗ್ಗೆ ಸಿಟ್ಟು ಬಂತು. ಅಲ್ಲಾ, ಅಳುತ್ತಿರುವ ಅವಳನ್ನು ಸಂತೈಸಬಾರದಾ ಈ ಪ್ರಾಣಿ? ಯಾಕಿಷ್ಟು ಕಠೋರವಾಗಿ ಮಾತಾಡ್ತಿದ್ದಾನೆ ಅಂದುಕೊಂಡೆ. ಅವನ ಮಾತು ಕೇಳಿದ ಅವಳು ಮತ್ತೊಂದು ಸಲ ಟೇಬಲ್ಲಿನ ಮಧ್ಯೆ ತಲೆಯಿಟ್ಟು ಅಳಲು ಶುರು ಮಾಡಿದಳು. ಅವನು ‘ನನಗೆ ಹಸಿವಾಗ್ತಿದೆ. ನಾನು ಬೆಳಿಗ್ಗೆಯಿಂದ ತಿಂಡಿ ಕೂಡಾ ತಿಂದಿಲ್ಲ. ಏನಾದರೂ ತಿನ್ನಬೇಕು. ನಿನ್ನ ಫೋನ್ ಬಂದಾಗಿನಿಂದ ನಾನು ನಿನ್ನ ಮೀಟ್ ಮಾಡಿ, ಇರೋ ವಿಷಯ ಹೇಳಿ ಹೋಗಬೇಕು ಅನ್ನೋ ಸ್ಥಿತಿಯಲ್ಲಿ ತಿಂಡಿ ಕೂಡಾ ತಿನ್ನದೇ ಹಾಗೇ ಬಂದೆ ….’.

ಅವನಿಗೆ ಖಾಲಿ ಹೊಟ್ಟೆಯ ನೆನಪು. ಅವಳಿಗೆ ಬಹುಶ ಖಾಲಿಯಾದ ಬದುಕಿನ ನೆನಪು. ಅವನು ‘ಆರ್ಡರ್ ಕೊಟ್ಟು ಬರ್ತೀನಿ’ ಅಂದ. ಅವಳು ಅವನು ಎದ್ದು ಹೋಗುವ ಆ ಘಳಿಗೆ ಶಾಶ್ವತವೇ ಆಗಿಹೋಗುತ್ತದೇನೋ ಅನ್ನುವ ಹಾಗೆ ಅವನ ಬೆರಳು ಹಿಡಿದಳು. ಜಾತ್ರೆಯ ಜನಸಂದಣಿಯಲ್ಲಿ ಅಮ್ಮನ ಕೈ ಹಿಡಿವ ಮಗುವಿನ ಥರದ ಭಯವಿತ್ತು ಅವಳ ಮುಖದಲ್ಲಿ. ಅವನು ಅವಳ ಕೈ ತಟ್ಟಿ, ಅವಳಿಂದ ಬಿಡಿಸಿಕೊಂಡು ‘ಐದು ನಿಮಿಷ ಇರು ಕಂದಾ ಬರ್ತೀನಿ’ ಅನ್ನುತ್ತಾ ಎದ್ದು ಹೋದ. ಅವಳು ಅವನು ಹೋದ ಕಡೆಗೇ ದೃಷ್ಟಿ ನೆಟ್ಟು ಕೂತಿದ್ದಳು. ಒಂದು ನಿಮಿಷ ಕೂತಿದ್ದವಳು, ಆ ನಂತರ ಏನನ್ನಿಸಿತೋ ಆರ್ಡರ್ ಕೊಡುತ್ತಿದ್ದ ಅವನ ಪಕ್ಕದಲ್ಲೇ ಹೋಗಿ ನಿಂತಳು. ನಾನು ಯಾಕೋ ತಲ್ಲಣಿಸಿಹೋದೆ. ಏನಿವರ ಕಥೆ? ಏನು ನಡೆಯುತ್ತಿದೆ ಇಲ್ಲಿ …. ಅಂತ ತಬ್ಬಿಬ್ಬಾಗಿ ಕೂತಿದ್ದೆ. ಪಕ್ಕದಲ್ಲಿದ್ದವಳ ಮುಖ ನೋಡಿದರೆ, ನನಗಿಂತ ಭಾವುಕಳಾದ ಅವಳ ಕಣ್ಣಲ್ಲಿ ನೀರು….
ಅಷ್ಟರಲ್ಲಿ ಇಬ್ಬರೂ ವಾಪಸ್ ಬಂತು ಕೂತರು. ‘ದಿನಗಳು ಉರುಳಿ ಹೋಗುತ್ತವೆ. ನಾನು ಬರುವ ದಿನ ಬಂದೇ ಬಿಡುತ್ತೆ ಕಂದಾ…’ ಎಂದ. ‘ದಿನಗಳಾದರೆ ಉರುಹೋಗ್ತಿದ್ದವು. ಆದರೆ ಈಗ ಉರುಳಬೇಕಾಗಿರೋದು ವರ್ಷಗಳು. ವರ್ಷಗಳು ಸುಲಭಕ್ಕೆ ಉರುಳೋದಿಲ್ಲ ರಾಜಶೇಖರ. ನೀನು ಹೋಗುವವ ಅಂತಾದರೆ ನನ್ನನ್ನು ಯಾಕೆ ನಿನ್ನ ಬದುಕಿನೊಳಗೆ ಬಿಟ್ಟುಕೊಂಡೆ? ನಾನು ಹೇಗೋ ಬದುಕಿದ್ದೆ. ಪ್ರೀತಿ ಮಣ್ಣು ಮಸಿ ಅಂತೆಲ್ಲ ತಲೆ ಕೆಡಿಸಿಕೊಳ್ಳದೇ ಬದುಕಿದ್ದೆ. ನೀನು ಅದನ್ನೆಲ್ಲ ನನಗೆ ಅಭ್ಯಾಸ ಮಾಡಿಸಿ ಬಿಟ್ಟೆ. ಈಗ ನಾನು ಹೇಗೆ ನೆಮ್ಮದಿಯಿಂದ ಬದುಕಲಿ ಹೇಳು. ನೀನು ತಪ್ಪು ಮಾಡಿಬಿಟ್ಟೆ. ನಿನ್ನ ಬದುಕಿಗೇ ಒಂದು ನೆಲೆಯಿಲ್ಲದ ಮೇಲೆ, ನನ್ನನ್ನು ನಿನ್ನ ತೆಕ್ಕೆಗೆ ಕರೆದುಕೊಂಡಿದ್ದಾದರೂ ಯಾಕೆ? ನೀನು ತಪ್ಪು ಮಾಡಿದೆ’ ಅಬ್ಬಾ! ಇಷ್ಟು ಹೇಳಿದವಳೇ ಅವಳು ಜೋರಾಗಿ ಬಿಕ್ಕಲು ಶುರು ಮಾಡಿದಳು. ಅವನು ‘ನನಗಾದರೂ ಗೊತ್ತಿತ್ತಾ ಇಂಥ ದಿನಗಳೆಲ್ಲ ಬರುತ್ತವೆ ಅಂತ? ಇದನ್ನೇ destiny ಅನ್ನುವುದು. ನೋಡು ನಾನು ಅಷ್ಟೊಂದು ಪ್ರೀತಿಸುವ ನಿನ್ನ ಜೊತೆ ಇರಲಾರದ ಸ್ಥಿತಿ. ನನ್ನ ಮೇಲೆ ನನಗೇ ಸಿಟ್ಟು ಬರುತ್ತೆ’ ಅಂದವನ ಕಣ್ಣಲ್ಲೂ ಒಂದೆರಡು ಹನಿ …
ನನಗೆ ಯಾಕೋ ನಿಜಕ್ಕೂ ಅಳು ಬರುವ ಹಾಗಾಗಿ ಬಿಟ್ಟಿತು. ಅಯ್ಯೋ ! ಆ ಪಾಪಿ ಎಲ್ಲಿಗೆ ಹೋಗುತ್ತಿದ್ದಾನೆ? ಅವಳು ಯಾಕೆ ಅವನ ಜೊತೆ ಹೋಗಲು ಆಗೋದಿಲ್ಲ? ಏನು ಅವರ ಸಂಬಂಧ? ವರ್ಷಗಟ್ಟಳೆ ವಾಪಸ್ ಬರೋದಿಲ್ಲ ಅನ್ನುತ್ತಿದ್ದಾಳೆ ಬೇರೆ. ಅಷ್ಟೊಂದು ವರ್ಷ ಎಲ್ಲಿಗೆ ಹೋಗ್ತಿದ್ದಾನೆ ಅವನು …ನನ್ನ ಪ್ರಶ್ನೆಗಳು ಒತ್ತಿ ಒತ್ತಿ ಗಂಟಲೆಲ್ಲ ಗದ್ಗದ …
ಅವಳು ಅವನ ಬೆರಳಲ್ಲಿ ಬೆರಳು ಹೆಣೆದು ಕೂತಳು. ಇಷ್ಟು ಹೊತ್ತೂ ಒಬ್ಬಳೇ ಅಳುತ್ತಿದ್ದವಳ ಜೊತೆ ಈಗ ಅವನೂ ಅಳುತ್ತಿದ್ದ. ಇಷ್ಟೊಂದು ಪ್ರೀತಿಯಲ್ಲಿ ಬಿದ್ದಿರುವವರು ಯಾಕೆ ಬೇರೆಯಾಗುತ್ತಾರೋ … ಎಲ್ಲ ಅವನು ಅಂದಂತೆ destinyಯೇ ಇರಬೇಕು. ಅಲ್ಲಿಂದ ಮುಂದೆ ಸುಮಾರು ಒಂದು ಘಂಟೆ ಕಾಲ ಇಬ್ಬರೂ ಅದೇ ಅದೇ ಮಾತು ಆಡಿದರು. ಅವಳು ಇಡೀ ಪ್ರಪಂಚವೇ ಕಣ್ಣೆದುರು ಮುಳುಗಿ ಹೋಗುತ್ತಿರುವ ರೀತಿ ಅಳುತ್ತಲೇ ಇದ್ದಳು. ಮಾತು-ಅಳು ಒಂದರ ಹಿಂದೆ ಇನ್ನೊಂದು…
ಕತ್ತಲಾಗುತ್ತಿತ್ತು. ನಾನು ಮತ್ತು ನನ್ನ ಗೆಳತಿ ಹೊರಡಬೇಕಿತ್ತು. ಆದರೆ ಹೊರಡುವ ಮನಸ್ಸಿಲ್ಲದೇ ಅಲ್ಲಿ ನಡೆಯುತ್ತಿರುವ ಎದೆಯೊಳಗಿನ ಯುದ್ಧವನ್ನೇ ನೋಡುತ್ತ ಕೂತುಬಿಟ್ಟಿದ್ದೆವು. ‘ಅವನು ಹೊರಡೋಣವಾ?’ ಅಂದ. ‘ಮತ್ತೆ ಯಾವತ್ತು ಸಿಗುತ್ತೀ? ನೀನು ಇಲ್ಲಿ ಇರುವವರೆಗಾದರೂ ನನ್ನನ್ನು ದಿನವೂ ಭೇಟಿಯಾಗುತ್ತೀನಿ ಅಂತ ಪ್ರಾಮಿಸ್ ಮಾಡು’ ಅಂದಳು. ಅವನು ಹೊರಡುವ ಸ್ಥಿತಿಯನ್ನು ಆಗಲೇ ಅವಳ ಮನಸ್ಸು ಒಪ್ಪಿಕೊಳ್ಳಲು ಶುರು ಮಾಡಿತ್ತು! ಬದುಕು ಎಲ್ಲವನ್ನೂ ಹೇಗೆ ಕಲಿಸುತ್ತಾ ಹೋಗುತ್ತದೆ ಅಲ್ಲವಾ? ಅಂದುಕೊಂಡೆ. ‘ಸರಿ ಕಂದಾ, ಇಲ್ಲಿರುವವರೆಗೆ ನಿನ್ನನ್ನು ಒಂದೂ ದಿನ ಬಿಡದೇ ಮೀಟ್ ಮಾಡ್ತೀನಿ’ ಅಂದ. ಅವನು ಕಂದಾ ಅನ್ನುವ ಆ ದನಿಯಲ್ಲಿನ ಆರ್ದ್ರತೆ ಯಾಕೋ ಎದೆಯಲ್ಲಿ ನೆಟ್ಟುಬಿಟ್ಟಿತು. ಇಬ್ಬರೂ ಎದ್ದು ಹೊರಡಲು ತಯಾರಾದರು …. ನಾವು ಕೂಡಾ. ಎದ್ದು ಹೊರಟ ಅವರ ಹಿಂದೆಯೇ ಹೊರ ಬಂದ ನಮಗೆ, ಅವನ ಕೈಯನ್ನು ಗಟ್ಟಿಯಾಗಿ ಹಿಡಿದು ಕಾಲೆಳೆಯುತ್ತ ನಡೆಯುತ್ತಿದ್ದವಳು ಕಾಣಿಸಿದಳು …

***

ಅವತ್ತಿನಿಂದ ಇವತ್ತಿನವರೆಗೂ ಒಂದು ಸಂಬಂಧ ಕಣ್ಣೆದುರೇ ಮಣ್ಣಾದ ಸ್ಮಶಾನದಂಥ ಆ ಕಾಫಿ ಡೇ ಒಳಗೆ ನಾನು ಮತ್ತು ನನ್ನ ಗೆಳತಿ ಕಾಲಿಟ್ಟಿಲ್ಲ …
 

‍ಲೇಖಕರು G

January 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. D.Ravivarma

    ಕತ್ತಲಾಗುತ್ತಿತ್ತು. ನಾನು ಮತ್ತು ನನ್ನ ಗೆಳತಿ ಹೊರಡಬೇಕಿತ್ತು. ಆದರೆ ಹೊರಡುವ ಮನಸ್ಸಿಲ್ಲದೇ ಅಲ್ಲಿ ನಡೆಯುತ್ತಿರುವ ಎದೆಯೊಳಗಿನ ಯುದ್ಧವನ್ನೇ ನೋಡುತ್ತ ಕೂತುಬಿಟ್ಟಿದ್ದೆವು. ‘ಅವನು ಹೊರಡೋಣವಾ?’ ಅಂದ. ‘ಮತ್ತೆ ಯಾವತ್ತು ಸಿಗುತ್ತೀ? ನೀನು ಇಲ್ಲಿ ಇರುವವರೆಗಾದರೂ ನನ್ನನ್ನು ದಿನವೂ ಭೇಟಿಯಾಗುತ್ತೀನಿ ಅಂತ ಪ್ರಾಮಿಸ್ ಮಾಡು’ ಅಂದಳು. ಅವನು ಹೊರಡುವ ಸ್ಥಿತಿಯನ್ನು ಆಗಲೇ ಅವಳ ಮನಸ್ಸು ಒಪ್ಪಿಕೊಳ್ಳಲು ಶುರು ಮಾಡಿತ್ತು! ಬದುಕು ಎಲ್ಲವನ್ನೂ ಹೇಗೆ ಕಲಿಸುತ್ತಾ ಹೋಗುತ್ತದೆ ಅಲ್ಲವಾ? ಅಂದುಕೊಂಡೆ. ‘ಸರಿ ಕಂದಾ, ಇಲ್ಲಿರುವವರೆಗೆ ನಿನ್ನನ್ನು ಒಂದೂ ದಿನ ಬಿಡದೇ ಮೀಟ್ ಮಾಡ್ತೀನಿ’ ಅಂದ. ಅವನು ಕಂದಾ ಅನ್ನುವ ಆ ದನಿಯಲ್ಲಿನ ಆರ್ದ್ರತೆ ಯಾಕೋ ಎದೆಯಲ್ಲಿ ನೆಟ್ಟುಬಿಟ್ಟಿತು. ಇಬ್ಬರೂ ಎದ್ದು ಹೊರಡಲು ತಯಾರಾದರು …. ನಾವು ಕೂಡಾ. ಎದ್ದು ಹೊರಟ ಅವರ ಹಿಂದೆಯೇ ಹೊರ ಬಂದ ನಮಗೆ, ಅವನ ಕೈಯನ್ನು ಗಟ್ಟಿಯಾಗಿ ಹಿಡಿದು ಕಾಲೆಳೆಯುತ್ತ ನಡೆಯುತ್ತಿದ್ದವಳು ಕಾಣಿಸಿದಳು …
    ***
    ಅವತ್ತಿನಿಂದ ಇವತ್ತಿನವರೆಗೂ ಒಂದು ಸಂಬಂಧ ಕಣ್ಣೆದುರೇ ಮಣ್ಣಾದ ಸ್ಮಶಾನದಂಥ ಆ ಕಾಫಿ ಡೇ ಒಳಗೆ ನಾನು ಮತ್ತು ನನ್ನ ಗೆಳತಿ ಕಾಲಿಟ್ಟಿಲ್ಲ …
    hrudaya tattuva baraha…

    ಪ್ರತಿಕ್ರಿಯೆ
  2. sunil rao

    Iruvavaru enu maadidaroo irtaare..
    Hoguvavaru…hoge hoguttaare…
    Novaagatte-nija.
    Bahala noyisida baraha.

    ಪ್ರತಿಕ್ರಿಯೆ
  3. shiva

    ನಾನು ತಿಪ್ಪರಲಾಗ ಹಾಕಿದ್ರೂ ಅಳು ನಿಲ್ಲಿಸೋಕಾಗಲ್ಲ……ಎಲ್ಲಿದ್ರಿ ನೀವು ಇಷ್ಟು ದಿನ…..

    ಪ್ರತಿಕ್ರಿಯೆ
  4. sudha.b.o.

    ಮನ ಮುಟ್ಟಿದ ಬರಹ. ನಿಜ ಬದುಕು ಬೆಳಕನ್ನೊಮ್ಮೆ ಕತ್ತಲನ್ನೊಮ್ಮೆ ಭೇಟಿಯಾಗುವ ಸಮಯ.ಆದರೆ ‘ಸಮಯ’ವೆಂಬುದೇ ಪ್ರಶ್ನೆ!

    ಪ್ರತಿಕ್ರಿಯೆ
  5. Anil Talikoti

    ಯಾರೋ ಗೊತ್ತಿರದವರಿಗೆ ನಮ್ಮೆರಡು ಕಣ್ಣೀರು -ಜೀನಾ ಉಸಕಾ ಜೀನಾ ಹೈ ಅನ್ನುವದನ್ನು ನೆನಪಿಸುವ ನಿಮ್ಮ ಬರಹ – ತುಂಬಾ ಇಷ್ಟವಾಯಿತು.
    -ಅನಿಲ

    ಪ್ರತಿಕ್ರಿಯೆ
  6. chaitra prasad

    thumbha chennagithu nimma baraha as usual,ondhu drarntha prema kathege neevu sakshiyadri

    ಪ್ರತಿಕ್ರಿಯೆ
  7. Anuradha.B.Rao

    ಪ್ರೇಮಿಗಳ ಅಗಲಿಕೆಯ ಚಿತ್ರ ಕಣ್ಣೆದುರಿಗೆ ಹಾದುಹೋಯಿತು . ಮನಸ್ಸೆಲ್ಲಾ ಭಾರ…

    ಪ್ರತಿಕ್ರಿಯೆ
  8. lakshmikanth itnal ಲಕ್ಷ್ಮೀಕಾಂತ ಇಟ್ನಾಳ

    ಭಾರತೀ ಜಿ, ನಿಮ್ಮ ಸೂಕ್ಷ್ಮ ಗ್ರಹಿಕೆ, ಜೀವ ಸ್ಪಂದನಕ್ಕೆ ಸಲಾಮ್. `ಕಿಸೀ ಕಾ ದರ್ದ ಮಿಲ್ ಸಕೇ ತೊ ಲೇ ಉಧಾರ, ಕಿಸೀ ಕೆ ವಾಸ್ತೇ ಹೋ ದಿಲ್ ಮೇಂ ಪ್ಯಾರ್, ‘ ಮುಕೇಶ ನೆನಪಾದ. ಕೆಲವೊಮ್ಮೆ ಮನುಷ್ಯ ಎಷ್ಟೊಂದು ಅಸಹಾಯಕ. ಅಲಾಸ್ ! ನೋವನ್ನೂ ಎರವಲು ಪಡೆಯಲಾಗುವುದಿಲ್ಲವಲ್ಲ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: