ಅಹವಿ ಹಾಡು : ಯಾಕೆ ಕೆಲವರು ಹೀಗಿರುತ್ತಾರೆ? ಯಾರಿಗೂ ಹಿತವಾಗದ ಹಾಗೆ?

ಅವರನ್ನು ಅವರು ಅನ್ನೋಣ ಸಾಕು. ಹೆಸರು ಯಾಕೆ ಬೇಕು ಸುಮ್ಮನೆ. ನೋಡಲಿಕ್ಕೆ ಅವರು ಹೇಗಿದ್ದರೆಂದು ನಾನು ಹೇಳುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಆಕೆಯದ್ದು ಸದಾ ವಟಗುಟ್ಟುವ ಬಾಯಿ. ಅದರಲ್ಲಿರುವ ನಾಲಿಗೆಯಂತೂ ಕತ್ತಿಯ ಹಾಗೆ ಹರಿತ. ಎದುರಿಗಿರುವ ವ್ಯಕ್ತಿಯ ಎದೆ ಕುಯ್ಯುವ ಹಾಗೆ ಮಾತು. ನೆಟ್ಟಗಿರುವ ಮಾತಿನ ಮಧ್ಯೆ ಆಗಾಗ ನುಸುಳುವ ಪೋಲಿ ಶಬ್ಧಗಳು. ಅದರಲ್ಲೂ ಗುಂಪಿನ ಮಧ್ಯೆ ಇರುವಾಗಲಂತೂ ಆ ಪೋಲಿತನಕ್ಕೆ ಇನ್ನಿಷ್ಟು ಚಾಲನೆ ಸಿಕ್ಕಿಬಿಡುತ್ತಿತ್ತು. ಯಾರ ವಿಷಯವಾದರೂ ಮಾತನಾಡುವಾಗ ನಾಲಿಗೆಗೆ ಎಗ್ಗೇ ಇಲ್ಲದಂತೆ ಉದುರುತ್ತಿದ್ದವು ಮಾತುಗಳು. ಸಾಧಾರಣವಾಗಿ ಮಕ್ಕಳು ಇಲ್ಲದವರಿಗೆ ಮಕ್ಕಳ ಮೇಲೆ ತುಂಬ ಪ್ರೀತಿಯಿರುತ್ತದೆ. ಆದರೆ ಈಕೆ ಅಸಾಧ್ಯ ಮಕ್ಕಳ ದ್ವೇಷಿ. ಮಕ್ಕಳು ಮಾತನಾಡಿದರೆ ‘ಅಬ್ಬಬ್ಬ … ಅದೇನು ಬಾಯಿ ಬಡ್ಕೊಳ್ತೀರ ಶನಿಗಳ ಹಾಗೆ’ ಅಂತ ಅರಚಿದರೆ ಸುತ್ತಲಿದ್ದ ಮಕ್ಕಳು ಗಪ್ ಚುಪ್.
ಎಲ್ಲೋ ನೆಲದ ಮೇಲೆ ವಿಶಾಲ ದೇಹ ಹರಡಿ ಮಲಗಿರುತ್ತಿದ್ದ ಈಕೆಯ ಸುತ್ತ ಮಕ್ಕಳು ಆಗೀಗ ಜೂಟಾಟ ಶುರು ಮಾಡಿಬಿಡುತ್ತಿದ್ದವು. ಮಲಗಿದ್ದ ಹೆಂಗಸು ಪ್ರಯಾಸದಿಂದ ಎದ್ದು ಕೂತು ಯಾವುದೋ ತಂಗಿಯದ್ದೋ ಅಥವಾ ತಮ್ಮನ ಮಕ್ಕಳನ್ನೋ ಕುರಿತು ‘ಥೂ ಚಡ್ಡಿ ಬದಲಾಯ್ಸಿ ಎಷ್ಟು ದಿವಸ ಆಯ್ತು! ಗಬ್ಬು ವಾಸನೆ ಹೊಡೀತಿದೆ’ ಅಂದು ಬಿಡುತ್ತಿದ್ದರು. ಆಡುತ್ತಿದ್ದ ಮಕ್ಕಳೆಲ್ಲ ಒಂದರೆಘಳಿಗೆ ಮೌನವಾಗಿ ಬಿಡುತ್ತಿದ್ದವು. ಪಾಪ ವಾಸನೆ ಚಡ್ಡಿ ಅಂತ ಬಯ್ಯಿಸಿಕೊಂಡ ಮಗು ಪೆಚ್ಚಾಗಿ ಬಿಡುತ್ತಿತ್ತು. ಇನ್ನು ಒಂದಿಷ್ಟು ದಿನಗಳ ಕಾಲ ಉಳಿದ ಮಕ್ಕಳು ಅನ್ನುವ ಛೇಡಿಕೆಯ ಮಾತೆಲ್ಲ ಈ ಚಡ್ಡಿಯ ಕುರಿತಾಗೇ ಇರುತ್ತದೆ ಅಂತ ಆ ಮಗುವಿಗೆ ತಿಳಿದು ಹೋಗಿ, ಮುಂಬರುವ ದಿನಗಳ ಕಲ್ಪನೆಯಲ್ಲಿ ಖಿನ್ನವಾಗುತ್ತಿತ್ತು. ಅಷ್ಟರಲ್ಲಿ ಇನ್ಯಾವುದೋ ಮಗು ಅಲ್ಲೆಲ್ಲೋ ಆಟ ಶುರು ಮಾಡುತ್ತಿತ್ತು. ಮಲಗಿದ್ದ ಈಕೆಯ ಮೇಲೆ ಹಾರಿ ಹೋದಾಗ ‘ಅಬ್ಬಬ್ಬಾ ನಾನು ಮಲಗಿರೋದು ನಿನ್ನ ಕರಿ ಕುಂಡೆ ನೋಡಕ್ಕಲ್ಲ. ತೊಲಗಾಚೆ’ ಅಂದುಬಿಡುತ್ತಿದ್ದರು. ಜೊತೆಗೊಂದಿಷ್ಟು ವಿಶೇಷಣಗಳನ್ನು ಸೇರಿಸಿ ‘ನಿಮ್ಮಕ್ಕನ ಬಿಳಿ ಕುಂಡೆಯಾದ್ರೂ ಆಗಿದ್ರೆ ವಾಸಿಯಿತ್ತು … ಹೇಗೋ ನೋಡಬಹುದು. ನಿನ್ನದು ನೋಡೋ ಕರ್ಮ ನನಗೆ’ ಅಂದಾಗ ಸಂಸಾರದಲ್ಲೇ ಸ್ವಲ್ಪ ಸಿಟ್ಟಿನ ಮಗುವಾಗಿದ್ದ ಆ ಹುಡುಗಿ ‘ನೀವೂ ನನ್ನ ಹಾಗೆ ಕರೀನೇ ಇದೀರ’ ಅಂತ ಹೇಳಿ ಆ ಜಾಗ ಬಿಟ್ಟು ಓಡಿ ಬಿಡುತ್ತಿತ್ತು!
ಮಲಗಿದ್ದ ಈಕೆಗೆ ಆಗ ಮಾತ್ರ ಸರ್ವ ಇಂದ್ರಿಯಗಳೂ ಜಾಗೃತವಾಗಿ ಆ ಮಗುವಿಗೆ ಬಾಯಿ ತುಂಬ ಆರಿಸಿದ ಬಯ್ಗುಳಗಳ ಮಳೆ ಸುರಿಸಿಬಿಟ್ಟ ನಂತರ, ಆ ಮಕ್ಕಳ ಅಪ್ಪ-ಅಮ್ಮನನ್ನು ಸೇರಿಸಿ ಮಗುವಿನ ಅಪರಾಧವನ್ನು ವರ್ಣಿಸಿ, ಕೊನೆಗೆ ಆ ಅಪ್ಪ-ಅಮ್ಮ ಇನ್ನು ಈಕೆಯಿಂದ ಮುಕ್ತಿಯಿಲ್ಲ ಅಂತ ಎಣಿಸಿ, ಆ ಸೀನ್ ಮುಗಿಸುವ ನಿರ್ಧಾರಕ್ಕೆ ಬಂದು ಆ ಮಗುವಿಗೆ ನಾಲ್ಕು ಹೇರಿದ ಬಳಿಕ ಆಕೆ ಸಂತೃಪ್ತಿಯಿಂದ ಒಂದು ಹದಿನೈದು ತೊಳೆ ಹಲಸಿನ ಹಣ್ಣು, ಜೊತೆಗೆ ಒಂದಿಪ್ಪತ್ತು ಬೋಂಡ ತಿಂದು, ಐದು ಕಪ್ ಕಾಫಿ ಹೀರಿ, ‘ರಾತ್ರಿಗೆ ಬರೀ ಮೊಸರನ್ನ, ಸಾರನ್ನ ಸಾಕಪ್ಪ ನನಗೆ’ ಅಂತ ಕೂಗಿ ಹೇಳುತ್ತಿದ್ದರು. ರಾಶಿ ರಾಶಿ ತಿಂದದ್ದಕ್ಕೆ ಇನ್ನು ಮೂರು ದಿನ ಊಟವೇ ಇಲ್ಲದಿದ್ದರೂ ತಡೆಯುತ್ತಿತ್ತು ಅಂತ ಮಕ್ಕಳು ಮುಸಿ ಮುಸಿ ನಗುತ್ತಾ ಆಡಿಕೊಳ್ಳುತ್ತಿದ್ದವು!
ಇಡೀ ಸಂಸಾರವನ್ನು ‘ಹಂ ಆಪ್ಕೆ ಹೈ ಕೌನ್’ ಸಿನೆಮಾದ ಥರ ಮಾಡಿಬಿಡುತ್ತೇನೆ ಅಂತ ಆ ಮನೆಯ ಹಿರಿಯನ ಭ್ರಮೆ. ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಬಂದು ಹೋಗಿ ಮಾಡಿದರೆ ಬಾಂಧವ್ಯ ಉಳಿಯೋದು ಅಂತ ಅಂದುಕೊಂಡುಬಿಟ್ಟಿದ್ದರು ಪಾಪ. ರಜೆಗಳಲ್ಲಿ ಎಲ್ಲರೂ ಸೇರಿ, ಇನ್ನುಳಿದ ಯಾವುದೋ ಮನೆಗೆ ಹೋಗಿ ಎಲ್ಲ ಒಟ್ಟಿಗೆ ಸೇರಿ ಬದುಕಬೇಕು ಅಂತ ಆ ಹಿರಿಯರ ಆಸೆ. ಬಲವಂತಕ್ಕೆ ದೂರದೂರಿನಲ್ಲಿದ್ದ ಈಕೆಯ ಮನೆಗೂ ಆಗಾಗ ದಂಡು ಕಟ್ಟಿಕೊಂಡು ಹೋಗಿ ಅಲ್ಲಿ ಬೀಡು ಬಿಡುತ್ತಿತ್ತು ಇಡೀ ಸಂಸಾರ. ಆಕೆಯ ಗಂಡನೋ ಅಸಾಧ್ಯ ಜಿಪುಣ. ಆಕೆ ಮನೆಯಲ್ಲಿ ಅದಿಲ್ಲ, ಇದಿಲ್ಲ ಅಂತ ಹೇಳಿ ಅದನ್ನೆಲ್ಲ ತರಲು ಗಂಡನಿಗೆ ಬಂದ ನೆಂಟರ ಎದುರೇ ಹೇಳುವುದು ಮತ್ತು ಆಕೆಯ ಗಂಡ ಒಂದು ಸ್ವಲ್ಪವೂ ಯೋಚಿಸದೇ ಇವರ ಎದುರೇ ಮನೆಗೆ ಎಷ್ಟೆಲ್ಲ ಸಾಮಾನು ತಂದು ಹಾಕಿದ್ದೆ … ನೀನು ದುಂದು ವೆಚ್ಚ ಮಾಡಿದ್ದೀಯ ಅಂತ ಹೇಳುವ ‘ಮುದ್ದಣ ಮನೋರಮೆಯರ ಸಲಾಪದಲ್ಲಿ’ ಮನೆಗೆ ಕಾಲಿಟ್ಟ ನೆಂಟರ ಗತಿ ಏನಾಗಿರಬೇಕು ಪಾಪ. ಕೊನೆಗೆ ಆ ಹಿರಿಯರೇ ‘ನೀವು ಕೆಲಸಕ್ಕೆ ಹೊರಡಿ ಪಾಪ. ನಾನು ಅದೇನು ಬೇಕೋ ತಂದ್ಕೊಡ್ತೀನಿ’ ಅಂತ ಅಳಿಯನನ್ನು ಸಾಗಹಾಕುತ್ತಿದ್ದರು. ಈ ಥರದ ಪರಿಸ್ಥಿತಿಯಲ್ಲಿ ಅದ್ಯಾವ ಸಂಬಂಧ ಉಳಿಸಬೇಕೆಂದು ಅವರು ಹೆಣಗಾಡುತ್ತಿದ್ದರೋ ದೇವರಿಗೇ ಗೊತ್ತು.
ಇದು ಹಗಲಿನ ಕಥೆಯಾದರೆ ರಾತ್ರಿಯ ಕತೆ ಬೇರೆಯೇ ಇರುತ್ತಿತ್ತು. ಸಣ್ಣ ಮನೆಯಲ್ಲಿ ಹಾಲಿನಲ್ಲಿ ನೆಂಟರೆಲ್ಲ ಕೂತಿರುತ್ತಿದ್ದರು. ಇನ್ನೇನು ಮಲಗುವ ಸಮಯ. ಆಕೆ ಅಡಿಗೆಯ ಮನೆಯಲ್ಲಿ ಹೆಪ್ಪು ಹಾಕುತ್ತಾ ನಿಂತಿರಬೇಕಾದರೆ ಬೆಕ್ಕುಗಳ ಹಾಗೆ ಜಗಳ ಹತ್ತಿಕೊಂಡು ಬಿಡುತ್ತಿತ್ತು ಇಬ್ಬರಿಗೂ. ಆತ ಅವರನ್ನು ತನ್ನ ಜೊತೆ ಬಂದು ಮಲಗುವಂತೆ ಒತ್ತಾಯಿಸಲು ಶುರು ಮಾಡುತ್ತಿದ್ದರು. ಬಾಗಿಲ ಹೊರಗೆ ಕೂತ ಮನುಷ್ಯರ ಪರಿವೆಯಿಲ್ಲದೆ ‘ಅಯ್ಯೋ ಥೂ! ನಾನು ಬರಲ್ಲ ಅಂದ್ರೆ ಬರಲ್ಲ. ಮೊನ್ನೆ ಇಲ್ಲ ಒಟ್ಟಿಗೆ ಬಿದ್ದಿದ್ವಲ್ಲ. ಮತ್ತೆ ಇವತ್ತೂ ಬರಬೇಕಾ? ನಾನು ಬರಲ್ಲಾರೀ’ ಅಂತ ರಂಪಾಟ ಶುರು ಮಾಡಿಬಿಡುತ್ತಿದ್ದರು. ಹೊರಗೆ ಸಣ್ಣ ಹಾಲಿನಲ್ಲಿ ಅಮ್ಮನಿಗೆ ಅಂಟಿ ಕೂತ ಮಕ್ಕಳು ‘ಅಮ್ಮ ಅವ್ರು ಎಲ್ಲಿಗೆ ಬರಲ್ಲ ಅಂತಿದಾರೆ’ ಅಂತ ಮುಗ್ಧವಾಗಿ ಪ್ರಶ್ನಿಸಿದಾಗ ಮನೆಯವರೆಲ್ಲ ಕಣ್ಣು ತಪ್ಪಿಸಿ ಎಲ್ಲೆಲ್ಲೋ ನೋಡಬೇಕಾದ ಸ್ಥಿತಿ ಉಂಟಾಗಿಬಿಡುತ್ತಿತ್ತು. ಬಾಯಿ ಭದ್ರವಿಲ್ಲದ ಅವರಿಬ್ಬರ ಸಂಸಾರದ ಈ ‘ಗುಟ್ಟು’ ಗಳಿಗೆ ಇಡೀ ಸಂಸಾರವೇ ಸಾಕ್ಷಿ …

ಹೆಣ್ಣು ಮಕ್ಕಳು ಸ್ನಾನಕ್ಕೆ ಹೊರಟರೆ ಈಕೆ ಎಲ್ಲರೆದುರಿಗೆ ಜೋರಾಗಿ ಕೇಳುತ್ತಿದ್ದರು ‘ನೀನು ನಿಂತ್ಕೊಂಡು ಸ್ನಾನ ಮಾಡ್ತೀಯೋ., ಕೂತ್ಕೊಂಡೋ’ ಎಂದು. ಯಾವುದಾದರೂ ಹೆಣ್ಣು ಮಗು ನಿಂತುಕೊಂಡು ಸ್ನಾನ ಮಾಡ್ತೀನಿ ಅಂದುಬಿಡಬೇಕು, ಅಲ್ಲಿಗೆ ಅದರ ಮಾನ ಹರಾಜಾದ ಹಾಗೇ ಲೆಕ್ಕ! ‘ಥೂ ಅದೇನೇ ಗಂಡಸ್ರ ಹಾಗೆ ಗಣೇ ಮರದೆತ್ತರ ನಿಂತ್ಕೊಂಡು ಸ್ನಾನ ಮಾಡೋದು … ಅಸಹ್ಯ! ಹೆಣ್ಣು ಮಕ್ಕಳು ಕಾಲು ಸೇರಿಸಿ ಕೆಳಕ್ಕೆ ಕೂತು ಸ್ನಾನ ಮಾಡ್ಬೇಕು … ಅರ್ಥವಾಯ್ತಾ? ಮಾನಗೆಟ್ಟ ಮುಂಡೇವಾ’ ಅಂತ ಉಪದೇಶಾಮೃತ ಸುರಿಯಲು ಶುರುವಾದರೆ ಒಂದಿಡೀ ಹಂಡೆಯ ತುಂಬ ತುಂಬಿಸುವಷ್ಟು ಅಮೃತ ಶೇಖರವಾಗಿ ಬಿಡುತ್ತಿತ್ತು. ಹೀಗೇ ಆಡಿದ್ದೇ ಮಾತು, ಬಾಯಿಗೆ ಬಂದಿದ್ದೆಲ್ಲ ಸಂಭಾಷಣೆ ಅನ್ನುವ ಭ್ರಮೆ ಆಕೆಗೆ.
ಇಡೀ ಬ್ರಾಹ್ಮಣ ಜಾತಿಯ ಎಲ್ಲ ಶಾಸ್ತ್ರ ಸಂಪ್ರದಾಯಗಳೂ ಗೊತ್ತಿತ್ತು ಅವರಿಗೆ. ಅವಳು ಯಾವಳೋ ಹೂವೀಳ್ಯ ಮಾಡಲಿಲ್ಲ, ಇನ್ಯಾವಳೋ ಪಾದ ತೊಳೆಯಲಿಲ್ಲ ಅಂತೆಲ್ಲ ಸದಾಕಾಲ ಪಿಟಿ ಪಿಟಿ. ಹಾಗಂತ ಶಾಸ್ತ್ರ ಸಂಪ್ರದಾಯಗಳಲ್ಲೆಲ್ಲ ನಂಬಿಕೆ ಇತ್ತು ಅಂತರ್ಥವಲ್ಲ. ಯಾರೋ ಮಾಡುವಾಗ ಬಿಟ್ಟಿ ಸಲಹೆಗಳು ಕೊಡಲೇಬೇಕು ಅಂತ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೇನೋ ಅನ್ನುವ ಥರ! ಇಷ್ಟೆಲ್ಲ ಮಾಡುವ ಆಕೆ ಗಂಡ ಸತ್ತ ದಿನ ಆತನನ್ನು ಎತ್ತಿಕೊಂಡು ಹೊರಟಾಗ ಬಾಯಿಗೆ ಎರಡು ಕಾಳು ಅಕ್ಕಿ ಹಾಕು ಅಂದರೆ ‘ಬದ್ಕಿರುವಾಗ ಅವನಿಗೆ ಅನ್ನ ಹಾಕಿದೀನಿ, ಸಾಕು ಹೋಗಿ’ ಅಂತ ಆಚೆ ಕೂಡಾ ಬರಲಿಲ್ಲ. ಕೊನೆಗೂ ಹೆಣಕ್ಕೆ ಈಕೆಯ ಮುಖ ನೋಡುವ ಭಾಗ್ಯ ಇರದೇ ಹಾಗೇ ಹೊರಟುಹೋಗಿತ್ತು! ಆಮೇಲೆ ಒಳಗೆ ಹೋಗಿ ಅಚ್ಚುಕಟ್ಟಾಗಿ ಸ್ನಾನ ಮಾಡಿದ ಈಕೆ ಯಾರೋ ತಂದಿಟ್ಟ ಊಟವನ್ನು ಉಂಡು, ಎಲೆ ಅಡಿಕೆ ಹಾಕುತ್ತಾ ಕೂತರು. ಪಾಪ ಶೋಕ ವ್ಯಕ್ತ ಪಡಿಸಲು ಬಂದ ಯಾರೋ ನೆಂಟರು ಈಕೆ ಎಲೆ ಅಡಿಕೆ ಜಗಿಯುತ್ತ ಕೂತದ್ದನ್ನು ಕಂಡು, ತಬ್ಬಿಬ್ಬಾಗಿ ಹೋಗಿದ್ದರು. ಬಂದ ಶಾಸ್ತ್ರಕ್ಕೆ ‘ಸಮಾಧಾನ ಮಾಡ್ಕೊಳ್ಳಿ’ ಅಂತೇನೋ ಹೇಳಲು ಹೊರಟವರನ್ನು ತಡೆದು ‘ಅಯ್ಯೋ ಸಮಾಧಾನ ಮಾಡ್ಕೊಳ್ದೇ ಇರೋದಿಕ್ಕೆ ನನಗೇನಾಗಿದೆ ಧಾಡಿ! ಇರೋವರ್ಗೂ ಕಾಡಿಸಿದ ಮನುಷ್ಯ …’ ಅಂದರು. ಸಮಾಧಾನ ಹೇಳಲು ಬಂದವರಿಗೆ ಯಾವ ಹುಚ್ಚಾಸ್ಪತ್ರೆಗೆ ಬಂದೆವೋ ಅನ್ನಿಸಿರಬೇಕು ಪಾಪ.
ಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೆ ದೇವರ ಗೂಡು ಖಾಲಿ! ಎಲ್ಲಿ ಹೋಯ್ತು ಎಲ್ಲ ಅಂತ ಕೇಳಿದರೆ ಶೋ ಕೇಸಿನಲ್ಲಿ ಸಿಂಗಪೂರದಿಂದ ತಂದಿದ್ದ ಬೊಂಬೆ ಕಾರುಗಳ ಪಕ್ಕ ವಿರಾಜಮಾನರಾಗಿದ್ದ ಗಣಪತಿ, ಸೀತೆ, ರಾಮ, ಲಕ್ಷ್ಮಿ ಎಲ್ಲರನ್ನೂ ತೋರಿಸಿದ್ದರು! ಅದನ್ಯಾಕೆ ಇಲ್ಲಿಟ್ರಿ ಅಂತ ಕೇಳಿದರೆ ‘ಅಲ್ಲಾದರೂ ಇಟ್ಟಿದೀನಲ್ಲ ಅದಕ್ಕೆ ಖುಷಿ ಪಡಿ’ ಅಂದ ಮಾತು ಕೇಳಿದ ಮೇಲೆ ಎದುರಿಗಿದ್ದವರು ಯಾವ ಮಾತು ಆಡಲು ಸಾಧ್ಯ?
ಸಿಡುಕ ಗಂಡನೊಬ್ಬ ಖಾಲಿಯಾದ ಮೇಲೆ ಹೇರಳ ಸಮಯ ಉಳಿಯಲು ಶುರುವಾಗಿತ್ತಲ್ಲ … ಹಾಗಾಗಿ ಊಟ ಮುಗಿಸಿ ಮನೆಯ ಮುಂದಿನ ಜಗುಲಿಯ ಮೇಲೆ ಕೂತು ಬರುವ , ಹೋಗುವವರನ್ನು ಗಮನಿಸುವ ಕೆಲಸ ಶುರುವಾಯ್ತು. ಯಾವಳದ್ದೋ ಗಂಡ ಹೊರಟ ಮೇಲೆ, ಆ ಮನೆಗೆ ಹೆಂಡತಿಯ ಗೆಳೆಯ ಬರುತ್ತಾನೆ. ಬಂದವನು ಆಮೇಲೆ ಸಂಜೆಯವರೆಗೆ ಅಲ್ಲೆ ಇರುತ್ತಾನೆ. ಅನ್ನುವುದು ಒಂದು ದಿನದ ಡಿಸ್ಕವರಿಯಾದರೆ, ಮತ್ತೊಂದು ದಿನ ಗಂಡ ಕೆಲಸಕ್ಕೆ ಹೊರಟ ಮೇಲೆ ಅಪ್ಪನನ್ನು ಬರಹೇಳಿ ಸಾಮಾನು ತವರಿಗೆ ಸಾಗಿಸುವ ಇನ್ಯಾವಳದ್ದೋ ಬಗ್ಗೆ ಪತ್ತೇದಾರಿ. ಆಮೇಲೆ ಆ ವಿಷಯಗಳನ್ನೆಲ್ಲ ರಸವತ್ತಾಗಿ ಅವರಿವರ ಜೊತೆ ಮಾತಾಡುವುದು ಆಕೆಯ ಹೊಸ ಹವ್ಯಾಸವಾಯಿತು.
ಎಲ್ಲ ಕಲಸುಮೇಲೋಗರಗಳ ಆಗರ ಆಕೆ. ಇವತ್ತು ಯಾವುದೋ ಒಂದು ವಿಷಯದ ಪರವಾಗಿ ಮಾತಾಡುವವರು ನಾಳೆ ಅದರ ಸಂಪೂರ್ಣ ವಿರೋಧವಾಗಿ ಮಾತಾಡಿಬಿಡುತ್ತಿದ್ದರು. ರಾಮನವಮಿಯ ಸಂಗೀತ ಉತ್ಸವಕ್ಕೆ ವಾರಗಟ್ಟಲೆ ಹೋಗಿ ಕೂಡುತ್ತಿದ್ದರು. ಅದೇ ಹೊಸತಾಗಿ ಮದುವೆಯಾಗಿ ಬಂದ ತಮ್ಮನ ಹೆಂಡತಿ ಅದ್ಭುತವಾಗಿ ಹಾಡುತ್ತಿದ್ದರೆ ‘ನೀನು ಸಾ ಪಾ ಸಾ ಅಂತ ಕೂಗಿಕೊಂಡು ಕೂತರೆ ನಿನ್ನ ಗಂಡನ ಹೊಟ್ಟೆಗೆ ಹಿಟ್ಟು ಯಾವಳು ಹಾಕ್ತಾಳೆ’ ಅಂದುಬಿಟ್ಟಿದ್ದರು. ಅವತ್ತು ಹಾಡುವುದನ್ನು ಬಿಟ್ಟ ತಮ್ಮನ ಹೆಂಡತಿ ಮತ್ತೆಂದೂ ಹಾಡಲೇ ಇಲ್ಲ. ವಿಧವೆ ತಂಗಿಗೆ ಯಾರದೋ ಮನೆಯಲ್ಲಿ ಕುಂಕುಮ ಕೊಡಲಿಲ್ಲ ಅಂತ ಉಗ್ರ ಹೋರಾಟಕ್ಕೆ ನಿಲ್ಲುತ್ತಿದ ಆಕೆ, ತನ್ನ ಮನೆಗೆ ಬಂದ ಯಾರಿಗೋ ಯಾಕೆ ಕುಂಕುಮ ಕೊಡಲಿಲ್ಲ ಅಂದರೆ ‘ಅವಳು ಗಂಡ ಸತ್ತ ಮುಂಡೆ. ಅವಳಿಗೆಂತ ಕುಂಕುಮ ಕೊಡೋದು’ ಅಂತ ನಿರ್ದಾಕ್ಷಿಣ್ಯವಾಗಿ ಹೇಳಿ ಬಿಡುತ್ತಿದ್ದರು. ಅಪ್ಪ-ಅಮ್ಮನ ತಿಥಿಯನ್ನು ಶಾಸ್ರೋಕ್ತವಾಗಿ ಮಾಡುವುದಿಲ್ಲ ಅಂತ ವಯಸ್ಸಾದ ತಮ್ಮ ಮತ್ತು ಅವನ ಹೆಂಡತಿಯನ್ನು ಹೀನಾಮಾನಾ ಬಯ್ಯುತ್ತಿದ್ದ ಆಕೆ , ತನ್ನ ಗಂಡನ ತಿಥಿ ಯಾಕೆ ಮಾಡೋದಿಲ್ಲ ಅಂತ ಯಾರಾದರೂ ಕೇಳಿದರೆ ‘ಥೂ ನನಗೆ ಅದ್ರಲ್ಲೆಲ್ಲ ಚೂರೂ ನಂಬಿಕೆ ಇಲ್ಲ’ ಅಂತ ಸಾರಾಸಗಟಾಗಿ ಪ್ರಶ್ನೆಯನ್ನು ಎತ್ತಿ ಬಚ್ಚಲಿಗೆ ಒಗೆಯುತ್ತಿದ್ದರು!
ಆನೆ ನಡೆದಿದ್ದೇ ಹಾದಿ ಅನ್ನುವ ಹಾಗೆ ಬದುಕು ….! ಯಾಕೆ ಕೆಲವರು ಹೀಗಿರುತ್ತಾರೆ? ಯಾರಿಗೂ ಹಿತವಾಗದ ಹಾಗೆ? ಸಣ್ಣ comfort ಕೂಡಾ ಕೊಡಲಾಗದಷ್ಟು ಬಡವರಾಗಿ? ಇಡೀ ಎದೆಯಲ್ಲಿ ಪ್ರೀತಿಯ ಹನಿಯೂ ಹುಟ್ಟದಂತ ನಿರ್ಭಾವುಕರಾಗಿ? ಒಬ್ಬರನ್ನೂ ಬಾಚಿ ಅಪ್ಪುವಂತ ಮನಸ್ಸು ಇಲ್ಲದವರಾಗಿ? ಮನುಷ್ಯ ‘ಹೇಗೆ ಬದುಕಬಾರದು’ ಅನ್ನುವುದಕ್ಕೆ ಉದಾಹರಣೆಯಾಗಿ …?
ಬರೆದು ಮುಗಿಸುವಾಗ ಬಾಲ್ಯದಲ್ಲಿ ಚಡ್ಡಿ ವಾಸನೆ ಅಂದಿದ್ದರಿಂದ ಹಿಡಿದು ಆಕೆಯಿಂದಾದ ಇನ್ನೂ ಎಷ್ಟೋ ಅವಮಾನಗಳು ನೆನಪಾಗಿ ಕಣ್ಣಲ್ಲಿ ನೀರಿನ ತೆಳು ಪರೆ …
 

‍ಲೇಖಕರು G

November 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. jyothi

    Khanditha iddare inthavru…
    Last but one paragraph bhaala ishta aaythu madam…

    ಪ್ರತಿಕ್ರಿಯೆ
  2. ವೀಣಾ ಶಿವಣ್ಣ

    ನಿಜವಾಗಲು ಈ ಬರಹ ಓದುತ್ತಿರಬೇಕಾದರೆ ಒಂದಷ್ಟು ಜನ ನನ್ನ ಮನಸಿಗೆ ಬಂದು ಹೋದರು. ಆದರೆ ಇದೆಲ್ಲ ಒಬ್ಬರ ಹತ್ತಿರವೇ ಇರುವುದು ಅಂದರೆ ಅವರ ಜೊತೆ ಇರುವವರು ನರಕ ಯಾತನೆ ಅನುಭವಿಸಬೇಕು. ಇದು ಬೈ ಪೋಲಾರ್ ಡಿಸ್ಆರ್ಡರ್ ಅನ್ನುವ ಒಂದು ಸ್ಥಿತಿ, ಏನೋ ಒಟ್ಟಿನಲ್ಲಿ ತಾನೆಳಿದ್ದು ಸರಿ,ಉಳಿದವರೆಲ್ಲ ಪಾಪಿ ಗಳು ಏನು ಜ್ಞಾನವೇ ಇಲ್ಲದ ಅಜ್ಞಾನಿ ಗಳು ಅನ್ನುವ ಊಹೆ ಇಟ್ಟೆ ಬದುಕು ಮುಗಿಸುತ್ತಾರೆ. ಮೂಗಿನ ನೇರಕ್ಕೆ ಮಾತಾಡಿ, ಅಮೆಲೇನೋ ಜಗತ್ತೆನೆಲ್ಲ ತನ್ನ ಕೈ ಅಡಿ ಇತ್ತುಕೊಂಡಿದೀನೆ ಅನ್ನೋ ಅಹಂ ಕೂಡ..
    ಏನೋ ಒಟ್ಟಿನಲ್ಲಿ ಪರಿಸರ ಮಾತ್ರ ಹದಗೆಟ್ಟು ಹೋಗುತ್ತೆ, ಮಕ್ಕಳು ಮರಿಗಳಿಗೆ ಎಂಥ ಆಘಾತ..
    ಜೊತೆಯಲ್ಲಿ ಬದುಕುವ ವರಿಗೆ ಬೇರೆ ಆಪ್ಷನ್ ಇರೋದೇ ಇಲ್ಲ.. ಪಾಪ!! ಅಲ್ವ?

    ಪ್ರತಿಕ್ರಿಯೆ
  3. shadakshari.Tarabenahalli

    ನಾನೂ ದೂರದಿಂದ ನೋಡಿದ್ದೀನಿ ನನ್ನ ಗೆಳೆಯ/ ಗೆಳತಿಯರ ಮನೆಯಲ್ಲಿ.
    ಅವರೆಲ್ಲಾ ನೆನಪಾದರೂ ಕಣ್ರೀ ಅಕ್ಕಾ.

    ಪ್ರತಿಕ್ರಿಯೆ
  4. Anil Talikoti

    ಇವರಿಗೆ ಮೂಲದಲ್ಲೆಲ್ಲೋ defect ಇರುತ್ತದೆ ಏನೊ? ಅಚ್ಚರಿಯ ಮಾತೆಂದರೆ ಯಾವ ಘಟನೆಗಳು ಕೂಡಾ ಇಂಥವರನ್ನು ಬದಲಿಸದೆ ಇರುವದು ಅಥವಾ ಆ ತೆರನಾಗಿ ತೋರಿಸಿಕೊಳ್ಳುವದಕ್ಕೆ ಅವರು ಒಗ್ಗಿಕೊಂಡು ಬಿಡುವದು – ಹುಟ್ಟುಗುಣ ಸುಟ್ಟರೂ ಹೋಗದು ಎಂಬಂತೆ
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  5. Renuka Nidagundi

    ಃಮ್ಮ್ಮ್..ಇಂಥವ್ರೂ ಇರ್ತಾರೆ 🙂 ಚೆಂದದ ಬರಹ…

    ಪ್ರತಿಕ್ರಿಯೆ
  6. ಸತೀಶ್ ನಾಯ್ಕ್

    ಏನೂ ಒಲ್ಲದವರು..
    ಯಾರಿಗೂ ಸಲ್ಲದವರು..
    ಹಸುಗೂಸನು ಗಿಲ್ಲುವವರು..
    ಹಲವರುಂಟು ಈ ಕಣ್ಮುಂದೆ
    ತುಸುವೂ ಒಲವ ಚೆಲ್ಲದವರು..
    ಬದಲಾದರೆ ಚೆಂದ ಅವರ
    ಸುಸುತ್ತಲಿರುವ ಮಂದಿಗಾಗಿ
    ತುಸುವಾದದರು ಮೆಲ್ಲಗವರು..

    ಪ್ರತಿಕ್ರಿಯೆ
  7. Anonymous

    ಆನೆ ನಡೆದಿದ್ದೇ ಹಾದಿ ಅನ್ನುವ ಹಾಗೆ ಬದುಕು ….! ಯಾಕೆ ಕೆಲವರು ಹೀಗಿರುತ್ತಾರೆ? ಯಾರಿಗೂ ಹಿತವಾಗದ ಹಾಗೆ? ಸಣ್ಣ comfort ಕೂಡಾ ಕೊಡಲಾಗದಷ್ಟು ಬಡವರಾಗಿ? ಇಡೀ ಎದೆಯಲ್ಲಿ ಪ್ರೀತಿಯ ಹನಿಯೂ ಹುಟ್ಟದಂತ ನಿರ್ಭಾವುಕರಾಗಿ? ಒಬ್ಬರನ್ನೂ ಬಾಚಿ ಅಪ್ಪುವಂತ ಮನಸ್ಸು ಇಲ್ಲದವರಾಗಿ? ಮನುಷ್ಯ ‘ಹೇಗೆ ಬದುಕಬಾರದು’ ಅನ್ನುವುದಕ್ಕೆ ಉದಾಹರಣೆಯಾಗಿ … JUST lingering in my mind

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: