ಅಹವಿ ಹಾಡು : ಮೋಹನಸ್ವಾಮಿಯ ಜೊತೆ ಒಂದು ಸಂಜೆ ….


ನಾನು ಬೇರೆ ಊರುಗಳಿಗೆ ಹೋಗುವಾಗ ಜೊತೆಯಲ್ಲಿ ಒಂದೆರಡು ಪುಸ್ತಕಗಳನ್ನೂ ಜೊತೆಗೆ ಒಯ್ಯುವುದು ಮಾಮೂಲು. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ- ಬೇರೆ ಊರುಗಳ hectic schedule ನಲ್ಲಿ ಇದುವರೆಗೆ ಒಂದೇ ಒಂದು ಪುಸ್ತಕದ ಮೊದಲ ಪುಟ ಕೂಡ ತೆಗೆಯುವಷ್ಟು ಸಮಯ ಎಂದೂ ಸಿಕ್ಕಿರಲಿಲ್ಲ. ಆದರೂ ಯಾವತ್ತೂ ಅವುಗಳಿಲ್ಲದೇ ನನ್ನ ಪ್ಯಾಕಿಂಗ್ ಮುಗಿಯಿತು ಅಂತ ಅನ್ನಿಸುವುದೇ ಇಲ್ಲ. ಈ ಸಲ ಕೂಡ ಮಾರಿಷಸ್ ಮತ್ತು ದುಬಾಯ್ ಪ್ರವಾಸಕ್ಕೆ ಹೊರಟಾಗ ನನ್ನ ಜೊತೆ ಹೊರಟಿದ್ದು ವಸುಧೇಂದ್ರರ ‘ಮೋಹನಸ್ವಾಮಿ’ ಮತ್ತು ಸತ್ಯಕಾಮರ ‘ರಾಜಬಲಿ’. ಕೈಲಿದ್ದ ಬ್ಯಾಗಿನಲ್ಲಿ ಎರಡೂ ಪುಸ್ತಕಗಳನ್ನು ಹಾಕುವಾಗಲೇ ‘ಅಯ್ಯೋ ಸುಮ್ಮನೆ ಭಾರವಾಗುತ್ತದಲ್ಲವಾ? ಓದುವುದಿಲ್ಲ ಅಂತ ಗೊತ್ತಿದ್ದೂ ಯಾಕೆ ಒಯ್ಯಬೇಕು’ ಅನ್ನುವ ತಾಕಲಾಟ. ಆದರೆ ಓದಬೇಕು ಅನ್ನಿಸಿದಾಗ ಬಳಿಯಲ್ಲಿ ಪುಸ್ತಕವೊಂದು ಸಿಗದಿರುವುದು ನನ್ನ ಬದುಕಿನ ಅತೀ ದೊಡ್ಡ ಟ್ರ್ಯಾಜಿಡಿ ಅಂತ ನಾನು ಪರಿಗಣಿಸುವುದರಿಂದ ಕೊನೆಗೂ ಮೋಹನಸ್ವಾಮಿ ಮತ್ತು ರಾಜ ಬಲಿ ನನ್ನ ಬ್ಯಾಗು ಸೇರಿತು.
ಇಡೀ ಪ್ರಯಾಣ ಅದೆಷ್ಟು ಹಾರಿಬಲ್ ಆಗಿತ್ತು ಅಂದರೆ ಮಾರನೆಯ ದಿನ ಮಧ್ಯಾಹ್ನ ಮಾರಿಷಸ್ ತಲುಪುವವರೆಗೆ ಯಥಾಪ್ರಕಾರ ಪುಸ್ತಕಗಳು ನನ್ನ ಬ್ಯಾಗಿನಲ್ಲೇ ಉಸಿರು ಕಟ್ಟಿ ಕೂತಿದ್ದವು. ಅಲ್ಲಿ ತಲುಪಿದ ಮೇಲೂ ಸಂಜೆಯವರೆಗೆ ಸುಸ್ತು ಕಡಿಮೆ ಮಾಡಿಕೊಳ್ಳುವ ಕೆಲಸವೇ ಆಯಿತು. ಮಾರನೆಯ ದಿನ ಬೆಳಿಗ್ಗೆಯೇ ಮೊದಲ ಸೈಟ್ ಸೀಯಿಂಗ್ ಇದ್ದುದರಿಂದ ಸಂಜೆಯ ಮೇಲೆ ಆರಾಮವಾಗಿ ಹೋಟೆಲ್ಲಿಗೆ ಅಂಟಿದ್ದ ಬೀಚಿಗೆ ಹೊರಟೆ. ಆಗ ನನ್ನ ಜೊತೆ ಮೋಹನಸ್ವಾಮಿಯೂ ಹೊರಟ. ಹೊರಡುವಾಗ ಅವನು ಮೆಲ್ಲನೆ ಕೇಳಿದ ‘ನಿಜ ಹೇಳು, ನನ್ನ ಕಥೆ ಕೇಳುವ ಆಸಕ್ತಿ ಇದೆಯಾ ನಿನಗೆ? ಬೀಚಿನಲ್ಲಿ ಕಾಲು ಚಾಚಿ ಮಲಗಿ ಬಿಡುತ್ತೀಯೋ ಏನೋ’ ಅಂತ. ‘ಇಲ್ಲ ಮೋಹನಸ್ವಾಮಿ ನನಗೆ ಇವತ್ತು ನಿನ್ನ ಕಥೆ ಕೇಳುವ ಮೂಡು. ನನ್ನೆದುರು ಕೂತು ಹೇಳುತ್ತಾ ಹೋಗು. ಇಂಥ ಏಕಾಂತದಲ್ಲಿ ನಿನ್ನ ಕಥೆ ಕೇಳಬೇಕು ಅನ್ನಿಸುತ್ತಿದೆ. ನಾನು ಹಿಂದೆಂದೂ ಹೀಗೆಲ್ಲ ಬಯಸಿಲ್ಲ. ಆದರೆ ಈ ಸಲ ಮಾತ್ರ ನೀನು ನನ್ನೆದುರು ನಿನ್ನ ಕಥೆ ಬಿಚ್ಚಿ ಹರವು’ ಅಂದೆ. ಮೋಹನಸ್ವಾಮಿ ‘ನೋಡುವಾ ಅದೇನು ಕಥೆ ಕೇಳುತ್ತೀಯೋ’ ಅನ್ನುವ ಹಾಗೆ ನಕ್ಕ. ತುಟಿಯಲ್ಲಿ ಕೊಂಕಿತ್ತು ಅಂತ ನನಗೆ ಅನ್ನಿಸಿತು … ನಿಜವೋ, ಭ್ರಮೆಯೋ!
ಇಡೀ ಮಾರಿಷಸ್‌ನ ಬೀಚುಗಳು ತುಂಬ ತುಂಬ ಚೆಂದವಿರುತ್ತವೆ. ನಾನು ಕುಳಿತ ಬೀಚ್ ಕೂಡಾ ಹಾಗೆಯೇ ಇತ್ತು. ಜೊತೆಯಲ್ಲಿ ಬಂದಿದ್ದವರನ್ನೆಲ್ಲ ಬಿಟ್ಟು ಒಬ್ಬಳೇ ಬಂದಿದ್ದರಿಂದ ಹಾಸಿ ಹೊದೆಯುವಷ್ಟು ಏಕಾಂತ! ಅಲ್ಲಿದ್ದ ಕುರ್ಚಿಯಲ್ಲಿ ಒರಗಿದೆ. ಜೊತೆಗೆ ಒಂದಿಷ್ಟು ತಿನ್ನಲು, ಕುಡಿಯಲು ಗುಡ್ಡೆ ಹಾಕಿಕೊಂಡು ಮೋಹನಸ್ವಾಮಿಗೆ ‘ಈಗ ನಿನ್ನ ಕಥೆ ಶುರು ಮಾಡು’ ಅಂದೆ. ಅವನು ಅದಕ್ಕಾಗೇ ಕಾದಿದ್ದವನ ಹಾಗೆ ಶುರು ಮಾಡಿದ ….
ಅವನೊಬ್ಬ ಸಲಿಂಗಕಾಮಿಯಂತೆ. ಹಾಗಂತ ಅವನು ಕಥೆ ಶುರು ಮಾಡಿದಾಗ ಸ್ವಲ್ಪ ಕಸಿವಿಸಿ ಆಯಿತು. ನೇರಾನೇರವಾಗಿ, ಸ್ವಲ್ಪ ಹಸಿಯೆನ್ನಿಸುವ ಭಾಷೆಯಲ್ಲೇ ಕಥೆ ಹೇಳಲು ಮೊದಲಿಟ್ಟ. ನಾನು ಮುಜುಗರದಲ್ಲೇ ಅವನ ಕಥೆಗೆ ಕಿವಿಗೊಟ್ಟೆ. ಅವನ ಮತ್ತು ಕಾರ್ತಿಕನ ಪ್ರೇಮ ಕಥೆ ಶುರು ಮಾಡಿದ. ನಾನು ಹೊಟ್ಟೆಯೊಳಗೆ ಆಡುತ್ತಿದ್ದ ಚಿಟ್ಟೆಯನ್ನು ಸುಮ್ಮನಿರಿಸಲು ಪ್ರಯತ್ನ ಪಡುತ್ತಾ ಕಥೆ ಕೇಳುತ್ತಾ ಹೋದೆ. ಮೋಹನಸ್ವಾಮಿ ಪ್ರೇಮಿ ಕಾರ್ತಿಕನ ಜೊತೆಯ ಅವನ ದೇಹ ಸಂಬಂಧದ ಎಲ್ಲ ವಿವರಗಳನ್ನೂ ಕೊಡುತ್ತಾ ಹೋದ. ನಾನಾಗಿ ಕಥೆ ಹೇಳು ಅಂತ ಕೂರಿಸಿಕೊಂಡಿದ್ದವನನ್ನು ಈಗ ನನಗೆ ಮುಜುಗರವಾಗುತ್ತಿದೆ, ಕಥೆ ನಿಲ್ಲಿಸು ಅಂತ ಹೇಗೆ ಹೇಳಲಾಗುತ್ತದೆ? ಉಗುಳು ನುಂಗುತ್ತಾ ಕೇಳಿಸಿಕೊಳ್ಳುತ್ತಾ ಕೂತೆ. ಶೋಭಾ ಆಂಟಿ ಗಂಡನನ್ನು ಬೋಳಿಮಗ ಅನ್ನುವುದು ಕೇಳಿ ಒಂಥರಾ ಮಜವೆನ್ನಿಸಿತು. ಜಗತ್ತಿನ ಎಷ್ಟೊಂದು ಹೆಂಗಸರಿಗೆ ಗಂಡನನ್ನು ಹೀಗೆ ಶಪಿಸುವ ಬಯಕೆ ಇರುತ್ತದೋ ಅಂತ ಅನ್ನಿಸಿತು. ಹಸಿಯಾಗಿ ಶುರುವಾದ ಕಥೆಯ ಕೊನೆಯಲ್ಲಿ ವಿಮಾನದ ಅಪಘಾತದ ಕಥೆ ಕೇಳಿದಾಗ ನನಗೆ ಒಂದೆರಡು ಕ್ಷಣ ಎದೆ ಬಡಿತ ನಿಂತ ಹಾಗಾಯ್ತು. ‘ಸಧ್ಯ ಅಷ್ಟರಲ್ಲೇ ಮುಗಿಯಿತಲ್ಲ ಮಾರಾಯ’ ಅಂದೆ. ‘ಅವತ್ತು ನನ್ನ ಕತೆ ಮುಗಿದಿದ್ದರೆ ಇವತ್ತು ನಿನ್ನ ಮುಂದೆ ಕೂತು ಕತೆ ಹೇಳುತ್ತಿರಲಿಲ್ಲ ಅಷ್ಟೇ. ಆದರೆ ಅದರಿಂದ ಜಗತ್ತಿಗೇನೂ ನಷ್ಟವಾಗುತ್ತಿರಲಿಲ್ಲ ಅನ್ನಿಸುತ್ತದೆ’ ಅಂದ ಮೋಹನಸ್ವಾಮಿ ಸ್ವಗತವಾಡಿಕೊಳ್ಳುವಂತೆ.
ಮುಂದೆ ಕಾರ್ತಿಕನ ಮತ್ತು ಅವನ ಸಂಸಾರದ ಕಥೆ ಹೇಳುತ್ತಾ ಹೋದಾಗ ಇಂಥದ್ದೊಂದು ಸಂಬಂಧದ ರೂಪುರೇಷೆಗಳ ಅರಿವೇ ಇಲ್ಲದ ನನಗೆ ಎಲ್ಲ ವಿಚಿತ್ರವೆನ್ನಿಸತೊಡಗಿತು. ಅಪ್ಪಟ ಗೃಹಿಣಿಯಂತೆ ಕಾರ್ತಿಕನಿಗಾಗಿ ಅಡುಗೆ ಮಾಡುವ, ಇಸ್ತ್ರಿ ಮಾಡುವ, ಮನೆ ಕ್ಲೀನ್ ಮಾಡುವ ಮೋಹನಸ್ವಾಮಿ ನನ್ನನ್ನು ಬೆರಗುಗೊಳಿಸುತ್ತಾ ಹೋದ. ಜೊತೆ ಜೊತೆಗಿನ ಅವರ ದೇಹಸಂಬಂಧದ ಕಥೆಯನ್ನು ಕೂಡಾ ಮೋಹನಸ್ವಾಮಿ ವಿವರವಾಗಿ ಬಿಚ್ಚಿಡುತ್ತಾ ಹೋದ. ಮೊದಲಿನ ಮುಜುಗರ ಈಗ ಕಡಿಮೆಯಾಗಿತ್ತು. ಯಾವುದೋ ಗಂಡು-ಹೆಣ್ಣಿನ ಸಂಬಂಧದ ಕತೆ ಅನ್ನುವಂತೆ ಆರಾಮವಾಗಿ ಕೇಳಲು ಶುರು ಮಾಡಿದೆ. ಕಾರ್ತಿಕನ ಮದುವೆಯ ವಿಷಯ ಹೇಳುವ ಹೊತ್ತಿಗೆ ಮೋಹನಸ್ವಾಮಿಯ ದನಿ ಭಾರವಾಗುತ್ತಾ ಹೋಯ್ತು … ಹಾಗೆಯೇ ನನ್ನ ಹೃದಯವೂ.

ತನ್ನನ್ನು ಕಾರ್ತಿಕ ನಿರಾಕರಿಸಿದ ಕಥೆ ಹೇಳುವಾಗ ಅವನ ಗಂಟಲು ಬಿಗಿದಿತ್ತು. ನಾನು ಕೂಡಾ ನಿರಾಕರಣೆಯ ನೋವು ಅನುಭವಿಸಿದವಳೇ … ಹಾಗೆ ನೋಡಿದರೆ ಬಹುಶಃ ಜಗತ್ತಿನ ಎಲ್ಲರೂ ನಿರಾಕರಣೆಯ ನೋವನ್ನು ಸಂಬಂಧಗಳಲ್ಲಿ ಉಂಡೇ ಇರುತ್ತೇವೆ ಅಲ್ಲವಾ? ಹಾಗಾಗಿ ನನ್ನ ಗಂಟಲಿನಲ್ಲಿ ಕೂಡಾ ದುಃಖದ ಗಂಟು ಕೂತ ಹಾಗೆ ಅನ್ನಿಸಲು ಶುರುವಾಯ್ತು. ಅಬ್ಬಬ್ಬಾ ಎಂಥ ಯಾಚನೆಯ ಸ್ಥಿತಿಗೆ ಇಳಿದ ಈ ಮೋಹನಸ್ವಾಮಿ! ‘ಬೇಕಾದಾಗ ಕೂಡೆ ಮಲಗಿದ ಕಾರ್ತಿಕನಿಗೆ ಆ ನಂತರ ನೀನು ಬೇಡವಾದ ಸ್ಥಿತಿಯನ್ನು ಹಾದು ಬರುವುದು ತುಂಬ ದುಃಖ ತರಿಸಿರಬೇಕಲ್ಲವಾ’ ಅಂದೆ. ನಿಟ್ಟುಸಿರು ಬಿಟ್ಟು ಒಂದು ಘಳಿಗೆ ಮೌನವಾಗಿ ಕೂತ ಅವನು. ತಪ್ಪೇನೂ ಮಾಡದಿದ್ದರೂ ಮುಚ್ಚಿದ ಬಾಗಿಲಿನ ಎದುರು ಕೂತು ಕ್ಷಮೆ ಕೇಳಿದ ಕತೆ, ಕಾರ್ತಿಕ ಬಾಸ್ಟರ್ಡ್ ಅಂತ ಅವನನ್ನು ದೂಡಿದ ಕತೆ … ಕೇಳುತ್ತಿದ್ದ ನನಗೆ ಯಾಕೋ ಕಣ್ಣು ಮಂಜಾಯಿತು. ಎದುರು ಕೂತ ಮೋಹನಸ್ವಾಮಿಯ ಕೈ ಹಿಡಿದೆ. ಅದು ನಡುಗುತ್ತಿತ್ತು. ಅಲ್ಲಿಂದ ಅವನು ಹೇಳುತ್ತಾ ಹೋದ ಅವನ ಮತ್ತು ಕಾರ್ತಿಕನ ಮಧ್ಯದ ಸಂಬಂಧದ deterioration ಯಾಕೋ ತುಂಬ ನೋವು ತರಿಸಿತು. ಅಷ್ಟೊಂದು ಪ್ರೀತಿಸಿಕೊಳ್ಳುತ್ತಿದ್ದ ಅವರಿಬ್ಬರ ಸಂಬಂಧ ಮರೆತು, ಕಾರ್ತಿಕ ಅದೆಷ್ಟು ನಿಷ್ಠೂರಿಯಾಗಿಬಿಟ್ಟನಲ್ಲ ಅಂತ ನಾನೂ ಮೋಹನಸ್ವಾಮಿಯೊಡನೆ ನಿಟ್ಟುಸಿರಿಟ್ಟೆ. ಕಾರ್ತಿಕನಿಗೆ ಬೇಕಿದ್ದಾಗ ಮಾತ್ರ ಎಷ್ಟು ಸುಲಭಕ್ಕೆ ಮೋಹನನನ್ನು ಹತ್ತಿರ ಮಾಡಿಕೊಂಡು, ನಂತರ ಅವನ ಬದುಕು ಇನ್ನೆಲ್ಲೋ ಹುಡುಕುವ ಘಳಿಗೆಯಲ್ಲಿ ಸಂಬಂಧವನ್ನು ಉಸಿರಾಡದಂತೆ ಕಾಲಲ್ಲಿ ಒತ್ತಿ ಹಿಡಿದನಲ್ಲ ಪಾಪಿ ಅಂತ ಬಯ್ದುಕೊಂಡೆ. ‘ಅಷ್ಟೊಂದು ಪ್ರೀತಿಸಿಕೊಳ್ಳುತ್ತಿದ್ದ ನಿಮ್ಮಿಬ್ಬರ ಸಂಬಂಧ ಈ ರೀತಿ ಸತ್ತು ಹೋಗಿದ್ದು ಎಂಥ ಯಮ ಯಾತನೆಯಾಗಿರಬೇಕಲ್ಲವಾ?’ ಅಂದೆ. ‘ಇಲ್ಲ ಭಾರತಿ. ಸಂಬಂಧ ಸತ್ತಿದ್ದಕ್ಕೆ ನೋವಾಗಿದ್ದು ನಿಜ. ಆದರೆ ಆ ಸಂಬಂಧದ ಹೆಣಕ್ಕೆ ಒಂದು decent burial ಕೂಡಾ ಕೊಡದೇ ಬೀದಿಯಲ್ಲಿ ಕಾರಿಗೆ ಸಿಕ್ಕ ನಾಯಿಯ ಹೆಣದ ಮೇಲೆ ನೂರಾರು ಕಾರಿನ ಟೈರುಗಳು ಓಡಾಡಿ ಮಾಂಸವೆಲ್ಲ ಈಚೆ ಬರುವಂಥ ಕೆಟ್ಟ ಸಾವು ಕೊಟ್ಟನಲ್ಲ ಅನ್ನುವುದು ಜಾಸ್ತಿ ದುಃಖ ತಂದಿತು. ಒಂದು ಗುಂಡಿ ತೋಡಿ ಅದರೊಳಗೆ ನಮ್ಮ ಸಂಬಂಧದ ಹೆಣವಿರಿಸಿ ಮೇಲೊಂದು ಹೂವು ನೆಡುವಷ್ಟೂ ತಾಳ್ಮೆ ಇರಲಿಲ್ಲ ….’ ಮೋಹನಸ್ವಾಮಿಯ ಮಾತನ್ನು ಕೇಳುತ್ತಾ ನಾನು ಚಲನೆಯಿಲ್ಲದೇ ಕೂತಿದ್ದೆ …
ಅಲ್ಲಿಂದ ಮುಂದೆ ಮತ್ತೆ ಯಾವುದೋ ಪ್ರೇಮದ ಹುಡುಕಾಟಕ್ಕೆ ಬಿದ್ದ ಕಥೆ ಹೇಳಲು ಹೊರಟಾಗ, ಅವನ ಬದುಕು atleast ಒಂದು ದಡ ಕಂಡಿತೇನೋ ಅಂದುಕೊಂಡೆ. ಉಹೂಂ, ಮೋಹನಸ್ವಾಮಿಯ ಅದೃಷ್ಟ ನಿಜಕ್ಕೂ ನೆಟ್ಟಗಿರಲಿಲ್ಲ ಪಾಪ. ಸಲಿಂಗಕಾಮಿಗಳ ಒಳಜಗತ್ತಿನ ಯಾವುದೇ ಸ್ವರೂಪದ ಅರಿವಿರದ ನಾನು ಎಲ್ಲವನ್ನೂ ಬೆರಗಾಗಿ ಕೇಳಿಸಿಕೊಂಡೆ. ಇಬ್ಬರು ಹೆಣ್ಣುಗಳಾಗ ಹೊರಟ ಗಂಡಸರು ಒಬ್ಬರನ್ನೊಬ್ಬರು ನಿರಾಕರಿಸುತ್ತಾರೆ ಅನ್ನುವುದು ನನ್ನ ಅರಿವಿಗೆ ಅಲ್ಲಿಯವರೆಗೆ ನಿಲುಕಿರಲೇ ಇಲ್ಲ. ನನ್ನದೇ ಜಗತ್ತಿನ ಎಲ್ಲ ಸಂಬಂಧಗಳ ಕಥೆಯಂತೆ ಪ್ರೇಮ-ದ್ವೇಷ-ನಿರಾಕರಣೆ-ಅವಮಾನ ಎಲ್ಲವನ್ನೂ ಒಳಗೊಂಡ ಪ್ರೇಮ ಕಥೆ ನನ್ನೆದುರು ಬಿಚ್ಚಿಟ್ಟ ಮೋಹನಸ್ವಾಮಿ ಯಾಕೋ ಆ ಕ್ಷಣಕ್ಕೆ ತುಂಬ ಆಪ್ತನೆನ್ನಿಸಿಬಿಟ್ಟ.
ಆ ಕತೆ ಮುಗಿದ ನಂತರ ಮೋಹನಸ್ವಾಮಿಗೆ ಇದ್ದಕ್ಕಿದ್ದ ಹಾಗೆ ನೆನಪು ಮತ್ತಷ್ಟು ಹಿಂದೆ ಸರಿಯಿತು. ಕಾರ್ತಿಕನ ಕತೆಗಿಂತಲೂ ಹಿಂದೆ ನಡೆದ ಕಾಶಿ ವೀರನ ಕಥೆ ಹೇಳಲು ಶುರು ಮಾಡಿದ. ಕಾಶಿ ವೀರನ ದೇಹಕ್ಕೆ ಆಕರ್ಷಿತನಾಗಿ ಅವನನ್ನು ಮುಟ್ಟಿದ ತಪ್ಪಿಗೆ ಬ್ಲ್ಯಾಕ್ ಮೇಲಿಗೆ ಒಳಗಾದ ಕಥೆ ಶುರು ಮಾಡಿದ. ‘ಥೂ ನೀನು ಯಾಕೆ ಅಷ್ಟೊಂದು ಹೆದರಿದೆ ಮೋಹನಸ್ವಾಮಿ? ಬಗ್ಗುವವರಿದ್ದರೆ ತುಳಿಯುವವರು ಸಿದ್ಧರಿದ್ದೇ ಇರುತ್ತಾರೆ. ನೀನು ಅಷ್ಟು ಯಾಕೆ ತಗ್ಗಿದೆ?’ ಅಂತ ಗದರಿದೆ. ‘ಅದು ನಡೆದಿದ್ದು ತುಂಬ ಹಿಂದೆ. ಆಗೆಲ್ಲ ಇಂಥ ವಿಷಯಗಳು ತುಂಬ ಅಪರೂಪವಾಗಿತ್ತಲ್ಲವಾ? ಹಾಗಾಗಿ ನಾನು ತುಂಬ ಬೆದರಿಬಿಟ್ಟೆ. ಆದರೆ ಕೊನೆಕೊನೆಗೆ ಅವನು ಎಂಥ ಜಿಗಣೆಯಾದ ಅಂದರೆ ನಾನು ದುಡಿದಿದ್ದನ್ನೆಲ್ಲ ಅವನ ಬಾಯಿಗೆ ಹಾಕುವ ಪರಿಸ್ಥಿತಿ ಬಂತು. ಆಗ ನಾನು ಸಿಡಿದೆದ್ದೆ ನೋಡು …’ ಅಂತ ಶುರು ಹಚ್ಚಿದ ಮೋಹನಸ್ವಾಮಿ ಹೋಟೆಲ್ಲಿನಲ್ಲಿ ಕಾಶಿ ವೀರನನ್ನು ಎದುರಿಸಿದ ಕಥೆ ಶುರು ಮಾಡಿದ. ಆಗಲಂತೂ ಎಷ್ಟು ರೋಷದಿಂದ ಅವನು ಕಥೆ ಹೇಳುತ್ತಿದ್ದನೆಂದರೆ, ನಾನು ಆ ಹೋಟೆಲ್ಲಿನಲ್ಲಿ ಗಲಾಟೆ ನಡೆಯುತ್ತಿರುವಾಗ ಮೋಹನಸ್ವಾಮಿಯ ಹಿಂದೆ ನಿಂತು ಅವನನ್ನು ಹುರಿದುಂಬಿಸುತ್ತಿದ್ದೀನೇನೋ ಅನ್ನುವಷ್ಟು ತಲ್ಲೀನಳಾಗಿದ್ದೆ. ನನ್ನ ತಲ್ಲೀನತೆ ಕಂದು ಮೋಹನಸ್ವಾಮಿ ನಗುತ್ತಾ ‘ನೀನೇನೋ ಇಷ್ಟೆಲ್ಲ ಹುರಿದುಂಬಿಸುತ್ತಿದ್ದೀಯ. ಆದರೆ ಆ ಹೋಟೆಲ್ಲಿನ ಓನರ್ ನನ್ನನ್ನು ಮಾರನೆಯ ದಿನದಿಂದ ಮರ್ಯಾದಸ್ಥರು ಓಡಾಡುವ ಅವರ ಹೋಟೆಲ್ಲಿಗೆ ಬರಬೇಡ ಅಂತ ಆರ್ಡರ್ ಮಾಡಿದ ಗೊತ್ತಾ’ ಅಂದ. ನಾನು ನಗುತ್ತಾ ‘ಸುಮ್ಮನಿರಪ್ಪಾ, ಆ ಮರ್ಯಾದಸ್ಥರ ಬದುಕಿನಲ್ಲಿ ಏನೇನೆಲ್ಲ ನಡೆದಿರುತ್ತದೋ. ನಿನ್ನ ಬಗ್ಗೆ ಮಾತ್ರ ಅಷ್ಟು ಕಠೋರವಾಗಬೇಕಾದ ಅಗತ್ಯವೇನಿತ್ತು ಹೇಳು’ ಅಂದೆ. ಮೋಹನಸ್ವಾಮಿ ‘ಜಗತ್ತು ಹಾಗೆಯೇ ಅಲ್ಲವಾ?’ ಅಂದ. ಆ ದನಿಯಲ್ಲಿ ಜಗತ್ತಿನ ಎಲ್ಲವನ್ನೂ ಒಂಟಿಯಾಗಿ ಎದುರಿಸಿ ಶರಣಾಗತನಾದವನ ಸುಸ್ತಿತ್ತು …
‘ಕತ್ತಲಾಗುತ್ತಿದೆ .., ನೀನಿನ್ನು ಹೊರಡಬೇಕಾ’ ಅಂದ ಮೋಹನಸ್ವಾಮಿ. ‘ಇಲ್ಲೇ ಎಡವಿ ಬಿದ್ದರೆ ಸಿಗುವ ಹೋಟೆಲ್ ರೂಮಿಗೆ ಹೋಗಲು ಎಷ್ಟು ಹೊತ್ತು ಬೇಕು? ನೀನು ಕಥೆ ಮುಂದುವರೆಸು, ಪರವಾಗಿಲ್ಲ’ ಎಂದೆ. ಮೋಹನಸ್ವಾಮಿ ಬದುಕಿನಲ್ಲಿ ಅಲ್ಲಿಂದ ಮುಂದೆ ಒಂಟಿಯಾದ ಕಥೆ ಶುರು ಮಾಡಿದ. ಈ ಒಂಟಿತನದ ಕಥೆ ಯಾಕೋ ನನ್ನ ಎದೆ ನಡುಗಿಸುತ್ತದೆ. ಅವನು ಫ಼್ಲ್ಯಾಟ್ ತೆಗೆದುಕೊಳ್ಳಲು ಹೋದ ಕಥೆ ಶುರು ಮಾಡಿದ. ಎಲ್ಲ ಗೆಳೆಯರೂ ಬದುಕಿನಲ್ಲಿ ಸೆಟಲ್ ಆಗಿ, ಕೊನೆಗೆ ಒಂಟಿಯಾಗುಳಿದ ಮೋಹನಸ್ವಾಮಿಯನ್ನು ನೋಡಿ ಸಂಕಟವಾಯ್ತು. ಅವನು ಫ಼್ಲ್ಯಾಟ್ ಖರೀದಿಗೆ ಹೋದಾಗಿನ ತಾಕಲಾಟದ ವಿವರಣೆಯಂತೂ ಎದೆಯಲ್ಲಿ ಮರುಕದ ಕಡಲನ್ನೇ ಹುಟ್ಟಿಸಿತು. ಅದರಿಂದ ಅವನಿಗೆ ಯಾವ ಪ್ರಯೋಜನವೂ ಇಲ್ಲವೆನ್ನುವುದು ನನಗೆ ಗೊತ್ತು. ಆದರೂ ಕನಿಷ್ಟ ಪಕ್ಷ ಮಾನವನಿಗೆ ಮಾನವನೊಬ್ಬನು ತೋರುವ ಕರುಣೆಯನ್ನೂ ತೋರದೇ ಉಳಿಯುವುದು ನನ್ನಿಂದ ಸಾಧ್ಯವಾಗಲಿಲ್ಲ.
‘ನಾನು ಕಿಲಿಮಂಜಾರೊ ಪರ್ವತ ಹತ್ತಿದ ಕಥೆ ಹೇಳಿಲ್ಲ ಅಲ್ಲವಾ ?’ ಅಂದ. ‘ಅರ್ರೆ! ನೀನು ಅದನ್ನು ಹತ್ತಿದ್ದೀಯಾ? ನೀನು ನಿಜಕ್ಕೂ ಸಾಹಸಿಯೇ’ ಅಂದೆ. ‘ನನಗೆ ಸಾಹಸ ಅನ್ನುವುದೆಲ್ಲ ಗೊತ್ತಿಲ್ಲ. ನನಗೆ ಹತ್ತಬೇಕೆನ್ನಿಸಿತು, ಹತ್ತಿದೆ. ಆ ಎತ್ತರದ ಪರ್ವತವನ್ನು ಹತ್ತುವುದು ಅಷ್ಟು ಸುಲಭದ ಮಾತಲ್ಲ …’ ಅನ್ನುವಷ್ಟರಲ್ಲಿ ನಾನು ಬಾಯಿ ಹಾಕಿ ‘ನಿನ್ನ ಬದುಕಿನಲ್ಲಿ ಯಾವುದು ಸುಲಭವಿತ್ತು ಹೇಳು! ಎಷ್ಟೆಲ್ಲ ಕಷ್ಟ ಪಡುವುದೇ ಆಯಿತಲ್ಲ’ ಎಂದೆ. ಮೋಹನಸ್ವಾಮಿ ‘ಪ್ರವಾಹದ ಜೊತೆಗೆ ಈಜದವರಿಗೆ ಕಷ್ಟ ಪಡುವುದು ಅನಿವಾರ್ಯ. ಅವತ್ತು ರಾತ್ರಿಯಲ್ಲಿ ಚಾರಣಕ್ಕೆ ಡೇವಿಡ್ ಎಬ್ಬಿಸಿದಾಗ ನನ್ನ ಸ್ಥಿತಿ ನೀನು ನೋಡಬೇಕಿತ್ತು … ಗೊತ್ತಿರುವ ಮನೆಯಲ್ಲೇ ರಾತ್ರಿ ಹೊತ್ತು ದೀಪ ಹಾಕಿ ಓಡಾಡುತ್ತೇವೆ. ಅಂಥದ್ದರಲ್ಲಿ ಎಂದೂ ಕಾಲಿಡದ ಆ ಜಾಗದಲ್ಲಿ, ಮೊದಲ ಬಾರಿಗೆ, ಅದೂ ಕತ್ತಲಲ್ಲಿ ಹತ್ತಲು ಶುರು ಮಾಡಬೇಕು ಅಂತ ಡೇವಿಡ್ ಹೇಳಿದಾಗ ನನಗೆ ಹೇಗಾಗಿರಬೇಡ ನೀನೇ ಹೇಳು’ ಎನ್ನುತ್ತಾ ಆ ಕಥೆ ಶುರು ಮಾಡಿದ. ಎಂಥ ಆರ್ದ್ರತೆಯಿಂದ, ಆಸ್ಥೆಯಿಂದ ಕಥೆ ಕೇಳಲು ಶುರುವಿಟ್ಟೆನೆಂದರೆ ಎದುರಿಗಿದ್ದ ಬೀಚು, ಕಡಲು ಎಲ್ಲ ಮಾಯವಾಗಿ ನಾನೂ ಮೋಹನಸ್ವಾಮಿಯ ಜೊತೆ ಕಿಲಿಮಂಜಾರೋ ಪರ್ವತದ ಚಾರಣಕ್ಕೆ ಹೊರಟು ನಿಂತೆ …
ಎತ್ತರಕ್ಕೆ ಹತ್ತುತ್ತಾ ಹೋದ ಹಾಗೆ ಆಮ್ಲಜನಕದ ಕೊರತೆಯಿಂದ ನನಗೂ ಉಸಿರು ಕಟ್ಟಿದ ಹಾಗಾಯ್ತು. ಡೇವಿಡ್ ಧೈರ್ಯದ ನಗು ನಕ್ಕ. ಮೋಹನಸ್ವಾಮಿ ಮತ್ತು ನಾನು ಇಬ್ಬರೂ ಕಿಲಿಮಂಜಾರೊ ಪರ್ವತದ ಕಡಿದಾದ ಹಾದಿಯನ್ನು ಹತ್ತಲು ಶುರು ಮಾಡಿದೆವು. ಮೋಹನಸ್ವಾಮಿಗೆ ಈ ಏರುಹಾದಿ ಅಭ್ಯಾಸವಿರಲಿಲ್ಲ. ಆಮ್ಲಜನಕದ ಕೊರತೆಗೆ ಏದುಸಿರು ಬಿಟ್ಟ, ನೆಲ ಕಚ್ಚಿ ಮಲಗಿದ, ತಿಂದಿದ್ದನ್ನೆಲ್ಲ ಕಾರಿಕೊಂಡ, ನನ್ನಿಂದ ಇನ್ನು ಸಾಧ್ಯವಿಲ್ಲ ಅಂತ ಮಂಡಿಯೂರಿದ. ಡೇವಿಡ್ ಇನ್ನೊಂದೇ ಒಂದು ತುತ್ತು, ಊಟ ಆಗೋಯ್ತು ಅಂತ ಮಗುವಿಗೆ ತಿನ್ನಿಸುವ ಅಮ್ಮನಂತೆ ಮೋಹನಸ್ವಾಮಿಯನ್ನು ಹುರಿದುಂಬಿಸಿದ. ಮೋಹನಸ್ವಾಮಿಗೆ ಜನ ಇಷ್ಟೆಲ್ಲ ಎತ್ತರಕ್ಕೆ ಯಾಕೆ ಹತ್ತುತ್ತಾರೆ, ಒಂದು ದೇವಸ್ಥಾನವೂ ಇಲ್ಲದ ಜಾಗಕ್ಕೆ ಅಂತ ಆಶ್ಚರ್ಯ. ಡೇವಿಡ್ ಕಿಲಿಮಂಜಾರೊ ಪರ್ವತವೇ ಅವನಿಗೆ ದೇವರು ಅಂದಾಗ ಮೋಹನಸ್ವಾಮಿಯ ಕಣ್ಣಲ್ಲಿ ಸಮ್ಮತಿಯ ಬೆಳಕಿತ್ತು. ಅಂತೂ ಕೊನೆಗೊಮ್ಮೆ ತುಟ್ಟತುದಿ ತಲುಪಿದಾಗ ಮಾತ್ರ ಮೋಹನಸ್ವಾಮಿ ಯಾಕಷ್ಟು ಎಮೋಷನಲ್ ಆದ? ಬದುಕಿನ ಎಷ್ಟೊಂದು ಅನಿರೀಕ್ಷಿತ ತಳ್ಳಾಟಗಳನ್ನು ಒಂಟಿಯಾಗಿ ಎದುರಿಸಿ ಹಣ್ಣಾದವನಿಗೆ ಹಾಗೆ ದುಃಖ ಚಾಚಿ ಬರುತ್ತದೋ ಏನೋ! ಎಲ್ಲ ಆವೇಗ ಇಳಿದ ಮೇಲೆ, ಕೊನೆಗೊಮ್ಮೆ ಮೋಹನಸ್ವಾಮಿಯ ಜೊತೆ ಕಿಲಿಮಂಜಾರೋ ಪರ್ವತ ಇಳಿಯಲು ಮೊದಲಿಟ್ಟೆ …
‘ಬದುಕಿನ ಪರ್ವತವನ್ನೂ ನಾವು ಒಂಟಿಯಾಗೇ ಹತ್ತಬೇಕು …’ ಮೋಹನಸ್ವಾಮಿಯ ದನಿಗೆ ನಾನು ಭ್ರಮೆಯ ಲೋಕದಿಂದ ಆಚೆ ಬಂದೆ. ಅವ ಎಂಥ ಅದ್ಭುತ ಕಥೆಗಾರನಾಗಿದ್ದ ಅಂದರೆ ಮೊದಲಲ್ಲಿ ಅವನ ಕಥೆಯನ್ನು ಕೇಳಿಸಿಕೊಂಡವಳು, ನಂತರ ಅವನ ಕಥೆಯಲ್ಲಿ ಒಂದಾಗಿಹೋಗಿ, ಅವನ ಜೊತೆ ಕಿಲಿಮಂಜಾರೋ ಚಾರಣಕ್ಕೂ ಹೋಗಿಬಿಟ್ಟಿದ್ದೆ! ‘ಮೋಹನ ನಾನಿನ್ನು ಹೊರಡಲೇ ಕತ್ತಲಾಯಿತು’ ಅಂದೆ. ‘ಇಷ್ಟು ಹೊತ್ತೂ ನನ್ನ ಕಥೆ ಕೇಳಿದ್ದಕ್ಕೆ ಥ್ಯಾಂಕ್ಸ್’ ಅಂದ ಅವನು. ‘ಛೇ! ನಾನು ನಿನಗೆ ಇಂಥ ಅದ್ಭುತ ಕಥೆ ಹೇಳಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕು. ಇನ್ನು ಮುಂದೆ ನೀನು ಒಂಟಿ ಅಂತ ಯಾವತ್ತೇ ಅನ್ನಿಸಿದರೂ ನನ್ನನ್ನು ಕರಿ ಮೋಹನಸ್ವಾಮಿ … ನಿನ್ನ ಕಥೆಗಳಿಗಾಗಿ ನಾನು ಕಾದಿರುತ್ತೇನೆ’ ಅಂದು ಎದ್ದು ಹೊರಟೆ …
ಆ ಕಡಲ ದಡದಲ್ಲಿ ನಿಂತಿದ್ದ ಒಂಟಿ ದೋಣಿಗಳು … ಮುಳುಗಿದ್ದ ಸೂರ್ಯ … ಹೆಜ್ಜೆಗಳಿಂದ ತುಂಬಿದ್ದರೂ ಯಾವ ಪಾದವೂ ತನ್ನದಲ್ಲ ಅನ್ನುವ ಅರಿವಿನಲ್ಲಿ ಮ್ಲಾನವಾಗಿದ್ದ ಮರಳ ದಂಡೆ … ಮೊರೆಯುತ್ತಿದ್ದ ಕಡಲು … ಮೋಹನಸ್ವಾಮಿ … ನಾನು … ಎಲ್ಲ ಏಕಾಂಗಿಗಳೂ ಮತ್ತೆಂದು ಸೇರಿ, ಕಥೆ ಹೇಳಿಕೊಳ್ಳುತ್ತೀವೋ ಯಾರಿಗೆ ಗೊತ್ತು …

‍ಲೇಖಕರು G

January 30, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. sunil Rao

    Exellent!!
    Mohanaswqmy itteechege nanna kalukida kathe. Sambandhagala suliyalli ellaroo sikkihaakikollale beku.
    Adu muktaayavaaguvaaga ondu ddent burrial nijavaagiyoo irabeku..
    Realy admired

    ಪ್ರತಿಕ್ರಿಯೆ
  2. Prabhakar Nimbargi

    What a heart touching incidence! DECENT BURIAL FOR A RELATION! Beautiful yet heart breaking coinage! Conveys a lot in brevity! It is compelling me to read Vasudhendra.

    ಪ್ರತಿಕ್ರಿಯೆ
  3. umesh desai

    ಪ್ರಸ್ತುತ ಕತೆ ಪುಸ್ತಕ ನನಗೂ ಭಾಳಕಾಡಿದೆ..
    ಬಹುಶಃ ಕನ್ನಡದಲ್ಲಿ ಮೊದಲಬಾರಿ ಗೇ ಬಗ್ಗೆ ಇಷ್ಟು ಮುಕ್ತವಾಗಿ ಬರೆದಿರಬಹುದು..
    ನೀವು ಮೋಹನಸ್ವಮಿಯನ್ನು ಕಂಡುಕೊಂಡ ರೀತಿ ಖುಷಿ ಕೊಡತು.

    ಪ್ರತಿಕ್ರಿಯೆ
  4. n.viswanatha

    Baraha sooper.naanoo kilimaanjiro hattabekenisuva ase moodiside.Katheyanne odidahaaganisuttade.n.viswanatha

    ಪ್ರತಿಕ್ರಿಯೆ
  5. lalitha siddabasavaiah

    ವಸುಧೇಂದ್ರ ಅವರ ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ ,ನಾನು ಮೆಚ್ಚುವ ಕಥೆಗಾರ ಅವರು. ಮೋಹನಸ್ವಾಮಿಯನ್ನು ಇದುವರೆಗೆ ಓದಲಿಲ್ಲವೆ ಛೇಛೇ ಎಂದುಕೊಳ್ಳುವ ಹಾಗೆ ಪುಸ್ತಕದ ಬಗ್ಗೆ ಬರ್ದಿದ್ದೀರಿ ಮೇಡಮ್,ಇಂಥ ಪುಸ್ತಕ ಪ್ರೀತಿಯೆ ಕನ್ನಡವನ್ನು ಕಾಪಾಡೋದು ನೋಡಿ, ವಂದನೆಗಳು.

    ಪ್ರತಿಕ್ರಿಯೆ
  6. sindhu

    ಚೆನ್ನಾದ ಅನುಸಂಧಾನ ಭಾರತಿ.
    ಇದು ನನಗೂ ತುಂಬ ಇಷ್ಟವಾದ ಮತ್ತು ಕಾಡಿದ ಪುಸ್ತಕ.
    ತಲ್ಲಣಗಳನ್ನ ತುಂಬ ಸೂಕ್ಷ್ಮವಾಗಿ ಕುಸುರಿ ಕೆತ್ತನೆಯಂತೆ ಬಿಡಿಸುತ್ತಾ ಅದನ್ನ ನಮ್ಮೊಳಗೆ ಹನಿಸುತ್ತಾ ಹೋಗುವ ಕಥೆಗಾರಿಕೆ ಇದು.
    ಮೋಹನಸ್ವಾಮಿ ಅಲ್ದೇನೆ ಉಳಿದ ಪೂರ್ಣಾಹುತಿ ಮತ್ತು ದುರ್ಭಿಕ್ಷಕಾಲ ಕೂಡ ಕಾಡಿಸುವ ಕಥೆಗಳು.
    -ಸಿಂಧು

    ಪ್ರತಿಕ್ರಿಯೆ
  7. suvarna babu

    ಮೇಡಂ ನಾನೂ ಮೋಹನಸ್ವಾಮಿ ಓದಿದೆ ನಿಮ್ಮ ಹಾಗೆ ಅದರ ಬಗ್ಗೆ ಬರೀಲಿಕ್ಕೆ ಬರಲ್ಲ ನೋಡಿ ಓದಿ ಮೋಹನಸ್ವಾಮಿಯ ಬಗ್ಗೆ ನಾಲ್ಕು ಮೆಚ್ಚಿಗೆಯ ಮಾತುಗಳನ್ನು ವಸುಧೇಂದ್ರ ಅವರಿಗೆ ಹೇಳಿ ಸುಮ್ಮನಾದೆ ಆದರೆ ನಿಮ್ಮ ತರಹ ಬ್ಲಾಗ್ನಲ್ಲಿ ಬರೆಯುವುದರಿಂದ ಇನ್ನಷ್ಟು ಜನ ಕುತೂಹಲದಿಂದ ಓದಲು ಅನುಕೂಲವಾಗುತ್ತದೆ.

    ಪ್ರತಿಕ್ರಿಯೆ
  8. narayana.M.S.

    ತುಂಬಾ ಚೆನ್ನಾಗಿ ಬರೆದಿದ್ದೀರ ಭಾರತಿ ಅವರೆ,ಪುಸ್ತಕ ಓದಿದ ಮೇಲೆ ನಾನು ವಸುಧೇಂದ್ರರಿಗೆ ಸುಧೀರ್ಘ ಪ್ರತಿಕ್ರಿಯೆ ಬರೆದು ತಿಳಿಸಿದ್ದೆ.It is sad that the review petition on 377 was dismissed. I don’t understand why the judiciary is meaninglessly prolonging the inevitable. Hope the curative petition will produce a fair outcome.

    ಪ್ರತಿಕ್ರಿಯೆ
  9. narayana.M.S.

    ತುಂಬಾ ಚೆನ್ನಾಗಿ ಬರೆದಿದ್ದೀರ ಭಾರತಿ ಅವರೆ,ನಾನು ಪುಸ್ತಕ ಓದಿದ ನಂತರ ವಸುಧೇಂದ್ರರಿಗೆ ಸುಧೀರ್ಘವಾದ ಪ್ರತಿಕ್ರಿಯೆ ಬರೆದು ತಿಳಿಸಿದ್ದೆ. It is unfortunate that the review petition on 377 was mercilessly dismissed. I really don’t understand why the SC is senselessly deferring the inevitable. Hope the curative petition will produce a fair outcome. It is also crucial for fighting AIDS I guess.

    ಪ್ರತಿಕ್ರಿಯೆ
  10. amardeep.p.s.

    ಮತ್ತೊಂದು ಪುಸ್ತಕ ಓದಲು ತಾವು ಪ್ರೆರೇಪಿಸಿದಂತಾಯಿತು…… ಧನ್ಯವಾದಗಳು ಮೇಡಂ …

    ಪ್ರತಿಕ್ರಿಯೆ
  11. Renuka Nidagundi

    ಸೂಪರ್ ಭಾರತಿ!! ಮೋಹನಸ್ವಾಮಿಯನ್ನು ಓದಲೇಬೇಕೆನ್ನಿಸಿದೆ. ಕಿಲಿಮಂಜರೋವನ್ನು ಹತ್ತಿದ ಅನುಭೂತಿಯನ್ನು ಓದಿದ ನಮಗೂ ಉಣಿಸಿದ್ದೀಯಾ. ಆಪ್ತವಾದ ಬರಹ..ಕಣ್ಣು ಹನಿಗೂಡಿದವು.

    ಪ್ರತಿಕ್ರಿಯೆ
  12. anil talikoti

    ‘…ಆದರೆ ಓದಬೇಕು ಅನ್ನಿಸಿದಾಗ ಬಳಿಯಲ್ಲಿ ಪುಸ್ತಕವೊಂದು ಸಿಗದಿರುವುದು ನನ್ನ ಬದುಕಿನ ಅತೀ ದೊಡ್ಡ ಟ್ರ್ಯಾಜಿಡಿ’ ಓದುವ ಹುಚ್ಚು ಒಳ್ಳೆಯ ಹುಚ್ಚು. Liked you narration.

    ಪ್ರತಿಕ್ರಿಯೆ
  13. Anonymous

    “ಬದುಕಿನ ಪರ್ವತವನ್ನು ನಾವೊಬ್ಬರೇ ಹತ್ತಬೇಕು”… A very nice interaction with ಮೋಹನಸ್ವಾಮಿ. A good reading and reader too.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: