ಜಗತ್ತಿನಲ್ಲಿ ನೀವು ತುಂಬ ಹೆದರುವುದು ಯಾವುದಕ್ಕೆ ಅಂತ ಯಾರನ್ನಾದರೂ ಪ್ರಶ್ನಿಸಿದರೆ ಅವರ ಉತ್ತರ ಏನೇನಿರಬಹುದು? ಸಾವು? ಬದುಕು? ಕತ್ತಲು? ದೆವ್ವ-ಭೂತ? ಬೆಂಕಿ? ಸರಿ, ಈಗ ನನ್ನನ್ನು ಅದೇ ಪ್ರಶ್ನೆ ನೀವು ಕೇಳಿದಿರಿ ಎಂದಿಟ್ಟುಕೊಳ್ಳಿ … ನಾನು ಹೆದರುವುದು ಎರಡೇ ಎರಡು ವಿಷಯಕ್ಕೆ … ಮೊದಲನೆಯದು, ಹೊಸದಾಗಿ ಮದುವೆಯಾದವರ ಮನೆಗೆ ಹೋಗುವುದಕ್ಕೆ ಮತ್ತು ಎರಡನೆಯದು ಆಗ ತಾನೇ ಮಾತು ಕಲಿತು ನರ್ಸರಿಗೆ ಹೋಗಲು ಶುರು ಮಾಡಿರುವ ಮಗುವಿರುತ್ತದಲ್ಲ ಆ ಮನೆಗೆ ಹೋಗುವುದಕ್ಕೆ…surprised? ಇರಿ, ಹೇಳುವುದೆಲ್ಲ ಕೇಳಿಬಿಡಿ ಪ್ಲೀಸ್ …
ಹೊಸತಾಗಿ ಮದುವೆಯಾದವರ ಮನೆಗೆ ಹೋದರೆ ನಿಮ್ಮನ್ನು ಎದುರುಗೊಳ್ಳುವುದು ಏನು ಅಂತ ನೆನಪಿಸಿಕೊಳ್ಳಿ … ಮದುವೆಗೆ ಮಾಡಿ ಉಳಿದುಹೋಗಿರುವ ಸ್ವೀಟ್ಸ್ ಮತ್ತು ಮದುವೆಯ ಫ಼ೋಟೋ ಆಲ್ಬಮ್ ಮತ್ತು ವೀಡಿಯೋ ಸಿಡಿ! ಮದುವೆಯ ಸಿಹಿಯನ್ನು ತಿಂದು ಮುಗಿಸಿಬಿಡಬಹುದು. ಆದರೆ ಆ ಆಲ್ಬಮ್?! ಅಬ್ಬಬ್ಬಾ ನನ್ನ ಪಾಲಿಗೆ ಅದೊಂದು nightmare. ಡಿಕ್ಷನರಿಯಷ್ಟು ದಪ್ಪದ ಮೂರ್ನಾಲ್ಕು ಆಲ್ಬಮ್‌ಗಳನ್ನು ಆ ಮನೆಯವರು ಹೊರಲಾರದೆ ಹೊತ್ತು ತರುತ್ತಿದ್ದರೆ ನನ್ನ ಎದೆ ಡವಗುಟ್ಟುತ್ತದೆ. ಏನೋ ಒಂದೈವತ್ತು ಫೋಟೋಗಳಿದ್ದರೆ ಹೇಗೋ ನೋಡಿ ಮುಗಿಸಬಹುದು. ಆದರೆ ಒಂದೊಂದರಲ್ಲೂ ನೂರಾರು ಫೋಟೋ ಇದ್ದರೆ ಗತಿಯೇನು ಹೇಳಿ! ಆ ಹುಡುಗಿಯ ಅಂಗೈ ಮತ್ತು ಮುಂಗೈನ ಮೆಹಂದಿಯದ್ದೇ ಒಂದು ರಾಶಿ ಫೋಟೋ ಒಟ್ಟಿರುತ್ತಾರೆ. ಇನ್ನು ಶಾಸ್ತ್ರಗಳದ್ದು ಇನ್ನೊಂದು ರಾಶಿ. ಮತ್ತೆ ಎಲ್ಲಕ್ಕಿಂತ ನಡುಕ ಬರುವುದು ಆ ರಿಸೆಪ್ಷನ್‌ನ ಫೋಟೋಗಳು. ಬಂದವರನ್ನೆಲ್ಲ ಸಾಲು ಸಾಲಾಗಿ ನಿಲ್ಲಿಸಿ ಗ್ರೂಪ್ ಫೋಟೋ ತೆಗೆಸಿಬಿಟ್ಟಿರುತ್ತಾರಲ್ಲ ಅವುಗಳು! ಅದರಲ್ಲಿರುವವರು ಅರ್ಧಕ್ಕರ್ಧ ಜನ ಯಾರು ಅಂತ ಗೊತ್ತೇ ಇರುವುದಿಲ್ಲ. ಆದರೆ ಮನೆಯವರು ಅವರ ಇಡೀ ವಂಶವೃಕ್ಷವನ್ನೇ ನಮ್ಮ ಮಂಡೆಗೆ ತುರುಕುವ ಶಪಥಗೈದುಬಿಟ್ಟಿರುತ್ತಾರೆ.
ಅಲ್ಲಿ ಹಿಂದೆ ಹಸಿರು ಸೀರೆ ಉಟಿದಾಳಲ್ಲ ಅವಳು ನನ್ನ ದೊಡ್ಡ ತಾತನ ಎರಡನೆಯ ಸೊಸೆ. ಅವಳ ಪಕ್ಕ ನೀಲಿ ಶರ್ಟ್ ಹಾಕಿದಾನಲ್ಲ, ಅವನು ನನ್ನ ಮೂರನೆಯ ತಮ್ಮನ ಹೆಂಡತಿಯ ಎರಡನೆಯ ಅಣ್ಣ. ಅಲ್ಲಿ ಕೆಂಪು ಸೀರೆಯವಳು ನನ್ನ ತಾತನ ಮೊದಲನೆಯ ಹೆಂಡತಿ-ಅದೇ ದಾವಣಗೆರೆಯಲ್ಲಿದಾರೆ ಅಂದಿದ್ದೆನಲ್ಲ, ಅವರ ಎರಡನೆಯ ಮಗಳ ಮೂರನೆಯ ಮಗಳು. ಇನ್ನು ಆ ಬೆಳ್ಳಗಿರೋ ಹುಡುಗಿ ಇದ್ದಾಳಲ್ಲ, ಅವಳು ನನ್ನ ಸೋದರತ್ತೆಯ ಮೂರನೆ ಮಗ-ಅದೇ ಮೊನ್ನೆ ಮೊನ್ನೆ ಮೈಸೂರಲ್ಲಿ ಮದುವೆ ಆಯ್ತು ಅಂದಿದ್ನಲ್ಲ, ಅವನ ಹೆಂಡತಿ … ಅಯ್ಯೋ! ನಾನು ಸೀಟಿನಲ್ಲಿ ಈಗಾಗಲೇ ತಿಣುಕಲು ಶುರು ಮಾಡಿರುತ್ತೇನೆ. ಅವರಿಗೆ ಅದರ ಕಡೆ ಗಮನವೇ ಇರುವುದಿಲ್ಲ. ಇದು ಬರೀ ಒಂದು ಫೋಟೋದ ಕಥೆಯಾದರೆ ರಿಸೆಪ್ಷನ್‌ನ ನೂರು ಫೋಟೋಗಳಲ್ಲಿರುವ ಎಲ್ಲರ ಪರಿಚಯದ ಬಾಲ ಎಲ್ಲಿರುತ್ತದೋ ಅಂತ ನಾನು ಮನಸ್ಸಿನಲ್ಲಿ ಬೆಚ್ಚಲು ಶುರು ಮಾಡಿರುತ್ತೇನೆ. ಹೇಗಾದರೂ ಮಾಡಿ ಅದರಿಂದ ತಪ್ಪಿಸಿಕೊಳ್ಳೋಣ ಅಂತ ಮನಸ್ಸು ಮಾರ್ಗ ಹುಡುಕಲು ಶುರು ಮಾಡುತ್ತದೆ. ಇನ್ನೊಂದಿಷ್ಟು ಫೋಟೋಗಳಾದ ಮೇಲೆ ಬಿಕ್ಕಳಿಸಲು ಶುರು ಮಾಡಿ ‘ನೀರು ಬೇಕು’ ಅನ್ನುತ್ತೇನೆ. ಅವರು ಪಾಪ ಕರುಣಾಮಯಿಗಳಂತೆ ಒಳಗೆ ಹೊರಟ ಕೂಡಲೇ ಒಂದಿಷ್ಟು ಪುಟಗಳನ್ನು ಒಟ್ಟಾಗಿ ಮುಂದಕ್ಕೆ ಮಗುಚಿ ಹಾಕಿಬಿಟ್ಟು ಆಲ್ಬಮ್‌ನ ಕೊನೆ ಕೊನೆಗೆ ಬಂದು ಬಿಟ್ಟು ಒಳಗೊಳಗೇ ನನ್ನ ಬೆನ್ನು ನಾನೇ ತಟ್ಟಿಕೊಳ್ಳುವಷ್ಟರಲ್ಲಿ ಒಳ ಹೋದವರು ನೀರು ಹಿಡಿದು ಬರುತ್ತಾರೆ. ಮತ್ತೆ ಪರಿಚಯ ಮುಂದುವರೆಯುತ್ತದೆ. ಅವರನ್ನು ಏಮಾರಿಸಿದ ಖುಷಿಯಲ್ಲಿ ನಾನು ಒಳಗೊಳಗೇ ನಗುತ್ತಿರುತ್ತೇನೆ. ಮತ್ತೆ ವಂಶವೃಕ್ಷದ ಪರಿಚಯಕ್ಕೆ ಇಳಿಯುತ್ತಾರೆ. ಇದು ನನ್ನ ಮೂರನೆಯ ಅತ್ತಿಗೆಯ ಎರಡನೆಯ ಅಣ್ಣ …. ಅಂತ ಹೇಳುವಷ್ಟರಲ್ಲಿ ಅವರಿಗೆ ಆ ಮೂರನೆಯ ಅತ್ತಿಗೆಯ ಫೋಟೋ ಎಲ್ಲೂ ಸಿಗಲಿಲ್ಲವಲ್ಲ ಅಂತ ಕಾಳಜಿ ಶುರುವಾಗಿಹೋಗುತ್ತದೆ. ಅಯ್ಯೋ ನಿಮಗೆ ಅವರನ್ನ ತೋರಿಸಲಿಲ್ಲ ಅಂತ ಕಾಣುತ್ತದೆ ಅಂತ ಅವರು ಶುರು ಮಾಡಿದ ಕೂಡಲೇ ಹಾರ್ಟ್ ಅಟ್ಯಾಕ್ ಆಗುವ ರೀತಿ ಬೆವರಿಳಿಯಲು ಶುರುವಾಗುತ್ತೆ. ಅಯ್ಯೋ ಪರವಾಗಿಲ್ಲ ಬಿಡಿ, ಆಗ್ಲೇ ನೋಡಿದೆ ಅನ್ಸತ್ತೆ ಅಂತ ಮಾತು ಮರೆಸಲು ನೋಡಿದರೆ ‘ಇಲ್ರೀ ನೀನು ಅವರನ್ನ ನೋಡಿಲ್ಲ. ಅವರನ್ನು ತೋರಿಸದೇ ಅವರ ಅಣ್ಣನ್ನ ಹೇಗೆ ಪರಿಚಯ ಮಾಡೋದು’ ಅಂತ ಪುಟ ಹಿಂತಿರುಗಿಸಲು ಶುರು ಮಾಡುತ್ತಾರೆ! ನಾನು ಹತಾಶೆಯ ತುತ್ತ ತುದಿ ತಲುಪಿರುತ್ತೇನೆ ಇಷ್ಟು ಹೊತ್ತಿಗೆ. ಅಂತೂ ಮತ್ತೆ ಹಿಂತಿರುಗಿಸಿ ಅಲ್ಲಿಂದ ಮತ್ತೆ ಪರಿಚಯ ಶುರುವಾಗುತ್ತದೆ … ನಾನು ಮತ್ತೆ ಸತ್ತಂತೆ ಕಿವಿ ಮತ್ತು ಮನಸ್ಸು ಬ್ಲಾಕ್ ಮಾಡಿಕೊಂಡು ಬ್ಲ್ಯಾಂಕ್ ದೃಷ್ಟಿ ಬೀರುತ್ತ ಆ ಆಲ್ಬಮ್‌ನ ಕೊನೆ ತಲುಪುತ್ತೇನೆ. ಅಬ್ಬಾ! ಈ ನರಕ ಶಿಕ್ಷೆ ಮುಗಿಯಿತು ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ಅವರ ಕೈಗೆ ಮತ್ತೊಂದು ಡಿಕ್ಷನರಿ ಬಂದಿರುತ್ತದೆ … ಅಲ್ಲಿ ಗಂಡಿನ ಕೈಲಿ ಹೆಣ್ಣು, ಹೆಣ್ಣಿನ ಹೃದಯದೊಳಗೆ ಗಂಡು, ಹೂಬಳ್ಳಿಯಲ್ಲಿ ಅವಳು-ಅವನು …ಆರಾರು-ಏಳೇಳು ಮುಖಗಳ ಕೊಲಾಜ್…ವರಪೂಜೆಯಲ್ಲಿನ ಕೊಬ್ಬರಿ ಬಟ್ಟಲು ಮಾಡಿದವರ ವಿಳಾಸದ ವಿವರ …ಅರಿಶಿನ-ಕುಂಕುಮದ ಕಾಗದದ ಹೂಗಳ ಕ್ಲೋಸಪ್ …ಮತ್ತೆ ಅಲ್ಲಿ ಕೂತ ನೆಂಟರ ಪರಿಚಯ ಎಲ್ಲದರ ಫೋಟೊಗಳ ಮೆಗಾ ಸೀರಿಯಲ್ ಶುರುವಾಗುತ್ತದೆ. ಅಷ್ಟರಲ್ಲೇ ನನ್ನ ತಲೆ ತಿರುಗಲು ಶುರುವಾಗಿರುತ್ತದೆ. ಹೇಗೋ ಸಂಭಾಳಿಸಿ ಕೂತವಳ ಮುಂದೆ ಬೀಗರ ಔತಣ ಮತ್ತು ಸತ್ಯನಾರಾಯಣ ಪೂಜೆಯ ಡಿಕ್ಷನರಿ ಎದುರಾಗುತ್ತದೆ! ಮಂಗಳಾರತಿ ತಟ್ಟೆ ಮಾಡಿದವರ, ಹೂವಿನ ದಂಡೆ ಮಾಡಿದವರ, ರಂಗೋಲಿ ಹಾಕಿದವರ ಹೆಸರು, ಪ್ರವರ, ಗೋತ್ರ, ಜಾತಕ, ನಕ್ಷತ್ರ, ರಾಶಿ ಎಲ್ಲ ಮತ್ತೆ ಶುರುವಾಗುತ್ತದೆ! ಅಂತೂ ಕೊನೆಗೊಮ್ಮೆ ಎಲ್ಲ ಆಲ್ಬಮ್‌ಗಳನ್ನು ನೋಡುವಷ್ಟರಲ್ಲಿ ಬದುಕು ನಶ್ವರ ಅನ್ನುವಂಥ ವೈರಾಗ್ಯದ ಹಂತಕ್ಕೆ ತಲುಪಿ ಬಿಟ್ಟಿರುತ್ತದೆ ಮೆತ್ತಗಾದ ಜೀವ …!

ಇದಿಷ್ಟೆಲ್ಲ ಅನುಭವಿಸುವುದು ಸಾಲದಂತ ಸ್ವಲ್ಪ ಹತ್ತಿರದ ಸಂಬಂಧಿಗಳಾಗಿಬಿಟ್ಟರೆ ಮದುವೆಯ ವೀಡಿಯೋ ಹಾಕಿ ಕೂರಿಸಿಬಿಡುತ್ತಾರೆ. ಅದು ಇನ್ನೊಂದು ಶಿಕ್ಷೆ. ಗಂಡು-ಹೆಣ್ಣು ಹಾರ ಬದಲಿಸಿಕೊಳ್ಳುವುದೇ ತನಗಾಗೇನೋ ಅನ್ನುವ ಭ್ರಮೆಗೆ ಬಿದ್ದ ವೀಡಿಯೋಗ್ರಾಫರ್ ಹುಚ್ಚು ಹಿಡಿಸುವ in charge ತೆಗೆದುಕೊಂಡಿರುತ್ತಾನೆ. ಊಟಕ್ಕೆ ಕೂತವರ ಸಾಲು ಸಾಲು, ಅಡುಗೆಯ ವರ್ಣನೆ … ಮುಗಿಯುವ ಕಥೆಯಲ್ಲ ಇವೆಲ್ಲ! ಒಂದು ಸಲ ಹೀಗಾಯಿತು .. ನನ್ನ ಹತ್ತಿರದ ಸಂಬಂದಿಯ ಮದುವೆಯ ವೀಡಿಯೋ ಹಾಕಿ ಕೂರಿಸಿದ್ದರು. ಊಟದ ಸೀನ್ ಶುರುವಾದಾಗ ‘ಮೊದಲನೆಯ ಬ್ಯಾಚ್‌ಗೆ ಯಾರು ಕೂತು ಊಟ ಗದುಕಿದರೋ, ಯಾರು ಕೆಲಸ ಮಾಡೋದಿಕ್ಕೆ ಬಂದಿದ್ರೋ ಎಲ್ಲ ಈಗ ಗೊತ್ತಾಗುತ್ತೆ ಅಂದರು. ಸಿಕ್ಕಾಪಟ್ಟೆ ಹಸಿವಾಗಿಹೋಗಿ ಮೊದಲನೆಯ ಬ್ಯಾಚ್‌ಗೆ ಕೂತು ಊಟ ಮಾಡಿದ್ದ ನಾನು-ಮತ್ತೊಬ್ಬಳು ಕಸಿನ್ ಸ್ಥಿತಿ ಹೇಗಾಗಿರಬೇಕು ಯೋಚಿಸಿ! ಈ ರೀತಿ ಯಾವ ಯಾವುದೋ records ಮತ್ತು statistics ಎಲ್ಲ ಅಲ್ಲಿ ತಯಾರಾಗುತ್ತ ಹೋಗುವಾಗ ಸಂಬಂಧ ಪಟ್ಟವರ ಗತಿ …? ನಾನು ಅದಕ್ಕೇ ತೀರ್ಮಾನಿಸಿದ್ದೇನೆ ನಾನು ಮಾತ್ರ ಈ ರೀತಿಯ ತಪ್ಪು ಎಂದೂ ಮಾಡುವುದಿಲ್ಲ ಅಂತ. ನನ್ನ ಮಗನ ಮದುವೆಯಾದ ನಂತರ ನೀವು ಧೈರ್ಯವಾಗಿ ನಮ್ಮ ಮನೆಗೆ ಬರಬಹುದು ..:)
ಇದರಷ್ಟೇ nightmare ಅನ್ನುವಂಥದ್ದು ಆಗ ತಾನೇ ಸ್ಕೂಲಿಗೆ ಸೇರಿರುವ ಮಗುವಿನ ಮನೆ. ನನ್ನ ಗಂಡನ ಗೆಳೆಯನೊಬ್ಬ ಇದ್ದ. ಅವನ ಮಗುವಿಗೆ ಆಗ 3 ವರ್ಷ. ನಾವು ಹೋದ ಐದು ನಿಮಿಷಕ್ಕೆ ‘ಸ್ವೀಟಿ Twinkle Twinkle ಹೇಳಮ್ಮಾ’ ಅಂತ ಅಪ್ಪ ಶುರು ಹಚ್ಚಿಕೊಳ್ಳುತ್ತಿದ್ದ. ಅದೋ ಪಾಪ ಯಾವುದೋ ಮೂಡಿನಲ್ಲಿರುತ್ತದೆ. ತ್ವಿಂಕಲ್ …ತ್ವಿಂಕಲ್ …ತ್ವಿಂಕಲ್ … ಅಂತ ಹೇಳಿದ್ದೇ ರಾಗ ಹಾಡಲು ಶುರು ಮಾಡಿ ಅಲ್ಲೇ ನಿಂತುಬಿಡುತ್ತಿತ್ತು. ಅಷ್ಟರಲ್ಲಾಗಲೇ ಸ್ವಲ್ಪ ಸಿಟ್ಟಿಗೆದ್ದಿರುತ್ತಿದ್ದ ಆ ಮಗುವಿನ ಅಪ್ಪ ಹೋಗ್ಲಿ ಹಂಟಿ ಡಂಟಿ ಸ್ಯಾಟ್ ಆನ್ ಅ ವಾಲ್ ಹೇಳಮ್ಮಾ ಅಂತ ಶುರು ಮಾಡುತ್ತಿದ್ದ. ಅಲ್ಲಿ ಹಂಟಿ ಡಂಟಿ ತ್ವಿಂಕಲ್ ತ್ವಿಂಕಲ್ ಜೊತೆ ಸೇರಿ ಪಾಪ ಮತ್ಯಾವುದೋ ಚಿತ್ರಾನ್ನದ rhyme ಶುರು ಮಾಡಿಬಿಡುತ್ತಿತ್ತು ಆ ಮಗು. ಸರಿ ಆಮೇಲೆ ಇವಳಿಗೆ advertisement ಎಲ್ಲ ಬಾಯಿಗೆ ಬರುತ್ತೆ… ಬೋರ್ನ್‌ವಿಟಾದು ಹೇಳು ಪುಟ್ಟಾ, ಆ ಕಾರ್ಟೂನ್‌ದು ಹಾಡು ಹೇಳಮ್ಮಾ, ಆ ಸೀರಿಯಲ್‌ದು title song ಹೇಳು ಕಂದಾ ಅಂತ ಅವಳ ಅಮ್ಮ ಶುರು ಮಾಡುತ್ತಿದ್ದಳು. ಇದು ಅಮ್ಮನಿಗೂ ಬೆಲೆ ಕೊಡದೇ ಬಾಯಿಗೆ ಬಂದಿದ್ದು ಹೇಳುತ್ತಾ ಕೂತುಬಿಡುತ್ತಿತ್ತು. ಅಷ್ಟರಲ್ಲಿ ಅವಳ ಅಪ್ಪ ಹೇಗಾದರೂ ಮಾಡಿ ಮಗುವಿನ ಪಾಂಡಿತ್ಯ ನಮಗೆ ತೋರಿಸಲೇ ಬೇಕೆನ್ನುವ ಛಲದಲ್ಲಿ ಸರಿ, 1-2-3 ಹೇಳಮ್ಮಾ ಅಂತ ಶುರು ಮಾಡುತ್ತಿದ್ದ. ಆ ಮಗು ಅಪ್ಪನ ಮಾನ ತೆಗೆಯುವ ಛಲಕ್ಕೆ ಬಿದ್ದ ಹಾಗೆ ಬೇಕಂತ ಒಂದಾದ ಮೇಲೆ ಎಂಭತ್ತು, 9 ಆದ ಮೇಲೆ 100 ಅಂತ ಬಾಯಿಗೆ ಬಂದಿದ್ದು ಹೇಳಲು ಶುರುವಿಟ್ಟುಕೊಳ್ಳುತ್ತಿತ್ತು. ಅಂತೂ ವರ್ಣಮಾಲೆ-ಗಣಿತ-ಭಗವದ್ಗೀತೆ ಶ್ಲೋಕಗಳು ಎಲ್ಲ ವಿಷಯ ಎತ್ತಿ ಅದು ಹೇಳು, ಆಂಟಿಗೆ ಇದು ಹೇಳು ಅಂತ ಕೂತಲ್ಲೇ ನಮ್ಮನ್ನು ಒರಳಿಗೆ ಹಾಕಿದ ಚಟ್ನಿಯ ಥರ ನುಣ್ಣಗೆ ರುಬ್ಬಿ ಬಿಡುತ್ತಿದ್ದರು. ಆಮೇಲೆ ಆಂಟಿಗೆ flying kiss ಕೊಡಪ್ಪಾ ಅಂತ ಶುರುವಾಗಿ, ಬೈ ಹೇಳಪ್ಪಾ ಅಂತ ಪ್ರಾಣ ತಿಂದು, ಗುಡ್ ನೈಟ್ ಅಂತ ಸಲ್ಯೂಟ್ ಮಾಡಿಸಿ (ಗುಡ್ ನೈಟ್ ಹೇಳುವಾಗ ಯಾರು ಸಲ್ಯೂಟ್ ಮಾಡುತ್ತಾರೆ ಅನ್ನುವ ಯಕ್ಷಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ!) ನಮ್ಮನ್ನು ಬೀಳ್ಕೊಡುವಷ್ಟರಲ್ಲಿ ನಾನು ಸತ್ತ ಕೋಳಿ!! ಇದನ್ನೆಲ್ಲ ಅನುಭವಿಸಿ ಸುಸ್ತಾದ ನಾನು ಮನೆಗೆ ಯಾರಾದರೂ ಬಂದಾಗ ನನ್ನ ಮಗ ತಾನಾಗಿಯೇ ಏನಾದರೂ rhymes, ಅದೂ, ಇದೂ ಅಂತ ಪಾಂಡಿತ್ಯ ಶುರು ಮಾಡಿದರೂ ಬಂಗಾರ ಒಳಗೆ ಹೋಗಮ್ಮಾ … ಆಮೇಲೆ ಮಲಗುವಾಗ ನನ್ ಹತ್ರ ಅದೆಲ್ಲ ಹೇಳುವಿಯಂತೆ ಅಂತ ಒಳಗೆ ಸಾಗಹಾಕುತ್ತಿದ್ದೆ. ನನ್ನ ಮಗನ ಮುಖ ಒಂದೊಂದು ಸಲ ನಾನು ಈ ಥರ ಒಳಗೆ ಕಳಿಸಿದರೆ ಸಿಟ್ಟಿಗೆ ಉರಿಯುತ್ತಿತ್ತು … ಆದರೂ ಪರವಾಗಿಲ್ಲ, ನಾನು ಅನುಭವಿಸಿದ ಕಷ್ಟ ಜಗತ್ತಿನ ಇನ್ನು ಯಾರಿಗೂ ನಾನು ಕೊಡಲೇಬಾರದು ಅಂತ ತೀರ್ಮಾನಿಸಿದ್ದೆ! ಮಕ್ಕಳನ್ನು ಅವರ ಪಾಡಿಗೆ ಸುಮ್ಮನೆ ಬಿಟ್ಟರೆ ಅವು ಅದ್ಭುತ entertainment ಕೊಡುತ್ತವೆ. ನನ್ನ ಗೆಳತಿಯ ಮಗನಿಗೆ ಜ್ವರಕ್ಕೆ ಗಂಟಲು ಕಟ್ಟಿ ಗೊಗ್ಗರಾಗಿದ್ದಕ್ಕೆ ಅವನು ‘ನಾನು ದೊಡ್ಡೋನಾದೆ ಅನ್ಸತ್ತೆ.. ಅಲ್ವಾಮ್ಮಾ?’ ಅಂದಿದ್ದ! ಇನ್ನೊಂದು ಗೆಳೆಯನ ಅಕ್ಕನ ಮಗು ನಾನು ಫೋನ್ ಮಾಡಿದರೆ ತಾನೂ ಕಿತ್ತುಕೊಂಡು ಹಲೋ ಅನ್ನುತ್ತಿದ್ದೇನೆ ಅನ್ನುವ ಭ್ರಮೆಯಲ್ಲಿ ‘ಅದೋಓಓಓಓಓ …’ ಅಂತ ಕೂಗುವ ರೀತಿ ಸಖತ್ ಮಜಾ. ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಅದನ್ನು ನೆಮ್ಮದಿಯಾಗಿ ಬದುಕಲು ಬಿಡಿ … ಹಾಗೆಯೇ ನನ್ನನ್ನೂ ….!!
ಅಹವಿ ಹಾಡು : ನನ್ನನ್ನು ಬದುಕಲು ಬಿಡಿ ಪ್ಲೀಸ್!

Lekhana chennagide.Namage yarannadaroo kandare agadiddare avarige ee shikshe kodabahudu athava mane paint madisi antha pukkatte salahe kodabahudu.N.Viswanatha
ಸೂಪರ್ ಸೂಪರ್ … ಚಿಕ್ಕವರ ವಿಚಾರಗಳಾದರೆ ಹ್ಯಾಗೋ ಹ್ಞೂ .. ಅನ್ನಬಹುದು. ಕೆಲವು ಕಡೆ ದೊಡ್ಡವರೂ ತಮ್ಮ ಪ್ರವರಗಳನ್ನು ಕೇಳದೆಯೇ ಹೇಳ ತೊಡಗಿ ಬಿಡುತ್ತಾರೆ ಅದು ಇನ್ನೂ ಕಷ್ಟ ಕಷ್ಟ…
Super Kano… Aa Album alli nin Photo nu ide nodu bekaadre annuva incentive kooda kodtaare 🙂
Super Bharathi! naanu innoo nanna madve video nE nODilla. Imagine watching others’ wedding video!
LIKE
ನಾ ಓದಿದ ನಿಮ್ಮ ಕೆಲವೇ ಬರಹಗಳಿಂದ ನಿಮ್ಮ ಫ್ಯಾನ್ ಆಗಿದ್ದೇನೆ.
ನನಗಿಷ್ಟವಾಗುವ… ನನ್ನ ಓದಿಗೆ ನಿಲುಕುವ ಸರಳ ಶೈಲಿ ನಿಮ್ಮದು.. ಥ್ಯಾಂಕ್ ಯೂ 🙂
chennagide lekhana akka..
ನಕ್ಕೂನಕ್ಕೂ ಹೊಟ್ಟೆ ಹುಣ್ಣಾಯಿತು…..ವಂಶವೃಕ್ಷದ ಪರಿಚಯದ ಪ್ರಹಾರವನ್ನು ಅನುಭವಿಸಿದವರಿಗೇ ಗೊತ್ತು.ಅವರು ಮೂರನೇ ಅತ್ತಿಗೆ ಪೋಟೋ ಹುಡುಕುವಾಗ ನಿಮ್ಮ ಸ್ಥಿತಿ ಏನಾಗಿರಬಹುದು.ಹ.ಹ..ಹ..ಸೂಪರ್ ಮೇಡಮ್.ಈ ದಿನ ಒಳ್ಳೆ ಮೂಡಿಗೆ ತಂದ್ರಿ
ಆಲ್ಬಮ್ ಕಷ್ಟ ನಂಗೂ ತುಂಬಾ ಸಲ ಆಗಿದೆ.. ಇನ್ನೂ ಕೆಲವ್ರು ಇರ್ತಾರೆ ನಾವು ನಮ್ಮ ಆಲ್ಬಮ್ ಕೋಡೋಕೆ ಹಿಂದೇಟು ಹಾಕಿದ್ರೂ ಮತ್ತೆ ಮತ್ತೆ ಕೇಳಿ ತಗೊಳ್ತಾರೆ.. ಅಷ್ಟೇ ಅಲ್ಲಾ.. ಇದ್ಯಾರು? ಇವ್ರ್ಯಾರು? ಇದೇನಾಗಿತ್ತು? ಅಂತೆಲ್ಲಾ ನಮ್ಮನ್ನೇ ಕೇಳಿ.. ಕುಲ-ಗೋತ್ರವನ್ನೇ ಮರೆಸಿಬಿಡುತ್ತಾರೆ.. ವಿಡಿಯೋ ಹಾಕಿದ್ರಂತೂ ಕೇಳ್ಲೇಬೇಡಿ 🙂
ಮಕ್ಕಳನ್ನು ಒತ್ತಾಯಿಸೋದು ಸಲ್ಲ.. ನಿಜ.. ಆದರೆ ಅವರಾಗೇ ಹೇಳ ಹೋದರೆ ತಡೆಯಲೂಬಾರದು … ಅವರನ್ನು ಸಪ್ರೆಸ್ಸ್ ಮಾಡಿದಂತಾಗುತ್ತದೆ. ಒಂದೆರಡಾದ್ಮೇಲೆ ಕೇಳುಗರಿಗೆ ಬೋರ್ ಆಗುವಂತಿದ್ದರೆ ಮಾತ್ರ ಸಾವಕಾಶವಾಗಿ ಡೈವರ್ಟ್ ಮಾಡಬಹುದು.
ಬರಹ ಚುರುಕಾಗಿದೆ.. ಚೆನ್ನಾಗಿದೆ.. ಗುಡ್‌ಲಕ್ ಭಾರತಿ 🙂
choooperrrrrrr
ಅಬ್ಬಾ….ನಿಜಕ್ಕೂ ಸಕ್ಕತ್ತಾಗಿ ಆಲ್ಬಮ್ ಹಿಂಸೆ ನೆನಪಿಸಿದ್ದಿಯಾ ಭಾರತಿ. ನಾನೂ ಕೆಲಸಲ ಇಂಥವನ್ನು avoid ಮಾಡಲು ಹೆಣಗಾಡಿದ್ದೇನೆ ..:)
Hilarious!
sikkapatte nagisibitri 😀
ನಮ್ಮನೆಗೆ ಬರ‍್ತೀನಿ ಅಂತಿದೀಯ. ನಮ್ಮ ಮದ್ವೆ ಸೀಡಿ ಹುಡುಕಿ ತೆಗೆದಿಡ್ತೀನಿ!!
ha ha ha u are always unique.