ವಿಷಯ 1: ಮಹಾತ್ಮಾ ಗಾಂಧೀಜಿಗೆ ಮದುವೆಯಾದಾಗ 13 ವರ್ಷ ಕೂಡಾ ತುಂಬಿರಲಿಲ್ಲ ಮತ್ತು ಕಸ್ತೂರಬಾಗೆ ಆಗ ತಾನೇ 13 ತುಂಬಿತ್ತು. ಮದುವೆಯಾಗಿ ಒಂದೆರಡು ವರ್ಷಗಳ ನಂತರ ಅವರಿಗೂ ಮಕ್ಕಳಾದವು, ಮರಿಗಳಾದವು. ಅಲ್ಲಿಂದ ಮುಂದೆ ಗಾಂಧೀಜಿ 1906 ರಲ್ಲಿ ತಮ್ಮ 37 ನೆಯ ವಯಸ್ಸಿನಲ್ಲಿ ಬ್ರಹ್ಮಚರ್ಯ ಪಾಲಿಸುವ ವಚನ ತೊಟ್ಟುಬಿಟ್ಟರು. ಅಲ್ಲಿಗೆ ಅವರ ಮತ್ತು ಕಸ್ತೂರಬಾರ ನಡುವೆ ಸೆಕ್ಸ್ ಅನ್ನುವುದು ಮುಗಿದು ಹೋಗುತ್ತದೆ. ಆಗ ಕಸ್ತೂರಬಾಗೆ ಕೇವಲ 38 ವರ್ಷವಾಗಿತ್ತಷ್ಟೇ. ಮುಂದೆ ಗಾಂಧೀಜಿ ತಮ್ಮ 70 ವಯಸ್ಸಿನ ಆಸುಪಾಸಿನಲ್ಲಿದ್ದಾಗ ತಮ್ಮ ಮನೋನಿಗ್ರಹ ಎಷ್ಟಿದೆಯೆನ್ನುವ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ.
ಯಾವ ರೀತಿ ಎಂದರೆ ಅಕ್ಕ ಪಕ್ಕದಲ್ಲಿ ಬೇರೆ ಹೆಂಗಸರನ್ನು ಬೆತ್ತಲಾಗಿಸಿ ಮಲಗಿಸಿಕೊಂಡು ತಮಗೆ ಕಾಮೋದ್ರೇಕವಾಗುತ್ತದೋ, ಇಲ್ಲವೋ ಅನ್ನುವ ಪರೀಕ್ಷೆಯದು. ಗಾಂಧೀಜಿ ಎಷ್ಟಾದರೂ ಗಾಂಧೀಜಿಯಲ್ಲವೇ? ಅವರಿಗೆ ಕಾಮೋದ್ರೇಕವಾಗಲಿಲ್ಲ. ಹಾಗಾಗಿ ಅವರು ಆ ಪರೀಕ್ಷೆಯಲ್ಲಿ ಪಾಸ್ ಆಗಿ ಬಿಟ್ಟರು ಕೂಡಾ. ಇದು ಒಂದು ವಿಷಯವಾದರೆ, ಕಸ್ತೂರಬಾಗೆ ಅಶ್ರಮದಲ್ಲಿನ ಶೌಚಾಲಯಗಳನ್ನು ಶುದ್ಧ ಮಾಡುವುದು ಎಳ್ಳಷ್ಟೂ ಇಷ್ಟವಿರಲಿಲ್ಲ. ಆಕೆ ಅದನ್ನುಮಾಡಲು ನಿರಾಕರಿಸಿದಾಗ ಗಾಂಧಿಯವರು ಒತ್ತಾಯ ಮಾಡಿ ಆ ಕೆಲಸ ಮಾಡಿಸುತ್ತಿದ್ದರಂತೆ ಎಂಬುದು ಮತ್ತೊಂದು ವಿಷಯ …
ವಿಷಯ 2: ರಾಮಕೃಷ್ಣ ಪರಮಹಂಸರ ವಿಕ್ಷಿಪ್ತ ನಡವಳಿಕೆಗಳನ್ನು ಕಂಡ ಅವರ ಮನೆಯವರು, ಪರಮಹಂಸರಿಗೆ ಮದುವೆ ಮಾಡಬೇಕೆಂದು ಯೋಚಿಸುತ್ತಾರೆ. ಆಗ ಪರಮಹಂಸರೇ ಶಾರದಾರ ಹೆಸರನ್ನು ಸೂಚಿಸುತ್ತಾರಂತೆ. ಆಗ ಶಾರದಾಮಾತೆಗೆ ಕೇವಲ 6 ವರ್ಷ ಮತ್ತು ಪರಮಹಂಸರಿಗೆ 23. ಮದುವೆಯಾದ ನಂತರವೂ ಪರಮಹಂಸರ ಬದುಕಿನ ಹಾದಿಯೇನೂ ಬದಲಾಗದೇ ಆಧ್ಯಾತ್ಮಿಕ ಲೋಕದಲ್ಲಿ ಮುಳುಗಿಯೇ ಹೋಗುತ್ತಾರೆ. ಶಾರದಾ ಮಾತೆ ಮದುವೆಯಾದ ಮೇಲೂ 12 ವರ್ಷಗಳ ಕಾಲ ತಂದೆಯ ಮನೆಯಲ್ಲೇ ಉಳಿದು, ಆ ನಂತರ ಪರಮಹಂಸರಿದ್ದಲ್ಲಿಗೆ ತಮ್ಮ 18ನೆಯ ವಯಸ್ಸಿನಲ್ಲಿ ಕಾಲಿಡುತ್ತಾರೆ.
ಪರಮಹಂಸರಿಗೆ ಸಾಂಸಾರಿಕ ಸುಖದ ಕಡೆ ಸೆಳೆತವಿರುವುದಿಲ್ಲ. ಹಾಗಾಗಿ ಅವರ ಮತ್ತು ಶಾರದಾಮಾತೆಯವರ ನಡುವೆ ಗಂಡ-ಹೆಂಡತಿ ಎನ್ನುವ ಸಂಬಂಧವೇ ಇರದೆ, ಅದೊಂದು ‘ಪರಿಶುದ್ಧ’ ಸಂಬಂಧವಾಗಿ ಮಾತ್ರ ಉಳಿಯುತ್ತದಂತೆ. ಶಾರದಾಮಾತೆಯವರು ಕೊನೆಯವರೆಗೂ ಕನ್ಯೆಯಾಗಿಯೇ ಉಳಿಯುತ್ತಾರೆ. ಅವರು ಪರಮಹಂಸರ ಆಧ್ಯಾತ್ಮಿಕ ಶೋಧನೆಯಲ್ಲಿ ಒತ್ತಾಸೆಯಾಗಿ ನಿಲ್ಲುವುದಲ್ಲದೇ, ಜೊತೆ ಜೊತೆಗೆ ದಿನನಿತ್ಯದ ಎಲ್ಲ ಕೆಲಸಗಳ ಜವಾಬ್ದಾರಿ ಹೊತ್ತು ಪರಮಹಂಸರ ಜೊತೆಯಲ್ಲಿ ಉಳಿಯುತ್ತಾರೆ. ಪರಮಹಂಸರು ಪತ್ನಿಯನ್ನು ತಾಯಿಯಂತೆ … ದೇವರಂತೆ ಪೂಜಿಸುತ್ತಾರೆ ಮತ್ತು ಒಂದಿಷ್ಟು ವರ್ಷಗಳ ನಂತರ ಕಾಲವಾಗುತ್ತಾರೆ.
ವಿಷಯ 3: ನನ್ನ ಬಳಗದವರೊಬ್ಬರು ಅಪ್ಪಟ ಗಾಂಧಿವಾದಿ. ಅವರು ಖಾದಿಯನ್ನು ಬಿಟ್ಟು ಬೇರೆ ಯಾವ ಬಟ್ಟೆಯನ್ನೂ ತೊಡುತ್ತಿರಲಿಲ್ಲ ಮತ್ತು ಅವರ ಪತ್ನಿಗೂ ತೊಡಲು ಬಿಡುತ್ತಿರಲಿಲ್ಲ. ಆಕೆ ಯಾವುದೇ ರೀತಿಯ ಮಹತ್ತರ ಆಸೆ, ಸಾಧನೆಗಳ ಕಡೆ ತುಡಿಯದ ಸಾಧಾರಣ ಮಹಿಳೆ. ಆಕೆಗೆ ಮದುವೆ ಮನೆಗೆ ಹೋಗುವಾಗ ರೇಷ್ಮೆ ಸೀರೆ ಉಟ್ಟು ಸರ ಭರ ಓಡಾಡುವುದು ಮತ್ತು ಝಗಮಗಿಸುವ ಒಡವೆ ತೊಡುವುದು ಎಲ್ಲವೂ ಇಷ್ಟವಾಗುತ್ತಿತ್ತು. ಆದರೆ ಗಂಡ ಇದಕ್ಕೆಲ್ಲ ಕಟ್ಟಾವಿರೋಧಿ. ಹಾಗಾಗಿ ಆಕೆ ತನ್ನ ಆಸೆಗಳನ್ನು ಅದುಮಿಟ್ಟುಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಆಕೆಯ ತಾಯಿಯ ಮನೆಯವರು ಸ್ಥಿತಿವಂತರು. ಹಾಗಾಗಿ ಮದುವೆಯಲ್ಲಿ ಕೊಟ್ಟಿದ್ದ ವಜ್ರದ ಓಲೆಯನ್ನು ಕೂಡಾ ಆಕೆ ಹಾಕುವಂತಿರಲಿಲ್ಲ. ಹತ್ತಿರದವರ ಎದುರು, ತನಗೆ ಇಷ್ಟವಿಲ್ಲದಿದ್ದರೂ ತಾನು ಈ ರೀತಿಯ ಸರಳ ಬಾಳು ಬಾಳುವ ಬಗ್ಗೆ ಹೇಳಿಕೊಂಡು ಸಂಕಟ ಪಡುತ್ತಿದ್ದರು. ಅವರ ಗಂಡನಿಗೆ ಕೂಡಾ ಪತ್ನಿ ಇದನ್ನೆಲ್ಲ ಸ್ವಂತ ಇಚ್ಛೆಯಿಂದಲ್ಲದೇ, ತನ್ನ ಬಲವಂತಕ್ಕಾಗಿ ಮಾತ್ರ ಮಾಡುತ್ತಿದ್ದಾರೆ ಅನ್ನುವುದರ ಅರಿವಿತ್ತು. ಹಾಗಾಗಿಯೂ ಆತ ‘ನಿನ್ನ ಮನಸ್ಸಿನಲ್ಲಿ ಹುಟ್ಟದ ಮೌಲ್ಯಗಳನ್ನು ನನ್ನಲ್ಲಿ ಹುಟ್ಟಿದೆ ಅನ್ನುವ ಒಂದೇ ಕಾರಣಕ್ಕಾಗಿ ಬಲವಂತವಾಗಿ ನಿನ್ನ ಮೇಲೆ ಯಾಕೆ ಹೇರಲಿ? ನಿನಗೆ ಹೇಗೆ ಬೇಕೋ ಹಾಗಿರು’ ಅನ್ನಲು ಹೋಗಲಿಲ್ಲ ಮತ್ತು ಆಕೆ ಗಂಡನ ಆಜ್ಞೆಯಂತೆಯೇ ಕೊನೆಯವರೆಗೂ ಬದುಕಿದ್ದರು.
ವಿಷಯ 4: ಎಸ್. ಎಲ್.ಭೈರಪ್ಪನವರ ‘ಕವಲು’ ಕಾದಂಬರಿಯಲ್ಲಿ ಒಂದು ಪಾತ್ರವಾದ ಜಯಕುಮಾರನ ಮದುವೆ ಮಂಗಳಾಳ ಜೊತೆ ನಡೆಯುತ್ತದೆ. ಆ ಮದುವೆ ಆತನಿಗೆ ಇಷ್ಟವಿರುವುದಿಲ್ಲ. ಆದರೆ ಅವನು ಆ ಮದುವೆಯ ಬಂಧನಕ್ಕೆ ತಳ್ಳಲ್ಪಡುತ್ತಾನೆ. ಅದು ಹೇಗೆಂದರೆ, ಹೆಂಡತಿಯಿಲ್ಲದ ಜಯಕುಮಾರ್‌ಗೆ ಒಂದು ಸಲ ಸೆಕ್ಸ್‌ನ ಬಗ್ಗೆ ವಿಪರೀತ ಸೆಳೆತ ಉಂಟಾಗಿ ತನ್ನ ಸೆಕ್ರೆಟರಿಯಾಗಿದ್ದ ಹಣೆಗಿಡದ, ಹೂ ಮುಡಿಯದ, ಬಳೆ ಹಾಕದ ‘ವಿಧವೆಯ ಕಳೆಯ’ ಮಂಗಳೆಯ ಜೊತೆ ಮಲಗುತ್ತಾನೆ. ಅವತ್ತು ಆತನಿಗೆ ಕಾಮದ ತಹತಹ. ಅವಳ ವಿಧವೆಯ ಕಳೆ ಕೂಡಾ ಅವತ್ತು ಅವನಿಗೆ ಪಥ್ಯವಾಗುತ್ತದೆ. ಆ ನಂತರ ಅವರಿಬ್ಬರೂ ಒಂದಾಗಿದ್ದರ ಫಲವಾಗಿ ಬಸುರಿಯಾಗುತ್ತಾಳೆ. ಅದನ್ನೇ ಅಸ್ತ್ರವಾಗಿಟ್ಟುಕೊಂಡು ‘ಮೋಸದಿಂದ’ ಜಯಕುಮಾರ್ ಜೊತೆ ಮದುವೆಯಾಗುತ್ತಾಳೆ. ಆ ನಂತರ ಜಯಕುಮಾರ್‌ಗೆ ಮೋಸ ಹೋದೆ ಅನ್ನುವ ಭಾವದ ಜೊತೆಗೆ ವಿಧವೆಯ ಕಳೆಯ ಹೆಣ್ಣಿನ ಹೊರ ರೂಪ ಕೂಡ ಅಸಹನೀಯವಾಗುತ್ತಾ ಹೋಗುತ್ತದೆ. ಹಾಗಾಗಿ ಅವಳ ಜೊತೆ ಮಲಗಲು ಆಗುವುದೇ ಇಲ್ಲ. ಆದರೆ ಅವನ ಹೆಂಡತಿಗೆ ಕಾಮದಲ್ಲಿ ತುಂಬ ಆಸಕ್ತಿಯಿರುತ್ತದೆ. ಅವಳು ದೈಹಿಕ ಸುಖ ಬೇಕೆಂದು ಡಿಮ್ಯಾಂಡ್ ಮಾಡುತ್ತಾಳೆ. ಆಗ ಕೂಡಾ ಅವನ ದೇಹ ಅವಳ ಜೊತೆ ಸಹಕರಿಸಲು ನಿರಾಕರಿಸುತ್ತದೆ.
ಕಲೆ : ಸೃಜನ್

ಒಂದಿಷ್ಟು ದಿನಗಳ ನಂತರ ಹೆಂಡತಿಯನ್ನು ಕಂಡರೆ ಮಾತ್ರ ಕಾಮದ ಆಸೆ ಕೆರಳುವುದಿಲ್ಲವೋ ಅಥವಾ ನಿಜಕ್ಕೂ ತಾನು ದೈಹಿಕ ಸುಖದ ವಾಂಛೆಯನ್ನೇ ಕಳೆದುಕೊಂಡಿದ್ದೇನೋ ಅನ್ನುವ ಸಂದೇಹ ಮೂಡಿಬಿಡುತ್ತದೆ. ಅದನ್ನು ಪರೀಕ್ಷಿಸಲು ಆತ ಸೂಳೆಯರ ಸಂಗ ಮಾಡುತ್ತಾನೆ. ತನ್ನಲ್ಲೇನೂ ಕೊರತೆಯಿಲ್ಲ ಅಂತ ತಿಳಿದ ನಂತರ ಬೆಲೆವೆಣ್ಣುಗಳ ಜೊತೆ ಮಲಗಲೆಂದೇ ದೆಹಲಿಗೆ ಹೋಗಲು ಶುರು ಮಾಡುತ್ತಾನೆ. ಒಂದು ಸಲ ಅಲ್ಲಿ ಮಲಗಿರುವಾಗ ಪೊಲೀನ್ ರೈಡ್ ಆಗಿ, ಜೈಲು ವಾಸವಾಗಿ ಆ ನಂತರ ಬಿಡುಗಡೆಯಾಗಿ ಊರಿಗೆ ಬರುತ್ತಾನೆ. ಈ ರೀತಿಯೆಲ್ಲ ಆಯಿತಲ್ಲ ಅಂತ ಆತ ಅವಮಾನದಿಂದ ಸ್ವಲ್ಪ ಕುಗ್ಗಿದಾಗ ಆತನ ಅಮ್ಮ ‘ಒಳ್ಳೆ ಹೆಂಡತಿ ಇದ್ರೆ ಗಂಡಸು ಯಾಕೆ ಸೂಳೇನ ಹುಡಿಕ್ಕಂಡು ಹೋಗ್ತಾನೆ’ ಅಂತ ಸಮಾಧಾನಿಸುತ್ತಾಳೆ. ಹೆಂಡತಿಯಾದವಳು ದೈಹಿಕ ಸುಖ ಬೇಕು ಅಂತ ಡಿಮ್ಯಾಂಡ್ ಮಾಡಿದಾಗಲೂ ಅದನ್ನು ಕೊಡದೇ ಹೋಗುವ ಗಂಡನಿಗೆ, ಅಮ್ಮ ಈ ಮಾತಾಡಿದಾಗ ಸಮಾಧಾನ ಸಿಕ್ಕುತ್ತದಂತೆ!
ಎಲ್ಲ ಕೂಡಿಸುವ ಎಳೆ: ಗಾಂಧೀಜಿಯವರು ತಮ್ಮ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡರು, ಪಾಲಿಸಿದರು ಮತ್ತು ಜಗತ್ತು ಅವರನ್ನು ಕೊಂಡಾಡಿತು ಕೂಡಾ. ಎಲ್ಲೋ ಒಂದು ಕಡೆ ಗಾಂಧೀಜಿ ಹೇಳಿದ್ದಾರಂತೆ ‘ನನ್ನ ಬ್ರಹ್ಮಚರ್ಯದ ನಿರ್ಧಾರಕ್ಕೆ ಕಸ್ತೂರಬಾ ಒಪ್ಪಿಗೆ ಕೂಡಾ ಇದೆ’ ಎಂದು. ಆದರೆ ಕಸ್ತೂರಬಾ ನೇರವಾಗಿ ಎಲ್ಲೂ ಆ ಬಗ್ಗೆ ಮಾತನಾಡಿಲ್ಲವಂತೆ. ಇಬ್ಬರು ವ್ಯಕ್ತಿಗಳು involve ಆಗುವಂಥ ಇಂತ ವಿಷಯಗಳಲ್ಲಿ ಗಾಂಧೀಜಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರಲ್ಲ, ಅದೇ ರೀತಿ ಕಸ್ತೂರಬಾ ಏನಾದರೂ ನಿರ್ಧಾರ ಕೈಗೊಂಡಿದ್ದರೆ ಜಗತ್ತು ಹೇಗೆ react ಮಾಡುತ್ತಿತ್ತು?! ಒಬ್ಬರಿಗೆ ಲೌಕಿಕದ ಎಲ್ಲ ಆಸೆ-ಆಕಾಂಕ್ಷೆಗಳೂ ಇದ್ದು, ಮತ್ತೊಬ್ಬರು ಯಾವುದೋ ಸಿದ್ಧಾಂತಕ್ಕೋ, ಸೂತ್ರಕ್ಕೋ, ಆದರ್ಶಕ್ಕೋ ಜೋತು ಬಿದ್ದು ಇಂಥ ನಿರ್ಧಾರ ಕೈಗೊಳ್ಳುವುದು ಎಷ್ಟು ಸರಿ? ಇದೇ ರೀತಿ ಒಬ್ಬಳು ಹೆಂಗಸು ಗಂಡನ ದೈಹಿಕ ಆಸೆಗಳನ್ನು ಪೂರೈಸಲು ನಿರಾಕರಿಸಿ, ನಾನು ಪವಿತ್ರ ಜೀವನ ನಡೆಸಲು ನಿರ್ಧರಿಸಿದ್ದೇನೆ ಅಂತ ಒಂದು ದಿನ declare ಮಾಡಿಬಿಟ್ಟರೆ? ಗಂಡನಾದವನಿಗೆ ಆಗ ಕೂಡಾ ಕಾಮದಲ್ಲಿ ಆಸಕ್ತಿಯಿದ್ದು, ಅವಳ ನಿರ್ಧಾರ ಒಪ್ಪಿಯಾಗದೇ ಹೋದರೆ? ಆಗ ಏನಾಗುತ್ತದೆ ಯೋಚಿಸಿ … ಆ ಗಂಡು ಅವನಿಗೆ ಮನೆಯಲ್ಲಿ ಸಿಗದ ಸುಖವನ್ನು ಹೊರಗೆ ಅರಸಿ ಹೋಗುವುದರಲ್ಲಿ ಯಾವ ತಪ್ಪೂ ಇಲ್ಲ ಅಂತ ಇಡೀ ಸಮಾಜವೇ ಅವನ ಪರವಾಗಿ ನಿಂತು ವಾದಿಸುವಂತ ಉದಾರಿಯಾಗಿ ಬಿಡುತ್ತದೆ. ಆದರೆ ಗಂಡು ಈ ನಿರ್ಧಾರಕ್ಕೆ ಬಂದಾಗ, ಗಾಂಧಿ-ಕಸ್ತೂರಬಾ ವಿಷಯದಲ್ಲಿ ಆದಂತೆ, ಗಾಂಧೀಜಿಯ ಆದರ್ಶಗಳೆಲ್ಲವೂ ಕಸ್ತೂರಬಾ ಆದರ್ಶ ಕೂಡಾ ಆಗಿದೆ ಅಂತ ಒಂದು ತೀರ್ಮಾನಕ್ಕೆ ಬಂದುಬಿಡುತ್ತದೆಯಲ್ಲವೇ! ಇನ್ನು ಗಾಂಧಿಯವರ ಮನೋನಿಗ್ರಹದ ಪರೀಕ್ಷೆಯ ವಿಷಯ ತೆಗೆದುಕೊಳ್ಳಿ. ಇದೇ ರೀತಿ ಕಸ್ತೂರಬಾ ತಮ್ಮ ಮನೋನಿಗ್ರಹದ ಪರೀಕ್ಷೆಗೆ ಯಾವುದೋ ಗಂಡಸಿನ ಜೊತೆ ಮಲಗಿದ್ದರೆ? (ಇದನ್ನು ಓದುತ್ತಿರುವ ನಿಮ್ಮ ಮುಖವೇ ಒಂದು ಕ್ಷಣ ಈ ಕಲ್ಪನೆಯಿಂದ ಕಿವುಚಿದಂತಾಯ್ತು ಅಲ್ಲವೇ?)
ಇನ್ನು ಪರಮಹಂಸರು ಆಧ್ಯಾತ್ಮಿಕದ ಕಡೆ ಒಲವಿದ್ದವರು, ಮನೆಯವರು ಮದುವೆಯಾಗು ಅಂದಾಗ ಅವರೇ ಶಾರದಾದೇವಿಯವರ ಹೆಸರನ್ನು ಕೂಡಾ ಸೂಚಿಸಿದರಲ್ಲ ಆಗ ಆಕೆ ಒಂದು ಪುಟ್ಟ ಮಗು. ಇಬ್ಬರಿಗೆ ಮಧ್ಯೆ 17
ವರ್ಷಗಳ ಅಂತರ. ಆತ ಮದುವೆಯಾದವರು, ಅದರ ನೆನಪೂ ಇಲ್ಲದಂತೆ ತಮ್ಮ ಲೋಕದಲ್ಲಿ ಮುಳುಗಿಹೋದಾಗ ಶಾರದಾಮಾತೆ ತಾವಾಗಿಯೇ ಗಂಡನಲ್ಲಿಗೆ ಹೋಗುತ್ತಾರೆ. ಜಗತ್ತು ಕೂಡಾ ಶಾರದಾದೇವಿಯವರಿಗೂ ಆ ಸಾಧನೆ, ಆಧ್ಯಾತ್ಮದ ಕಡೆ ಒಲವಿತ್ತು ಅಂತ taken for granted ಆಗಿ ಯೋಚಿಸುತ್ತದೆ. ಅದು ಹೌದೇ? ಪರಮಹಂಸರು ಮದುವೆಯಾಗುವಾಗ ಆ ಮಗುವಿಗೆ, ನನಗೆ ಸಾಂಸಾರಿಕ ಸುಖದ ಕಡೆ ಒಲವಿಲ್ಲ ಅಂತ ತಿಳಿಸಿಯೂ ಇರಲಿಲ್ಲ, ಅಪ್ಪಿ ತಪ್ಪಿ ತಿಳಿಸಿದ್ದರೂ ಆ ಮಗುವಿಗೆ ಅದು ಅರ್ಥವಾಗುವ ವಯಸ್ಸೂ ಅಲ್ಲ. ಪರಮಹಂಸರಿಗೆ ದೈಹಿಕ ಸುಖದ ಕಡೆ ಒಲವಿರಲಿಲ್ಲ ಸರಿ, ಶಾರದಾದೇವಿಯವರಿಗೆ ಇತ್ತೋ, ಇಲ್ಲವೋ ಅಂತಲೂ ಒಬ್ಬರೂ ಯೋಚಿಸದೇ, ಅವರನ್ನು ದೇವಿಯ ಪಟ್ಟಕ್ಕೇರಿಸಿ ಪರಮಹಂಸರ ಜಗತ್ತು ಶಾರದಾದೇವಿಯವರದ್ದೂ ಆಗಿತ್ತು ಅಂತ ನಂಬಿಯೇ ಬಿಟ್ಟಿತಲ್ಲ! ಶಾರದಾದೇವಿಯವರು ಮದುವೆಯಾದ ನಂತರ ‘ಆಧ್ಯಾತ್ಮದಲ್ಲಿ ನನಗೆ ಒಲವು, ದೈಹಿಕ ಸುಖದ ಕಡೆ ಒಲವಿಲ್ಲ’ ಅಂತ ಅಂದಿದ್ದರೆ?
ಕವಲು ಕಾದಂಬರಿಯ ನಾಯಕ ತಾನೇ ಹೆಂಡತಿಯ ಜೊತೆ ಮಲಗಲು ನಿರಾಕರಿಸಿ, ಸೂಳೆಯರನ್ನು ಹುಡುಕಿ ಹೋದ ನಂತರವೂ ಆತನ ಅಮ್ಮ ಸೋಪಿನಲ್ಲಿ ಅವನ ವ್ಯಕ್ತಿತ್ವವನ್ನು ತೊಳೆದು ಲಕಲಕಿಸುವಂತೆ ಮಾಡಿದಾಗ, ಸತ್ಯ ಗೊತ್ತಿದ್ದ ನಾಯಕ ಕೂಡಾ ಆರಾಮವಾಗಿ ಅಮ್ಮನ ಮಾತನ್ನು ಒಪ್ಪಿ ಸುಮ್ಮನಾಗಿಬಿಡುತ್ತಾನೆ. ಅವನ ಹೆಂಡತಿಗೆ ಕೂಡಾ ಬೇರೆ ವ್ಯಕ್ತಿಯೊಡನೆ ಸಂಬಂಧವಿತ್ತು ಅಂತ ತೋರಿಸಲಾಗಿದೆ. ಹಾಗಾಗಿ ಗಂಡ ಅವನ ಹೆಂಡತಿಗೆ ಕಾಮಸುಖ ನೀಡಲು ನಿರಾಕರಿಸುವುದಕ್ಕೂ ಒಂದು ನೈತಿಕ ತಳಹದಿ ಹಾಕಲಾಗಿದೆ. ಆದರೆ ಆತ ಅವಳ ಜೊತೆ ಮಲಗಲು ನಿರಾಕರಿಸಿದ ಸಂದರ್ಭದಲ್ಲಿ ಹೆಂಡತಿಗೊಬ್ಬ ಪ್ರಿಯಕರನಿರುವ ವಿಷಯ ಗಂಡನಿಗೆ ತಿಳಿದಿರುವುದಿಲ್ಲ. ಅದು ತಿಳಿಯುವುದು ಆ ನಂತರದ ದಿನಗಳಲ್ಲಿ. ಹಾಗಾಗಿ ನಿರಾಕರಿಸಿದ ದಿನ ಅವನಿಗಿದ್ದ ಕಾರಣಗಳು ಅವಳ ವಿಧವೆಯ ಕಳೆ ಮತ್ತು ಮೋಸದಿಂದ ಮದುವೆಯ ಬಂಧನಕ್ಕೆ ಒಳಗಾಗಿದ್ದು ಮಾತ್ರ. ತಾನಾಗಿಯೇ ಅದನ್ನು ನಿರಾಕರಿಸಿ, ಬೇರೆಯಾಗಿ ಮಲಗಿ, ನಂತರ ಸೂಳೆಯರ ಜೊತೆ ಮಲಗಿದವನನ್ನು ಆತನ ಅಮ್ಮ ಮಗನೆಂಬ ಕುರುಡು ವ್ಯಾಮೋಹದಲ್ಲಿ ಬೆಂಬಲಿಸುತ್ತಾಳೆ. ಆಗ ಕೂಡಾ ಅವನು ‘ಇಲ್ಲ, ನಾನೇ ನನ್ನ ಹೆಂಡತಿಗೆ ನಿರಾಕರಿಸಿದ್ದು’ ಅಂತ ಬಾಯಿಬಿಡದೇ ಅಮ್ಮನ ಮಾತನ್ನು ಒಪ್ಪಿ ಸಮಾಧಾನ ತಾಳುತ್ತಾನಂತೆ!
ಈಗ ಇಲ್ಲಿರುವವರ ಪಾತ್ರಗಳನ್ನೆಲ್ಲಾ ಅದಲು-ಬದಲು ಮಾಡಿಕೊಳ್ಳಿ. ಗಂಡ ಮಾಡಿದ್ದನ್ನು ಹೆಂಡತಿ ಮಾಡಿದ್ದರೆ? ಗಂಡನ ಆದರ್ಶಗಳೆಲ್ಲವೂ ಹೆಂಡತಿಯದ್ದೂ ಆಗಿಬಿಡಬೇಕೆಂದು ಯೋಚಿಸುವ ಈ ಜಗತ್ತು, ಹೆಂಡತಿಯ ಆದರ್ಶಗಳೆಲ್ಲವೂ ಗಂಡನದ್ದೂ ಆಗುತ್ತದೆ ಅಂತ ಇಷ್ಟೇ ಖಡಾಖಂಡಿತವಾಗಿ ನಿರ್ಧರಿಸುತ್ತಿತ್ತೇ? ಹೆಣ್ಣೊಬ್ಬಳು ನಾನು ಗಾಂಧಿವಾದಿಯಾಗಿರುವುದರಿಂದ ನೀನೂ ಖಾದಿಯನ್ನೆ ತೊಡು ಅಂತ ಗಂಡನನ್ನು ಒತ್ತಾಯಿಸಿದ್ದರೆ? ನೀನೂ ಟಾಯ್ಲೆಟ್ ತೊಳಿ ಅಂತ ಬಲವಂತಿಸಿದ್ದರೆ? ಹೆಣ್ಣು ಅವಳದ್ದೇ ಸಾಧನೆ, ಪ್ರತಿಭೆಯ ಕಡೆ ಗಮನ ನೆಟ್ಟಾಗಲೂ ಲೌಕಿಕ ಬದುಕನ್ನು ಧಿಕ್ಕರಿಸಿ ಹೋಗುವುದು ತುಂಬ ಕಷ್ಟ. ಮನೆ-ಗಂಡ-ಮಕ್ಕಳ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರವೇ ಅವಳು ತನ್ನ ಕಡೆ ಗಮನ ಕೊಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಹೆಣ್ಣೇನಾದರೂ ಅದನ್ನೆಲ್ಲ ಧಿಕ್ಕರಿಸಿ ‘ನನ್ನ ಬದುಕು ನನ್ನದು’ ಅಂತ ಅವಳ ಬದುಕಿನ ಕನಸು ಮತ್ತು ಆದರ್ಶಗಳ ಕಡೆ ದೃಷ್ಟಿ ನೆಟ್ಟು, ಉಳಿದದ್ದನ್ನೆಲ್ಲ ಗೌಣವಾಗಿಸಿದ್ದರೆ? ಯಥಾಪ್ರಕಾರ ಇಡೀ ಜಗತ್ತು ಗಂಡಿನ ಪರವಾಗಿ ನಿಂತು, ಆಕೆ ಮಾಡಿದ್ದು ತಪ್ಪು ಅಂತ ಸ್ವತಃ affect ಆದ ಅವನಿಗಿಂತಲೂ ಉಗ್ರವಾಗಿ ಪ್ರತಿಪಾದಿಸುತ್ತಿತ್ತೇನೋ …
ಆ ರೀತಿ ಗಂಡಂದಿರ ಕಠೋರ ಬದುಕನ್ನು ಹೆಂಡತಿಯರೂ ಪಾಲಿಸಿದರಲ್ಲ, ಕಸ್ತೂರಬಾ ಅಥವಾ ಶಾರದಾದೇವಿಯವರಿಗೂ ಆಗ ಅದೆಲ್ಲದರಲ್ಲಿ ಆಸಕ್ತಿ ಹೊರಟುಹೋಗಿತ್ತೇ? ಹಾಗೊಂದು ವೇಳೆ ಅವರಲ್ಲಿ ಕಾಮದ ಬಗ್ಗೆ ವೈರಾಗ್ಯ ಮೂಡದೇ ಇನ್ನೂ ಅದಕ್ಕಾಗಿ ತುಡಿಯುತ್ತಿದ್ದರೇ? ಆ ಕಾಲಘಟ್ಟದಲ್ಲಿ ಕಾಮದ ಬಗ್ಗೆ ಹೆಣ್ಣು ಮುಕ್ತವಾಗಿ ಹೇಳಿಕೊಳ್ಳುವುದು ಅಸಾಧ್ಯವೇ ಆಗಿತ್ತಾದರೂ, atleast ತನ್ನ ದಿಂಬಿನ ಜೊತೆಗಾದರೂ ಆ ಎದೆಯ ಬೇಗುದಿಯನ್ನು, ಕಣ್ಣೀರನ್ನು, ಉರಿವ ಬಯಕೆ ಬೂದಿಯಾದದ್ದನ್ನು ಹಂಚಿಕೊಂಡರಾ?
ಆ ಕಾಲ ಘಟ್ಟದಲ್ಲಿ ಅಂತ ಪ್ರಶ್ನೆಯೆತ್ತಿದಾಗ ಮನಸ್ಸು ಮೆಲ್ಲನೆ ಕೇಳಿತು … ಈ ಕಾಲಘಟ್ಟದಲ್ಲಿ ….?
ಅಹವಿ ಹಾಡು : ಗಾಂಧೀಜಿ, ಪರಮಹಂಸ, ಕಾಮ, ನಿಗ್ರಹ ಇತ್ಯಾದಿ…

Apt analysis…but, when we are going to experiment something we also shall look at the people who are effected with that.
Firstly, in some cases people take it as inspiration and follow it.
Secondly, people get suppression by those ideologies and cant rebel.
Lastly, some one would not accept it and rebel.
We have all categories of people in society as far as now the time is concerned.
ನಿಮ್ಮ ಅಕ್ಷರ ಹೋರಾಟ ನಿರಂತರವಾಗಲಿ.ಗಾಂಧಿ,ಪರಮಹಂಸರನ್ನಷ್ಟೇ ಇಟ್ಟು ನಿಮ್ಮ ಈ ನಿಖರವಾದ,ಯಾವಾಗಲೊ ಹೇಳಲೇಬೇಕಿದ್ದ ವಿಚಾರವನ್ನು ಹೇಳಿದ್ದರೆ ಚೆನ್ನಾಗಿತ್ತು.ಭೈರಪ್ಪನವರಲ್ಲಿ ಧರ್ಮ ಹಾಗು ಹೆಣ್ಣಿನ ವಿಚಾರದಲ್ಲಿ ಯಾವತ್ತಿಗಾದರೂ ಸಂವೇದನೆ ಗುರುತಿಸಲಾಗುತ್ತದೆಯೇ?
Baraha,niroopane bahala chennagide.Eeegaloo nammadu male dominated society.”Re””re”yagiye oliyuttade.sakashtu vishayagalu tilidiralilla. N.Viswanatha
ಅಕ್ಕ ಮಹಾದೇವಿ ಕಾಡುತ್ತಾಳೆ
ಗಾ೦ಧಿ ತನ್ನ ಹೆ೦ಡ್ತಿ ಕಸ್ತೂರ್ಬಾ ಜೊತೆಗೇ ಯಾಕೆ ತನ್ನ ಮನೋನಿಗ್ರಹದ ಪ್ರಯೋಗ ಯಾಕೆ ಮಾಡಲಿಲ್ಲ…………ಆಕೆಯನ್ನೇ ತನ್ನ ಪಕ್ಕ ಮಲಗಿಸಿಕೊಳ್ಳಬಹುದಿತ್ತಲ್ಲಾ…..!!!
ಅಬ್ಬಾ ಎಂಥ ಅದ್ಭುತ ಬರಹ… Hats offfffffff
Love you Bhaaaaaaaaaaaa
Good. At last you said it! Great…:-)
ಭಾರತಿ ತುಂಬ ತುಂಬ ತುಂಬ ಚೆನ್ನಾಗಿದೆ ಬರೆದಿದ್ದು…ಓದಿ ಖುಷಿಯಾಯಿತು…ಎಲ್ಲರೂ ಯೋಚಿಸುವುದಕ್ಕಿಂತ ಭಿನ್ನ…ನಿಮ್ಮ ಪ್ರಶ್ನೆಗಳು ನನ್ನದೂ ಕೂಡಾ…ಹೀಗೆ ಬರೆಯುತ್ತಿರಿ
Excellent article. Byrappa navara Kavalu odidaga nangu thumba sittu bantu. Avara yella barahagallannu vodiruve. Aa ondu hengasu heege irabekemba frame work talemasadinda bandide. Gandsin framework yaake gounavagutte.
Now this is a write up! Applauds…
Ee kaalaghaTTadalloo ashTE. All are equal, men are more equal..!!!
Bharathi nimma baraha tumba ishtavaythu. Ahsok shettar baredante “Ee kaalaghaTTadalloo ashTE. All are equal, men are more equal..!!!” annodu katu sathya
ಚಿಂತನೆಗೆ ಹಚ್ಚುವ ಲೇಖನ ತುಂಬಾ ಚೆನ್ನಾಗಿದೆ. ಗಾಂಧಿ, ಪರಮಹಂಸರ ಹಿರಿಮೆಗೆ, ಸಾಧನೆಗೆ ಕಸ್ತೂರಬಾ,ಶಾರದಾರ ಸಾಮರಸ್ಯದ ಕೊಡುಗೆ ಅಪಾರ -ಎಲ್ಲ ಕೊಡು-ಕೊಳ್ಳುವಿಕೆಯಲ್ಲಿಯೂ ಇರಬೇಕಾದ ಮುಖ್ಯ ತ್ಯಾಗವಲ್ಲವೆ ಇದು?ನೀವು ಹೇಳಿದಂತೆ ಆ ಕಾಲದಲ್ಲಿ ಕಸ್ತೂರಬಾ,ಶಾರದಾ ನಡೆದುಕೊಳ್ಳದಿದ್ದಲ್ಲಿ ಗಾಂಧಿ, ಪರಮಹಂಸರು ಅಷ್ಟೆಲ್ಲಾ ಸಾಧಿಸಲು ಸಾಧ್ಯವಾಗುತ್ತಿತ್ತೆ? ಒಂದು ಶ್ರೇಷ್ಟ ಸಾಧನೆಗೆ ಸಾಥಿಯಾಗಲು ನನಗೇನೋ ಕಸ್ತೂರಬಾ,ಶಾರದಾ ತಾವಾಗಿಯೆ ಒಪ್ಪಿಕೊಂಡರೆನಿಸುತ್ತದೆ -ಇಲ್ಲವೆನ್ನಲೂ ಏನಾದರೂ ಆಧಾರವಿದೆಯೆ?-ಅದೂ ತಪ್ಪಲ್ಲ ಕೂಡಾ ನನಗನಿಸುವಂತೆ -as long as you know what your ultimate goal is.
ಎಸ್. ಎಲ್.ಭೈರಪ್ಪನವರ ‘ಕವಲು’ ಒಂದು ಕಾಲ್ಪನಿಕ ಕಾದಂಬರಿ – ಅದನ್ನಿಲ್ಲಿ ಎಳೆದು ತಂದು ಕೊಂಡಿ ಹಾಕುವದು ಅಷ್ಟು ಪ್ರಸ್ತುತವೆನಿಸಲಿಲ್ಲಾ. ಅದರ ಬದಲಿಗೆ ಇಂದಿರಾ ಗಾಂಧಿ, ಮಾರ್ಗ್ರೇಟ ಥ್ಯಾಚರ, ಬೆನಝೀರ ಭುಟ್ಟೊರ ಗಂಡದಿರ ಬಗ್ಗೆ ಹೇಳಿದ್ದರೆ ಕಾಲ ಘಟ್ಟಕ್ಕೆ ಕೊಂಡಿ ಚೆನ್ನಾಗಿ ಸಿಕ್ಕಿರುವದು. ಇಲ್ಲಿ, ಅಮೇರಿಕೆಯಲ್ಲಿ ನನಗೆ ತಿಳಿದ ಮಟ್ಟಿಗೆ ‘ಟಾಯ್ಲೆಟ್ ತೊಳಿ’ ಯುವ ಕಾರ್ಯ ಗಂಡಸಿನದೆ -ಖುಷಿಯಿಂದ ಮಾಡುತ್ತಾರೊ ಇಲ್ಲವೊ ಬೇರೆ ವಿಷಯ -bottomline ಅಂದ್ರೆ ಹೊಂದಿಕೊಂಡು ಹೋದ್ರೆ ಬೇಗುದಿ, ಕಣ್ಣೀರು, ಉರಿವ ಬಯಕೆ ಕಮ್ಮಿಯಾದೀತು.
-ಅನೀಲ ತಾಳಿಕೋಟಿ
Anil gandhiji gruhasthashramadalle iddiddare avara saadhanege Addi aaguttittaa??? Ulida swaathanthra horaatagaararellaroo heegenoo maadadeyoo saadhane maadalillavaa?? Neevu hale chinthanegalannu maru mandisiddira ashte …matte neevu Alli tholeyuvudu nimma maneya toilet maathra nenapirali …
ಭಾರತಿ ಅವರೆ,
ಸಾಧನೆಗೆ ಅಡ್ದಿ ಬರುತ್ತಿರಲಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾರೆ -probabilistic ಆಗಿ ಹೇಳುವದಾದರೆ ಅಡ್ಡಿ ಯಾಗಿರುವ chance ಜಾಸ್ತಿಯಾಗಿರುತಿತ್ತು. ‘ಹೀಗೂ ಇದ್ದಿರಬಹುದು’ ಎನ್ನುವ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ -ಅದಕ್ಕೆಂದೆ ಈ ಕಮೆಂಟು. ನನ್ನ ಉದ್ದೇಶವಿಷ್ಟೆ – ಗಂಡಾಗಲಿ, ಹೆಣ್ಣಾಗಲಿ, ಮತ್ತೇನಾದರೂ ಆಗಿರಲಿ – ಒಂದು ಉದ್ದೇಶ ಸಾಧನೆಗೆ ‘ತ್ಯಾಗ’ ಮಾಡುವದರಲ್ಲಿ ಅಪ್ರತಿಮ ಖುಷಿ ಇದೆ ಹಾಗೂ ನನಗೆ ಕಸ್ತೂರಬಾ,ಶಾರದಾರಲ್ಲಿ ಆ ಮನೋಭಾವವಿತ್ತು ಅನಿಸುತ್ತದೆ -ಯಾಕೆಂದರೆ ಅವರ ಅಂತಿಮ ಗುರಿ ಆ ಉದ್ದೇಶದ ಫಲಕ್ಕಾಗಿಯೇ ಇತ್ತು. ಇದು ಬರೀ ಕಾಮದ ಒಂದು ಎಳೆಯಿಂದ ಹೇಳಿದ ಮಾತಲ್ಲ – ಒಟ್ಟಾರೆಯಾಗಿ ಹೇಳಿದ್ದು. ಗಾಂಧಿ ತನ್ನ ಸ್ವಂತ ಮಕ್ಕಳ ಬಗ್ಗೆ, ಅವರ ಅಭ್ಯುದಯದ ಬಗ್ಗೆ ವಹಿಸದ ಕಾಳಜಿ ಬಗ್ಗೆ ಕೂಡಾ ಇದೇ argument ಮಾಡಬಹುದಲ್ಲವೇ? ಅಲ್ಲಿ ಕೂಡಾ ನನಗೆ ಗಾಂಧಿ ಗುಲಗಂಜಿಯಷ್ಟು (relatively, ಸ್ವಲ್ಪ) ಶ್ರೇಷ್ಟ ಎನಿಸುತ್ತಾರೆ. ಗಾಂಧಿಜೀಯ ಮಟ್ಟಕ್ಕೆ ಏರಿರಬಹುದಾದ ಇನ್ನೊಬ್ಬ ಹೋರಾಟಗಾರನನ್ನು ನಾನು ಇನ್ನೂವರೆಗೂ ನೋಡಿಲ್ಲ. ನನ್ನ ಚಿಂತನೆಗಳ ಬಗ್ಗೆ ಹೊಸತನ ಹುಡುಕುವ ಅಗತ್ಯವಿಲ್ಲಿ ಇಲ್ಲ. ನಿಮ್ಮ ಲೇಖನದ ಬಗ್ಗೆ ದೂಸರಾ ಮಾತೆ ಇಲ್ಲಾ -ಚೆನ್ನಾಗಿದೆ. ಇನ್ನೂ ತೊಳೆದಿರುವ ‘ಟಾಯ್ಲೆಟ್’ ಗಳ ಬಗ್ಗೆ ಇಲ್ಲಿ ಹೇಳಿಕೊಳ್ಳುವ ಅಗತ್ಯತೆ ಇಲ್ಲ – ತೊಳೆಯುತ್ತಿರುವ ನನ್ನದೆ ಮನೆಯ ‘ಟಾಯ್ಲೆಟ್’ ಬಗ್ಗೆ ನನಗೆ ಯಾವುದೆ ಕೀಳರಿಮೆ ಇಲ್ಲಾ.
-ಅನೀಲ
Eega nodi .. nanna maneyalloo naanu ganda maga ellaroo tholeyutteve. Prashne adalla … ishtavilladeaaduvudilla anta niraakaridaaga ottaayisuva manasthithi mattu gandana aadarsha hendathiyaddoo aagirabeku anta expect maaduva manasthithi ..mattu innulidanthe kaamada bagge helidaadre kasthuraba mattu sharadadevi ‘thyaaga’ maadiddu sariye annuvaaga naanu mattenoo heluvudikke aagodilla …u r missing the central point annisthilvaa nimge?
ಭಾರತಿ ಅವರೆ,
ನನ್ನ ಮಟ್ಟಿಗೆ ಹೇಳುವದಾದರೆ comment ನ ಮೂಲ ಉದ್ದೇಶ-
‘ಪರೇಂಗಿತಂ ಪರಿಜ್ಞಾನ.’ ನನಗೇನು ಅನ್ನಿಸುತ್ತದೆ ಎಂದು ತಿಳಿದರೆ ಮಾತ್ರ ಸಾಲದು, ನಿಮಗೇನು ಅನ್ನಿಸುತ್ತದೆ ಎಂದು ಗೊತ್ತಾಗಬೇಕು – ಎಂಬುವದು. ಇದು ಆರೋಗ್ಯಕರ- ನೀವು ಹೇಳಿದಂತೆ ನಾನು ಲೇಖನದ central point ಮಿಸ ಮಾಡಿದಂತೆ ನಿಮಗನಿಸುವದರಲ್ಲಿ ತಪ್ಪೆನಿಲ್ಲಾ. ಅದರ ಬಗ್ಗೆ ಒಪ್ಪಿಗೆ ಇದ್ದೆ ಇದೆ. ಸುಖ ಪಡೆಯಲು ಇರುವುದೊಂದೇ ದಾರಿ; ಅದು ಇನ್ನೊಬ್ಬರನ್ನು ಸುಖಪಡಿಸುವುದು ಎಂದು ಕಸ್ತೂರಬಾ,ಶಾರದಾ ತಿಳಿದುಕೊಂಡಿರಬಹುದು ಎನ್ನುವದು ಮಾತ್ರ ನನ್ನ ನಿಲುವು.
-ಅನೀಲ ತಾಳಿಕೋಟಿ
ನೀವು ಯಾವುದೇ ವಿಷಯವನ್ನೂ ಮುಕ್ತವಾಗಿ ಹೇಳಿಬಿಡ್ತೀರಿ, ಒಂದಷ್ಟು ಹೊತ್ತು ಅದೇ ತಲೆಯಲ್ಲಿ. ಹಾಗಾಗಿ ನಿಮ್ಮ ಬರಹ ನನಗಿಷ್ಟ.
beautiful baraha bharathi.nimmannu nodi bahala dinavayithu. ebaraha nimmodane matadidante annisitu.
This is definitely not a new thought,but this article is very well written one. But it hangs onto all these opinions based on only some tall assumptions.
Just like how thinking that sharada or kasturba completely agreed with the ideals preached by their husbands as correct and that should be followed is incorrect(this is again based on assumption that they have not written or documented their displeasure in following the principles followed by their respective husbands ) , thinking that they were really sad that they were forced to follow those principles is also wrong.
Regarding kavalu, nowhere the author paints a picture that people need to adhere to these stereotypes. In fact, he creates characters that are not true to what they believe and simply tells a possible believable story. In fact all the characters in that story have Greg shades and thus cannot sympathize with them.
Regarding future and present, people can choose how they want to live. If they truly respect an individual and, later at point of time become incompatible, they can take a decision that is best suited to their sensibilities.
Generally speaking ,both sexes have had their fare share of stereotyping by opp sexes and society. So it’s all fair if you don’t protest and disagree.
ನಿಮ್ಮೊಳಗೆ ಕುದಿಯುತ್ತಿದ್ದ ಮಾತುಗಳನ್ನಿಲ್ಲಿ ನೀವು ಹೊರಗೆ ಹಾಕಿದ್ದು ಮತ್ತದನ್ನ ನಾನು ಓದಿದ್ದರಿಂದ ಇಲ್ಲೂ ಒಳಗೆ ಉರಿಯುತಿದ್ದ ಉರಿಯನ್ನು ಸ್ವಲ್ಪ ಮಟ್ಟಿಗೆ ಶಮನ ಮಾಡಿದ ಅನುಭವವಾಯಿತು.ಈ ಜಗತ್ತಿಗೆ ಉತ್ತರ ಕೊಡುವ ತಾಕತ್ತಿಲ್ಲ ಅನ್ನುವುದು ನಿಜ, ಆದರೂ ಪ್ರಶ್ನೆಗಳಲೇ ಮತ್ತವುಗಳು ಅಭಿವ್ಯಕ್ತವಾದದ್ದರಲ್ಲೇ ಎಷ್ಟೋ ಸಮಾಧಾನ ಅಡಗಿತ್ತು ನೋಡಿ!!