
ಈಗೀಗ ಒಂದಿಷ್ಟು ವರ್ಷಗಳಲ್ಲಿ ಜಗತ್ತು ಯಾವ ಪರಿ ಆತುರಕ್ಕೆ ಬಿದ್ದು ಮುಂದೆ ಓಡುತ್ತಿದೆ ಅಲ್ಲವಾ? ವಿಜ್ಞಾನ ಮತ್ತು ತಂತ್ರಜ್ಞಾನಗಳು ದಿನಬೆಳಗಾದರೆ ಒಂದೊಂದು ಆವಿಷ್ಕಾರವನ್ನು ನಮ್ಮೆದುರು ತಂದು ಹರವುತ್ತಿದೆ ನೆನ್ನೆಗೆ ಮೊನ್ನೆಯೆನ್ನುವುದು outdated, ಇವತ್ತಿಗೆ ನೆನ್ನೆಯೇ outdated ಅನ್ನಿಸುವಷ್ಟು ಬೆರಗು ಮೂಡಿಸುತ್ತದೆ ಪ್ರಪಂಚ. ಮುಂಚೆ ಒಂದು ಹೊಸ ವಸ್ತು ಜಗತ್ತಿನೆದುರು ಬಂದರೆ, ಅದು ಮುಂದಿನ ಹಲವಾರು ವರ್ಷಗಳ ಕಾಲ ನಮ್ಮ ಜೊತೆ ಉಳಿದುಬಿಡುತ್ತಿತ್ತು ಪ್ರಥಮ ಪ್ರಿಯಕರನ ನೆನಪಿನಂತೆ.
ಟೈಪ್‌ರೈಟರ್ ಅನ್ನುವ ರಾಜ ಅದೆಷ್ಟು ವರ್ಷ ಸಿಂಹಾಸನದ ಮೇಲೆ ಕೂತು ನಮ್ಮನ್ನಾಳಿದ ನೆನಪಿದೆಯಾ? ಲ್ಯಾಂಡ್ ಲೈನ್ ಫೋನ್‌ಗಳು ಎಷ್ಟೊಂದು ವರ್ಷ ನಮ್ಮ ಬದುಕಿನಲ್ಲಿ ರಿಂಗಣಿಸಿದವು ನೆನಪಿದೆಯೇ? 180 ಲೀಟರ್‌ನ, ಒಂದು ಬಾಗಿಲಿನ ಫ್ರಿಡ್ಜ್ ಎಲ್ಲರ ಮನೆಯಲ್ಲಿ ಸುಮಾರು ವರ್ಷ ಕಾಣಬರುತ್ತಿತ್ತು. ಕ್ಯಾಸೆಟ್ ಟೇಪ್‌ರೆಕಾರ್ಡರ್ ಅನ್ನುವುದು ಎಲ್ಲರ ಮನೆಯ ಅವಿಭಾಜ್ಯ ಅಂಗವಾಗಿತ್ತು. 80ರ ದಶಕದ ಶುರುವಿನಲ್ಲಿ ಭಾರತಕ್ಕೆ ಬಂದ ಟಿ ವಿ, ಅದೇ ದೊಡ್ಡ ಡಬ್ಬಾ ರೂಪದಲ್ಲಿ ಸುಮಾರು ವರ್ಷ ನಮ್ಮ ಮನೆಗಳಲ್ಲಿ ರಾರಾಜಿಸಿತು.
ಆಮೇಲೆ ಕಂಪ್ಯೂಟರ್ ನಮ್ಮ ಜಗತ್ತಿಗೆ ಕಾಲಿಟ್ಟಿತು ಮತ್ತು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿತು. ಆಗ ಟೈಪ್‌ರೈಟರ್ ಅನ್ನುವ ವಸ್ತು ದಿವಂಗತವಾಯಿತು. ಅದನ್ನು ಹೂಳಲು ಗುಂಡಿ ತೋಡುವ ಸದ್ದು ಕಿವಿಗೆ ಬಿದ್ದಾಗ ಎಲ್ಲರೂ ಗೊಳೋ ಎಂದು ಅತ್ತಿದ್ದೂ ಆಯ್ತು. ಕ್ಯಾಸೆಟ್ ಟೇಪ್ ರೆಕಾರ್ಡರ್ ಕೂಡಾ ಸುಮಾರು ವರ್ಷ ಬಾಳಿ ಬದುಕಿ, ಈಗ ಹೆಚ್ಚು ಕಡಿಮೆ ಕಾಣೆಯಾಗಿದೆ. ಅದರ ಮುಂದಿನ ಪೀಳಿಗೆಯ ಊಟದ ತಟ್ಟೆಯಷ್ಟಗಲದ ರೆಕಾರ್ಡ್ ಪ್ಲೇಯರ್ ಅಪರೂಪಕ್ಕೆ ಯಾರೋ ಒಬ್ಬರ ಮನೆಯಲ್ಲಿರುತ್ತಿತ್ತು. ಅದು ಕೂಡಾ ಈಗ ಕಾಲವಾಗಿದೆ.
ಸಿಂಗಲ್ ಡೋರಿನ ಸಣ್ಣ ಫ್ರಿಡ್ಜ್ ಜಾಗವನ್ನು ರಾಕ್ಷಸಾಕಾರದ ಡಬಲ್ ಡೋರಿನ ಆಟೋ ಡಿಫ್ರಾಸ್ಟ್ ಫ್ರಿಡ್ಜ್‌ಗಳು ತುಂಬಿಸಲು ದಶಕಗಟ್ಟಳೆ ಸಮಯ ಹಿಡಿಯಿತು. ಆಮೇಲೆ ಮೊಬೈಲ್ ಫೋನ್ ನಮ್ಮ ಬದುಕಿಗೆ ಕಾಲಿಟ್ಟ ಕೂಡಲೇ ಲ್ಯಾಂಡ್ ಲೈನ್ ಫೋನ್‌ಗಳು ಪಳಿಯುಳಿಕೆಗಳಾದವು, ಜೊತೆಜೊತೆಗೆ ಟೆಲಿಗ್ರಾಮ್, ಪಬ್ಲಿಕ್ ಟೆಲಿಫೋನ್ ಬೂತ್‌ಗಳು ಕೂಡಾ ನಮ್ಮ ಬದುಕಿನಿಂದ ಕಾಣೆಯಾದವು. ಇವೆಲ್ಲ ಆಗುವಾಗ ದಶಕಗಳೇ ಕಳೆದುಹೋಗಿದ್ದವು. ಇಲ್ಲಿಯವರೆಗಿನ ಆವಿಷ್ಕಾರಗಳನ್ನು ‘ಬದಲಾವಣೆ ಜಗದ ನಿಯಮ’ ಅನ್ನುವ ರೀತಿ ನೋದಬಹುದು. ಆಮೇಲೆ ಶುರುವಾಯ್ತಲ್ಲ ಈ ನಾಗಾಲೋಟ!
ಕಣ್ಣು ಎರಡು ಸಲ ಪಿಳುಕಿಸಿದರೆ ಒಂದು ವಸ್ತು outdated ಆಗಿಹೋಗಿರುತ್ತದೆ! ಕಂಪ್ಯೂಟರ್‌ಗಳನ್ನು ಕೊಂಡು ಅಂಗಡಿಯಿಂದ ಆಚೆ ಬರುವಷ್ಟರಲ್ಲೇ outdated ಆಗಿಹೋಯಿತೇನೋ ಅನ್ನಿಸುವ ಸ್ಥಿತಿ. ಮೊನ್ನೆ ಮೊನ್ನೆಯವರೆಗೆ ಒಂದಿಷ್ಟು ಡೇಟಾ ಫೈಲ್ಸ್ ತುಂಬಿಡಲು ಒಂದು ಚೀಲ ಭರ್ತಿ ಫ್ಲಾಪಿ ಡಿಸ್ಕ್ ಅನ್ನು ಪೇರಿಸಿಡುತ್ತಿದ್ದೆವು. ಆಮೇಲೆ ಅದು ಸಿ.ಡಿ ಆಯಿತು. ಈಗ ಒಂದು ಸಣ್ಣ ಕಡ್ಡಿಯಂತ ಪೆನ್ ಡ್ರೈವ್ ಟನ್‌ಗಟ್ಟಳೆ ಫೈಲ್‌ಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತದೆ. ಇಡೀ ಹಾಲ್ ಅನ್ನು ಆಕ್ರಮಿಸುತ್ತಿದ್ದ ಟಿ.ವಿ ಈಗ ಗೋಡೆಗೆ ಜೋತುಬೀಳುವಷ್ಟು ಹಗುರಾಗಿ ಹೋಗಿದೆ. ಕೇಜಿಗಟ್ಟಳೆ ತೂಕವಿದ್ದ ಮೊಬೈಲ್ ಫೋನ್‌ಗಳು, ಈಗ ವಿಶ್ವ ಸುಂದರಿಯರ ಹಾಗೆ ಗ್ರಾಂ ಲೆಕ್ಕಕ್ಕೆ ಇಳಿದಿವೆ. ಹಿಂದಿನ ವರ್ಷ ತೆಗೆದುಕೊಂಡ ಮೊಬೈಲ್ ಹ್ಯಾಂಡ್ ಸೆಟ್ಟನ್ನು ಮುಂದಿನ ವರ್ಷವೂ ಉಪಯೋಗಿಸುತ್ತಿದ್ದರೆ ಏನೋ ಕೀಳರಿಮೆಯ ಭಾವ! ಈ ಎಲ್ಲ technology ಯ ಮತ್ತು ವಿಜ್ಞಾನದ ಮುಂದುವರಿಕೆಯನ್ನು ಸ್ವಾಭಾವಿಕ ಅನ್ನುವ ಹಾಗೆ ಮನಸ್ಸು ಸ್ವೀಕರಿಸಲು ಶುರು ಮಾಡಿದೆ.
ಇದಷ್ಟೇ ಅಲ್ಲದೆ ಮನುಷ್ಯನ ಜೀವಿತಾವಧಿಯನ್ನು ದೀರ್ಘವಾಗಿಸುವಂತ ಹಲವಾರು ಔಷಧಿಗಳು ನಮ್ಮ ಬದುಕಿಗೆ ಕಾಲಿಟ್ಟವು. ಮುಂಚೆ ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ಇಂಥ ಖಾಯಿಲೆಗಳು ವಕ್ಕರಿಸಿದ ಕೂಡಲೆ ಮನುಷ್ಯನ ಜೀವನ ಮುಗಿಯಿತು ಅಂದುಕೊಳ್ಳುತ್ತಿದ್ದ ಕಾಲವೇ ಬದಲಾಗಿ ಬಿಟ್ಟಿತು. ಈ ಎಲ್ಲ ಬದಲಾವಣೆಗಳು ನಮ್ಮ ಬದುಕಿನ quality ಮತ್ತು quantity ಎರಡನ್ನೂ ಹೆಚ್ಚಿಸಿದವು. ಇವೆಲ್ಲ ಬದುಕುವ ಸಾಧ್ಯತೆ ಇರುವವರ ಕತೆಯಾಯಿತು. ಆರು ತಿಂಗಳು ಬದುಕುವವರು ಒಂದು ವರ್ಷ ಬದುಕುತ್ತಾರೆ ಅಂದರೆ ಪ್ರೀತಿ ಪಾತ್ರರಿಗೆ ಸಂತೋಷವಾಗುವುದು ಸಹಜ. ಆದರೆ ಮೊನ್ನೆಮೊನ್ನೆಯ ಒಂದು ಘಟನೆ ನೋಡಿದಾಗ ಈ ವೆಂಟಿಲೇಟರ್ ಅನ್ನುವುದನ್ನು ಯಾರು ಕಂಡು ಹಿಡಿದರು?! ಅನ್ನಿಸಿಬಿಟ್ಟಿತು. ಈ ಕೃತಕ ಉಸಿರಾಟದ ಸಾಧನ ಯಾಕೋ ಅಣು ಬಾಂಬಿನ ಹಾಗೆ, ಪ್ಲ್ಯಾಸ್ಟಿಕ್ಕಿನ ಹಾಗೆ ತುಂಬ ಪ್ರಕೃತಿಯ ವಿರೋಧಿ ಅನ್ನಿಸಿಬಿಟ್ಟಿತು.
ಪ್ರಕೃತಿಯಲ್ಲಿ ಎಲ್ಲ ಆಗು ಹೋಗುಗಳಿಗೂ ಒಂದು time frame ಅಂತ ಇದೆ … ಜೊತೆಗೆ ನಿರ್ದಿಷ್ಟ ಆಯಸ್ಸು ಅಂತ ಕೂಡಾ ಇದೆ. ಈಗಲೂ ಮರದಲ್ಲಿ ಹಸಿರು ಚಿಗುರುವುದು ಮತ್ತು ಗಿಡದಲ್ಲಿ ಹೂವು ಅರಳುವುದಕ್ಕೆ ನಿರ್ದಿಷ್ಟ ಸಮಯ ಬೇಕೇ ಬೇಕು. ಸೂರ್ಯ ಅಷ್ಟೇ ನಿಯತ್ತಿನಿಂದ ಅದೇ ಸಮಯಕ್ಕೆ ಹುಟ್ಟುತ್ತಾನೆ… ಮಾಯವೂ ಆಗುತ್ತಾನೆ. ಅಂಥ romantic ಚಂದ್ರ ಈಗಲೂ ರಾತ್ರಿಯಲ್ಲೇ ಹುಟ್ಟುತ್ತಾನೆ. ಮಕ್ಕಳು ತಯಾರಾಗಲು ಸರಿಯಾಗಿ ಒಂಭತ್ತು ತಿಂಗಳು ಈಗಲೂ ಅಗತ್ಯ. ಆದರೆ ಸಹಜ ಸಾವು ಎದುರಾದ ವ್ಯಕ್ತಿಯನ್ನು ಮಾತ್ರ ಸಾಯಲು ಬಿಡದೇ, ಯಾಕೆ ಸಾವನ್ನು ವೆಂಟಿಲೇಟರ್‌ನ ಸಹಾಯದಿಂದ ಮುಂದೂಡುತ್ತಿದ್ದೇವೆ? ಮೂರು ನಿಮಿಷಗಳ ಕಾಲ ಮಿದುಳಿಗೆ ಆಮ್ಲಜನಕ ಪೂರೈಕೆಯಾಗದಿದ್ದರೆ ಮನುಷ್ಯನ ಮಿದುಳು ಸತ್ತು ಹೋಗುತ್ತದಂತೆ.
ಹಾಗಾಗಿ ಸ್ವಂತವಾಗಿ ಉಸಿರಾಡಲು ಸಾಧ್ಯವಾಗದ ಬಲಹೀನ ಸ್ಥಿತಿಯಲ್ಲಿರುವವರ ಸಹಾಯಕ್ಕೆಂದು ಹುಟ್ಟಿಕೊಂಡ ಈ ವೆಂಟಿಲೇಟರ್, ಈಗ ಮಿದುಳು ಮತ್ತು ಹೃದಯ ಎರಡರ ಆಯಸ್ಸೂ ಮುಗಿವ ಹಂತ ತಲುಪಿದವರನ್ನೂ ಜೀವಂತವಾಗಿಡಲು ಯಾಕೆ ಬಳಕೆಯಾಗುತ್ತಿದೆ? ಬದುಕುವ ಸಾಧ್ಯತೆ ಇರುವವರನ್ನು ಬದುಕಿಸುವ ಎಲ್ಲ ಪ್ರಯತ್ನ ಮಾಡುವುದೂ ಡಾಕ್ಟರ್‌ಗಳ ಕರ್ತವ್ಯ ಅನ್ನುವುದು ನಿಜವಾದರೂ, ಬದುಕುಳಿಯುವ ಸಾಧ್ಯತೆಯೇ ಇಲ್ಲದ ರೋಗಿಗಳ ಸಾವನ್ನು ಯಾಕೆ ಈ ವೆಂಟಿಲೇಟರ್‌ನ ಸಹಾಯದಿಂದ ಮುಂದೂಡಬೇಕು? ಅಂತೆಲ್ಲ ಯಾಕೋ ಕಸಿವಿಸಿ ಮನಸ್ಸಿನಲ್ಲಿ …
ಈ ರೀತಿ ಆಗಲು ಕಾರಣವಾದದ್ದು ಈ ಘಟನೆ. ಅವರೊಬ್ಬರಿದ್ದರು. ತುಂಬ ವಯಸ್ಸಾಗಿತ್ತು. ಎಲ್ಲರಿಗೂ ಸಾಯುವುದಕ್ಕೊಂದು ನೆಪ ಬೇಕಿದ್ದ ಹಾಗೆ ಆತನಿಗೂ ಒಂದು ರಾತ್ರಿ ಜ್ಞಾನ ತಪ್ಪಿ ಬಿದ್ದು ಬಿಟ್ಟರು.
ಆಸ್ಪತ್ರೆಗೆ ಸೇರಿಸಿದ್ದೂ ಆಯ್ತು. ಆ ವಯಸ್ಸಿನವರಿಗೆ ಯಾವ ಆಪರೇಷನ್ ಕೂಡಾ ಮಾಡಿ ಉಳಿಸುವ ಸಾಧ್ಯತೆ ಇರಲಿಲ್ಲ. ಇನ್ನು ಕ್ಷಣ ಅಥವಾ ದಿನಗಳಷ್ಟೇ ಅವರ ಆಯಸ್ಸು ಅನ್ನುವುದು ಖಚಿತವಾಗಿತ್ತು. ಆದರೆ ಮಕ್ಕಳು ವಿದೇಶದಲ್ಲಿ ನೆಲೆಸಿದ್ದರು. ಅವರು ವಾಪಸ್ಸಾಗುವವರೆಗೂ ಆತನ ಪ್ರಾಣ ಉಳಿಯುವ ಸಾಧ್ಯತೆ ಇರಲಿಲ್ಲ. ಮುಂಚಿನ ದಿನಗಳಲ್ಲಿ ಈ ರೀತಿಯ ಸಂದರ್ಭ ಎದುರಾದರೆ ಆತನ ಪ್ರಾಣ ನಾರ್ಮಲ್ಲಾಗಿ ಹೋದ ನಂತರ ದೇಹವನ್ನು ಐಸ್ ಬಾಕ್ಸಿನಲ್ಲಿ ಕೆಡದಂತೆ ಇಡಲಾಗುತ್ತಿತ್ತು. ಆದರೆ ಈಗ ಈ ವೆಂಟಿಲೇಟರ್ ಅನ್ನುವ ಸಾಧನವೊಂದಿದೆಯಲ್ಲ, ಅದರ ಸಹಾಯದಿಂದ, for all practical purposes ಜೀವವಿಲ್ಲ ಅನ್ನುವ ಲೆಕ್ಕಕ್ಕೆ ಸೇರಿಸಬಹುದಾದ ಇಂಥವರನ್ನೂ ಮಕ್ಕಳು ಬರುವವರೆಗೆ ಉಸಿರಾಡುವ ಸ್ಥಿತಿಯಲ್ಲಿ ಇಡಲು ಸಾಧ್ಯವಾಗಿದೆ.
ಅಷ್ಟು ದೂರದಿಂದ ಓಡಿಕೊಂಡು ಬಂದವರಿಗೆ ಉಸಿರಾಡುವ ಸ್ಥಿತಿಯಲ್ಲಿ ತಂದೆ ಅಥವಾ ತಾಯಿಯನ್ನು ನೋಡಿದೆ ಅನ್ನುವ ಸಮಾಧಾನವಂತೂ ಸಿಗುತ್ತದೆ … ಆತ ಅಥವ ಆಕೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಕೂಡಾ. ಇಂಥ ಸಂದರ್ಭದಲ್ಲಿ ಹಾಕಿದ ವೆಂಟಿಲೇಟರಿನ ಒಂದು ನಳಿಕೆ ಎಳೆದರೆ ಆ ವ್ಯಕ್ತಿ ಹತ್ತು ನಿಮಿಷದಲ್ಲಿ ಸಾಯುವುದು ಖಂಡಿತ. ಅದು ಡಾಕ್ಟರ್‌ಗೆ ಗೊತ್ತಿರುತ್ತದೆ. ಹಾಗಿದ್ದಾಗ್ಯೂ ಮಕ್ಕಳು ಬಂದು ರೋಗಿಯನ್ನು ನೋಡಿದ ಕೂಡಲೇ, ಡಾಕ್ಟರ್‌ಗಳು ಆ ವೆಂಟಿಲೇಟರನ್ನು ತೆಗೆಯದೇ ‘ನೀವು ಹೇಳಿದ ಕೂಡಲೇ ತೆಗೆಯುತ್ತೇವೆ’ ಅಂತ ಹೇಳಿ ಕೈ ತೊಳೆದುಕೊಳ್ಳುತ್ತಾರಲ್ಲ
ಧರ್ಮ ಸಂಕಟ ಅನ್ನುವುದು ಶುರುವಾಗುವುದು ಈ ಘಳಿಗೆಯಲ್ಲೇ. ಮನೆಯವರಿಗೆ ಎಲ್ಲ ಸತ್ಯ ಗೊತ್ತಿದ್ದರೂ, ಆ ವೆಂಟಿಲೇಟರನ್ನು ತೆಗೆದು ಪ್ರಾಣ ಹೋಗಲು ಬಿಡಿ ಅಂತ ಖಡಾಖಂಡಿತವಾಗಿ ಹೇಳಲು ಬಾಯೇ ಬರುವುದಿಲ್ಲ. ಉಸಿರಾಡುತ್ತಿರುವವರಿಗೆ ಆ ಆಕ್ಸಿಜನ್ ಪೂರೈಕೆ ನಿಲ್ಲಿಸಲು ಹೇಳಿ, ಒಂದು ರೀತಿಯಲ್ಲಿ ತಾವೇ ಬದುಕಿರುವವರನ್ನು ಸಾಯಿಸಿ ಅಂತ ಹೇಳುವ ಕಟುಕರಂತೆಯೂ ಮತ್ತು ಕೊಲೆಗಡುಕರಂತೆಯೂ ಅಪರಾಧೀ ಪ್ರಜ್ಞೆ ಕಾಡತೊಡಗುತ್ತದೇನೋ. ಹಾಗಾಗಿ ಡಾಕ್ಟರ್ ಹಾಗೆ ಹೇಳಿದಾಗ ಅದನ್ನೇ ಕಾಯುತ್ತಿದ್ದವರ ಹಾಗೆ ತೆಗೆಯಲು ಅನುಮತಿ ಕೊಡದೇ ಇನ್ನೊಂದೆರಡು ದಿನ ಆಗಲಿ ಅಂತಲೋ ಮತ್ತೆ ಯಾವುದಾದರೂ ಸ್ಕ್ಯಾನಿಂಗ್ ಮಾಡಿಸಿ ಅಂತಲೋ ಹೇಳುತ್ತಾರೆ. ಅ ಸ್ಕ್ಯಾನಿಂಗ್ ಮಾಡಿಸಿದರೆ ಕೂಡಾ ಬದುಕುವ ಸಾಧ್ಯತೆ ಇಲ್ಲ ಅನ್ನುವುದು ಮನೆಯವರಿಗೆ ಮತ್ತು ಆ ಡಾಕ್ಟರಿಗೆ ಇಬ್ಬರಿಗೂ ತಿಳಿದಿರುತ್ತದೆ. ಹಾಗಿದ್ದಾಗ್ಯೂ ಮನಸ್ಸಿನ ಅಳುಕು ವೆಂಟಿಲೇಟರ್ ತೆಗೆಯಿರಿ ಅಂತ ಹೇಳಲು ಬಿಡುವುದೇ ಇಲ್ಲ. ಡಾಕ್ಟರ್‌ಗಳಿಗೂ ರೋಗಿಗಳ ಕಡೆಯವರ ಮನಃಸ್ಥಿತಿ ಚೆನ್ನಾಗಿ ಅರ್ಥವಾಗಿರುತ್ತದೆ. ಹಾಗಾಗಿ ಹಣ ಖರ್ಚು ಮಾಡಲು ಶಕ್ತಿ ಇರುವವರಾದ್ದರಿಂದ, ಮತ್ತೆ ಆ ರೋಗಿಯನ್ನು ಉಳಿಸುವ ಪ್ರಯತ್ನದಲ್ಲಿರುವವರಂತೆ ಮತ್ತೆ ಯಾವುದೋ ಸ್ಕ್ಯಾನಿಂಗ್‌ಗೆ ಆ ದೇಹವನ್ನು ಒಡ್ಡುತ್ತಾರೆ. ಮತ್ತಿಷ್ಟು ಸಮಯ ಹಾಗೂ ಹಣ ಎರಡೂ ಕೈ ಬಿಟ್ಟು ಹೋದ ಮೇಲೆ ಇದೆಲ್ಲ ವ್ಯರ್ಥ ಪ್ರಯತ್ನ ಅನ್ನುವ ಅರಿವು ಮೂಡಿ ಕೊನೆಗೆ ರೋಗಿಯ ಕಡೆಯವರು ಆ ಕಠಿಣ ಘಳಿಗೆಯನ್ನು ಎದುರಿಸುವ ನಿರ್ಧಾರಕ್ಕೆ ಬರುತ್ತಾರೆ.
ಈ ಘಟನೆಯಲ್ಲಿ ಆಗಿದ್ದೂ ಅದೇ. ಬಂದಕೂಡಲೇ ವೆಂಟಿಲೇಟರ್ ತೆಗೆಯಿರಿ ಅಂತ ನಿರ್ದಾಕ್ಷಿಣ್ಯವಾಗಿ ಹೇಳಲು ಸಾಧ್ಯವಾಗದೇ ಇನ್ನೆರಡು ದಿನ ಸಾವನ್ನು ಮುಂದೂಡುವ ನಿರ್ಧಾರಕ್ಕೆ ಬಂದರು. ಎಲ್ಲರಿಗೂ ಗೊತಿತ್ತು ವೆಂಟಿಲೇಟರ್ ತೆಗೆದ ಹತ್ತು ನಿಮಿಷ ಕೂಡಾ ಆತ ಬದುಕಿರುವುದಿಲ್ಲ ಎಂದು. ಆದರೆ ನೆಂಟರಿಷ್ಟರು ಅದನ್ನು ತೆಗೆಸಿರಿ ಅಂತ ಹೇಗೆ ಹೇಳಿಯಾರು? ಹಾಗಾಗಿ ಸುಮ್ಮನೆ ಕಾಯುವುದು ಅನಿವಾರ್ಯವಾಗಿತ್ತು. ಆದರೆ ವೆಂಟಿಲೇಟರ್‌ನ ಬಲದಿಂದ ಆತನ ಎದೆ ಏರಿಯುತ್ತಿತ್ತೇ ವಿನಃ, ಆತ ಬದುಕಿದ್ದಾರೆ ಅಂತ ಹೇಳುವ ಯಾವ ಪುರಾವೆಯೂ ಅಲ್ಲಿರಲಿಲ್ಲ. ಆ ರೀತಿ ಇರುವಾಗ ಅಲ್ಲಿ ನೆರೆದಿದ್ದ ನೆಂಟರಿಷ್ಟರನ್ನು ಯಾರಾದರೂ ಈಗ ಸ್ಥಿತಿ ಹೇಗಿದೆ ಅಂತ ವಿಚಾರಿಸಿದರೆ, ಆತ ಬದುಕಿದ್ದಾರೋ, ಸತ್ತಿದ್ದಾರೋ ಅಂತ ಕೂಡಾ ನಿರ್ಧಾರಕ್ಕೆ ಬರಲಾಗದವರಂತೆ ‘ಏನೂ ಉಪಯೋಗವಿಲ್ಲ. ಬಹುಶಃ ನಾಳೆ ಬಾಡೀನ ಮನೆಗೆ ತಗೊಂಡು ಹೋಗ್ತಾರೆ ಅನ್ನಿಸುತ್ತೆ’ ಅಂತಲೋ ‘ಕ್ರಿಮೇಷನ್ ನಾಳೆ ಅಂತ ಅಂದುಕೊಳ್ತಿದ್ದರು’ ಅಂತಲೋ ಉತ್ತರಿಸಿ ಬಿಡುತ್ತಿದ್ದರು. ಬದುಕಿರುವಾಗಲೇ ‘ಬಾಡಿ’ ಯಾಗಿ ಹೋಗುವ ಮತ್ತು ‘ಕ್ರಿಮೇಷನ್’ ಅನ್ನುವ ಮಾತು ಉಪಯೋಗಿಸುವ ಸ್ಥಿತಿ ಬರುತ್ತದೆ ಅಂದರೆ ಅದಕ್ಕಿಂತ ಹೀನಾಯ ಸ್ಥಿತಿ ಮತ್ತೇನಿರಲು ಸಾಧ್ಯ? ಮಾತು ಆಡಿದ ನಂತರ, ಅದು ತಪ್ಪು ಅನ್ನುವ ಅರಿವಾಗಿ ನಾಲಿಗೆ ಕಚ್ಚಿಕೊಂಡು ತಮ್ಮ ಮಾತನ್ನು ಸರಿ ಪಡಿಸಿಕೊಂಡರು ಅನ್ನುವುದು ನಿಜ. ಆದರೆ ಆ ಘಳಿಗೆಯಲ್ಲಿ ನನಗೆ ತೀವ್ರವಾಗಿ ಅನ್ನಿಸಿತು ‘ಉಹ್ಞೂ, ವೆಂಟಿಲೇಟರ್ ಅನ್ನುವುದು ಇರಬಾರದಿತ್ತು’ ಎಂದು. ಬದುಕಿರುವಾಗಲೇ ಬಾಡಿಯಾಗುವಂತ ದುರ್ದೈವ ನಿಜಕ್ಕೂ ಯಾರಿಗೂ ಎದುರಾಗಬಾರದು.
ಕೊನೆಗೆ ಮನೆಯವರು ನಿರ್ಧಾರ ತೆಗೆದುಕೊಳ್ಳಲೇ ಬೇಕಾದ ಘಳಿಗೆ ಎದುರಾಯಿತು. ಇನ್ನು ಸಾವನ್ನು postpone ಮಾಡುವುದು ಅಸಾಧ್ಯವಾಗಿತ್ತು. ಕೊನೆಗೆ ಅಳೆದೂ, ಸುರಿದೂ ವೆಂಟಿಲೇಟರ್ ತೆಗೆಸುವ ನಿರ್ಧಾರಕ್ಕೆ ಬಂದರು. ತೆಗೆಸಿದ ಹತ್ತು ನಿಮಿಷಕ್ಕೆ ಸರಿಯಾಗಿ ಪ್ರಾಣ ಹೋಯಿತು ಕೂಡಾ. ಇದನ್ನೆಲ್ಲ ನೋಡುತ್ತಿದ್ದ ನಾನು ಜೊತೆಯಲ್ಲಿದ್ದ ಅಕ್ಕನಿಗೆ ಹೇಳಿದೆ ‘ನಾನು ನಿನಗಿಂತ ಮುಂಚೆ ಏನಾದ್ರೂ ಸಾಯೋ ಸ್ಥಿತಿ ಬಂದರೆ, ದಯವಿಟ್ಟು ನನ್ನನ್ನು ವೆಂಟಿಲೇಟರ್‌ನ ಆಧಾರದಿಂದ ಮಾತ್ರ ಉಸಿರಾಟದಲ್ಲಿಡಬೇಡ. ಸುಮ್ಮನೆ ಸ್ವಾಭಾವಿಕವಾಗಿ ಸತ್ತು ಹೋಗಲು ಬಿಟ್ಟು ಬಿಡು. ನಾನು ಬದುಕಿರುವಾಗಲೇ ಬಾಡಿಯಾಗೋದಿಕ್ಕೆ ಬಯಸುವುದಿಲ್ಲ’ ಎಂದು. ಇಂಥ ಸಂದರ್ಭಗಳಿಗೆ ಮನುಷ್ಯರನ್ನು ಬಲವಂತವಾಗಿ ದೂಡಿ ಬದುಕಿರುವವರನ್ನು ಬದುಕಲು ಬಿಡದ, ಸಾವು ಎದುರಾದವರನ್ನು ಸಾಯಲು ಬಿಡದ ಈ ವೆಂಟಿಲೇಟರ್, ಹಿರೋಷಿಮ ಮತ್ತು ನಾಗಸಾಕಿಯನ್ನು ನಿರ್ನಾಮ ಮಾಡಿದ ಅಣುಬಾಂಬಿನಷ್ಟೇ ಕ್ರೂರಿ ಅನ್ನಿಸಿತು ಆ ಕ್ಷಣಕ್ಕೆ …
ಅಹವಿ ಹಾಡು : ವೆಂಟಿಲೇಟರ್ ಅನ್ನುವ emotional blackmailer ….

Nanna appanaddu heege aagittu.
4dina ventilator li ittu…konege tegeyoda?! Anta nammanna kelidru….avaru saaytaare anta gottidroo tegsakke mansu irlilla..konege usiru summanaadamele…ellaa mugeetu ashte.
Good writeup..
Naanoo kooda eee sandharbhadalli palugondidde.Kruthaka usiratavannu madade iruvudu sooktha.Hattiradavarige aaa novu tumbaa viditha.Ellakkintha hechagi lekhanada niroopane chennagide
N.VISWANATHA
ಉಸಿರಾಡುತ್ತಿರುವವರಿಗೆ ಆ ಆಕ್ಸಿಜನ್ ಪೂರೈಕೆ ನಿಲ್ಲಿಸಲು ಹೇಳಿ, ಒಂದು ರೀತಿಯಲ್ಲಿ ತಾವೇ ಬದುಕಿರುವವರನ್ನು ಸಾಯಿಸಿ ಅಂತ ಹೇಳುವ ಕಟುಕರಂತೆಯೂ ಮತ್ತು ಕೊಲೆಗಡುಕರಂತೆಯೂ ಅಪರಾಧೀ ಪ್ರಜ್ಞೆ ಕಾಡತೊಡಗುತ್ತದೇನೋ. Mele helliddella doctorsge irodilla anthana nimma abhiprayaa.
ventilators are essential and life saving part of any intensive care unit. They are invaluable in several disease conditions where the person is alive with otherwise good health but cannot breathe on his/her own, this is just to name one, but there are several such situations where ventilator will be used to keep the patient alive till he/she starts breathing on their own. A lot of such patients especially children and young patients will do well once the primary disease starts resolving.
I have been following your articles for some time now. most of them i have enjoyed reading and on several occasions I have suggested others about the same.
ವೆಂಟಿಲೇಟರ್ ಯಾವ ಅಪರಾಧ ಮಾಡಿದೆ ಆಹವಿಯವರೇ, ಜಗತ್ತಿನಾದ್ಯಂತ ಕೋಟ್ಯಾಂತರ ಜೀವವನ್ನುಳಿಸಿದ್ದೇ ಅದರ ಅಪರಾಧವೇ ? ವೈದ್ಯಕೀಯ ದುರ್ಲಾಭದ ಉದ್ಯಮವಾಗಿ ಪರಿಣಮಿಸಿರುವುದರ ಫಲವೋ, ವೈದ್ಯರು ಲಾಭದಾಸೆಗೆ ಸರಿಯಾದ ಸಲಹೆ ನೀಡದ ಪರಿಣಾಮವೋ ?
ಇದಕ್ಕೆ ಹಿನ್ನೆಲೆಯೆಂಬಂತೆ ನೀವು ವಿವಿಧ ಹೊಸ ಆವಿಷ್ಕಾರಗಳ ಬಗ್ಗೆ ಹೇಳಿದ್ದೀರಿ. ಇವು ಅನಗತ್ಯವಾಗಿತ್ತು ಎಂಬಂತೆ ಅಥವಾ ಟೆಲಿಗ್ರಾಮ್, ಲ್ಯಾಂಡ್ ಲೈನ್ ಗಳು ತಮ್ಮ ಕಾಲಕ್ಕೆ ತಾವು ಸಲ್ಲಿಸಿರುವ ಸೇವೆಯ ಹೊರತಾಗಿಯೂ ಮೊಬೈಲ್ ಈ ಎರಡೂ ಸೇವೆಗಳನ್ನು ಇನ್ನೂ ಅನೇಕ ಪ್ರಯೋಜನಗಳೊಡನೆ ಒದಗಿಸದೇ ಹೋಗಿದ್ದರೆ ಅನುಭವಿಸಬೇಕಾದ ಬೇಗುದಿ, ಸಮಸ್ಯೆಗಳ ಬಗ್ಗೆ ಮಾತೇ ಇಲ್ಲವಲ್ಲ.
ಹಾಗಾಗಿ ಸ್ವಂತವಾಗಿ ಉಸಿರಾಡಲು ಸಾಧ್ಯವಾಗದ ಬಲಹೀನ ಸ್ಥಿತಿಯಲ್ಲಿರುವವರ ಸಹಾಯಕ್ಕೆಂದು ಹುಟ್ಟಿಕೊಂಡ ಈ ವೆಂಟಿಲೇಟರ್, ಈಗ ಮಿದುಳು ಮತ್ತು ಹೃದಯ ಎರಡರ ಆಯಸ್ಸೂ ಮುಗಿವ ಹಂತ ತಲುಪಿದವರನ್ನೂ ಜೀವಂತವಾಗಿಡಲು ಯಾಕೆ ಬಳಕೆಯಾಗುತ್ತಿದೆ? ಬದುಕುವ ಸಾಧ್ಯತೆ ಇರುವವರನ್ನು ಬದುಕಿಸುವ ಎಲ್ಲ ಪ್ರಯತ್ನ ಮಾಡುವುದೂ ಡಾಕ್ಟರ್‌ಗಳ ಕರ್ತವ್ಯ ಅನ್ನುವುದು ನಿಜವಾದರೂ, ಬದುಕುಳಿಯುವ ಸಾಧ್ಯತೆಯೇ ಇಲ್ಲದ ರೋಗಿಗಳ ಸಾವನ್ನು ಯಾಕೆ ಈ ವೆಂಟಿಲೇಟರ್‌ನ ಸಹಾಯದಿಂದ ಮುಂದೂಡಬೇಕು? ಅಂತೆಲ್ಲ ಯಾಕೋ ಕಸಿವಿಸಿ ಮನಸ್ಸಿನಲ್ಲಿ … dhayavittu g n nagaraj sir mattu anonymous ibroo ee saalugalige gamana kodabekaagi prarthane…
Bharati B V
ಭಾರತಿಯವರೇ,ನಿಮ್ಮ ಪ್ರಶ್ನೆಗೆ ನನ್ನ ಪ್ರತಿಕ್ರಿಯೆಯಲ್ಲಿ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ವೈದ್ಯಕೀಯದ ವಾಣಿಜ್ಯೀಕರಣ, ಡಾಕ್ಟರುಗಳ ವೈದ್ಯವೃತ್ತಿ ವಿರುದ್ಧ ನಡೆವಳಿಕೆ ಆದ್ದರಿಂದ ನಮ್ಮ ಗುರಿ ತಂತ್ರಜ್ಞಾನವನ್ನು ಉಪಯೋಗಿಸುವರಲ್ಲಿ ಇರುವ ಸಮಸ್ಯೆ
g n nagaraj sir .. Ella badalaavanegalannoo swagathisi ee maathu barediddene. .. ಈ ಎಲ್ಲ technology ಯ ಮತ್ತು ವಿಜ್ಞಾನದ ಮುಂದುವರಿಕೆಯನ್ನು ಸ್ವಾಭಾವಿಕ ಅನ್ನುವ ಹಾಗೆ ಮನಸ್ಸು ಸ್ವೀಕರಿಸಲು ಶುರು ಮಾಡಿದೆ…. ee saalugalannoo dhayavittu gamanisi … Bharati B V
Very serious and thought provoking article.