ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ಮಲಬಾರಿನ ಪ್ರೇಮ ಸಾಮ್ರಾಜ್ಞಿ ಕಮಲಾ ದಾಸ್

(ಇಲ್ಲಿಯವರೆಗೆ…)

ಗಂಡನಿಂದ ಮಾನಸಿಕವಾಗಿ ದೂರ ಸರಿದ ಕಮಲಾ ಒಬ್ಬ ಇಟಾಲಿಯನ್ ಜೊತೆ, ಮತ್ತೆ ಯಾರೋ ಗಂಡಸರ ಜೊತೆ ಪ್ರೇಮದಲ್ಲೋ ಅಥವಾ ಸಂಬಂಧದಲ್ಲಿಯೋ ಬೀಳುತ್ತಾ, ಏಳುತ್ತಾ ಸಾಗುತ್ತಾರೆ. ಗಂಡ ಮಾತ್ರ ಎಂದಿನಂತೆ ಒಂದು ಸ್ವಲ್ಪವೂ ಗಿಲ್ಟ್ ಇಲ್ಲದೇ ಕಮಲಾರನ್ನು ತನ್ನ ಮೇಲಧಿಕಾರಿಗಳ ಬಳಿ ಕಳಿಸಿ ತನ್ನ ಕಾರ್ಯ ಸಾಧಿಸಿ ಕೊಳ್ಳುತ್ತಲೇ ಇರುತ್ತಾರೆ. ಒಂದು ಸಲವಂತೂ ಒಬ್ಬ ಮಿನಿಸ್ಟರ್ ಬಳಿ ಕಮಲಾರನ್ನು ಕಳಿಸಿ ‘ನಾನು ಕಳಿಸಿದೆನೆಂದು ಹೇಳಬೇಡ. ನಾನಾಗಿಯೇ ಇಷ್ಟ ಪಟ್ಟು ಬಂದೆ ಎಂದು ಹೇಳು’ ಅನ್ನುತ್ತಾರಂತೆ ಮಾಧವ ದಾಸ್. ಇದಲ್ಲದೇ ಕಮಲಾ ಆ ಗಂಡಸರ ಜೊತೆ ಇದ್ದು ಬಂದ ಕಥೆಯನ್ನು ವಾಪಸ್ ಬಂದ ಮೇಲೆ ಗಂಡನಿಗೆ ವಿವರವಾಗಿ ಹೇಳಬೇಕಿತ್ತು ಕೂಡಾ. ಆತನಿಗೆ ಹೆಂಗಸರು ಬೇಕಿರುವುದಿಲ್ಲ. ಆತನಿಗೆ ಮತ್ತೊಬ್ಬ ಗಂಡಸಿನ ಜೊತೆ ಆಕೆ ಕಳೆದ ನಿಮಿಷಗಳ ಬಗ್ಗೆ ಕೇಳಿಸಿಕೊಳ್ಳುತ್ತಿದ್ದರೆ ಅಪಾರವಾಗಿ ಉದ್ರೇಕವಂತೆ! ಹಾಗಾಗಿ ಆಕೆ ತನ್ನ ಜೊತೆ ಹಾಸಿಗೆ ಹಂಚಿಕೊಂಡವರ ಬಗ್ಗೆ ಹೇಳುತ್ತಿದ್ದರೆ, ಈತ ಆ ಗಂಡಸರನ್ನು ಕಲ್ಪನೆಗೆ ತಂದುಕೊಂಡು ಸುಖಿಸುತ್ತಿರುತ್ತಾನಂತೆ. ಕಮಲಾ ಇದೆಲ್ಲದರಿಂದ ಮಾನಸಿಕವಾಗಿ ಅಸ್ವಸ್ಥರಾಗುತ್ತಾ ಹೋಗುತ್ತಾರೆ. ಗಂಡನ ಕಾಮ ವಿಕೃತಿಗಳು ಅವರನ್ನು ಗಂಡನಿಂದ ಪೂರ್ತಿ ವಿಮುಖರಾಗಿಸಿ ಬಿಡುತ್ತದೆ.
ತಾನಾಗಿ ಬೇರೆ ಗಂಡಸರ ಜೊತೆ ಅವರನ್ನು ಕಳಿಸುತ್ತಿದ್ದ ದಾಸ್, ಈಗ ಕಮಲಾ ಅಕ್ಕ ಪಕ್ಕದ ಮನೆಯ ಹುಡುಗರ ಜೊತೆ ಚೆಸ್ ಆಡಿದರೆ, ಮಾತಾಡಿದರೆ ಕೂಡಾ ಪಿರಿಪಿರಿ ಹಚ್ಚಲು ಶುರು ಮಾಡಿಬಿಡುತ್ತಾರೆ. ಆಗ ಮಾತ್ರ ಘಾಸಿಗೊಂಡ ಕಮಲಾ ಒಂದು ದಿನ ಗಂಡ ಕುಡಿಯುತ್ತಿದ್ದ ಬಿಯರ್ ಬಾಟಲನ್ನು ಎತ್ತಿ ಹಿಡಿದು ‘ನೀನು ಹೀಗೇ ಕಾಟ ಕೊಡ್ತಿದ್ದರೆ ಈ ಬಿಯರ್ ಬಾಟಲಿನಿಂದ ನಿನ್ನ ತಲೆ ಒಡೆದು ಬಿಡ್ತೀನಿ. ಮಿದುಳು ಆಚೆ ಚೂರು ಚೂರಾಗಿ ಬೀಳುವ ಹಾಗೆ ಹೊಡೀತೀನಿ. ನೀನು ಇಲ್ಲೇ, ಈ ಕ್ಷಣ ಸತ್ತು ಹೋಗಬೇಕು, ಹಾಗೆ ಹೊಡೀತೀನಿ’ ಅಂತ ರಾಕ್ಷಸಿಯ ಹಾಗೆ ಅಬ್ಬರಿಸಿ ಎದುರು ಬೀಳುತ್ತಾರೆ.
ಹೀಗೇ ವರ್ಷಗಳು ಕಳೆದು ಹೋಗುತ್ತವೆ. ಒಂದು ಸಲ ಬರ್ಮಾ ದೇಶದಿಂದ ಹಿಂತಿರುಗಿದ ಮಾಧವ ದಾಸ್, ಆತನ ತೊಡೆಯ ಮೇಲೆ ಗಂಡಸೊಬ್ಬನನ್ನು ಕೂರಿಸಿಕೊಂಡಿದ್ದ ಭಾವಚಿತ್ರವನ್ನು ಕಮಲಾ ಎದುರಿಗಿಡುತ್ತಾರೆ. ಕಮಲಾ ತುಂಬ ನೋವಿನಿಂದ, ಅಸಹ್ಯದಿಂದ ಆತನ ಬಗ್ಗೆ ಕೇಳಿದಾಗ ‘ನಾನು ಆತನನ್ನು ಪ್ರೇಮಿಸಿದೆ’ ಅನ್ನುತ್ತಾರಂತೆ ದಾಸ್. ಆಗ ಕಮಲಾ ಪೂರ್ತಿ ಚೂರಾಗಿ ಹೋಗುತ್ತಾರೆ. ‘ನೀನು ಯಾರ ಯಾರ ಜೊತೆಯೋ ಮಲಗಿ ಬಂದು, ನನಗೆ ರೋಗ ಹತ್ತಿಸಿಬಿಡುವ ಹಾಗೆ ತೋರುತ್ತಿದೆ. ನಾನು ಇನ್ನು ಮುಂದೆ ನಿನ್ನ ಜೊತೆ ಮಲಗುವುದಿಲ್ಲ’ ಅಂತ ಗಂಡನಿಗೆ ಹೇಳಿ, ಬ್ರಹ್ಮಚರ್ಯ ಸ್ವೀಕಾರ ಮಾಡಿಬಿಡುತ್ತಾರೆ. ಆ ದಿನಗಳಲ್ಲಿ ತೀವ್ರ ಮಾನಸಿಕ ಖಿನ್ನತೆಗೆ ಗುರಿಯಾಗಿ ಬಿಡುತ್ತಾರೆ. ಕಮಲಾ ಎದುರಿಗೆ ಸಿಕ್ಕವರ ಮೇಲೆ ಕಿರುಚುವುದು, ಕೈಗೆ ಸಿಕ್ಕದ್ದನ್ನು ಚೂರಾಗಿಸುವುದು ಇವುಗಳಲ್ಲಿ ಕಳೆದುಹೋಗುತ್ತಾರೆ. ದಿನಕ್ಕೆ ಮೂರು ಮಾತ್ರೆಗಳನ್ನು ತಿನ್ನಬೇಕೆಂದರೆ ಅದನ್ನೂ ಸರಿಯಾಗಿ ತೆಗೆದುಕೊಳ್ಳದೇ ಇನ್ನಿಷ್ಟು ಖಿನ್ನತೆಗೆ ಇಳಿಯುತ್ತಾರೆ. ಒಂದು ಸಲ ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ.
ಆ ನಂತರ ಮಾತ್ರೆಗಳನ್ನು ಬಲವಂತದಿಂದ ತೆಗೆದುಕೊಳ್ಳಲು ಶುರು ಮಾಡುತ್ತಾರೆ. ಅಲ್ಲಿಂದ ಮುಂದೆ ಹನ್ನೊಂದು ತಿಂಗಳು ಆ ಮಾತ್ರೆಯ ಪ್ರಭಾವದಿಂದ, ದಿನದ ಹೆಚ್ಚಿನ ಭಾಗವನ್ನು ನಿದ್ರೆಯಲ್ಲೇ ಕಳೆಯತೊಡಗುತ್ತಾರೆ. ಆ ನಂತರ ನಿಧಾನವಾಗಿ ಆ ಖಿನ್ನತೆಯಿಂದ ಹೊರಬರುತ್ತಾರೆ ಕೂಡಾ. ಅಲ್ಲಿಂದ ಮುಂದೆ ಆಕೆ ಬ್ರಹ್ಮಚರ್ಯ ಅಪ್ಪಿಕೊಂಡೇ ಬದುಕುತ್ತಾರೆ … ಗಂಡ ಸಾಯುವವರೆಗೂ ಮತ್ತೆ ಆತನ ಜೊತೆ ಮಲಗುವುದೇ ಇಲ್ಲ…
ಕೊನೆಗೊಂದು ದಿನ ದಾಸ್ ಸತ್ತು ಹೋಗುತ್ತಾರೆ. ಆಗ ಕಮಲಾ ಆಡುವ ಮಾತುಗಳು ನನ್ನಲ್ಲಿ ಆಶ್ಚರ್ಯ ಹುಟ್ಟು ಹಾಕಿದವು. ಅಷ್ಟೊಂದು ದಿನ ಗಂಡನನ್ನು ಶುದ್ಧಿಯಾಗಿಡುವುದು ಮತ್ತು ಆತನಿಗೆ ಮಾತ್ರೆ ನೀಡುವುದು .. ಇಂತ ಕೆಲಸಗಳಲ್ಲಿ ತೊಡಗಿದಾಗ ನಾನು ಯಾರಿಗೋ ಬೇಕಾದವಳು ಅನ್ನಿಸುತ್ತಿತ್ತು. ಈಗ ಎದೆಯ ತುಂಬ ಮಾರ್ದವತೆಯಿತ್ತು, ಆದರೆ ಅದನ್ನು ಪಡೆಯಲು ಯಾರೂ ಇರಲಿಲ್ಲ, ನಾನು ಚುಕ್ಕಾಣಿಯಿಲ್ಲದ ದೋಣಿ ಅನ್ನಿಸುತ್ತಿದೆ … ಅಲ್ಲಲ್ಲ, ದೋಣಿಯೇ ಇಲ್ಲದವಳು ಅನ್ನಿಸುತ್ತಿದೆ. ಇನ್ನು ನಾನು ದಡ ಸೇರಬೇಕಾದರೆ ಈಜುವುದೊಂದೇ ಮಾರ್ಗ. ಆದರೆ ಪ್ರಶ್ನೆಗಳು ಏಳುತ್ತವೆ, ಈಜಬೇಕು ಅನ್ನುವುದೇನೋ ಸರಿ, ಆದರೆ ಈ ಈಜು ಎಲ್ಲಿಗೆ ತಲುಪಲು? ನನ್ನೆಲ್ಲ ಈಜುವ ಶ್ರಮಕ್ಕೆ ಲಾಯಕ್ಕಾದ ಈಜುವಿಕೆ ಇದಾ? ಅಂತೆಲ್ಲ ಗೊಂದಲಕ್ಕೊಳಗಾಗುತ್ತಾರೆ. ಇದೆಲ್ಲ ಓದುವಾಗ ಯಾಕೋ ಕಮಲಾ ಒಂದು ಪುಟ್ಟ ಮಗುವಿನ ಹಾಗೆ ಅನ್ನಿಸಿಬಿಟ್ಟರು. ಬದುಕಿನ ಕಡೆಗೆ ಬೆರಗಿನಿಂದ ನೋಡುವ ಮಗು, ಜನಸಂದಣಿಯಲ್ಲಿ ಕಳೆದುಹೋದ ಮಗು, ಸದಾ ಕಾಲ ಆಸರೆ ಬೇಡುವ ಪುಟ್ಟ ಮಗು … ಯಾಕೋ ತುಂಬ ಪಾಪದವರೆನ್ನಿಸಿದರು ಕಮಲಾ.

ಆದರೆ, ಗಂಡ ಸತ್ತ ಮೇಲೆ ಆತನ ವಿಧವೆಯಾಗಿ ಬಾಳು ತುಂಬ ಕಷ್ಟ, ಈಗಲೂ ವಿಧವೆಯರು ಅಪಶಕುನದವರು ಅಂತ ಅವರನ್ನು ಕಡೆಗಾಣಿಸುತ್ತಾರೆ ಅಂತ ಕಮಲಾ ಬರೆದಿದ್ದು ಮಾತ್ರ ನನಗೆ ಯಾಕೋ ಪಥ್ಯವೇ ಆಗಲಿಲ್ಲ. ಕಮಲಾರಂಥ out of the box ಚಿಂತಿಸುತ್ತಿದ್ದ ಹೆಣ್ಣು, ಈ ರೀತಿಯ ವಿಷಯಗಳಿಗೆ, ಮೂದಲಿಕೆಗಳಿಗೆ ಬೆಲೆ ಕೊಡುತ್ತಾರೆ ಅಂದರೆ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಆಕೆ ಯಾವಾಗಲೂ ತಾನು ಬಾಳುತ್ತಿದ್ದಂಥ ಕಾಲಘಟ್ಟಕ್ಕಿಂತ ಒಂದೆರಡು ದಶಕಗಳಷ್ಟು ಮುಂದಿನ ರೀತಿ ಚಿಂತಿಸುತ್ತಿದ್ದಾಕೆ ನಿಜಕ್ಕೂ ಈ ರೀತಿಯ ಮಾತುಗಳಿಗೆಲ್ಲ ಕೇರ್ ಮಾಡುವವರೇ? ನಂಬುವುದು ಕಷ್ಟವಾಯಿತು ಯಾಕೋ …ಅಥವಾ ಆಕೆ ತಾನು ಮುಂದೆ ಇಡುವ ಹೆಜ್ಜೆಗಳಿಗೆ ಈ ರೀತಿಯ ಸಮಾಜಾಯಿಷಿ ತಯಾರು ಮಾಡಿಟ್ಟುಕೊಳ್ಳುತ್ತಿದ್ದಿರಬೇಕು …

ಆಗ ಹುಟ್ಟುತ್ತಾರೆ ಕಮಲಾ ಸುರಯ್ಯಾ … ಅದಕ್ಕೆ ನಿಮಿತ್ತವಾಗುವವನು 38 ವರ್ಷದ ಸಾದಿಕ್ ಆಲಿ!
ಇದ್ದಕ್ಕಿದ್ದ ಹಾಗೆ ಒಂದು ದಿನ ಕಮಲಾ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಾರೆ. ಕಾರಣ ಕೇಳಿದವರಿಗೆ ‘ಹಿಂದೂಗಳು ನನ್ನನ್ನು ನೋಯಿಸಿದ್ದಾರೆ, ದೂಷಿಸಿದ್ದಾರೆ. ಇಸ್ಲಾಂ ಧರ್ಮ ಪ್ರೇಮವನ್ನು ಸಾರುತ್ತದೆ. ನಾನು ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಮಾತ್ರ ಬಯಸುವುದರಿಂದ ಇಸ್ಲಾಂ ಧರ್ಮ ಅಪ್ಪಿದೆ ಅನ್ನುತ್ತಾರೆ. ಕೃಷ್ಣನ ಭಕ್ತೆಯಾಗಿದ್ದ ಕಮಲಾರ ಈ ಮಾತುಗಳು ಎಲ್ಲರನ್ನೂ ಆಘಾತಕ್ಕೆ ಈಡುಮಾಡುತ್ತದೆ. ಅಷ್ಟೊಂದು ಪ್ರೀತಿಸುತ್ತಿದ್ದ ಕೃಷ್ಣನನ್ನು ನೀವು ಹೇಗೆ ತೊರೆದಿರಿ ಅಂತ ಪ್ರಶ್ನೆ ಹಾಕಿದಾಗ ಆಕೆ ಕೊಡುವ ಉತ್ತರ ನೋಡಿ … ‘ಅವನನ್ನು ನಾನೆಲ್ಲಿ ತೊರೆದಿದ್ದೇನೆ! ಈಗಲೂ ಅವನು ನನ್ನ ಜೊತೆಯೇ ಇದ್ದಾನೆ’ ಅನ್ನುತ್ತಾರೆ. ಅನ್ಯ ಧರ್ಮದವರೊಬ್ಬರ ಮನೆಯಲ್ಲಿ ಕೃಷ್ಣ ಹೇಗೆ ಇರಲು ಸಾಧ್ಯ ಅಂತ ಪ್ರಶ್ನಿಸಿದರೆ ನಾನೀಗ ಅವನಿಗೆ ಮಹಮ್ಮದ್ ಎಂದು ನಾಮಕರಣ ಮಾಡಿ ನನ್ನ ಜೊತೆಯೇ ಇಟ್ಟುಕೊಂಡಿದ್ದೇನೆ ಅನ್ನುತ್ತಾರೆ! ಆಕೆಯ ಉತ್ತರ ಪ್ರಶ್ನಿಸಿದವರಿಗೆ ಹೇಗೆ ದಿಗ್ಭ್ರಾಂತಿ ಉಂಟುಮಾಡಿರಬಹುದು ಅಂತ ಯೋಚಿಸುತ್ತಾ ಕೂತೆ ಇದನ್ನೆಲ್ಲ ಓದಿ …ಜಗತ್ತನ್ನು ಬೆಚ್ಚಿ ಬೀಳಿಸಲೆಂದೇ ಈ ರೀತಿ ಉತ್ತರ ಕೊಡುತ್ತಿದ್ದರೇ ಆಕೆ? ಇಲ್ಲ, ಅದೆಲ್ಲ ಕಾರಣವಲ್ಲ … ಪ್ರೀತಿಯ ಹುಡುಕಾಟಕ್ಕೆ ಬಿದ್ದ ಕಮಲಾ ಸಮುದ್ರದ ಅಲೆಗಳು ತಳ್ಳಿದಾಗ ಆಯ ತಪ್ಪಿ ಕೊಚ್ಚಿ ಹೋಗುವ ಹಾಗೆ ಬದುಕಲು ಶುರು ಮಾಡುತ್ತಾರೆ ಮತ್ತು ಈ ತಳ್ಳಾಟದಲ್ಲಿ ಏನೆಲ್ಲ ಆತ್ಮವಂಚನೆಗಳು ! ಆಕೆಗೆ ಅಷ್ಟೊಂದು ವರ್ಷ ಹಿಂದೂ ಧರ್ಮದಲ್ಲಿ ಕಾಣಿಸದ ಕೊರತೆಗಳು, ನ್ಯೂನತೆಗಳು ಇದ್ದಕ್ಕಿದ್ದ ಹಾಗೆ ಕಾಣಿಸಲು ಶುರುವಾಗಿದ್ದು ಸಾದಿಕ್ ಆಲಿಯೆಂಬ ಮನುಷ್ಯನಿಂದ …

38 ವರ್ಷದ ಸಾದಿಕ್ ಅದ್ಭುತ ಮಾತುಗಾರನಾಗಿರುತ್ತಾನೆ… ಜೊತೆಗೆ ಪ್ರೇಮಿ ಕೂಡಾ! ಆತ ಕಮಲಾರ ಕವಿತೆಯನ್ನು ಮೆಚ್ಚುತ್ತಾನೆ. ಘಂಟೆಗಟ್ಟಳೆ ಫೋನಿನಲ್ಲಿ ಮಾತಿಗೆ ಇಳಿಯುತ್ತಾನೆ. ಅವಳನ್ನು ಮರುಳು ಮಾಡುತ್ತಾನೆ … ಆಗ ಕಮಲಾಗೆ 67 ವರ್ಷ! ಒಮ್ಮೆ ಎರಡು ಘಂಟೆಗಳ appointment ತೆಗೆದುಕೊಂಡು ಕಮಲಾರನ್ನು ಭೇಟಿಯಾಗಲು ಬರುವ ಸಾದಿಕ್ ‘ಒಂಟಿತನವನ್ನು ಅಪ್ಪಿಕೊಂಡು ದೇಹವನ್ನು ಕಳೆಬರದ ಹಾಗೆ ಹೊತ್ತು ಓಡಾಡುತ್ತಿದ್ದ’ ಕಮಲಾರ ಕಾಲಬುಡದಲ್ಲಿ ಕೂತುಕೊಳ್ಳುತ್ತಾನೆ. ಆಕೆಯ ಕವಿತೆಗಳನ್ನು ಹೇಳುತ್ತಾನೆ, ಕೇಳುತ್ತಾನೆ, ನಗಿಸುತ್ತಾನೆ, ಹೊಗಳುತ್ತಾನೆ … ಕಮಲಾ ಅವನ ಪ್ರಭಾವಳಿಯಲ್ಲಿ ಕೊಚ್ಚಿಹೋಗುತ್ತಾರೆ! ಕೊಟ್ಟ ಕೇಕ್ ಅನ್ನು ನೀನೇ ತಿನ್ನಿಸು ಅನ್ನುತ್ತಾನೆ …ಉರ್ದು ಕವಿತೆಗಳನ್ನು ಹೇಳುತ್ತಾನೆ … ಪ್ರೇಮದ ಬಗ್ಗೆ ಉತ್ಕಟತೆಯಿಂದ ಮಾತಾಡುತ್ತಾನೆ. ಅವನು ಹೋದ ನಂತರವೂ ಅವನ ಮಾತು ಮಧುರ ರಾಗದಂತೆ ಕಾಡುತ್ತದೆ ಕಮಲಾರನ್ನು. ಆತನ ಮಾತು ದೇಗುಲದ ಘಂಟಾನಾದದಂತೆ ಆತ ಹೋದ ಬಳಿಕವೂ ಅನುರಣನವಾಗುತ್ತಿತ್ತು ಅನ್ನುತ್ತಾರೆ ಕಮಲಾ. ಅಂತ ಪ್ರೇಮದ ಅನುಭವವನ್ನು ಕತೆ ಕಾದಂಬರಿಗಳಲ್ಲಿ ಮಾತ್ರ ಓದಿದ್ದ ಕಮಲಾ ಅವನ ಜೊತೆ ಮೋಹದಲ್ಲಿ ಬಿದ್ದು ಬಿಡುತ್ತಾರೆ.
ಆ ನಂತರ ಅವನನ್ನು ಭೇಟಿ ಮಾಡಲು ಹೋಗುವ ಕಮಲಾ ಮೂರು ದಿನ ಆತನ ಜೊತೆಯೇ ಉಳಿಯುತ್ತಾರೆ. ಆತ ಅದ್ಭುತ ಮಾತುಗಾರ. ಕಮಲಾರಲ್ಲಿದ್ದ ಹುಡುಕಾಟವನ್ನು ಗುರುತಿಸುವಷ್ಟು ಬುದ್ದಿವಂತಿಕೆ ಆತನಿಗೆ ಇರುತ್ತದೆ. ಅಂಥ ಅವನು ತಾನಾಗಿ ಆಕೆಯ ಪಕ್ಕಕ್ಕೆ ರಾತ್ರಿ ಬಂದಾಗ, ಕಮಲಾ ಆತನ ಜೊತೆ ದೈಹಿಕ ಸಂಬಂಧಕ್ಕೆ ನಿರಾಕರಿಸುವುದೇ ಇಲ್ಲ. ಮೊದಲ ಬಾರಿಗೆ ಗಂಡಿನ ಸ್ಪರ್ಶ ಅನುಭವಿಸಿದ ಹೆಣ್ಣಿನ ಹಾಗೆ ಪುಳಕಗೊಳ್ಳುತ್ತಾ ಅವನಲ್ಲಿ ಸೇರುತ್ತಾರೆ! ‘ನಿನ್ನ ದೇಹದ ಮೇಲಾಡಿದ ನನ್ನ ಬೆರಳುಗಳು ಯಾತ್ರೆಗೆ ಹೊರಟ ಯಾತ್ರಿಕನ ಹಾಗೆ ಕೃತಾರ್ಥವಾದವು’ ಅನ್ನುವಂಥ ಮಾತನ್ನು ಸಾದಿಕ್ ಅವರ ಕಿವಿಯಲ್ಲಿ ಉಸುರಿದಾಗ ಕಮಲಾಗೆ ಹೇಗಾಗಿರಬೇಡ?! ಮೊದಲ ಸಲ ಆ ರೀತಿಯಾಗಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿ ಕೊಳ್ಳಲು ಸಾಧ್ಯವಾಗಿದ್ದು ಅನ್ನುತ್ತಾರೆ ಕಮಲಾ. ಸಾದಿಕ್‌ಗೆ ಆಗಲೇ ಇಬ್ಬರು ಹೆಂಡತಿಯರು. ಇಸ್ಲಾಂಗೆ ಮತಾಂತರ ಹೊಂದಿದರೆ ಮೂರನೆಯ ಹೆಂಡತಿಯಾಗಿ ನಿನ್ನನ್ನು ಮದುವೆಯಾಗುತ್ತೇನೆ ಅನ್ನುತ್ತಾನೆ
ಮತ್ತು ಕಮಲಾಗೆ ‘ಸುರಯ್ಯಾ’ ಅನ್ನುವ ಹೆಸರನ್ನೂ ಇಟ್ಟು ಬಿಡುತ್ತಾನೆ! ಸುರಯ್ಯಾ ಅಂದರೆ ‘ಹಗಲಿನಲ್ಲಿ ಹೊಳೆವ ನಕ್ಷತ್ರ’ ಎಂದರ್ಥವಂತೆ …!


ದಾರಿಯಲ್ಲಿ ಬರುವಾಗಲೇ ಕಮಲಾ ಮತಾಂತರದ ನಿರ್ಧಾರ ಮಾಡಿಬಿಡುತ್ತಾರೆ. ಎಲ್ಲ ಕಡೆಗೂ ಸುದ್ದಿ ಬಿಡುಗಡೆ ಮಾಡುವ ಕಮಲಾ ‘ಇಸ್ಲಾಂ ಅಂದರೆ ಒಂದು ಹಾಡಿನಂತ ಧರ್ಮ … ನಾನು ಆ ಹಾಡಿಗೆ ನರ್ತಿಸಲು ಬಯಸುತ್ತೇನೆ’ ಅನ್ನುವ ಅತೀ ಭಾವುಕವಾದ ಮಾತುಗಳನ್ನಾಡುತ್ತಾರೆ. ಈ ರೀತಿ ಮಾಡುವುದರಿಂದ ತನ್ನವರನ್ನೆಲ್ಲ ಕಳೆದುಕೊಳ್ಳಬೇಕಾಗಬಹುದು ಅನ್ನುವುದು ಆಕೆಗೆ ಗೊತ್ತಿಲ್ಲದ ವಿಷಯವೇನೂ ಆಗಿರುವುದಿಲ್ಲ. ಆದರೂ ಮೋಹದಲ್ಲಿ ಬಿದ್ದ ಕಮಲಾ ಇಡೀ ಸಂಸಾರ ನನ್ನ ವಿರುದ್ಧ ನಿಂತರೂ ಪರವಾಗಿಲ್ಲ, ಅವನೇ ನನ್ನ ಸರ್ವಸ್ವ ಅನ್ನುತ್ತಾರೆ. ಆಕೆ ಮತಾಂತರಗೊಳ್ಳುವ ನಿರ್ಧಾರ ಮಾಡುತ್ತಾರೆ, ನೆನ್ನೆ ಸಾರನ್ನ ಉಂಡೆ, ಇವತ್ತು ಕೆಂಪು ಸೀರೆಯುಟ್ಟೆ ಅನ್ನುವಷ್ಟು ಸ್ವಾಭಾವಿಕವಾಗಿ, ಆರಾಮವಾಗಿ! 67 ನೆಯ ವಯಸ್ಸಿನಲ್ಲಿ ಈ ರೀತಿಯ impulsive ಬದುಕು ತನ್ನದಾಗಿಸಿಕೊಳ್ಳಲು ಕಮಲಾರಿಂದ ಮಾತ್ರ ಸಾಧ್ಯವೇನೋ! ಒಟ್ಟಿನಲ್ಲಿ ಅಕೆ ಮತಾಂತರಗೊಳ್ಳುತ್ತಾರೆ ಮತ್ತು ಇಸ್ಲಾಂ ಧರ್ಮ ಈಕೆಯನ್ನು ತೆರೆದ ತೋಳುಗಳಿಂದ ಆಲಂಗಿಸುತ್ತದೆ. ಕಮಲಾರಂಥ ಕಮಲಾ ಆ ಧರ್ಮವನ್ನು ತನ್ನದಾಗಿಸಿ ಕೊಂಡಾಗ ಯಾರು ಬೇಡವೆನ್ನುತ್ತಾರೆ ಹೇಳಿ! ತುಂಬ ವಿಷಾದವೆಂದರೆ ಅಲ್ಲಿಂದ ಮುಂದೆ ಸುರಯ್ಯಾ ಬದುಕು ಅವರದ್ದಾಗಿ ಉಳಿಯುವುದೇ ಇಲ್ಲ. ಬೆಳ್ಳಿಯ ಸೆಲ್ ಫೋನನ್ನು ಚಿನ್ನದ ಬೆಲ್ಟಿನಲ್ಲಿ ಬಂಧಿಸಿ ಸದಾಕಾಲ ಸೊಂಟಕ್ಕೆ ಕಟ್ಟಿಕೊಂಡು ತಿರುಗುತ್ತಾರೆ, ಸಾದಿಕ್‌ನ ಕರೆಗಾಗಿ ಕಾಯುತ್ತಾ! ಪರಿಚಯದ ಮೊದಲಲ್ಲಿ ಪ್ರತೀ ರಾತ್ರಿಯಲ್ಲಿ ಮಧ್ಯರಾತ್ರಿಯಲ್ಲಿ ಅವರಿಗೆ ಕರೆಮಾಡುತ್ತಿದ್ದನಲ್ಲ, ಆ ದಿನಗಳ ನೆನಪಿನಲ್ಲಿ ಆಕೆ ಸದಾ ಫೋನನ್ನು ಕೋತಿ ತನ್ನ ಮರಿಯನ್ನು ಅವುಚಿದಂತೆ ಹೊತ್ತು ಓಡಾಡುತ್ತಾರೆ. ಇಂಥ ಉತ್ಕಟ ಪ್ರೇಮದಲ್ಲಿ ಬೀಳಲು ಎಲ್ಲರಿಂದ ಸಾಧ್ಯವಾಗುವುದಿಲ್ಲ … ನಿಜಕ್ಕೂ ….
ಸದಾ ಕಾಲ ಆಕೆ ನಾನಾ ಊರುಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಪ್ರವಚನ ಕೊಡಬೇಕೆಂದು ಆಕೆಯ ಮೇಲೆ ಒತ್ತಡ ಹೇರುತ್ತಾ ಹೋಗುತ್ತಾರೆ. ಡಯಾಬಿಟೀಸ್ ಖಾಯಿಲೆಯಿಂದ ಸುಸ್ತಾಗಿ ಹೋಗಿರುವ ಸುರಯ್ಯಾ ‘ನನಗೆ ಇದಕ್ಕೆಲ್ಲ ಶಕ್ತಿ ಇಲ್ರಪ್ಪಾ .. ನನ್ನ ಬಿಟ್ಟು ಬಿಡ್ರೋ’ ಅಂತ ಬೇಡಿಕೊಂಡರೂ ಅವರನ್ನು ಬಿಡುವುದಿಲ್ಲ. ಕಮಲಾರಂಥ ಕ್ರಾಂತಿಕಾರಿ, ಅಸಂಪ್ರದಾಯದ ಹೆಣ್ಣು, ಹುಟ್ಟಾ ಮುಸ್ಲಿಮಳಿಗಿಂತ ಅಪ್ಪಟ ಮುಸಲ್ಮಾನಳಾಗಿ ಬುರ್ಖಾ ಹೊದ್ದು, ಧರ್ಮ ಪ್ರಚಾರಕ್ಕೆ ನಿಂತು ಬಿಡುತ್ತಾರೆ. ಸಭೆಗಳಲ್ಲಿ ಇರುವ ಮುಸ್ಲಿಂ ಹೆಂಗಸರು ಸಾದಾ ಸೀರೆಯುಟ್ಟು ಕೂತಿದ್ದರೆ ಈಕೆ ಬುರ್ಖಾ ಹಾಕಿರುತ್ತಾರೆ! ಇನ್ಸುಲಿನ್ ತೆಗೆದುಕೊಳ್ಳಲೂ ಸಮಯವಿರದಂತೆ ಸದಾ ಒತ್ತಡದ ಬದುಕು. ಅವಳನ್ನು ಸಾಕಷ್ಟು ಬಳಸಿಕೊಳ್ಳಲಾಗುತ್ತದೆ. ಬೇರೆ ದೇಶಗಳಿಗೂ ಹೋಗಿ ಪ್ರಚಾರ ಮಾಡಬೇಕಾಗುತ್ತದೆ, ಪ್ರವಚನ ಕೊಡಬೇಕಾಗುತ್ತದೆ. ಆಗ ಕಿವಿಗೆ ಬೀಳುತ್ತದೆ ಆ ಆಘಾತದ ಸುದ್ದಿ… ಸಾದಿಕ್‌ಗೆ ಆಕೆಯನ್ನು ಮದುವೆಯಾಗುವ ಉದ್ದೇಶವೇ ಇರುವುದಿಲ್ಲ! ಅವರನ್ನು ಮತಾಂತರಕ್ಕೆ ಪ್ರಚೋದಿಸಲು ಅವನು ಹಣ ಪಡೆದಿದ್ದೇನೆ ಅಂತ ಒಪ್ಪಿಕೊಳ್ಳುತ್ತಾನೆ! ಬಹುಶಃ ಲವ್ ಜಿಹಾದ್‌ನ ಮೊದಲ ಕೇಸ್ ಕಮಲಾರದ್ದೇ ಇರಬೇಕು ಅನ್ನುತ್ತಾರೆ ಲೇಖಕಿ. ಕಮಲಾಗೆ ಅದೊಂದು ದೊಡ್ಡ ಶಾಕ್. ಆ ನಂತರ ಅವನು ಕ್ಷುಲ್ಲಕ ಕಾರಣ ಕೊಟ್ಟು, ಆಕೆಯಿಂದ ದೂರವಾಗಿ ಹೋಗಿಯೇ ಬಿಡುತ್ತಾನೆ. ಕಮಲಾ ಮಾತ್ರ ಸುರಯ್ಯಾ ಆಗಿಯೇ ಉಳಿಯಬೇಕಾಗುತ್ತದೆ… ಮೆರಿಲಿ ಹತ್ತಿರ ‘ಇದೆಲ್ಲ ಮಾಡಿದ್ದು ಒಬ್ಬ ಗಂಡಸಿನ ಪ್ರೀತಿಗಾಗಿ … ಅವನೂ ಸಿಗಲೇ ಇಲ್ಲವಲ್ಲ’ ಅಂತ ಕಮಲಾ ನೋಯುವಾಗ ನನಗೆ ಯಾಕೋ ಅವರ ಬಗ್ಗೆ ವಿಷಾದ ಮಾತ್ರ ಉಳಿಯಿತು. ಕಮಲಾ ಒಂದೆರಡು ಹೆಜ್ಜೆಗಳನ್ನದರೂ ಯೋಚಿಸಿ ಇಡಬೇಕಿತ್ತು ಅನ್ನುವ ವಿಷಾದ …
ಅಲ್ಲಿಂದ ಮುಂದೆ ಆಕೆ ಮತ್ತೂ ಒಬ್ಬ ಮುಸಲ್ಮಾನನ ಪ್ರೇಮದಲ್ಲಿ ಬೀಳುತ್ತಾಳೆ. ಆತನನ್ನು ಮದುವೆಯಾಗಲೂ ಸಿದ್ಧಳಾಗುತ್ತಾಳೆ. ಲೇಖಕಿ ‘ನೀನು ಆತನನ್ನು ಮದುವೆಯಾದ್ರೆ ನಿನ್ನ ಮೊಮ್ಮಕ್ಕಳು ನಿನಗೆ ಹಿಡಿ ಶಾಪ ಹಾಕುತ್ತಿದ್ದರೇನೋ … ನಿನ್ನೆಲ್ಲ ಆಸ್ತಿ ಅವನಿಗೆ ಸೇರಿಬಿಡ್ತಿತ್ತು’ ಅಂದರೆ ‘ಅವನಾದರೂ ಅದನ್ನು ಇಟ್ಟುಕೊಂಡು ಏನು ಮಾಡ್ತಿದ್ದ ಹೇಳು … ನನ್ನ ಮೊಮ್ಮಕ್ಕಳು ಅವನದ್ದೂ ಆಗಿರುವುದರಿಂದ, ಎಲ್ಲ ಆಸ್ತಿ ನನ್ನ ಮೊಮ್ಮಕ್ಕಳಿಗೇ ಕೊಡ್ತಿದ್ದ ಅಲ್ಲವೇ?’ ಅನ್ನುತ್ತಾರೆ. ಒಬ್ಬ ಹೆಂಗಸು ಆ ವಯಸ್ಸಿನಲ್ಲಿ ಇಷ್ಟು ಮುಗ್ಧಳಾಗಿದ್ದಾಳೆ ಅಂದರೆ ಅದು ನಿಜಕ್ಕೂ ಹೆಗ್ಗಳಿಕೆಯೇನೂ ಅಲ್ಲ ಅನ್ನುವುದೂ ಸತ್ಯ. ಬಹುಶಃ ಆಕೆ ಈ ರೀತಿ ಮುಗ್ಧಳಾಗಿದ್ದರಿಂದಲೇ ಬದುಕು ಅವಳನ್ನು ಅಷ್ಟೆಲ್ಲ ಒದ್ದು ಹಣ್ಣು ಮಾಡಿತು ಅನ್ನಿಸುತ್ತದೆ. ಕೊನೆಗೆ ಮತಾಂತರ ಹೊಂದಿದ ವಿಷಯದಲ್ಲಿ ತೀವ್ರ regret ಮಾಡುವ ಕಮಲಾ, ಆ ನಂತರವೂ ಹಿಂದೂ ಧರ್ಮಕ್ಕೆ ವಾಪಸ್ ಆಗದೇ ಅಲ್ಲಿಯೇ ಉಳಿಯುತ್ತಾರೆ ಮತ್ತು ಮುಸಲ್ಮಾನಳಾಗಿಯೇ ಸಾಯುತ್ತಾರೆ.
ಸೂತ್ರದ ಬೊಂಬೆಯಾದರೂ ಸರಿ, ಬದುಕಿಗೆ ನನ್ನನ್ನು ಗಟ್ಟಿಯಾಗಿ ಹಿಡಿದಿಡುವ ಗಂಡಸಿನ ದೌರ್ಬಲ್ಯವನ್ನು ಎತ್ತಿ ತೋರಿಸದೇ, ನೀನೇ ಇಂದ್ರ ಚಂದ್ರ ಅನ್ನುತ್ತೇನೆ ಅನ್ನುವ ಕಮಲಾರ ತುಣುಕು ಎಲ್ಲ ಹೆಣ್ಣುಗಳ ಎದೆಯಲ್ಲೂ ಇರುತ್ತದೆ ಅನ್ನಿಸಿತು. ಕಮಲಾ ಬರೆದ ಒಂದು ಕವನವಿದು …
ನಾನೊಬ್ಬ ಗಂಡಸನ್ನು ಸಂಧಿಸಿದೆ
ಅವನನ್ನು ಪ್ರೇಮಿಸಿದೆ;
ಅವನಿಗೊಂದು ಹೆಸರು ಬೇಕೇ …
ಅವನೊಬ್ಬ ಹೆಣ್ಣನ್ನು ಬಯಸುವ ಗಂಡಸಷ್ಟೇ
ಹೇಗೆಂದರೆ, ನಾನು ಪ್ರೀತಿ ಬಯಸುವ ಹೆಣ್ಣು ಮಾತ್ರವಿದ್ದಂತೆ …
ಅವನಲ್ಲಿ ನದಿಯ ತೆರದ ಆತುರದ ಹಸಿವು …
ನನ್ನಲ್ಲಿ ಅದೇ ಸಮುದ್ರದ ತೆರದ ತೀರದ ಕಾಯುವಿಕೆ …
ಕಾಯುತ್ತಿದ್ದುದು ಸಿಕ್ಕಿದ್ದರೆ ಆಕೆ ತೆಗೆದುಕೊಂಡ ಎಲ್ಲ ತೀರ್ಮಾನಕ್ಕೂ, ಹೆಜ್ಜೆಗಳಿಗೂ ಒಂದು ಅರ್ಥವಾದರೂ ಇರುತ್ತಿತ್ತು. ಅದೂ ಸಾಧ್ಯವಾಗಲಿಲ್ಲ. ಈ ಎಲ್ಲದರಿಂದ ಬದುಕಿನ ಪಾಠಗಳನ್ನು ಅಲ್ಪ ಸ್ವಲ್ಪ ಕೊನೆಕೊನೆಯಲ್ಲಿ ಕಲಿತರು ನಿಜ. ಆದರೆ, ಅದಕ್ಕೆ ಕಟ್ಟಿದ tuition fee ಮಾತ್ರ ತುಂಬ ದುಬಾರಿಯಾಯಿತು ಅಷ್ಟೇ … ಕೆಲವರ ಬದುಕೇ ಹೀಗೆ … ಬರೀ ದುರಾದೃಷ್ಟದ್ದು. ಯಾಕೋ ಈ ಪ್ರೇಮ ಸಾಮ್ರಾಜ್ಞಿಗೆ ಆಳಲು ಯಾವ ಗಂಡಿನ ಎದೆ ರಾಜ್ಯವೂ ಸಿಗಲೇ ಇಲ್ಲ …

‍ಲೇಖಕರು avadhi

17 October, 2013

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. sunil Rao

    Deep silence in me!!!
    Nijakkoo obba vyakti heege badukalu saadhya ideya!
    Gaaliyondige eduru nintu, horaaduva baduku idu.
    Preeti ashtu intense aagi beduva…padeyuva stithi nanage yaako bhaya..mujugara mattu aascharya untu maaduttide.
    Prati sala mosave aaguttiddarantoo…mugide hoytu jeevana..
    Ishtellaa maadi konege ulidaddenu andre…
    Dheegravaada mouna ashte.
    Very sensible writeup.

  2. anu pavanje

    ಯಾಕೋ ಈ ಪ್ರೇಮ ಸಾಮ್ರಾಜ್ಞಿಗೆ ಆಳಲು ಯಾವ ಗಂಡಿನ ಎದೆ ರಾಜ್ಯವೂ ಸಿಗಲೇ ಇಲ್ಲ …………….ಅಬ್ಬಾ…..ನೋವಲ್ಲಿ ಒದ್ದಾಡಿ ಹೋದೆ………..

  3. Raman

    Please give authentic info on your writing, pls follow the link http://www.poemhunter.com/kamala-das/biography/. This says, she had admitted that much of her autobiography was a fiction!, could you disentangle fiction and reality in the above writing? , thx and much appreciated.

  4. sujathalokesh

    ಅಹ್ ……. ನಮ್ಮಲ್ಲಿ ಎಷ್ಟು ಇಂತಹಾ ಕಮಲಾದಾಸ್/ ಸುರಯ್ಯಾ ಇದ್ದರೋ !!!! ಆಕೆ ಹೇಳಿಕೊಂಡರು , ಹೇಳದವರು ?
    ಪಾಪ ಎಂಬ ಅನುಕಂಪವಲ್ಲದೆ ಇನ್ನೇನು ಮಾಡೋಕೆ ಆಗುತ್ತೆ ?
    ನಿಮ್ಮ ಬರಹ ಓದುತ್ತ್ತಾ…… ಓದುತ್ತಾ…… ಕಣ್ಣಂಚಿನಲಿ ನೀರು.

  5. bharathi b v

    Raman … ee barahada details modala bhaagadallide … dhayavittu gamanisi .. its abt a book written by merrily weisbord, a Canadian writer …

  6. ಶಮ, ನಂದಿಬೆಟ್ಟ

    ” ಯಾಕೋ ಈ ಪ್ರೇಮ ಸಾಮ್ರಾಜ್ಞಿಗೆ ಆಳಲು ಯಾವ ಗಂಡಿನ ಎದೆ ರಾಜ್ಯವೂ ಸಿಗಲೇ ಇಲ್ಲ …” ಎಂಥ ಸಾಲುಗಳನ್ನು ಬರೆದೆ ಗೆಳತೀ.. ಕೊನೆಯಲ್ಲಿ ಉಳಿದದ್ದು ಒಂದು ವಿಷಾದದ ಭಾವ, ಮೌನ, ಸುದೀರ್ಘ ನಿಟ್ಟುಸಿರು ಅಷ್ಟೇ.. ತನ್ನ ತಾಳಕ್ಕೆ ಕುಣಿಯುವವರನ್ನು ಬದುಕು ಹೇಗೇಗೆಲ್ಲ ನಡೆಸಿಕೊಳ್ಳುತ್ತದೆ ಅಲ್ವಾ ?

  7. ಗಂಗಾಧರ ದಿವಟರ

    ಕಮಲಾ ದಾಸ್ ಜೀವನದ ಕುರಿತಂತೆ ಓದುತ್ತಿದ್ದೆರೆ ಮನಸು ಆದ್ರವಾಗುತ್ತದೆ…
    ಪುರುಷ ಕೇಂದ್ರೀಕೃತ ಸಮಾಜದ ಕೈಗೊಂಬೆಯಂತೆ, ಪತಿಯ ಇಚ್ಛೆಯನುಸಾರ ಅವರಿವರನ್ನು ಸಂಧಿಸಿ-ಸಂತೃಪ್ತಗೊಳಿಸುವ ಪ್ರಕ್ರಿಯೆಯೆಲ್ಲಿಯೇ ಅವರ ಅತೃಪ್ತಭಾವ ಜಾಗೃತವಾಗುತ್ತದೆ. ತನ್ನವರಿಗಾಗಿ, ತನ್ನದೆಲ್ಲವನ್ನೂ ಸೂರೆಗೊಂಡು, ಹನಿ ಪ್ರೀತಿಗಾಗಿ ಹಪಹಪಿಸಿ ಬದುಕಿನ ಘಟ್ಟಗಳಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಸಾಗುವ ಅವರ ಅನ್ವೇಷಣೆ ಏನು ? ಪಡೆದದ್ದು ಏನು ? ಎನ್ನುವ ದ್ವಂದ್ವ ಕಾಡುತ್ತದೆ….
    ಹಿಂತಿರುಗಲಾರದ ಪಯಣದಲಿ ಉಳಿದದ್ದು ನೋವಿನ ನೆನಪುಗಳು ಮಾತ್ರ…

  8. bHAVANI kUMAR

    It is very sad life story… , I was in Ernalulam at the time she got converted to Islam.It was big news at that time. But It looks like a simple lady got her self in whirl of opportunistic life ,just to get The true LOVE and commitment. By reading her story . Her Boldness in writing clearly shows she doesn’t belong to this world.

  9. samyuktha

    “ಯಾಕೋ ಈ ಪ್ರೇಮ ಸಾಮ್ರಾಜ್ಞಿಗೆ ಆಳಲು ಯಾವ ಗಂಡಿನ ಎದೆ ರಾಜ್ಯವೂ ಸಿಗಲೇ ಇಲ್ಲ”……….!! 🙁

  10. yash

    ಬದುಕಿನ ಪಾಠಗಳನ್ನು ಅಲ್ಪ ಸ್ವಲ್ಪ ಕೊನೆಕೊನೆಯಲ್ಲಿ ಕಲಿತರು ನಿಜ. ಆದರೆ, ಅದಕ್ಕೆ ಕಟ್ಟಿದ tuition fee ಮಾತ್ರ ತುಂಬ ದುಬಾರಿಯಾಯಿತು. ಯಾಕೋ ಈ ಪ್ರೇಮ ಸಾಮ್ರಾಜ್ಞಿಗೆ ಆಳಲು ಯಾವ ಗಂಡಿನ ಎದೆ ರಾಜ್ಯವೂ ಸಿಗಲೇ ಇಲ್ಲ …

  11. Uday Itagi

    ಭಾರತಿ ಮೇಡಂ,
    ಕಮಲಾದಾಸ್ ಬಗ್ಗೆ ನಿಮ್ಮ ಲೇಖನ ಅತ್ಯಂತ ಮಾರ್ಮಿಕವಾಗಿ ಮೂಡಿ ಬಂದಿದೆ. ಕಳೆದ ವಾರವೇ ಪ್ರತಿಕ್ರಿಯಿಸಬೇಕೆಂದೆ. ಆದರೆ ಸಂಪೂರ್ಣವಾಗಿ ಮುಗಿದ ಮೇಲೆ ಪ್ರತಿಕ್ರಿಯಿಸಿದರಾಯಿತೆಂದು ಈಗ ಪ್ರತಿಕ್ರಿಯಿಸುತ್ತಿದ್ದೇನೆ. ಕಮಲಾ ಅವರ ವ್ಯಕ್ತಿತ್ವವೇ ಅಂಥದು. ಯಾರ ಕೈಗೂ ಸಿಗದಂಥದು. ಬರಿ ಗೋಜಲು ಗೋಜಲು! ನಾವು ಅವರನ್ನು ಹಿಡಿಯಲು ಹೋದಷ್ಟು ಅವರು ನುಣುಚಿಕೊಳ್ಳುತ್ತಾರೆ. ಬಗೆದಷ್ಟು ಅವರು ನಿಗೂಢವಾಗುತ್ತಾ ಹೋಗುತ್ತಾರೆ. ಗೊಂದಲವಾಗಿ ಕಾಡುತ್ತಾರೆ. ನಾನು ಈ ಹಿಂದೆ ಅಂದರೆ ಅವರು ತೀರಿಕೊಂಡಾಗ ಅವರ ಬಗ್ಗೆ ಬರೆದ ಸಾಲುಗಳನ್ನೇ ನಿಮ್ಮ ಅವಗಾಹನೆಗಾಗಿ ನನ್ನ ಬ್ಲಾಗಿನಿಂದ ಹೆಕ್ಕಿಕೊಡುತ್ತಿದ್ದೇನೆ. ಉದ್ದೇಶ ಇಷ್ಟೇ; ಕಮಲಾ ತಮ್ಮ ಹೇಳಿಕೆಗಳಿಗೆ ತಾವೇ ಬದ್ಧರಾಗಿರದ ಒಬ್ಬ ವಿಕ್ಷಿಪ್ತ ಮನಸ್ಸಿನ ಹೆಂಗಸಾಗಿದ್ದರೆಂದು ಮನದಟ್ಟು ಮಾಡಲು.
    ಸದಾ ಧಡಲ್ ಧಡಲ್ ಎಂದು ಗುಡುಗಿನಂತೆ ಗುಡು ಗುಡುಸುತ್ತಾ ಆರ್ಭಟಿಸುತ್ತಾ ಸಾಗಿ ಬಂದು ಒಮ್ಮೆಲೆ ಸಿಡಿದು ಬೆಚ್ಚಿ ಬೀಳಿಸುವಂಥ ಸಾಲುಗಳನ್ನು ಬರೆಯುವ ತಾಕತ್ತಾದರು ಬೇರೆ ಯಾರಿಗಿತ್ತು-ಕಮಲಾ ದಾಸ್ನ್ನು ಬಿಟ್ಟರೆ? ಅವರ ಓರಿಗೆಯ ಲೇಖಕಿಯರೆಲ್ಲಾ ಕಟಿಬದ್ಧ ಸಂಪ್ರದಾಯಸ್ಥ ಸಮಾಜದ ಮರ್ಯಾದೆಯ ಮುಸುಕಿನಡಿಯಲ್ಲಿಯೇ ಕುಳಿತುಕೊಂಡು ಸಾಮಾನ್ಯ ಸ್ತ್ರೀ ಸಂವೇದನೆಯಂಥ ವಿಷಯಗಳ ಬಗ್ಗೆ ಬರೆಯಲೂ ಸಹ ಮೀನ-ಮೇಷ ಎಣಿಸುತ್ತಿರುವ ಸಂದರ್ಭದಲ್ಲಿ ಕಮಲಾ ದಾಸ್ ಅವರಿಗಿಂತ ಎಷ್ಟೋ ಹೆಜ್ಜೆ ಮುಂದೆ ಹೋಗಿ ಯಾರ ಮುಲಾಜಿಲ್ಲದೆ ಅತ್ಯಂತ ನಿರ್ಭಿಡೆಯಿಂದ ಸ್ತ್ರೀ ಲೈಂಗಿಕ ಸ್ವಾಂತಂತ್ರ್ಯದಂಥ ವಿಷಯಗಳ ಬಗ್ಗೆ ಮೈ ಚಳಿ ಬಿಟ್ಟು ಬರೆದರು. ಆ ಮೂಲಕ ಬೆತ್ತಲಾದರು. ಹಾಗೆ ನೋಡಿದರೆ ಕಮಲಾದಾಸ್ ಬರಹದಲ್ಲಿ ಯಾವಾಗಲೂ ಬೆತ್ತಲಾದವರೇ! ಅವರಲ್ಲಿ ಮುಚ್ಚುಮರೆ ಎನ್ನುವದೇ ಇರಲಿಲ್ಲ! ಅವರ ಬದುಕು ಸದಾ ಒಂದು ತೆರೆದಿಟ್ಟ ಪುಸ್ತಕವಾಗಿತ್ತು. ಆರಂಭದಿಂದ ಅಂತ್ಯದವರೆಗೆ ಯಾರಿಗೂ ಕೇರ್ ಮಾಡದೆ ತಮಗನಿಸಿದ್ದನ್ನು ಬರೆದರು ಮತ್ತು ಆ ಮೂಲಕ ತಮ್ಮ ಮುಂದಿನ ಪೀಳಿಗೆಯ ಲೇಖಕಿಯರಿಗೆ ಹೀಗೂ ಬರೆಯಬಹುದೆಂದು ತೋರಿಸಿಕೊಟ್ಟರು. ಇದಲ್ಲದೆ ಅವರು ಯಾವಾಗಲೂ ತಮ್ಮ ಸುತ್ತಮುತ್ತಲಿನವರಿಗಿಂತ ಒಂದೆರಡು ಹೆಜ್ಜೆ ಮುಂದೆ ಹೋಗಿ ತಮಗ ತೋಚಿದಂತೆ ಬದುಕಲು ಪ್ರಯತ್ನಿಸಿದರು ಮತ್ತು ಹಾಗೆ ಬದುಕಿದರು ಕೂಡ. ಈ ಒಂದು ವಿಷಯದಲ್ಲಿ ಮಾತ್ರವಲ್ಲ ಬಹಳಷ್ಟು ವಿಷಯಗಳಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಎಷ್ಟೋ ದಶಕಗಳಷ್ಟು ಮುಂದೆ ಇದ್ದರು. ಈ ಕಾರಣಕ್ಕಾಗಿಯೇ ಅವರು ಒಂದು ಕಡೆ ಸ್ತ್ರೀ ಸಮುದಾಯದ ಧ್ವನಿಯಾದರು, ಇನ್ನೊಂದೆಡೆ ತಮ್ಮ ಸುತ್ತಮುತ್ತಲಿನವರ ವಿರೋಧವನ್ನು ಕಟ್ಟಿಕೊಂಡು ಸಂಪ್ರದಾಯವಾದಿಗಳ ನಿದ್ದೆಯನ್ನು ಕೆಡಿಸಿದರು.
    ಕಮಲಾ ದಾಸ್ ನೇರ ನುಡಿಗೆ ನಡೆಗೆ ಹೆಸರಾಗಿದ್ದೇನೋ ಸತ್ಯ. ಆದರೆ ಒಂದೊಂದು ಸಾರಿ ಅವರು ಬದುಕಿದ ರೀತಿ ರಿವಾಜುಗಳು ಅವರ ಬರಹಕ್ಕೆ ಮತ್ತು ಹೇಳಿಕೆಗಳಿಗೆ ತುಂಬಾ ವ್ಯತಿರಿಕ್ತವಾಗಿರುತ್ತಿದ್ದವು. ತಮ್ಮ ಕಾವ್ಯದಲ್ಲಿ, ಬರಹಗಳಲ್ಲಿ ಅಷ್ಟೊಂದು assertive, bold, revolutionary ಯಾಗಿದ್ದ ಅವರು ವಯಸ್ಸಿನಲ್ಲಿ ತೀರ ದೊಡ್ಡವರಾದ ತಮ್ಮ ಗಂಡನೊಂದಿಗೆ ಸಾಕಷ್ಟು ಬಿನ್ನಾಭಿಪ್ರಾಯವಿದ್ದರೂ ಹಾಗೂ ಆ ಸಂಬಂಧ ಕಿತ್ತು ಹೋಗುವಷ್ಟರ ಮಟ್ಟಕ್ಕೆ ಬಂದರೂ ಅವರನ್ನು ಒಪ್ಪಿಕೊಂಡು ನಡೆದರೆ ವಿನಃ ಆ ವೈವಾಹಿಕ ಜೀವನದಿಂದ ಹೊರಬರಲು ಪ್ರಯತ್ನಪಡಲೇ ಇಲ್ಲ. ಅಂದರೆ ಬೇರೆಯವರಿಗೆ assertive, bold, revolutionary ಯಾಗಿ ಇರಲು ಹೇಳಿ ತಾವು ಮಾತ್ರ mild ಆಗಿ ಬದುಕಿದರು. ಕಟಿಬದ್ಧ ಸಮಾಜವನ್ನು ಟಿಕಿಸುತ್ತಲೇ ಅದರೊಟ್ಟಿಗೆ ರಾಜಿ ಮಾಡಿಕೊಂಡು ಬದುಕಿದರು ಎನ್ನುವದು ನನ್ನ ಅಭಿಪ್ರಾಯ. ತಮ್ಮ ಬರಹಗಳಲ್ಲಿ ಅಷ್ಟೊಂದು assertive, bold ಹಾಗು independent ಆಗಿದ್ದ ಅವರು ಕೊನೆ ಕೊನೆಯಲ್ಲಿ ತಮ್ಮ ಗಂಡನ ಮೇಲೆ ತೀರ ಅವಲಂಬಿತರಾದರು. ಅವರೇ ಹೇಳುತ್ತಾರೆ “ಗಂಡ ಸತ್ತ ಮೇಲೆ ತೀರ ಒಂಟಿತನ ಅನುಭವಿಸಿದ್ದೇನೆ ಹಾಗೂ ಗಂಡ ಸತ್ತ ಹೆಣ್ಣನ್ನು ಇಂದಿಗೂ ಈ ಸಮಾಜ ನಡೆಸಿಕೊಳ್ಳುವ ರೀತಿಗೆ ಬೇಸರಪಟ್ಟಿದ್ದೇನೆ.” ಕಮಲಾರಂಥ ಸ್ತ್ರೀವಾದಿ ಲೇಖಕಿಯ ಬಾಯಿಂದ ಬರುವಂತಹ ಮಾತುಗಳೇ ಇವು? ಅಂದರೆ ಬರಹದಲ್ಲಿ ಮಾತ್ರ ಪ್ರತಿಭಟಿಸುತ್ತಾ, ರೊಚ್ಚಿಗೇಳುತ್ತಾ ನಿಜ ಜೀವನದಲ್ಲಿ ರಾಜಿಯಾಗುತ್ತ ಇತರೆ ಟಿಪಿಕಲ್ ಭಾರತೀಯ ಹೆಣ್ಣುಮಕ್ಕಳಂತೆಯೇ ಬದುಕಿದರು. ಆ ಕಾರಣಕ್ಕಾಗಿಯೇ ನಾನು ಎಂ.ಎ ಇಂಗ್ಲೀಷ್ ಮಾಡುವಾಗ ಅವರ ಕವನಗಳನ್ನು ಓದಿ ಅವರನ್ನು ಆರಾಧಿಸತೊಡಗಿದವನು ಬರುಬರುತ್ತಾ ಅವರ ಬಗ್ಗೆ ಗೌರವ ಕಳೆದುಕೊಂಡೆನು. ಏಕೆಂದರೆ ಕಮಲಾ ಬದುಕಿದಂತೆ ಬರೆದರೆ ಹೊರತು ಬರೆದಂತೆ ಬಹುಶಃ ಬದುಕಲೇ ಇಲ್ಲ.
    ಈ ಸಂದರ್ಭದಲ್ಲಿ ನಾನು ನಿಮಗೊಂದು ಘಟನೆಯನ್ನು ಹೇಳಲೇಬೇಕು. ಈಗ್ಗೆ ಮೂರು ವರ್ಷಗಳ ಹಿಂದೆ ನಾನು ಲಿಬಿಯಾದಲ್ಲಿ “International Literature” ಪತ್ರಿಕೆಯನ್ನು 6ನೇ ಸೆಮೆಸ್ಟರ್ ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿ ಬಂತು. ಅದಕ್ಕೂ ಮುನ್ನ ನಾವು syllabus ತಯಾರಿಸಬೇಕಿತ್ತು. ಆಗ ಇಂಡಿಯಾದಿಂದ ನಾನು ಕಮಲಾದಾಸ್ ರನ್ನು ಆರಿಸಿಕೊಳ್ಳುತ್ತೇನೆ ಎಂದೆ. ತಕ್ಷಣ ನಮ್ಮ HOD “No, no. I don’t want my students to study about her.” ಎಂದು ಹೇಳಿದ. ನಾನು “ಏಕೆ? ಆಕೆಯ ಬರಹಗಳು ನಿಮ್ಮ ಹೆಣ್ಣುಮಕ್ಕಳ ಮೇಲೆ ಪ್ರಭಾವ ಬೀರಿ ಅವರು ಸ್ತ್ರಿ ವಾದಿಗಳು ಆಗಿ ನಿಮ್ಮ ನಿದ್ದೆ ಕೆಡಿಸುತ್ತಾರೆಂಬ ಭಯವೇ?” ಎಂದು ಕೇಳಿದೆ.
    “No, not like that. I have read many of her writings, when I was in England. No doubt she is a good writer. I like her style and way of writing. But she seems to be crazy and she really doesn’t mean what she says. So go for some other writer who is sensible.”

  12. bharathi b v

    Itagiyavare nimgondu thnx. Kamala vishayadalli neevu heliddu aksharashaha sathya … tumba gondalagaliddavu aakege …lekhana tumba deerghavagutte anta ishte heliddene. Aakeya vairudhyagala bagge baredre Ade ondu lekhanavaadeethu …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading