ಅಹವಿ ಹಾಡು : ನೇರ ಗೆರೆಗಳು ಸೇರಿ ಚಿತ್ರವಾಗುವುದಿಲ್ಲ


ಸುಮ್ಮನೆ ಜೇಬಿನಲ್ಲಿ ಕೈ ಹಾಕಿ ಸುಖದಿಂದ ನಡೆಯುತ್ತಿರುತ್ತೇವೆ ಮನುಷ್ಯರೆಲ್ಲರೂ … ಅತ್ತಿತ್ತ ತಿರುಗದೇ, ಸಿಕ್ಕಿದ್ದನ್ನೆಲ್ಲ ಬಾಚಿ ತಬ್ಬಿಕೊಳ್ಳುತ್ತಾ. ನಡೆಯುವ ಹಾದಿಯಲ್ಲಿ ವಸಂತ ದಿಢೀರನೆ ಮುಗಿದುಹೋಗುತ್ತದೆ ಒಂದು ದಿನ … ಅಚಾನಕ್! ಅಯ್ಯೋ, ವರ್ಷ ಋತು ಎದುರಾಯ್ತಲ್ಲ ಅಂತ ಅರ್ಜೆಂಟಾಗಿ ರೇನ್ ಕೋಟ್, ಕೊಡೆ ಸಿದ್ಧಪಡಿಸಿಟ್ಟುಕೊಳ್ಳುವಷ್ಟರಲ್ಲಿ, ಶಿಶಿರ ಎದೆ ಕೊರೆಯಲು ಶುರು ಮಾಡಿಬಿಟ್ಟಿರುತ್ತಾನೆ. ಇವು ಋತುಗಳ ಮಾತಾಯಿತು. ಇದರ ಜೊತೆಗೆ ನೇರ ಕೊರೆದಿಟ್ಟಂತ ಬದುಕಿನ ಹಾದಿಗೆ, ಅಲ್ಲಿಲ್ಲಿ ಅನಿರೀಕ್ಷಿತ ಅಂಕು ಡೊಂಕು ಕವಲು ದಾರಿಗಳು ಎದುರಾಗಿ ಬಿಡುತ್ತವೆ. ನೇರಕ್ಕೆ ಹೊಂದಿಕೊಂಡ ಮನಸ್ಸಿಗೆ ಈ ತಿರುವು, ಕವಲು ಎಲ್ಲವೂ ಅಸಹನೀಯವಾಗಿ, ಬದುಕು ಪ್ರಕ್ಷುಬ್ಧ ಕಡಲು. ಆ ತಿರುವಿನಲ್ಲಿ ಕಣ್ಣು ಕೀಲಿಸಿ, ಅಲ್ಲಿ ಯಾವ ಅನಿರೀಕ್ಷಿತ ಎದುರಾಗುತ್ತದೋ ಅಂತ ಮನಸ್ಸು ಬೆದರಲು ಶುರು ಮಾಡುತ್ತದೆ. ಬದುಕಿನ ಅಂಕು ಡೊಂಕು ಗೆರೆಗಳು ತುಂಬ ಗೋಜಲು ಅನ್ನುವುದು ನಿಜವಾದರೂ, ಒಂದರೊಡನೊಂದು ಹಾದುಹೋಗದ ನೇರ ಗೆರೆಗಳು ಎಂದೂ ಚಿತ್ರ ಮೂಡಿಸುವುದಿಲ್ಲ ಅನ್ನುವುದೂ ಅಷ್ಟೇ ಸತ್ಯದ ಮಾತು!
ಬದುಕಿನ ತಿರುವಿನಲ್ಲಿ ನಿಂತಾಗ ಇಂಥ ಗೋಜಲು ಗೆರೆಗಳನ್ನು ಸೇರಿಸಿ, ಬದುಕನ್ನು ಚಿತ್ರವಾಗಿಸಿಕೊಂಡವರ ಒಂದೆರಡು ಕಥೆಗಳು ಇಲ್ಲಿವೆ …
ಒಂದು: ನಮ್ಮ ದೇಶದ ಹೀರೋಗಳಲ್ಲಿ ತುಂಬ long shelf life as hero ಇದ್ದಂತವರು ಅಂದರೆ ದೇವಾನಂದ್. ಅವರು ಹುಟ್ಟಿದ್ದು 1923 ರಲ್ಲಿ. ಬಿ ಎ ಡಿಗ್ರಿ ಮುಗಿಸಿದ ನಂತರ, ಸಿನೆಮಾ ರಂಗಕ್ಕೆ ಸ್ವಲ್ಪವೂ ಸಂಬಂಧವೇ ಇಲ್ಲದ ಯಾವುದೋ ಕೆಲಸಗಳನ್ನೆಲ್ಲ ಮಾಡುತ್ತಾ ಬದುಕು ಸಾಗಿಸುತ್ತಿರುತ್ತಾರೆ. ಯಾವಾಗಲೋ ಇದ್ದಕ್ಕಿದ್ದ ಹಾಗೆ ಸಿನೆಮಾರಂಗ ಈತನನ್ನು ಸೆಳೆದುಬಿಡುತ್ತದೆ. ಎಲ್ಲೋ ಹೊರಟಿದ್ದ ಬದುಕಲ್ಲಿ ಇದ್ದಕ್ಕಿದ್ದ ಹಾಗೆ ಈ ತಿರುವು! ಆಗಿನ್ನೂ 40ರ ದಶಕದ ಆರಂಭ. ದೇವಾನಂದ್‌‌ಗೆ ಮೊದಲ ದಿನಗಳಲ್ಲೇ, ಅಷ್ಟು ಹೊತ್ತಿಗಾಗಲೇ established ನಟಿಯಾಗಿದ್ದ ಸುರೈಯಾ ಜೊತೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬರುತ್ತದೆ. ಎಲ್ಲವೂ ನಾಯಕಿ ಪ್ರಧಾನ ಚಿತ್ರಗಳೇ. ಅದರಲ್ಲಿ ಅಸಲಿಗೆ ನಾಯಕಿಯೇ ನಾಯಕನಾದರೂ, ದೇವಾನಂದ್ ಹೀರೋ ಅನ್ನಿಸಿಕೊಳ್ಳುತ್ತಾರೆ (ನಮ್ಮ ಕನ್ನಡ ಸಿನೆಮಾ ರಂಗದಲ್ಲಿ ಮಾಲಾಶ್ರೀ ಎದುರು ನಟಿಸುತ್ತಿದ್ದ ನಟರಿದ್ದಂತೆ!).
ಇಬ್ಬರೂ ಏಳು ಸಿನೆಮಾಗಳಲ್ಲಿ ಒಟ್ಟಿಗೇ ನಟಿಸುತ್ತಾರೆ. ಅದರಲ್ಲಿ ಮೊದಲ ಸಿನೆಮಾ ವಿದ್ಯಾ. ಅದರಲ್ಲಿ ಯಾವುದೋ ಹಾಡಿನ ಚಿತ್ರೀಕರಣವಾಗುತ್ತಿದ್ದಾಗ, ದೇವಾನಂದ್ ಮತ್ತು ಸುರೈಯಾ ಇದ್ದ ದೋಣಿ ಮಗುಚಿಕೊಂಡು ಬಿಡುತ್ತದೆ. ಆಗ ಸುರೈಯಾಳನ್ನು ದೇವ್ ರಕ್ಷಿಸುತ್ತಾರೆ ಮತ್ತು ಇಬ್ಬರಲ್ಲೂ ಪ್ರೀತಿ ಹುಟ್ಟಿಬಿಡುತ್ತದೆ. ಆ ಪ್ರೀತಿಗೆ ಆ ದೋಣಿ ಮಗುಚಿಕೊಂಡಿದ್ದು ಕಾರಣವಾಯ್ತು ಅನ್ನುವುದು ನಿಜವಾದರೂ, ಮುಂದೆ ದೇವಾನಂದ್ ಬದುಕೇ ಈ ಪ್ರೀತಿಯ ಕಾರಣದಿಂದ ಬಕ್ಕ ಬೋರಲು ಬಿದ್ದು ಬಿಡುತ್ತದೆ ಅನ್ನುವುದು ಬೇರೆಯದೇ ಕಥೆ …
ಥೇಟ್ ಸಿನೆಮಾಗಳಲ್ಲಿದ್ದಂತೆ ಸುರೈಯಾ ಅಜ್ಜಿ ಈ ಪ್ರೀತಿಯಲ್ಲಿ ಖಳನಾಯಕಿ. ಹಿಂದೂ ಧರ್ಮದವನೊಬ್ಬನ ಜೊತೆ ಮೊಮ್ಮಗಳು ಪೀತಿಯಲ್ಲಿ ಬಿದ್ದುದನ್ನು ಅವರು ತೀವ್ರವಾಗಿ ವಿರೋಧಿಸುತ್ತಾರೆ. ಅವರಿಬ್ಬರೂ ಭೇಟಿಯಾಗುವ ಅವಕಾಶಗಳನ್ನೇ ತುಂಡರಿಸುತ್ತಾ ಬರುತ್ತಾರೆ. ಆದರೂ ಪ್ರೀತಿ ಬೆಳೆದುಬಿಡುತ್ತದೆ. ಪ್ರೇಮ ಪತ್ರಗಳು ಇಬ್ಬರ ಮಧ್ಯೆ ರವಾನೆಯಾಗಿ, ಆಗೀಗ ಇಬ್ಬರ ಎದೆಯಲ್ಲೂ ಮಿಂಚು … ಗುಡುಗು! ಒಂದು ದಿನ ದೇವಾನಂದ್ ಆಗಿನ ಕಾಲಕ್ಕೇ ಮೂರು ಸಾವಿರ ಬೆಲೆ ಬಾಳುವ ಉಂಗುರವನ್ನು ತೊಡಿಸಿ ಮದುವೆಯಾಗಲು propose ಮಾಡಿದಾಗ, ಆಕೆಯ ಅಜ್ಜಿ ಸಿಟ್ಟುಗೊಂಡು, ಅವರಿಬ್ಬರ ಸಂಬಂಧ ಮುಗಿಯಲೇಬೇಕು ಅಂತ ಪಟ್ಟು ಹಿಡಿದು ಕೂತುಬಿಡುತ್ತಾರೆ. ಸುರೈಯಾಗೆ ಧೈರ್ಯ ಕಡಿಮೆಯಾಗುತ್ತದೆ ಮತ್ತು ಮನೆಯವರ ಒತ್ತಡಕ್ಕೆ ತಲೆಬಾಗಿ ಆಕೆ ಈ ಸಂಬಂಧದಿಂದ ಹಿಂಜರಿದು ಹೊರಟು ಬಿಡುತ್ತಾರೆ … ದೇವಾನಂದ್‌ಗೆ ಭಗ್ನಪ್ರೇಮದ ಚೂರುಗಳನ್ನು ಆಯುವುದಕ್ಕೆ ಬಿಟ್ಟು.

ದೇವಾನಂದ್ ಬದುಕಿನ ಕವಲಲ್ಲಿ ನಿಲ್ಲುತ್ತಾರೆ… ದುಃಖದಲ್ಲಿ ನೆಲ ಕಚ್ಚುತ್ತಾರೆ. ಸುರೈಯಾ ಇಲ್ಲದೇ ಬದುಕಿಗೇ ಅರ್ಥವಿಲ್ಲ ಅನ್ನಿಸಲು ಶುರುವಾಗುತ್ತದೆ. ಬದುಕು ತುಂಬ ದುರ್ಭರ ಅನ್ನಿಸಿ, ತೊಳಲಾಡುತ್ತಾ ವಿಷಾದ ಪರ್ವ ಬರೆಯುತ್ತಾ ಕೂತ ದಿನಗಳಲ್ಲಿ, ಅವರ ಸಹೋದರ ದೇವಾನಂದ್‌‌ರನ್ನು ಎಚ್ಚರಿಸುತ್ತಾರೆ. ಬದುಕು ಅಲ್ಲಿಗೇ ಮುಗಿಯಲಿಲ್ಲ … ಮತ್ತೆ ಯಾವುದರಲ್ಲಾದರೂ ಮನಸ್ಸನ್ನು ತೊಡಗಿಸು ಅಂತ ಹುರಿದುಂಬಿಸುತ್ತಾರೆ. ಮೊದಲಲ್ಲಿ ಕೈ ಚೆಲ್ಲಿ ಕೂತ ದೇವ್, ತುಂಬ ದಿನಗಳ ದುಃಖವೂ ಸಾಕು ಸಾಕೆನ್ನಿಸಿ ಕೊನೆಗೆ ನವಕೇತನ್ ಫಿಲ್ಮ್ಸ್ ಅನ್ನುವ ಪ್ರೊಡಕ್ಷನ್ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆ ನಂತರ ಬದುಕು ಒಂದು ಹದಕ್ಕೆ ಬರುತ್ತದೆ. ಆತ ತೀರದ passionನಿಂದ ಆ ಕೆಲಸದಲ್ಲಿ ಮುಳುಗುತ್ತಾರೆ ಮತ್ತು ನಂತರದ ದಿನಗಳಲ್ಲಿ ಬದುಕು ವಾಪಸ್ ಹಳಿಯ ಮೇಲಕ್ಕೆ ಬಂದು, ಕಲ್ಪನಾರೊಡನೆ ಪ್ರೇಮಕ್ಕೆ ಬೀಳುತ್ತಾರೆ … ಮದುವೆಯಾಗುತ್ತದೆ .. ಮಕ್ಕಳಾಗುತ್ತವೆ … ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಲೇ ಹೃದಯದಲ್ಲಿ ಚಿರ ಯುವಕನಾಗಿಯೇ ಬದುಕುತ್ತಾರೆ 2011 ರಲ್ಲಿ ಸಾಯುವವರೆಗೆ. ಸುರೈಯಾ ಅವಿವಾಹಿತಳಾಗಿಯೇ ಉಳಿದು, ಒಂಟಿಯಾಗಿಯೇ ಬದುಕಿ ಒಂಟಿಯಾಗಿಯೇ ಸಾಯುತ್ತಾರೆ …

ಎರಡು: ಇವರು ಉಷಾ. ಪಿ. ರೈ … ಕನ್ನಡದ ಖ್ಯಾತ ಬರಹಗಾರ್ತಿ. ಬದುಕು ಕೆಲವರನ್ನು ಎಷ್ಟೆಲ್ಲ ಪರೀಕ್ಷಿಸುತ್ತದಲ್ಲ ಯಾಕೆ? ಅನ್ನಿಸುತ್ತದೆ ಇವರ ಬದುಕಿನ ಬಗ್ಗೆ ತಿಳಿದಾಗ. ಬದುಕು ಬದುಕಿನಂತಾದರೂ ಇದೆ ಅನ್ನುವ ರೀತಿ ಬಾಳುತ್ತಿರುವ ದಿನಗಳಲ್ಲಿ ಉಷಾ ಅವರ ಮಗ ಮಲಯಾಳಿ ಹುಡುಗಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವ ತೀರ್ಮಾನಕ್ಕೆ ಬರುತ್ತಾರೆ. ತೀರ ತೆರೆದ ತೋಳಿನಿಂದಲ್ಲದಿದ್ದರೂ, ಮಗ ಸಂತೋಷವಾಗಿರಲಿ ಅನ್ನುವ ಒಂದೇ ದೃಷ್ಟಿಯಿಂದ ಮನೆಯವರೆಲ್ಲ ಆ ಮದುವೆಗೆ ಒಪ್ಪಿಗೆ ಕೊಡುತ್ತಾರೆ. ಪ್ರೀತಿಸಿ ಮದುವೆಯಾದವರಾದರೂ ಯಾಕೋ ಇಬ್ಬರಿಗೂ ಹೊಂದಾಣಿಕೆಯಾಗುವುದೇ ಕಷ್ಟವಾಗುತ್ತದೆ. ಎಲ್ಲರೂ ಒಟ್ಟು ಸಂಸಾರದಲ್ಲಿರುವಾಗ ಹಾಗೂ ಹೀಗೂ ಹೊಂದಿಕೊಂಡು ಒಟ್ಟಾಗಿ ಬದುಕುವ ಅವರು, ಆ ನಂತರ ವಿದೇಶದಲ್ಲಿ ಕೆಲಸಕ್ಕೆಂದು ಹೊರಡುತ್ತಾರೆ. ಅಲ್ಲಿ ಇಬ್ಬರ ನಡುವಿನ ಸಂಬಂಧ ಹದಗೆಡುತ್ತಾ ಹೋಗುತ್ತದೆ. ಒಂದು ಸಲ ಬಿರುಕು ಬಿಟ್ಟಿದ ಸಂಬಂಧ ಮತ್ತೆ ಕೂಡಿಸಲು ಸೊಸೆಯ ಊರಿಗೆ ಉಷಾ ಅವರು ತಮ್ಮ ಪತಿ, ಮಗ ಮತ್ತು ಮೊಮ್ಮಗನ ಜೊತೆ ಹೋಗುತ್ತಾರೆ. ಅಲ್ಲಿ ಮಾತುಕತೆ ಮುಗಿಸಿ ವಾಪಸ್ಸಾಗುವಾಗ ಎದುರಿಗೆ ಬರುತ್ತಿದ್ದ ಲಾರಿಯೊಂದು ಇವರ ಕಾರಿಗೆ ಅಪ್ಪಳಿಸಿ, ದೊಡ್ಡ ಅಪಘಾತವಾಗಿ ಬಿಡುತ್ತದೆ. ಆ ಅಪಘಾತದಲ್ಲಿ ಉಷಾ ತಾಯಿಯ ಮಗ ಮತ್ತು ಮೊಮ್ಮಗ ಪಾರಾಗುತ್ತಾರೆ. ಆದರೆ ಉಷಾ ಮತ್ತು ಅವರ ಪತಿಗೆ ತೀವ್ರ ಹಾನಿಯಾಗುತ್ತದೆ. ಕಣ್ಣಿನ ಎದುರು ಮುರಿದ ಮೂಳೆಗಳು ಮತ್ತು ಮುರಿದ ಬದುಕು …. ಅಷ್ಟೇ
ಆ ದಿನದಲ್ಲಿ ಕೂಡ ಸೊಸೆ ಮೊಮ್ಮಗನನ್ನು ನೋಡಿಕೊಳ್ಳುವುದಕ್ಕೂ ವಾಪಸ್ಸಾಗುವುದಿಲ್ಲ. ಉಷಾ ರೈ ಅವರ ಇಬ್ಬರು ಗಂಡು ಮಕ್ಕಳು ಮತ್ತು ಸಂಬಂಧಿಕರು ಅವರ ಸೇವೆಗೆ ನಿಲ್ಲುತ್ತಾರೆ. ಉಷಾ ಅವರು ಮತ್ತೆ ನಡೆಯಲು ಸಾಧ್ಯವಾಗುತ್ತದೋ ಇಲ್ಲವೋ ಅಂತ ಕೂಡಾ ಹೇಳಲಾಗದಷ್ಟು ಹಾನಿಗೊಳಗಾಗಿರುತ್ತಾರೆ. ಅವರ ಪತಿಗೆ ಕೂಡಾ ತುಂಬ ತೊಂದರೆಯಾಗಿ, ಅವರ ನೆನಪಿನ ಶಕ್ತಿಯಲ್ಲಿ ಕೂಡ ತುಂಬ ವ್ಯತ್ಯಾಸವಾಗಿ ಬಿಡುತ್ತದೆ. ಮಾನಸಿಕ ತೊಂದರೆಗಳೇ ಹಿಮಾಲಯ ಪರ್ವತದಷ್ಟಿದ್ದ ಬದುಕಿಗೆ ಈಗ ಈ ದೈಹಿಕ ತೊಂದರೆಯೂ ಸೇರಿ ಉಷಾ ತಾಯಿ ತುಂಬ ಮುದುಡಿ ಹೋಗುತ್ತಾರೆ. ಅರವತ್ತರ ವಯಸ್ಸಿನಲ್ಲಿ ಈ ಎಲ್ಲ ತೊಂದರೆಗಳನ್ನೂ ತಡೆದುಕೊಂಡು ಯಾಕಾದರೂ ಬದುಕಿದ್ದೇನೋ ಅನ್ನುವಂಥ ಸ್ಥಿತಿಗೆ ತಲುಪಿ ಬಿಡುತ್ತಾರೆ. ಆಗ ಬದುಕಿನಲ್ಲಿ ಒಂದು ತಿರುವು ತಂದು ತೋರಿಸುತ್ತಾರೆ ಉಷಾ ಅವರ ಮಗ …
ಕೊರಗುತ್ತಾ ಕುಳಿತ ತಾಯಿಯ ಎದುರು ಬಣ್ಣ ಮತ್ತು ಬ್ರಷ್ ಇಟ್ಟು ‘ಈಗ ನೀನು ಪೇಂಟ್ ಮಾಡು’ ಅಂತ ದುಂಬಾಲು ಬೀಳುತ್ತಾರೆ! ಉಹ್ಞೂ, ಈ ಸ್ಥಿತಿಯಲ್ಲಿ ಅವೆಲ್ಲ ನನ್ನಿಂದ ಆಗದು ಅಂತ ಬೆನ್ನು ಹಾಕಿ ನಿಲ್ಲುತ್ತಾರೆ ಉಷಾ ರೈ. ಆ ನಂತರ ಡಿಪ್ರೆಷನ್, ದೈಹಿಕ ನೋವು, ಮನಸ್ಸಿನ ಕೊರಗುಗಳು ತಡೆಯಲು ಅಸಾಧ್ಯವಾಗಿ ಬಿಡುತ್ತದೆ. ಆ ದುಃಖದ ತೀವ್ರತೆ ಹೆಚ್ಚಾಗಿ, ಆಗಿ ಕೊನೆಗೆ ಮನಸ್ಸು ಈ ನಕಾರಾತ್ಮಕತೆಯಿಂದ ಆಚೆ ಬೀಳಬೇಕು ಅಂತ ತುಡಿಯಲು ಶುರು ಮಾಡುತ್ತದೆ. ಆಗ ಮಗ ತಂದಿಟ್ಟ ಪೇಂಟ್ ಉಷಾ ರೈ ಅವರ ಬೆರಳಿಗೆ ಅಂಟಿಕೊಳ್ಳುತ್ತದೆ! ಚಿತ್ರಕಲೆಯಲ್ಲಿ ಯಾವುದೇ formal training ಪಡೆಯದ ಅವರು, ಮೊದಮೊದಲಲ್ಲಿ ಚಿತ್ರ ಬಿಡಿಸಲು ಕೂತಾಗ ಎದುರಾಗುವ ಬೆನ್ನು ನೋವು, ಕಾಲು ನೋವನ್ನು ತಡೆಯಲಾರದೇ ‘ನನ್ನಿಂದ ಇನ್ನು ಸಾಧ್ಯವಿಲ್ಲ’ ಅಂತ ಕೈ ಚೆಲ್ಲುತ್ತಾರೆ. ಆದರೆ ಮತ್ತೂ ಮನಸ್ಸಿನ ಒಳಗೊಳಗೇ ಗಟ್ಟಿಯಾಗುತ್ತಾ ಹೋಗಿ, ಕೊನೆಗೆ ಚಿತ್ರಕಲೆಯ ಕ್ಲಾಸಿಗೆ ಸೇರಿಯೇಬಿಡುತ್ತಾರೆ. ಆ ಕ್ಲಾಸ್ ನಡೆಯುವ ಜಾಗಕ್ಕೆ ತಲುಪಲು ಹತ್ತಬೇಕಾದ ಮೆಟ್ಟಿಲುಗಳನ್ನು ಅವಡುಗಚ್ಚಿ ಹತ್ತುತ್ತಾರೆ … ಜೊತೆ ಜೊತೆಗೆ ಬದುಕಿನಲ್ಲಿನ ಮೆಟ್ಟಿಲುಗಳನ್ನೂ …
2007ನೆಯ ಇಸವಿಯಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಏಕ ವ್ಯಕ್ತಿ ಚಿತ್ರ ಪ್ರದರ್ಶನ ಮಾಡುವಷ್ಟು ಬೆಳೆಯುತ್ತಾರೆ ಉಷಾ ರೈ ಅವರು! ಆ ಪ್ರದರ್ಶನಕ್ಕೆ ಬಂದವರೆಲ್ಲರೂ ‘ನೀವು ಚಿತ್ರಕಲೆಯನ್ನೂ ಬಲ್ಲಿರೆಂದು ನಮಗೆ ಯಾಕೆ ಹೇಳಲಿಲ್ಲ? ಯಾಕೆ ಮುಚ್ಚಿಟ್ಟಿದ್ದಿರಿ ಇಷ್ಟು ದಿನ’ ಅಂದಾಗ ನಕ್ಕು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ ‘ಆಕೆ ನನ್ನೊಳಗಿರುವುದು ನನಗೂ ಈಗಲೇ ಗೊತ್ತಾಗಿದ್ದು’ ಎಂದು …

***

ಬದುಕು ಎಂಥ ನಿರ್ದಾಕ್ಷಿಣ್ಯ ಒಡೆಯ ! ಯಾವ ಮುಲಾಜಿಲ್ಲದೇ ಎಲ್ಲರನ್ನೂ ತನ್ನ ಸ್ವಾಮ್ಯಕ್ಕೆ ತೆಗೆದುಕೊಳ್ಳುತ್ತದೆ. ಅದಕ್ಕೆ ಯಾವತ್ತೋ ಖುಷಿಯಾಯಿತೋ, ಅವತ್ತು ಇದ್ದಕ್ಕಿದ್ದ ಹಾಗೆ ಬದುಕಿನಲ್ಲಿ ಒಂದು ಪ್ರೀತಿ ಹುಟ್ಟು ಹಾಕಿ ಬಿಡುತ್ತದೆ. ಇನ್ಯಾವತ್ತೋ ಸಿಟ್ಟು ತಲೆಗೇರಿತೋ, ಯಾರನ್ನೋ ದೂರ ಮಾಡಿ ನೋವನ್ನು ಮಾತ್ರ ಉಳಿಸಿ ಬಿಡುತ್ತದೆ. ಯಾವುದೋ ಎಲ್ಲೋ ಸಿಕ್ಕಿತು ಅನ್ನುವಷ್ಟರಲ್ಲಿ, ಇನ್ಯಾವುದೋ ಸ್ಥಿತಿಗೆ ಒಡ್ಡಿ ಹೈರಾಣಾಗಿಸುತ್ತದೆ. ಒಂದು ದಿನ ನಿರ್ಲಿಪ್ತ ತಪಸ್ವಿಯ ಹಾಗೆ, ಮಗದೊಂದು ದಿನ ಎದೆಗಪ್ಪುವ ಅಪ್ಪನ ಹಾಗೆ, ಮತ್ತೂ ಒಂದು ದಿನ ಮುದ್ದುಗರೆಯುವ ಪ್ರೇಮಿಯ ಹಾಗೆ, ಇನ್ನೊಂದು ದಿನ ಸಾಕ್ಷಾತ್ ಯಮನ ಹಾಗೆ ಬದುಕು ಯಾಕೆ ಆಡುತ್ತದೋ?! ಎಲ್ಲ ಸರಿಯಿದೆ … ಇನ್ನು ಬದುಕು ನೇರ .. ಹಸನು ಅಂತ ಕನವರಿಸುವಷ್ಟರಲ್ಲೇ ಬದುಕಿನ ಕನಸು ಮುಗಿದು ಹೋಗಿ, ಯಾವುದೋ ಕಟು ವಾಸ್ತವದ ಅಂಚಿಗೆ ತಂದು ನಿಲ್ಲಿಸಿ ಬಿಡುತ್ತದೆ. ಬದುಕು ಕವಲು ದಾರಿಯಲ್ಲಿ ಬಂದು ನಿಂತು ಬಿಡುತ್ತದೆ. Restless ಮನಸ್ಸು ಆ ನಿಮಿಷಗಳಲ್ಲಿ ಇರುವ ದುಃಖವನ್ನೆಲ್ಲ ಗುಡ್ಡೆ ಹಾಕಿಕೊಂಡು, ಅದಕ್ಕೆ ಬೆಂಕಿ ಹಚ್ಚಿ, ಅದರ ಬಿಸಿಯಲ್ಲಿ ಮೈ ಕಾಯಿಸಿಕೊಳ್ಳಲೂ ಬಯಸಬಹುದು ಅಥವಾ ‘ಅದೆಷ್ಟು ಕಾಡುತ್ತೀ ಹಾಳು ಬದುಕೇ! ನಾನು ನಿನಗಿಂತ ಹೆಚ್ಚು adamant, ಅದೇನು ಕಿತ್ಕೋತೀಯೋ ಕಿತ್ಕೋ ಹೋಗು’ ಅನ್ನುವ ಹಾಗೆ ಸೊಂಟಕ್ಕೆ ಸೆರಗು ಬಿಗಿದು ಬದುಕಿನೊಡನೆ ಕಾದಾಟಕ್ಕೆ ನಿಲ್ಲಬಹುದು… ಹಾಗೆ ಕಾದಾಟಕ್ಕೆ ನಿಂತವರು ದೇವಾನಂದ್ ಮತ್ತು ಉಷಾ ರೈ. ಗೊಣಗಾಟದಲ್ಲಿ ಮುಗಿದು ಹೋಗಬಹುದಾಗಿದ್ದ ಬದುಕಿನೊಡನೆ ಕಾದಾಟಕ್ಕೆ ನಿಂತು, ಇನ್ಯಾವುದೋ ಮಟ್ಟಕ್ಕೆ ಕೊಂಡೊಯ್ಯುವುದು ಸಾಮಾನ್ಯದ ಮಾತಲ್ಲ… ಹಾಗೆಯೇ, ಅಸಾಧ್ಯವಾದದ್ದೂ ಅಲ್ಲ!
ದೀಪವಾರಿದ ಬದುಕಿನ ಕವಲಿನಲ್ಲಿ ನಿಂತ ನನ್ನಂಥ, ನಿಮ್ಮಂಥವರ ಎದೆಯಲ್ಲಿ, ಇಂಥವರು ಆಕಾಶಬುಟ್ಟಿಗಳಾಗಿ ತೂಗು ಬೀಳಲಿ … ಮತ್ತೆ ಬದುಕು ದೀಪಾವಳಿಯಾಗಲಿ ….
 

‍ಲೇಖಕರು G

October 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

29 ಪ್ರತಿಕ್ರಿಯೆಗಳು

  1. ಜಗದೀಶ್ ಕೊಪ್ಪ.

    ಸಹೋದರಿ, ನಿಮ್ಮ ಲೇಖನ ತುಂಬಾ ಕಾಡಿತು. ಎಷ್ಟೋ ಬಾರಿಯ ಮನದೊಳಗಿನ ಬೇಗುದಿ, ಸಂಕಟಗಳು ಅಕ್ಷರ ರೂಪಕ್ಕೆ ಇಳಿದಾಗಲೇ ಎದೆಯ ಭಾರ ಕಡಿಮೆಯಾಗುವುದು.

    ಪ್ರತಿಕ್ರಿಯೆ
  2. Shashi

    Adhbhutha, badhukina kannu theresuva lekhana, nima lekhana odhuvaga, kagadha salu nenapige baruthade,
    Divasdhio divasake, nimishadhio nimisake,
    Bhavisiyava chinthissadhe badhuka nukuthiru,
    Vivaragala jodisuva yajamana berihanu,
    Savesu nim janumavanu, Mankuthima.
    Namaskara, -Shashi.

    ಪ್ರತಿಕ್ರಿಯೆ
  3. amardeep.p.s.

    ಮೇಡಂ, ಲೇಖನ ಚೆನ್ನಾಗಿದೆ.. “ಜೀವನ… ಏರುಪೇರಿನ ಗಾಯನ ” ಹಾಡು ನೆನಪಾಯಿತು …

    ಪ್ರತಿಕ್ರಿಯೆ
  4. sujathalokesh

    ಅಯ್ಯೋ ದೇವರೇ !!!!!! ಅಳ್ತಾನೆ ಇದ್ದೀನಿ.

    ಪ್ರತಿಕ್ರಿಯೆ
  5. Swarna

    ನಿಮ್ಮ ಹಾರೈಕೆ ಫಲಿಸಲಿ
    ಕರುಣಾಳು ಬೆಳಕನ್ನು ತೋರಿಸಿದ್ದಕ್ಕಾಗಿ ವಂದನೆಗಳು

    ಪ್ರತಿಕ್ರಿಯೆ
  6. USHA RAI

    ಬಾರತಿ ಏನು ಹೇಳಲಿ ನಿಮ್ಮ ಪ್ರೀತಿಗೆ? ಶಬ್ಧಗಳು ಸಿಗುತಿಲ್ಲ. ಥ್ಯಾಂಕ್ಸ್ ಎಂದಷ್ಟೇ ಹೇಳಬಲ್ಲೆ. ನಿಮ್ಮ ಜೀವನ ದೃಷ್ಟಿ ನನಗಿಂತ ಏನೂ ಭಿನ್ನವಿಲ್ಲ.

    ಪ್ರತಿಕ್ರಿಯೆ
    • Sumangala

      ಉಷಾ ಅವರೇ… ನಿಮ್ಮ ನಗು ಇನ್ನಷ್ಟು ಸುಂದರವಾಗಿ, ಇನ್ನಷ್ಟು ಜೀವಂತವಾಗಿ ನನಗೆ ಕಾಣುತ್ತಿದೆ, ಅಲ್ಲಲ್ಲ ಸಶಬ್ದವಾಗಿ ಕೇಳುತ್ತಿದೆ, ಭಾರತಿ, ನಿಮಗೊಂದು ದೊಡ್ಡ ಧನ್ಯವಾದಗಳು. ಎಂತಹ ಸ್ಪೂರ್ತಿಯುತ ಇಬ್ಬರು ವ್ಯಕ್ತಿಗಳನ್ನು ನಮ್ಮ ಕಣ್ಣಮುಂದೆ ನಿಲ್ಲಿಸಿದ್ದೀರಿ… ನಿಮ್ಮಂತೆಯೇ ಅವರೂ ನನಗೆ ಸ್ಫೂರ್ತಿ ಹುಟ್ಟಿಸುವಂತೆ ಮಾಡಿದ್ದೀರಿ…

      ಪ್ರತಿಕ್ರಿಯೆ
  7. sindhu

    ಭಾ…
    ಪ್ರೀತಿ ಮತ್ತು ದೀಪಾಆಆಆಆಆಆವಳಿ…ಯ ಶುಭಾಶಯಗಳೂ
    ನಿನಗೆ ಮತ್ತು ಉಷಾ ಅವರಿಗೆ.

    ಪ್ರತಿಕ್ರಿಯೆ
  8. veena shivanna

    ಬದುಕು ಎಂಥ ನಿರ್ದಾಕ್ಷಿಣ್ಯ ಒಡೆಯ !ಒಂದು ದಿನ ನಿರ್ಲಿಪ್ತ ತಪಸ್ವಿಯ ಹಾಗೆ, ಮಗದೊಂದು ದಿನ ಎದೆಗಪ್ಪುವ ಅಪ್ಪನ ಹಾಗೆ, ಮತ್ತೂ ಒಂದು ದಿನ ಮುದ್ದುಗರೆಯುವ ಪ್ರೇಮಿಯ ಹಾಗೆ, ಇನ್ನೊಂದು ದಿನ ಸಾಕ್ಷಾತ್ ಯಮನ ಹಾಗೆ ಬದುಕು ಯಾಕೆ ಆಡುತ್ತದೋ?!
    ಈ ಸಾಲುಗಳು ಬಹಳ ಇಹ್ಸ್ತ ಆಯ್ತು ಭಾರತಿ. ಉಷಾ ಮೇಡಂ ಅವರ ಜೀವನಗಾಥೆ ಒಂದು ಅದ್ಭುತ, ಪ್ರೇರಣೆ.. ಎಂಥ ಜೀವನ ಪ್ರೀತಿ, ಅವರ ನಗು ಆಹಾ..!

    ಪ್ರತಿಕ್ರಿಯೆ
  9. Shwetha Hosabale

    ಓದ್ತಿದ್ದ ಹಾಗೆ ಆರಂಭ ಇಷ್ಟ ಆಯ್ತು…ಹಾಗೇ ಓದ್ತಾ ಓದ್ತಾ ಎಲ್ಲವೂ…ಕೊನೆಯ ಭಾಗ, ಸಾಲಂತೂ ತುಂಬಾ ಚೆನ್ನಾಗಿದೆ. ಸಣ್ಣ ಸಣ್ಣ ಕಷ್ಟ ಆತಂಕಕ್ಕೇ ಕಂಗಾಲಾಗುವವರಿಗೆ ತುಂಬಾನೇ ಸ್ಫೂರ್ತಿ, ಉತ್ಸಾಹ ಕೊಡುವಂಥಹದ್ದು. Very nice and Thanks:)

    ಪ್ರತಿಕ್ರಿಯೆ
  10. Vidyashankar H

    ಭಾರತಿ, ಎಂದಿನಂತೆ ನಿಮ್ಮ ಬರಹ ಆಪ್ತ. ನಿಮ್ಮಲ್ಲಿ ಮತ್ತು ನಿಮ್ಮ ಬರಹದಲ್ಲಿ ಜಿಗುಟು ಧನನಾತ್ಮ ಚಿಂತನೆ, ಎಂದಿನಂತೆ…

    ಪ್ರತಿಕ್ರಿಯೆ
  11. Anil Talikoti

    ಶಬ್ದಗಳೆ ಸಿಗುತ್ತಿಲ್ಲಾ. ಅಸಲಿಗೆ ಭಾಷೆ, ಬರಹ ಮನದಾಳ ಅರುಹಲು ಎಷ್ಟು ಅಸಮರ್ಥ ಎನಿಸುತ್ತದೆ. ಕೆಲವರಿಗೆ ಕಷ್ಟಗಳು ಬಾರದೆಯೂ ಬದುಕಿನ ಒಡೆತನದ ಅರಿವಾಗಬಹುದೋ ಏನೋ ಇನ್ನೂ ಅನೇಕರಿಗೆ ಅರಿವಾಗುವ ಅಗತ್ಯವೂ ಇಲ್ಲವೇನೋ -ಹುಟ್ಟಿನಿಂದ ಕೊನೆತನಕ ಪಡಕೊಂಡು ಬಂದವರು ಸಾಕಷ್ಟಿದ್ದಾರೇನೋ. ಬದುಕಿನ ಈ ಅಂಕು-ಡೊಂಕುಗಳನ್ನು ಡೂಡಲ್ಲಿನಲ್ಲಿ ಬರೆದು ಅಳಕಿಸುವಂತಿದ್ದರೆ ಕಲಿಯುವದಕ್ಕೆ ಏನೂ ಇರುತ್ತಿರಲಿಲ್ಲವೇನೋ? ಕವಲು ದಾರಿಯಿಂದ ಬಯಲು ಹುಡಕಿಕೊಂಡವರಿಗೆಲ್ಲಾ ನನ್ನ ದೊಡ್ಡ ಸಲಾಮು -ಇದಕ್ಕಿಂತ ದೊಡ್ಡ ಕಲಿಕೆ ಪ್ರಾಯಶ ಇನ್ನೊಂದಿಲ್ಲ. ಹಣತೆಯ ಶಾಂತ ಬೆಳಕು ಎದೆ ಕೊರೆವ ಕರಾಳತೆಯ ಕಮ್ಮಿಯಾಗಿಸಲಿ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  12. ಅಪರ್ಣ ರಾವ್

    ಉಷಾ ರೈ ಅವರು ಬದುಕಿನೊಂದಿಗೆ ಹೋರಾಡಿ ತನ್ನನ್ನು ತಾನು ಮೇಲೆತ್ತಿಕೊಂಡ ಪರಿ ಓದಿ ಕಣ್ಣು ಒದ್ದೆ ..ನಮ್ಮ ಮಧ್ಯೆ ಅವರೂ ಇದ್ದಾರೆ ಎನ್ನುವ ಧನ್ಯತಾ ಭಾವ.. ನಿನ್ನ ಲೇಖನ ಬಹಳ ಪ್ರಸ್ತುತವಾಗಿದೆ.

    ಪ್ರತಿಕ್ರಿಯೆ
  13. bharathi b v

    ಯಾವ ಯಾವುದೋ ಸಂಕಟದಲ್ಲಿ ಮುಳುಗಿ ಈ ಕಾಲಂ ನಿಲ್ಲಿಸಿಯೇ ಬಿಡುವ ಸ್ಥಿತಿ ತಲುಪಿದ್ದ ನಾನು , ಮತ್ತೆ ಹೇಗೋ ಬರಹದಲ್ಲಿ ಮನಸನ್ನು ತೊಡಗಿಸಿಕೊಂಡೆ … ಈ ನಿಮ್ಮ ಪ್ರೀತಿ ಕಂಡು ಸಧ್ಯ ನಿಲ್ಲಿಸಲಿಲ್ಲವಲ್ಲ ಅಂತ ಸಮಾಧಾನ ..ನೆಮ್ಮದಿ. ಎಲ್ಲರಿಗೂ ಥ್ಯಾಂಕ್ಸ್ … ಸದಾ ಪ್ರೀತಿಯಿರಲಿ …

    ಪ್ರತಿಕ್ರಿಯೆ
    • Aravind

      Ayyayyo… ಈ ಕಾಲಂ ನಿಲ್ಲಿಸಿಯೇ ಬಿಡುವ ಸ್ಥಿತಿ ತಲುಪಿದ್ದ ನಾನು… Why throwing a bomb on us Bharathi Madam. You are a wonderful writer. You don’t know how much difference your write-ups bring to our otherwise dull life. Don’t stop writing please.

      ಪ್ರತಿಕ್ರಿಯೆ
  14. Prabhakar Nimbargi

    kattale aayitu anta chintisutta kulitare, nakshatragalannu noduva bhagya kaledukollutteve. Prati ratriya nantara belagu agale bekalla. Tumba ishtavayitu. Intahadannu odalu anuvu maadikotiddakke tumba thanks.

    ಪ್ರತಿಕ್ರಿಯೆ
  15. mmshaik

    tumba chendada baraha..madam..kayya odida haaganisitu..!!!!deepavaLiya shubhashayagaLu.

    ಪ್ರತಿಕ್ರಿಯೆ
  16. ಶಮ, ನಂದಿಬೆಟ್ಟ

    “‘ಅದೆಷ್ಟು ಕಾಡುತ್ತೀ ಹಾಳು ಬದುಕೇ! ನಾನು ನಿನಗಿಂತ ಹೆಚ್ಚು adamant, ಅದೇನು ಕಿತ್ಕೋತೀಯೋ ಕಿತ್ಕೋ ಹೋಗು’ ಅನ್ನುವ ಹಾಗೆ ಸೊಂಟಕ್ಕೆ ಸೆರಗು ಬಿಗಿದು ಬದುಕಿನೊಡನೆ ಕಾದಾಟಕ್ಕೆ ನಿಲ್ಲಬಹುದು…” Sooooooooooooooper….
    ಭಾ… ದೇವಾನಂದ್ ನ್ನು ಬಲ್ಲವಳಲ್ಲ ನಾನು. ಉಷಾ ತಾಯಿಯನ್ನು ಬಲ್ಲೆ. ಆ ನಿರ್ಮಮ ಮಮತೆಯ ಮುಗ್ಧ ಬೆಳ್ಳನೆ ನಗುವಿನ ಹಿಂದಿನ ಈ ನೋವು ಗೊತ್ತಿರಲಿಲ್ಲ ನೋಡು. ಜೀವನ ಪ್ರೀತಿಯನ್ನು ಹಂಚುತ್ತಲೇ ಇರುವ ಇಂಥ ಜೀವಗಳು ನಮ್ಮ ನಡುವಿರುವುದು ನಮ್ಮ ಜೀವದ ಅದೃಷ್ಟ ಕಣೇ…ಇಂಥವರ ಪಾದಕ್ಕೆ ನಮನ… ಮತ್ತು ಇಂಥವರನ್ನ ನಮ್ಮ ವರೆಗೂ ತಲುಪಿಸಿದ ನಿನ್ನ ಬಹರಗಳಿಗೂ
    ಮತ್ತೇ.. ಅದ್ಹೆಂಗೆ ಕಲಂ ನಿಲ್ಲಿಸಿಬಿಡ್ತೀಯೋ ನೋಡ್ತೀನಿ… ಹುಷಾರ್… ನಾನು ಆ ಆಟೋದವನ ಹಾಗಲ್ಲ; ಹುಡುಕಿಕೊಂಡು ಬಂದು ಹೊಡಿಯೋಳೇ…

    ಪ್ರತಿಕ್ರಿಯೆ
  17. Rohith

    Excellent Madam!! very inspiring!! 🙂
    ಕಠೋರ ವಿಧಿಯ ಆಟದಿಂದ ನಿರಾಸೆಯ, ದು:ಖದ ಗವಿಯೊಳಗೆ, ಆ ಗವಿಯ ಕತ್ತಲೆಯೊಳಗೆ ಕಳೆದುಹೋಗುತ್ತಿದ್ದವರು, ಛಲದಿಂದ ತಮ್ಮ ಬದುಕನ್ನೇ ಬೆಳಗಿಸಿಕೊಂಡು, ಹಲವರಿಗೆ ದಾರಿದೀಪವಾದಂತ ಕಥೆಯನ್ನು ನಿರೂಪಿಸಿರುವ ಈ ಬರಹ, ‘ಅವಧಿ’ಯ ಓದುಗರಿಗೆಲ್ಲ ದೀಪಾವಳಿ ಹಬ್ಬಕ್ಕೆ ಉತ್ತಮ ಉಡುಗೊರೆ… 🙂
    ದೀಪಾವಳಿಯ ಶುಭಾಶಯಗಳು.. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: