ಅಹವಿ ಹಾಡು : ’ನನ್ನ ಹೆಸರು ಹೆಣ್ಣು…’

ರಾಧೆ ಮೌನವಾಗಿ ಕುಳಿತಿದ್ದಳು …ಮನದ ತುಂಬ ವೃಂದಾವನದ, ಮಾಧವನ ನೆನಪು. ಆ ರೀತಿಯ ಪ್ರೀತಿಯ ಅನುಭವ ಮಾಡಿಸಿ, ನಂತರ ಹಿಂತಿರುಗಿ ನೋಡದೇ ಹೊರಟುಬಿಟ್ಟ ಮಾಧವನ ನೆನಪು ಯಾಕೆ ಹೀಗೆ ಸತ್ತ ಮೇಲೂ ಕಾಡುತ್ತಿದೆ ಅನ್ನುವ ವಿಷಾದ ಮನಸ್ಸಿನಲ್ಲಿ. ಭೂಲೋಕದ ತುಂಬ ಅವನ ಹೆಸರಿನೊಡನೆ ನನ್ನ ಹೆಸರೂ ಕಲ್ಲಿನಲ್ಲಿ ಕೆತ್ತಿದಂತೆ ಉಳಿದುಬಿಟ್ಟಿತು … ಜೊತೆಗೆ ಎದೆಯಲ್ಲಿ ನೆನಪು ಕೂಡಾ. ಮಾಧವಾ! ನೀನು ನನ್ನನ್ನೂ ನಿನ್ನ ಜೊತೆ ಯಾಕೆ ಕರೆದೊಯ್ಯಲಿಲ್ಲ? ಬಾಯಿ ಮಾತಿಗಾದರೂ ಕರೆಯಲಿಲ್ಲವಲ್ಲ? ಅಂದುಕೊಳ್ಳುವಷ್ಟರಲ್ಲೇ ‘ಕರೆದಿದ್ದರೆ ನಾನು ಹೋಗುತ್ತಿದ್ದೆನೇ ಈ ಸಂಸಾರವನ್ನು ತೊರೆದು’ ಅನ್ನುವ ಪ್ರಶ್ನೆ ಎದ್ದಿತು. ‘ಕರೆಯಲಿಲ್ಲವಲ್ಲ ಬಿಡು, ಈಗೇಕೆ ಆ ಕಲ್ಪನೆಯ ಪ್ರಶ್ನೆ – ಉತ್ತರಗಳು’ ಅಂದುಕೊಂಡಳು.
ಹಾಗೆ ಕುಳಿತಿದ್ದ ರಾಧೆಯನ್ನು ಕಂಡ ಊರ್ಮಿಳೆಗೆ ಯಾಕೋ ಅವಳೊಡನೆ ಕೂತು ಸ್ವಲ್ಪ ಮಾತನಾಡಬೇಕು ಅನ್ನಿಸಿಬಿಟ್ಟಿತು. ಊರ್ಮಿಳಾಗೆ ಯಾಕೋ ಮನಸ್ಸಿಗೆ ತುಂಬ ಕಸಿವಿಸಿ ಅನ್ನಿಸಿತು. ‘ಯಾಕೆ ರಾಧೆ? ಹಳೆಯದೆಲ್ಲ ನೆನಪಾಯಿತೇ?’ ಅಂದಳು ಮೆಲ್ಲನೆ. ಊರ್ಮಿಳಾಗೆ ಯಾಕೋ ರಾಧೆಯನ್ನು ಕಂಡರೆ ವಿಶೇಷ ಪ್ರೀತಿ. ಎಷ್ಟಾದರೂ ಇಬ್ಬರೂ ಅಗಲಿಕೆಯ ಕಹಿ ಉಂಡವರಲ್ಲವಾ ಪಾಪ. ಹಾಗಾಗಿ ತುಂಬ ಕಕ್ಕುಲತೆಯಿಂದ ‘ಯಾಕೆ ರಾಧಾ ಇಷ್ಟೊಂದು ಕಾಲ ಕಳೆದೇ ಹೋದರೂ ಕೃಷ್ಣನ ನೆನಪು ಮಾಸಿಲ್ಲವೇನೇ? ಆ ಅಗಲಿಕೆಯ ನೋವು ಇವತ್ತಿಗೂ ಯಾಕೆ ಅಷ್ಟು ಪ್ರಖರ?’ ಅಂದಳು. ರಾಧೆಗೆ ಯಾಕೋ ಊರ್ಮಿಳೆಯನ್ನು ತಬ್ಬಿ ಹಿಡಿದು ಅತ್ತು ಬಿಡೋಣ ಅನ್ನಿಸಿ ಬಿಟ್ಟಿತು.
‘ಎಷ್ಟು ವರ್ಷ ಕಳೆದರೇನು ಹೇಳು … ಆ ಅಗಲಿಕೆಯ ಕೊನೆ ದಿನಗಳು ನೆನಪಾದರೆ ಎದೆಯೆಲ್ಲ ಬರೀ ಬಿಕ್ಕು ಕಣೇ….’ ಅನ್ನುವಷ್ಟರಲ್ಲಿ ಕಣ್ಣು ಒದ್ದೆ ಒದ್ದೆ. ಊರ್ಮಿಳಾಗೆ ತುಂಬ ದುಃಖವೆನ್ನಿಸಿತು. ‘ಹೌದು ರಾಧೆ, ಈ ಗಂಡಸರಿಗೆ ಜಗತ್ತಿನ ಯಾವ ಯಾವುದರ ಮೇಲೋ ಮನಸ್ಸು ನೆಟ್ಟಿರುತ್ತದೆ. ನಿನ್ನವನಿಗೆ ಕರ್ತವ್ಯ ಕರೆಯಿತು … ಹೊರಟೇ ಬಿಟ್ಟ. ನನ್ನವನದ್ದಾದರೂ ಏನು ಭಿನ್ನ ಹೇಳು? ಕಾಡಿಗೆ ಹೋಗಬೇಕು ಅನ್ನಿಸಿತು. ಹೊರಟು ಬಿಟ್ಟ. ಇಲ್ಲಿ ಉಳಿದ ನಾನು ಹದಿನಾಲ್ಕು ವರ್ಷ ಹೇಗೆ ಬಾಳುತ್ತೇನೆ ಅಂತ ಅರೆ ಕ್ಷಣವಾದರೂ ಅವನಿಗೆ ಅನ್ನಿಸಲಿಲ್ಲವಲ್ಲೇ. ನನ್ನನ್ನೂ ಕರೆದಾದರೂ ಒಯ್ದಿದ್ದರೆ ಕೊನೆಗೆ ಗಂಡನ ಜೊತೆಯಿದ್ದೇನೆ ಅನ್ನುವ ನೆಮ್ಮದಿಯಾದರೂ ಉಳಿಯುತ್ತಿತ್ತು.
ಮಾವನಿಗೆ ಪುತ್ರ ವಿಯೋಗ ಅಂತ ಶಾಪವಿತ್ತಂತೆ ನಿಜ. ಆದರೆ ನಾನೇನು ಅನ್ಯಾಯ ಮಾಡಿದ್ದೆ ರಾಧೆ? ನನಗೂ ಆ ಶಾಪದ ಫಲ ಉಣ್ಣುವ ಹಾಗಾಗಿ ಬಿಟ್ಟಿತಲ್ಲ’ ಅಂದಳು. ಊರ್ಮಿಳೆಯ ದನಿಯಲ್ಲಿನ ಸಿಟ್ಟು ಇವತ್ತಿಗೂ ಪ್ರಖರವಾಗಿದೆ ಅಂದುಕೊಂಡಳು ರಾಧೆ. ಊರ್ಮಿಳೆಯ ಮನಃಸ್ಥಿತಿ ರಾಧೆಗೆ ಅರ್ಥವಾಗಲೇ ಬೇಕು. ಎಷ್ಟಾದರೂ ಇಬ್ಬರೂ ನೋವು ತಿಂದವರೇ ಅಲ್ಲವೇ?
‘ನಾನು ಮಾಧವನ ಆರಾಧನೆಯಲ್ಲಿ ಮುಳುಗಿದ್ದೆ ಊರ್ಮಿಳಾ. ಇಡೀ ದಿನ ಅವನದ್ದೇ ಗೀಳು. ನನ್ನ ಲೋಕದಲ್ಲಿ ನಾನು ಮತ್ತು ಮಾಧವ ಇಬ್ಬರೇ. ಗಂಡನಿಗೆ ತಿಳಿಯುತ್ತಿತ್ತು ಅನ್ನಿಸುತ್ತದೆ. ನಾನು ಅಲ್ಲಿದ್ದೂ ಕೂಡಾ ಅಲ್ಲಿ ಇಲ್ಲ ಅನ್ನುವುದು. ಅವ ಸಿಟ್ಟಾಗುತ್ತಿದ್ದ. ನಾನು ಅಲಕ್ಷಿಸಿದೆ ಅವನ ಸಿಟ್ಟನ್ನೂ … ಮನೆಯನ್ನೂ …’ ನಿಟ್ಟುಸಿರಿಟ್ಟಳು. ‘ಆ ನಂತರ ಅವನಿಗೆ ಕರ್ತವ್ಯದ ನೆನಪಾಯಿತು. ಸೀದಾ ಹೊರಟು ಬಿಟ್ಟ. ಹೊರಡುವ ಹಿಂದಿನ ದಿನ ಕೂಡಾ ನಾವಿಬ್ಬರೂ ಉತ್ಕಟವಾಗಿ ಪ್ರೇಮಿಸಿಕೊಂಡೆವು. ಅವನನ್ನು ಮತ್ತೆಂದೂ ಕಾಣುವುದಿಲ್ಲ ಅನ್ನುವ ಸಂಪೂರ್ಣ ಅರಿವಿತ್ತು. ಅದಕ್ಕಾಗಿ ಹೃದಯದೊಳಗೆ ಹೃದಯ ಹೊಕ್ಕಂತೆ ಪ್ರೇಮಿಸಿಕೊಂಡೆವು. ಆಮೇಲಿನ ದಿನಗಳ ಕಥೆ ನೆನೆಸಿಕೊಂಡರೆ ಎದೆ ನಡುಗುತ್ತದೆ ಊರ್ಮಿಳೆ.
ಮಾಧವನ ಮನಸ್ಸು ಮತ್ತು ಮೈಗೆ ಹೊಂದಿಕೊಂಡ ನನ್ನ ಮನಸ್ಸು ಮತ್ತು ದೇಹಕ್ಕೆ ನನ್ನ ಗಂಡ ಹಿಂಸೆಯೆನ್ನಿಸುತ್ತಿದ್ದ. ಆದರೆ ಅವನು ಗಂಡಾಗಿದ್ದ ಮತ್ತು ನನ್ನ ದೇಹ ಹೆಣ್ಣು! ಆ ಕಾರಣಕ್ಕಾಗೇ ಇಬ್ಬರೂ ಒಂದಿಷ್ಟು ಬಾರಿ ಕಾಮಿಸಿದೆವು. ಪ್ರತೀ ಸಲದ ಕಾಮದ ನಂತರವೂ ನಾನು ಹಗುರಾಗುವ ಬದಲು ಇನ್ನಿಷ್ಟು ಭಾರವಾಗುತ್ತಿದ್ದೆ. ಕೊನೆಕೊನೆಗೆ ನನಗೆ ಗಂಡ ಬೇಕೆನ್ನಿಸಲೇ ಇಲ್ಲ. ನಾನು ಕೊರಡಾಗುತ್ತಾ ಹೋದೆ. ಕೊರಡು ದೇಹ ತುಂಬ ದಿನ ಬೇಕೆನ್ನಿಸಲಿಲ್ಲ ನನ್ನ ಗಂಡನಿಗೆ. ಸಾಯುವವರೆಗೂ ಒಟ್ಟಿಗೇ ಬಾಳಿದೆವು … ಅಪರಿಚಿತರಂತೆ. ಮಾಧವನ ಪ್ರೀತಿ ಸಿಕ್ಕಿದ್ದು ಭಾಗ್ಯ ಅನ್ನಿಸುತ್ತದೆ ಒಮ್ಮೊಮ್ಮೆ. ಬದುಕಿನಲ್ಲಿ ಪ್ರೀತಿಯೆಂದರೆ ಏನು ಅನ್ನುವ ಅರಿವಾದರೂ ಆಯಿತಲ್ಲ ಅಂತ ಸಂತೋಷ. ಆದರೆ ಮಾಧವ ನನ್ನನ್ನು ಬಿಟ್ಟು ಹೊರಡುತ್ತಾನೆ ಅಂತ ತಿಳಿದಿದ್ದರೆ ನಾನು ಆ ಆರಾಧನೆಯಲ್ಲಿ ಸಿಲುಕುತ್ತಿರಲಿಲ್ಲ ಅನ್ನಿಸುತ್ತದೆ. ಬದುಕು ತುಂಬ ಕಷ್ಟವಾಯಿತು ಕಣೇ ಆ ನಂತರ….’.
ಊರ್ಮಿಳೆ ಆಶ್ಚರ್ಯದಿಂದ ಕೂಡಾ ನೋಡಲಿಲ್ಲ … ಅವಳಿಗೆ ಎಲ್ಲವೂ ಅರ್ಥವಾಗಿತ್ತು. ‘ರಾಧೆ, ಈ ಗಂಡಸರು ಯಾಕೆ ಹೀಗೆ ಅಂತ ಅರ್ಥವೇ ಆಗುವುದಿಲ್ಲ. ನೋಡು, ಸತ್ತ ನಂತರವೂ ಎದೆಯಲ್ಲಿನ ಸಂಕಟ ಉಳಿಯುವ ಹಾಗೆ ಮಾಡಿ ಬಿಡುತ್ತಾರೆ. ಆದರೆ ಎಷ್ಟು ವಿಚಿತ್ರ ನೋಡು! ನೀನು ಪ್ರೀತಿ ಹುಡುಕಿ ಹೊರಟೂ ಕೊನೆಗೆ ಖಾಲಿಯಾಗಿಯೇ ಉಳಿದೆ. ನಾನು ಗಂಡನನ್ನು ಪ್ರೀತಿಸಿಯೂ ಖಾಲಿಯಾಗಿಯೇ ಉಳಿದೆ. ಆ ಯೌವನದಲ್ಲಿ ರಾತ್ರಿಗಳಲ್ಲಿ ಸುಮ್ಮನೆ ಗಾಳಿ ಬೀಸಿದರೂ ಸಾಕು ರಾಧೆ, ಎದೆ ಬೆಂಕಿಯಂತೆ ಉರಿಯಲು ಶುರುವಾಗುತ್ತಿತ್ತು. ಮಧ್ಯ ರಾತ್ರಿಯಲ್ಲಿ ಎದ್ದು ಓಡಾಡಲು ಹೊರಟರೆ ಹಿಂದೆಯೇ ದಾಸಿಯರು ಹೊರಡುತ್ತಿದ್ದರು. ನನಗೆ ಹಾಳು ಏಕಾಂತ ಕೂಡ ಸಿಗಲಿಲ್ಲ ದುಃಖಿಸಲು. ಸಾಕು ಸಾಕು ಈ ಅರಮನೆ, ಆ ವೈಭವ, ಇವರೆಲ್ಲರ ನ್ಯಾಯ-ಧರ್ಮದ ಮಾತುಗಳು….’ ಈ ಕ್ಷಣಕ್ಕೆ ಅದನ್ನೆಲ್ಲ ಅನುಭವಿಸುತ್ತಿದ್ದಾಳೇನೋ ಅನ್ನುವಂತೆ ಸಣ್ಣ ಆಕ್ರೋಶವಿತ್ತು ಊರ್ಮಿಳೆಯಲ್ಲಿ.
ಒಂದರೆಘಳಿಗೆ ಇಬ್ಬರ ಮಧ್ಯೆ ಬರೀ ಮೌನ. ಜಾರಿ ಬೀಳುತ್ತಿರುವಂತೆ ಅನ್ನಿಸಿ ರಾಧೆ ಊರ್ಮಿಳೆಯ ಕೈಯನ್ನು ಹಿಡಿದಳು ಆಸರೆಗಾಗಿ ಅನ್ನುವಂತೆ.

ನಾಲ್ಕು ಹೆಜ್ಜೆ ಕಾಲಾಡಿಸಿ ಬರೋಣ ಅಂತ ಹೊರಟ ಮಂಡೋದರಿ ಮತ್ತು ಅಹಲ್ಯೆಗೆ ಕಲ್ಲಿನಂತೆ ಕುಳಿತ ಇವರಿಬ್ಬರೂ ಕಂಡರು. ಇಬ್ಬರೂ ವಿಹಾರವನ್ನು ಮೊಟಕುಗೊಳಿಸಿ ಅಲ್ಲಿಯೇ ಕುಳಿತರು. ಅವರಿಗೆ ಏನೂ ಹೇಳದಲೇ ಎಲ್ಲವೂ ಅರ್ಥವಾಗಿ ಹೋಯಿತು. ಮಂಡೋದರಿ ತುಂಬ ಸೂಕ್ಷ್ಮದ ಹೆಣ್ಣು … ಜೊತೆಗೆ ರಾವಣನ ಹುಚ್ಚಾಟಗಳ ಕಾರಣದಿಂದ ತಾನೂ ಅವಮಾನಕ್ಕೊಳಗಾದವಳು. ಎದೆಯಲ್ಲಿನ ನೋವಿಗೆ, ನೋವು ಎದುರಾದಾಗ ಗೊತ್ತಾಗಿ ಬಿಡುತ್ತದೆ. ಅವಳ ಎದೆಯಲ್ಲೂ ಇಡೀ ಜನ್ಮದ ನೋವು ಹೆಪ್ಪುಗಟ್ಟಿತ್ತು. ಒಂದಿಷ್ಟು ಖಾಲಿಯಾಗಿಬಿಡಲೇ? ಅನ್ನಿಸಿ ಸ್ವಗತಕ್ಕೆಂಬಂತೆ ಮಾತು ಶುರುವಾಯಿತು ‘ಇಷ್ಟೆಲ್ಲ ಕಾಲ ಕಳೆದು ಹೋದರೂ ದುಃಖವೆನ್ನುವುದು ಆರುವುದೇ ಇಲ್ಲ ನೋಡಿ. ನಿನ್ನ ಅಕ್ಕನನ್ನು ನೋಡಿ ನನ್ನ ಗಂಡ ಯಾಕೆ ಆ ರೀತಿ ಹುಚ್ಚಾದನೋ ಗೊತ್ತಿಲ್ಲ ಊರ್ಮಿಳೆ. ಆ ಪರಿ ಸೀತೆಯ ಹಿಂದೆ ಬಿದ್ದು ಬಿಟ್ಟ. ಒಲ್ಲದ ಹೆಣ್ಣನ್ನು ಬಿಟ್ಟು ಮುಂದಕ್ಕೆ ಸಾಗುವ ಬುದ್ಧಿವಂತಿಕೆ ಅವನಲ್ಲಿರಲಿಲ್ಲ, ಅವನನ್ನು ಬಿಟ್ಟು ಸಾಗುವ ಧೈಯ ನನ್ನಲ್ಲಿರಲಿಲ್ಲ. ಗಂಡ ಮತ್ತೊಬ್ಬಳನ್ನು ಮೋಹಿಸುತ್ತಿದ್ದಾನೆ ಅನ್ನುವುದು ತುಂಬ ವಿಷಾದ ತರಿಸಿ ಬಿಡುತ್ತದೆ. ಸೀತೆ ಎಲ್ಲೋ ಇದ್ದಿದ್ದರಾದರೂ ಹೇಗೋ ಸಹಿಸಬಹುದಿತ್ತು. ಆದರೆ ನನ್ನ ಹತ್ತಿರದಲ್ಲೇ ಅವಳನ್ನೂ ತಂದಿಟ್ಟ. ಸೀತೆ ದುಃಖ ಭರಿತಳಾಗಿ ಕೂತಿರುವುದು ಆಗೀಗ ನನ್ನ ಕಣ್ಣಿಗೆ ಬೀಳುತ್ತಿತ್ತು. ಆಗೆಲ್ಲ ನನಗೆ ಸಿಟ್ಟು ಉಕ್ಕೇರಿ ರಾವಣನ ಹತ್ತಿರ ಜಗಳವಾಡುತ್ತಿದ್ದೆ. ಅವನು ಮಾತ್ರ ಕಲ್ಲು ಬಂಡೆ. ನನ್ನ ಜಾಗ ಎಲ್ಲಿ ಮತ್ತು ನಾನು ಯಾವ ಗೆರೆ ದಾಟಬಾರದು ಅಂತ ಮುಖಕ್ಕೆ ಹೊಡೆದಂತೆ ಹೇಳಿ ಬಿಡುತ್ತಿದ್ದ. ಆ ಗೆರೆಯೆಲ್ಲ ಒತ್ತಟ್ಟಿಗಿರಲಿ, ನಾನು, ನೀನು ಗೆರೆಯ ಈಚೆ ಇರುವವರು. ಸೀತೆ ಆ ಕಡೆ. ಅವಳು ನಿನ್ನವಳಾಗುವುದಿಲ್ಲ ಅಂತ ತಿಳಿ ಹೇಳಿದರೆ ಲಜ್ಜೆಗೆಟ್ಟವನಂತೆ ಆಡುತ್ತಿದ್ದ. ನನ್ನೊಡನೆ ಕಾಮದಲ್ಲಿ ಮುಳುಗಿರುವಾಗ ಉತ್ಕಟತೆಯಲ್ಲಿ ‘ಸೀತೆ, ಸೀತೆ’ ಅಂದು ಬಿಡುತ್ತಿದ್ದ. ಮೈ ಅಸಹ್ಯದಿಂದ ಮುದುಡುತ್ತಿತ್ತು. ಆದರೂ ಅವನು ತಾಳಿ ಕಟ್ಟಿದವನಾಗಿದ್ದ. ಹಾಗಾಗಿ ಎಲ್ಲವನ್ನೂ ಅನುಭವಿಸಬೇಕಾಗಿತ್ತು …’ .
‘ನೀವು ಆ ರೀತಿ ದುಃಖಕ್ಕೀಡಾದಿರಿ. ನಾನು ಈ ರೀತಿ. ಬಹುಶಃ ನನ್ನನ್ನು ಕಾಡಿಗೆ ಕರೆದುಕೊಂಡು ಹೋಗಿದ್ದರೆ ಈ ಯುದ್ಧವೆಲ್ಲ ನಡೆಯುತ್ತಲೇ ಇರಲಿಲ್ಲ ಅನ್ನಿಸುತ್ತದೆ ಅಲ್ಲವೇ? ಸೀತೆಯ ಜೊತೆಗೆ ನಾನಿರುತ್ತಿದ್ದೆ. ಒಬ್ಬರಿಗೆ ಇನ್ನೊಬ್ಬರು ಜೊತೆಯಾಗುತ್ತಿದ್ದೆವು. ನಿಮ್ಮ ಪತಿ ನನ್ನ ಅಕ್ಕನನ್ನು ಒಯ್ಯುತ್ತಿರಲಿಲ್ಲವೇನೋ. ಆಗ ಯುದ್ಧ ಕೂಡ ನಡೆಯುತ್ತಿರಲಿಲ್ಲವೇನೋ. ಒಟ್ಟಿನಲ್ಲಿ ಈ ಕಷ್ಟವೆಲ್ಲ ಅನುಭವಿಸುವುದು ಬರೆದಿತ್ತು ಅನ್ನಿಸುತ್ತದೆ…’ ಊರ್ಮಿಳೆ ತನಗೆ ತಾನೇ ಅನ್ನುವಂತೆ ಹೇಳಿಕೊಂಡಳು.
ಅಹಲ್ಯೆ ಶೂನ್ಯದಲ್ಲಿ ದೃಷ್ಟಿ ಹರಿಸಿ ಕುಳಿತಿದ್ದಳು. ಅವಳ ಮನಸ್ಸಿನಲ್ಲಿನ ಹೋರಾಟ ಯಾರಿಗೆ ತಿಳಿಯದೇ ಇದ್ದೀತು? ಯಾವ ಇಂದ್ರನ ಸಲುವಾಗಿ ಬದುಕಿನಲ್ಲಿ ಅದೆಲ್ಲ ಏರು ಪೇರು ಅನುಭವಿಸಿದ್ದಳೋ, ಇವತ್ತು ಅದೇ ಇಂದ್ರನ ಸ್ವರ್ಗದಲ್ಲಿ ಅವಳ ವಾಸ! ಬೆಳಗೆದ್ದು ಆ ಜಪ, ತಪ, ಹೋಮ, ಹವನ, ನಾರು ಮಡಿ … ಆಶ್ರಮದ ಜೀವನ ಸಾಕು ಸಾಕಾದಾಗ ಅವತ್ತು ಎದುರಾದ ಇದೇ ಇಂದ್ರನ ಮೋಹಕ್ಕೆ ಬಿದ್ದವಳು ಅಹಲ್ಯೆ. ಗೌತಮರಿಗೆ ಗೊತ್ತಿರಲಿಲ್ಲವೇ ಅವಳ ಮನದ ವಿಪ್ಲವ? ಎಲ್ಲ ಗೊತ್ತಿತ್ತು! ಆದರೂ ಹೆಣ್ಣಿನ ಆಸೆಯೆಂದರೆ ತುಂಡಾಗಿ ಕತ್ತರಿಸುವ ಕ್ರೌರ್ಯವಷ್ಟೆ. ಮೋಹಕ್ಕೆ ಬಿದ್ದ ನಂತರ ಅವಳು ಗಂಡನಿಗೆ ಸಿಕ್ಕಿ ಬಿದ್ದಿದ್ದಳು. ಏನೇನೋ ಸುಳ್ಳು ಹೇಳಿ ಪಾರಾಗಲು ನೋಡಿದ್ದಳು, ಸಾಧ್ಯವಾಗಿರಲಿಲ್ಲ. ಗೌತಮರು ಅಹಲ್ಯೆ ಅನ್ನುವ ಆ ಜೀವಿಯೊಬ್ಬಳು ಜಗತ್ತಿನಲ್ಲೇ ಇಲ್ಲವೇನೋ ಅನ್ನುವ ಹಾಗೆ ಬದುಕಲು ಪ್ರಾರಂಭಿಸಿದ್ದರು. ಆ ನಂತರದ ದಿನಗಳು ಅವಳು ಕಲ್ಲಿನಂತೆ ಬದುಕು ಸಾಗಿಸಲೇ ಬೇಕಾದ ಅನಿವಾರ್ಯ ಒದಗಿಬಿಟ್ಟಿತ್ತು. ‘ನನಗೆ ಇನ್ನೊಂದೇ ಒಂದು ಅವಕಾಶ ನೀಡಿ …’ ಅಂತ ಬೇಡಿಕೊಳ್ಳಬೇಕು ಅನ್ನಿಸುತ್ತಿತ್ತು. ಆದರೆ ಗೌತಮರ ಬಿಗಿದ ಮುಖದೆದುರು ಮಾತೇ ಹೊರಡದೇ, ಬಾಯಿ ಕಟ್ಟುತ್ತಿತ್ತು.
ಕೊನೆಗೊಮ್ಮೆ ಶ್ರೀರಾಮ ಬಂದಾಗ ಗೌತಮರೊಡನೆ ವಾದಿಸಿ, ಅಹಲ್ಯೆಯೊಡನೆ ಒಂದುಗೂಡಿಸಿದ್ದ. ಆದರೆ ಅದೇ ರಾಮ ಅವನ ಹೆಂಡತಿಯ ವಿಷಯದಲ್ಲಿ ಎಡವಿದ್ದ. ಒಟ್ಟಿನಲ್ಲಿ ಇದನ್ನೆಲ್ಲ ಯಾರ ಬಳಿಯೂ ಹೇಳಿಕೊಳ್ಳುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ. ಈಗಲೂ ಇಂದ್ರ ಎದುರಾದರೆ, ಜೊತೆಗಿರುವ ಶಚಿದೇವಿ ಹೇಗೆ ಗಮನಿಸುತ್ತಿರುತ್ತಾಳೆ! ಮತ್ತೆ ಅವಳ ಗಂಡನ ಕಡೆಗೆ ನನ್ನ ದೃಷ್ಟಿ ಹರಿಯುತ್ತದೋ ನೋಡೋಣ ಎನ್ನುವಂತೆ… ‘ನನಗೆ ಹಿಂಸೆಯೆನಿಸುತ್ತದೆ. ಆದರೆ ದೇವೇಂದ್ರನನ್ನು ಮತ್ತೆ ನೋಡುವ ಅವಕಾಶ ಕಳೆದುಕೊಳ್ಳಲೂ ಮನಸ್ಸು ಒಪ್ಪುವುದಿಲ್ಲ. ಎಷ್ಟೊಂದು ವರ್ಷಗಳ ನಂತರ ಅವನು ಹೇಗಿದ್ದನೋ ಅನ್ನುವ ಕುತೂಹಲ. ಆದರೆ ಅವನನ್ನು ಕಂಡ ಮೇಲೆ ಮತ್ತೆ ಕಸಿವಿಸಿ. ಮನಸ್ಸು ಮತ್ತಿಷ್ಟು ಮುದುಡುತ್ತದೆ. ರಾಧೆ ಪತಿಯಲ್ಲದವನ ಜೊತೆ ಆರಾಧನೆಗೆ ಬಿದ್ದಿದ್ದನ್ನು ಸುಲಭವಾಗಿ ಹೇಳಿಕೊಂಡು ಬಿಡುತ್ತಾಳೆ. ಜಗತ್ತು ಅದನ್ನು ಮಾನ್ಯ ಮಾಡುತ್ತದೆ ಕೂಡ. ಆದರೆ ನನ್ನದು?’ … ಅಂತ ಸಣ್ಣದೊಂದು ನಿಟ್ಟುಸಿರು … ಈಗ ಪಂಚ ಪತಿವ್ರತೆಯರ ಪಟ್ಟಿಯಲ್ಲಿ ನನ್ನ ಹೆಸರು ಕೂಡಾ ಸೇರಿ ಹೋಗಿರುವುದರಿಂದ ನಾನು ಈ ಮನಸ್ಸಿನ ತಲ್ಲಣಗಳನ್ನು ಕೂಡ ಹೇಳಿಕೊಳ್ಳುವುದೂ ನನ್ನಿಂದಾಗುತ್ತಿಲ್ಲ ಅಂದುಕೊಂಡಳು.
ಯಾಕೋ ಇಡೀ ವಾತಾವರಣ ವಿಷಾದಮಯ ಅನ್ನಿಸಿಬಿಟ್ಟಿತು ಎಲ್ಲರಿಗೂ. ‘ಯಾರಿಗೂ ಇಲ್ಲದ ಈ ತಲ್ಲಣಗಳು ನಮ್ಮನ್ನು ಮಾತ್ರ ಕಾಡುವುದು ಏಕೆ’ ಅಂದಳು ರಾಧೆ. ಯಾರಿಂದಲೂ ಉತ್ತರವಿಲ್ಲ. ಇದಕ್ಕೆಲ್ಲ ಕೊನೆಯೇ ಇಲ್ಲ ಅಂದುಕೊಳ್ಳುತ್ತ ಎದ್ದಾಗ ಗಮನಕ್ಕೆ ಬಂತು … ಆಗೀಗ ಕಣ್ಣೊರೆಸಿಕೊಳ್ಳುತ್ತಿದ್ದ ಕುಂತಿ, ಮಾದ್ರಿ, ಸೀತೆ ಅಲ್ಲಿಯೇ ಕುಳಿತಿದ್ದರು. ಮತ್ತೊಂದೆಡೆ ದೂರದಲ್ಲಿ ಜಗತ್ತಿನ ಪರಿವೆಯಿಲ್ಲದೆ ಮಾತಾಡುತ್ತ ಕುಳಿತ ಕಸ್ತೂರಬಾ, ಕಮಲಾ ನೆಹರು …
ಇನ್ನು ಹೊರಡುವ ಸಮಯ ಬಂದಿತು ಅಂದಳು ಮಂಡೋದರಿ. ನಾಲ್ವರೂ ಬೆಚ್ಚಗಿನ ವಿದಾಯ ಹೇಳಿಕೊಂಡರು …
ಎದೆಯ ನೋವು
ತಾಳದಾಗದಷ್ಟಾದಾಗ
ಖಾಲಿಯಾಗೋಣ …
ಮತ್ತೆ ನೋವು ತುಂಬಿಕೊಳ್ಳಲಿಕ್ಕೆ
ಎದೆಯನ್ನು ತೆರವು ಮಾಡಿಕೊಳ್ಳೋಣ …’
 

‍ಲೇಖಕರು G

November 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. sunil rao

    Excellent imagination…
    Avara novugalu nijakkoo heege iddirabahudu…vyaktapadisalu aagadashtu…novu!!
    Matte matte idannu odabeku anisuttade…beautiful.

    ಪ್ರತಿಕ್ರಿಯೆ
  2. Vanamala

    ಭಾರತಿ ಮೇಡಂ..
    ಎದೆಯ ನೋವು ತಾಳದಾಗದಷ್ಟಾದಾಗ
    ಖಾಲಿಯಾಗೋಣ …
    ಮತ್ತೆ ನೋವು ತುಂಬಿಕೊಳ್ಳಲಿಕ್ಕೆ
    ಎದೆಯನ್ನು ತೆರವು ಮಾಡಿಕೊಳ್ಳೋಣ …’
    ಈ ಸಾಲುಗಳು ಇಷ್ಟವಾದವು..
    THANK YOU

    ಪ್ರತಿಕ್ರಿಯೆ
  3. Vidyashankar H

    ಮನಸು ಸೂಕ್ಷ್ಮವಾದಷ್ಟು ನೋವು ಜಾಸ್ತಿ, ಹಾಗೆ ಕವಿತೆ ಹನಿಯುವುದು…
    ತಮಾಷೆಗೆ… ಓದುತ್ತಾ ಓದುತ್ತಾ ನನ್ನ ಹೆಂಡತಿ ನನ್ನ ಆಫಿಸಿಗೆ ಕಳುಹಿಸಿದ್ದೆ ಒಂದು ದೊಡ್ಡ ಉಪಕಾರ ಅಂತ ಅನಿಸಿಬಿಡ್ತು 😛

    ಪ್ರತಿಕ್ರಿಯೆ
  4. Shwetha Hosabale

    ವಾವ್ಹ್ ! ಎಷ್ಟು ಚೆನ್ನಾಗಿದೆ ನಿಮ್ಮ ಕಲ್ಪನೆ… ಪಾತ್ರಗಳು ಬೇರೆ ಬೇರೆ …ನೋವಿನ ಸ್ವರೂಪ ಹೆಚ್ಚೂ ಕಡಿಮೆ ಒಂದೇ…ನನ್ನ ಮನಸ್ಸಿನ ಮಾತುಗಳನ್ನೇ ಕೇಳಿಸಿಕೊಂಡಂತಾಯಿತು…Iam so impressed 🙂
    ಇಡೀ ಲೇಖನದ ಆಶಯವನ್ನು ಕೊನೆಯಲ್ಲಿ ತುಂಬ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ…ಒಂದೊಳ್ಳೆ ನಾಟಕವಾಗಬಹದು ಎನ್ನಿಸಿತು.

    ಪ್ರತಿಕ್ರಿಯೆ
  5. deepaG

    kaal badaladaru hennin bhavodveg kasivisi gandin tatsara badalaagalilla. ati sarala satya ashte saralawagi heli mugisiddiri bharathi mam..

    ಪ್ರತಿಕ್ರಿಯೆ
  6. Bharati T, S.

    Nimma kalpane!Abba!Nijavagibittiddare!Ivara jothe innoo Renuka, Anasuya, heege… EE stree patragalu konege thamma”Shapavanne varavagisi konda pathivrathe”yavaragibiduttaru!Adakke irabeku “eradu jade serolla,hengasara buddi “endella gaade mathugannu heli nonda manassina novugalannu hanchikollalu biduvudilla.Mathomme,magadomme odabekinisutthade.Vandanegalu.

    ಪ್ರತಿಕ್ರಿಯೆ
    • Mahendra vi. sheela

      ನಿಮ್ಮ ಲ್ಯಾಟಿನ್(ಳತಿನ್)-ಕನ್ನಡ ಲಿಪಿಯನ್ನು ಬರಹ-ತಂತ್ರದಲ್ಲಿ ಕನ್ನಡ ಮಾಡಿದಾಗ ಅವತಾರವಾಗುವ ಭಾಷೆ: ಮರಳಿನಲ್ಲಿ ಮುರುಕು-ಅಕ್ಕಿ(ಅನ್ನ) ಬೆರೆಸಿದಂತೆ. ಪರಿಣಾಮ: ಹಲ್ಲು ಮುರಿಯುವ ಉಣಲಾಗದ ಮಾತುಗಳ ಜನನ. ದಯವಿಟ್ಟು ’ಬರಹ’ ಲ್ಯಾಟಿನ್ ಲಿಪಿಯನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಅದು ಬಲು ಸುಲಬವಾದ ವಿಚಾರ. – ವಿಜಯಶೀಲ

      ಪ್ರತಿಕ್ರಿಯೆ
  7. Veena Shivanna

    Very different write up this time Bharathi. Ability to imagine and being creative is one of the greatest gift to an artist/writer.
    Nice write up, and also why did you leave our Draupadhi? an interesting character of our purana and connected with similar thoughts.
    puranakku, kamala nehru kasturba gu eshtu chennagi onde line nalli nantu haakidri.. very well written!

    ಪ್ರತಿಕ್ರಿಯೆ
  8. Mahendra vi. sheela

    ಅತಿ ಸೊಗಸಾಗಿ ವರ್ಣಿಸಿರುವ ಮಸ್ಸಿನ ಚಿಂತನೆಗಳ ಹೃದಯ ಮೆಟ್ಟುವ ವರ್ಣನೆ. ಹೃದಯದ ಚಿಂತಾಕ್ರಾಂತಿಗಳನ್ನು ಮನಮುಟ್ಟುವಂತೆ ಕನ್ನಡದಲ್ಲಿ ಬರೆಯಲು ನಿಮಗೆ ಮೇಲ್ಮಟ್ಟದ ಭಾಷಾ ಚಾಲಕ್ಕುತನವಿದೆ. ಜೀವನದ ಹಾದಿಯಲ್ಲಿ ತಲುಗುವ ಕ್ರೂರ ಅನುಭವಗಳನ್ನು ಓದುವಾಗ ನನ್ನ ಮನಸ್ಸು ದುಗುಡ ದಡಗಡೆ ಅನುಭವಿಸುತ್ತೆ.- ವಿಜಯಶೀಲ

    ಪ್ರತಿಕ್ರಿಯೆ
  9. sujathalokesh

    ಹೆಣ್ಣೆಂದರೆ ನೋವಾ !!!!
    ಖಾಲಿಯೋಗೋಣ.
    ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  10. ಶಮ, ನಂದಿಬೆಟ್ಟ

    ಭಾರತಿ ನಿನಗೆ ನೀನೇ ಸಾಟಿ…

    ಪ್ರತಿಕ್ರಿಯೆ
  11. Anil Talikoti

    ಅನನ್ಯ ಸೂಕ್ಷ್ಮತೆಯ ಉತ್ಕೃಷ್ಟ ಲೇಖನ.ಪುರಾಣಗಳ ಜೋಗತಿಯರೆಲ್ಲಾ ಒಟ್ಟಾಗಿ ಮನದ ಭಾವಗಳ ಹಿಂಡಿ ಹಿಂಡಿ ಬಿಟ್ಟ ನಿಡುಸುಯಿಲು, ವಿಷಾದಯೋಗದ ಕಹಿ ಅರಹುವ ಸಿಹಿ ಬರಹ. ಈ ನೋವುಗಳಲ್ಲೂ ನವಿರುತನವಿದೆ -ಬೇಕೆಂದೆ ದೀಪದತ್ತ ಹಾರಿಹೋಗುವ ಪತಂಗದ ಅನಿವಾರ್ಯತನವಿದೆ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  12. sandhya Bhat

    ಎದೆಯ ನೋವು
    ತಾಳದಾಗದಷ್ಟಾದಾಗ
    ಖಾಲಿಯಾಗೋಣ …
    ಮತ್ತೆ ನೋವು ತುಂಬಿಕೊಳ್ಳಲಿಕ್ಕೆ
    ಎದೆಯನ್ನು ತೆರವು ಮಾಡಿಕೊಳ್ಳೋಣ …’ Awesome Lines,.. Bharathi Maa..:)

    ಪ್ರತಿಕ್ರಿಯೆ
  13. shadakshari.Tarabenahalli

    ತುಂಬಾ ಯೋಚನೆಗೆ ಹಚ್ಚುವಂತೆ ಬರೆದಿದ್ದೀರಿ…
    ಹಿಂದಿನ ಪುರಾಣಗಳ ಎಲ್ಲ ನೆನಪುಗಳ ಗೂಡೊಳಗೆ ಮತ್ತೊಮ್ಮೆ ಇಣುಕುವಂತೆ…
    ಈ ಕೆಳಗಿನ ಸಾಲುಗಳು ತುಂಬಾ ಹಿಡಿಸಿತು…
    ಆದರೆ ಅದೇ ರಾಮ ಅವನ ಹೆಂಡತಿಯ ವಿಷಯದಲ್ಲಿ ಎಡವಿದ್ದ. ಒಟ್ಟಿನಲ್ಲಿ ಇದನ್ನೆಲ್ಲ ಯಾರ ಬಳಿಯೂ ಹೇಳಿಕೊಳ್ಳುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ. ಈಗಲೂ ಇಂದ್ರ ಎದುರಾದರೆ, ಜೊತೆಗಿರುವ ಶಚಿದೇವಿ ಹೇಗೆ ಗಮನಿಸುತ್ತಿರುತ್ತಾಳೆ! ಮತ್ತೆ ಅವಳ ಗಂಡನ ಕಡೆಗೆ ನನ್ನ ದೃಷ್ಟಿ ಹರಿಯುತ್ತದೋ ನೋಡೋಣ ಎನ್ನುವಂತೆ… ‘ನನಗೆ ಹಿಂಸೆಯೆನಿಸುತ್ತದೆ. ಆದರೆ ದೇವೇಂದ್ರನನ್ನು ಮತ್ತೆ ನೋಡುವ ಅವಕಾಶ ಕಳೆದುಕೊಳ್ಳಲೂ ಮನಸ್ಸು ಒಪ್ಪುವುದಿಲ್ಲ. ಎಷ್ಟೊಂದು ವರ್ಷಗಳ ನಂತರ ಅವನು ಹೇಗಿದ್ದನೋ ಅನ್ನುವ ಕುತೂಹಲ. ಆದರೆ ಅವನನ್ನು ಕಂಡ ಮೇಲೆ ಮತ್ತೆ ಕಸಿವಿಸಿ. ಮನಸ್ಸು ಮತ್ತಿಷ್ಟು ಮುದುಡುತ್ತದೆ. ರಾಧೆ ಪತಿಯಲ್ಲದವನ ಜೊತೆ ಆರಾಧನೆಗೆ ಬಿದ್ದಿದ್ದನ್ನು ಸುಲಭವಾಗಿ ಹೇಳಿಕೊಂಡು ಬಿಡುತ್ತಾಳೆ. ಜಗತ್ತು ಅದನ್ನು ಮಾನ್ಯ ಮಾಡುತ್ತದೆ ಕೂಡ. ಆದರೆ ನನ್ನದು?’ … ಅಂತ ಸಣ್ಣದೊಂದು ನಿಟ್ಟುಸಿರು … ಈಗ ಪಂಚ ಪತಿವ್ರತೆಯರ ಪಟ್ಟಿಯಲ್ಲಿ ನನ್ನ ಹೆಸರು ಕೂಡಾ ಸೇರಿ ಹೋಗಿರುವುದರಿಂದ ನಾನು ಈ ಮನಸ್ಸಿನ ತಲ್ಲಣಗಳನ್ನು ಕೂಡ ಹೇಳಿಕೊಳ್ಳುವುದೂ ನನ್ನಿಂದಾಗುತ್ತಿಲ್ಲ …….

    ಪ್ರತಿಕ್ರಿಯೆ
  14. y k sandhya sharma

    hennu enduu novina odalu emba saarvakaalika sathyavannu puraanada paatragala muulaka kedakiddiira.baravanigeyalli novina sraavavide.pratiyondu henninallu novu staayiguna .novundu nakkavara bheti,vichara vinimayada kalpane manvannu kadalisitu.nimma bhaashaa shaily chennaagide.

    ಪ್ರತಿಕ್ರಿಯೆ
  15. Madhushree Velur

    ಮಾಧವನ ಮನಸ್ಸು ಮತ್ತು ಮೈಗೆ ಹೊಂದಿಕೊಂಡ ನನ್ನ ಮನಸ್ಸು ಮತ್ತು ದೇಹಕ್ಕೆ ನನ್ನ ಗಂಡ ಹಿಂಸೆಯೆನ್ನಿಸುತ್ತಿದ್ದ. ಆದರೆ ಅವನು ಗಂಡಾಗಿದ್ದ ಮತ್ತು ನನ್ನ ದೇಹ ಹೆಣ್ಣು! ಆ ಕಾರಣಕ್ಕಾಗೇ ಇಬ್ಬರೂ ಒಂದಿಷ್ಟು ಬಾರಿ ಕಾಮಿಸಿದೆವು. ಪ್ರತೀ ಸಲದ ಕಾಮದ ನಂತರವೂ ನಾನು ಹಗುರಾಗುವ ಬದಲು ಇನ್ನಿಷ್ಟು ಭಾರವಾಗುತ್ತಿದ್ದೆ. ಕೊನೆಕೊನೆಗೆ ನನಗೆ ಗಂಡ ಬೇಕೆನ್ನಿಸಲೇ ಇಲ್ಲ. ನಾನು ಕೊರಡಾಗುತ್ತಾ ಹೋದೆ. ಕೊರಡು ದೇಹ ತುಂಬ ದಿನ ಬೇಕೆನ್ನಿಸಲಿಲ್ಲ ನನ್ನ ಗಂಡನಿಗೆ. ಸಾಯುವವರೆಗೂ ಒಟ್ಟಿಗೇ ಬಾಳಿದೆವು … ಅಪರಿಚಿತರಂತೆ. ಮಾಧವನ ಪ್ರೀತಿ ಸಿಕ್ಕಿದ್ದು ಭಾಗ್ಯ ಅನ್ನಿಸುತ್ತದೆ ಒಮ್ಮೊಮ್ಮೆ. ಬದುಕಿನಲ್ಲಿ ಪ್ರೀತಿಯೆಂದರೆ ಏನು ಅನ್ನುವ ಅರಿವಾದರೂ ಆಯಿತಲ್ಲ ಅಂತ ಸಂತೋಷ. ಆದರೆ ಮಾಧವ ನನ್ನನ್ನು ಬಿಟ್ಟು ಹೊರಡುತ್ತಾನೆ ಅಂತ ತಿಳಿದಿದ್ದರೆ ನಾನು ಆ ಆರಾಧನೆಯಲ್ಲಿ ಸಿಲುಕುತ್ತಿರಲಿಲ್ಲ ಅನ್ನಿಸುತ್ತದೆ.
    Fabulous lines…Story has been like a mirror to your imagination!!Hatts off akka.

    ಪ್ರತಿಕ್ರಿಯೆ
  16. maheshwari.u

    ನನಗೆ ಲೇಖನ ಓದಿ ದೇವನೂರರ ಕುಸುಮಬಾಲೆಯಲ್ಲಿ ಜೋತಮ್ಮದೀರು ಕಷ್ಟ ಸುಖ ಹೇಳಿಕೊಳ್ಳುವ ಸನ್ನಿವೇಶ ನೆನಪಾಯಿತು.ಬರಹ ಚೆನ್ನಾಗಿದೆ.ಅಭಿನಂದನೆಗಳು.

    ಪ್ರತಿಕ್ರಿಯೆ
  17. ಸತೀಶ್ ನಾಯ್ಕ್

    ತುಂಬಾ ಸುಲಭ ಹೆಣ್ಮಕ್ಕಳು ಅರ್ಥವಾಗೋಲ್ಲ ಅಂತಂದು ಜಾರಿಕೊಳ್ಳೋದು.. ಅರ್ಥವಾಗಿ ಬಿಟ್ಟರೆ ಇದಕ್ಕೆಲ್ಲ ಪರಿಹಾರ ಸೂಚಿಸಬೇಕಾದ ಅನಿವಾರ್ಯತೆಗಿಂತ ಹಾಗೆ ಜಾರಿ ಕೊಳ್ಳೋದೇ ಸುಲಭ ಮತ್ತು ಸೂಕ್ತ. ಈಗ ನೀವು ಬರೆದದ್ದಷ್ಟನ್ನೂ ನೋಡಿದಮೇಲೆ ಅದೂ ನಿಜವೇ.. ಹೆಣ್ಮಕ್ಕಳು ಅಷ್ಟು ಸುಲಭಕ್ಕೆ ಅರ್ಥವಾಗುವುದೂ ಇಲ್ಲ. ಅರ್ಥ ಮಾಡಿಕೊಳ್ಳೋದು ಅಷ್ಟು ಸುಲಭವೂ ಅಲ್ಲ.
    ಪ್ರತಿಯೊಬ್ಬ ಹೆಣ್ಮ ನಸ್ಸಿನ ಕನ್ನಡಿ ಇದ್ದ ಹಾಗಿದೆ ನಿಮ್ಮ ಬರಹ. ಸಕ್ಖತ್ ಇಷ್ಟ ಆಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: