ಬದುಕು ನಿರಂತರ ಹುಡುಕಾಟ ಸಂತೋಷದ್ದು, ನೆಮ್ಮದಿಯದ್ದು, ವ್ಯಕ್ತಿಗಳದ್ದು, ನಮ್ಮನ್ನು ಮೀರಿದ ಶಕ್ತಿಗಳದ್ದು, ಸಂಬಂಧಗಳದ್ದು ! ಹುಡುಕಾಟದಲ್ಲಿ ತೊಡಗಿದವರಿಗೆ ಹುಡುಕಿದ್ದು ಸಿಗಬಹುದು, ಸಿಗದೆಯೇ ಹೋಗಲೂ ಬಹುದು. ಹುಡುಕಿದ್ದು ಸಿಗದಿದ್ದರೆ ನೋವು ಅಂತಲೂ ಅಲ್ಲ, ಹುಡುಕಿದ್ದು ಸಿಕ್ಕ ಮಾತ್ರಕ್ಕೆ ಖುಷಿ ಅಂತಲೂ ಅಲ್ಲ. ಸಿಕ್ಕ ನಂತರ ಯಾಕೆ ಸಿಕ್ಕಿತೋ ಅಂತ ಪರಿತಪಿಸಿದ್ದು ಕೂಡಾ ಇದೆ. ನಾವು ಹುಡುಕ ಹೊರಟದ್ದು ಸಿಕ್ಕ ನಂತರ ಅದು ನೋವು ಕೊಡಬಲ್ಲದು ಅಂದರೆ ಅದು ಯೋಗ್ಯವಾಗಿರಲಿಲ್ಲ ಅಂತಲ್ಲವೇ ಅರ್ಥ? ಹುಡುಕಿದ್ದರಲ್ಲಿ ಹಲವು ಸಿಕ್ಕವು, ಹಲವು ನುಣುಚಿಕೊಂಡವು, ಹಲವು ನೋಯಿಸಿದವು, ಹಲವು ಸಿಕ್ಕ ನಂತರ ‘ಯಾಕಾದರೂ ಸಿಕ್ಕವೋ’ ಅಂತ ಮನಸ್ಸು ಮುದುಡುವ ಹಾಗೂ ಮಾಡಿದವು. ಹುಡುಕಾಟಕ್ಕೆ ಬಿದ್ದ ನಾನು ನನ್ನ ಮನೆಯವರ ಕಣ್ಣಲ್ಲಿ ಅದೆಷ್ಟು ಸಲ ಅಪಹಾಸ್ಯಕ್ಕೆ ಈಡಾದೆ! ಅದೆಷ್ಟು ಸಲ ಹಳ್ಳಕ್ಕೆ ಬಿದ್ದ ತೋಳವಾಗಿ ಕಲ್ಲೇಟು ತಿಂದು ನರಳಿದೆ!! ನನ್ನ ಸುತ್ತಲಿನವರೆಲ್ಲ ಉಪದೇಶ ಮಾಡುತ್ತ ಬದುಕಿನ ಪಾಠ ಹೇಳಲು ಶುರು ಮಾಡಿದಾಗ ‘ನನ್ನ ಬದುಕಿನ ಪಾಠಗಳನ್ನು ನಾನೇ ಕಲಿಯುತ್ತೇನೆ. ನನಗೆ ಟೆಕ್ಸ್ಟ್ ಬುಕ್ ಅಂದರೆ ತುಂಬ ಹಿತ’ ಅಂತ ಕೂಗಿ ಹೇಳಿದರೂ ನನ್ನವರೆಲ್ಲ ತಮ್ಮ ಬದುಕಿನ ಬುಕ್‌ನಿಂದ ಕಾಪಿ ಹೊಡೆದು ಪಾಸ್ ಮಾಡು ಅಂತಾರಲ್ಲ, ಇದು ನ್ಯಾಯವಾ ನೀವೇ ಹೇಳಿ? ‘ಸಿಲಬಸ್ ಈಗ ಬದಲಾಗಿದೆ ಮಾರಾಯ್ರೇ .. ಅದೇ ಚಾಪ್ಟರ್ ಆದರೂ ಕೂಡಾ ಸಣ್ಣ, ಪುಟ್ಟ ಬದಲಾವಣೆ ಸೇರಿಸಿ ಸ್ವಲ್ಪ ಹಿಗ್ಗಿಸಿದ್ದಾರೆ. ನಿಮ್ಮದು out dated ಪಾಠ’ ಅಂತ ಬಾಯಿಬಿಟ್ಟು ಹೇಳಿದರೂ ಕೇಳೋದೇ ಇಲ್ಲ ನೋಡಿ ನನ್ನವರೆಲ್ಲ! ಇದೊಂದು ಹೊಸ ಚಾಪ್ಟರ್ ಬದುಕಿನ ಪಠ್ಯಪುಸ್ತಕಕ್ಕೆ ಸೇರಿದ ಕಥೆ ..
ಆಕೆ ತನ್ನ ಕಾಲದಲ್ಲಿ ಅದ್ಭುತ ಕತೆಗಾರ್ತಿ. ಎಲ್ಲರಿಗಿಂತ ಭಿನ್ನವಾಗಿ ಬರೆಯುತ್ತಿದ್ದರು. ಆಕೆಯ ಕಥೆಗಳಲ್ಲಿನ ಎಲ್ಲ ಪಾತ್ರಗಳೂ ತುಂಬ ಓದಿಕೊಂಡವರು, ಸುಸಂಸ್ಕೃತರು, ಸಾಹಿತ್ಯಾಸಕ್ತರು. ಹೆಣ್ಣು ಪಾತ್ರಗಳು ಕೂಡಾ ರೂಪದ ಕಾರಣಕ್ಕೆ ಅಲ್ಲದೇ ಅವರ ಬುದ್ಧಿಮತ್ತೆಯಿಂದ ಮಾತ್ರ ಒಬ್ಬ ಗಂಡಸಿಗೆ ಮೆಚ್ಚುಗೆಯಾಗುವಂತವರು, ಅಪಾರವಾಗಿ ಓದಿಕೊಂಡವರು, ಬದುಕಿನಲ್ಲಿ ಸಾವಿರ ಗುರಿಗಳನ್ನಿಟ್ಟುಕೊಂಡವರು. ನಾವೆಲ್ಲ ಬದುಕಲ್ಲಿ ಗುರಿ ಅಂದರೆ ಏನು ಅಂತ ತಲೆ ಕೆಡಿಸಿಕೊಳ್ಳಲು ಹೋಗದ ಕಾಲದಲ್ಲೇ ಆಕೆಯ ಪಾತ್ರಗಳು ಈ ರೀತಿ ಇರುತ್ತಿದ್ದವೆಂದರೆ ಆಕೆ ಕಾಲಮಾನದಲ್ಲಿ ನಮಗಿಂತ ಅದೆಷ್ಟು ಹೆಚ್ಚು ಬುದ್ಧಿವಂತೆಯಿರಬೇಕು! ಅವರ ಕಾದಂಬರಿಯ ನಾಯಕಿಯರು ಸೀರೆ, ಒಡವೆ ಬಗ್ಗೆ ಮಾತಾಡುತ್ತಿರಲಿಲ್ಲ, ಖೀರು-ಸಾರು-ಬೋಂಡ-ಸಜ್ಜಿಗೆ ಮಾಡುತ್ತಿರಲಿಲ್ಲ! ಬೇರೆಯದೇ ಲೋಕದವರ ಹಾಗಿರುತ್ತಿದ್ದ ನಾಯಕ, ನಾಯಕಿಯರ ಜೊತೆ ನಾನು ಮಾನಸಿಕವಾಗಿ ರಿಲೇಟ್ ಆಗಿಬಿಡುತ್ತಿದ್ದೆ. ಆಕೆಯ ಕಾದಂಬರಿಯ ಎಷ್ಟೊಂದು ಸಾಲುಗಳು ಇಂದಿಗೂ ನನ್ನ ಕೋಟ್ ಬುಕ್‌ನಲ್ಲಿವೆ. ಒಂದಕ್ಕಿಂತ ಒಂದು ಅದ್ಭುತ ಸಾಲು… ಕಾವ್ಯದ ಹಾಗೆ ಇರುತ್ತಿದ್ದವು! ಅವರ ಕಥೆ ಪ್ರಕಟವಾದರೆ ಅದನ್ನೆಲ್ಲ ಹರಿದು ಫೈಲ್ ಮಾಡಿಡುತ್ತಿದ್ದೆ. ಅದ್ಭುತ ಚಿತ್ರಗಳೂ ಪ್ರಕಟವಾಗುತ್ತಿದ್ದ ಆ ಕಾದಂಬರಿಯ ನಾಯಕ-ನಾಯಕಿಯನ್ನು ಹೋಲುವ ಯಾವುದೋ ಮುಖ ರಸ್ತೆಯಲ್ಲಿ ಎದುರಾದರೆ ಅವರನ್ನೇ ನೋಡುತ್ತಾ ಹಿಂಬಾಲಿಸಿಯೂ ಬಿಡುತ್ತಿದ್ದೆ. ಹಾಗೊಂದು ಸಲ ಎದುರಾದ ಒಬ್ಬ ವ್ಯಕ್ತಿ ಆಕೆಯ ಕಾದಂಬರಿಯ ನಾಯಕನನ್ನು ಹೋಲುತ್ತಾನೆ ಅನ್ನೊ ಒಂದೇ ಕಾರಣಕ್ಕಾಗಿ ಅವನನ್ನು ಹಿಂಬಾಲಿಸಿ ಅವನ ಆಫೀಸಿನ ಅಡ್ರೆಸ್ ಕಂಡು ಹಿಡಿದು ಗೆಳೆಯನೊಬ್ಬನ ಸಹಾಯದಿಂದ ಅವನ ಹೆಸರು ಕೂಡ ತಿಳಿದು ಕೊಂಡಿದ್ದೆ. ತಿಳಿದು ಏನು ಮಾಡಿದೆ ಅನ್ನೋದು ನಿಮ್ಮ ಪ್ರಶ್ನೆಯಾದರೆ ‘ನಾನು ಬದುಕನ್ನು ನಿಮ್ಮ ಹಾಗೆ ಲಾಭ- ನಷ್ಟದ ದೃಷ್ಟಿಯಿಂದ ನೋಡೋದಿಲ್ಲ’ ಅಂತ ಮಾತ್ರ ಹೇಳಬಲ್ಲೆ!

ಆ ಕಥೆಗಾರ್ತಿಯನ್ನು ಬದುಕಿನಲ್ಲಿ ಒಂದೇ ಒಂದು ಸಲ ನೋಡಿ ಬಿಡಬೇಕು ಅನ್ನುವ ಹುಚ್ಚು. ಎಲ್ಲಿ ಸಿಗಬೇಕು ಹೇಳಿ? ಆಗೆಲ್ಲ ಈಗಿನಂತೆ ಇಂಟರ್ನೆಟ್ ಇರಲಿಲ್ಲವಾದ್ದರಿಂದ ಹುಡುಕುವ ಸಾಧ್ಯತೆ ಕೂಡಾ ಇರಲಿಲ್ಲ. ಆಕೆ ಬರೆಯುತ್ತಿದ್ದ ಪತ್ರಿಕೆಗಳಿಗೆ ಫೋನ್ ಮಾಡಿ ಕೇಳುವಷ್ಟು ಛಾತಿ ಇರಲಿಲ್ಲ. ಹಾಗಾಗಿ ಆಕೆ ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನುವ ಕುತೂಹಲ ತೀರಲೇ ಇಲ್ಲ. ವರ್ಷಗಳು ಹಾರಿ ಹೋದವು .. ಮದುವೆಯಾಯ್ತು, ಮಗ ಹುಟ್ಟಿದ, ಸಂಸಾರವಂತ ಮುಳುಗಿದ್ದಾಯ್ತು, ಎದ್ದಿದ್ದಾಯ್ತು, ನನ್ನ ಪರೀಕ್ಷೆಗೂ ಓದದಷ್ಟು ಮಗನ ಜೊತೆ ಓದಿದ್ದಾಯ್ತು. ಅವನ ಸೆಕೆಂಡ್ ಪಿಯುಸಿ ಮುಗಿಯಿತು … ಇಲ್ಲಿಗೆ ಬದುಕಿನ ಒಂದು ಘಟ್ಟ ಮುಗಿದ ಹಾಗೆ ಆಗಿಹೋಯಿತು. ಅಲ್ಲಿಯವರೆಗೆ ಸದಾ ಕಾಲ ಬದುಕು ಚಕ್ರದ ಮೇಲೆ ಉರುಳಿದ ಹಾಗೆ ಸೂಪರ್ ವೇಗದಲ್ಲಿ ಓಡುತ್ತಿದ್ದುದು ಈಗ ಗಕ್ಕಂತ ನಿಂತೇ ಹೋಯಿತು! ಜಗದ ಸಮಯವೆಲ್ಲ ನನ್ನ ಕೈಯ್ಯಲ್ಲೇ ಇದೆಯೇನೋ ಅನ್ನುವಷ್ಟು ಸುಖಿಯಾದೆ. ಆಗ ನೆನಪಾದರು ಆ ಕಥೆಗಾರ್ತಿ! ನನ್ನ ನಿಜದ ಹುಡುಕಾಟ ಶುರುವಾಗಿದ್ದೇ ಆಗ. ಈಗ ಇಂಟರ್ನೆಟ್ ಇತ್ತಲ್ಲ .. ಹಾಗಾಗಿ ಆಕೆಯ ಹೆಸರಿನ ಸರ್ಚ್ ಹಾಕಿದ ಕೂಡಲೇ ಯಾವುದೋ ಸಮ್ಮೇಳನದಲ್ಲಿ ಆಕೆ ಭಾಗವಹಿಸಿದ್ದ ಲಿಂಕ್ ಸಿಕ್ಕಿತು. ಗೂಗಲಣ್ಣನಿಗೆ ಸಾಷ್ಟಾಂಗ ಅಡ್ಡ ಬಿದ್ದೆ! ಬದುಕು ಈಗ ಅದೆಷ್ಟು ಸರಳವಾಗಿತ್ತು!! ಅದರಲ್ಲಿ ಆಕೆಯ ಬಗ್ಗೆ ಮತ್ತೇನೂ ವಿವರ ಸಿಕ್ಕಲಿಲ್ಲ. ಸರಿ, ಆಕೆ ಬರೆಯುತ್ತಿದ್ದ ಪತ್ರಿಕೆಗಳಿಗೆಲ್ಲ ಫೋನ್ ಮಾಡೊದಿಕ್ಕೆ ಶುರು ಮಾಡಿದೆ. ಆಗಿಗೂ, ಈಗಿಗೂ ಮಧ್ಯೆ ಕಡಿಮೆ ನೀರು ಹರಿದಿತ್ತೇ ಕಾವೇರಿಯಲ್ಲಿ? ಸುದೀರ್ಘ 30 ವರ್ಷಗಳು ಕಳೆದು ಹೋಗಿದ್ದವು. ಆಕೆ ಬರೆಯದೆಯೇ 25 ವರ್ಷಗಳಾಗಿ ಹೋಗಿದ್ದವು. ಯಾವ ಪತ್ರಿಕೆಗೆ ಫೋನ್ ಮಾಡಿದರೂ ಈಗ ಬಂದಿರುವ ಹೊಸಬರಿಗೆ ಆಕೆಯ ಹೆಸರು ಕೂಡಾ ತಿಳಿದಿರಲಿಲ್ಲ. ಅವರಿಗೆ ಗೊತ್ತಿಲ್ಲ, ಹಾಗಂತ ಹೇಳಿದರೆ ನಾನು ಬಿಡುತ್ತಿಲ್ಲ. ಆಕೆಯ ಕಾದಂಬರಿ ಕಥೆಗಳ ಹೆಸರು ಹೇಳುವುದು, ಆ ಪಾತ್ರಗಳ ಹೆಸರು ಹೇಳುವುದು … ನಾನು ನಿಜಕ್ಕೂ ಅವರಿಗೆಲ್ಲ ಒಂದು ತಲೆಬೇನೆಯಾಗಿ ಹೋದೆ ಅಂತ ಕಾಣುತ್ತದೆ. ಕೊನೆಗೊಂದು ದಿನ ಒಬ್ಬ ಹುಡುಗ ‘ಅವರೊಬ್ಬರು ಹಳಬರು ನಮ್ಮ ಆಫೀಸಿನಲ್ಲಿ ಇದ್ದಾರೆ .. ಗೊತ್ತಿದ್ದರೆ ಅವರಿಗೆ ಗೊತ್ತಿರೋ ಸಾಧ್ಯತೆಯಿದೆ ಅಷ್ಟೇ’ ಅಂತ ಹೇಳಿ ಅವರಿಗೆ ಫೋನ್ ಕೊಟ್ಟ. ಅಷ್ಟು ದಿನ ಅವನಿಗೆ ಈ ವಿಷಯ ಯಾಕೆ ತಲೆಗೆ ಬರಲಿಲ್ಲವೋ ನನಗೆ ಇಂದಿಗೂ ಆಶ್ಚರ್ಯ. ಆ ಹಳಬರಿಗೆ ನಾನು ವಿಷಯ ಹೇಳಿದ ಕೂಡಲೇ ‘ಗೊತ್ತು ಗೊತ್ತು ಅವರು ’ ಅಂತ ಹೇಳಿದಾಗ ನಾನು ಸಂತೋಷಕ್ಕೆ ಪ್ರಾಣ ಬಿಡುವುದೊಂದೇ ಬಾಕಿ. ಆದರೆ ನನ್ನ ಸಂತೋಷದ ಬೆಂಕಿಗೆ ನೀರು ಎರಚಿದ ಹಾಗೆ ಆತ ಅವರೀಗ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ ಅಂದ! ನನಗೆ ಮತ್ತೆ ನಿರಾಸೆ. ಆ ನಂತರ ಆತ ಒಬ್ಬಾಕೆಯ ಹೆಸರು ಹೇಳಿ ಅವರಿಗೆ ಆಕೆ ಎಲ್ಲಿದ್ದಾರೆ ಅಂತ ಗೊತ್ತಿದೆ ಅಂತ ಹೇಳಿದರು. ಅವರಿಗೆ ಫೋನ್ ಮಾಡಿದರೆ ಆಕೆ ತನಗೆ ಗೊತ್ತಿಲ್ಲ ಆದರೆ, ವಿಮರ್ಶಕರೊಬ್ಬರಿಗೆ ಆಕೆಯ ಪರಿಚಯವಿದೆ ಅಂತ ಹೇಳಿ ಫೋನ್ ನಂಬರ್ ಕೊಟ್ಟರು. ಆತನಿಗೆ ಫೋನ್ ಮಾಡಿ ಅಂತೂ ಇಂತೂ ಕೊನೆಗೊಮ್ಮೆ ಲೇಖಕಿಯ ಫೋನ್ ನಂಬರ್ ಸಂಪಾದಿಸುವಲ್ಲಿ ನಾನು ಸಫಲಳಾಗಿದ್ದೆ!

ಆ ರಾತ್ರಿಯಲ್ಲಿ ನಡುಗುವ ಕೈನಲ್ಲಿ ಕೂಡಲೇ ಅವರಿಗೆ ಕಾಲ್ ಮಾಡಿದೆ. ಫೋನಿನಲ್ಲಿ ಗೆಜ್ಜೆ ಬಿದ್ದ ಹಾಗೆ ಸದ್ದಾಯಿತೇ?! ಇಲ್ಲ .. ಇಲ್ಲ .. ಅದು ನನ್ನ ಲೇಖಕಿಯ ಧ್ವನಿಯಾಗಿತ್ತು! ಎಷ್ಟು ಚೆಂದವಿತ್ತು ಆಕೆಯ ಧ್ವನಿ! ನಾನು ನನ್ನ ಪರಿಚಯ ಮಾಡಿಕೊಂಡೆ .. ಅವರು ಕೂಡಾ ಖುಷಿಯಲ್ಲಿ ಮಾತಾಡಿದರು. ನಾನು ಮತ್ತೆ ಸಿಗುತ್ತಾರೋ, ಇಲ್ಲವೋ ಅನ್ನುವ ಹಾಗೆ ನನ್ನ ಅಂದಿನವರೆಗಿನ ಎಲ್ಲ ಹುಡುಕಾಟವನ್ನ ಮಗುವಿನ ಉತ್ಸಾಹದಲ್ಲಿ ಹೇಳಿದೆ. ಆಕೆಯ ಕಥಾಪಾತ್ರಗಳ ಪ್ರತೀ ಮಾತೂ 30 ವರ್ಷಗಳ ನಂತರವೂ ನನಗೆ ಎಲ್ಲ ನೆನಪಿತ್ತು. ಎಲ್ಲ ಬಡಬಡಿಸಿದಾಗ ಆಕೆ ನನ್ನ ಮಾತು ಕೇಳಿ ನಕ್ಕರು ಅಷ್ಟೇ. ಮೊದಲ ದಿನವೇ ಸುದೀರ್ಘ ಒಂದು ಘಂಟೆ ಕಾಲ ಹರಟಿದೆವು! ಆ ನಂತರ ಅವರೊಡನೆ ನನ್ನ ಒಡನಾಟ ಮುಂದುವರೆಯಿತು. ಆದರೆ ನನಗೆ ಸ್ವಲ್ಪ ನಿರಾಸೆಯಾದದ್ದೆಂದರೆ ಆಕೆ ನಾನು ಮೆಚ್ಚುತ್ತಿದ್ದಂಥ ಕಥೆ ಬರೆಯುವುದು ಬಿಟ್ಟು ಯಾವುದೋ ಕಾಲವಾಗಿತ್ತು. ಆಕೆ ಆಧ್ಯಾತ್ಮದ ಕಡೆ ಹೊರಳಿದ್ದರು. ಮೊದ ಮೊದಲಲ್ಲಿ ಕಥೆಗಳ ಬಗ್ಗೆ ಮಾತ್ರ ಮಾತಾಡುತ್ತಿದ್ದ ನಾವು ಬರಬರುತ್ತಾ ವೈಯುಕ್ತಿಕ ವಿಷಯಗಳನ್ನೂ ಮಾತಾಡಿಕೊಳ್ಳಲು ಪ್ರಾರಂಭಿಸಿದೆವು …ಅವರು ಅದ್ಭುತ ಪ್ರೇಮಕಥೆಗಳ ಲೇಖಕಿಯಾಗಿದ್ದರಲ್ಲ ಹಾಗಾಗಿ ನಿಜ ಜೀವನದಲ್ಲೂ ಅವರು ಅದ್ಭುತ ಪ್ರೇಮಿಯೇ ಆಗಿದ್ದಿರಬೇಕೆಂಬುದು ನನ್ನ ಬಲವಾದ ನಂಬಿಕೆಯಾಗಿತ್ತು. ನಾನು ತಪ್ಪಿದ್ದು ಅಲ್ಲೇ! ಬದುಕನ್ನೂ, ಬರಹವನ್ನೂ ಬೆರೆಸಿ ನಾನು ಮೂರ್ಖಳ ಥರ ಯೋಚಿಸುತ್ತಿದ್ದೆ. ಆಕೆ ಮದುವೆ ಮಾಡಿಕೊಂಡಿರಲೇ ಇಲ್ಲ. ನನಗೆ ಮನಸಿನಲ್ಲಿ ಒಂದು ವಿಷಾದ ಆವರಿಸಿತು. ಆ ಘಳಿಗೆಯಲ್ಲೆ ನಾನು ‘ಛೇ! ಯಾಕೆ ಮದುವೆ ಆಗಲಿಲ್ಲ ನೀವು? ಎಂಥ ಅನ್ಯಾಯ’ ಅಂತ ಉದ್ಗರಿಸಿಯೂ ಬಿಟ್ಟೆ. ಆ ನಿಮಿಷದಲ್ಲಿ ಅವರು ಏನೂ ಹೇಳಲಿಲ್ಲವಾದರೂ ಮುಂದಿನ ದಿನಗಳಲ್ಲಿ ಆಕೆ ಎಲ್ಲ ಬಿಡಿಸಿಡುತ್ತಾ ಹೋದರು …ಅವರು ಸುಂದರಿಯೂ ಆಗಿದ್ದು, ಅತೀವ ಬುದ್ಧಿವಂತೆಯೂ ಆಗಿದ್ದರಿಂದ ಆಕೆಗೆ ತನಗೆ ಸರಿ ಹೊಂದುವವ ಸಿಗುತ್ತಾನೆಂಬ ನಂಬಿಕೆಯೇ ಇರಲಿಲ್ಲವಂತೆ. ಹಾಗಾಗಿ ಬಂದ ಗಂಡುಗಳನ್ನೆಲ್ಲ ನಿರಾಕರಿಸುತ್ತ, ನಿರಾಕರಿಸುತ್ತ ಹೋಗುವ ಭರದಲ್ಲಿ ತನ್ನ ವಯಸ್ಸು ಮುಂದೆ ಓಡುತ್ತಿದೆ ಅನ್ನುವುದನ್ನೇ ಮರೆತುಬಿಟ್ಟಿದ್ದರು. ಅವರಾಗೇ ಎಷ್ಟೊಂದು ಜನ ಪ್ರೇಮಿಸಿದ್ದರು, ಪ್ರೊಪೋಸ್ ಮಾಡಿ ನಿರಾಶರಾಗಿದ್ದರು ಅಂತೆಲ್ಲ ಹೇಳುತ್ತ ಹೋಗುವಾಗ ಆಕೆಯ ಧ್ವನಿಯಲ್ಲಿ ಚೂರೂ ವಿಷಾದವೇ ಇರಲಿಲ್ಲ. ಅದು ನನಗೆ ಯಾಕೋ ಸಂಕಟ ತಂದಿತು. ಆ ಧ್ವನಿ ಇಂದಿಗೂ ನನ್ನ ಕಾಡುತ್ತದೆ. ಅಂಥ ಪ್ರೇಮವನ್ನೆಲ್ಲ ಕಳೆದುಕೊಂಡ ಬಗ್ಗೆ ಚೂರೂ ನೋವಿರಲಿಲ್ಲ ಅಂಥ ಅದ್ಭುತ ಪ್ರೇಮ ಕಥೆಗಳನ್ನು ಬರೆಯುತ್ತಿದ್ದ ಆಕೆಗೆ ಅನ್ನುವುದು ನನಗೆ ಎಷ್ಟೊಂದು ಹರ್ಟ್ ಮಾಡಿತ್ತು.
ಅಲ್ಲಿಂದ ಮುಂದೆ ಸಂಜೆಯಾಗುತ್ತಿದ್ದ ಹಾಗೆ ದಿನವೂ ಆಕೆಗೆ ಫೋನ್ ಮಾಡಲಾ ಅನ್ನುವ ತುಡಿತ. ದಿನವೂ ಮಾಡಿದರೆ ಅವರು ಬೇಸರ ಪಟ್ಟಾರು ಅನ್ನುವ ಜಿಜ್ಞಾಸೆ .. ಒಟ್ಟಿನಲ್ಲಿ ಎಷ್ಟೇ ತಡೆದರೂ ನಾನು ವಾರಕ್ಕೆ ಎರಡು ದಿನವಾದರೂ ಆಕೆಗೆ ಫೋನ್ ಮಾಡಿ ಹರಟೇ ಇರುತ್ತಿದ್ದೆ. ಒಬ್ಬಂಟಿಯಾಗಿಯೇ ಸುಖ ಕಾಣುತ್ತಿದ್ದ ಆಕೆಗೂ ನಾನು ಇಷ್ಟವಾದೆ ಅಂತ ಕಾಣುತ್ತದೆ. ಫೋನಿನಲ್ಲಿ ಘಂಟೆಗಟ್ಟಳೆ ಹರಟಿದೆವು. ಮೊದಮೊದಲಿನ ಆ ರಮ್ಯತೆ ಕಡಿಮೆಯಾದ ಕ್ಷಣಗಳಲ್ಲಿ ನಾನು ಗಮನಿಸಿದ್ದೇನೆಂದರೆ ಆಕೆಯದ್ದು ವಿಪರೀತ narcissistic ಸ್ವಭಾವ. ಸದಾ ಕಾಲ ತನ್ನದೇ ವಿಷಯ. ಎಂದೋ ಒಂದು ದಿನ ನನ್ನ ಭಾಗ್ಯ ಚೆಂದಕ್ಕಿದ್ದರೆ ನನ್ನ ಬಗ್ಗೆ ಒಂದು ಪ್ರಶ್ನೆ ಕೇಳುತ್ತಿದ್ದುದು ಉಂಟು … ಅದನ್ನು ಆ ಕ್ಷಣದಲ್ಲೇ ಮರೆತೂ ಬಿಟ್ಟಿರುತ್ತಿದ್ದರು. ಮುಂದಿನ ಬಾರಿಯೂ ಮತ್ತದೇ ಪ್ರಶ್ನೆ! ನಾನು ಮಾತ್ರ ಅವರ ಮಾತುಗಳನ್ನೆಲ್ಲ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟು ಕೊಳ್ಳುತ್ತಿದ್ದೆ. ಒಂದೊಂದು ಸಲ ಮಧ್ಯರಾತ್ರಿಯಲ್ಲಿ ಫೋನ್ ಮಾಡಿ ಹಾಡು ಹೇಳಲಾ ಅನ್ನುತ್ತಿದ್ದರು. ನಾನು ಅವರು ಕೇಳಿದ್ದೇ ಪರಮ ಭಾಗ್ಯ ಅನ್ನುವ ಹಾಗೆ ಹೇಳಿ ಅನ್ನುತ್ತಿದ್ದೆ. ಅಂತ ಒಳ್ಳೆಯ ಕಂಠವೇನೂ ಇರದ ಆಕೆ ಸುಮಾರಾಗಿ ಹಾಡುತ್ತಿದ್ದರೂ ನಾನು ಲತಾ ಮಂಗೇಶ್ಕರ್ ಹಾಡುತ್ತಿದ್ದಾರೇನೋ ಅನ್ನುವ ಹಾಗೆ ತನ್ಮಯಳಾಗುತ್ತಿದ್ದೆ. ಮನೆಯವರೆಲ್ಲ ನನ್ನ ಅತಿರೇಕ ಕಂಡು ಥೂ ಇದೇನು ಶಂಕರ್-ಗುರು ಸಿನೆಮಾ ಥರ ಫೋನಲ್ಲೆಲ್ಲ ಹಾಡು ಹೇಳ್ಕೊಂಡು ಅಂತ ಬಯ್ತಿದರು!

ನನಗೆ ಆಕೆಯನ್ನು ನೋಡಬೇಕು ಅನ್ನುವ ಆಸೆ ಶುರುವಾಗಿ ನಿಮ್ಮನ್ನು ನೋಡಲು ಬರಲಾ ಅಂತ ಕೇಳಿಬಿಟ್ಟೆ ಒಂದು ದಿನ. ಆಕೆ ಇಲ್ಲ ಇಲ್ಲ ನಾನು ತುಂಬ ಬಿಜ಼ಿ ಅಂದರು. ಊರಿಗೆ ಹೋಗ್ತಿದ್ದೇನೆ ಅಂದರು, ಕೆಲಸವಿದೆ ಅಂದರು … ಒಟ್ಟಿನಲ್ಲಿ ಕೇಳಿದಾಗೆಲ್ಲ ಒಂದು ನೆಪ. ನನಗೆ ಯಾಕೋ ಮನಸಲ್ಲಿ ಒಂಥರಾ ತಳಮಳ ಶುರುವಾಯ್ತು. ಯಾಕೆ ಆಕೆ ಹಾಗೆ ಮಾಡ್ತಿದ್ದಾರೆ ಅಂತ. ಅಷ್ಟರಲ್ಲಿ ಒಂದು ದಿನ ಆಕೆಯೇ ಫೋನ್ ಮಾಡಿ ನಿಮ್ಮೂರಿಗೆ ಬರ್ತಿದ್ದೀನಿ. ನಾನು ಯಾವ ಯಾವ ಕಡೆಗೋ ಹೋಗಬೇಕು. ನೀನು ಜೊತೆಗೆ ಬರ್ತೀಯಾ? ಅಂದರು. ಸರಿ ಅಂದೆ. ವಿಧಾನ ಸೌಧಕ್ಕೆ ಹೋಗಲು ಪಾಸ್ ಬೇಕು ಅಂದರು. ಅದನ್ನೂ ತೆಗೆಸಿಟ್ಟೆ. ಆಮೇಲೆ ಆಕೆಯ ಸುದ್ದಿಯೇ ಇಲ್ಲ. ಅವರು ಮೊಬೈಲ್ ಫೋನ್ ಕೂಡಾ ಇಟ್ಟಿರಲಿಲ್ಲ. ಹಾಗಾಗಿ ಕಾದೇ ಕಾದೆ. ಸುಳಿವೇ ಇಲ್ಲ. ಮತ್ತೆ ಮೂರು ದಿನ ಕಳೆದ ಮೇಲೆ ಅವರಿಂದ ಫೋನ್ ನಾನು ಊರಿಗೆ ಬಂದುಬಿಟ್ಟೆ. ನಾನು ನಾಯಿಗಳಿಗೆ ಬಿಸ್ಕೆಟ್ ತಗೊಳ್ಳೊದ್ರಲ್ಲಿ ಬಿಜ಼ಿಯಾಗಿದ್ದೆ, ನಿನ್ನ ಮೀಟ್ ಮಾಡೋದಿಕ್ಕೆ ಆಗ್ಲೇ ಇಲ್ಲ ಅಂತ!! ಎದುರಿಗಿದ್ದ ಪಾಸ್ ಅನ್ನು ಹರಿದು ಬಿಸಾಡಿದೆ. ಅಸಾಧ್ಯ ಸಿಟ್ಟು ಬಂದು ಸ್ವಲ್ಪ ದಿನ ಅವರಿಗೆ ಫೋನ್ ಮಾಡದೇ ಉಳಿದೆ. ಆಮೇಲೆ ಅವರೇ ಕಾಲ್ ಮಾಡಲು ಶುರು ಮಾಡಿದರು. ನಾನು ಕೂಡ ಸಿಟ್ಟಿಳಿದು ಮತ್ತೆ ಮೊದಲಿನ ಹಾಗಾದೆ.
ಹಾಗಿರುವಾಗ ಮತ್ತೆ ನಿಮ್ಮೂರಿಗೆ ಬರ್ತಿದ್ದೀನಿ ಅಂತ ಅವರಿಂದ ಫೋನ್…ತಮ್ಮ ಗೆಳತಿಯ ಮನೆಯಲ್ಲಿರುತ್ತೇನೆ ಅಂತಲೂ, ನನ್ನನ್ನು ಭೇಟಿ ಆಗಲೇ ಬೇಕಂತಲೂ ಅಂದರು. ಮತ್ತೆ ನೆರಿಗೆ ಸರಿ ಮಾಡಿಕೊಂಡು ಸಿದ್ಧಳಾದೆ ಅವರ ಆಗಮನಕ್ಕೆ. ಮತ್ತೆ ಎರಡು ದಿನ ಕಳೆಯಿತು. ಆಕೆಯ ಫೋನ್ ಇಲ್ಲ. ಅವರ ಗೆಳತಿಯ ಫೋನ್ ಇತ್ತಲ್ಲ, ಅದಕ್ಕೆ ಮಾಡಿದರೆ ಆಕೆ ಬಂದೇ ಇಲ್ಲ ಅಂದರು. ನನಗೆ ಕಕ್ಕಾಬಿಕ್ಕಿ. ಇದೆಲ್ಲ ಏನು ನಡೆಯುತ್ತಿದೆ ಅಂತ ಸಿಟ್ಟು ಏರಿತು. ಮತ್ತೆರಡು ದಿನ ಕಳೆದಿತ್ತು. ಇದ್ದಕ್ಕಿದ್ದ ಹಾಗೆ ಒಂದು ದಿನ ಅವರ ಗೆಳತಿಯಿಂದ ಫೋನ್! ನೋಡಿದರೆ ಆ ಲೇಖಕಿಯ ಧ್ವನಿ. ಮಾತಾಡಿದ ಆಕೆ ಪರ್ಸ್ ಕಳೆದುಹೋಗಿದೆ, ನನಗೆ ಅರ್ಜೆಂಟಾಗಿ ಹತ್ತು ಸಾವಿರ ಬೇಕು ಅಂದರು! ನಾನು ಶಾಕ್ ಹೊಡೆದಂತೆ ಕೂತೆ. ಆಕೆ ಒಳ್ಳೆಯ ಕೆಲಸದಲ್ಲಿದ್ದರು, ಅವರ ಗೆಳತಿ ಕೂಡಾ ಒಳ್ಳೆಯ ಕೆಲಸದಲ್ಲೇ ಇದ್ದಳು. ಹಾಗಿರುವಾಗ ಒಂದೇ ಒಂದು ಸಲ ಮುಖ ಕೂಡಾ ನೋಡದ ನನ್ನಲ್ಲಿ ಯಾಕೆ ದುಡ್ಡು ಕೇಳುತ್ತಾರೆ ಅಂತ ಅರ್ಥವೇ ಆಗಲಿಲ್ಲ. ನನ್ನ ಧ್ವನಿ ಸತ್ತೇ ಹೋಯಿತು … ಆಕೆ ನನ್ನನ್ನು ಆಟವಾಡಿಸುತ್ತಿದ್ದಾರೆ ಅನ್ನುವುದರಲ್ಲಿ ಅನುಮಾನವೇ ಉಳಿಯಲಿಲ್ಲ. ನನ್ನ ಹತ್ತಿರ ಅಷ್ಟೊಂದು ದುಡ್ಡಿಲ್ಲ ಅಂದೇ ಬಿಟ್ಟೆ ಗಟ್ಟಿ ಮನಸ್ಸು ಮಾಡಿ. ಹಾಗಂದಿದ್ದೇ ತಡ ಫೋನ್ ಕಟ್ ಆಯ್ತು .. ಮತ್ತೆ ಮಾಡಿದರೆ ಯಾರೂ ಎತ್ತಲೇ ಇಲ್ಲ. ಮತ್ತೆ ಒಂದು ವಾರ ಕಳೆದಿತ್ತು. ಆಕೆಯಿಂದ ಫೋನ್ ‘ನನ್ನ ಪರ್ಸ್ ಕಳೆದಿರಲಿಲ್ಲ, ಅಲ್ಲೇ ಸೀರೆಗಳ ಮಡಿಕೆಯ ಮಧ್ಯೆ ಸಿಕ್ಕಿಕೊಂಡಿತ್ತು. ನಂತರ ಸಿಕ್ಕಿತು. ದುಡ್ಡು ಕೇಳಿದ್ದಕ್ಕೆ ನೀನೇನಂದು ಕೊಂಡೆಯೋ’ ಅಂತೆಲ್ಲ ಸುಮ್ಮನೆ ಬೇಡದ ಮಾತುಗಳು. ನನಗೆ ಅಷ್ಟರಲ್ಲಿ ಯಾಕೋ ಒಂಥರಾ ಭ್ರಮನಿರಸನ. ಎಲ್ಲಿದ್ದ ಆಕೆ ಎಲ್ಲೋ ಬಿದ್ದುಹೋಗಿದ್ದರು. ಮನೆಯವರೆಲ್ಲ ನನ್ನನ್ನು ಹಿಗ್ಗಾಮುಗ್ಗಾ ಬಯ್ಯಲೂ, ಮಧ್ಯೆ ಮಧ್ಯೆ ಛೇಡಿಸಲೂ, ಮಧ್ಯೆ ಮಧ್ಯೆ ಉಗಿಯಲೂ ಶುರು ಮಾಡಿದ್ದರು. ನಾನು ಟವೆಲ್ ತೆಗೆದುಕೊಂಡು ಒರೆಸಿಕೊಂಡೆ. ಆಮೇಲೆ ಯಾಕೋ ಆಕೆಯ ವಿಷಯದಲ್ಲಿ ನಾನು ಪಾಠ ಪೂರ್ತಿ ಕಲಿತು ಪರೀಕ್ಷೆ ಪಾಸು ಮಾಡಿ ಆಗಿದೆ ಅನಿಸಿಬಿಟ್ಟಿತು…
ಮರು ದಿನ ಅದೇ ನಂಬರಿನಿಂದ ಕಾಲ್ ಬಂದಾಗ ‘ನಾನಿಲ್ಲ ಅಂತ ಹೇಳಿಬಿಡು’ ಅಂದೆ ಮಗನಿಗೆ …
ಅಹವಿ ಹಾಡು : ಬದುಕೇ ನೀ ಕಲಿಸುವ ಪಾಠಗಳಿಗೆ ಇದೋ ಸಲಾಂ..


ಪ್ರಪಂಚವೇ ಹಾಗೆ…ದೂರದ ಬೆಟ್ಟ ನುಣ್ಣಗೆ…
ನಾವು ತಿಳಿಯದೇ ಆರಾಧಿಸುವ ಬಹಳಷ್ಟು ವ್ಯಕ್ತಿತ್ವಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಹೋದಂತೆ ಆ ವ್ಯಕ್ತಿತ್ವದ ಬಗ್ಗೆ ಗೌರವ ಕಡಿಮೆಯಾಗುತ್ತಾ ಹೋಗುತ್ತದೆ…
ಕೆಲವೇ ಕೆಲವು ಮಾತ್ರ ಅಪವಾದಗಳು ದೊರಕಬಹುದು.
ಪ್ರತಿ ಹೆಜ್ಜೆಯಲ್ಲೂ ಕಲಿಯೋದೇ ಆಯ್ತು…..ಆದರೂ ಕೆಲವೊಮ್ಮೆ ಕಲಿತ ಪಾಠ ನಮ್ಮ ಸಿಲೆಬಸ್ಸಲ್ಲೇ ಉಳಿಯೋಲ್ಲ…..ಮತ್ತೆ ಹೊಸ ಪಾಠ …..ಅಲ್ವಾ….:)
Do writers need to live like the characters of their works, in real life?
Who is the writer by the way?
chennaagide Bharathi ! 🙂
ಅಂತೂ ನಿಮ್ಮ ಅಂಕಣ ಓದುತಿದ್ದೇವೆ ಖುಷಿಯಾಯ್ತು… ನೀವು ಪೇಚೆಗೆ ಸಿಲುಕಿದ್ದನ್ನು ಓದಿ ಅಯ್ಯೋ ಪಾಪ ಎನ್ನಿಸಿದ್ದಂತು ಸುಳ್ಳಲ್ಲ…
‘ನಾನು ಬದುಕನ್ನು ನಿಮ್ಮ ಹಾಗೆ ಲಾಭ- ನಷ್ಟದ ದೃಷ್ಟಿಯಿಂದ ನೋಡೋದಿಲ್ಲ’ ಅಂತ ಮಾತ್ರ ಹೇಳಬಲ್ಲೆ!
ಈ ಸಾಲು ನನಗೆ ಅತ್ಯಂತ ಪ್ರಿಯವಾದುದು.ನೀವು ನಿಮ್ಮ ನೆಚ್ಚಿನ ಲೇಖಕಿಯನ್ನು ಸರಿಯಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದೀರಿ ಅಂಥ ನನಗನಿಸುತ್ತದೆ.ಆದರ್ಶಗಳು ಮಾತನಾಡಲು ಮಾತ್ರ ಚಂದ ಅನ್ನುವ ಧ್ವನಿಯು ಈ ಲೇಖನದಲ್ಲಿ ಕಾಣಿಸುತ್ತದೆ.ನಿಮ್ಮ ನಿರೀಕ್ಷೆಯ ಅಬ್ಬರದಲ್ಲಿ ನಿಮ್ಮ ನೆಚ್ಚಿನ ಕತೆಗಾರ್ತಿ ನೆಗೆಟಿವ್ ಆಗಿ ಕಾಣಿಸುತ್ತಾರೆ.ಹಣ ಕೇಳಿದಾಕ್ಷಣ ಅವರು ತೀರಾ ಕೆಟ್ಟವರಾದರು ಅಂತ ನನಗನಿಸುವುದಿಲ್ಲ.
Chalam avare adondarinda maatra avaru kettavaru annuvashtu baalisha naduvalike nannadalla. Naanilli avaru kettavaru andiddeena? Enoppa ! Matte avara bagge aa nirdharakke naanu barabekadre innoo tumba pooraka amshagalidvu. Bareyutta hodre mini kaadambariyaguvashtu. Haagaagi helbekaddanella helalu aagilla
ಭಾರತಿ ಅಕ್ಕಾ ನಿಮ್ಮ ಬುತ್ತಿಯಲ್ಲಿ ಏನೆಲ್ಲಾ ಅನುಭವಗಳಿವೆ …ಚೆನ್ನಾಗಿದೆ ಲೇಖನ
abba oLLe thriller story tara ide. Nagu bantu… aLu bantu… paapa Bharathi anstu. Moral of the story don’t mix story and story writer, both are different entities.
kathe tumba chennagide.
ಭಾರತಿ, ನಿಮ್ಮ ಬರಹ, ಮಾತುಗಳು ನಾನು ಹಾಗೂ ನನ್ನ ಹಾಗೆ ಇರುವವರ ಭಾವನೆಗಳನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ. ಓದುತ್ತಿದಂತೆ ಅರೇ! ನಂಗೂ ಹೀಗೆ ಹಾಗಿತ್ತು ಆಲ್ವಾ ಅನಿಸುತ್ತೆ.
ಮುಂದೇನss ಸಖಿ ಮುಂದೇನsss?
ಉಸಿರು ಬಿಗಿಹಿಡಿದು ಓದಿಕೊಂಡು ಹೋದ್ರೆ ಕೊನೆಯಲ್ಲಿ ಭೂಕುಸಿತ ಆದ ಅನುಭವ … ಮನುಷ್ಯರೇಕೆ ಹೀಗೆ ಅನ್ನೋ ಯಕ್ಷ ಪ್ರಶ್ನೆ !:(
Superb narration, very gripping!
ಇದು ಕತೆಯೋ ಅಥವಾ ಅನುಭವವೋ? ಅಂತೂ ಜಗತ್ತಿನ ಬಗ್ಗೆ, ಮತ್ತು ವ್ಯಕ್ತಿಗಳ ಬಗ್ಗೆ ಏನೆಲ್ಲಾ ಭ್ರಮೆಗಳನ್ನು ಇಟ್ಟುಕೊಂಡಿರುತ್ತೇವೆ ಅದು ಸುಳ್ಳು ಎನ್ನುವಗ ನಾವು ಬೇಸ್ತು ಬಿದ್ದಿರುತ್ತೇವೆ. ಚೆನ್ನಾಗಿದೆ. ನಿರೂಪಣೆ ಆತ್ಮೀಯವಾಗಿದೆ. ಉದಯಕುಮಾರಹಬ್ಬು, ಕಿನ್ನಿಗೋಳಿ
Ondaksharavoo anubhavaddacheyaddalla ….
‘ಹೇಳತೇನ ಕೇಳ…’ ಅಂತ ಭಾರತಿ ಮುಂದಿನ ಕಂತು ಸಿದ್ಧಪಡಿಸುತ್ತಿದ್ದಾರೆ… ಜಸ್ಟ್ ವೇಟ್ ಅಹಲ್ಯಾ ಮೇಡಂ… 🙂
🙂 🙂
ಭಾರತಿ ನಿಮ್ಮ ಬರವಣಿಗೆ ಕುತೂಹಲ ಹುಟ್ಟಿಸುವಂಥಾದ್ದು. ಯಾರಪ್ಪಾ ಆ ಲೇಖಕಿ ಎನ್ನುವ ಕುತೂಹಲ ಹುಟ್ಟಿಸುತ್ತದೆ. ಬರಹ ಮತ್ತು ವ್ಯಕ್ತಿತ್ವ ಬಹಳ ಸಲ ವಿರುದ್ಧವಾಗಿರುತ್ತೆ. ಜೇವನದಲ್ಲಿ ಇಂತಹ ಜನರನ್ನು ಭೇಟಿಯಾಗುತ್ತಲೇ ಇರುತ್ತೇವೆ. ಪಾಠಗಳನ್ನು ಕಲಿಯುತ್ತಲೇ ಇರುತ್ತೇವೆ. ಜೀವನದಷ್ಟು ದೊಡ್ಡ ಪಾಠಶಾಲೆ ಬೇರಿಲ್ಲ ಅಲ್ಲವೇ? ಮುಂದಿನ ಕಂತುಗಳನ್ನು ಓದಲು ಉತ್ಸುಕಳಾಗಿದ್ದೇನೆ.
“‘ನಾನು ಬದುಕನ್ನು ನಿಮ್ಮ ಹಾಗೆ ಲಾಭ- ನಷ್ಟದ ದೃಷ್ಟಿಯಿಂದ ನೋಡೋದಿಲ್ಲ’ ಅಂತ ಮಾತ್ರ ಹೇಳಬಲ್ಲೆ!”
ನೀ ಕೂಡ ನನ್ ಥರನೇ ಎಷ್ಟೊಂದು ಹುಚ್ಚಿನೇ… ಲವ್ ಯೂಊಊಊಊಊಊಊಊಊಊಊಊ
ಅಂದ ಹಾಗೆ ನೀ ನಾನಿಷ್ಟಪಡುವ ಲೇಖಕಿ.. ಒಮ್ಮೆ ನೋಡಬೇಕಲ್ಲ.. 😉
‘ನನ್ನ ಬದುಕಿನ ಪಾಠಗಳನ್ನು ನಾನೇ ಕಲಿಯುತ್ತೇನೆ. ನನಗೆ ಟೆಕ್ಸ್ಟ್ ಬುಕ್ ಅಂದರೆ ತುಂಬ ಹಿತ’Howdu Bharati nammnammma badukina patagalannu nave kalibeku. Experience is the best teacher but some times we have to pay too much for its lessons antaralla hage ide nimma experiencu.Nimma baravanige shaili ishtavaythu, mundenagutte anta begane bidade oduvashtu. Heege bareyuttiri.
ಈ ರೀತಿ ಸ್ನೇಹದಲ್ಲಿ ಸಿಕ್ಕಿಹಾಕಿಕೊಂಡ ಅನುಭವ ನನಗೂ ಆಗಿದೆ 🙁
‘ಬದುಕು ನಿರಂತರ ಹುಡುಕಾಟ ಸಂತೋಷದ್ದು, ನೆಮ್ಮದಿಯದ್ದು, ವ್ಯಕ್ತಿಗಳದ್ದು, ನಮ್ಮನ್ನು ಮೀರಿದ ಶಕ್ತಿಗಳದ್ದು, ಸಂಬಂಧಗಳದ್ದು !’
ಒಪ್ಪತಕ್ಕ ಮಾತು. ತುಂಬಾ ಚೆನ್ನಾಗಿದೆ. ಮುಂದಿನ ಕಂತುಗಳಿಗಾಗಿ ಕಾಯುವ ಕುತೂಹಲ ಉಳಿಸಿಕೊಂಡುಹೋಗಿದೆ. ನನಗೆ ಆಶ್ಚರ್ಯ ಅನ್ನಿಸಿದ್ದು ನೀವು ಡೈರಿ ಬರೀತಿದ್ದಿರೋ ಹೇಗೆ?ಕ್ಷಣ ಕ್ಷಣದ ವಿವರಗಳನ್ನು ನೋಡಿ ಆಶ್ಚರ್ಯವಾಯಿತು . ಅಭಿನಂದನೆಗಳು.
anuma ellavoo nenapirodu nanna plus mattu minus point eradoo koodaa …
Baduku nirantara hudukaau ta…Arthagarbhita… Hudukaata nintare badukoo nintante ennuvadu nanna vichara… badukinalli kandubaruva naanamukhagalu naana veshagalu…adara ondu anubhava chennagi barediddiri…