ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ನನ್ನ ಹೆಸರು ಏಕಾಂಗಿ…

ಸುಖದಲ್ಲಿ ಸಮುದ್ರದ ದಡದಲ್ಲಿ ಕಾಲು ಚಾಚಿ ಕೂತಿದ್ದೆ. ಆವರಿಸುತ್ತಿದ್ದ ಕತ್ತಲು, ಏರುತ್ತಿದ್ದ ಅಲೆಗಳು, ಹೆಚ್ಚಾಗುತ್ತಿದ್ದ ಮೊರೆತ …
ಆದರೂ ಮನಸ್ಸು ಅಲ್ಲಿಂದ ಏಳಲು ಒಪ್ಪಲಿಲ್ಲ. ಆ ಕ್ಷಣದ ಸುಖದಿಂದ ಇವೆಲ್ಲ ಕ್ಷುಲ್ಲಕ ಕಾರಣಗಳಿಗಾಗಿ ವಂಚಿತಳಾಗುವುದೇ? ಸಾಧ್ಯವಿಲ್ಲ, ಸಾಗರದಲ್ಲಿನ ಮೋಡದ ಬಿಂಬ ನೋಡುತ್ತಾ ನನಗೆ ನಾನೇ ಹೇಳಿಕೊಂಡೆ.
ಸಮುದ್ರದ ವಿಶಾಲತೆಯೆದುರು ನಾನು ಭ್ರೂಣಾವಸ್ಥೆಯಲ್ಲಿರುವ ಹಾಗೆ ಭಾಸವಾಗುತ್ತದೆ. ಎಂಥ ಅಗಾಧತೆ ಮತ್ತು ನಾನೆಂಬ ನಾನಾದ ಸಣ್ಣದೊಂದು ಬಿಂದು!
‘ಹುದುಗಿಸು ನನ್ನನು ನಿನ್ನ ತೆಕ್ಕೆಯಲಿ,
ನನ್ನ ಬಿಕ್ಕುಗಳು ನಿನ್ನಬ್ಬರದಲಿ ಅಡಗಲಿ
ಮತ್ತು ನನ್ನ ಹನಿಗಳು ನಿನ್ನೆದೆಯಲ್ಲಿ …’
ಮೆಲ್ಲನೆ ಹೇಳಿಕೊಂಡೆ. ಸಾಗರ ಮತ್ತಷ್ಟು ಮತ್ತಿನಿಂದ ಮೊರೆಯಿತು. ನನ್ನ ಅಪ್ಪುವಿಕೆ ಅದಕ್ಕೆ ಹಿಂಸೆಯೆನಿಸುತ್ತದಾ ಅನ್ನಿಸಿತು. ಕೇಳಲೇ ಸಾಗರಕ್ಕೆ ಹಾಗಂತ? ‘ಹೌದು, ನನಗೆ ಹಿಂಸೆಯಾಗುತ್ತಿದೆ’ ಅಂದುಬಿಟ್ಟರೆ? ಹಾಗೆಂದರೆ ನಾನು ದೂರವಾಗುವೆನೇ? ಇಲ್ಲವಲ್ಲ!
‘ಹೋಗು ಸುಮ್ಮನೆ, ನಿನ್ನ ಅಗಾಧತೆಗೆ ನಾನ್ಯಾವ ಲೆಕ್ಕ! ನಾನು ನಿನಗೆ ಉಸಿರು ಕಟ್ಟಿಸಲೂ ಯೋಗ್ಯಳಲ್ಲ. ನಿನ್ನ ಆಳದಲ್ಲಿ ನನ್ನ ಪಾದವೊಂದಿಷ್ಟು ನೆನೆದರೆ ಸಾಕು, ನಾನು ತುಂಬ ಕಾಲ ಅದರ ತಂಪಿನ ಭ್ರಮೆಯಲ್ಲಿ ಬದುಕುವೆ’ ಆರ್ದ್ರತೆಯಿಂದ ಹೇಳಿದೆ.
ಸಮುದ್ರ ಮತ್ತಿಷ್ಟು ಭೋರ್ಗರೆಯಿತು … ನನ್ನ ಮಾತು ಅದಕ್ಕೆ ಒಪ್ಪಿಗೆಯಾಯಿತೋ .. ಅಥವಾ, ಅಥವಾ ನಿರಾಕರಣೆಯ ಅಬ್ಬರವೋ ಅದು …
ಕಣ್ಣು ದೂರದಲ್ಲಿ ನೆಟ್ಟಿತು … ಅಲ್ಲಿ ದೂರದಲ್ಲಿ ಅಗಾಧ ಅಳತೆಯ ಅದೇನು ನನ್ನ ಕಡೆಗೆ ಬರುತ್ತಿರುವುದು? ನನ್ನ ಅವಲಂಬನದ ಮಾತಿಗೆ ಸಾಗರ ಸಿಟ್ಟಿಗೆದ್ದಿತೇ? ಇಷ್ಟೊಂದು ಸಿಟ್ಟು! ಯಾಕಾಗಿ ಸಮುದ್ರವೇ? ನೀನು ರೊಚ್ಚಿಗೇಳಬೇಡ, ನಾನು ನಿನಗಿಷ್ಟವಿಲ್ಲ ಅಂತಾದರೆ ಹೊರಟುಬಿಡುತ್ತೇನೆ …
ಉಹ್ಞೂ, ನನ್ನ ಮಾತು ಕಿವಿಗೇ ಬೀಳದಂತೆ ಆ ಅಗಾಧತೆ ಹತ್ತಿರವಾಗ ತೊಡಗಿತು… ಮಸುಕು ಕತ್ತಲಿನಲ್ಲಿ ಅತ್ತಲೇ ಕಣ್ಣು ನೆಟ್ಟೆ …
ಅವು ಅಗಾಧ ಅಲೆಗಳು! ಅಯ್ಯೋ, ಇದು ಬರಿಯ ಅಲೆಯಲ್ಲ, ಸುನಾಮಿ ಅನ್ನುತ್ತಾರಲ್ಲ ಅದಿರಬೇಕು!
ಸುನಾಮಿಯೆಂದರೆಎದೆ ನಡುಗಿಸುವಂತ ಬೃಹದಾಕಾರದ ಅಲೆಗಳು. ಯಾವುದೋ ಒಂದು ಭೂಕಂಪ, ಅಗ್ನಿಪರ್ವತ, ಸಮುದ್ರದೊಡಲಿನಲ್ಲಿನ ಯಾವುದೋ ಒಂದು ಸಿಡಿತ, ಹಿಮಗಡ್ಡೆಗಳ ನದಿ …ಯಾವುದಕ್ಕಾದರೂ ಸಮುದ್ರದಲ್ಲಿ ಸುನಾಮಿ ಏಳಬಹುದಂತೆ …
ಇದು ಅದೇ ಇರಬೇಕು …
ಇದು ನನ್ನನ್ನು ನುಂಗಿ ಬಿಡುತ್ತದಾ ತನ್ನೊಡಲಿನಲ್ಲಿ? ಆದರೆ, ಆದರೆ … ನಿನ್ನಲ್ಲಿನ ಸುನಾಮಿಗೆ ಕಾರಣ ನಾನಲ್ಲ ಸಮುದ್ರವೇ …
ನಿನ್ನಲ್ಲಿನ ಸುನಾಮಿಗೂ, ನನಗೂ ಯಾವ ಸಂಬಂಧವೂ ಇಲ್ಲ. ನಾನು ನೋಡು, ಇಲ್ಲಿ ಕಾಲು ಬಿಟ್ಟು ಕೂತಿದ್ದೇನೆ ಅಷ್ಟೇ …
ನಿನ್ನೊಳಗಿನ ಅಥವಾ ನಿನ್ನ ಅಕ್ಕ-ಪಕ್ಕದಲ್ಲಿ ಯಾವುದೋ ಬದಲಾದರೆ ನೀನು ಈ ರೀತಿ ನನ್ನನ್ನು ನುಂಗುವುದು ಯಾಕೆ?
ಎದುರಲ್ಲಿನ ಅಲೆಗಳು ಇನ್ನಿಷ್ಟು ಅಗಾಧವಾಗಿ ಕಂಡವು … ಅವು ಹತ್ತಿರವಾಗುತ್ತಿದ್ದವು !!
ಅಯ್ಯೋ! ನನಗೆ ಖಂಡಿತಾ ಇದರಿಂದ ಬಿಡುಗಡೆಯಿಲ್ಲ … ಸುನಾಮಿಯೇ, ನನ್ನನ್ನು ಉಳಿಸು … ಮೊರೆಯಿಟ್ಟೆ…
ಸಮುದ್ರದ ಒಪ್ಪಿಗೆಯಿಲ್ಲದೇ ಈ ಸುನಾಮಿ ಈ ರೀತಿ ಭೋರ್ಗರೆಯುತ್ತಿರಲಿಲ್ಲ ಅನ್ನುವುದು ಆ ಕ್ಷಣಕ್ಕೆ ನನಗೆ ಅರಿವೇ ಆಗಲಿಲ್ಲ.
ಅಲೆಗಳು ಈಗ ಕತ್ತಲಿನಂತೆ ಏರುತ್ತಿತ್ತು … ನಾನು ಬದುಕುವ ಯಾವ ಆಸೆಯೂ ಇಲ್ಲದ ಹಾಗೇ ಕೂತಲ್ಲೇ ಕೂತಿದ್ದೆ …
ಪ್ರಾರ್ಥಿಸಿದೆ … ನನ್ನನ್ನು ಉಳಿಸಬೇಡ …
ನನ್ನನ್ನು ಮುಗಿಸುವ ಹೊಂಚು ಹಾಕಿದ್ದೇ ಆದರೆ, ನನ್ನನ್ನು ಇಡಿಯಾಗಿ ನುಂಗಿ ನೀರು ಕುಡಿ ಸಮುದ್ರವೇ … ಅರೆ ಜೀವ ಮಾಡಿ, ನನ್ನನ್ನು ಛಿದ್ರಗೊಳಿಸಿ ನಂತರ ಹಾಗೆಯೇ ಬಿಟ್ಟು ಬಿಡಬೇಡ … ನನಗೆ ಎಲ್ಲವೂ ಪರಿಪೂರ್ಣವಾಗಿರಬೇಕು … ಸಾವು ಕೂಡಾ …
ಉಳಿಸಿದ್ದೇ ಆದರೆ ನಾನು ಎದ್ದು, ಬಟ್ಟೆಗಂಟಿದ ಮರಳಿನ ಕಣ ಕೊಡವಿ ನಿತ್ಯ ಹೋಗುತ್ತೇನಲ್ಲ … ಆ ರೀತಿಯ ನಿರ್ಗಮನಕ್ಕೆ ಅವಕಾಶ ಕೊಡು … ಇಲ್ಲವಾದರೆ ನನ್ನನ್ನು ಪೂರ್ತಿ ಆವರಿಸು …
ಸುನಾಮಿಗೆ ಅದರದ್ದೇ ಭೋರ್ಗರೆತದ ಯೋಚನೆ … ನನ್ನ ಮಾತು ಕಿವಿಗೆ ಬಿತ್ತೇ? ಇಲ್ಲವೇ?
‘ಯಾವುದೇ ಆದರೂ ಪರಿಪೂರ್ಣವಾಗಿಸು ಸಾಗರನೇ, ನನ್ನನ್ನು ಅರೆಜೀವವಾಗಿ ಮಾತ್ರ ಉಳಿಸಬೇಡಾಆಆಆಆಆಆಆ …’ ಗಂಟಲು ಹರಿಯುವಂತೆ ಅಳುತ್ತಾ, ಕಿರುಚಿದೆ …
ಅಷ್ಟರಲ್ಲಿ ಸುನಾಮಿ ನನ್ನನ್ನು ಬಂದು ಅಪ್ಪಳಿಸಿ ಬಿಟ್ಟಿತು … ನಾನು ಸಾವನ್ನು ತಬ್ಬಿ ಕೂತೆ ….

***

ಕಣ್ಣು ಬಿಟ್ಟೆ ..
ಇದೇನು! ಸ್ವರ್ಗ ಅಥವಾ ನರಕ ಕೂಡಾ ನನ್ನ ಭೂಮಿಯಂತೇ ಇದೆಯಲ್ಲ …ಇಂದ್ರ, ಯಮ ಇವರೆಲ್ಲರ ಜಗತ್ತೂ ನನ್ನದರಂತೇ ಇರುತ್ತದಾ? ಮತ್ತೆ ಅದಕ್ಕೆ ಸ್ವರ್ಗ, ನರಕಗಳೆನ್ನುವ ಹೆಸರು ಯಾಕೆ …
ಬದುಕಿದ್ದಾಗಲೇ ಪೋಸ್ಟ್ ಮಾರ್ಟಮ್ ಮಾಡಿ ಮೈಯನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿದ ಹಾಗೆ ಇದೆಯಲ್ಲ … ಸಾವು ಎಲ್ಲ ನೋವಿನಿಂದ ಬಿಡುಗಡೆ ಅನ್ನುತ್ತಾರಲ್ಲ, ಅದೆಲ್ಲ ಸುಳ್ಳಾ ಹಾಗಿದ್ದರೆ?
ಜಜ್ಜಿಹೋದ ನಾನು ಮೆಲ್ಲನೆ ಎದ್ದು ಕೂತೆ … ಬಾಯಿಂದ ಒಂದು ಚೀತ್ಕಾರ ಹೊರಟಿತು …ನಾನು ಸತ್ತಿರಲಿಲ್ಲ …!
ಆದರೆ, ಸುತ್ತ ಮುತ್ತ ಇಡೀ ಜಗತ್ತು ಮುರಿದು ಬಿದ್ದುಬಿಟ್ಟಿತ್ತು … ಮನೆಯಿಲ್ಲ, ಊರಿಲ್ಲ, ಜನರಿಲ್ಲ … ಒರೆಸಿ ಹಾಕಿದಂತೆ ಎಲ್ಲವೂ ಮಾಯ …
ಇಡೀ ಜಗತ್ತಿನಲ್ಲಿನ ಎಲ್ಲ ಜನರೂ ನಾಶವಾಗಿ ಹೋಗಿ ನಾನು ಮಾತ್ರ ಉಳಿದಿದ್ದೇನಾ? ನನ್ನ ಮನೆ ಏನಾಯಿತು? ನನ್ನ ಅಂದದ ವೃಂದಾವನ? ನನ್ನನ್ನು ಸ್ವಾಗತಿಸುತ್ತಿದ್ದ ಬಳ್ಳಿಗಳು ? ಎಲ್ಲ ಎಲ್ಲಿ ಕಾಣೆಯಾದವು ….
ನಾನು ಹೃದಯ ಬಿರಿಯುವಂತೆ ಊಳಿಟ್ಟೆ …
ನಾನು ಈ ವಿಶಾಲ ಪ್ರಪಂಚದಲ್ಲಿ ಒಬ್ಬಳೇ ಉಳಿದಿದ್ದೆ …
ನನ್ನ ಕಣ್ಣೀರನ್ನು ತನ್ನೊಳಗೆ ಸ್ವೀಕರಿಸುತ್ತಿದ್ದ ಸಮುದ್ರ, ಇದ್ದಕ್ಕಿದ್ದ ಹಾಗೆ ರೊಚ್ಚಿಗೆದ್ದು, ನನ್ನನ್ನು ನಿರ್ನಾಮ ಮಾಡಿತ್ತು!
ಎದುರಿಗೆ ಶಾಂತವಾಗಿ ಅಲೆಗಳನ್ನು ಮೂಡಿಸುತ್ತಿದ್ದ ಸಾಗರಕ್ಕೆ ಕೇಳಿದೆ … ‘ನಾನೇನು ಮಾಡಿದ್ದೆ ನಿನಗೆ? ಯಾಕೆ ಹೀಗೆ ಮಾಡಿದೆ? ನಿನ್ನ ಬದುಕಿನ ಯಾವುದೋ, ಎಲ್ಲೋ ಪಲ್ಲಟವಾದರೆ ನನ್ನನ್ನು ಯಾಕೆ ಅತಂತ್ರವಾಗಿಸಬೇಕು ನೀನು? ಯಾಕೆ … ಯಾಕೆ … ಯಾಕೆ ….’ ನಾನು ಕಿರುಚುತ್ತಾ ಕೇಳಿದ್ದಷ್ಟೇ ಲಾಭ … ಸಾಗರ ಸುಮ್ಮಗಿತ್ತು … ಭೋರ್ಗರೆತ ಹೆಚ್ಚಾಗಿ ಕಿವುಡು ಆವರಿಸಿದೆಯಾ ನಿನಗೆ? ನನ್ನೊಳಗಿನ ನೋವು ಕೇಳಿಸದ ಮೇಲೆ, ನೀನು ಮೂಕ ಕೂಡಾ …
ಇನ್ನು ದನಿಯೆತ್ತರಿಸಿ ಕಿರುಚಿ, ಅರಚಿದರೆ ನನ್ನಲ್ಲಿ ಅಳಿದುಳಿದ ಕಸುವೂ ತೀರಿಹೋಗಿ, ನಾನು ಅಳುವುದಕ್ಕೂ ಅಶಕ್ತಳಾಗುತ್ತೇನಷ್ಟೇ …
ಕಠೋರ ಸಾಗರವೇ, ನನ್ನ ಕಣ್ಣಂಚಿನ ಮೂರು ಹನಿ ನಿನ್ನಲ್ಲಿ ಅಡಗಿಸಿಕೊಂಡು ಸಂತೈಸಿದ ನೀನು, ನನ್ನಲ್ಲಿ ಇನ್ನೂ ಸಾವಿರ ಕೋಟಿ ಹನಿಗಳನ್ನು ಹುಟ್ಟು ಹಾಕಿ ಬಿಟ್ಟೆ …
ಈಗ ನೋಡು ಎದುರಲ್ಲೂ ಸಾಗರ … ಎದೆಯಲ್ಲೂ ಸಾಗರ – ನೋವಿನದ್ದು, ಅತಂತ್ರ ಸ್ಥಿತಿಯ ನೋವು …
ಕಾಲೆಳೆಯುತ್ತಾ ನನ್ನ ಮನೆಯಿದ್ದ ಕಡೆ ಸಾಗಿದೆ …
ಅಲ್ಲೇನಿತ್ತು?! ಎಲ್ಲ ನಾಶವಾಗಿ ಉಳಿದದ್ದು ಮುರಿದು ಬಿದ್ದ ಇಟ್ಟಿಗೆ, ಕಲ್ಲು, ಜಲ್ಲಿಗಳ ರಾಶಿ …ಮತ್ತು ಅದರಡಿಯಲ್ಲಿನ ಹೆಣಗಳು … ಅಯ್ಯೋ! ಹೆಣಗಳಿಗೆ ಸಂಸ್ಕಾರವಾಗಬೇಕು… ಇಲ್ಲದಿದ್ದರೆ ಅತೃಪ್ತ ಆತ್ಮಗಳಂತೆ ನನ್ನನ್ನು ಕಾಡುತ್ತವೆ ….
ನಾನು ಉಗುರಿನಿಂದ ನೆಲಬಗೆದು, ಗುಂಡಿ ತೋಡಿ ಒಂದೊಂದೇ ಹೆಣವನ್ನು ಹೂಳಲು ಆರಂಭಿಸಿದೆ …ದಿನಗಳೇ ಕಳೆದು ಹೋದವು ಈ ಕೆಲಸದಲ್ಲಿ.
ಅಷ್ಟರಲ್ಲಿ ನಾನು ಶಕ್ತಿಹೀನಳಾಗಿದ್ದೆ. ಕುಡಿಯಲು ನೀರೂ ಇಲ್ಲದೇ ಮತ್ತದೇ ಸಮುದ್ರದ ಉಪ್ಪು ನೀರನ್ನೇ ಕುಡಿದೆ ಚೂರೇ ಚೂರು …ಹೊಟ್ಟೆ ತೊಳೆಸಿದಂತಾಯಿತು …ಹೆಣಗಳ ವಾಸನೆ ಆ ನೀರಿನಲ್ಲೂ …
ಈಗಿನ್ನು ಮನೆ ಕಟ್ಟಲು ಶುರು ಮಾಡಬೇಕು …
ಎಲ್ಲಿಂದ ಮತ್ತೆ ಕಟ್ಟಲು ಶುರು ಮಾಡುವುದು! ನಾನೇ ಸಾಮಾನನ್ನು ಕಟ್ಟುವುದಕ್ಕೆ ಬೇಕಾದ ಸಾಮಾನನ್ನು ಸಂಗ್ರಹಿಸಿ, ಬುನಾದಿ ಹಾಕಿ, ಉಳಿದವನ್ನು ಒಂದರ ಮೇಲೊಂದು ಏರಿಸಿ, ನನಗೊಂದು ಸೂರು ಮಾಡಿಕೊಳ್ಳುವುದು ಯಾವ ಕಾಲಕ್ಕೆ? ಅಲ್ಲಿಯವರೆಗೆ ನಾನು ಎಲ್ಲಿರಲಿ? ಏನು ತಿನ್ನಲಿ? ಏನು ಉಡಲಿ?
ಕೈ ಕಾಲು ತಣ್ಣಗಾಯಿತು ಅದೆಲ್ಲದರ ನೆನಪಿನಿಂದ …
ನಾನು ಯಾಕೆ ಸಮುದ್ರದ ಹತ್ತಿರ ಹೋದೆ ಅಥವಾ ಸಮುದ್ರ ಯಾಕೆ ನನ್ನನ್ನು ಇಡಿಯಾಗಿ ನುಂಗಲಿಲ್ಲ? ಒಂದು ಪ್ರಶ್ನೆಗಾದರೂ ಉತ್ತರಿಸು…ಕಿವುಡು, ಮೂಗ ಸಮುದ್ರ ಕೇಳಿಸದಂತೆ ನಟಿಸಿತು …
ನಾನು ಸಿಕ್ಕ ಕಡ್ಡಿ, ಕಲ್ಲನ್ನೆಲ್ಲ ಹೊತ್ತು ಹೊತ್ತು ದಣಿದೆ … ತುಂಬ ದಿನಗಳು, ವರ್ಷಗಳು …
ಸದಾ ಕಾಲ ಕಟ್ಟುವುದರ ಕಡೆಯೇ ಗಮನ ನನಗೆ. ಜಗತ್ತಿನ ಪರಿವೆಯಿಲ್ಲದೇ ಅದರಲ್ಲೇ ನಿರತಳಾದೆ … ಕಟ್ಟಿಕೊಳ್ಳಬೇಕು ನೀನು ನಿರ್ನಾಮ ಮಾಡಿದ ಬದುಕನ್ನು …ಸಮುದ್ರಕ್ಕೆ ಹೇಳಿದೆ, ಅದಕ್ಕೆ ಕೇಳಿಸದಿದ್ದರೆ ನಾನೇನು ಮಾಡಲಿ … ನನ್ನ ಮಾತನ್ನು ನಾನು ಖಾಲಿ ಮಾಡಬೇಕು …
ಅಷ್ಟರಲ್ಲಿ ಅಲ್ಲಿ ದೂರದಲ್ಲಿ ಒಂದು ಚಲಿಸುತ್ತಿರುವ ಆಕೃತಿ!!
ಯಾರದು? ಮತ್ತೊಂದು ಜೀವ …?! ಕಾಲೆಳೆದುಕೊಂಡು ಇನ್ನೇನು ಬೀಳುವಂತೆ ಬರುತ್ತಿರುವುದು ಮನುಷ್ಯನೇ? ಪ್ರಾಣಿಯೇ? ಅಯ್ಯೋ! ಉಸಿರಾಡುವ ಮತ್ತೊಂದು ಜೀವಿ ಯಾವುದಾದರೂ ಆದೀತು ದೇವಾ … ಕ್ರೂರ ಮೃಗವಾದರೂ ಸರಿಯೇ …
ಹತ್ತಿರವಾಗುತ್ತಾ ಹೋದಂತೆ ಅದರ ಆಕಾರ ಸ್ಪಷ್ಟವಾಗುತ್ತಾ ಹೋಯಿತು … ನೋಡಲಿಕ್ಕಂತೂ ಅದು ಮೃಗವಾಗಿರಲಿಲ್ಲ ಸಧ್ಯ! ಅಂದಮೇಲೆ ಅದು ಮನುಷ್ಯನೆಂದೇ ಅರ್ಥವಲ್ಲವೇ?
ಹತ್ತಿರವಾದ ಆ ವ್ಯಕ್ತಿ ಕಲೆಸುತ್ತಿದ್ದ ಮಣ್ಣಿಗೆ ಬೊಗಸೆಯಲ್ಲಿದ್ದ ನೀರು ಸುರಿಯಿತು …
ಇಷ್ಟು ದಿನ ನಾನೇ ನೀರು ತಂದು, ನಾನೇ ಕಲೆಸಿ, ನಾನೇ ಕಟ್ಟಬೇಕಿತ್ತು …ಇನ್ನು ನೀರು ತರಲಾದರೂ ಒಬ್ಬರಿದ್ದಾರೆ ಜೊತೆಗೆ ಸಮುದ್ರವೇ, ಒಬ್ಬರಾದರೂ ಇದ್ದಾರೆ … ಇನ್ನು ಒಂದು ನೆಲೆ ಸಿದ್ಧವಾಯಿತೆಂದೇ ತಿಳಿ, ಮನಸಿನಲ್ಲೇ ಆ ಸಮುದ್ರಕ್ಕೆ ಸವಾಲು ಹಾಕಿದೆ …
ನನ್ನೊಡನೆ ಮನೆ ಕಟ್ಟುವೆಯಾ? ಎಂದೆ … ತಲೆಯಾಡಿಸಿತು ಆ ವ್ಯಕ್ತಿ …
‘ನನ್ನ ಹೆಸರು ಏಕಾಂಗಿ … ನಿನ್ನ ಹೆಸರು? ಎಂದೆ ..
‘ನನ್ನ ಹೆಸರೂ ಏಕಾಂಗಿ’ …

‍ಲೇಖಕರು G

24 October, 2013

ನಿಮಗೆ ಇವೂ ಇಷ್ಟವಾಗಬಹುದು…

18 Comments

  1. sunil rao

    One of the best articles…

  2. samyuktha

    Excellent!!

  3. Vidyashankar H

    Good Article 🙂

  4. USHA RAI

    Bharathi, nimma expression style bahala bahala ishta aayithu

  5. Swarna

    ಕಣ್ಣ ಹನಿಗಳು ಕಟ್ಟಿ ಕೊಡುವ ಬಂಧ ದೊಡ್ಡದು. nice

  6. Sarala

    manassige anisiddu helalu padagale sigutilla Bharathi

  7. Aravind

    unlike Bharathi !!

  8. Anonymous

    out standing…

  9. bharathi b v

    Aravind yaake unlike helriyalla ….

    • Aravind

      🙂

  10. Anil Talikoti

    Excellent article!

  11. Ashok Shettar

    ಎಲ್ಲವೂ ಎಲ್ಲರೂ ನಿರ್ನಾಮವಾಗಿ ಹೋದಾಗ ಬದುಕುಳಿದ ಜೀವದ ಬದುಕೂ ಸಾವೇ ಎನ್ನುವಂತಿರುವಲ್ಲಿ, ಮತ್ತೆ ಎಲ್ಲವನ್ನೂ ಕಟ್ಟಿಕೊಳ್ಳುವ ಆಶಾವಾದ ಕಿಪ್ಲಿಂಗ್ ನ If ಎಂಬ ಕವಿತೆಯನ್ನು ನೆನಪಿಸಿತು. ಬರಹದುದ್ದಕೂ ರೆಟರಿಕ್ಸ್ ಇದ್ದರೂ ಇಲ್ಲಿ ಅದು ಬರಹದ ಶಕ್ತಿಯಾಗಿದೆ, ದೋಷವಾಗಿಲ್ಲ…

  12. sindhu

    ಭಾರತಿ,
    ವಿಶಿಷ್ಟವಾದ ಬರಹ ಅನ್ನಿಸ್ತು. ಬದುಕಿನ ಸಮುದ್ರದಲ್ಲಿ ಎದ್ದ ಸುನಾಮಿಯಿಂದ ತತ್ತರಿಸಿಯೂ ನಿಲ್ಲಲು ಪಟ್ಟ ಪ್ರಯತ್ನಕ್ಕೆ ನನ್ನ ತಲೆಬಾಗುವಿಕೆ.
    ಎಲ್ಲವೂ ಇಲ್ಲವಾದಾಗ ಏನೋ ಒಂದು ಇರಬಹುದು ಎಂದು ಎದ್ದೇಳುವ ಆಶಾವಾದ ಇಷ್ಟ ಆಯ್ತು.
    ಜೀವನ್ಮುಖತೆ ಎಂಬ ಒಂದು ಹನಿ ಅಮೃತದಂತೆ ಕೆಲಸ ಮಾಡುತ್ತದೆ.
    ಪ್ರೀತಿಯಿಂದ,
    ಸಿಂಧು

  13. amardeep.p.s.

    ishtavayitu madam,

  14. Santhoshkumar LM

    Superb!

  15. Dr Vani Sundeep

    Bharati akka tumba tumba chenngide baraha…tanage oodisikondu hooyitu.

  16. Rohith

    excellent madam!! 🙂 liked it very much!

  17. Anonymous

    Samudra sankathana.sunamiyallilidu.paragi mane kattikondav a ralli nanobba.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading