ಒಂದು ಪುಸ್ತಕದ ಅಂಗಡಿಗೆ ಕಾಲಿಟ್ಟರೆ ಬದುಕಿನ ಬಗ್ಗೆ, career ಬಗ್ಗೆ, ಸಂಬಂಧಗಳ ಬಗ್ಗೆ, ಸಂಸಾರದ ಬಗ್ಗೆ ಉಪದೇಶಿಸುವ ನಾನಾ ಪುಸ್ತಕಗಳ ಸಾಲು ಸಾಲನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯಿದು ‘ಬದುಕಿನ ಪಾಠಗಳನ್ನು ಯಾರು ಕಲಿಸಬೇಕು?’ ಅಂತ. ಬದುಕೇನು ಒಂದು ಚೌಕಟ್ಟಿನಲ್ಲಿರುವ ಚಿತ್ರವಾ 15 ಇಂಚು x 18 ಇಂಚಿನ ಫ಼್ರೇಮ್ನಲ್ಲಿ ತುರುಕಿಸಿ ಇಡುವುದಿಕ್ಕೆ?ಒಂದೊಂದು ಬದುಕಿನ ಕ್ಯಾನ್ವಾಸ್ ಕೂಡಾ ಅವರವರ ರೀತಿಯಲ್ಲಿ ಇರುವಾಗ, ಒಂದು ಸಿದ್ಧ ಸೂತ್ರದಲ್ಲಿ ಎಲ್ಲ ಬದುಕುಗಳನ್ನು ಹೇಗೆ ಬಂಧಿಸಿ ಇಡುವುದು? ಒಬ್ಬೊಬ್ಬರ ಬದುಕಿನ ಏಣಿಯಲ್ಲೂ ಬೇರೆ ಬೇರೆ ಸಂಖ್ಯೆಯ ಮೆಟ್ಟಿಲಿರುತ್ತದೆ. ಆ ಮೆಟ್ಟಿಲುಗಳ ನಡುವಣ ಅಂತರ ಕೂಡಾ ಬೇರೆ ಬೇರೆಯದೇ. ಒಬ್ಬರ ಏಣಿಗೆ 80 ಮೆಟ್ಟಿಲಿದ್ದರೆ ಮತ್ತೊಬ್ಬರದಕ್ಕೆ 90 ಇರಬಹುದು. ಒಂದು ಮೆಟ್ಟಿಲಿಗೂ ಮತ್ತೊಂದು ಮೆಟ್ಟಿಲಿಗೂ ಮಧ್ಯೆ ಕೆಲವು ಏಣಿಗೆ 1 ಅಡಿ ಅಂತರವಿದ್ದರೆ ಮತ್ತೆ ಕೆಲವಕ್ಕೆ ಒಂದೂಕಾಲು ಅಡಿ ಅಂತರ. ಹೀಗಿರುವಾಗ ನಾನು 20ನೆಯ ಮೆಟ್ಟಿಲ ಮೇಲೆ ನಿಂತು ‘ನೀನು ನಿನ್ನ ಏಣಿಯ 20ನೆಯ ಮೆಟ್ಟಿಲ ಮೇಲೆ ನಿಲ್ಲು. ಅಲ್ಲಿ ನೋಡು ಆ ದೃಶ್ಯ ಕಾಣುತ್ತಿದೆಯಾ?’ ಅಂತ ಕೇಳಿದರೆ ನೀವು ನಿಂತಿರುವ 20ನೆಯ ಮೆಟ್ಟಿಲು ಎಷ್ಟು ಅಡಿಯಲ್ಲಿದೆಯೋ, ಏನು ಕಾಣಿಸುತ್ತಿರುತ್ತದೋ ನನಗೇನು ಗೊತ್ತು? ನಾನು ಕಾಣುವ ಸತ್ಯವೆಲ್ಲ ನಿಮ್ಮದಾಗಿರಬೇಕಿಲ್ಲ … ನಿಮ್ಮ ಸತ್ಯಗಳು ನನ್ನವಾಗುವುದೂ ಅಸಾಧ್ಯ. ಹೀಗಿರುವಾಗ ಪಾಠ ಹೇಳಲು ಹೊರಟರೆ ಯಾವ ಮೆಟ್ಟಿಲಿನ ಮೇಲೆ ನಿಂತು ನೀವು ಪಾಠ ಹೇಳುತ್ತೀರ ಅನ್ನುವುದು ನಿಮಗೆ ಮಾತ್ರ ಗೊತ್ತಿರಲಿಕ್ಕೆ ಸಾಧ್ಯವಷ್ಟೇ ಹೊರತು ನಿಮ್ಮ ಏಣಿಯಲ್ಲಿ ನಾನು ನಿಲ್ಲಬಲ್ಲೆನಾ?
ಯಾವ ಯಾವುದೋ ಗುರುಗಳು, ಯಾವ ಯಾವುದೋ ಸಂತರು, ಯಾವ ಯಾವುದೋ ದಾರ್ಶನಿಕರು ಬದುಕಿನ ಸತ್ಯಗಳನ್ನು, ಸತ್ವಗಳನ್ನು ಬೋಧಿಸುತ್ತಾರಲ್ಲ ಅದು ನನಗೆ ಅಸಾಧ್ಯ ಕಿರಿ ಕಿರಿ ಅನ್ನಿಸುತ್ತದೆ. ನಾನು ಗೆಳೆಯನೊಬ್ಬನ ಜೊತೆ ಮಾತನಾಡುವಾಗ ಹೇಳುತ್ತಿರುತ್ತೇನೆ ‘ಜ್ಞಾನವೇ ಬೆಳಕು. ಅಜ್ಞಾನವೇ ತಮಸ್ಸು. ಎದುರಲ್ಲಿ ಬೆಳಕಿದ್ದು, ಎದೆಯಲ್ಲಿ ತಮಸ್ಸಿದ್ದರೆ ಯಾವ ಪ್ರಯೋಜನವೂ ಇಲ್ಲ. ನಾವು ಬೆಳಕಿನ ಮಾರ್ಗದಲ್ಲಿ ನಡೆಯಬೇಕು …’ ಹೀಗೆಲ್ಲ ಪ್ರವಚನಗಳನ್ನು ಕೊಡುತ್ತಾರಲ್ಲ, ಇಂತಹವುಗಳನ್ನು ಕೊಡಲು ಯಾವ ಕಷ್ಟ? ಆದರೆ ಎಲ್ಲ ಉಪದೇಶ ಕೊಟ್ಟಾದ ಮೇಲೆ ಯಾರ ಬದುಕಾದರೂ ಕೂತಿದ್ದ ಹಾಗೆ, ನಿಂತಿದ್ದ ಹಾಗೆ ಪರಿವರ್ತನೆಯಾಗೋದಿಕ್ಕೆ ಸಾಧ್ಯವಾ? ಮನುಷ್ಯರ ಒಳತೋಟಿಗಳು ಅಷ್ಟು ಸುಲಭಕ್ಕೆ ಕಂಟ್ರೋಲಿಗೆ ಸಿಕ್ಕಿಬಿಡುತ್ತವಾ? ಅಂತ. ಬದುಕಿನ ಸಮಸ್ಯೆಗಳು ನಮ್ಮ finger print ನ ಹಾಗೆ. ನನ್ನದಿರುವ ಸಮಸ್ಯೆ ಬೇರೆಲ್ಲೂ ಇರುವುದಿಲ್ಲ ಮತ್ತು ಅದಕ್ಕೆ ನಾನು react ಆಗುವ ರೀತಿಯೂ ಭಿನ್ನವೇ
ಈಗ ನೋಡಿ, ನಮ್ಮ ಈ ಪಕ್ಕದ ಮನೆಯಲ್ಲಿರುವವಳಿಗೂ, ಆ ಪಕ್ಕದ ಮನೆಯಲ್ಲಿರುವವಳಿಗೂ ಮದುವೆ ಮುರಿದು ಬಿದ್ದು ಬಿಟ್ಟಿದ್ದರೆ ಅದಕ್ಕೆ ಅವರವರದ್ದೇ ಆದ ಕಾರಣಗಳು. ಹೇಗೆ ಸಂತೋಷಕ್ಕೆ ನೂರು ಕಾರಣಗಳೋ, ಹಾಗೆ ದುಃಖಕ್ಕೂ ಕೂಡ. ಈ ಮನೆಯಲ್ಲಿರುವವಳ ಗಂಡ ಕುಡುಕನಿರಬಹುದು, ಆ ಮನೆಯವಳ ಗಂಡ ವಿಕೃತ ಕಾಮಿಯಿರಬಹುದು. ಹಾಗಾಗಿ ಅವರ ಮದುವೆ ಮುರಿದು ಬಿದ್ದಿರುತ್ತದೆ. ಇಬ್ಬರ ಸಮಸ್ಯೆಯೂ ಹೊರನೋಟಕ್ಕೆ ಒಂದೇ ಆದರೂ ಅದರ ಮೂಲಕಾರಣ ಬೇರೆ ಬೇರೆ ಇರುವಾಗ ಇದು ‘ಇದೇ’ ಅಂತ ಚೌಕಟ್ಟು ಹೇಗೆ ಹಾಕುವುದು? ಕುಡುಕ ಗಂಡ ಅವಳನ್ನು ಮುಟ್ಟುವುದಿಲ್ಲ, ಆದರೆ ಬಾಯಿಗೆ ಬಂದಂತೆ ಬಯ್ಯುತ್ತಾನೆ. ಅಕ್ಕ ಪಕ್ಕದ ಮನೆಯವರಿಗೆ ಕೇಳಿಸದಿರಲು ಸಕಲ ಪ್ರಯತ್ನ ಮಾಡಿ ಸೋತು ನಿಲ್ಲುತ್ತಾಳೆ. ಆದರೆ ವಿಕೃತ ಕಾಮಿಯ ಮನೆಯಿಂದ ಬೈಗುಳದ ಸದ್ದೇ ಇಲ್ಲ! ಆದರೆ ಅಲ್ಲಿರುವವಳ ಎದೆಯ ಕೂಗು ಜಗತ್ತನ್ನೇ ಬೆಚ್ಚಿ ಬೀಳಿಸುವಂತ ಸದ್ದಾಗಿರುತ್ತದೆ. ಸಮಸ್ಯೆಗೆ ಎಷ್ಟೊಂದು ಆಯಾಮಗಳು, ಮಜಲುಗಳು … ಹಾಗಿರುವಾಗ ಈ ಬದುಕನ್ನು ನಿರ್ದೇಶಿಸುವ ಸಲಹೆಗಳೆಲ್ಲ ಎಷ್ಟು ಅರ್ಥಹೀನವಲ್ಲವೇ?
ಅವಳೊಬ್ಬಳಿದ್ದಾಳೆ … ಎಲ್ಲ ಸರಿಯಿದೆ. ಹೊರನೋಟಕ್ಕೆ ಕಾಣಲು ಬದುಕೆಲ್ಲ ಸರಿ ಇದೆ. ಆದರೆ ಒಳಒಳಗೆ ಸರಿವ ಅವಳ ಸೂಕ್ಷ್ಮ ಮನಸ್ಸಿಗೆ ಆ ಹೊರಗೆ ಕಾಣುವ ಯಾವುದೂ ಬೇಕಿಲ್ಲ. ಅವಳ ಒಳತೋಟಿಯೇ ಬೇರೆ, ಅವಳ ಸಂಘರ್ಷಗಳೇ ಬೇರೆ. ಹೊರ ಜಗತ್ತಿನ ಕಾರು, ಮನೆ, ಹಣ, ಕೆಲಸವೆಲ್ಲ ಈ ಪಕ್ಕದ ಮನೆಯವಳಿಗೆ ಸಿಕ್ಕಿದ್ದರೆ ಅವಳು ಸುಖಿಯಾಗಿರುತ್ತಿದ್ದಳು. ಆದರೆ ಆ ‘ಅವಳಿಗೆ’ ಅವೆಲ್ಲ ಯಾವ ಲೆಕ್ಕಕ್ಕೂ ಬೇಡ. ಮತ್ತೆ ಅವಳ ಸಮಸ್ಯೆಗಳು ಜಗತ್ತಿಗೆ ಅರ್ಥವೇ ಆಗುವುದಿಲ್ಲ. ಥೂ ಎಲ್ಲ ಇದ್ದರೂ ಯಾವಾಗಲೂ ಕೆಟ್ಟ ಮುಖದಲ್ಲಿ ಇರ್ತಾಳೆ ಅಂತ ತೀರ್ಪು ಕೊಡುವುದು ಸುಲಭ. ಅವಳಂಥವರು ನೂರಾರು ಜನರಿದ್ದಾರೆ ಇಲ್ಲಿ. ಸುಖಿಯಾಗಿಲ್ಲದವರು, ಅಸಂತೋಷಿಗರು ಎಲ್ಲ ರೀತಿಯ ಜನ. ಆದರೆ ನಿಮಗೆ ಹೊರನೋಟಕ್ಕೆ ಅವರಿಗೆ ಎಲ್ಲ ಇದೆ ಅನ್ನಿಸುತ್ತದೆ. ಸುಮ್ಮನೆ ಒಂದು ಸಲ ನಿನಗೆ ಎಲ್ಲ ಇದೆಯಾ? ಅನ್ನುವ ಪ್ರಶ್ನೆ ಕೇಳಿ ನೋಡಿ … ಹತ್ತು ಜೋರು ದನಿಗಳು ಹೌದು ಅನ್ನುತ್ತವೆ. ಮತ್ತೆ ಒಂದಷ್ಟು ದನಿಗಳು ಗೊತ್ತಿಲ್ಲ ಅಂತ ಗೊಣಗುತ್ತವೆ. ಮತ್ತೆ ಒಂದಿಷ್ಟು ದನಿಗಳು ಇಲ್ಲ ಅಂತ ಪಿಸುಗುಡುವುದು ಯಾರಿಗೂ ಕೇಳಿಸುವುದೇ ಇಲ್ಲ. ಮತ್ತೆ ಕೆಲವು ಯಾಕೆ ಉತ್ತರವೂ ಕೊಡಲಿಲ್ಲ ಅಂತ ನೋಡಿದರೆ ಕಣ್ಣಂಚು ತೇವವಾಗಿರುವುದು ಮಾತ್ರ ಗೊತ್ತಾಗುತ್ತದೆ ಅಷ್ಟೇ …
ಹಿಂದೆ ‘ಹೆಂಗಸರ ಮ್ಯಾಗಜ಼ೀನ್’ ಗಳನ್ನು ಒಂದಿಷ್ಟು ಓದುತ್ತಿದ್ದ ಕಾಲವಿತ್ತು. ಅಲ್ಲಿ ಯಾವ ಯಾವುದೋ ಬರಹಗಳು, ಅಲ್ಲಿನ ಸಾವಿರ ಉಪದೇಶಗಳು.
ನಿಮ್ಮ ಗಂಡ ಕುಡಿದು ಬಂದು ಕೆಟ್ಟದಾಗಿ ಮಾತಾಡಿದರೆ, ವರ್ತಿಸಿದರೆ ಅವನನ್ನು ಬಯ್ಯಬೇಡಿ, ಸುಮ್ಮನಿದ್ದುಬಿಡಿ. ಮತ್ತು ಇಳಿದ ಮೇಲೆ ಒಳ್ಳೆಯ ಮಾತಿನಲ್ಲಿ ಕೇಳಿಕೊಳ್ಳಿ …
ನಿಮ್ಮ ಅತ್ತೆ ಕುಳಿತ ಕಡೆಯೇ ಎಲ್ಲ ಸೇವೆ ಮಾಡಲಿ ಅಂತ ಬಯಸಿದರೆ ನಿಮ್ಮ ತಾಯಿ ಅಂದುಕೊಂಡು ಅವರನ್ನು ಸಂತೋಷ ಪಡಿಸಿಬಿಡಿ …
ನಿಮ್ಮ ನಾದಿನಿ ಬಾಸಿಸಮ್ ಮಾಡುತ್ತಾಳಾ? ಆ ಮನೆ ಹಿಂದೆ ಅವಳದ್ದೂ ಆಗಿತ್ತು ಅಲ್ಲವೇ? ಅವಳನ್ನು ಅರ್ಥ ಮಾಡಿಕೊಳ್ಳಿ …
ಸೊಸೆ ಎಲ್ಲಿಗೆ ಹೋಗುತ್ತೀನಿ ಅಂತಲೂ ಹೇಳದೇ ಹೋದಾಗ ಯಾಕೆ ನೋಯುತ್ತೀರಿ? ಅದನ್ನು ಮನಸ್ಸಿಗೇ ತಂದುಕೊಳ್ಳಬೇಡಿ …
ಬಾಸ್ ಎಲ್ಲರೆದುರು ಅವಮಾನ ಮಾಡಿದರೆ ತುಂಬ ಸಮಾಧಾನ ತಂದುಕೊಳ್ಳಿ …
ಹೇಳುವುದು ಎಷ್ಟೊಂದು ಸುಲಭ! ಆದರೆ ಆ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡವರಿಗೆ ಈ ಮಾತುಗಳು ಎಂತ ಇರಿಟೇಷನ್ ಉಂಟುಮಾಡುತ್ತವೆ ಅಂತ ಯೋಚಿಸಿ. ನನಗಂತೂ ಈ ಉಪದೇಶಾಮೃತಗಳನ್ನು ಓದಿ ಓದಿ ಎಂಥ ಸಿಟ್ಟು ಬರಲು ಶುರುವಾಯ್ತೆಂದರೆ ನಾನು ಆ ಮ್ಯಾಗಜ಼ೀನ್ಗಳನ್ನು ಮುಟ್ಟುವುದೂ ಇಲ್ಲ ಈಗೆಲ್ಲ.
ಟೆನ್ಷನ್ ಆದರೆ ಪ್ರಾಣಾಯಾಮ ಮಾಡಿ, ಯೋಗ ಮಾಡಿ, ಧ್ಯಾನ ಮಾಡಿ, ಭಜನೆ ಮಾಡಿ ಹೀಗೆ ಸಾವಿರದೆಂಟು ಸಲಹೆಗಳು. ಟೆನ್ಷನ್ನ ಮೂಲಕಾರಣಕ್ಕೆ ಪರಿಹಾರ ದೊರಕದ ಹೊರತು ಈ ಯೋಗ, ಧ್ಯಾನ ಮಾಡುವುದರಿಂದ ಇರುವ ಸಮಸ್ಯೆ ಎಲ್ಲಿ ಓಡಿಹೋಗುತ್ತದೆ? ಮನಸ್ಸು ತೊಡಗದಿದ್ದರೆ ಯಾವ ಯೋಗದಿಂದ ಏನು ಪ್ರಯೋಜನ? ನನಗೆ ಕ್ಯಾನ್ಸರ್ ಅಂತ ಗೊತ್ತಾದ ಸ್ವಲ್ಪ ದಿನಕ್ಕೆ ನಾನು ಕಲಿತದ್ದೂ ಅದನ್ನೇ… self counselling! ನನಗೆ ನಾನೇ ಮಾತಾಡಿಕೊಳ್ಳುತ್ತ, ಕೊಳ್ಳುತ್ತ ಮೂಲಕ್ಕೆ ಇಳಿಯುತ್ತಾ ಹೋದ ಹಾಗೆ ಎದೆಯ ಮೇಲಿನ ಭಾರ ಕೂಡಾ ಇಳಿಯುತ್ತಾ ಹೋಗುತ್ತಿತ್ತು. ಎಂದೂ ದೇವರ ಮೊರೆ ಹೋಗದ ನಾನು ಆ ನಿಮಿಷಗಳಲ್ಲಿ ದೇವರ ಮೊರೆ ಹೋಗುವುದು ಕೂಡಾ ನನಗೆ ಹೀನಾಯ ಅನ್ನಿಸಿ ಬಿಟ್ಟಿತು. ಹಾಗಾಗಿ ನನ್ನ ಬದುಕಿಗೆ ತುಂಬ ಮುಖ್ಯವೆನ್ನಿಸಿದ ನಾಟಕ, ಸಿನೆಮ, ಓದು, ಬರಹ ಇವುಗಳಲ್ಲಿ ಕಾಲವನ್ನು invest ಮಾಡುವ ನಿರ್ಧಾರಕ್ಕೆ ಬಂದೆ. ಹಾಗಂತ ನಾನು ಇನ್ನುಳಿದ ಕ್ಯಾನ್ಸರ್ ರೋಗಿಗಳಿಗೂ ಇದೇ ಮಾಡಿ ಅಂದರೆ ಎಂಥ ridiculous ಅನ್ನಿಸಿ ಬಿಡೋದಿಲ್ಲವಾ? ನಿಮ್ಮ ಮನಸ್ಸು ಬಯಸುವುದನ್ನು ಮಾಡಿ, ದುಃಖಿಸಲು ಸಮಯ ಉಳಿಸಿಕೊಳ್ಳಬೇಡಿ ಅನ್ನುವ ಸಣ್ಣ ಸಲಹೆಯೊಂದನ್ನು ಮಾತ್ರ ನೀಡಿ ಸುಮ್ಮನಾದರೆ ಒಳ್ಳೆಯದು. ನನ್ನ ಏಣಿಯೇ ಬೇರೆ, ಅವರದ್ದೇ ಬೇರೆ …
ಬದುಕಿನ ಪಾಠಗಳನ್ನು ಕಲಿಸುವ ಗುರು ನಮ್ಮ ನಮ್ಮ ಬದುಕು ಮಾತ್ರ. ಇನ್ನುಳಿದಂತೆ personality development ಉಪದೇಶಗಳು ಅಥವಾ ಹಾಗೆ ರಿಲ್ಯಾಕ್ಸ್ ಮಾಡು, ಹೀಗೆ ಯೋಚಿಸು, ಹಾಗೆ ಬದುಕು ಅನ್ನುವಂಥ ಪುಸ್ತಕಗಳನ್ನು ಮತ್ತು ಪ್ರವಚನಗಳನ್ನು ಓದಿ ಬದುಕಲು ಹೊರಟರೆ ಕೇಸರಿ ಬಾತು ರವೆ ಪಾಯಸವಾಗುವ, ಉದ್ದಿನ ವಡೆ ಹದವಿಲ್ಲದೇ ಮಂಗಳೂರು ಬಜ್ಜಿಯಾಗುವ ಸಂಭವವಿರುತ್ತದೆ ಅಷ್ಟೇ!
ಅಹವಿ ಹಾಡು : ಬದುಕಿನ ಪಾಠಗಳನ್ನು ಯಾರು ಕಲಿಸಬೇಕು?


ಸುಪರ್ಬ್…
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು
ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು
ಈ ಬಾಳಲಿ
Nanu kooda ide abhiprayadavanu.Obbobbara paristhithiyoo vibhinna.Adakke uttara sulabhavalla.ldu ma di adu madi endu genaralisemaduvudu sadhyavilla
N.viswanatha
Superb Bharathi Mam!
ಅವರವರ ಮನೋವ್ಯಾಪಾರ ಬೇರೆಯೇ ಆಗಿರುವಾಗ ಎಲ್ಲರಿಗೂ ಒಂದೇ ಪರಿಹಾರ ಸಾದ್ಯವಿಲ್ಲ ಎಂಬುದನ್ನು ಚೆನ್ನಾಗಿ ವಿವರಿಸಿದ್ದೀರಿ ಭಾರತಿ ಮೇಡಮ್.
ಬದುಕು ಒಂದು ವಿಸ್ಮಯ. ಪಾಠಗಳನ್ನು ತಾನಾಗಿಯೇ ಕಲಿಸುತ್ತಾ ಹೋಗುತ್ತದೆ. ಕಲಿಯುವ ಮನಸ್ಸಿರಬೇಕು ಅಷ್ಟೇ!!!
Cheers to LIFE and Happy Ugadi to You and Your Family 🙂
ನನ್ನ ಏಣಿಯೇ ಬೇರೆ, ಅವರದ್ದೇ ಬೇರೆ …soooooooooooooooper
ನೀವು ಬರೆದದ್ದು ಕ್ಯಾನ್ಸರ್ ನನ್ನು ಎದುರಿಸುವವರಿಗೆ ಚೇತೋಹಾರಿಯಾಗಿದೆ. ಬದುಕಿನಲ್ಲಿ ಇನ್ನೆಲ್ಲ ಮುಗಿದು ಹೋಯಿತು ಎನ್ನುವಾಗ ಇನ್ನೇನೋ ಉಳಿದುಕೊಂದಿದೆ ಬದುಕುಳಿಯಲು ಎನ್ನುವುದೇ ಆಶಾವಾದ. ಈಜಬೇಕು, ಈಜಿ ಗೆಲ್ಲಬೇಕು. ಬದುಕಿರುವವರೆಗೆ ಚಲಬಿಡದ ತ್ರಿವಿಕ್ರಮನಂತೆ ಹೋರಾಡುವುದೇ ಜೀವನ. ನನ್ನಂತೆ ಪರರೆಂದು ಬಗೆದೊಡೆ ಕೈಲಾಸ ಬಿನ್ನಾಣವಕ್ಕೂ’ ನಾನೊಬ್ಬ ಕ್ಯಾನ್ಸರ್ ಎದುರಿಸುತ್ತಿರುವ ವ್ಯಕ್ತಿಗೆ ಸಾಂತ್ವನ ಹೇಳಿದೆ. ಯಾವುದೋ ಚಾರಿಟೆಬಲ್ ಸಂಸ್ಥೆಯವರು ಉಚಿತ ವಿತರಣೆಗಾಗಿ ಕೊಟ್ಟ ಪುಸ್ತಕವನ್ನು ಕೊಟ್ಟೆ. ಮತ್ತು ಅವುಗಳಿಂದ ಅವರಿಗೆ ಸಹಾಯವಾಗಲಾರದೆಂದು ಭಾವಿಸಿ ಸ್ವಲ್ಪ ಹಣವನ್ನು ಕೊಟ್ಟು ಬಂದೆ. ಆದ್ರೆ ನಾನು ಕೊಟ್ಟ ಸಲಹೆಗಳು ಅವರಿಗೆ ಪತ್ಯವಾಗಿರಲಿಲ್ಲ. ಹಾಗಾಗಿ ಸಲಹೆ ಕೊಡುವುದು ಸುಲಭ. ಆದರೆ ಅವುಗಳ ಅನುಷ್ಠಾನ ತುಂಬಾ ಕಷ್ಟ. ಎಷ್ಟೋ ಜನ ಕ್ಯಾನ್ಸರ್ ಪೇಶಂಟಗಳು ಅದೇ ನೆಪವಾಗಿಟ್ಟುಕೊಂಡು ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಿದ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ
ಭಾರತಿ, ಹೌದು! ಹೌದು! ಅನ್ನಿಸಿದಂಥಹ ಬರಹ!
ನನ್ನ ಏಣಿಯೇ ಬೇರೆ, ಅವರದ್ದೇ ಬೇರೆ
ಕೆಲವರ ಬದುಕಿನಲ್ಲಿ ಏಣಿಯೇ ಇರುವುದಿಲ್ಲ ಆ ಮಾತು ಬೇರೆ!!
ಭಾರ್ತಿ, ಸಿಂಪ್ಲಿ ಸೂಪರ್ಬ್!
Bharathi.. modalane pyara tumba chennagide… innobbara bagge oohe maadikolluva modalu paratee saari ee maatugalannu odikollale beku..”thoughts for life”.
ಸರಳ ಬದುಕಿಗೊಂದು ಸೂತ್ರ … ತುಂಬಾ ಇಷ್ಟವಾಯ್ತು
ತುಂಬಾ ಅರ್ಥಪೂರ್ಣ ಬರಹ.
abba, ondu bhorgareva jalapathada kelage kulitha anubhava aayithu. mai manassige tampereyuva ibbani, jotheyalli jalapathada bhorgaretha – badukina paatha idee badukina putagalannau bichi ittanthide. dhanyavadagalu.
ಬದುಕಿನ ಪಾಠಗಳನ್ನು ಕಲಿಸುವ ಗುರು ನಮ್ಮ ನಮ್ಮ ಬದುಕು ಮಾತ್ರ. ” ಮುತ್ತಿನಂಥ ಮಾತು