ನೆನ್ನೆ ಅವಧಿಯಲ್ಲಿ ಪ್ರಕಟವಾದ ನಮ್ಮ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಯ್ತಲ್ಲ … ಅವೆಲ್ಲ ಘಳಿಗೆಗಳನ್ನು ಎದೆಯ ತುಂಬ ತುಂಬಿಕೊಂಡು ಮನೆಯ ಕಡೆ ಹೊರಟೆ. ಪಕ್ಕದಲ್ಲಿ ಕೂತಿದ್ದ ಅಪ್ಪ ಆ ಪುಸ್ತಕದಲ್ಲಿ ನಾನು ಬರೆದಿದ್ದ ಲೇಖನ ಓದುತ್ತಾ ಕೂತರು. ಅದರಲ್ಲಿ ನಮ್ಮ ಮನೆ ಕೆಲಸದ ಹುಡುಗನೊಬ್ಬ ನನ್ನ ಜೊತೆ ವಿಕೃತ ಹಾವ ಭಾವ ತೋರಿಸುತ್ತಿದ್ದ ಬಗ್ಗೆ ಬರೆದಿದ್ದೆನಲ್ಲ, ಅದನ್ನು ಓದಿ ಅಪ್ಪ ಕೇಳಲೋ, ಬೇಡವೋ ಅನ್ನುವ ಹಾಗೆ ಆ ಹುಡುಗ ಹೊನ್ನಯ್ಯನಾ? ಅಂತ ಕೇಳಿದರು. ನಾನು ಛೇ! ಛೇ! ಅವನಲ್ಲ ಅಂತ ತಕ್ಷಣ ಹೇಳಿದೆ. ಅಪ್ಪನಿಗೆ ಆಗ ಸಮಾಧಾನವಾಯ್ತು ಅನ್ನಿಸುತ್ತದೆ ‘ಸಧ್ಯ! ಅದು ಅವನೇ ಅಂದುಬಿಟ್ಟಿದ್ದರೆ ಗತಿಯೇನು ಅನ್ನಿಸಿತ್ತು. ಅವನು ಎಷ್ಟೊಂದು ಒಳ್ಳೆಯ ಹುಡುಗ ಅಂದುಕೊಂಡಿದ್ದೆ. ಅವನು ಹೀಗೆ ಮಾಡಿದನಾ ಅಂತ ತುಂಬ ಗಾಭರಿಯಾಗಿತ್ತು’ ಅಂದರು.
ಎಷ್ಟೊಂದು ವರ್ಷದ ಕೆಳಗಿನ ನಮ್ಮ ಮನೆಯ ಕೆಲಸದ ಹುಡುಗ ಹೊನ್ನಯ್ಯ ಪಾಪ ಈ ರೀತಿ ನೆನಪಾದದ್ದು ದುರದೃಷ್ಟ. ಆದರೆ ಆ ವಿಕೃತ ಮನುಷ್ಯ ಅವನಾಗಿರಲಿಲ್ಲ ಅನ್ನುವುದೂ ಅಷ್ಟೇ ಅದೃಷ್ಟದ ವಿಷಯ. ಬದುಕಿನಲ್ಲಿ ತುಂಬ ಕೃತಜ್ಞತೆ ಸಲ್ಲಿಸಬೇಕಾದ ಅವನಿಗೆ ಆ ನಿಮಿಷದಲ್ಲಿ, ಘಳಿಗೆಗಳಲ್ಲಿ ನಾನು ಏನೂ ಹೇಳದೇ ಮುಂದೆ ಸಾಗಿ ಬಂದುಬಿಟ್ಟಿದ್ದೆ ನಾನು … ಇದನ್ನು ಅವನು ಓದುವುದಿಲ್ಲ ಅನ್ನುವುದೂ ನನಗೆ ಗೊತ್ತು. ಆದರೂ ಬದುಕಿನಲ್ಲಿ ವಿನಾಕಾರಣ ಪ್ರೀತಿ ತೋರಿಸಿದ, out of the way ಹೋಗಿ ಕಾಳಜಿ ತೋರಿಸಿದ ಅವನ ಕಥೆ ನಿಮಗೆ ಹೇಳಬೇಕು ಅನ್ನಿಸಿತು ..
ನಮ್ಮದು ಊರಿಂದ ಊರಿಗೆ ಸದಾ ಕಾಲ ಟ್ರಾನ್ಸ್‌ಫರ್ ಆಗುತ್ತಲೇ ಹೋಗುವ ಅಪ್ಪನ ಮಕ್ಕಳ ಬದುಕು ಹೇಗಿರುತ್ತದೋ ಅಂತ ಬದುಕು. ಎಲ್ಲ ಊರೂ ನಮ್ಮದು ಮತ್ತು ಯಾವುದೂ ನಮ್ಮದಲ್ಲ ಅನ್ನುವ ರೀತಿ. ಮೂರು ವರ್ಷ ಒಂದೂರಿನಲ್ಲಿ ಇರುವಂಥ ಅಪ್ಪನ ಮಕ್ಕಳು ನಾವು. ಹೋದ ಕೂಡಲೇ ಒಂದಾರು ತಿಂಗಳು ಆ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೇ ಬೇಕಾಗುತ್ತಿತ್ತು. ಹೊಸ ಶಾಲೆ, ಹೊಸ ಜನ, ಹೊಸ ಹೊಸ ಗೆಳತಿಯರು, ಹೊಸ ಬಗೆಯ ದೊಡ್ಡತನ-ಸಣ್ಣತನ … ಎಲ್ಲ ಅರ್ಥವಾಗಿಸಿ ಕೊಳ್ಳುತ್ತಾ ಹೋಗುವ ಬದುಕು ಒಂಥರಾ ಚೆಂದವೇ ಅನ್ನಬೇಕು.
ಸರಗೂರಿಗೆ ಕಾಲಿಟ್ಟಾಗ ನಮ್ಮ ಮನೆಯ ಕೆಲಸಕ್ಕೆ ಸೇರಿದವನು ಈ ಹೊನ್ನಯ್ಯ. ಹೊನ್ನಯ್ಯನಿಗೆ ಗೂನು ಬೆನ್ನು. ಕುತ್ತಿಗೆಯನ್ನೂ ಪೂರ್ತಿ ಎತ್ತಲೂ ಆಗುತ್ತಿರಲಿಲ್ಲ. ಕಪ್ಪಗೆ, ಸಣ್ಣಗಿದ್ದ ಅವನ ನಗು ಮಾತ್ರ ತುಂಬ ಚೆಂದಕ್ಕಿತ್ತು. ಅವನ ಕೆಲಸವೆಂದರೆ ಮನೆಯ ಸುತ್ತ ಕ್ಲೀನ್ ಮಾಡುವುದು, ತರಕಾರಿ ತರುವುದು, ಗಿಡಕ್ಕೆ ನೀರು ಹಾಕುವುದು ಈ ಥರದ ಸುತ್ತು ಕೆಲಸಗಳು. ಮನೆಯ ಕೆಲಸಕ್ಕೆ ಬೇರೊಬ್ಬ ಹೆಂಗಸಿದ್ದಳು. ಹಾಗಾಗಿ ಎಲ್ಲ ಮನೆಯಲ್ಲೂ ಈ ರೀತಿ ಹುಡುಗರು ಕೆಲಸಕ್ಕಿರುವವರು ಇಷ್ಟೇ ಕೆಲಸ ಮಾಡುತ್ತಿದ್ದುದು. ಅವನ ಸಂಬಳವೂ ಅಷ್ಟು ಕೆಲಸಕ್ಕೆ ಮಾತ್ರ ಗೊತ್ತಾಗಿತ್ತು.
ನನ್ನ ಸ್ಕೂಲು ಮನೆಯಿಂದ ಒಂದೂವರೆ-ಎರಡು ಕಿಲೋಮೀಟರ್ ದೂರದಲ್ಲಿತ್ತು. ಜೀವನದಲ್ಲಿ ಮೊತ್ತ ಮೊದಲ ಬಾರಿ ನನ್ನ ಸ್ಕೂಲು ಅಷ್ಟು ದೂರದಲ್ಲಿದ್ದಿದ್ದು. ಉಳಿದೆಲ್ಲ ಕಡೆ ಮನೆಯ ಹತ್ತಿರವೇ ಇರುತ್ತಿದ್ದ ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಮನೆಗೆ ಓಡಿಬಂದು, ಗಬ ಗಬ ತಿಂದು ಓಡುವಷ್ಟು ಹತ್ತಿರದಲ್ಲಿರುತ್ತಿತ್ತು. ಆದರೆ ಈಗ ಅದು ಸಾಧ್ಯವೇ ಇರಲಿಲ್ಲ. ಅರ್ಧ ಘಂಟೆಯಲ್ಲಿ ಮನೆಗೆ ಬಂದು, ಊಟ ಮಾಡಿ ವಾಪಸ್ ಹೋಗುವುದು ಅಸಾಧ್ಯವಾಗಿತ್ತು. ಬೆಳಿಗ್ಗೆ ನಾನು ಶಾಲೆಗೆ ಹೋಗುವಷ್ಟರಲ್ಲಿ ಅಡಿಗೆ ಆಗಿರುತ್ತಿರಲಿಲ್ಲ. ಇದೊಳ್ಳೆ ಫಜೀತಿಯಾಯ್ತಲ್ಲ ಅಂದುಕೊಳ್ಳುವಷ್ಟರಲ್ಲಿ ನಮ್ಮ ಹೊನ್ನಯ್ಯ ದೇವತಾ ಮನುಷ್ಯನ ಹಾಗೆ ಅಭಯ ಕೊಟ್ಟ, ತಾನು ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ನನ್ನ ಸ್ಕೂಲಿಗೆ ಊಟ ತೆಗೆದುಕೊಂಡು ಹೋಗುತ್ತೇನೆ ಎಂದು. ಅದು ಅವನ ಕೆಲಸವಾಗಿರಲೇ ಇಲ್ಲ. ಆದರೂ ಯಾಕೋ ಪಾಪದವನು ನನ್ನ ಪಾಡು ನೋಡಿ ಆ ಕೆಲಸಕ್ಕೆ ತಾನಾಗಿ ಮುಂದಾದ.
ನನಗಾಗ ಹತ್ತು ವರ್ಷ. ಅವನಿಗೆ ಬಹುಶಃ 16-18 ವರ್ಷವಿರಬೇಕು. ಅವತ್ತು ಆ ಕೆಲಸ ಒಪ್ಪಿಕೊಂಡವನು ಮುಂದಿನ ಮೂರು ವರ್ಷದಲ್ಲೂ ಒಂದೇ ಒಂದು ದಿನ ತಪ್ಪಿಸದೇ ಮಧ್ಯಾಹ್ನ ನನ್ನ ಶಾಲೆಯೆದುರು ಹಾಜರಾಗುತ್ತಿದ್ದ. ಉರಿ ಬಿಸಿಲಿರಲಿ, ಮಳೆಯಿರಲಿ. ಅವನು ಮಾತ್ರ ಛತ್ರಿ ಹಿಡಿದಾದರೂ, ಬೆವರು ಸುರಿಸಿಕೊಂಡಾದರೂ ಬಂದೇ ಬರುತ್ತಿದ್ದ. ನನ್ನ ಊಟ ಮುಗಿಯುವವರೆಗೆ ಅಮ್ಮನ ಹಾಗೆ ಪಾಪದವನು ಕಾದು ಕೂತು ಮತ್ತೆ ನನ್ನ ಊಟದ ಬ್ಯಾಗನ್ನು ಎತ್ತಿಕೊಂಡು ವಾಪಸ್ಸಾಗುತ್ತಿದ್ದ. ಈಗ ಅನ್ನಿಸುತ್ತದೆ, ಒಂದು ದಿನಕ್ಕಾದರೂ ನಾನು ನಿಂದು ಊಟ ಆಯ್ತಾ ಅಂತ ಕೇಳಲೇ ಇಲ್ಲವಲ್ಲ ಅಂತ. ಆಗ ಅದ್ಯಾಕೋ ಅದೆಲ್ಲ ಗೊತ್ತೇ ಆಗುತ್ತಿರಲಿಲ್ಲ.
ಹೀಗೆ ಊಟ ತರುತ್ತಿದ್ದ ಹೊನ್ನಯ್ಯ ಆಮೇಲೆ ನನಗೆ ತುಂಬ ಕ್ಲೋಸ್ ಆಗಿಹೋದ. ಸದಾ ವಟಗುಟ್ಟುತ್ತಿದ್ದ ನನ್ನ ಮಾತುಗಳಿಗೆ ಅವನು ಕಿವಿಯಾದ. ನನ್ನ ಸ್ಕೂಲಿನ ವಿಷಯಗಳನ್ನೆಲ್ಲ ಕೇಳುತ್ತಿದ್ದ. ಎಷ್ಟೊಂದು ಸಲ ಏನು ಪಾಠ ಹೇಳಿಕೊಟ್ರು ಅಂತೆಲ್ಲ ಕೇಳುತ್ತಿದ್ದ. ನಾನು ಆಫ್ ಮಾಡಲಾಗದ ರೇಡಿಯೋನಂತೆ (ನನಗೆ ಸಣ್ಣ ವಯಸ್ಸಿನಲ್ಲಿ ಅದೇ ಅಡ್ಡ ಹೆಸರು!) ಅವನಿಗೆ ಸದಾ ಕೊರೆಯುತ್ತಾ ಇರುತ್ತಿದ್ದೆ. ಹಳ್ಳಿಯಲ್ಲೆಲ್ಲ ದೋಭಿ ಅಂಗಡಿ ಅಂತೆಲ್ಲ ಇರುತ್ತಿರಲಿಲ್ಲ. ನಾನೋ ಮೊದಲಿನಿಂದ ತುಂಬ ಶಿಸ್ತುಗಾರ ಪುಟ್ಟಸ್ವಾಮಿ. ನನ್ನ ಬಟ್ಟೆಗಳನ್ನು ನಾನು ಐಯರ್ನ್ ಮಾಡದೇ ಹಾಕುತ್ತಲೇ ಇರಲಿಲ್ಲ. ಅದೆಷ್ಟೇ ಸುಸ್ತಾಗಿರಲಿ, ಆ ಕೆಲಸ ಮಾತ್ರ ಮುಂದೂಡದೇ ರಾತ್ರಿ ಮಲಗುವ ಮುಂಚೆ ಅದನ್ನು ತಿಕ್ಕದೇ ಮಲಗುವುದು ನನ್ನ ಮಟ್ಟಿಗಂತೂ ಅಸಾಧ್ಯವಾಗಿತ್ತು. ನಾನು ಎಷ್ಟೋ ಸಲ ಈ ಥರ ಗೊಣಗುತ್ತಾ ಐಯರ್ನ್ ಮಾಡುತ್ತಿದ್ದುದನ್ನು ಕಂಡ ಹೊನ್ನಯ್ಯ ಆ ಚಾರ್ಜನ್ನೂ ತಾನೇ ತೆಗೆದುಕೊಂಡ. ನನ್ನ ಯೂನಿಫಾರ್ಮಿನ ನೆರಿಗೆಗಳನ್ನು ಹಿಡಿದು ಇಸ್ತ್ರಿ ಹಾಕಲು ಅವನಿಗೆ ಪಾಪ ಗೊತ್ತಿರಲಿಲ್ಲ. ಆದರೆ ಅದೆಷ್ಟು ಶ್ರದ್ಧೆಯಿಂದ ಅದನ್ನು ಕಲಿತನೆಂದರೆ ಯಾವ ನುರಿತ ದೋಭಿಯೂ ಅಷ್ಟು ನೀಟಾಗಿ ನೆರಿಗೆ ಕೂಡಿಸದ ಹಾಗೆ ಮಾಡಿಡುತ್ತಿದ್ದ. ಕೆಲಸದ ಮಧ್ಯೆ ನನ್ನ ಜೊತೆ ಚೌಕಾಬಾರ ಕೂಡ ಆಡುತ್ತಿದ್ದ ನನಗೆ ಹೊನ್ನಯ್ಯನೆಂದರೆ all-in-one ಅನ್ನುವ ಹಾಗೆ ಆಗಿಹೋದ.
ಆಗ ನಾನು ಏಳನೆಯ ಕ್ಲಾಸ್. ಆಗೆಲ್ಲ ಏಳನೆಯ ಕ್ಲಾಸಿನ ಪಬ್ಲಿಕ್ ಪರೀಕ್ಷೆಯೆಂದರೆ ಎದೆ ನಡುಕ. ಸದಾ ಕಾಲ ಮನೆಯಲ್ಲಿ ಓದು, ಓದು ಅನ್ನುವ ಜಪ. ಶಕ್ತಿ ಮೀರಿ ಓದಿನಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಅವತ್ತು ಒಂದು ದಿನ ನಾನು ಬೆಳಿಗ್ಗೆ ಏಳುವಷ್ಟರಲ್ಲಿ ಬಾಯೆಲ್ಲ ಕಹಿ ಕಹಿ. ಸುತ್ತಿಗೆಯಿಂದ ಹೊಡೆದಂಥ ತಲೆನೋವು. ಬಾಯಿಗಿಟ್ಟ ಚಿತ್ರಾನ್ನ ವಿಷ ಅನ್ನಿಸುತ್ತಿತ್ತು. ಥರ್ಮಾಮೀಟರ್ ಬಾಯಿಗಿಟ್ಟರೆ 104 ಡಿಗ್ರಿ ಜ್ವರ! ಅಪ್ಪನ ಫ಼್ರೆಂಡ್ ಡಾಕ್ಟರ್ ನನ್ನ ಜ್ವರ ತಗ್ಗಿಸಲು ಎರಡು ದಿನ ಪ್ರಯತ್ನಿಸಿದರೂ ಒಂದೇ ಒಂದು ಚೂರೂ ಇಳಿಯಲಿಲ್ಲ. ನನ್ನನ್ನು ರಾತ್ರೋ ರಾತ್ರಿ ಮೈಸೂರಿಗೆ ಕರೆದುಕೊಂಡು ಹೋದರು. ಮೊದಮೊದಲು ಮನೆಯಲ್ಲಿಟ್ಟು ಟ್ರೀಟ್‌ಮೆಂಟ್ ಕೊಟ್ಟರು. ಹಾಳು ಜ್ವರ ಒಂದಿಷ್ಟೂ ಜಗ್ಗಲಿಲ್ಲ. ಕೊನೆಗೆ ನನ್ನನ್ನು ಹಾಸ್ಪಿಟಲ್‌ಗೆ ಸೇರಿಸುವ ನಿರ್ಧಾರ ಮಾಡಿದರು. ಅವತ್ತು ಅಲ್ಲಿಗೆ ಕಾಲಿಟ್ಟವಳು ಈಚೆ ಬಂದಾಗ ಬದುಕಿನ ಒಂದೂವರೆ ತಿಂಗಳು ಕಳೆದುಹೋಗಿತ್ತು.

ಸಪ್ಪೆ ಸಪ್ಪೆ ಊಟ, ಸ್ನಾನವಿಲ್ಲದ ದೇಹ, ಜಡೆಗಟ್ಟಿದ್ದ ಕೂದಲು! ಡುಮ್ಮ ಡುಮ್ಮಗಿದ್ದ ನನ್ನ ದೇಹದ ಕೊಬ್ಬೆಲ್ಲ ಕರಗಿಹೋಗಿತ್ತು. ಅಸಾಧ್ಯ ಸುಸ್ತು. ಮತ್ತೆ ರಿಲ್ಯಾಪ್ಸ್ ಆಗದ ಹಾಗೆ ನೋಡಿಕೊಳ್ಳಿ ಅಂತ ಹೇಳಿ ನನ್ನನ್ನು ಊರಿಗೆ ಕಳಿಸಿದರು. ಒಂದೂವರೆ ತಿಂಗಳ ನಂತರ ನಮ್ಮ ಮನೆ ಕಂಡಿದ್ದೆ. ಜಟೆ ಕಟ್ಟಿದ್ದ ಕೂದಲನ್ನು ಬಿಡಿಸಲಾಗದೇ ಅಮ್ಮ ಕತ್ತರಿ ತೆಗೆದು ಅವನ್ನೆಲ್ಲಾ ಕತ್ತರಿಸಿಬಿಟ್ಟಳು. ಇಲಿ ಕಡಿದ ಹಾಗಾಗಿತ್ತು ನನ್ನ ತಲೆಗೂದಲು. ಹೊನ್ನಯ್ಯ ನನ್ನನ್ನೇ ಮರುಕದಿಂದ ನೋಡುತ್ತಾ ನಿಂತಿದ್ದ. ಮಾತಾಡಲೂ ಶಕ್ತಿ ಇರದ ನಾನು ಸಣ್ಣ ಗೆ ನಕ್ಕಿದ್ದೆ ಅಷ್ಟೇ ಅವನನ್ನು ನೋಡಿ.
ಪಬ್ಲಿಕ್ ಪರೀಕ್ಷೆಯಾದ್ದರಿಂದ ಹೇಗೋ ಪಾಸಾದರೂ ಆಗಲಿ ಸಾಕು ಅಂತ ನಿರ್ಧರಿಸಿ ಜನವರಿಯಿಂದ ಶಾಲೆಗೆ ಹೋಗದ ನಾನು ಮತ್ತೆ ಫೆಬ್ರುವರಿ ಕೊನೆಯಲ್ಲಿ ಶಾಲೆಗೆ ಕಾಲಿಟ್ಟಿದ್ದೆ. ಈಗ ನನಗೆ ನಡೆಯಲು ಆಗುತ್ತಿರಲಿಲ್ಲ. ಅಪ್ಪನೇ ನನ್ನನ್ನು ಬೈಕಿನಲ್ಲಿ ಶಾಲೆಗೆ ಬಿಟ್ಟರು. ನನ್ನ ಶಾಲೆಯ ಎಲ್ಲ ಟೀಚರ್‌ಗಳಿಗೂ ನನ್ನ ಕಡೆ ಹೆಚ್ಚು ಮುತುವರ್ಜಿ ವಹಿಸಲು ಹೇಳಿ ಅಪ್ಪ ಹೊರಟುಹೋದರು. ಅವತ್ತು ಶಾಲೆಯಲ್ಲಿ ಅದೇನೋ ಕಾರ್ಯಕ್ರಮ. ಕ್ಲಾಸ್‌ಗಳು ಇರಲಿಲ್ಲ. ನಾನಾದರೂ ಕ್ಲಾಸ್ ಇಲ್ಲ ಅಂತ ಮನೆಗೆ ಬಾರದೇ ಅಲ್ಲೇ ಉಳಿದೆ. ಅವತ್ತು ಹೊರಗಡೆ ಬಿಸಿಲಿನಲ್ಲಿ ಓಡಾಟವೋ ಓಡಾಟ. ನಾನು ಹೆಜ್ಜೆ ಇಡಲೂ ಶಕ್ತಿಯಿಲ್ಲ ಅಂತ ಹೇಳಿದರೆ ಟೀಚರ್‌ಗಳು ಇದೇನು strain ಆಗೋ ಕೆಲಸ ಅಲ್ಲ. ಸುಮ್ಮನೆ ಕೂತಿರೋದು ತಾನೇ … ನಡಿ ನಡಿ ಅಂತ ಅವಸರಿಸಿದರು. ನಾನು ಬಿಸಿಲಿನಲ್ಲಿ ಒಣ ಮುಖ ಹಾಕಿ ಕೂತೆ. ಮಧ್ಯಾಹ್ನದ ಹೊತ್ತಿಗೆ ಮತ್ತೆ ಮೈ ಬಿಸಿ ಶುರುವಾಯ್ತು. ಡಾಕ್ಟರ್ ರಿಲ್ಯಾಪ್ಸ್ ಆಗದ ಹಾಗೆ ನೋಡಿಕೊಳ್ಳಿ ಅಂತ ಎಷ್ಟೊಂದು ಎಚ್ಚರಿಸಿದ್ದರಲ್ಲ … ನನಗೆ ಮೊದಲ ದಿನವೇ ರಿಲ್ಯಾಪ್ಸ್ ಆಗಿಹೋಗಿತ್ತು.
ಮತ್ತೆ ಮೈಸೂರಿಗೆ ವಾಪಸ್! ಹಾಸ್ಪಿಟಲ್‌ಗೆ ಅಡ್ಮಿಟ್ ಆದವಳು ಮತ್ತೆ ಈಚೆ ಬಿದ್ದಾಗ ಮತ್ತೂ ಒಂದು ತಿಂಗಳು ಕಳೆದಿತ್ತು. ಮನೆಗೆ ಬಂದವಳಿಗೆ ಈ ವರ್ಷ ನನ್ನ ಓದಿನ ಕಥೆ ಮುಗಿಯಿತು ಅನ್ನಿಸಿತ್ತು. ನಾನು ತೀರಾ ಸೋತಿದ್ದೆ. ಟೆಕ್ಸ್ಟ್ ಬುಕ್‌ಗಳನ್ನೆಲ್ಲ ಓದುವ ಅಭ್ಯಾಸ ಇನ್ನೂ ಹೆಚ್ಚು ಬೆಳೆದಿರಲಿಲ್ಲ. ಕ್ಲಾಸಿನಲ್ಲಿ ಟೀಚರ್‌ಗಳು ಕೊಡುತ್ತಿದ್ದ ನೋಟ್ಸ್ ಓದುತ್ತಿದ್ದವರು ನಾವು. ಆದರೆ ಮೂರು ತಿಂಗಳು ಶಾಲೆಗೇ ಹೋಗಿಲ್ಲದ ನಾನು ಎಲ್ಲಿಂದ ನೋಟ್ಸ್ ತರಲಿ? ಈಗ ಪರೀಕ್ಷೆಯ ಸಮಯದಲ್ಲಿ ಯಾರೂ ನನಗೆ ನೋಟ್ಸ್ ಕೊಡುವುದೂ ಇಲ್ಲ. ಕೊಟ್ಟರೂ ಮೂರು ತಿಂಗಳ ಅಷ್ಟೂ ಸಬ್ಜೆಕ್ಟ್‌ಗಳ ಪಾಠವನ್ನು ಕಾಪಿ ಮಾಡುವುದು ಹೇಗೆ ಅಂತೆಲ್ಲ ಯೋಚಿಸಿ ಈ ವರ್ಷ ನನ್ನ ಓದಿನ ಕಥೆ ಮುಗಿಯಿತು. ಮುಂದಿನ ವರ್ಷ ಮತ್ತೆ ಏಳನೇ ಕ್ಲಾಸಿಗೆ ಹೋಗಬೇಕು, ಬೇರೆ ದಾರಿಯಿಲ್ಲ ಅನ್ನುವ ಹಾಗೆ ಮಂಕಾಗಿ ಕೂತಿದ್ದೆ.
ಆಗ ಒಳಗೆ ಬಂದ ಹೊನ್ನಯ್ಯನ ಕೈಲಿ ಒಂದಿಷ್ಟು ನೋಟ್ ಬುಕ್‌ಗಳಿದ್ದವು. ಅದೇನು ಅಂತ ತೆಗೆದು ನೋಡಿದರೆ ನಾನು ಹುಷಾರು ತಪ್ಪಿದ ಮೊದಲ ದಿನದಿಂದ ಕೊನೆಯ ದಿನದವರೆಗಿನ ಎಲ್ಲ ಸಬ್ಜೆಕ್ಟ್‌ಗಳ, ಎಲ್ಲ ನೋಟ್ಸನ್ನೂ ಅವನು ಮುತ್ತಿನಂಥ ಅಕ್ಷರಗಳಲ್ಲಿ ಕಾಪಿ ಮಾಡಿಟ್ಟಿದ್ದ! ಎಷ್ಟು ಚೆಂದಕ್ಕೆ ಅಂದರೆ ನಾನು ಕೂಡಾ ಬರೆಯದಷ್ಟು ಮುದ್ದಾಗಿ. ವಾರಕ್ಕೊಂದು ಸಲ ನನ್ನ ಶಾಲೆಗೆ ಹೋಗಿ ನನ್ನ ಗೆಳತಿಯರ ಬುಕ್ ತಂದು ಎಲ್ಲವನ್ನೂ ಕಾಪಿ ಮಾಡುತ್ತಿದ್ದನಂತೆ… ಅದೂ ಒಂದು ದಿನವಲ್ಲ, ಎರಡು ದಿನವಲ್ಲ … ಮೂರು ತಿಂಗಳು! ನಿನಗೆ ಇಷ್ಟು ಚೆನ್ನಾಗಿ ಬರೆಯಕ್ಕೆ ಬೇರೆ ಬರುತ್ತೇನೋ ಅಂತ ನಾನು ಮೆಚ್ಚಿದಾಗ ನಾಚಿ ನಕ್ಕಿದ್ದ ಹೊನ್ನಯ್ಯ. ಆ ಘಳಿಗೆಯಲ್ಲಿ ನನಗೆ ಆದ ಸಂತೋಷ ಇವತ್ತು ಮಾತಿನಲ್ಲಿ ಹೇಳಲು ಖಂಡಿತಾ ಸಾಧ್ಯವಿಲ್ಲ…
ಮತ್ತೆ ಉತ್ಸಾಹ ಒಗ್ಗೂಡಿಸಿಕೊಂಡೆ … ಪರೀಕ್ಷೆಗೆ ಓದಲು ಶುರು ಮಾಡಿದೆ. ಮಲಗಿದಲ್ಲೇ ಮಲಗಿ ಹೊನ್ನಯ್ಯ ಬರೆದಿಟ್ಟಿದ್ದನ್ನು ಓದುತ್ತಾ ಇರುತ್ತಿದ್ದೆ. ಪರೀಕ್ಷೆಗೆ ಇನ್ನು 20-25 ದಿನಗಳು ಮಾತ್ರ ಉಳಿದಿದ್ದವು ಅಷ್ಟೇ. ನನಗೆ ಪಾಸ್ ಆಗುವ ಯಾವ ಭರವಸೆಯೂ ಇರಲಿಲ್ಲ. ಆದರೆ ಪ್ರಯತ್ನ ಮಾಡಲು ಏನು ತೊಂದರೆ ಅಂದುಕೊಂಡೇ ಶುರು ಮಾಡಿದೆ. ದೇಹ ಸುಸ್ತಾಗಿದ್ದರೂ ಬುದ್ಧಿ ತೀರಾ ಮಂಕಾಗಿರಲಿಲ್ಲ. ಹಾಗಾಗಿ ನನ್ನ ಮಟ್ಟಿಗೆ ಎಷ್ಟು ತಯಾರಾಗಬಹುದೋ ಅಷ್ಟೂ ಆದೆ. ಪರೀಕ್ಷೆಗೆ ಹೋದೆ. ಬಂದಿದ್ದನ್ನು ಬರೆದೆ. ಪಾಸ್ ಆಗುವ ಭರವಸೆಯಂತೂ ಇತ್ತು. ರಿಸಲ್ಟ್ ಬಂತು …
ನನಗೆ 77% ಬಂದಿತ್ತು! ನಾನು ಕನಸಿನಲ್ಲೂ ಎಣಿಸದಷ್ಟು ಹೆಚ್ಚು!! ನಾನು ನಮ್ಮ ಹೆಗ್ಗಡದೇವನ ಕೋಟೆ ತಾಲೂಕಿಗೆ ಅತೀ ಹೆಚ್ಚಿನ ಅಂಕ ತೆಗೆದ ಮೂರನೆಯವಳಾಗಿದ್ದೆ ! ಅರ್ಧವರ್ಷ ಸ್ಕೂಲಿಗೇ ಹೋಗದ ನನಗೆ ಇದು ಬೋನಸ್ ಇದ್ದ ಹಾಗೆ ಅನ್ನಿಸಿತ್ತು. ನಮ್ಮ ಊರಿನ ಟೌನ್ ಹಾಲಿನಲ್ಲಿ ಒಂದು ಸನ್ಮಾನ ಬೇರೆ! ಅಲ್ಲಿ ಎಲ್ಲರೂ ಅನಾರೋಗ್ಯದ ಕಾರಣದಿಂದ ಶಾಲೆಗೇ ಹೋಗಲು ಆಗದಿದ್ದರೂ ತಾಲೂಕಿಗೆ ಮೂರನೆಯವಳಾಗಿ ಪಾಸ್ ಆದ ಬುದ್ಧಿವಂತೆ ಅಂತ ಹಾಡಿ ಹೊಗಳಿದ್ದೇ ಹೊಗಳಿದ್ದು! ಅದೆಲ್ಲ ಸರಿ, ಆದರೆ ಆ ಘಳಿಗೆಯಲ್ಲಿ ತನ್ನದಲ್ಲದ ಕೆಲಸವನ್ನು ಅಷ್ಟು ಶ್ರದ್ಧೆಯಿಂದ ಮಾಡಿದ ಹೊನ್ನಯ್ಯನಿಗೆ ಕೃತಜ್ಞತೆಯನ್ನಾದರೂ ಸಲ್ಲಿಸಿದ್ದು ನೆನಪಿಲ್ಲವಲ್ಲ ಅಂತ ಯಾಕೋ ದುಃಖವೆನ್ನಿಸಿತು. ಹಾಗಾಗಿ ಈ ಮೂಲಕ ಅವನಿಗೆ ಇವತ್ತಾದರೂ ಅದನ್ನು ತಲುಪಿಸುವ ಆಸೆ ನನ್ನದು …
ಬದುಕಿನ ಹಾದಿಯಲ್ಲಿನ ಸುದೀರ್ಘ ಪ್ರಯಾಣದಲ್ಲಿ ಯಾರು ಯಾರೋ ನಮ್ಮ ಯಶಸ್ಸಿನಲ್ಲಿ, ನಮ್ಮ ಗುರಿ ಸಾಧಿಸುವಲ್ಲಿ, ನಮ್ಮ ಕನಸುಗಳಲ್ಲಿ ಭಾಗಿಯಾಗಿರುತ್ತಾರೆ. ನಿಮ್ಮ ಬದುಕಿನಲ್ಲೂ ಅಂತವರಿದ್ದರೆ ಒಂದು ಪ್ರೀತಿಯ ಕೃತಜ್ಞತೆ ನೀಡಿ … ನನ್ನಂತೆ ತಡ ಮಾಡದೇ …
ಅಹವಿ ಹಾಡು : ’ಆ ಹೊನ್ನಯ್ಯ ಮತ್ತು ಅವನಂಥವರಿಗೆಲ್ಲಾ ಒಂದು ಥ್ಯಾಂಕ್ಸ್’

ಭಾರತಿ… ಅನಾಥನಾಗಿಯೇ ಬೆಳೆದ ನನ್ನ ಬದುಕನ್ನು ತಿದ್ದಿ ಬುದ್ದಿ ಹೇಳಿ, ‘ತಿಕ್ಕಿ’ ಹೊಳೆಯುವಂತೆ ಮಾಡಿದ ‘ಬಂಗಾರದ ಮನುಷ್ಯ’ರು ಅನೇಕರಿದ್ದಾರೆ. ಅವರಿಗೆಲ್ಲ ನನ್ನ ನಮೀಸಲು ನಿಮ್ಮ ‘ಅಹವಿ’ಯ ಹಾಡು ಪ್ರೆರೇಪಿಸಿದೆ.
ಹೊನ್ನಯ್ಯಾ ಕಿ ಜೈ…
Nanage avana niswartha seve innoo nenapide.Anthahavaru virala.Avanu nanage matte siguvanthadare..re..re N.Viswanatha
ಬದುಕಿನ ಹಾದಿಯಲ್ಲಿನ ಸುದೀರ್ಘ ಪ್ರಯಾಣದಲ್ಲಿ ಯಾರು ಯಾರೋ ನಮ್ಮ ಯಶಸ್ಸಿನಲ್ಲಿ, ನಮ್ಮ ಗುರಿ ಸಾಧಿಸುವಲ್ಲಿ, ನಮ್ಮ ಕನಸುಗಳಲ್ಲಿ ಭಾಗಿಯಾಗಿರುತ್ತಾರೆ. ನಿಮ್ಮ ಬದುಕಿನಲ್ಲೂ ಅಂತವರಿದ್ದರೆ ಒಂದು ಪ್ರೀತಿಯ ಕೃತಜ್ಞತೆ ನೀಡಿ … ನನ್ನಂತೆ ತಡ ಮಾಡದೇ …
ಹೊನ್ನಯ್ಯ ಎಲ್ಲಿದ್ದಾನೋ ಗೊತ್ತಿಲ್ಲ , ಅವನಿಗೆ ಕೃತಜ್ಞತೆ ಹೇಳಬೇಕು ಎನ್ನಿಸಿದೆ . ಚೆನ್ನಾಗಿ ಬರೆದಿದ್ದೀಯ ಭಾರತಿ, ಅಭಿನಂದನೆಗಳು.
ನಮ್ಮೆಲ್ಲರ ಜೀವನದಲ್ಲೂ ನಮಗೆ ನೇರವಾಗಿ ಅಥವಾ ಪರೊಕ್ಷವಾಗಿ ನೆರವಾದ ಈ ಹೊನ್ನಯ್ಯನಂಥ ವ್ಯಕ್ತಿಗಳು ಇದ್ದೇ ಇರುತ್ತಾರೆ.
ಆದರೆ, ಹೆಚ್ಚಿನವರನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ.
ಇನ್ನು ಕೆಲವರು ನಮ್ಮ ನೆನಪಿನಲ್ಲಿ ಉಳಿಯುವುದಿಲ್ಲ.
ನೆನಪಲ್ಲಿ ಹಚ್ಚ ಹಸಿರಾಗಿ ಉಳಿದ ಇನ್ನಿತರರ ಬಗ್ಗೆ ದಿನಾ ನಮ್ಮೊಳಗೇ ಮಾತನಾಡುತ್ತೇವಾದರೂ, ಮನದ ಮಾತುಗಳನ್ನು, ಮನದಿಂದ ಹೊರಗೆ ತರುವುದೇ ಇಲ್ಲ.
ಎಲ್ಲವನ್ನೂ ನೇರವಾಗಿ ಧನ್ಯತಾ ಭಾವದೊಂದಿಗೆ ಬರೆದು ಮುಗಿಸಿ ಕೃತಾರ್ಥರಾಗುವ ಕಲೆ ಎಲ್ಲರಿಗೂ ದಕ್ಕಿರುವುದಿಲ್ಲ.
ಆ ಕಲೆ ದಕ್ಕಿರುವವರಿಗೊಂದು ಕೃತಜ್ಞತೆಯ ನಮನ.
ಭಾರತಿಯವರೇ,ನಿಮ್ಮ ಈ ಬರಹ ನನಗೆ ತುಂಬ ಖುಷಿ ಕೊಟ್ಟಿತು.ಹಾಗೆಯೇ ಮ್ಲಾನವದನನನ್ನಾಗಿಸಿತು.ಇಂಥವರು ಎಷ್ಟು ಜನ ನಮ್ಮ ಬದುಕಿನ ನಾನಾ ಮಜಲುಗಳಲ್ಲಿ ಬಂದು ಹೋಗಿಲ್ಲ? ವಿಚಿತ್ರ ಎಂಥದಿರುತ್ತದೆ ನೋಡಿ:ಇಂಥವರಿಗೆ ಆಯಾ ಸಮಯದಲ್ಲಿ ನಾವೊಂದು ಥ್ಯಾಂಕ್ಸೂ ಹೇಳಿರುವದಿಲ್ಲ.ಮತ್ತು ಇಂಥವರು ಆ ಎಲ್ಲ ಥ್ಯಾಂಕುಗಳನ್ನು ನಿರೀಕ್ಷೆಯನ್ನೇ ಮಾಡದೇ ಅದೆಲ್ಲವನ್ನೂ ಮಾಡಿರುತ್ತಾರೆ ಅನ್ನುವದು ಗೂತ್ತಾಗುವ ವೇಳೆಗೆ ಅವರು ತಮ್ಮ ಜಾಗ ಬಿಟ್ಟೆದ್ದಿರುತ್ತಾರೆ..
ಬರೆದಿದ್ದಕ್ಕೆ ಖುಷಿ ಹಾಗೂ ಧನ್ಯವಾದ.
-Rj
ಹೊನ್ನಯ್ಯನಂತವರು ಎಲ್ಲರ ಜೀವನದಲ್ಲೂ ಇರ್ತಾರೆ….ನಮಗೆ ಗುರುತಿಸುವ ಶಕ್ತಿಯಿರಬೇಕಷ್ಟೆ.ನಾನು ಎಂತಹಾ ಅದೃಷ್ಟವಂತನೆಂದರೆ ನನ್ನ ಜೀವನದ ತುಂಬಾ ಹೊನ್ನಯ್ಯಂದಿರೆ..ಹೊನ್ನಯಂದಿರು.ನಿಮ್ಮ ಲೇಖನ ಓದುತ್ತಾ ನೆನಪಿಸಿಕೊಳ್ಳತೊಡಗಿದೆ.ಅವರಿಗೆಲ್ಲಾ ನಿಮ್ಮ ಲೇಖನದ ಮುಖಾಂತರ ಕೃತಙ್ಞತೆಗಳು.ಧನ್ಯವಾದಗಳು ಮೇಡಮ್
NANNA HALLIYA BADUKINALLI HONNAYYARANTHA ANEKA CHARACTERGALANNU NODIDDENE. NANNA KATHE, LEKHANAGALIGE AVRE SHAYI IDDANTE.NIMMA OLLEYA NENAPIGE DANYAVADAGALU.
ಎಂದರೋ ಮಹಾನುಭಾವುಲು. ಅಂದರಿಕೀ ವಂದನಮುಲು!
ತುಂಬಾ ತುಂಬಾನೇ ಇಷ್ಟ ಆಯ್ತು….
ಹೊನ್ನಯ್ಯನಿಗೊಂದು ಸಲಾಮ್…
🙂
“ಎಲ್ಲವನ್ನೂ ನೇರವಾಗಿ ಧನ್ಯತಾ ಭಾವದೊಂದಿಗೆ ಬರೆದು ಮುಗಿಸಿ ಕೃತಾರ್ಥರಾಗುವ ಕಲೆ ಎಲ್ಲರಿಗೂ ದಕ್ಕಿರುವುದಿಲ್ಲ.
ಆ ಕಲೆ ದಕ್ಕಿರುವವರಿಗೊಂದು ಕೃತಜ್ಞತೆಯ ನಮನ.” ಎಂದ ಆಸು ಹೆಗ್ಡೆಯವರ ಮಾತೇ ನನ್ನದೂ ಕೂಡ.
ಹೊನ್ನಯ್ಯನಿಗೂ ಜತೆಗೆ ಅಂಥ ವ್ಯಕ್ತಿತ್ವಕ್ಕೆ ವಂದಿಸಿದ ನಿನಗೂ ಸಲಾಂ..
ಭಾರತಿಯವರೇ…..ಇ೦ಥ ಕೆಲವರಿ೦ದಲೇ ಮನುಷ್ಯತ್ವದ
ನಿಜರೂಪದ ಅರಿವಾಗುವುದು!