ಏನಾದರೂ ಮಾಡಬಹುದಿತ್ತು, ಮಾಡಬೇಕಿತ್ತು, ಆದರೆ ಮಾಡಲಿಲ್ಲ ಅನ್ನುವ ಹಳಹಳಿ ನಿಮ್ಮಲ್ಲಿ ಯಾವತ್ತಾದರೂ ಬಂದಿದ್ದುಂಟಾ? ನಮ್ಮ ಖಾಸಗಿ ಬದುಕಿನ ತಪ್ಪು ನಿರ್ಧಾರಗಳ ಬಗ್ಗೆ ನಾನು ಹೇಳುತ್ತಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಮಾನವೀಯತೆಯನ್ನು ಮರೆತಂತ ಸಂದರ್ಭಗಳು? ಅಂಥ ಘಟನೆಗಳು ನಿಮ್ಮ ಬದುಕಿನಲ್ಲಿ ಇಲ್ಲದಿದ್ದರೆ ಒಳ್ಳೆಯದೇ. ನೀವು ನನಗಿಂತ ಒಳ್ಳೆಯವರು ಮತ್ತು ಮಾನವೀಯತೆಯುಳ್ಳವರು ಅಂತ ಪ್ರೂವ್ ಆಗುತ್ತದೆ. ಈಗ ಬನ್ನಿ ನನ್ನ ಬದುಕಿನಲ್ಲಿ ಬಂದಂಥ ಮೂರು ಘಟನೆಗಳ ಬಗ್ಗೆ ಹೇಳುತ್ತೇನೆ …
ಇವತ್ತಿಗೆ 24 ವರ್ಷಗಳ ಹಿಂದೆ … ನಾನು ಅಪ್ಪ, ಅಮ್ಮನ ಜೊತೆ ಕೇರಳದ ಅಲೆಪ್ಪಿಗೆ ಹೊರಟಿದ್ದೆ. ಟ್ರೈನ್ ಇನ್ನೂ ಬಂದಿರಲಿಲ್ಲ. ಪ್ಲ್ಯಾಟ್‌ಫ಼ಾರಂನಲ್ಲಿ ಕಾಯುತ್ತಿದ್ದೆವು. ಅಸಾಧ್ಯ ಜನಜಂಗುಳಿ. ಮೆಟ್ಟಿಲುಗಳ ಹತ್ತಿರ ಇದ್ದಕ್ಕಿದ್ದ ಹಾಗೆ ಕಣ್ಣ ತುದಿಯಲ್ಲಿ ಏನೋ ಸುಳಿದ ಹಾಗಾಯ್ತು. ಏನೋ ಅಸಹಜವಾದದ್ದು ನಡೆಯಿತು ಅಂತ ಮನಸ್ಸಿಗೆ ಅನ್ನಿಸುವಷ್ಟರಲ್ಲಿ ಅಲ್ಲಿ ಜೋರಾಗಿ ಗಲಾಟೆ ಶುರುವಾಯ್ತು. ಜನರೆಲ್ಲ stair case ಅಕ್ಕ ಪಕ್ಕದಲ್ಲಿ ನಿಂತು ಬಗ್ಗಿ ನೋಡಲು ಶುರು ಮಾಡಿದರು. ಏನಾಯಿತು ಅಂತ ನಾವೂ ಆ ಕಡೆ ಓಡಿದೆವು.
ಆ ತಡೆಗೋಡೆಗೆ ಒರಗಿ ಬಗ್ಗಿ ನೋಡಿದ ನಮ್ಮ ಬಾಯಿಂದ ಸಣ್ಣದೊಂದು ಚೀತ್ಕಾರ ಹೊರಟಿತು … ಒಬ್ಬ ಮನುಷ್ಯ ಸುಮಾರು 15 ಅಡಿಯಷ್ಟು ಕೆಳಗೆ ಬಿದ್ದುಬಿಟ್ಟಿದ್ದ! ಪೇಲವ ಮುಖದ, ಕುರುಚಲು ಗಡ್ಡ ಬಿಟ್ಟಿದ್ದ ಸುಮಾರು 45 ವರ್ಷದ ಮನುಷ್ಯ ಆತ. ಬಿದ್ದ ರಭಸಕ್ಕೆ ಅವನ ಕಾಲುಗಳು ತಿರುಚಿಕೊಂಡು ಬಿಟ್ಟಿದ್ದವು. ಸುತ್ತಲೂ ರಕ್ತ. ನನಗೆ ಗಾಭರಿಯಿಂದ ಹೊಟ್ಟೆ ತೊಳೆಸಿದಂತಾಯ್ತು. ಆ ಮನುಷ್ಯನಿಗೆ ಪ್ರಜ್ಞೆ ಇತ್ತು. ಆದರೂ ಕಿರುಚಲೂ ಆಗದವನಂತೆ ಇದ್ದ. ಆ ರೀತಿ ಬೀಳಬೇಕಾದರೆ ಆ ಮನುಷ್ಯ ಕುಡಿದಿರಲೇಬೇಕು ಅನ್ನುವಂತ ಮಾತು ಶುರುವಾಯ್ತು. ನೋವಿನಿಂದ ಮುಖ ಕಿವುಚುತ್ತ ಬಿದ್ದಿದ್ದವನು ಕುಡಿದಿದ್ದನೋ, ಇಲ್ಲವೋ ಗೊತ್ತಿಲ್ಲ.
ಆದರೆ ಆ ರೀತಿ ಬೀಳಬೇಕಿದ್ದರೆ ಕುಡಿದಿರಲೇ ಬೇಕು ಅನ್ನುವಂತ ಮಾತು ಲಾಜಿಕಲ್ಲಾಗೇನೋ ಇತ್ತು. ಆದರೆ ಅಲ್ಲಿ ಅವನಿಗೆ ಯಾಕೆ ಹಾಗಾಯ್ತು ಅನ್ನುವುದಕ್ಕಿಂತ ಆತನನ್ನು ಆಸ್ಪತ್ರೆಗೆ ಸೇರಿಸುವುದು ಮುಖ್ಯವಾಗಿತ್ತು. ಯಾರೊಬ್ಬರೂ ಅವನ ಹತ್ತಿರ ಸುಳಿಯಲೇ ಇಲ್ಲ. ಅಷ್ಟರಲ್ಲಿ ನಮ್ಮ ಟ್ರೈನ್ ಬಂದೇಬಿಟ್ಟಿತು. ನಾವು ಆ ಮನುಷ್ಯನ ಇರವನ್ನೇ ಮರೆತವರಂತೆ ಟ್ರೈನಿನ ಕಡೆ ಹೊರಟೆವು. ಅಲ್ಲಿ ಕೂತು ಆತ ಯಾಕೆ ಹಾಗೆ ಬಿದ್ದ ಅಂತ ತಲೆಗೊಂದು ಮಾತಾಡಿದೆವು. ಒಂದಿಷ್ಟು ಹೊತ್ತಿನ ನಂತರ ಟ್ರೈನ್ ಹೊರಟಿತು. ಬೆಂಗಳೂರು ಸ್ಟೇಷನ್ನಿನ ಜೊತೆಗೆ ಅವನ ವಿಷಯ ಕೂಡಾ ಹಿಂದಕ್ಕೆ ಹೋಯಿತು …ಅವನಿಗೆ ಆಮೇಲೆ ಅದೇನಾಯಿತೋ, ಸಹಾಯ ದೊರಕಿತೋ, ಇಲ್ಲವೋ ಯಾರಿಗೆ ಗೊತ್ತು? ಅದಾಗಿ ಅಷ್ಟೊಂದು ವರ್ಷಗಳೇ ಕಳೆದುಹೋಗಿದ್ದರೂ ಆಗಾಗ ಅವನು ನೆನಪಾಗುತ್ತಾನೆ … ಆಮೇಲೆ ಅವನಿಗೆ ಸಹಾಯ ಸಿಕ್ಕಿತಾ? ಸಿಕ್ಕಿರಬೇಕು … ಎಲ್ಲರೂ ನನ್ನಂತೆ ಅಮಾನವೀಯತೆ ತೋರಿಸಿರಲಿಕ್ಕಿಲ್ಲ …
***
ಒಂದು ಸಲ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದೆವು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಹೊತ್ತಾಗಿ ಹೋಗಿ, ವಾಪಸ್ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಬೆಳಿಗ್ಗೆ ಬೇಗ ಹೊರಟಿದ್ದರಿಂದ ಸುಸ್ತಾಗಿ ಹೋಗಿತ್ತು. ರಾಮನಗರ ದಾಟಿಯಾಗಿತ್ತು. ಇನ್ನೇನು ಊರಿಗೆ ಹತ್ತಿರ ಆಗುತ್ತಿದ್ದೇವೆ ಅಂತ ಸಮಾಧಾನದಲ್ಲಿದ್ದೆವು. ಇಡೀ ರಸ್ತೆಯಲ್ಲಿ ಒಂದೂ ಬೀದಿ ದೀಪವಿರಲಿಲ್ಲ. ಅಮಾವಾಸ್ಯೆ ಇತ್ತೋ ಏನೋ ಗೊತ್ತಿಲ್ಲ. ತುಂಬ ಕತ್ತಲು ಇದ್ದಿದ್ದಂತೂ ನೆನಪಿದೆ.

ನಾನು ಡ್ರೈವ್ ಮಾಡುತ್ತಿದ್ದ ನನ್ನ ಗಂಡನ ಎಡಭಾಗದಲ್ಲಿ ಕೂತಿದ್ದೆ. ಸಮಯ ಕಳೆಯಲು ಏನೋ ಮಾತಾಡುತ್ತ ಕೂತಿದ್ದೆ. ಹಾಗೆ ಮಾತಾಡುವಾಗ ಅವನ ಕಡೆಗೆ ಕತ್ತು ತಿರುಗಿಸಿದಾಗ ಕಣ್ಣೆದುರು ನೆಲದ ಮಟ್ಟದಲ್ಲಿ ಬೆಳಕೊಂದು ಹಾದುಹೋದ ಅನುಭವವಾಯ್ತು. ಸಿನೆಮಾದಲ್ಲಿ ಕೊಳ್ಳಿದೆವ್ವದ ಸೀನ್ ತೋರಿಸುವಾಗ ಬೆಳಕು ಚಲಿಸುತ್ತ ಹಾದು ಹೋಗುತ್ತದಲ್ಲ ಆ ರೀತಿ. ಏನೋ ಹೋಯಿತಲ್ಲ … ಏನದು ಅಂತ ಅಂದುಕೊಳ್ಳುವಷ್ಟರಲ್ಲಿ ಬೆಳಕು ದಾಟಿ ಮುಂದಕ್ಕೆ ಹೋಗಿಬಿಟ್ಟಿತು. ಸುಮಾರು ಒಂದೆರಡು ನಿಮಿಷ ಕಳೆದು, ಸಾಕಷ್ಟು ದೂರ ಕ್ರಮಿಸಿ ಬಂದ ಮೇಲೆ ಪಕ್ಕದಲ್ಲಿದ್ದ ಗಂಡನಿಗೆ ‘ಅಲ್ಲಿ ಅದೇನೋ ನೆಲದಲ್ಲಿ ಬೆಳಕು ಹಾದು ಹೋದ ಹಾಗೆ ಅನ್ನಿಸಿತಪ್ಪ … ಅದೇನದು …’ ಅನ್ನುವಷ್ಟರಲ್ಲಿ ನಮಗೆ ಜ್ಞಾನೋದಯವಾಯ್ತು … ಯಾವುದೋ ಬೈಕಿನ ಸವಾರ ಮರಳೋ ಅಥವಾ ಮತ್ತೆ ಯಾವುದರ ಮೇಲೋ ಬೈಕ್ ಓಡಿಸುವಾಗ, ಬ್ಯಾಲೆನ್ಸ್ ಕಳೆದುಕೊಂಡು ನೆಲಕ್ಕೆ ಬಿದ್ದಿರಬೇಕು. ಅವ ತುಂಬ ವೇಗದಲ್ಲಿ ಗಾಡಿ ಓಡಿಸುತ್ತಿದ್ದರಿಂದ ಬಹುಶಃ ತುಂಬ ದೂರ ಬೈಕು ನೆಲದ ಮೇಲೆ ಉರುಳುತ್ತಾ ಸಾಗಿರಬೇಕು ಎಂದು. ಬಿದ್ದ ರಭಸಕ್ಕೆ ಹೆಡ್‌ಲೈಟ್ ಒಡೆದಿತ್ತೇನೋ.
ಹಾಗಾಗಿ ಸಣ್ಣದೊಂದು ಇಂಡಿಕೇಟರ್ ಬಲ್ಬಿನಂತ ಬೆಳಕು ಮಾತ್ರ ನನ್ನೆದುರು ಮಿಂಚಿನಂತೆ ಸಾಗಿಹೋಗಿತ್ತು. ಎಲ್ಲ ಸರಿ, ಆದರೆ ಅದರ ಸವಾರ ಎಲ್ಲಿದ್ದ? ಬಿದ್ದ ಕಡೆಯೇ ಬಿದ್ದಿದ್ದನಾ? ಅಥವಾ ಬೈಕಿನ ಜೊತೆ ಅವನೂ slide ಆಗಿದ್ದನಾ? ಬದುಕಿದ್ದನಾ ಅಥವಾ ಸತ್ತೇ ಹೋಗಿದ್ದನಾ? ಅಪ್ಪಿ ತಪ್ಪಿ ರಸ್ತೆಯ ಮಧ್ಯದಲ್ಲಿ ಬಿದ್ದಿದ್ದರೆ ಕತ್ತಲಲ್ಲಿ ಯಾವುದಾದರೂ ಗಾಡಿ ಅವನ ಮೇಲೆ ಹರಿದುಬಿಟ್ಟರೆ? ಅಥವಾ ರಸ್ತೆಯ ಬದಿಯಲ್ಲೇ ಬಿದ್ದಿದ್ದರೂ ತುಂಬ ಗಾಯವಾಗಿದ್ದರೆ ಸಮಯಕ್ಕೆ ಸರಿಯಾಗಿ ಸಹಾಯ ದೊರಕದೇ ಸತ್ತೇ ಹೋಗುತ್ತಾನೋ, ಏನೋ … ಇಷ್ಟೆಲ್ಲ ಲೆಕ್ಕಾಚಾರ ಹಾಕುವಷ್ಟರಲ್ಲಿ ನಾವು ಸುಮಾರು 4-5 ಕಿಲೋಮೀಟರ್ ಬಂದಾಗಿತ್ತು. ಅದೇನೂ ವಾಪಸ್ ಹೋಗಲಾರದಂತ ದೂರವೇನೂ ಆಗಿರಲಿಲ್ಲ. ಆದರೆ ಬೆಳಗ್ಗಿನಿಂದ ದಣಿದಿದ್ದ ನಮಗೆ ಮತ್ತೆ ಹೋಗಿ, ಆ ಜಂಜಡದಲ್ಲಿ ಸಿಕ್ಕು, ಆಮೇಲೆ ಪೊಲೀಸ್ ಕೈಗೆ ಸಿಕ್ಕಿ, ಅವರು ನಾವೇ ಏನೋ ಮಾಡಿರಬೇಕು ಅಂತ ಅನುಮಾನಿಸಿ, ವಿಚಾರಣೆಗೆ ಗುರಿಪಡಿಸಿ, ಅಯ್ಯೋ! ಯಾರಿಗೆ ಬೇಕು ಈ ಗೋಳೆಲ್ಲ ಅನ್ನಿಸಿಬಿಟ್ಟಿತು. ಒಂದು ಚೂರು ಮನಸ್ಸು ಮಾಡಿದ್ದರೆ ನಾವು ಕಾರನ್ನು ಹಿಂದಕ್ಕೆ ತಿರುಗಿಸುವುದು ಅಸಾಧ್ಯದ ಮಾತಾಗಿರಲಿಲ್ಲ. ಆದರೆ ನಾವು ತಿರುಗಿಸಲೇ ಇಲ್ಲ …
***
ನಮ್ಮ ಆಫೀಸ್ ಇರುವುದು ಸುಂಕದಕಟ್ಟೆಯಲ್ಲಿ. ಅವತ್ತು ಆಫೀಸಿಗೆ ಹೋಗಿ ಕೆಲಸ ಆಗಿನ್ನೂ ಶುರು ಮಾಡಿದ್ದೆವು. ಅಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ಯಾರೋ ಕೂಗಿದ ಸದ್ದಾಯಿತು … ಹಿಂದೆಯೇ ಓಡುತ್ತಿರುವ ಹತ್ತಾರು ಹೆಜ್ಜೆಗಳ ದಭ ದಭ ಸದ್ದು. ನಾವು ಕುತೂಹಲದಿಂದ ಎದ್ದು ಕಿಟಕಿಯಲ್ಲಿ ಬಗ್ಗಿ ನೋಡಿದವರೇ ಬೆಚ್ಚಿ ಬಿದ್ದೆವು … ಥೇಟ್ ಸಿನೆಮಾದ ದೃಶವೊಂದರ ಶೂಟಿಂಗ್ ನಡೆಯುತ್ತಿದೆಯೇನೋ ಅನ್ನುವ ಹಾಗೆ ಭಾಸವಾಯಿತು. ನಮ್ಮ ಆಫೀಸಿನ ಎದುರು ವಿಶಾಲವಾದ ಖಾಲಿ ಜಾಗವಿತ್ತು. ಅಲ್ಲೆಲ್ಲ ಸುಮಾರು ಮೂರು, ನಾಲ್ಕು ಅಡಿ ಎತ್ತರದ ಕಾಂಗ್ರೆಸ್ ಗಿಡ ಬೆಳೆದಿತ್ತು. ಅವುಗಳ ಮಧ್ಯೆ ಸಣಕಲನೊಬ್ಬ ಉಸಿರುಗಟ್ಟಿ ಓಡುತ್ತಿದ್ದ. ಅವನ ಹಿಂದೆ 8-10 ಜನರ ಗುಂಪು … ಎಲ್ಲರ ಕೈಲೂ ಲಾಂಗು, ಮಚ್ಚು. ಮುಂದಿದ್ದ ಆ ಸಣಕಲ ಶಕ್ತಿ ಮೀರಿ ಓಡುತ್ತಿದ್ದ. ಆದರೆ ಮುಂದೆ ಓಡುತ್ತಿದ್ದ ಅವನಿಗೆ ಪ್ರಾಣದ ಪಣವಿತ್ತು. ಹಾಗಾಗಿ ಅವನ ಕಾಲುಗಳಲ್ಲಿ ಶಕ್ತಿ ಕಡಿಮೆಯಾಗುತ್ತಿತ್ತು ಅನ್ನಿಸುತ್ತದೆ. ಆದರೆ ಹಿಂದಿದ್ದ ಗುಂಪಿಗೆ ರಾಕ್ಷಸ ಶಕ್ತಿಯಿತ್ತು. National Geographic Channelನಲ್ಲಿ ಜಿಂಕೆಯ ರಕ್ತ ಹೀರುವ ಹುಲಿ, ಸಿಂಹಗಳ ಬೇಟೆಯ ಸೀನ್ ಮಾತ್ರ ಕಂಡಿದ್ದ ನನಗೆ ಮನುಷ್ಯ ಮನುಷ್ಯನ ರಕ್ತವನ್ನೇ ಹೀರುವ ಬೇಟೆಯ ದೃಶ್ಯ ಎದೆ ನಡುಗಿಸಿತು. ನಮ್ಮ ಆಫೀಸಿನಲ್ಲಿನ ಎಲ್ಲ ಹುಡುಗರೂ, ನಾವೂ ನಿಂತಲ್ಲೇ ನಿಂತಿದ್ದೆವು ಪ್ರತಿಮೆಗಳಂತೆ…
ಮುಂದೆ ಇದ್ದ ಹುಡುಗ ಒಂದಿಷ್ಟು ಹೊತ್ತು ಅಲ್ಲೆಲ್ಲಾ ಓಡಿ ಓಡಿ ಕೊನೆಗೆ ದಣಿದೋ ಅಥವಾ ಏನಾದರೂ ಎಡವಿಯೋ ನೆಲಕ್ಕೆ ಬಿದ್ದುಬಿಟ್ಟ. ಹಿಂಬಾಲಿಸುತ್ತಿದ್ದ ಗುಂಪು ಅವನನ್ನು ಸುತ್ತುವರೆಯಿತು. ಕೆಳಗೆ ಬಿದ್ದವನ ಆಕ್ರಂದನ ಕೇಳಿಸುತ್ತಿತ್ತು. ಅವನು ಕೈ ಅಡ್ಡ ಮಾಡಿ ಅಳುತ್ತ, ಕೈ ಜೋಡಿಸುತ್ತ ಬೇಡುತ್ತಿದ್ದ. ಸುತ್ತುವರೆದವರಲ್ಲಿ ಒಬ್ಬ ಅವನ ಕೈಲಿದ್ದ ಲಾಂಗಿನಿಂದ ಆ ಕೈ ಮೇಲೆ ಒಂದು ಹೊಡೆತ ಬಿಟ್ಟ … ನಾನು ಚೀತ್ಕಾರ ಒಳಕ್ಕೇ ಅದುಮಿದೆ. ಇನ್ನೊಬ್ಬ ಮತ್ತೊಂದು ಕೈನ ಮೇಲೆ ಮಚ್ಚು ಬೀಸಿದ. ಅಬ್ಬಾ! ಅಂಥ ಘೋರ ದೃಶ್ಯವನ್ನು ಕಂಡ ನಾವು ಉಸಿರಾಡುವುದನ್ನೂ ಮರೆತಂತೆ ನಿಂತಿದ್ದೆವು. ಆ ಗುಂಪಿನ ಜನರು ನೆಲಕ್ಕೆ ಬಿದ್ದಿದ್ದವನಿಗೆ ಮುಖ ಮೂತಿ ನೋಡದಂತೆ ಸಿಕ್ಕ ಸಿಕ್ಕಲ್ಲಿ ಏಟು ಹಾಕುತ್ತಾ ಹೋದರು.
ಅವನು ನೋವಿನಲ್ಲಿ ಜೋರಾಗಿ ಅರಚುತ್ತಿದ್ದ. ಅವರು ಅದರ ಅರಿವೇ ಇಲ್ಲದಂತೆ ಎಲ್ಲ ಭಾಗಗಳ ಮೇಲೂ ಆಯುಧದ ಹೊಡೆತ ಹಾಕುತ್ತಲೇ ಇದ್ದರು. ಅವನು ಪ್ರಜ್ಞೆ ತಪ್ಪಿದನೋ ಅಥವಾ ಸತ್ತೇ ಹೋದನೋ ಗೊತ್ತಾಗಲಿಲ್ಲ … ಒಟ್ಟಿನಲ್ಲಿ ಅವನ ದೇಹದಲ್ಲಿ ಚಲನೆ ನಿಂತಿತು. ಆ ಗುಂಪು ಆರಾಮವಾಗಿ ಅಲ್ಲಿಂದ ಸಿನೆಮಾಗಳಲ್ಲಿ ಆಗುವಂತೆ ಆರಾಮವಾಗಿ ನಡೆದು ಹೋದರು! ನಾವು ಕಣ್ಣು ಗುಡ್ಡೆ ಈಚೆ ಬರುತ್ತದೇನೋ ಅನ್ನುವ ಹಾಗೆ ನಿಂತೇ ಇದ್ದೆವು…ನಮ್ಮ ಅಕ್ಕ ಪಕ್ಕದ ಫ಼್ಯಾಕ್ಟರಿಯವರು, ರಸ್ತೆಯಲ್ಲಿದ್ದ ಜನ ಯಾರೂ ಒಂದಿಂಚೂ ಕದಲದೇ ಹಾಗೇ ನಿಂತಿದ್ದರು … ಮಾರಣಾಂತಿಕ ಹೊಡೆತ ತಿಂದು ಬಿದ್ದಿದ್ದವನ ಹತ್ತಿರಕ್ಕೂ ಸುಳಿಯದೇ …
ಎಷ್ಟು ಸಮಯ ಕಳೆದಿತ್ತೋ ಗೊತ್ತಿಲ್ಲ … ಒಂದಿಷ್ಟು ಹೆಂಗಸರು, ಗಂಡಸರು ಎದೆ ಬಡಿದುಕೊಂಡು ಅಳುತ್ತಾ ಬರುವುದು ಕಾಣಿಸಿತು. ಓಹ್! ಇವರಿಗೂ ಅಪ್ಪ-ಅಮ್ಮ-ಅಣ್ಣ-ಅಕ್ಕ ಅಂತೆಲ್ಲ ಇರುತ್ತಾರಲ್ಲವಾ ಅಂತ ಆಗ ಜ್ಞಾನೋದಯವಾದ ಹಾಗೆ ಅನ್ನಿಸಿತು. ಅಷ್ಟರಲ್ಲಿ ಸಿನೆಮಾದ ಕ್ಲೈಮ್ಯಾಕ್ಸ್ ಸೀನಿನ ಹಾಗೆ ಪೊಲೀಸರು ಬಂದರು. ಆ ಸಣಕಲ ದೇಹವನ್ನು ಎತ್ತಿಕೊಂಡು ಹೊರಟರು.
ಸ್ವಲ್ಪ ಹೊತ್ತಿನ ಮೇಲೆ ಮತ್ತೆ ಎಲ್ಲ ಶಾಂತ … ನನಗೆ ಮಾತ್ರ ಅವನು ಬಿದ್ದಿದ್ದ ಜಾಗದ ಕಡೆಯಿಂದ ಬೀಸುವ ಗಾಳಿಯಲ್ಲಿ ರಕ್ತದ ವಾಸನೆ ಇರುವಂತೆ ಭ್ರಮೆ …
***
ಮಾಡಬಹುದಿತ್ತು – ಮಾಡಬೇಕಿತ್ತು – ಮಾಡಲಿಲ್ಲ …
ಅಳುಕು ಎದೆಯಲ್ಲಿ ಉಳಿದುಬಿಟ್ಟರೆ ಹೀಗೇ … ವರ್ಷ ವರ್ಷಗಳ ನಂತರವೂ ಕಾಡುತ್ತಲೇ ಉಳಿದುಬಿಡುತ್ತವೆ ….



🙁
Modalaneya sanniveshadalli naanu kooda idde.Andu nadeda vishaya eegaloo ede jhal ennisuttade.Avanu jagadinda edda endu nenapu.Baraha chennagide. N.Viswanatha
illa anna …avnige elakke aaglilla
ಮತ್ತದೇ ಪರಿಸ್ಥಿತಿ ಎದುರಾದಾಗಲೂ ಮೊದಲಿನಂತೆ ನುಣುಚಿಕೊಳ್ಳುವ ಪ್ರಯತ್ನವೇ ನಮ್ಮದು 🙂 ನಾವು ನಮ್ಮನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ ಎನ್ನುವುದೇ ಸತ್ಯ .. ಬರಹ ಚೆನ್ನಾಗಿದೆ ಭಾ..
ಬೆಂಗಳೂರಿನ ಕೆಲವೊಂದು ಟ್ರಾಫಿಕ್ ಅಪಘಾತದಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಾದವನಿಗೆ ಸಣ್ಣ ಮಟ್ಟದ ಪ್ರಥಮ ಚಿಕಿತ್ಸೆ ಮಾಡಿದಿನಿ ಅನ್ನೋಕ್ಕೆ ಖುಷಿ ಅನ್ಸತ್ತೆ. ಊರಿನ ಜನರ.. ಹುಡುಗರ ಗುಂಪಿನ ಅನೇಕ ಜಗಳಗಳ ಪ್ರಕರಣಗಳಲ್ಲಿ ಭಾದಿತರನ್ನ ಆಸ್ಪತ್ರೆಗೆ ಸೇರಿಸಿರೋ ಪ್ರಕರಣಗಳು ಕೂಡಾ ಅನೇಕ. ಆದರೂ ಪ್ರತಿಕ್ರಿಯಿಸಿ ಚಿಕಿತ್ಸೆ ಮಾಡಿರೋ.. ಕೊಡಿಸಿರೋ ಪ್ರಕರಣಗಳಿಗಿಂತ.. ಕಾಲ್ಕಿತ್ತ ಪ್ರಕರಣಗಳೇ ಜಾಸ್ತಿ..!! ಪರಿಸ್ತಿತಿ.. ಸಮಯ.. ಸಂಧರ್ಭ ಅದಕ್ಕೆಲ್ಲ ಕಾರಣವನ್ನಾಗಿ ನೀಡಬಹುದು. ಕೆಲವೊಮ್ಮೆ ನಾನಾಗೆ ಆಸಕ್ತಿ ತೋರಿಸಿ ಹೋಗುವ ಮನಸ್ಸು ಮಾಡಿದರು ಜೊತೆಗೆ ಬಂದವರ ಭೀತಿ ಭಯ ಉಪದೆಶಗಳಿಂದಲೂ ಕಾಲ್ಕಿತ್ತದ್ದಿದೆ.
ಮನುಷ್ಯ ಮನುಷ್ಯನಿಗೆ ಆಗಬೇಕು ಮೇಡಂ.. ಮನುಷ್ಯತ್ವ ಉಳಿಬೇಕಿದೆ.. ಮೊದಲು ಮನುಷ್ಯರಾಗಬೇಕಿದೆ.
ರಸ್ತೆ ಅಪಘಾತ, ಅಪಘಾತದಲ್ಲಿ ಸಾವು ಇತ್ಯಾದಿಗಳಲ್ಲಿ ನಾವಷ್ಟೇ ಅಲ್ಲ ಯಾರೂ ಪೋಲಿಸು ಕೇಸು, ಓಡಾಟ -ಜಂಜಾಟಗಳಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ. ದಾರಿಯಲ್ಲಿ ಬಿದ್ದವರನ್ನು ಹೊತ್ತೊಯ್ದು ಮಾನವೀಯತೆ ತೋರುವವರೂ ಇಲ್ಲದ ಹಗರಣ ತಮಗೇಕೆ ಎಂದು ದೂರವುಳಿಯುತ್ತಾರೆ. ನಾವೂ ಅಷ್ಟೇ ಭಾರತೀ!! ಆದರೆ ಅದು ಕಾಡುತ್ತಿರುತ್ತದೆ ಜೀವನ ಪರ್ಯಂತ, ಅದು ನಿಜ. ಒಮ್ಮೆ ನನ್ನ ಗೆಳತಿ ಕಾರಲ್ಲಿ ಬರುವಾಗ ರಿಂಗ್ ರೋಡ್ ದಾಟುತ್ತಿದ್ದ ( ದಾಟಬಾರದು ) ಮುದುಕರಿಗೆ ಬ್ರೆಕ್ ಹಾಕಿದರೂ ಚೂರು ತಾಗಿ ಬಿದ್ದು,ನಮ್ಮ ಕಣ್ಣಮುಂದೆಯೇ ಅವರ ಪಾದ ತಿರುಚಿಕೊಂಡು ಬಿಟ್ಟಿತು. ನಾವಿಬ್ಬರೂ ಹೆಂಗಸರು ಹಾದುಹೋಗುತ್ತಿದ್ದ ಆಟೋದವರಿಗೆ, ಕಾರ್ ಚಾಲಕರಿಗೆ ಆ ಮುದುಕರನ್ನು ಆಸ್ಪೆತ್ರೆ ತಲುಪಿಸಿರಪ್ಫಾ ಅಂದು ವಿನಂತಿಸಿಕೊಂಡರೂ ಒಬ್ಬರೂ ಸಹಾಯಕ್ಕೆ ಬರಲಿಲ್ಲ. ಎಲ್ಲ ನಿಂತು ಶೂಟಿಂಗ್ ನೋಡೋ ತರ ನೋಡ್ತಿದ್ದ್ರು..ಕೆಲವರು ಬೈತಿದ್ದ್ರು ನಮ್ಮನ್ನೆ. ಒಬ್ಬ ನನ್ನ ಗೆಳತಿಗೆ ಸಲಹೆ ನೀಡುವವನಂತೆ ಮಾತಾಡ್ತಾ ಕಾರಲ್ಲಿನ ವಸ್ತುಗಳನ್ನು ವೀಕ್ಷಿಸುವನಂತೆ ನೋಡಿ ಅವಳ ಮೊಬೈಲು ಕದ್ದುಬಿಟ್ಟ. ಸಮಯ ಸಾಧಿಸಿ ಕದಿಯುವ ಕಳ್ಳರೂ ಇರುತ್ತಾರೆ. ಇದೆಲ್ಲ ನೆನಪಾಯಿತು ನಿನ್ನ ಲೇಖನ ಓದಿ ಭಾರತೀ…:(
ಒಂದು ದಿನ ಮಧ್ಯಾಹ್ನ ೪ ಘಂಟೆ ಸುಮಾರಿಗೆ, ಮೆಜೆಸ್ಟಿಕ್ ಬಸ್ ಸ್ಟಾಂಡ್ ನಲ್ಲಿ ಒಬ್ಬ ಹಳ್ಳಿಯವ ದಣಿದು ಕಟ್ಟೆ ಮೇಲೆ ಮಲಗಿದ್ದ. ನಾನು ಅವನನ್ನು ನೋಡುತ ಹೋಗಬೇಕಾದರೆ ಒಬ್ಬ ಕಳ್ಳ ಬಂದು ಸಲೀಸಾಗಿ ಅವನ ಪ್ಯಾಂಟ್ ಮತ್ತು ಶರ್ಟ್ ಕಿಸೆ ಕೈಯಾಡಿಸಿ ಸಿಕ್ಕಿದ್ದನ್ನ್ ತಗೊಂಡು ಹಾಗೆ ಏನೂ ಗೊತ್ತಿಲ್ಲದವನಂತೆ ಆರಾಮಾಗಿ ಹೋಗಿ ಬಿಟ್ಟ !! ನಾನು ಒಂಚೂರು ಧ್ವನಿ ಏರಿಸಿ “ಏಯ್” ಅಂದಿದ್ದರೂ ಸಾಕು, ಇದನ್ನು ತಪ್ಪಿಸಬಹುದಿತ್ತು . .ನಾನು ಇಂದಿಗೂ ಪಶ್ಚಾತ್ತಾಪ ಪಡುತ್ತಿದ್ದೇನೆ.
🙁
ಚಳಿಗಾಲ. ವಠಾರದ ಅಂಗಳಕ್ಕೆ ಮುದುಕಿಯೊಬ್ಬಳು ಆಸರೆ ಬೇಡಿ ಬಂದಿದ್ದಳು. ಒಂದು ಹೊದಿಕೆ ಕೊಟ್ಟು, ಅಂಗಳದ ಒಂದು ಮೂಲೆಯಲ್ಲಿ ಮಲಗಲು ಹೇಳಿ ಕೈ ತೊಳೆದುಕೊಂಡೆವು! ಬೆಳಗ್ಗೆ ಆಕೆ ಅಲ್ಲಿ ಇರಲಿಲ್ಲ. ಎಷ್ಟು ಚಳಿಯಾಯಿತೋ! ಮರಳಿ ಹೋಗಲು ಆಕೆಯ ಬಳಿ ಹಣವಿತ್ತೋ, ಇಲ್ಲವೋ! ಎಲ್ಲಿ ಹೋದಳೋ…. ಏನೂ ಗೊತ್ತಿಲ್ಲ!! ಆಕೆಯ ಮುಖ ನನ್ನ ಕಣ್ಣಲ್ಲಿ ಈಗಲೂ ಹಸಿ ಹಸಿ! 🙁
nijakku nammannu naave vanchisi kollutteve. naavu hrudaya shunyaru ansatte eshto sala
14th of August, 1994 Evening 8.15 P M, There was continuous drizzle and i was returning home in my scooter, There were a lot of people standing and watching a huge trailer near banashankari temple. Since i was completely wet, i came back home. My Neighbour came at 9.30 and asked me to take him to Girinagar since his brother had not reached home. I went along in search of the gentlemen. We went to Banashankari Police station to complain and they asked us about the look of the gentle men and confirmed it was the same person who had fallen down and was run over by a trailer near the temple at 8.10 P M. This incident still haunts me, will haunt me forever. I wish i could have stopped and checked.
Now i make it a point to stop and see if i could be of any use to the situation or the person. Thanks Bharati for writing about it.