ತುಂಬ ವರ್ಷಗಳ ಹಿಂದಿನ ಕಥೆ. ಸ್ವಂತ ಮನೆ ಮಾಡಿಕೊಂಡಿಲ್ಲದ ನಾವು ಏಳು ಮನೆ ಚೀಲಿಗಳ ಹಾಗೆ ಸದಾ ಮನೆ ಬದಲಿಸುತ್ತಾ ಇರಬೇಕಾಗುತ್ತಿತ್ತು. BJP ಪಕ್ಷದ ಸರಕಾರ ಅಧಿಕಾರದಲ್ಲಿರುವಾಗ ನಾಲ್ಕು ನಾಲ್ಕು ದಿನಕ್ಕೆ ಒಬ್ಬರು ಹೊಸ ಮುಖ್ಯಮಂತ್ರಿಗಳಾಗಿ ಮತ್ತು ಎಲ್ಲ ಮಂತ್ರಿಗಳ ಖಾತೆಗಳು ಬದಲಾವಣೆಯಾಗಿ ನಮ್ಮ ನೆನಪಿನ ಶಕ್ತಿಗೆ ಸವಾಲಾಗುವಂತ ಪರಿಸ್ಥಿತಿ ಎದುರಾಗಿತ್ತಲ್ಲ ಹಾಗೆಯೇ ಆಗಿತ್ತು ನನ್ನ ಈ ಮನೆ ಬದಲಾವಣೆಯ ಕಥೆ ಕೂಡ.
ಒಂದು ಹೊಸ ಮನೆಗೆ ಹೋಗಿ ಅಕ್ಕ ಪಕ್ಕದವರು ಒಗ್ಗಿದರು ಅನ್ನುವಷ್ಟರಲ್ಲಿ ಆ ಮನೆಯಿಂದ ಎತ್ತಂಗಡಿ. ಮತ್ತೆ ಹೊಸ ಮನೆಗೆ ಹೋಗಿ ಹೊಸ ಜನರ ಜೊತೆ ಹೊಂದಿಕೊಳ್ಳುವ ಕೆಲಸ ಎದುರಾಗುತ್ತಿತ್ತು. ಕೊನೆಕೊನೆಗೆ ನಾನು ಬೇಸತ್ತು ಹೋಗಿ ಮತ್ತೊಂದು ಹೊಸ ಮನೆಗೆ ಶಿಫ್ಟ್ ಆದ ಮೇಲೆ ಮನುಷ್ಯರ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಲೇ ಬಾರದು ಅಂತ ತೀರ್ಮಾನಿಸಿ ಗೋಡೆಯ ಜೊತೆ, ಗಿಡಗಳ ಜೊತೆ, ದೀಪದ ಜೊತೆ, ಮೆಟ್ಟಿಲ ಜೊತೆಯೆಲ್ಲ ಮಾತಾಡಲು ಶುರುಮಾಡಿಬಿಟ್ಟು ನೋಡುವವರ ಕಣ್ಣಿಗೆ ಅರೆ ಹುಚ್ಚಿಯ ಥರ ಕಾಣಿಸಲು ಶುರು ಮಾಡಿದ್ದೆ.
ಅಂಥ ದಿನಗಳಲ್ಲಿ ಒಂದು ದಿನ ಆ ಹೆಂಗಸು ನನಗೆ ಎದುರಾಗಿದ್ದು. ಮಗನನ್ನು ಸ್ಕೂಲಿಗೆ ಬಿಟ್ಟು ಬಂದು ಗೇಟು ತೆಗೆಯುತ್ತಿರಬೇಕಾದರೆ ಕಾಲೆಳೆದುಕೊಂಡು ಹೋಗುತ್ತಿದ್ದ ಆಕೆ ಎದುರಾಗಿದ್ದರು. ಇಡೀ ಜಗತ್ತಿನ ಭಾರವನ್ನೆಲ್ಲ ತಲೆಯ ಮೇಲೆ ಮತ್ತು ಹೆಗಲ ಮೇಲೆ ಹೊತ್ತವರಂತೆ ಅಲ್ಲಾಡುತ್ತಾ ನಡೆಯುತ್ತಿದ್ದವರು ನನ್ನನ್ನು ನೋಡಿ ಒಂದು ಸಣ್ಣ ನಗು ನಕ್ಕರು. ನಾನೂ ಪ್ರತಿ ನಕ್ಕೆ.
ವ್ಯಾನಿಟಿ ಬ್ಯಾಗ್ ಒಂದನ್ನು ನೇತು ಹಾಕಿಕೊಂಡು, ಇಲಿಯ ಬಾಲದ ಹಾಗಿದ್ದ ಜಡೆಯನ್ನು ಬೇಕಾಬಿಟ್ಟಿ ಬಾಚಿಕೊಂಡು, ಪಾದ ಪೂರಾ ಕಾಣುವ ಹಾಗೆ ಮೇಲಕ್ಕೆ ಸೀರೆಯುಟ್ಟು ಹೋಗುತ್ತಿದ್ದ ಅವರು ತುಂಬ ಆಸಕ್ತಿಯನ್ನೇನೂ ಹುಟ್ಟಿಸದಿದ್ದರೂ ಅವರ ನಗು ಒಂಥರಾ ಚೆನ್ನಾಗಿತ್ತು ಮೃದುವಾಗಿ … ಹೂವಿನ ಹಾಗೆ. ‘ಪರವಾಗಿಲ್ಲ, ಇವರ ಜೊತೆ ಸ್ನೇಹ ಬೆಳೆಸಬಹುದು’ ಅನ್ನುವ ಭಾವನೆ ಬಂತು ಆ ಕ್ಷಣಕ್ಕೆ.
ಅವರ ಮನೆ ನನ್ನ ಮನೆಯ ಎದುರೇ ಇತ್ತು. ನಂತರದ ದಿನಗಳಲ್ಲಿ ಆಕೆ ಒಂದು ಸ್ಕೂಲಿನಲ್ಲಿ ಟೀಚರ್ ಅನ್ನುವ ವಿಷಯ ತಿಳಿಯಿತು. ಬೆಳಿಗ್ಗೆ ಕಾಲೆಳೆದುಕೊಂಡು ಹೋಗುತ್ತಿದ್ದ ಅವರು, ಸಂಜೆ ಬರುವಾಗ ಇನ್ನಿಷ್ಟು ಸೋತ ಮುಖದಲ್ಲಿ ಬರುತ್ತಿದ್ದರು. ಆಕೆಗೂ ನಿಂತು ಮಾತಾಡಲು ತುಂಬ ಬಿಡುವು ಅಂತಲೇನೂ ಇರಲಿಲ್ಲ. ನನ್ನ ಮಗ ಕೂಡಾ ಸಣ್ಣವನಾಗಿದ್ದರಿಂದ ಅವನ ಹಿಂದೆ ಮುಂದೆ ಓಡಾಡುತ್ತ, ಊಟ ತುರುಕುತ್ತ, ಓದಿಸಲು ಪ್ರಾಣ ಹಿಂಡುತ್ತ ಬದುಕುತ್ತಿದ್ದವಳಿಗೆ ತುಂಬ ಬಿಡುವಿನ ಸಮಯವೇನೂ ಇರಲಿಲ್ಲ. ಆದರೂ ಆಗೀಗ ಇಬ್ಬರೂ ಒಂದೈದು ನಿಮಿಷ ಮಾತಾಡಲು ಶುರು ಹಚ್ಚಿಕೊಂಡೆವು.
ಆಕಾಶ ತಲೆ ಮೇಲೆ ಕಳಚಿ ಬೀಳುವಂತದ್ದು ಏನಾಗಿರಬಹುದು ಅಂತ ಕುತೂಹಲ ನನಗೆ. ಅವರ ಮನೆಯಲ್ಲಿದ್ದುದು ಗಂಡ, ಹೆಂಡತಿ, ಮಗ, ಮಗಳು. ಗಂಡ ರಿಟೈರ್ ಆಗಿದ್ದರು. ಆದರೆ ಸಿಕ್ಕಾಪಟ್ಟೆ ಕೆಲಸದ ಆಸಾಮಿ. ಮಳೆ ಬಂದರೆ ಓಡಿ ಹೋಗಿ ಮನೆಯ ಟೆರೇಸ್ ಮೇಲೆ ಒಣ ಹಾಕಿದ್ದ ಬಟ್ಟೆಯನ್ನು ತರುವುದನ್ನು ಕಂಡು ‘ಇದ್ದರೆ ಇಂಥ ಗಂಡ ಇರಬೇಕು’ ಅನ್ನುವ ಅವಾರ್ಡನ್ನೂ ಕೊಟ್ಟುಬಿಟ್ಟಿದ್ದೆ! ತರಕಾರಿ ತರುವುದು, ಅಂಗಡಿಯಿಂದ ಸಾಮಾನು ತರುವುದು, ಬಟ್ಟೆ ದೋಭಿಗೆ ಕೊಡುವುದು ಎಲ್ಲ ಆ ಗಂಡನದ್ದೇ ಕೆಲಸ. ನಮ್ಮ ಮನೆಯಲ್ಲಿ ಆಗ ‘one woman army’ ಯ ಹಾಗೆ ಎಲ್ಲ ಕೆಲಸ ನಾನೇ ಮಾಡುತ್ತಿದ್ದುದರಿಂದ ಈ ಟೀಚರಮ್ಮನ ಸಂಸಾರ ನನಗಂತೂ ಆದರ್ಶ ಸಂಸಾರದ ಥರವೇ ಕಾಣಿಸುತ್ತಿತ್ತು. ಮಗಳು ಘನ ಘೋರ ಗಂಭೀರೆ. ನೀಟಾಗಿ ಕಾಲೇಜಿಗೆ ಹೋಗುತ್ತಿದ್ದಳು, ಬರುತ್ತಿದ್ದಳು. ಮಗ ಯಾವುದೋ ಡಿಪ್ಲೊಮೊ ಮಾಡುತ್ತಿದ್ದಾನೆ ಅಂತ ಹೇಳಿದರು. ಸರಿ, ಇನ್ನೇನು ಇವರ ಪ್ರಾಬ್ಲಮ್ಮು ಅಂತ ನನ್ನ ಯೋಚನೆ. ಬಾಯಿಬಿಟ್ಟು ಕೇಳುವ ಅಭ್ಯಾಸ ನನಗೆ ಇರಲಿಲ್ಲ. ಮೊದಲಲ್ಲಿ ಅವರೂ ಏನೂ ಹೇಳಿಕೊಳ್ಳಲು ಹೋಗಲಿಲ್ಲ. ಆಮೇಲಾಮೇಲೆ ದಿನ ಕಳೆದಂತೆ ಅವರಿಗೆ ನನ್ನ ಮೇಲೆ ನಂಬಿಕೆ ಬಂದಿರಬೇಕು. ಆಗೀಗ ಮನೆಯ ವಿಷಯ ಹೇಳಿಕೊಳ್ಳಲು ಶುರು ಮಾಡಿದರು. ಹೊರನೋಟಕ್ಕೆ ಎಲ್ಲ ಸರಿ ಇದೆ ಅನ್ನುವಂತ ಸಂಸಾರಗಳಲ್ಲಿನ ಕೆಲವು ಸೂಕ್ಷ್ಮಗಳು ಅನುಭವಿಸುವವರಿಗೆ ಮಾತ್ರ ಗೊತ್ತಾಗುತ್ತದೆ …
ಅವರ ಮನೆಯಲ್ಲಿ ಎಲ್ಲ ಸಂಬಂಧಗಳನ್ನೂ ಕೂಡಿಸುವ ಏಕೈಕ ತಂತು ಆಕೆಯೇ ಆಗಿದ್ದರು. ಆಕೆಯ ಗಂಡನಿಗೆ ಮಕ್ಕಳ ಮೇಲೆ ಬಂಧವೇ ಇರಲಿಲ್ಲ. ಮಗಳನ್ನು ಕಂಡರೆ atleast ಸಹನೆಯಿಂದ ಮಾತಾದರೂ ಆಡುತ್ತಿದ್ದರು. ಮಗನನ್ನು ಕಂಡರಂತೂ ಉರಿದು ಬೀಳುತ್ತಿದ್ದರಂತೆ. ಅಪ್ಪ-ಮಗ ದ್ವೇಷಿಗಳ ಹಾಗೆ ಒಬ್ಬರೊಬ್ಬರ ಜೊತೆ ಮಾತೇ ಇಲ್ಲದೇ ಬದುಕುತ್ತಿದ್ದರಂತೆ ಒಂದೇ ಮನೆಯಲ್ಲಿ. ಮಗಳು ತುಂಬ ಬುದ್ದಿವಂತೆಯಾಗಿದ್ದಳು. ಅವಳ ಪಾಡಿಗೆ ಅವಳ ಓದು ನಡೆಯುತ್ತಿತ್ತು. ಆದರೆ ಮಗ ಓದಿನ ವಿಷಯದಲ್ಲಿ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದ. ಏನನ್ನೋ ಓದಲು ಹೋಗಿ, ಸಾಧ್ಯವಾಗದೇ, ಆ ಕೋರ್ಸ್ ಬಿಟ್ಟು ಮತ್ತೆ ಯಾವುದೋ ಡಿಪ್ಲೊಮೊ ಸೇರಿ, ಅದರಲ್ಲೂ ಆಗೀಗ ಫೇಲ್ ಆಗುತ್ತಾ, ಕುಂಟುತ್ತಾ ಓದುತ್ತಿದ್ದನಂತೆ. ‘ಅವನು ಸ್ವಭಾವತಃ ಬುದ್ದಿವಂತ. ಅವನ ಫ್ರೆಂಡ್ಸ್ ಸರಿ ಇಲ್ಲ. ಅವರಿಂದ ಇವನು ಒಂದಿಷ್ಟು ಹಾಳು ಬಿದ್ದ’ ಅಂತ ಜಗತ್ತಿನ ಎಲ್ಲ ಅಮ್ಮಂದಿರ same old complaint ಅನ್ನು ಹೇಳಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು ಆಕೆ.

ಅವನ ಅಪ್ಪ ಯಥಾಪ್ರಕಾರ ನಮ್ಮ ಕಾಲದಲ್ಲಿ ನಮಗೆ ಹಾಕ್ಕೊಳಕ್ಕೆ ಚಪ್ಪಲಿ ಗತಿ ಇರ್ಲಿಲ್ಲ, ತಿನ್ನಕ್ಕೆ ಊಟ ಗತಿ ಇರ್ಲಿಲ್ಲ … ನಾವು ಹೇಗೆ ಓದಿದೆವು ಮತ್ತು ನಿಮಗೆ ಏನೆಲ್ಲ ಅನುಕೂಲ ಮಾಡಿಕೊಟ್ಟರೂ ನೆಟ್ಟಗೆ ಓದದೇ ಕುಲಗೆಟ್ಟು ಹೋದೆ ಅಂತ ಮಗನನ್ನು ಬಯ್ಯುವುದು ಮತ್ತು ಮಗ ದಿನಾ ಕೇಳಿದ್ದೇ ಕೇಳಿ ಕೇಳಿ, ರೋಸಿ ಹೋಗಿ ಮೊಂಡು ಬಿದ್ದು ಹೋಗಿದ್ದು ಇಡೀ ವಿಷಯದ one liner story. ಮೊದಲಲ್ಲಿ ಒಂದಿಷ್ಟು ಎದುರು ವಾದಿಸುತ್ತಿದ್ದ ಅವನು ಈಗೀಗ ಅದನ್ನೂ ನಿಲ್ಲಿಸಿಬಿಟ್ಟು, ಅಪ್ಪ ಮಾತಾಡುತ್ತಿದ್ದರೆ ತನಗಲ್ಲವೇ ಅಲ್ಲವೇನೋ ಅನ್ನುವ ಹಾಗೆ ignore ಮಾಡಿ, ಜಾಗ ಖಾಲಿ ಮಾಡುತ್ತಾನಂತೆ. ಅವನ ಅಪ್ಪನಿಗೆ ಅದು ಇನ್ನಿಷ್ಟು ಸಿಟ್ಟು ಬರಿಸಿ, ಮನೆ ಸದಾಕಾಲ ಸಿಡಿಯಲು ಸಿದ್ಧವಾಗಿರುವ ಅಗ್ನಿಪರ್ವತದ ಹಾಗೆ ಇರುತ್ತದೆ ಅಂತ ಈಕೆಗೆ ಸಂಕಟ.
ಅವರಿಗೆ ಮಗನ ಮೇಲೆ ಮೋಹ. ಅಪ್ಪ ಹೇಳುವುದರಲ್ಲೂ ತಪ್ಪಿಲ್ಲ ಅನ್ನುವ ವಿವೇಚನೆ. ಒಬ್ಬರನ್ನು ಸಪೋರ್ಟ್ ಮಾಡಿದರೆ ಇನ್ನೊಬ್ಬರಿಗೆ ಉರಿ. ಹಾಗಾಗಿ ಯಾರನ್ನೂ ಸಪೋರ್ಟ್ ಮಾಡದೇ ಒಳಗೊಳಗೇ ಎಲ್ಲ ಸಂಬಂಧಗಳ ಮಧ್ಯೆಯೂ ತೇಪೆ ಹಾಕಿ, ಹಾಕಿ ಆಕೆ ಸುಸ್ತು ಹೊಡೆದು ಹೋಗಿದ್ದರು. ಅಷ್ಟು ಜಾಣೆಯಾಗಿದ್ದ ಮಗಳ ಹಾಗೆ ಮಗ ಇರಬಾರದಿತ್ತಾ ಅನ್ನುವ ಹಳಹಳಿ ಆಗೀಗ ಮಾತಿನಲ್ಲಿ ಇಣುಕುತ್ತಿತ್ತು. ಮನಸ್ಸಿನಲ್ಲಿ ಒಬ್ಬರೇ ಅನುಭವಿಸಿ ಸಾಕಾದಾಗ ಈ ರೀತಿಯ ಸಣ್ಣ ಪುಟ್ಟ ಅಸಹನೆ, ದೊಡ್ಡ ಸಿಟ್ಟು ಇವನ್ನೆಲ್ಲ ನನ್ನ ಜೊತೆ ಹಂಚಿಕೊಳ್ಳಲು ಶುರು ಮಾಡಿದರು. ನಾನೂ ನನಗೆ ತೋಚಿದಷ್ಟು ಸಮಾಧಾನ ಹೇಳುತ್ತಿದ್ದೆ.
ಇದ್ದಕ್ಕಿದ್ದ ಹಾಗೆ ಒಂದು ದಿನ ಇದ್ದಕ್ಕಿದ್ದ ಹಾಗೆ ‘ತಾನು ಹೋದ ಮೇಲೆ ಸಂಸಾರದ ಗತಿಯೇನು’ ಅನ್ನುವ ಯೋಚನೆ ಶುರುವಾಗಿ ಬಿಟ್ಟಿತು. ಬಹುಶಃ ಅದು ಮನಸ್ಸಿನಲ್ಲಿ ತುಂಬ ದಿನದಿಂದ ಕಾಡುತ್ತಿದ್ದಿರಬೇಕು. ಈಗ ಹೇಳಿಕೊಳ್ಳಲು ನಾನು ಸಿಕ್ಕ ಮೇಲೆ ಪ್ರಕಟವಾಗಿರಬೇಕು ಅನ್ನಿಸುತ್ತದೆ. ತಾನು ಸತ್ತು ಹೋದರೆ ಸಂಸಾರ ಮೂರು ಪಾಲಾಗಿ ಹೋಗುತ್ತದೆ ಅನ್ನುವ ಆತಂಕದಲ್ಲಿ ಅವರಿಗೆ ದುಃಖ ಬಂದುಬಿಡುತ್ತಿತ್ತು. ನಾನು ಒಂದೊಂದು ಸಲ ಛೇಡಿಸುವ ಹಾಗೆ ‘ನಾವೇ ಸತ್ತೋದ ಮೇಲೆ ಉಳಿದದ್ದು ಏನಾಗತ್ತೆ ಅಂತ ಯಾಕೆ ಯೋಚಿಸ್ಬೇಕು … ಹೇಗೋ ಆಗತ್ತೆ ಬಿಡಿ’ ಅನ್ನುತ್ತಿದ್ದೆ. ಸಮಸ್ಯೆಯ ಹೊರಗೆ ನಿಂತ ನಾನು ಅದು ಸಮಸ್ಯೆಯೇ ಅಲ್ಲ ಅನ್ನುವ ಹಾಗೆ ತೇಲಿಸಿದರೂ, ಅಲ್ಲಿದ್ದು ಅದನ್ನು ಅನುಭವಿಸುವ ಆಕೆಯ ಮನಃಸ್ಥಿತಿ ಅರ್ಥವಾಗದ್ದೇನೂ ಆಗಿರಲಿಲ್ಲ. ಅಲ್ಲಿಂದ ಮುಂದೆ ಆ ಕೊರಗು ಅವರನ್ನು ಸದಾ ಕಾಡತೊಡಗಿತು.
ವರ್ಷಗಳು ಕಳೆದವು. ಮಗಳ ಡಿಗ್ರಿ ಮುಗಿಯಿತು. ಕೆಲಸಕ್ಕೆ ಸೇರಿಕೊಂಡಳು. ಮಗ ಕುಂಟುತ್ತಾ ಡಿಪ್ಲೊಮೊ ಮುಗಿಸಿದ. ನಡೆದುಕೊಂಡು ಓಡಾಡುತ್ತಿದ್ದವನ ಓಡಾಟಕ್ಕೆ ಬೈಕು ಬಂದಿತ್ತು. ಅದು ಅವನ ಅಮ್ಮನ ಕೃಪಾಕಟಾಕ್ಷದಿಂದ ಅಂತ ಹೇಳದೆಯೂ ನಿಮಗೆ ಗೊತ್ತಾಗುವಷ್ಟು ಬುದ್ದಿವಂತರು ಈ ಓದುಗರು ಅನ್ನುವುದು ನನಗೆ ಗೊತ್ತು. ಈ ಮಧ್ಯೆ ಅದೇನೋ ಬಿಸಿನೆಸ್ ಮಾಡ್ತೀನಿ ಅಂತ ಹಠಕ್ಕೆ ಬಿದ್ದ. ಅವನ ಅಪ್ಪ ನಿರಾಕರಿಸಿದರು. ಮಗ ಅಮ್ಮನ ಬೆನ್ನು ಹತ್ತಿದ. ಅಮ್ಮ ಗಂಡನ ಹತ್ತಿರ ಕಾದಾಡಿ, ಅಂತೂ ಇಂತೂ ಅವನಿಗೆ ಒಂದಿಷ್ಟು ದುಡ್ಡು ಕೊಡಿಸಿದರು. ‘ಎಲ್ಲ ಗುಡಿಸಿ ಮುಂಡಾ ಮೋಚ್ತಾನೆ’ ಅಂತ ಗಂಡ ನರೇಂದ್ರ ಶರ್ಮನ ಥರ ಭವಿಷ್ಯವಾಣಿ ನುಡಿದೇ ಹಣ ಕೊಟ್ಟರಂತೆ. ‘ಒಂದು ಒಳ್ಳೆ ಮಾತು ಬಾಯಿಂದ ಬರಲಿಲ್ಲ ನೋಡಿ’ ಅಂತ ಟೀಚರಮ್ಮ ದುಃಖಿಸಿದರು. ಬೆಳಗ್ಗೆದ್ದು ಬೈಕಿನಲ್ಲಿ ಹೋದ, ಬಂದ, ಹೋದ, ಬಂದ. ಎಲ್ಲ ದುಡ್ಡು ನಾಶ ಮಾಡ್ತಾನೆ ಅಂತ ಅವನ ಅಪ್ಪ ಟೀಚರಮ್ಮನ ಎದುರು ಮಗನನ್ನು ಬಾಯಿಗೆ ಬಂದ ಹಾಗೆ ಬಯ್ಯಲು ಶುರು ಮಾಡಿದ್ದರಂತೆ. ಟೀಚರಮ್ಮ ಈ ಕುದಿತ ಎಲ್ಲ ಅನುಭವಿಸಿ, ಅನುಭವಿಸಿ ಸುಸ್ತಾದರು.
ಹೀಗಿರುವಾಗ ಅವತ್ತೊಂದು ದಿನ ಬೆಳಿಗ್ಗೆ ಎದ್ದಾಗ ನೋಡಿದರೆ ಅವರ ಮನೆಯ ಮುಂದೆ ತುಂಬ ಜನ ಮತ್ತು ಬೆಂಕಿ! ಯಾರಿಗೇನಾಯ್ತೋ ಅಂತ ವಿಚಾರಿಸಿದರೆ ಟೀಚರಮ್ಮ ಸತ್ತುಹೋಗಿದ್ದರು! ಅವರು ಅನ್ನುತ್ತಿದ್ದ ಹಾಗೆ ದಿಢೀರ್ ಅಂತ ಸತ್ತೇ ಹೋಗಿದ್ದರು. ಬೆಳಿಗ್ಗೆ ಎದ್ದು ಚಟ್ನಿಗೆ ಕಾಯಿ ತುರಿಯಲು ಈಳಿಗೆ ಮಣೆ ತೆಗೆಯಲು ಬಗ್ಗಿದರಂತೆ … ಮತ್ತೆರಡು ನಿಮಿಷದಲ್ಲಿ ದಭ್ ಅಂತ ಸದ್ದು. ಮಲಗಿದ್ದವರೆಲ್ಲ ಓಡಿ ಬಂದು ನೋಡಿದರೆ ಟೀಚರಮ್ಮನಿಗೆ ಮೈಮೇಲೆ ಪ್ರಜ್ಞೆಯೇ ಇರಲಿಲ್ಲವಂತೆ. ಬ್ರೈನ್ ಹೆಮೊರೇಜ್!! ಪ್ಲ್ಯಾಟ್ ಫಾರಂ ಕಟ್ಟೆ ತಗುಲಿ ಹೆಮೋರೇಜ್ ಆಯಿತೇನೋ, ಗೋಡೆ ತಗುಲಿ ಆಯಿತೇನೋ ಅಂತೆಲ್ಲ ಎಲ್ಲರೂ ತುಂಬ ದುಃಖದಲ್ಲಿ ಅತ್ತರು. ಯಾರೋ ಹೇಳಿದರು ‘ಬಿದ್ದಿದ್ದಕ್ಕೆಲ್ಲ ಹೆಮೊರೇಜ್ ಆಗಲ್ಲ. ಹೆಮೊರೇಜ್ ಆಗಿದ್ದಕ್ಕೆ ಬಿದ್ದಿದ್ದಾರೆ ಅಷ್ಟೇ’ ಅಂತ. ಒಟ್ಟಿನಲ್ಲಿ ಸಾಯಲು ಕಾರಣವೊಂದು ಬೇಕಿರುತ್ತದೆ ಅಷ್ಟೇ. ಒಟ್ಟಿನಲ್ಲಿ ಟೀಚರಮ್ಮ ಇದ್ದಿದ್ದೇ ಸುಳ್ಳೇನೋ ಅನ್ನುವ ಹಾಗೆ ಹೊರಟು ಹೋದರು. ಪಾಪ, ಟೀಚರಮ್ಮ ಹೆದರುವ ಹಾಗೆ ಮನೆ ಒಡೆದು ಚೂರಾಗುತ್ತೇನೋ ಅಂತ ನಾನು ಕೂಡಾ ದುಃಖಿಸಿದೆ ಅನ್ನುವಲ್ಲಿಗೆ ಮೊದಲ ಅಧ್ಯಾಯ ಕೊನೆಯಾಗುತ್ತದೆ …
***
ಎರಡನೆಯ ಅಧ್ಯಾಯ: ಒಂದು ದಿನ ಬೆಳಿಗ್ಗೆ ಎದ್ದಾಗ ಕಿಟಕಿಯಾಚೆ ಕಣ್ಣು ಹಾಯಿಸಿದರೆ ಅಪ್ಪ ಮಗನ ಹಿಂದೆ ಬೈಕಿನಲ್ಲಿ ಕೂತು ಎಲ್ಲೋ ಹೋರಟಿದ್ದರು! ನಾನು ಕಣ್ಣುಜ್ಜಿಕೊಂಡು ನೋಡಿದೆ… ಇವರಿಬ್ಬರೂ ಒಟ್ಟಿಗೇ?! ಇದು ಹೇಗೆ ಸಾಧ್ಯ!! ಅಂತ. ಆಮೇಲಿನ ದಿನಗಳಲ್ಲಿ ಆ ಹುಡುಗ ತಂಗಿಯನ್ನು ಕೆಲಸಕ್ಕೆ ಬಿಟ್ಟು ಬರುವುದು, ಅಪ್ಪನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುವುದು ಇವೆಲ್ಲ ಸಾಮಾನ್ಯವಾಗಿ ಹೋಯಿತು. ಅಪ್ಪ-ಮಗ ಆಗೀಗ ಮನೆಯ ಅಂಗಳವನ್ನು ಕ್ಲೀನ್ ಮಾಡುವುದು ಕಣ್ಣಿಗೆ ಬಿತ್ತು. ತೆಂಗಿನ ಗರಿಗಳನ್ನು ಇಬ್ಬರೂ ನಿಂತು ಕೀಳಿಸುತ್ತಿದ್ದರು, ತೆಂಗಿನ ಕಾಯಿ ಕೆಡವಿಸುತ್ತಿದ್ದರು. ಮಗ ಕಾಯಿ ಒಳಗೆ ಸಾಗಿಸಲು ಅಪ್ಪನ ಜೊತೆ ಕೈ ಜೋಡಿಸುತ್ತಿದ್ದ.
ಇನ್ನೊಂದಿಷ್ಟು ದಿನ ಕಳೆಯಿತು. ಮಗ ಮನೆಯ ಮುಂದಿದ್ದ ಒಂದು ರೂಮನ್ನು ಕೆಡವಿಸಿ ಜಾಗ ಮಾಡಿದ. ಅಲ್ಲೊಂದು asbestos ನೆರಳು ಸಿದ್ಧವಾಯ್ತು. ಮುಂದಿನ ದಿನಗಳಲ್ಲಿ ಅದರ ಕೆಳಗೊಂದು ಕಾರು ಬಂದು ನಿಂತಿತು. ಮಗ ಅಪ್ಪನನ್ನು ಕಾರಿನಲ್ಲಿ ಡ್ರಾಪ್ ಮಾಡಿ ಬರಲು ಶುರು ಮಾಡಿದ. ಕೆಳಗೆ ಕೆಡವಿಸಿದ್ದ ರೂಮಿನ ಬದಲಿಗೆ ಮಹಡಿ ಮೇಲೆ ಎರಡು ರೂಮು ಕಟ್ಟಿಸಿದ ಮಗ. ತಾನೇ ನಿಂತು ಮನೆಗೆ ಸಾಮಾನು ತಂದ. ಜೋಲು ಮುಖದಲ್ಲಿ ನಿಂತು ಜವಾಬ್ದಾರಿಯಿಂದ ಮನೆ ಕೆಲಸ ಮುಗಿಸಿದ.
ಒಂದು ದಿನ ಮನೆಯ ಮುಂದೆ ಚಪ್ಪರ! ಯಾರನ್ನೂ ಕರೆಯದೇ ಮನೆಯವರು ಮಾತ್ರ ಒಟ್ಟುಗೂಡಿ ಮಹಾರಾಷ್ಟ್ರದಲ್ಲೆಲ್ಲೋ ಇದ್ದ ಹುಟ್ಟೂರಿಗೆ ಹೋಗಿ ಮಗಳ ಮದುವೆ ಮುಗಿಸಿ ಬಂದರು. ಅವಳು ನಗುನಗುತ್ತಾ ಗಂಡನ ಮನೆ ಸೇರಿದಳು. ಇನ್ನೊಂದೆರಡು ತಿಂಗಳಲ್ಲಿ ಅವರ ಮನೆ ಮುಂದೆ ಚಪ್ಪರ… ಅವನ ಮದುವೆಯಂತೆ! ಆ ಹುಡುಗಿ ಹೇಗಿದ್ದಾಳೋ ಅನ್ನುವ ಕುತೂಹಲ ನನಗೆ. ತುಂಬ ಚೆಂದಕ್ಕಿಲ್ಲದಿದ್ದರೂ ಸಿಕ್ಕಾಪಟ್ಟೆ ಚುರುಕಾಗಿದ್ದಳು. ಇಡೀ ಮನೆಯ ಕೆಲಸದಿಂದ ಮಾವನನ್ನು ಬಿಡುಗಡೆ ಮಾಡಿದಳು. ನಾದಿನಿ ಬಾಣಂತನಕ್ಕೆ ಬಂದಳು, ಬಾಣಂತನ ಮುಗಿಸಿ ಮಗುವಿನ ಜೊತೆ ವಾಪಸ್ ಹೋದಳು. ಅದಾದ ಒಂದು ವರ್ಷದಲ್ಲಿ ಹೊಸ ಸೊಸೆ ಮಗುವನ್ನು ಎತ್ತಿಕೊಂಡು ಬಂದಳು. ಮಾವ ಮಗುವನ್ನು ವಾಕಿಂಗ್ ಕರೆದುಕೊಂಡು ಹೋದರು. ಮಗು ನರ್ಸರಿಗೆ ಸೇರಿತು …
ಒಟ್ಟಿನಲ್ಲಿ ಹೇಳಲಾ … ಅವರ ಮನೆ ಥೇಟ್ ಸೂರಜ್ ಬಾರ್ಜತ್ಯಾ .. ಕರಣ್ ಜೋಹರ್ ಇವರ ಸಿನೆಮಾದ ಥರ ಆಗಿಹೋಗಿತ್ತು !! ಪಾಪದ ಟೀಚರಮ್ಮ ಬದುಕಿದ್ದಾಗ ಈ ಮನೆಯ ಹಾವು-ಮುಂಗುಸಿಗಳಿಗೆಲ್ಲ ಅದೇನು ರೋಗ ಬಡೆದಿತ್ತೋ … ದಿನಾ ಕಿತ್ತಾಡುತ್ತಿದ್ದವು. ಈಗ ನೋಡಿದರೆ ಒಂದೇ ಒಂದು ಜಗಳವಿಲ್ಲ, ಕದನವಿಲ್ಲ. All is well that ends well ಅನ್ನುವುದು ನಿಜ. ಆದರೆ ನಾನೇನಾದರೂ ಟೀಚರಮ್ಮನಾಗಿದ್ದರೆ ಮತ್ತು ನನ್ನ ಆತ್ಮವೇನಾದರೂ ಆ ಮನೆಯ ಸುತ್ತ ಸುತ್ತಿದರೆ, ಅಲ್ಲಿನ ನೆಮ್ಮದಿ ಕಂಡು ಖುಷಿ ಪಡುತ್ತಿದ್ದೆನೋ ಅಥವಾ ನಾನಿರುವವರೆಗೂ ನೆಮ್ಮದಿಯಿಲ್ಲದೇ ಬದುಕುವ ಹಾಗೆ ಮಾಡಿದ್ದಕ್ಕೆ ದೆವ್ವವಾಗಿ ಬಂದು ಅವರಿಬ್ಬರನ್ನು ಕಾಡುತ್ತಿದ್ದೆನೋ ಅಂತ ಯೋಚಿಸಿದೆ …ಎರಡನೆಯದು most probable ಅನ್ನಿಸಿತು …:)


ಟೀಚರಮ್ಮ ಇರುವಾಗಲೇ ಎಲ್ಲರೂ ಹೀಗೆ ಇದ್ದಿದ್ದರೆ ಆಕೆಯಾದರೂ ಖುಷಿಯಲ್ಲಿರುತ್ತಿದ್ದಳು… ಕೆಲವೊಮ್ಮೆ ಒಬ್ಬ ವ್ಯಕ್ತಿಯ ಇಲ್ಲದಿರುವಿಕೆಯಿಂದ ಮನೆಯ ಒಡಕುಗಳು ಸರಿಹೋಗುತ್ತವೆ ಎನ್ನುವುದಕ್ಕೆ ಇದೇ ಉದಾಹರಣೆ
ನಾನೇನಾದರೂ ಟೀಚರಮ್ಮನಾಗಿದ್ದರೆ….ಎರಡನೆಯದು most probable ಅನ್ನಿಸಿತು …:)
Bharathi,
Ondu artha aaglilla, aayemma paapa ashtondella kashta pattaddu(as per the part1 story) avarigella artha aaglilva or aayemma sumne simple irodanna complicate maadtidro?
Mostly ee sambandagala madhya bridge aago kelsa maaduvavara kathe idena antha?
tragedy ending!!
ಆದರೆ ನಾನೇನಾದರೂ ಟೀಚರಮ್ಮನಾಗಿದ್ದರೆ ಮತ್ತು ನನ್ನ ಆತ್ಮವೇನಾದರೂ ಆ ಮನೆಯ ಸುತ್ತ ಸುತ್ತಿದರೆ, ಅಲ್ಲಿನ ನೆಮ್ಮದಿ ಕಂಡು ಖುಷಿ ಪಡುತ್ತಿದ್ದೆನೋ ಅಥವಾ ನಾನಿರುವವರೆಗೂ ನೆಮ್ಮದಿಯಿಲ್ಲದೇ ಬದುಕುವ ಹಾಗೆ ಮಾಡಿದ್ದಕ್ಕೆ ದೆವ್ವವಾಗಿ ಬಂದು ಅವರಿಬ್ಬರನ್ನು ಕಾಡುತ್ತಿದ್ದೆನೋ ಅಂತ ಯೋಚಿಸಿದೆ …ಎರಡನೆಯದು most probable ಅನ್ನಿಸಿತು …:)
*ನಿಮ್ಮ ತಮಾಷೆ ಹಾಗೂ ಅದರೊಳಗಿನ ಪ್ರಾಮಾಣಿಕತೆ ಎಷ್ಟು ಸರಳವಾಗಿರುತ್ತೆ ನೋಡಿ! 😉 🙂
-Rj
Logic is missing, if it is not suspence
ಕೆಲವನ್ನು ಹೀಗೆ ಅರ್ಥ ಮಾಡಿಕೋಬೇಕು.ಕಡೆಯ ಐದಾರು ಸಾಲು ಬೇಕಿರಲಿಲ್ಲ ಅಂತ ನನ್ನ ಅನಿಸಿಕೆ.ತುಂಬಾ ಇಷ್ಟ ಆಯ್ತು.
a god realistic story. the most probable reason could be the son was supported by her mother and once she died he had no choice other than getting adjusted and taking responsibility. The mother is the culprit because of her moha towards her son, the son thought he could get away without taking responsibility. In this story it is the mother and in many more houses it is the father
Shashikala. M
ಪಾಪದ ಟೀಚರಮ್ಮ ಬದುಕಿದ್ದಾಗ ಈ ಮನೆಯ ಹಾವು-ಮುಂಗುಸಿಗಳಿಗೆಲ್ಲ ಅದೇನು ರೋಗ ಬಡೆದಿತ್ತೋ …ನಿಮ್ಮ ಈ ಸಿಟ್ಟು ನಗು ತರಿಸಿತು
ಆಕೆ ಇರುವವರೆಗೂ ತನ್ನ ಮನೆ, ಮಕ್ಕಳು, ಅವರ ಏಳಿಗೆ ಅಂತ ಒದ್ದಾಡುತ್ತ ಇದ್ದರು. ಅವರ ಕೊನೆ ಮಗ ಹೇಳದೆ ಕೇಳದೆ ಮನೆ ಬಿಟ್ಟು ಹೋದಾಗ ಆಕೆ ಮಾಡದ ದೇವರ ಪೂಜೆ, ಪುನಸ್ಕಾರ, ಉಪವಾಸ, ವ್ರತಗಳಿಗೆ ಲೆಕ್ಕವಿಲ್ಲ . ಆಕೆಯ ಜೊತೆ ಇದ್ದ ಗಂಡ, ಇನ್ನೊಬ್ಬ ಮಗ ಹೆಚ್ಚು ಕೇರ್ ಮಾಡಲಿಲ್ಲ. ಒಂದು ದಿನ ಆಕೆ ಹಟಾತ್ ಆಗಿ ತೀರಿಕೊಂಡರು. ಇದರಿಂದ ಆಕೆಯ ಗಂಡನಿಗೆ ಅನುಕೂಲವೇ ಆಯಿತು. ಅವರು ತನ್ನ ಇತರ ಮಕ್ಕಳ ಜೊತೆ ಆರಾಮಾಗಿ ಇರತೊಡಗಿದರು. ಆಕೆಯನ್ನ ತಿಥಿಯ ದಿನವೇ ಜ್ಞಾಪಿಸಿಕೊಳ್ಳೋದು!!!