ಅಹವಿ ಹಾಡು : ವಂಶ ವೃಕ್ಷ, ನಂಜನಗೂಡು, ಸಂಬಂಧಗಳು ಇತ್ಯಾದಿ …


ನನ್ನ ಹೆಸರಿನ ಜೊತೆಗೆ ಅಂಟಿರುವ `B’ ಅನ್ನುವ ಅಕ್ಷರ ಬಾಗಲೂರು ಅನ್ನುವುದರ ಶಾರ್ಟ್ ಫಾರಂ. ನಾನು ಎಂದೂ ಕಾಣದ ಈ ಊರು ನನ್ನ ಹೆಸರಿಗೆ ಸೇರಿಕೊಂಡಿದೆ. ನಾನು ಹುಟ್ಟಿದ ಮತ್ತು ಬಾಲ್ಯದ ಸುಮಾರು ದಿನಗಳನ್ನು ಕಳೆದ ಕೊಳ್ಳೆಗಾಲದ ಜೊತೆಗೆ ನನಗೆ ತುಂಬ ಪ್ರೀತಿಯ ನೆನಪಿನ ಕೊಂಡಿಗಳಿವೆ, ಭಾವನಾತ್ಮಕವಾದ ಕನೆಕ್ಷನ್ ಇದೆ. ಆದರೆ ಆ ಊರು ನನ್ನ ಹೆಸರಿನ ಜೊತೆ ಸೇರಿಲ್ಲ. ಆದರೆ ಎಂದೂ ಕಾಣದ ಈ ಬಾಗಲೂರು, ಅಪ್ಪನ ಅಪ್ಪನ ಊರು ಅನ್ನುವ ಒಂದೇ ಕಾರಣಕ್ಕೆ ನನ್ನ ಹೆಸರಿನ ಜೊತೆ ಸೇರಿಕೊಂಡು ಬಿಟ್ಟಿದೆ. ಎಷ್ಟು ವಿಚಿತ್ರ ಜಗತ್ತು ಅಲ್ಲವಾ?
ರವಿಚಂದ್ರನ್ ಮತ್ತು ಮಂಡ್ಯ ರಮೇಶ್ ಇಬ್ಬರೂ ನಟಿಸಿರುವ ಒಂದು ಸಿನೆಮಾದಲ್ಲಿ ‘ಅದು ಮಂಚದ ಥರಾನೇ ಇದೆ, ಆದರೆ ಮಂಚ ಅಲ್ಲ’ … ‘ಅದು ಬಾಗಿಲಿನ ಥರಾನೇ ಇದೆ, ಆದರೆ ಬಾಗಿಲಲ್ಲ’ … ‘ಅದು ಕಿಟಕಿ ಥರಾನೇ ಇದೆ, ಆದ್ರೆ ಕಿಟಕಿ ಅಲ್ಲ’ ಅನ್ನುತ್ತಿರುತ್ತಾರೆ. ಬದುಕು ಅಂದರೆ ಹೀಗೇ … ಯಾವುದು ಏನು ಅಂದುಕೊಂಡಿರುತ್ತೀವೋ ಅದು ಅದಲ್ಲ !! ನನ್ನೂರು ಅಂದುಕೊಂಡಿರುವುದು ನನ್ನೂರಲ್ಲ ಮತ್ತು ಎಂದೂ ನೋಡದಿರುವ ಊರು ನನ್ನದು! ಈ ಥರ ನನ್ನ ಹೆಸರಿನ ಜೊತೆಗೆ ಗಂಟು ಬಿದ್ದಿರುವ ಬಾಗಲೂರು ಇರುವುದು ಎಲ್ಲಿ ಗೊತ್ತಾ? ತಮಿಳುನಾಡಿನಲ್ಲಿ! ಮೊದಲು ಈ ವಿಷಯ ಗೊತ್ತಾದಾಗ ನಾನು ದಿಗ್ಭ್ರಾಂತಳಾಗಿದ್ದೆ … ಎಲ್ಲಿಯ ನಾನು, ಎಲ್ಲಿಯ ತಮಿಳುನಾಡು! ಅಪ್ಪಟ ಕನ್ನಡಿಗಳಾದ ನನಗೂ, ತಮಿಳುನಾಡಿಗೂ ಎಲ್ಲಿಂದ ಕನೆಕ್ಷನ್ ಬಂತು ಅನ್ನುವುದು ಒಂದು ಮಿಸ್ಟರಿ ಆಗಿ ಹೋಗಿತ್ತು. ಆ ನಂತರ ತಿಳಿಯುತ್ತಾ ಹೋದ ಕಥೆ ಇದು …
ನನ್ನ ತಾತ ಬಿ.ವಿ.ನಂಜುಂಡಯ್ಯನವರ ಊರು ಬಾಗಲೂರು. ತಾತ ಹುಟ್ಟಿದ್ದು ಅದೇ ಊರಿನಲ್ಲಿ. ತಾತನ ಅಪ್ಪನದ್ದು ಒಂದಿಷ್ಟು ಜಮೀನಿತ್ತಂತೆ ಮತ್ತು ಜೊತೆಗೊಂದಿಷ್ಟು ಎಮ್ಮೆ ಮತ್ತು ಹಸುಗಳು. ಒಂದಿಷ್ಟು ವರ್ಷ ಓದಿಸಿದ ಮೇಲೆ, ಅವರ ಅಪ್ಪ ಈ ಎಮ್ಮೆ ಮತ್ತು ಜಮೀನು ನೋಡಿಕೊಳ್ಳಲು ಈ ಇಬ್ಬರು ಮಕ್ಕಳೇ ಸರಿಯಾದವರು ಅನ್ನೋ ತೀರ್ಮಾನಕ್ಕೆ ಬಂದರಂತೆ! ತಾತ ಮತ್ತು ದೊಡ್ಡ ತಾತನಿಗೆ ಓದುವ ಆಸೆ. ಮನೆಯಲ್ಲಿ ಸಪೋರ್ಟ್ ಇಲ್ಲದಿದ್ದರೆ ಪಾಪ ಓದುವುದಾದರೂ ಹೇಗೆ? ಆಗ ಬಂತು ನೋಡಿ ಕಹಾನಿ ಮೆ ಟ್ವಿಸ್ಟ್! ತಾತನ ಅಮ್ಮನಿಗೊಬ್ಬರು ತಮ್ಮ.
ಅವರಿಗೆ ಈ ಇಬ್ಬರು ಅಳಿಯಂದಿರು ಓದಲಿ ಅನ್ನೋ ಆಸೆ. ಹಾಗಾಗಿ ಅವರು ಇವರಿಬ್ಬರ ಸಪೋರ್ಟಿಗೆ ಬಂದರಂತೆ. ನೋಡಿ, ಬದುಕು ಅನ್ನುವುದು ಎಷ್ಟೆಲ್ಲ ತಿರುವುಗಳಿಂದ ಕೂಡಿರುತ್ತದೆ! ತಾತ ಮತ್ತು ಅವರ ಅಣ್ಣನಿಗೆ ಆಗ ಸುಮಾರು 10-12 ವರ್ಷವಷ್ಟೇ. ಆ ಸೋದರಮಾವ ಇವರಿಬ್ಬರನ್ನು ತಾನು ಓದಿಸುತ್ತೇನೆ ಅಂತ ಹೊರಡಿಸಿಕೊಂಡು ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದರಂತೆ. ಸೋದರಮಾವನ ಕೆಲಸ ಪೌರೋಹಿತ್ಯ ಮಾಡಿಸುವುದು. ಅರಮನೆಯಲ್ಲಿ ಋತ್ವಿಕ್ (ಸೀನಿಯರ್ ಪುರೋಹಿತರು ಅನ್ನೋಣ) ಕೆಲಸ ಸಿಕ್ಕಿತಂತೆ. ಮಹಾರಾಜರು ಚಾಮರಾಜ ಅಗ್ರಹಾರದಲ್ಲಿ ಒಂದು ಮನೆ ಕೊಟ್ಟಿದ್ದರಂತೆ. ಜೊತೆಗೆ ಮೂವತ್ತು ರೂಪಾಯಿ ಸಂಬಳ ಅಂತ ನನ್ನ ಅಪ್ಪ ಹೇಳುತ್ತಾರೆ. ಅದು ಕೆಲಸಕ್ಕೆ ಸೇರಿದಾಗಲೋ ಅಥವಾ ರಿಟೈರ್ ಆಗುವ ಕಾಲಕ್ಕೋ ಅನ್ನುವುದು ಗೊತ್ತಿಲ್ಲ. ಈ ಥರ ಕೆಲಸಕ್ಕೆ ಸೇರಿ, ಇವರಿಬ್ಬರನ್ನೂ ಜೊತೆಗಿಟ್ಟುಕೊಂಡು ಓದಿಸಲು ಶುರು ಮಾಡಿದರಂತೆ.
ಸೋದರಮಾವ ತಿಮ್ಮಣ್ಣ ಶಾಸ್ತ್ರಿಯವರು ಅರಮನೆಗೆ ಹೋದರೆ ಬರುತ್ತಿದ್ದುದು ಸಂಜೆಯೇ. ಸೋದರಮಾವನಿಗೆ ಮದುವೆಯಿಲ್ಲ. ಮನೆಯಲ್ಲಿ ಹೆಂಗಸರಿಲ್ಲ, ಹಾಗಾಗಿ ಮಧ್ಯಾಹ್ನ ಅಡುಗೆ ಮಾಡಿ ಬಡಿಸುವವರೂ ಇಲ್ಲ. ಈ ಮಕ್ಕಳಿಬ್ಬರೂ ವಾರಾನ್ನದ ಮನೆಯನ್ನು ಹಿಡಿದು, ಮಧ್ಯಾಹ್ನ ಅಲ್ಲಿಗೆ ಹೋಗಿ ಊಟ ಮಾಡುತ್ತಿದ್ದರಂತೆ. ಸೋದರಮಾವನಿಗೆ ಅರಮನೆಯಿಂದ ಆಗಾಗ ಎಲ್ಲ ದಿನಸಿ ಸಾಮಾನುಗಳೂ ಬರುತ್ತಿದ್ದವಂತೆ. ಆದರೂ, ಅದೇನು ಆ ಕಾಲಕ್ಕೆ ಸಾಲುತ್ತಿತ್ತೋ ಇಲ್ಲವೋ ಪಾಪ. ಮನೆಯಲ್ಲಿ ದೀಪ ಹತ್ತಿಸಲು ಸೀಮೆಎಣ್ಣೆ ಶಾರ್ಟೇಜ್. ಹಾಗಾಗಿ ಬೀದಿ ದೀಪದ ಕೆಳಗೆ ಓದು. ಸೋದರಮಾವ ಬಾಗಲೂರಿನಿಂದ ಬರುವಾಗಲೇ ತಾಕೀತು ಮಾಡಿ ಕರೆದುಕೊಂಡು ಬಂದಿದ್ದರಂತೆ – ಫೇಲ್ ಆದರೆ ಅಲ್ಲಿಗೆ ಓದು ಮುಕ್ತಾಯ ಅಂತ. ದೊಡ್ಡ ತಾತ ಹತ್ತನೆಯ ಕ್ಲಾಸ್‌ನಲ್ಲಿ ಫೇಲ್. ಅಲ್ಲಿಂದ ಮುಂದೆ ತಾತ ಒಬ್ಬರೇ ಓದಿದ್ದು.
ತಾತ ಆ ಕಾಲಕ್ಕೇ ಬಿ.ಎ ಮತ್ತು ಬಿ ಟಿ ಮಾಡಿದರಂತೆ ಮತ್ತು ಟೀಚರ್ ಆಗಿ ಕೆಲಸಕ್ಕೆ ಸೇರಿ, ನಂತರ ಹೆಡ್ ಮಾಸ್ಟರ್ ಆಗಿ, ರಿಟೈರ್ ಆದ ನಂತರ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೆಕ್ರೆಟರಿ ಆಗಿ ತುಂಬ ಒಳ್ಳೆಯ ಹೆಸರು ಪಡೆದರು.
ಆದರೆ ತಂದೆ-ತಾಯಿ ಮತ್ತು ಮನೆಯ ಕನೆಕ್ಷನ್ ಪೂರಕ್ಕೆ ಪೂರಾ ಕಟ್. ತಾತನ ಅಕ್ಕ ಯಾವಾಗಲೋ ಒಂದು ಸಲ ಮೈಸೂರಿಗೆ ಬಂದು ಊರಿಗೆ ಬರಲು ಕೇಳಿಕೊಂ
ಡಿದ್ದರಂತೆ. ಇವರು ಹೋಗಲಿಲ್ಲ. ಮತ್ತೆ ಆ ಮನೆಯ ಯಾರ ಮುಖವನ್ನೂ ಇವರು ನೋಡಿಲ್ಲ. ತಾತ ಮತ್ತು ದೊಡ್ಡ ತಾತನಿಗೆ ಮದುವೆ ಮಾಡಿದ್ದೂ ಸೋದರ ಮಾವನೇ. ಅವರವರ ಸಂಸಾರ ಅಂತ ಆದಮೇಲೆ ತಾತ ಮತ್ತು ಅವರ ಅಣ್ಣನ ಮಧ್ಯೆಯೂ ತುಂಬ ಬಂದು ಹೋಗುವುದೆಲ್ಲ ಇರಲೇ ಇಲ್ಲ. ಅಪ್ಪ ಮತ್ತು ಅವರ ಜೊತೆ ಹುಟ್ಟಿದವರು ದೊಡ್ಡಪ್ಪನ ಜೊತೆ ಸ್ವಲ್ಪ ಮಾತ್ರ ಕನೆಕ್ಷನ್ ಉಳಿಸಿಕೊಂಡಿದ್ದರು.

ತುಂಬ ರುಚಿಯಾಗಿ ಅಡಿಗೆ ಮಾಡುತ್ತಿದ್ದ ದೊಡ್ಡಮ್ಮನ ಮನೆಗೆ ಹೋಗಿ ಆಗೀಗ ಊಟ ಮಾಡುತ್ತಿದ್ದರಂತೆ. ಆದರೆ ನಾವೆಲ್ಲ ಹುಟ್ಟುವಷ್ಟರಲ್ಲಿ ಆ ಸಂಬಂಧದ ದಾರ ಮತ್ತಿಷ್ಟು ತೆಳುವಾಗಿತ್ತು. ಆಮೇಲೆ ನಮಗೊಬ್ಬರು ದೊಡ್ಡ ತಾತ ಮೈಸೂರಿನಲ್ಲೇ ಇದ್ದಾರೆಂದು ತಿಳಿದಿದ್ದೇ ನಾವು ಸುಮಾರು ದೊಡ್ಡವರಾದ ಮೇಲೆ. ನಾವು ಇಂದ್ರಭವನದ ಫೇಡಾ ತರಲು ಹೋದಾಗ ಆಗೀಗ ಸಿಕ್ಕುತ್ತಿದ್ದರು ದೊಡ್ಡ ತಾತ. ಅವರಿಗೆ ಏನಾದರೂ ಕೊಡಿಸುವ ಆಸೆ ಅಪ್ಪನಿಗೆ. ಆದರೆ ಏನು ಕೊಡಿಸ ಬೇಕೆನ್ನುವುದೇ ತಿಳಿಯದ ಅಪ್ಪ ತೋಚಿದ ಒಂದಿಷ್ಟು ತರಕಾರಿ, ಹಣ್ಣು, ಸ್ವೀಟು ಎಲ್ಲ ಕೊಡಿಸುತ್ತಿದ್ದರು. ಆಮೇಲೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದೆವು. ಅದು ಬಿಟ್ಟರೆ, ದೊಡ್ಡ ತಾತನ ಮನೆಗೆ ಅಂತ ನಾವು ಹೋಗಿದ್ದೂ ತುಂಬ ಕಡಿಮೆ. ಒಟ್ಟಿನಲ್ಲಿ ತೀರಾ ಸಂಬಂಧ ಕಡಿದುಹೋಗದೆ, ಸಣ್ಣ ಎಳೆಯಷ್ಟು ಮಾತ್ರ ಉಳಿದಿತ್ತು.
ತಾತನ ಬದುಕಿನಲ್ಲಿ ತಂತು ಹಿಡಿದು ಪೋಣಿಸಲು ಹೊರಟರೆ, ಪೋಣಿಸಲು ಯಾವ ಸಂಬಂಧವೂ ಇರಲೇ ಇಲ್ಲ. ಈ ರೀತಿಯ ಹಿಂದಿಲ್ಲದ, ಮುಂದಿಲ್ಲದ ಬದುಕು ತಾತನಿಗೆ ಮನಸ್ಸಿನಲ್ಲಿ ದುಃಖ ಕೊಡುತ್ತಿದ್ದಿರಬೇಕು. ಸಂಬಂಧದ ಸಣ್ಣ ತೆಳು ಎಳೆ ನೋಡಿ ಸಾಕಾದ ತಾತ ಅವರಿಗೆ ಹುಟ್ಟಿದ ಆರು ಮಕ್ಕಳನ್ನೂ ದೊಡ್ಡ ಭಾವಿ ಹಗ್ಗದಂತಾ ಪ್ರೀತಿ ಬಂಧನದಲ್ಲಿ ಕಟ್ಟಿಹಾಕುವ ನಿರ್ಧಾರ ಮಾಡಿ ಬಿಟ್ಟಿದ್ದರು! ನನ್ನ ಅಪ್ಪ-ದೊಡ್ಡಪ್ಪ-ಚಿಕ್ಕಪ್ಪ- ಮತ್ತು ಮೂರು ಅತ್ತೆಯರ ಮಧ್ಯೆ ತಾತ ಸದಾಕಾಲ ಕೊಂಡಿ ಹಾಕಲು ಒದ್ದಾಡುತ್ತಲೇ ಇರುತ್ತಿದ್ದರು. ರಜೆಯಲ್ಲಿ ಒಬ್ಬರ ಮನೆಗೆ ಉಳಿದವರೆಲ್ಲ ಕಡ್ಡಾಯವಾಗಿ ಹೋಗಲೇಬೇಕು, ಬೆರೆಯಲೇ ಬೇಕು. ಮನೆಯಲ್ಲಿ ಹೆಂಗಸರಿದ್ದರೆ ಎಲ್ಲರೂ ಬಂದು, ಹೋಗುವುದು ನಡೆಯುತ್ತಿರುತ್ತದೆ. ಆದರೆ ನನ್ನ ತಾತನ ಜೀವನ ಒಂಥರಾ ಶಾಪಗ್ರಸ್ತ ಜೀವನ ಅನ್ನಿಸಿಬಿಡುತ್ತದೆ ಒಂದೊಂದು ಸಲ.
ನನ್ನ ಅಜ್ಜಿ 44 ವರ್ಷದವರಿರುವಾಗಲೇ ಸತ್ತು ಹೋದರಂತೆ… ಕ್ಯಾನ್ಸರ್‌ನಿಂದ. ತಾತ ಮತ್ತೆ ಮದುವೆಯಾಗಲಿಲ್ಲ. ಹಾಗಾಗಿ ಈಗ ತಾತನೇ ಎಲ್ಲರ ಮಧ್ಯೆ ಬಾಂಧವ್ಯ ಉಳಿಸಲು ಒದ್ದಾಡಿ ಕೊಳ್ಳುತ್ತಿದ್ದರು. ಅಜ್ಜಿ ಸಾಯುವ ಹೊತ್ತಿಗಾಗಲೇ ಮೂರು ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸಿದ್ದರಂತೆ. ಆಮೇಲೆ ಗಂಡುಮಕ್ಕಳದ್ದೂ ಆಯ್ತು. ನಾವೆಲ್ಲ ಅವತರಿಸಿದ್ದೂ ಆಯ್ತು.
ಎಲ್ಲರ ಮಧ್ಯೆ ಬಂಧ ಉಳಿಸಲು, ಎಲ್ಲರೂ ಆಗಾಗ ಕಡ್ಡಾಯವಾಗಿ ಸೇರಲೇ ಬೇಕು ಅಂತ ತೀರ್ಮಾನಿಸಿದ ತಾತ, ನಂಜನಗೂಡಿನಲ್ಲಿ ವರ್ಷಕ್ಕೊಂದು ಸಲ ಕೊಟಾರೋತ್ಸವ ಮಾಡಿಸಲು ಶುರು ಮಾಡಿದರು. ಎಲ್ಲ ಗಂಡು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬರಲೇ ಬೇಕು ಅನ್ನುವುದು ತಾತನ ಆರ್ಡರ್. ಅದು ವಾರದ ಮಧ್ಯದ ದಿನ ಬಂದರೆ ಸ್ಕೂಲಿಗೆ ಚಕ್ಕರ್ ಹಾಕಿಯಾದರೂ ನಾವು ಅದಕ್ಕೆ ಅಟೆಂಡೆನ್ಸ್ ಹಾಕಲೇ ಬೇಕು. ಸಣ್ಣ ಮಕ್ಕಳಿರುವಾಗ ನಮ್ಮನ್ನೆಲ್ಲಾ ಹೊತ್ತಾಕಿಕೊಂಡು ಅಪ್ಪ-ಅಮ್ಮ ಹೊರಡುತ್ತಿದ್ದರು. ಆದರೆ ಸ್ವಲ್ಪ ದೊಡ್ಡವರಾದ ಮೇಲೆ ಸ್ಕೂಲು ತಪ್ಪಿಸುವುದು ಹೇಗೆ ಅಂತ ದೊಡ್ಡವರು ರಾಗ ಎಳೆದರೆ ಟೀಚರ್ ಆಗಿದ್ದ ತಾತ ಸಿಟ್ಟಾಗಿ ‘ಏನು ನಿಮ್ಮ ಮಕ್ಕಳೆಲ್ಲ IAS ಪರೀಕ್ಷೆ ಕಟ್ಟಿದಾರೆ ನೋಡಿ! ಓದ್ತಿರೋದು ನೋಡಿದ್ರೆ ಐದು, ಆರನೇ ಕ್ಲಾಸು. ಚಕ್ಕರ್ ಹಾಕಿಸಿ ಕರ್ಕೊಂಡು ಬನ್ನಿ’ ಅಂತ ಬಯ್ಯುತ್ತಿದ್ದರು! ಆ ನಂತರ ಯಾರೂ ಉಸಿರೆತ್ತುವ ಹಾಗಿಲ್ಲ.

ನಮಗೆಲ್ಲ ಸ್ಕೂಲು ತಪ್ಪಿಸುವುದು ತುಂಬ ಮಜದ ವಿಷಯ. ತಾತನಿಗೆ ಥ್ಯಾಂಕ್ಸ್ ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದೆವು! ಮೈಸೂರಿನ ಅತ್ತೆಯ ಮನೆಯಲ್ಲಿ ಚಕ್ಕರ್ ಹೊಡೆದು ಬಂದ ಹತ್ತು ಮೊಮ್ಮಕ್ಕಳೂ ಜೊತೆಯಾಗುತ್ತಿದ್ದೆವು. ಹುಯಿಲೋ ಹುಯಿಲು. ಕೊಟಾರೋತ್ಸವ ಶುರುವಾಗುತ್ತಿದ್ದುದು ರಾತ್ರಿ ತುಂಬ ಲೇಟಾಗಿ. ಹಾಗಾಗಿ ಸಂಜೆಯ ಮೇಲೆ ಒಂದು ಗಾಡಿ ಮಾಡಿಕೊಂಡು ನಂಜನಗೂಡಿಗೆ ಬಿಜಯಂಗೈಯ್ಯುತ್ತಿದ್ದೆವು. ಕತ್ತಲಾಗುವಷ್ಟರಲಿ ಊರು ಸೇರಿ ಸೀದಾ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಸರಿ ರಾತ್ರಿಯಲ್ಲಿ ಪಲ್ಲಕ್ಕಿ ಉತ್ಸವ ಶುರುವಾಗುತ್ತಿತ್ತು. ಮೊದ ಮೊದಲಲ್ಲಿ ನಾವೆಲ್ಲ ತುಂಬ ಉತ್ಸಾಹದಿಂದ ಹೆಜ್ಜೆ ಹಾಕಿ ಪಲ್ಲಕ್ಕಿಯ ಸಮಕ್ಕೂ ನಡೆದರೂ, ಬರಬರುತ್ತಾ ನನಗಂತೂ ಬೋರ್ ಹೊಡೆಯಲು ಶುರುವಾಗುತ್ತಿತ್ತು. ಆದರೆ ಹಾಗೆಲ್ಲ ಮಾತಾಡುವುದು ಆಗ ಅಪರಾಧವಾಗಿತ್ತು.
ದೇವರಲ್ಲಿ ನಂಬಿಕೆಯಿದ್ದರೂ, ಶಾಸ್ತ್ರ- ಪೂಜೆ- ಆಚರಣೆಗಳಲ್ಲಿ ಯಾವತ್ತೂ ಮೈಗಳ್ಳಿಯಾದ ನಾನು, ನನ್ನ ಜೊತೆಯವನಾದ ಅತ್ತೆಯ ಮಗನೊಡನೆ ಯಾವುದೋ ಮೂಲೆ ಸೇರುತ್ತಿದ್ದೆ. ನಾವಿಬ್ಬರೂ ನಮ್ಮದೇ ಲೋಕದಲ್ಲಿ ಮುಳುಗಿ ಹೋಗುತ್ತಿದ್ದೆವು. ಆ ಉತ್ಸವದ ಸಂಭ್ರಮ ಎಲ್ಲ ಮುಗಿದ ಮೇಲೆ ದೊಡ್ಡವರು ನಮ್ಮನ್ನು ಹುಡುಕಿ ಬಂದು ಎಲ್ಲರೂ ಜೊತೆಯಾಗುತ್ತಿದ್ದರು. ಅದಾದ ಮೇಲೆ ನಮ್ಮ ಬದುಕುನ ಬೆಸ್ಟ್ ಪಾರ್ಟ್ ಶುರುವಾಗುತ್ತಿತ್ತು …
ಸಣ್ಣ ವಯಸ್ಸಿನಲ್ಲಿ ತಾತ ವಾರಾನ್ನಕ್ಕೆ ಯಾರ ಮನೆಗೆ ಹೋಗುತ್ತಿದ್ದರೋ ಆ ಮನೆಯವರು ಈಗ ನಂಜನಗೂಡಿನಲ್ಲಿ ಇದ್ದರು. ತಾತ ಅವರಿಗೆ ಒಂದಿಷ್ಟು ದುಡ್ಡು ಕೊಟ್ಟು ಅವರೆಕಾಳು ಉಪ್ಪಿಟ್ಟು ಮಾಡಿಸಿರುತ್ತಿದ್ದರು. ಅವರು ನಮ್ಮನ್ನೆಲ್ಲ ತುಂಬ ಪ್ರೀತಿಯಿಂದ ಕೂರಿಸಿ ಎಲೆಯ ತುಂಬ ಅವರೆಕಾಳು ಉಪ್ಪಿಟ್ಟು, ಜೊತೆಗೆ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕುತ್ತಿದ್ದರು. ಅಬ್ಬಬ್ಬಾ! ಎಂಥ ರುಚಿಯಾದ ಉಪ್ಪಿಟ್ಟು ಅದು. ಹೊಟ್ಟೆ ಬಿರಿಯುತ್ತಿದ್ದರೂ ತಡೆಯಲಾಗದ ಆಸೆಗೆ ಮತ್ತಿಷ್ಟು ಹಾಕಿಸಿಕೊಂಡು ತಿನ್ನುತ್ತಿದ್ದೆವು. ಆಮೇಲೆ ಸರಿರಾತ್ರಿಯಲ್ಲಿ ಮತ್ತೆ ಎಲ್ಲರನ್ನೂ ತುಂಬಿಸಿಕೊಂಡ ಗಾಡಿ ಮೈಸೂರಿನ ಅತ್ತೆಯ ಮನೆಗೆ ನಮ್ಮನ್ನು ಹೊತ್ತು ಹಾಕುತ್ತಿತ್ತು. ಅರೆ ನಿದ್ದೆಯಲ್ಲಿದ್ದ ನಮಗೆ, ಹೊಟ್ಟೆಗೆ ಬಿದ್ದ ನಂತರ ಪೂರ್ತಿ freshness! ರಾತ್ರಿ ಎಷ್ಟೋ ಹೊತ್ತಿನವರೆಗೆ ಮಕ್ಕಳೆಲ್ಲ ಕಿಸಿ ಪಿಸಿ ಅಂತ ಮಾತಾಡಿಕೊಂಡು ಅಂತೂ ಯಾವಾಗಲೋ ಮಲಗುತ್ತಿದ್ದೆವು.
ಕರ್ಪೂರದ ಘಮ್ ವಾಸನೆಯ ನಂಜುಂಡೇಶ್ವರನ ದೇವಸ್ಥಾನ … ಸೊಗಡು ಅವರೆಕಾಳು ಉಪ್ಪಿಟ್ಟು … ಖಾರದ ಉಪ್ಪಿನಕಾಯಿ ರಸ … ಜನವರಿಯ ಆ ಛಳಿಯ ರಾತ್ರಿ … ಪೂಜೆ … ಉತ್ಸವ … ಎಲ್ಲವೂ ನನಗೆ ಇವತ್ತಿಗೂ ತುಂಬ nostalgic feeling ತರಿಸುತ್ತದೆ. ದೇವಸ್ಥಾನ ಅಂತ ಎಲ್ಲಿಗೂ ಹೋಗದ ನಾನು, ನಂಜುಂಡೇಶ್ವರನನ್ನು ಮಾತ್ರ ನೋಡಲು ಯಾವಾಗಲಾದರೂ ಅವಕಾಶ ಸಿಕ್ಕಿದರೆ ಬೇಡ ಅನ್ನುವುದೇ ಇಲ್ಲ. ಈಗ ದೇವಸ್ಥಾನ ಬದಲಾಗಿ ಹೋಗಿದೆಯಾದರೂ, ಈಗಲೂ ಮುಂಜಾವಿನಲ್ಲೇ ಅಲ್ಲಿಗೆ ಹೋಗಿ ಅಮ್ಮ ಮಾಡಿಸುವ ಶಾಲ್ಯಾನ್ನದ ಸೇವೆಯ ನಂತರ, ಅಲ್ಲಿ ಆವರಣದಲ್ಲಿ ಕೂತು ಅದನ್ನು ತಿನ್ನುವುದು ತುಂಬ ಇಷ್ಟವಾಗುತ್ತದೆ ….
ಇದಲ್ಲದೇ ರಜೆಯಲ್ಲಿ ಒಂದೊಂದು ವರ್ಷ ಒಬ್ಬೊಬ್ಬರ ಮನೆಗೆ ಎಲ್ಲರೂ ಹೋಗುತ್ತಿದ್ದೆವು. ಒಂದಿಷ್ಟು ದಿನಗಳ ಕಾಲ ಮಕ್ಕಳೆಲ್ಲ ಅಂಟಿಕೊಂಡು ಬದುಕಿ ಮತ್ತೆ ಮನೆಗೆ ವಾಪಸ್ … ಮುಂದಿನ ವರ್ಷ ಮತ್ತೆ ಭೇಟಿಯಾಗುವ ಕನಸಿನ ಜೊತೆಗೆ. ಬಾಲ್ಯದ ಒಂಟಿತನ ಅನುಭವಿಸಿದ ತಾತ, ತನ್ನ ಮನೆಯೂ ಆ ರೀತಿ ಆಗಬಾರದು ಅಂತ ಮನೆಯವರೆಲ್ಲರ ಮಧ್ಯೆ ಕೊಂಡಿ ಹಾಕುತ್ತಿದ್ದರು.ಆ ಕಾಲದಲ್ಲಿ ಸುಮಾರು ಮನೆಗಳಲ್ಲಿ ಸಂಬಂಧಗಳನ್ನು ಬೆಸೆಯುತ್ತಿದ್ದುದು ಮನೆಯ ಹೆಂಗಸು. ಆದರೆ, ಒಬ್ಬ ಗಂಡಸಿಗೆ ಈ ಪರಿಯ ತಾಳ್ಮೆ, ಆಸಕ್ತಿ, ಕಾಳಜಿ ಇರುವುದು ತುಂಬ ಅಪರೂಪ. ಬಾಲ್ಯದಲ್ಲಿ ಸಂಬಂಧರಾಹಿತ್ಯ ಅನುಭವಿಸಿದ ತಾತ, ತಾವು ಬದುಕಿರುವವರೆಗೂ ಮುಂದಿನ ತಲೆಮಾರಿನವರು ಒಟ್ಟಾಗಿರಲಿ ಅಂತ ಕಷ್ಟ ಪಡುತ್ತಿದ್ದುದು ನೆನೆಸಿಕೊಂಡರೆ ಪಾಪ ಅನ್ನಿಸುತ್ತದೆ …
ನಾನು ಸ್ಕೂಲಿನಲ್ಲಿರುವಾಗಲೇ ತಾತ ಸತ್ತುಹೋದರು. ಆಗಲೂ ತಾತ ಕಟ್ಟಿದ್ದ ದಾರ ಸಾಕಷ್ಟು ಗಟ್ಟಿಯಾಗೇ ಇತ್ತು. ಆಮೇಲೆ ಕಾಲ ಕಳೆದ ಹಾಗೆ, ಕೆಲವು ಸಂಬಂಧಗಳು ಉಳಿದಿವೆ, ಮತ್ತೆ ಕೆಲವು ಕಣ್ಮರೆಯಾಗಿ ಬಿಟ್ಟಿವೆ. ಅಷ್ಟೆಲ್ಲ ಕಷ್ಟ ಪಟ್ಟರೂ ಕೂಡಾ, ಕಳಚ ಬೇಕಾದ ಸಂಬಂಧಗಳು ಹಾಗೂ-ಹೀಗೂ ಕಳಚೇ ಹೋದವು ಅನ್ನಿಸಿದಾಗ ದುಃಖವೆನ್ನಿಸುತ್ತದೆ. ಆದರೆ ಕೆಲವು ಸಂಬಂಧಗಳಾದರೂ ಉಳಿದವಲ್ಲ ಸಧ್ಯ ಅಂತ ಸಮಾಧಾನ ಕೂಡಾ. ಸ್ವರ್ಗ-ನರಕಗಳ ನಮ್ಮ concept ಇದೆ ಅನ್ನುವುದಾದರೆ, ತಾತ ಮೇಲಿನಿಂದ ನಮ್ಮನ್ನೆಲ್ಲ ಸ್ವರ್ಗದಿಂದ ನೋಡುತ್ತಿದ್ದರೆ, ಕಳಚಿ ಹೋದ ಸಂಬಂಧಗಳನ್ನು ನೋಡಿ ಈಗಲೂ ದುಃಖಿಸುತ್ತಾರೆ ಅನ್ನುವುದು ಗ್ಯಾರಂಟಿ.
 

‍ಲೇಖಕರು G

March 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. amardeep.ps

    ಸಂಭಂಧಗಳ ಕೊಂಡಿ …. ಮತ್ತು ಹೆಕ್ಕಿ ತೆಗೆದ ನೆನಪು … ಚೆನ್ನಾಗಿದೆ ಮೇಡಂ …

    ಪ್ರತಿಕ್ರಿಯೆ
  2. Swarna

    ಸಂಬಂಧಗಳನ್ನು ಒಟ್ಟಾಗಿಡಲು ಪ್ರಯತ್ನಿಸುವವರು ಇದ್ದರೆ ಚಂದ ..ಚೆನ್ನಾಗಿದೆ

    ಪ್ರತಿಕ್ರಿಯೆ
  3. viswa bagalooru

    ಆ ಬಾಗಲೂರು ಹೆಸರಿನಲ್ಲಿ ಸೇರಿಸಿದವನು ನಾನೇ .ನಾನು ಬರೆ ಹೆಸರಿನಲ್ಲಿ ನ .ವಿಶ್ವನಾಥ ಅದರೂ ಬಾಗಲೂರು ಸೇರಲಿಲ್ಲವಲ್ಲಾ ಎಂದು ಬೇಸರ ಪಡುತ್ತೇನೆ .ಲೇಖನ ಬಹಳ ಚೆನ್ನಾಗಿದೆ –
    ನ.ವಿಶ್ವನಾಥ

    ಪ್ರತಿಕ್ರಿಯೆ
  4. Anil

    ಎಂದಿನಂತೆ ತುಂಬಾ ಒಳ್ಳೆಯ ಬರಹ–ನಮ್ಮ ಹತ್ತಿರದ ಕೊಂಡಿಗಳನ್ನು ಕಳಚಿಕೊಳ್ಳುತ್ತ ‘ವಿಶ್ವ’ ಮಾನವರಾಗುತ್ತ ಸಾಗುತ್ತಲಿದ್ದೆವೆ ಏನೋ ಎನಿಸುತ್ತದೆ -off course ಇದರಲ್ಲಿ ಅದರದೆ ಆದ ಲಾಭ-ನಷ್ಟಗಳು ತುಂಬಿಕೊಂಡಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: