ಬದುಕಿಗೊಂದು ಗುರುವಿರಬೇಕು. ನಮ್ಮನ್ನು ತಿದ್ದುವ, ತೀಡುವ, ಸಾಕ್ಷಾತ್ಕಾರ ಮಾಡಿಸುವಂತ ಗುರು ಒಬ್ಬ ಸಿಕ್ಕರೆ ಅದು ನಿಜಕ್ಕೂ ಪುಣ್ಯ ಅನ್ನಬೇಕು. ಇದಕ್ಕೆಲ್ಲ ಯಾವುದೋ ಸಾಧು ಸಂತ ಅಥವಾ ವಿದ್ಯೆ ಕಲಿಸುವ ಗುರು ಮಾತ್ರ ಗುರುವಾಗಬಲ್ಲರು ಅನ್ನುವುದು ಸುಳ್ಳು. ನಮ್ಮ ಸುತ್ತ ಮುತ್ತ ಇರುವ ಯಾರೋ ಒಬ್ಬರು, ಯಾವುದೋ ಜ್ಞಾನ ಮೂಡಿಸಿಬಿಡುತ್ತಾರೆ. ನನಗೆ ಕೆಲವು ವಿಷಯದಲ್ಲಿ ಮಾರ್ಗದರ್ಶನ ಮಾಡಿಸಿದವನು ನನ್ನ ಮಗನೇ ಅನ್ನುವುದರಲ್ಲಿ ಸಂಶಯವೇ ಇಲ್ಲ. ಅವನನ್ನು ನೋಡಿ, ನಾನು ಬುದ್ಧಿ ಕಲಿತು ಪರಿವರ್ತಿತಳಾಗಿ ಬಿಡಲಿಲ್ಲವಾದರೂ, ನನ್ನಂತೆ ಇರುವುದಕ್ಕಿಂತ ಅವನ ಹಾಗೆ ಇರುವುದು ಎಷ್ಟೋ ವಾಸಿ ಅನ್ನುವ ಜ್ಞಾನವನ್ನಂತೂ ಮೂಡಿಸಿದ …
ಮೊದಲಿನಿಂದ ನನಗೆ ಮಕ್ಕಳ ಬಗ್ಗೆ, ತಾಯ್ತನದ ಬಗ್ಗೆ ತುಂಬ ರಮ್ಯವಾದ ಚಿತ್ರಣವೇನೂ ಇರಲಿಲ್ಲ. ಮಕ್ಕಳು ನಗುತ್ತಾ ಇರುವಾಗ ನಮಗೆ ತುಂಬ ಖುಷಿ ಕೊಡುತ್ತವಾದರೂ ತಿರುಗಿ ಬಿದ್ದರೆ ದೇವರೇ ಗತಿ ಅನ್ನುವ ಸಾಮಾನ್ಯ ಜ್ಞಾನವನ್ನು, ನಾನು ತುಂಬ ಹಚ್ಚಿಕೊಂಡಿದ್ದ ಮಾವನ ಮಗು ಮತ್ತು ಅಕ್ಕನ ಮಗ ಸಣ್ಣ ವಯಸ್ಸಿನಲ್ಲೇ ಮೂಡಿಸಿದ್ದರು. ಹಾಗಾಗಿ ಬದುಕಿಗೆ ಒಂದು ಮಗು ಅಂತ ಇರಲಿ ಅನ್ನುವ ಒಂದೇ ಕಾರಣಕ್ಕೆ ನನ್ನ ಮಗ ಹುಟ್ಟಿದ. ಅವನದ್ದು ಎಂತ ವಿಚಿತ್ರದ ಕಥೆ ಅಂದರೆ ಬದುಕಿನಲ್ಲಿ ಅವಶ್ಯಕತೆ ಬಿದ್ದಾಗ ಮಾತ್ರ ಏನಾದರೂ ಮಾಡುತ್ತಿದ್ದನಲ್ಲದೇ, ಅವಶ್ಯಕತೆ ಇದೆ ಅಂತ ನಂಬಿಕೆ ಬಾರದಿದ್ದರೆ ಇರುವ ಸ್ಥಿತಿಯಲ್ಲಿ ಸುಖವಾಗಿ ಬದುಕಿಬಿಡುತ್ತಿದ್ದ. ಅವತ್ತಿಗೂ, ಇವತ್ತಿಗೂ ಅವನದ್ದು ಅದೇ ಮನೋಭಾವ. ಅವನ ಈ ಮನೋಭಾವದಿಂದ ನನಗೆ ಕಿರಿಕಿರಿಯಾಗಿದೆಯೇ ಹೊರತು, ಅವನು ಮಾತ್ರ ಸುಖ ಪಡಲೆಂದೇ ಹುಟ್ಟಿದವನ ಹಾಗೆ ಬದುಕುತ್ತಾನೆ. ಸದಾಕಾಲ ಚಡಪಡಿಕೆಯಲ್ಲಿ ಬದುಕುವ ನನ್ನ ಹಾಗೆ ಅವನು ಹುಟ್ಟಲಿಲ್ಲವಲ್ಲ ಅಂತ ಗಣೇಶನಿಗೆ ಆಗಾಗ ಥ್ಯಾಂಕ್ಸ್ ಹೇಳುತ್ತಿರುತ್ತೇನೆ.
ಹುಟ್ಟಿದಾಗ ತುಂಬ ಡುಮ್ಮಡುಮ್ಮಗಿದ್ದ ನನ್ನ ಮಗ ತುಂಬ ಆರಾಮ ಜೀವಿ. ಅವನು ಬದುಕಿನಲ್ಲಿ ಬೋರಲು ಹಾಕಿದ್ದು, ಅಂಬೆಗಾಲಿಟ್ಟಿದ್ದು, ನಡೆದಿದ್ದು, ಮಾತನಾಡಿದ್ದು ಎಲ್ಲವೂ ಲೇಟು. ‘ಅಯ್ಯೋ ಅದೇನು ಅರ್ಜೆಂಟು ತಗೋ … ಇನ್ನು ಜೀವನ ಪೂರ್ತಿ ಅದೆಲ್ಲ ಮಾಡೋದೇ ತಾನೇ’ ಅನ್ನುವ ನಿರ್ಧಾರಕ್ಕೆ ಬಂದವನ ಹಾಗೆ ಎಲ್ಲವನ್ನೂ ಅವನಿಗೆ ಟೈಮ್ ಆದಾಗ ಮಾಡುವ ನಿರ್ಧಾರಕ್ಕೆ ಬಂದವನ ಹಾಗೆ ಇದ್ದ.
ಅವನು ಬೋರಲು ಬಿದ್ದ ಕತೆಯಂತೂ ದೇವರಿಗೇ ಪ್ರೀತಿ. ಆರು ತಿಂಗಳವರೆಗೆ ಬೋರಲು ಬೀಳುವ ಪ್ರಯತ್ನವನ್ನೂ ಮಾಡದ ಅವನನ್ನು ಒಂದು ದಿನ ಅವನ ಅಪ್ಪ ಸೈಡಿಗೆ ತಿರುಗಿಸಿ ಮಲಗಿಸಿ ಹಾಗೆಯೇ ಬಿಟ್ಟು ಬಿಟ್ಟ. ಸುಮಾರು 15 ನಿಮಿಷ ಆ ಕಡೆಗೂ ಬೀಳದೇ, ವಾಪಸ್ ಬೆನ್ನಿನ ಮೇಲೂ ಮಲಗದೇ ಹಾಗೆಯೇ ಅಳುತ್ತಾ ನಾವು ಯಾರಾದರೂ ಸಹಾಯಕ್ಕೆ ಬರುತ್ತೀವೇನೋ ಅಂತ ಕಾಯುತ್ತ ನಮ್ಮ ಕಡೆ ಆರ್ತನಾಗಿ ನೋಡುತ್ತಿದ್ದ. ಯಾರೂ ಸಹಾಯ ಮಾಡಬಾರದು ಅಂತ ಗಂಡನ ಆರ್ಡರ್ ಆಗಿದ್ದರಿಂದ ನಾನು ಸುಮ್ಮನಿದ್ದೆ. ಕೊನೆಗೆ ಅಡಿಗೆ ಸಿಕ್ಕ ಕೈ ತುಂಬ ನೋವಾಗಿದ್ದಕ್ಕಿರಬೇಕು, ಇನ್ನು ಸಾಧ್ಯವೇ ಇಲ್ಲ ಅನ್ನಿಸಿ ಹರಸಾಹಸ ಮಾಡಿ ಬೋರಲು ಬಿದ್ದಿದ್ದ. ಜೀವನದಲ್ಲಿ ಸ್ವಪ್ರಯತ್ನದಿಂದ ಒಂದು ಕೆಲಸ ಮಾಡೇಬಿಟ್ಟಿದ್ದ! ಆಮೇಲೆ ಈಜಲು, ಅಂಬೆಗಾಲಿಡಲು ಅವನದ್ದೇ ಆರಾಮ ಸಮಯ ತೆಗೆದುಕೊಂಡ.

ಇಂತ ಸೋಮಾರಿಗೆ ಮಾತನಾಡಲೂ ಬೋರು ಬೋರು ಅಂತ ಕಾಣಿಸುತ್ತದೆ. ಎರಡೂವರೆ ವರ್ಷವಾದರೂ ಅಮ್ಮ ಅನ್ನುವ ಪದ ಕೂಡ ಹೊರಡಲಿಲ್ಲ ಬಾಯಿಂದ. ನಾನು ಮಾತಾಡಿಸಿ, ಆಡಿಸಿ ಸೋತುಹೋದೆ. ಕೊನೆಗೆ ಸ್ಕೂಲಿಗೆ ಸೇರಿಸಿದರಾದರೂ ಮಾತಾಡುತ್ತಾನೋ … ಅದೂ ಇಲ್ಲವಾದರೆ ಮತ್ತಿನ್ನು ಡಾಕ್ಟರ್ ಹತ್ತಿರ ಓಡಬೇಕೇನೋ ಅಂತೆಲ್ಲ ಯೋಚಿಸಿ ಸ್ಕೂಲಿಗೆ ಹೊತ್ತು ಹಾಕಿದೆ. ಸ್ಕೂಲಿಗೆ ಸೇರಿಸಿ ಮೂರು ತಿಂಗಳಾದರೂ ಅದೇ ಸ್ಥಿತಿ. ಏನೇ ಹೇಳಿಕೊಟ್ಟರೂ ಬಾಯಿ ಬಿಡಲೊಲ್ಲ. ಅವನ ಟೀಚರ್‌ಗಳು ಕೂಡ ಬಿಡದೇ ಪ್ರಯತ್ನ ಮಾಡಿ ಸೋತು ಹೋದರು. ಅವತ್ತೊಂದು ದಿನ ಕಬ್ಬನ್ ಪಾರ್ಕಿಗೆ ಕ್ಲಾಸ್ ಟ್ರಿಪ್ ಹಾಕಿದರು. ನನ್ನ ಮಗನೂ ಶಿಸ್ತಾಗಿ ಟ್ರಿಪ್ಪಿಗೆ ಹೋಯಿತು. ಅಯ್ಯೋ ಮಾತಾಡಲು ಬಾರದ ಮಗು ಸಂಜೆಯವರೆಗೆ ಅದೇನು ಮಾಡುತ್ತದೋ ಅಂತೆಲ್ಲ ಆತಂಕದಲ್ಲಿ ಕೂತಿದ್ದೆ. ಅಂತೂ ಸಂಜೆಯಾಯಿತು. ಅವನನ್ನು ಕರೆತರಲು ಓಡಿದೆ.
ನನ್ನನ್ನು ಕಂಡಿದ್ದೇ ತಡ, ಅವನ ಟೀಚರ್ ‘ಅಯ್ಯೊ ಬನ್ನಿ ಇಲ್ಲಿ ನಿಮ್ಮ ಮಗನ ಕತೆ ಹೇಳ್ತೀನಿ’ ಅಂತ ಕರೆದರು. ಇನ್ನೇನಿರಬಹುದು ಇವನ ಕತೆ ಅಂತ ನನಗೆ ಆಶ್ಚರ್ಯ. ‘ನಿಮ್ಮ ಮಗನಿಗೆ ಪಲಾವ್ ತುಂಬ ಇಷ್ಟಾನಾ?’ ಅಂದರು. ‘ಹೌದು, ನಾನು ನಾಳೆ ಪಲಾವ್ ಮಾಡ್ತೀನಿ ಅಂತೇನಾದರೂ ಹಿಂದಿನ ದಿನ ಹೇಳಿಬಿಟ್ಟರೆ, ಮಾರನೆಯ ದಿನ 5 ಕ್ಕೇ ಎದ್ದು ಕೂತುಬಿಡುವಂತ ಪಲಾವ್ ಪ್ರೇಮಿ ಅವನು’ ಅಂದೆ. ಅವರು ‘ಅದು ಹೇಳಿ ಮತ್ತೆ! ಇವತ್ತೇನಾಯ್ತು ಗೊತ್ತಾ… ಎಲ್ಲರ ತಟ್ಟೆಗೂ ಪಲಾವ್ ಬಡಿಸ್ತಾ ಇದ್ದ ಹುಸೇನಿ. ಪುಟ್ಟ ಮಕ್ಕಳಲ್ವಾ. ವೇಸ್ಟ್ ಆಗಬಾರದು ಅಂತ ಸ್ವಲ್ಪವೇ ಬಡಿಸ್ತಿದ್ದ. ನಿಮ್ಮ ಮಗನ ಪ್ಲೇಟಿಗೂ ಚೂರು ಪಲಾವ್ ಹಾಕಿ ಮುಂದಕ್ಕೆ ಸಾಗಿದಾಗ ಅವನು ಅಷ್ಟು ಕಡಿಮೆ ಹಾಕಿ ಮುಗಿಸಿಬಿಡ್ತಾರೇನೋ ಅಂತ ಗಾಭರಿಗೆ ಬಿದ್ದ ಅಂತ ಕಾಣಿಸುತ್ತದೆ. ಮೂರು ತಿಂಗಳಿಂದ ಒಂದಕ್ಷರ ಮಾತಾಡದ ಅವನು ಇದ್ದಕ್ಕಿದ್ದ ಹಾಗೆ ಜೋರು ಗಂಟಲಲ್ಲಿ ‘ಲೀ … ಇನ್ನ ಶಲ್ಪ ಪಲಾವ್ ಹಾಕ್ಲಿ ಲೀ …’ ಅಂತ ಅಚ್ಚುಕಟ್ಟಾಗಿ ಮಾತಾಡಿದ! ನೋಡ್ರೀ ಒಂದಿಡೀ sentence ಮಾತಾಡಿದ ಅಂದರೆ ಮಾತು ಬಂದು ತುಂಬ ದಿನವಾಗಿರಬೇಕು. ಆದರೂ emergency ಬರೋವರ್ಗೂ ಹಾಗೇ ದಿನ ತಳ್ಳಿದನಲ್ಲ!…’ ಅಂತ ಅವರು ನಕ್ಕು ನಕ್ಕು ಇಟ್ಟಿದ್ದರು. ಪಲಾವ್ ಆಸೆಗೆ ಮಾತಾಡಲು ಶುರು ಮಾಡಿದ ಮಗಧೀರ! ಇನ್ನೆಂತಾ ಸೋಮಾರಿಯಿರಬೇಕು ಅವನು ನೀವೇ ಹೇಳಿ ….
ಇಂತ ಮಗನನ್ನು ನಾನು ಕೂಡಾ ತುಂಬ ಓದು, ಬರಿ ಅಂತೆಲ್ಲ ಪ್ರಾಣ ತಿನ್ನಲು ಹೋಗಲಿಲ್ಲ. ನರ್ಸರಿ ಮತ್ತು LKG ರಿಸಲ್ಟನ್ನು ಕೂಡಾ ಸ್ಕೂಲು ರೀ ಓಪನ್ ಆದಮೇಲೆ ತೆಗೆದುಕೊಂಡಿದ್ದೆ. ಹಾಗಿದ್ದ ದಿನಗಳಲ್ಲಿ ಅವನ ಬದುಕಿಗೊಂದು ಆಘಾತ ಬಡಿಯಿತು! ಅವನ ಕ್ಲಾಸಿಗೆ ಹೊಸದಾಗಿ ಒಂದು ಹುಡುಗಿ ಸೇರಿಕೊಂಡಿತು. ಆ ಹುಡುಗಿಯ ಅಮ್ಮ ಮಗಳಿಗೆ ಎಷ್ಟು ಪ್ರಾಣ ತಿನ್ನುತ್ತಿದ್ದಳೆಂದರೆ ಕ್ಲಾಸ್ ಟೆಸ್ಟ್ ಮುಗಿದ ಕೂಡಲೆ ಇಡೀ ಪೇಪರಿನ ಎಲ್ಲ ಪ್ರಶ್ನೆಗಳಿಗೂ ಏನು ಉತ್ತರ ಬರೆದಳೆಂದು ಕೇಳಿ, ಒಂದೇ ಒಂದು ವಾಕ್ಯ ಅಥವಾ ಲೆಕ್ಕ ತಪ್ಪಾಗಿದ್ದರೆ ಉಗ್ರ ಶಿಕ್ಷೆ ಕೊಡುತ್ತಿದ್ದಳು. ಅದನ್ನು ನೋಡಿ ನೋಡಿದ ನಾನು ‘ಅಯ್ಯೋ ಮಕ್ಕಳಿಗೆ ಹಾಗೇ ಪ್ರಾಣ ತಿನ್ನಬೇಕೇನೋ. ನಾನು ಅವನ ಪಾಡಿಗೆ ಅವನನ್ನು ಬಿಟ್ಟು ಕೆಟ್ಟ ಅಮ್ಮನಾದೆ’ ಅಂತ ಭ್ರಮೆಗೆ ಬಿದ್ದು ಇದ್ದಕ್ಕಿದ್ದ ಹಾಗೆ ಅವನ ಪಾಲಿನ ಹೆಮ್ಮಾರಿಯಾಗಿ ಹೋದೆ. ಆರಾಮವಾಗಿ ನಗುತ್ತ, ಮಾತಾಡುತ್ತಾ ಇರುತ್ತಿದ್ದವಳು, ಮಧ್ಯಾಹ್ನ ಅವನು ಮನೆಗೆ ಬಂದ ಕೂಡಲೇ ಓದುವುದಕ್ಕೆ ಕೂರಿಸಲು ಶುರು ಮಾಡಿದೆ.

ಹೋಮ್ ವರ್ಕ್ ಮಾಡಲು ಪ್ರಾಣ ತಿನ್ನಲು ಶುರು ಮಾಡಿದೆ. ಪರೀಕ್ಷೆ ಸಮಯದಲ್ಲಂತೂ ಅವನಿಗೆ ನರಕ ಸೃಷ್ಟಿ ಮಾಡಿಟ್ಟುಬಿಟ್ಟೆ. ನನ್ನ ಈ ಹೊಸ ಅವತಾರಕ್ಕೆ ಆರಾಮಜೀವಿಯಾದ ನನ್ನ ಮಗ ತಲ್ಲಣಿಸಿ ಹೋಗಿರಬೇಕು. ಆದರೆ ನನ್ನಂತ ದುಷ್ಟ ಶಕ್ತಿಯನ್ನು ದಮನ ಮಾಡಲು ಅವನದ್ದೇ ಮಾರ್ಗ ಕಂಡು ಹಿಡಿದುಕೊಳ್ಳುತ್ತಾ ಹೋದ. ಅವನು ಹೋಮ್ ವರ್ಕ್ ಮಾಡದಿದ್ದರೆ ನಾನು ಹೋ ಅಂತ ಕಿರಿಚಾಡಿ ‘ಬೇಗ ಮುಗಿಸದಿದ್ದರೆ ಆ ಚಪ್ಪಲಿ ಗೂಡಿನ ಪಕ್ಕ ಮಲಗಿಸ್ತೀನಿ ನಿನ್ನ’ ಅಂತ ಬೆದರಿಕೆ ಹಾಕುತ್ತಿದ್ದೆ. ಅವನು ಆ ಕಿರುಚಾಟ ಕೇಳಿ ಕೇಳಿ ಸುಸ್ತಾದ ಅನ್ನಿಸುತ್ತದೆ. ಒಂದು ದಿನ ನಾನು ಹಾಗೆ ಬೆದರಿಕೆ ಹಾಕಿದ ಕೂಡಲೇ ಶಿಸ್ತಾಗಿ ಎದ್ದು ಹೊರಟ. ನಾನು ಕೆಂಗಣ್ಣು ಬಿಟ್ಟು ಅವನೇನು ಮಾಡಲು ಹೊರಟ ಅಂತ ನೋಡುತ್ತಾ ನಿಂತೆ. ಎದ್ದವನೇ ಹಿಂದಿನ ಬಾಗಿಲ ಹತ್ತಿರವಿದ್ದ ಪರಕೆ ತಂದು ಚಪ್ಪಲಿ ಗೂಡಿನ ಸುತ್ತ ಮುತ್ತ ನೀಟಾಗಿ ಗುಡಿಸಿದ. ನಾನೊಬ್ಬಳಿದ್ದೇನೆ ಅನ್ನುವುದೇ ಕೇರ್ ಮಾಡದವನಂತೆ ಒಳಗೆ ಹೋಗಿ ರಸಾಯ್ ಒಂದನ್ನು ತಂದು ಹಾಸಿದ. ಅದರಲ್ಲಿ ಮೂಡಿದ್ದ ಸುಕ್ಕನ್ನೆಲ್ಲ ಕೂತು ಶಿಸ್ತಾಗಿ ಸರಿ ಪಡಿಸಿದ. ಆಮೇಲೆ ಒಳಗೆ ಹೋಗಿ ಒಂದು ದಿಂಬು ತಂದು ಹಾಕಿದ. ಆಮೇಲೆ ಮತ್ತೊಂದು ರಸಾಯ್ ತಂದು ಬಿಡಿಸಿ, ಹೊದ್ದುಕೊಂಡು ‘ಇದೇ ಶಿಕ್ಷೆ ತಾನೇ ನೀನು ಕೊಡ್ತೀನಿ ಅಂದಿದ್ದು? ಈಗ ಅದೇನು ಕಿತ್ಕೋತೀಯೋ ಕಿತ್ಕೋ ಹೋಗು’ ಅಂತ ಸವಾಲು ಹಾಕುವವನ ಹಾಗೆ ಬೆನ್ನು ತಿರುಗಿಸಿ ಮಲಗೇ ಬಿಟ್ಟ!! ನಾನು ಕೋಪದಿಂದ ಕುದ್ದುಹೋದೆ.
ನನ್ನ ಬೆದರಿಕೆಗೆ ಮೂರು ಕಾಸಿನ ಬೆಲೆ ಕೊಡದವನಿಗೆ ಮತ್ತೇನು ಮಾಡಲು ಸಾಧ್ಯವಿತ್ತು? ಸರಿ, ಮತ್ತೇನೂ ಮಾಡಲಾಗದ ಅಸಹಾಯಕತೆಯಿಂದ ‘ಏಯ್ ಅಲ್ಲಿ ಬಿದ್ಕೋಳ್ತೀಯಾ … ಎದ್ದು ಒಳಗೆ ಹೋಗೋ’ ಅಂತ ಕಿರುಚಿದೆ. ಮತ್ತೆ ಎದ್ದವನೇ ನೀಟಾಗಿ ಹೊದ್ದಿದ್ದ ರಜ಼ಾಯ್ ಒಳಗೆ ಮಂಚಕ್ಕೆ ಸಾಗಿಸಿದ … ದಿಂಬು ಒಳಗಿಟ್ಟ … ಮೊದಲಿನ ಇಡೀ process ಅನ್ನು ರಿವರ್ಸ್ ಆರ್ಡರಿನಲ್ಲಿ ಮಾಡಿ, ಆಮೇಲೆ ಒಳಗೆ ಹೋಗಿ ಮಂಚದ ಮೇಲೆ ಮಲಗಿ ಅಚ್ಚುಕಟ್ಟಾಗಿ ನಿದ್ದೆ ಹೊಡೆದ!! ಇಂಥವನಿಗೆ ಹೇಗೆ ಬುದ್ದಿ ಕಲಿಸುವುದು ನೀವೇ ಹೇಳಿ.
ಹಾಗೂ ಸೋಲಬಾರದು ಅಂತ ಜಿದ್ದಿಗೆ ಬಿದ್ದವಳ ಹಾಗೆ ಅವನನ್ನು ಮಣಿಸುವ ಪ್ರಯತ್ನ ಬಿಡದೇ ಮುಂದುವರೆಸಿದೆ. ತನ್ನದೇ ಮಾರ್ಗದಲ್ಲಿ ಬೇಜಾರಾದಾಗ ನಡೆದರೆ ನಡೆದೆ, ಇಲ್ಲವೆಂದರೆ ಕೂತೆ, ಮತ್ತೂ ಬೇಜಾರಾದರೆ ಬಸವನ ಹುಳುವಿನಂತೆ ತೆವಳಿದೆ ಅನ್ನುವ ಹಾಗೆ ಬದುಕುವ ಸುಖಜೀವಿಯನ್ನು ನಾನು ಎಲ್ಲ ಮಾರ್ಗಗಳನ್ನೂ ಉಪಯೋಗಿಸಿ ಹಿಡಿತದಲ್ಲಿಡಲು ಪ್ರಯತ್ನಿಸುತ್ತಾ ಹೋದೆ. ಒಂದೊಂದು ಸಲವಂತೂ ಹುಚ್ಚು ಹಿಡಿಸಿಬಿಡುತ್ತಿದ್ದ. ರಜೆ ಮುಗಿದು ಸ್ಕೂಲು ಮತ್ತೆ ಶುರುವಾಗುವಷ್ಟರಲ್ಲಿ ಕಲಿತದ್ದನ್ನೆಲ್ಲ ಗಂಟು ಮೂಟೆ ಕಟ್ಟಿ ಇಟ್ಟಿರುತ್ತಿದ್ದ. ನಾನು ಎದೆ ಒಡೆದುಕೊಂಡವಳಂತೆ panic ಆಗಿ ಹೋಗುತ್ತಿದ್ದೆ. ಆಗೆಲ್ಲ ಅವನನ್ನು ಹೆದರಿಸಲು ‘ನೀನು ಹೀಗೇ ಇದ್ರೆ ನಾನು ಮನೆ ಬಿಟ್ಟು ಹೊರಟುಹೋಗ್ತೀನಿ’ ಅಂತನ್ನಲು ಶುರು ಮಾಡಿದೆ. ಒಂದು ದಿನ ಹೀಗೇ ಹೋಮ್ ವರ್ಕ್ ಮಾಡಿಸುತ್ತಿದ್ದೆ. ಡಾಟರ್ ಸ್ಪೆಲ್ಲಿಂಗ್ ಬರಿ ಅಂದರೆ ಅಚ್ಚುಕಟ್ಟಾಗಿ dotter ಅಂತ ಬರೆದಿಟ್ಟ! ನನ್ನ ಅವತ್ತಿನ ತಾಳ್ಮೆಯ stock ಖಾಲಿ ಆಗಿಹೋಗಿತ್ತು.
ಈರುಳ್ಳಿ ಖಾಲಿಯಾಗಿದ್ದು ನೆನಪಾಗಿ ಅದನ್ನು ತರಲು ಹೊರಟುಹೋದೆ. ಬರುವಷ್ಟರಲ್ಲಿ ಮನೆಯ ಮುಂದೆ ಅಪ್ಪ-ಅಮ್ಮ ಗಾಭರಿಯಿಂದ ಕೂತಿದ್ದಾರೆ. ಇವರು ಯಾಕೆ ಬಂದರು ಇಷ್ಟು ಹೊತ್ತಿನಲ್ಲಿ ಅಂತ ಆಶ್ಚರ್ಯ ಪಡುವಷ್ಟರಲ್ಲೇ ‘ಅಯ್ಯೋ ಸಿಟ್ಟು ಬಂತು ಅಂತ ಮನೆ ಬಿಟ್ಟು ಹೋಗ್ತಾರೆನೇ ಮಗು ಒಂದನ್ನೇ ಬಿಟ್ಟು?’ ಅಂತ ಬಯ್ಯಲು ಶುರು ಮಾಡಿದರು. ‘ಅಯ್ಯೋ ನಾನ್ಯಾಕೆ ಮನೆ ಬಿಟ್ಟು ಹೋಗಲಿ? ಮನೆಗೆ ಒಂದಿಷ್ಟು ಸಾಮಾನು ಬೇಕಿತ್ತು. ತರಲು ಹೋಗಿದ್ದೆ’ ಅಂದಾಗ ಅವರಿಬ್ಬರೂ ಕಕ್ಕಾಬಿಕ್ಕಿ. ನಾನು ಲಾಕ್ ಮಾಡಿ ಹೊರಟಾಗ ನನ್ನ ಮಗರಾಯ ‘ಅಮ್ಮ ಮನೆ ಬಿಟ್ಟು ಹೊರಟೋದ್ಲು. ಇನ್ನು ವಾಪಸ್ ಬರಲ್ಲ’ ಅಂತ ಅವರಿಗೆ ಫೋನ್ ಮಾಡಿ ಹೇಳಿದ್ದನಂತೆ!! ಕಾಲ ಕಳೆದ ಹಾಗೆ ಆ ಬೆದರಿಕೆಗೂ ಒಗ್ಗಿಹೋದ. ಒಂದು ಸಲ ನಾನು ಮನೆ ಬಿಟ್ಟು ಹೋಗುತ್ತೇನೆ ಅಂತ ಹೆದರಿಸಿದಾಗ ‘ಸರಿ, ಆದ್ರೆ ಊಟ ಯಾರು ಕೊಡ್ತಾರೆ? ಅಜ್ಜಿನಾ?’ ಅಂತ ನೇರ ವ್ಯವಹಾರಕ್ಕಿಳಿದು, ನಾನಿಲ್ಲದೇ ಅವನ ಬದುಕೇ ಆಗುವುದಿಲ್ಲ ಅನ್ನುವ ನನ್ನ ಭ್ರಮೆಯ ಗುಳ್ಳೆಯನ್ನು ನಿರ್ದಾಕ್ಷಿಣ್ಯವಾಗಿ ಒಡೆದು ಹಾಕಿದ್ದ.
ಹೀಗೆ ನನ್ನೆಲ್ಲ ಬೆದರಿಕೆಗಳು ಮತ್ತು ಶಿಕ್ಷೆಗಳಿಗೆ ಕ್ಯಾರೆ ಅನ್ನದ ಸ್ಥಿತಿ ತಲುಪಿದ. ಪಾಠದಲ್ಲಿ ತಪ್ಪು ಮಾಡಿದರೆ ತೊಡೆಯ ಮೇಲೆ ಬೆರಳು ಮೂಡುವ ಹಾಗೆ ಹೊಡೆಯುತ್ತಿದ್ದೆ. ಮೊದಮೊದಲಲ್ಲಿ ಅತ್ತ. ಆಮೇಲೆ ಅದಕ್ಕೂ ಒಗ್ಗಿಹೋದ. ಹೈಸ್ಕೂಲಿಗೆ ಕಾಲಿಟ್ಟ ದಿನ ಡಾನ್ ಥರ declare ಮಾಡಿದ ‘ಅಮ್ಮ, ನಾನೀಗ ದೊಡ್ಡವನಾಗಿದ್ದೀನಿ. ಇನ್ನು ಮುಂದೆ ನೀನು ಹೊಡೆಯುವ ಹಾಗಿಲ್ಲ’ ಅಂತ. ಅವನ ದನಿಯಲ್ಲಿದ್ದ ಆ ಸಣ್ಣ ಕಠೋರತೆಗೆ ಹೆದರಿದ ನಾನು ಮುಂದೆಂದೂ ಅವನನ್ನು ಹೊಡೆಯುವ ಸಾಹಸ ಮಾಡಲಿಲ್ಲ. ಲೆಕ್ಕ ಮಾಡಲು ಹೇಳಿದರೆ ಕದ್ದು ಮುಚ್ಚಿ ಕ್ಯಾಲ್ಕುಲೇಟರ್ ಇಟ್ಟುಕೊಂಡು ಲೆಕ್ಕ ಮಾಡಿ ಮುಗಿಸುತ್ತಿದ್ದಂತ ಈ ಸೋಮಾರಿ. ಅವನಿನ್ನು ಉದ್ದಾರ ಆಗಲ್ಲ ಬಿಡು ಅಂತ ನಾನು ತೀರ್ಮಾನಿಸಿದೆ. ಅಷ್ಟರಲ್ಲಿ ಹತ್ತನೇ ಕ್ಲಾಸಿಗೆ ಕಾಲಿಟ್ಟವನು ಗಣಿತದಲ್ಲಿ ನೂರು ಮಾರ್ಕ್ಸ್ ತೆಗೆದ … ಒಟ್ಟಾರೆ ತೊಂಭತ್ತೈದು ಪರ್ಸೆಂಟ್ ತೆಗೆದ. ಮತ್ತೆ ಪಿಯುಸಿ ಮೊದಲ ವರ್ಷ ಯಥಾಪ್ರಕಾರ ಸೋಮಾರಿತನ. ಕೇಳಿದರೆ ‘ಈ ವರ್ಷ ರೆಸ್ಟ್ ತೆಗೆದುಕೊಳ್ಳುತ್ತೇನೆ .. ಮುಂದಿನ ವರ್ಷ ಓದಬೇಕಲ್ಲ’ ಅನ್ನುವ ಕಾರಣ ಕೊಟ್ಟ!
ಆಮೇಲೆ ಪಿಯುಸಿ ಎರಡನೆಯ ವರ್ಷದಲ್ಲಿ ಗಣಿತದಲ್ಲಿ ನೂರು ಮತ್ತು PCM ನಲ್ಲಿ ತೊಂಭತ್ತೇಳೂವರೆ ಪರ್ಸೆಂಟ್ ತೆಗೆದ. ಒಟ್ಟಿನಲ್ಲಿ ಅವಶ್ಯಕತೆ ಇದ್ದಾಗ ಮಾತ್ರ ರಣರಂಗಕ್ಕಿಳಿದು ಹೋರಾಡುವ ಈ ಸ್ವಭಾವ ಅವನನ್ನು ತುಂಬ ಸುಖಿಯಾಗಿಟ್ಟಿದೆ ಅನ್ನಬೇಕು. ಅವಶ್ಯಕತೆ ಇಲ್ಲದಾಗ ಅವನ ಎನರ್ಜಿ ವೃಥಾ ಪೋಲಾಗದಂತೆ ಕಾಪಾಡಿಕೊಳ್ಳುತ್ತಾನಲ್ಲ, ಹಾಗಾಗಿ ಬೇಕಾಗಿದ್ದಕ್ಕೆ ಸಿಕ್ಕಾಪಟ್ಟೆ ಎನರ್ಜಿ ಹಾಕುವುದರಲ್ಲಿ ಸಫಲನಾಗುತ್ತಾನೋ ಏನೋ ಅನ್ನಿಸಿಬಿಡುತ್ತದೆ ಒಂದೊಂದು ಸಲ. ಪಲಾವ್ ಎದುರಾದಾಗ ಮಾತ್ರ ಮಾತನಾಡಿ, ಬೇಕಿದ್ದನ್ನು ಪಡೆದ ಅದೇ ಸ್ವಭಾವ ಬದುಕಿನುದ್ದಕ್ಕೂ ಸಾಧಿಸಿಕೊಂಡ strategy! ಜನ್ಮ ಪೂರಾ ಆತಂಕದಿಂದ ಬದುಕಿದ ನಾನು ಬದುಕಿನಲ್ಲಿ ಅಂತ ಅದ್ಭುತವಾದದ್ದನ್ನೇನನ್ನು ಸಾಧಿಸಿ ಕಡೆದು ಕಟ್ಟೆ ಹಾಕಿದ್ದೆ? ಇನ್ನಾದರೂ ನಾನು ಒಂದಿಷ್ಟು ಬದಲಾಗಬೇಕು ಅಂತ ಮೂರು ಕೋಟಿ ಮೂವತ್ತಾರು ಲಕ್ಷದ ಎಪ್ಪತ್ತೈದು ಸಾವಿರದ ಮುನ್ನೂರ ಹನ್ನೆರಡನೆಯ ಸಲ ಅಂದುಕೊಂಡೆ …
ಅರಿವು ಮೂಡಿಸುವವನು ಗುರು ತಾನೇ?! ಬದುಕಿನ ಕೆಲವೊಂದು ಸಣ್ಣ ಪುಟ್ಟ ಪಾಠ ಕಲಿಸಿದ ಈ ಪುಟ್ಟ ಶಿಕ್ಷಕನಿಗೂ ಶಿಕ್ಷಕರ ದಿನಾಚರಣೆಯ ದಿನದಂದು ನನ್ನದೊಂದು ಸಲಾಮ್ …
ಅಹವಿ ಹಾಡು : ‘ಲೀ … ಇನ್ನ ಶಲ್ಪ ಪಲಾವ್ ಹಾಕ್ಲಿ ಲೀ …’!

ಭಾರತಿ,‘ಮಗ’ಧೀರನ ಮನಮೋಹಕ ಕಥೆ ಓದಿ ತುಂಬಾ ಖುಷಿಯಾಯಿತು! 🙂
Bharati… adellinda ninage ee sanna vishyagaLannu Rochakavaagisuva Kale bantu? naanantu ninna permanent abhimaani…
Ha ha ha nim maganaddu bahala history untu…
ಈ ಕಲಿಯುವಿಕೆ ಅನ್ನುವುದು ಕಲಿಸುವುದರಲ್ಲಿದೆಯೋ..?ನಾವು ಗ್ರಹಿಸುವುದರಲ್ಲಿದೆಯೋ…?ಇಲ್ಲಿ ನೀವು ಗ್ರಹಿಸಿದಿರಷ್ಟೆ…ತುಂಬಾ ಚೆಂದದ ಬರಹ.ಮದ್ಯೆ ಟಾಮ್ ಅಂಡ್ ಜರ್ರಿ ಪೋಟೋ ಓದಿಗೆ ಪೂರಕವಾಗಿದೆ.
🙂
ಬರಹ ಬಹಳ ಚೆನ್ನಾಗಿದೆ. ಈ ಹೊತ್ತಿನ ಸಮಾಜ, ಶಿಕ್ಷಣ ವ್ಯವಸ್ಥೆ ಹಾಗೂ ಅದು ತಂದೆ ತಾಯಿಗಳಲ್ಲಿ ಮೂಡಿಸಿರುವ ಧಾವಂತದ ವಿಮರ್ಶೆಯೂ ಆಗಿದೆ.ನಿಮಗೆ ಗೊತ್ತಿಲ್ಲವೇ ‘ ಒಂದಕ್ಷರಂ ಕಲಿಸಿದಾತಂ ಗುರು,ಹರಾ ಹರಾ ಶ್ರೀ ಚೆನ್ನ ಸೋಮೇಶ್ವರಾ. ಜೀವನದಲ್ಲಿ ನಾವು ಕಂಡ ಪ್ರತಿಯೊಬ್ಬ ವ್ಯಕ್ತಿಯೂ ನಮಗೆ ಏನಾದರೂ ಕಲಿಸುತ್ತಲೇ ಇರುತ್ತಾರೆ ಕಲಿಯುವುದಕ್ಕೆ ನಾವು ತೆರೆದುಕೊಂಡಿದ್ದರೆ !
Sakkath ‘magaa’ 😉
ಅಯ್ಯೋ !!!!! ಓದುವಾಗ ಸ್ವಲ್ಪ ಆತಂಕ , ಸ್ವಲ್ಪ ನಗು ಏಕೆಂದರೆ ನನ್ ಮಗಾನೂ ಅಷ್ಟೇ:-) ಓದಿ ಮುಗಿಸಿದಾಗ ಅಬ್ಭಾ ಸಧ್ಯ ನಾನಾ ಮಗಾನೂ ನಿಮ್ ಮಗನ ತರಹ ಬುದ್ದಿವಂತಾ ಆದಾನು ಎನ್ನೊ ಆಸೆ:-) ಭಾರತೀ ಅಕ್ಕಾ ಚೆನ್ನಾಗಿ ಹೇಳ್ತಾ ಹೋಗಿದೀರಾ ಮಗನ ಕಥೆ.
fine, very fine bharati, may be its an experience of most MOM’s
Mother India 🙂 taayige takka maga! Good one
Ha ha ha chendada baraha Bharathi
🙂
Very Very nice article. You write so well Bharathiyavare !
Nice write up….