ಅಹವಿ ಹಾಡು : ಆ ಕೈಲಿ ಕೊಟ್ಟಿದ್ದನ್ನ ಈ ಕೈಲಿ ಈಗ ಇಸ್ಕೊಳ್ತಿದೀರಾ..

ಬೆಳಿಗ್ಗೆ ಎದ್ದು ಹಳಸಲು ಮುಖದಲ್ಲಿ ಮನೆಯ ಮುಂದೆ ಪರಕೆ ಹಿಡಿದು ಗುಡಿಸುತ್ತಿದ್ದೆ. ಅದೇನೋ ಬೆಳಗ್ಗೆ ಯಾರಾದರೂ ಮನೆಯಿಂದ ಆಚೆ ಹೋಗುವ ಮುಂಚೆ ಹೊರ ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕಲೇಬೇಕಂತೆ – ಅದು ಅಮ್ಮನ ಮೂಢನಂಬಿಕೆ. ಹೆಣವನ್ನೆತ್ತಿಕೊಂಡು ಹೋದ ಮೇಲೆ ಒಂದು ಬಕೆಟ್ಟಿನಲ್ಲಿ ನೀರು ಹಾಕುತ್ತಾರಲ್ಲ, ಹಾಗಾಗಿ ಮನೆಯಿಂದ ಯಾರಾದರೂ ಹೊರಡುವ ಮೊದಲು ನೀರು ಹಾಕದಿದ್ದರೆ ಹೋದವರು ಹಾಗೇ ಹೆಣವಾಗೋಗ್ತಾರಂತೆ. ಇಂಥವೆಲ್ಲ ನಂಬದ ನಾನು ತಿಳಿ ಹೇಳಲು ಪ್ರಯತ್ನಿಸಿ, ವಾದಿಸಿ, ವಿತಂಡವಾದಿ ಅನ್ನಿಸಿಕೊಂಡು ತೆಪ್ಪಗಾಗಿದ್ದೆ. ಮನೆಯಿಂದಾಚೆ ಅಪ್ಪ ಹೊರಡುವ ಮೊದಲು ಅಂಗಳ ತೊಳೆದು ಒಂದು ರಂಗೋಲಿ ಎಳೆಯಲೇ ಬೇಕು. ಕೆಲಸದಾಕೆ ಬರುವಷ್ಟರಲ್ಲಿ ಅಪ್ಪ ಆಫೀಸ್ ತಲುಪಿ ಎರಡು ಘಂಟೆ ಕಳೆದಿರುತ್ತದೆ. ಹಾಗಾಗಿ ಬೆಳಗಾಗೆದ್ದ ಕೂಡಲೆ ಬಕೆಟ್ ಪರಕೆ ಹಿಡಿದು ಹೊರಡಲೇ ಬೇಕಿತ್ತು. ಇವತ್ತೂ ಅದೇ ಕೆಲಸ ಮಾಡುತ್ತಿರುವಾಗಲೇ ಅಪ್ಪನ ಹೆಸರು ಹೇಳಿ ‘ಇದೇ ಅವರ ಮನೇನಾ?’ ಅಂತ ಸ್ವಲ್ಪ ವಯಸ್ಸಾದ ಗಂಡಸೊಬ್ಬರು ಕೇಳಿದಾಗ ನಾನು ಯಾರೋ ಅಪ್ಪನ ಆಫೀಸಿನವರು ಇರಬೇಕು ಅಂತ ಎಣಿಸಿ, ಅವರು ಒಳ ಬರಲು ಪಕ್ಕಕ್ಕೆ ಸರಿದು ಜಾಗ ಮಾಡಿಕೊಟ್ಟೆ.
ಎರಡೇ ನಿಮಿಷದಲ್ಲಿ ಅಮ್ಮ ಪಿಸುಗುಟ್ಟುತ್ತಾ ನನ್ನನ್ನು ಒಳಗೆ ಕರೆದಳು. ನಾನು ಏನಾಯ್ತೋ ಅಂತ ಒಳಕ್ಕೆ ಹೋದ ನಂತರ ತಿಳಿಯಿತು ಬಂದಿದ್ದಾತ ಗಂಡಿನ ಅಪ್ಪ ಎಂದು!! ನನ್ನನ್ನು ನೋಡಲು ಬಂದಿದ್ದರು ಆ ಮನುಷ್ಯ. ಬೆಳ ಬೆಳಗ್ಗೆದ್ದು ಒಂದು ಮಾತು ಕೂಡಾ ಮುಂಚಿತವಾಗಿ ತಿಳೀಸದೇ ಅವರು ಬಂದಿದ್ದಕ್ಕೆ ನನಗಂತೂ ಅಸಾಧ್ಯ ಸಿಡಿಮಿಡಿಯೆನ್ನಿಸಿತು. ಸುಮ್ಮನೆ ಬರುವವರಾದರೆ ಪರವಾಗಿಲ್ಲ, ‘ಹೆಣ್ಣು ನೋಡಲು’ ಬರುವಾಗಲಾದರೂ ತಿಳಿಸದೇ ಬರೋದು ಸರಿಯಲ್ಲ ಅನ್ನಿಸಿತು. ಹಾಗಂತ ‘ಗಂಡಿನ ಅಪ್ಪ’ ನೆದುರು ಹೇಳೋದಿಕ್ಕೆ ಆಗಲ್ವಲ್ಲ! ಹಾಗಾಗಿ ಬಾಯಿ ಮುಚ್ಚಿಕೊಂಡಿದ್ದೆ. ಅಮ್ಮ ಸಣ್ಣದಾಗಿ ಕೈ ಹೊಸೆಯುತ್ತಾ ‘ಒಂದು ಮಾತು ಹೇಳಿದ್ರೆ ಎಲ್ಲ ರೆಡಿ ಮಾಡ್ಕೊಂಡಿರ್ತಿದ್ವಿ’ ಅಂದಳು. ಆತ ‘ಇಲ್ಲಮ್ಮಾ, ನ್ಯಾಚುರಲ್ ಆಗಿ ಹೇಗೆ ಹುಡುಗಿ ಹೇಗೆ ಇರ್ತಾಳೆ ಅಂತ ನೋಡೋದಿಕ್ಕೋಸ್ಕರಾನೇ ಹೀಗೆ ಹೇಳದೇ, ಕೇಳದೇ ಬಂದಿದ್ದು’ ಅಂದರು! ನೀವು ನಮಗೆ ತಿಳಿಸಿಯೇ ಬಂದಿದ್ದರೂ ನಾನು ಶುಭ್ರವಾಗಿ ಸ್ನಾನ ಮಾಡಿರುತ್ತಿದ್ದೆ ಅನ್ನುವುದೊಂದನ್ನು ಬಿಟ್ಟರೆ ಮತ್ಯಾವ ಬದಲಾವಣೆಯೂ ಇರುತ್ತಿರಲಿಲ್ಲ ಅಂತ ಮನಸ್ಸಿನಲ್ಲೇ ವ್ಯಂಗ್ಯವಾಡಿದೆ.
ಅಮ್ಮ ಅಪ್ಪನನ್ನು ಆಫೀಸಿಗೆ ಕಳಿಸೋದಿಕ್ಕೋಸ್ಕರ ಅಡುಗೆ ಮಾಡ್ತಿದ್ದವಳು, ಅದನ್ನು ನಿಲ್ಲಿಸಿ ಈಗ ಹೇಳದೇ, ಕೇಳದೇ ಬಂದ ಈ ‘ಗಂಪಿ’ ಯ (ಗಂಡಿನ ಪಿತೃ) ಉಪಚಾರಕ್ಕೆ ಏನು ಮಾಡುವುದು ಅಂತ ತಲೆಕೆಡಿಸಿಕೊಳ್ಳುತ್ತಾ ಅಡಿಗೆ ಮನೆಗೆ ಓಡಿದಳು. ಈಗ ‘ನಿಮ್ಮ ಮಗ ಬಂದಿದ್ದರೆ ….’ ಅಂತ ಕೈ ಹೊಸೆಯುತ್ತಾ, ತಡವರಿಸುತ್ತಾ ಮಾತಾಡುವ ಸರದಿ ಅಪ್ಪನದು. ‘ಇಲ್ಲ ಇಲ್ಲ, ನನ್ನ ಮಗ ಡಾಕ್ಟರ್. ಅವನು ತುಂಬ ಬಿಜ಼ಿ ಇರ್ತಾನೆ. ಅವನಿಗೆ ಎಲ್ಲ ಹೆಣ್ಣುಗಳ ಮನೆಗೂ ಬಂದು ನೋಡೋದಿಕ್ಕೆ ಟೈಮ್ ಇರಲ್ಲ. ನೀನೇ ನೋಡ್ಕೊಂಡು ಬಾ ಅಪ್ಪ ಅಂದಿದಾನೆ. ಈಗ ನಿಮ್ಮನೆ ಮುಗಿಸಿ ಇನ್ನೂ ಎರಡು ಮನೆಗೆ ಹೋಗ್ಬೇಕು. ಆಮೇಲೆ ಒಂದು ಫ಼ೈನಲ್ ಲಿಸ್ಟ್ ನಾನು ಮಾಡಿದ್ದನ್ನ ಅವನು ಬಂದು ನೋಡ್ತಾನೆ’ ಅಂದರು ನಿರ್ಭಾವುಕರಾಗಿ. ಲಿಸ್ಟಿನ ಹೆಸರಿನಲ್ಲಿ ಒಂದಾಗಬಹುದಾದಂಥ ನಾನು ಮನಸ್ಸಿನಲ್ಲೇ ಅದು ಹೇಗೆ ಹೀಗೆಲ್ಲಾ ಮಾತಾಡ್ತಾರೆ ಅಂತ ಆಶ್ಚರ್ಯ ಪಡುತ್ತಾ ಕೂತಿದ್ದೆ.
ಅಂತೂ ಆ ಕೊಳಕಲು ಅವಸ್ಥೆಯಲ್ಲೇ ನನ್ನ ಪರೀಕ್ಷೆ ಮುಗಿಯಿತು. ಆಮೇಲೆ ವಾಪಸ್ ಹೋದವರು ‘ಜಾತಕ ಸರಿ ಬರಲಿಲ್ಲ’ ಅಂದರು, ಮುಂಚೆಯೇ ಜಾತಕ ಚೆನ್ನಾಗಿದೆ ಅಂತ ಹೇಳಿದ್ದ ಅವರದ್ದೇ ಸ್ಟೇಟ್‌ಮೆಂಟನ್ನು ತಿರುವಿ ಹಾಕುವಂತೆ. ಅದರರ್ಥ ‘ಹುಡುಗಿ ಚೆನ್ನಾಗಿಲ್ಲ’ ಅಂತ ಅನ್ನುವುದು ನನಗೆ ಗೊತ್ತೇ ಇತ್ತಲ್ಲ, ಹಾಗಾಗಿ ಸುಮ್ಮನಾದೆ. ಬೆಳಗ್ಗೆ ಎದ್ದು ಹಳಸಲು ಮುಖದಲ್ಲಿ ನಿಮ್ಮ ಮಗನ್ನ ನೋಡಿದ್ರೆ ನಾನು ಕೂಡಾ ಒಪ್ಪುತ್ತಿದ್ದೆನೋ ಇಲ್ಲವೋ ಅಂತ ಮನಸ್ಸಿನಲ್ಲೇ ಬಯ್ದುಕೊಂಡು ಸುಮ್ಮನಾದೆ…

***

ನನ್ನ ಫ಼್ರೆಂಡ್ ಒಬ್ಬಳಿಗೆ ಗಂಡು ನೋಡ್ತಿದ್ರು ಅವಳ ಅಪ್ಪ, ಅಮ್ಮ. ಒಂದು ಗಂಡಿನ ಮನೆಯಲ್ಲಿ ಒಂದ್ರಾಶಿ ಜನ … ಎಲ್ಲರೂ ಒಂದು ಸಾರಿ ನೋಡಿ ಮುಗಿಸದೇ ಮೂರು ಸಲ ಆಗಲೇ ಕರೆಸಿ ಆಗಿತ್ತು. ನಾಲ್ಕನೆಯ preparatory ಪರೀಕ್ಷೆ ಇತ್ತು! ಅವತ್ತು ಅವಳಿಗೆ ಜೋರು ಜ್ವರ. ಮೈ ಸುಡುತ್ತಿತ್ತು. ಆ ಗಂಡಿನ ಮನೆಗೆ ಹೋಗುವುದಿರಲಿ, ಏಳಲೂ ಆಗದಷ್ಟು ಸುಸ್ತು. ಅವತ್ತಿಗೆ ಪಾಪ ಅವಳು ಸ್ನಾನ ಮಾಡಿ ಮೂರು ದಿನವಾಗಿ ಹೋಗಿತ್ತು. ಆದರೆ, ಈಗ ಪರೀಕ್ಷೆಯಿತ್ತಲ್ಲ … ಸ್ನಾನ ಮಾಡದೇ ಹೋಗೋದು ಅಸಾಧ್ಯ ತಾನೇ? ಅದಕ್ಕೆ ಅವಳಮ್ಮ ನನ್ನ ಗೆಳತಿಯನ್ನ ಬಲವಂತವಾಗಿ ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ತಲೆ ಸ್ನಾನ ಬೇರೆ ಮಾಡಿಸಿದರು. ಮೊದಲೇ ಕೆಂಡದಂತೆ ಸುಡ್ತಿದ್ದ ಮೈ ಈಗ ಮತ್ತಿಷ್ಟು ಬಿಸಿಯೇರಿತು. ನನ್ನ ಗೆಳತಿಗಂತೂ ನಿಶ್ಯಕ್ತಿಯಿಂದ ಅಳು ಬಂದುಬಿಟ್ಟಿತ್ತು. ಆದರೂ ಆ ಅವಸ್ಥೆಯಲ್ಲೇ ಗಂಡಿನ ಮನೆಗೆ ಅವಳನ್ನು ಎಳೆದುಕೊಂಡು ಹೋದರು.

ಅವತ್ತು ಆ ಗಂಡಿನ ಮನೆಯಲ್ಲಿ ಏನೋ ಫಂಕ್ಷನ್. ಇದ್ದ ಬದ್ದ ನೆಂಟರೆಲ್ಲಾ ಹಾಜರಾಗಿದ್ದರಂತೆ. ಎಲ್ಲರೆದುರೂ ಇವಳ ಪರೀಕ್ಷೆ ಆಯಿತು. ಇವಳು ಸಿಡಿಯುತ್ತಿದ್ದ ತಲೆ ಒತ್ತಿ ಹಿಡಿದು ದ್ರಾಬೆ ಮುಖದಲ್ಲಿ ಪ್ರದರ್ಶನಕ್ಕೆ ಕೂತೇ ಕೂತಳು. ಕೊನೆಗೊಂದು ಸಲ ಅಂತೂ ಎಲ್ಲ ಮುಗಿದು ಹೊರಟ ನಂತರ ಮನೆಗೆ ಬಂದು ಮಲಗಿದವಳು, ಮತ್ತೆ ಏಳಲಿಕ್ಕೆ ಒಂದು ವಾರ ಹಿಡಿಯಿತು. ಇಷ್ಟೆಲ್ಲಾ ಆದ ಮೇಲೆ ಗಂಡಿನ ಮನೆಯವರು ‘ಹುಡುಗಿ ನಮ್ಮ ಹುಡುಗನಿಗೆ ಹೋಲಿಸಿದರೆ ತುಂಬ ಪೀಚು’ ಅಂತ ರಿಜೆಕ್ಟ್ ಮಾಡಿದ ಸುದ್ಧಿಯೂ ಬಂತು …

***

ನನ್ನನ್ನು ನೋಡಲು ಮತ್ತೊಬ್ಬ ಗಂಡು ಬಂದಿದ್ದ. ಮಹಾಶಯ ಅವನೂ ಬೆಳಗಾಗೆದ್ದು ಬಂದಿದ್ದ. ನನ್ನ ವಧುಪರೀಕ್ಷೆಗೂ, ಮುಂಜಾವಿಗೂ ಯಾವುದೋ ನಂಟಿರಬೇಕು ಅನ್ನಿಸುತ್ತದೆ. ನಾನಂತೂ ಮೊದಲಿನ ‘ಗಂಪಿ’ ಹೇಳದೇ ಕೇಳದೇ ಬಂದಿದ್ದರಿಂದ ಅನಿವಾರ್ಯವಾಗಿ ಕೊಳಕಲು ಅವಸ್ಥೆಯಲ್ಲಿದ್ದೆ. ಆದರೆ ಈಗ ಬಂದಿದ್ದ ಗಂಡಿಗಂತೂ ತಾನು ಹೆಣ್ಣು ನೋಡಲು ಹೋಗುತ್ತೇನೆ ಅನ್ನುವುದು ತಿಳಿದಿದ್ದರೂ ರಾತ್ರಿ ಮಲಗಿದ್ದ T Shirt ನ ಮುದುರಿನ ಸಮೇತ ನನ್ನೆದುರು ಕೂತಿದ್ದ. ಆಮೇಲೆ ಜೊತೆಯಲ್ಲಿ ಬಂದಿದ್ದ ನೆಂಟರೊಬ್ಬರು ಮಾತಾಡುತ್ತಲೇ ಇದ್ದರು. ಈತ ನನ್ನ ಕಡೆ ತಲೆ ಕೂಡಾ ಎತ್ತಿ ನೋಡದೇ ಇದ್ದ ಬದ್ದ ಸುಧಾ, ಮಯೂರ, ತರಂಗ, ತುಷಾರ, ಲಂಕೇಶ್ ಪತ್ರಿಕೆ ಎಲ್ಲ ಓದಿದ! ಈಗ ತಲೆಯೆತ್ತುತ್ತಾನೆ, ಆಗ ತಲೆಯೆತ್ತುತ್ತಾನೆ … ಅಂತ ನಾನೂ ಕಾಯುತ್ತಲೇ ಇದ್ದೆ. ಉಹೂಂ, ಅವನು ಅಮ್ಮ ಕೊಟ್ಟ ತಿಂಡಿ ತಿನ್ನುವಾಗಲೂ ಮ್ಯಾಗಜ಼ೀನ್‌ಗಳನ್ನು ಓದಿಯೇ ಓದಿದ. ಅಕ್ಕ ನನ್ನ ಕಿವಿಯಲ್ಲಿ ‘ಅದ್ನೆಲ್ಲ ಮನೆಗೇ ತಗೊಂಡು ಹೋಗಿ ಓದು. ಈಗ ತಲೆ ಎತ್ತು ಮಾರಾಯ ಅಂತ ಹೇಳಿ ಬಿಡಲೇನೇ’ ಅಂತ ಪಿಸುಗುಟ್ಟಿದಾಗ ನಾನು ನಗುವನ್ನು ಒಳಗೆ ಅದುಮಲು ಹರಸಾಹಸ ಪಟ್ಟೆ. ಅಮ್ಮ ಇಬ್ಬರನ್ನೂ ಕೆಂಗಣ್ಣಿನಿಂದ ನೋಡಿದ ಮೇಲೆ ತೆಪ್ಪಗಾದೆವು.
ಆಮೇಲೆ ಅಷ್ಟೊಂದು uninteresting ವ್ಯಕ್ತಿಯ ಜೊತೆ ಬದುಕೋದು ಅಸಾಧ್ಯ ಅಂತ ಹೇಳಿ ನಾನು ಅವನನ್ನು ಮದುವೆಯಾಗಲ್ಲ ಅಂದೆ. ಅವನನ್ನು ನಮ್ಮಲ್ಲಿಗೆ ಕಳಿಸಿದ್ದ ನನ್ನ ಸೋದರತ್ತೆ ಹೆಣ್ಣೊಬ್ಬಳು ಗಂಡನ್ನು ನಿರಾಕರಿಸಿದ್ದಕ್ಕೆ ಹೌಹಾರಿಬಿಟ್ಟಿದ್ದರು. ‘ಎಂಥಾ ರಾಜನಂಥ ಗಂಡು. ಈ ಭಾರತಿಗೆ ಬುದ್ಧಿಯಿಲ್ಲ. ಬಿಡಬೇಡ ವಿಶ್ವ, ನಿನ್ನ ಮಗಳಿಗೆ ಬುದ್ಧಿವಾದ ಹೇಳಿ ಅವನಿಗೆ ಕಟ್ಟು’ ಅಂತ ನನ್ನಪ್ಪನನ್ನು ಹುರಿದುಂಬಿಸಿದರು. ಪುಣ್ಯಕ್ಕೆ ನನ್ನಪ್ಪ ತುಂಬ ಲಿಬರಲ್ ಮನುಷ್ಯನಾಗಿದ್ದರಿಂದ ‘ಅವಳು ಇಷ್ಟ ಇಲ್ಲ ಅಂದ್ಮೇಲೆ ಬೇಡ ಬಿಡು’ ಅಂದುಬಿಟ್ಟರು. ಅದೇ ಕೊನೆ, ಒಬ್ಬ ‘ವರನನ್ನು ನಿರಾಕರಿಸಿ ಅವಮಾನ ಮಾಡಿದ ತಪ್ಪಿಗೆ’ ನನ್ನ ಅತ್ತೆ ಮತ್ತೆಂದೂ ಯಾವ ಗಂಡೂ ಹುಡುಕುವುದಿಲ್ಲ ಈ ಸೊಕ್ಕಿನ ಹೆಣ್ಣಿಗೆ ಅಂತ ಶಪಥ ಮಾಡಿಬಿಟ್ಟರು. ನಾನು ದಿವ್ಯನಿರ್ಲಕ್ಷ್ಯ ತೋರಿಸಿ ಸುಮ್ಮನಾದೆ. ಮೂರನೆಯವನು ಬಂದ, ನನ್ನನ್ನು ಮದುವೆಯಾದ ಅನ್ನುವಲ್ಲಿಗೆ ಈ ಕಥೆಯ ಆ ಅಧ್ಯಾಯ ಮುಗಿಯಿತು …

***

ಉಪಸಂಹಾರ : ಮೊನ್ನೆ ಮೊನ್ನೆ ಯಾವುದೋ ಹೆಣ್ಣು ಗಂಡೊಬ್ಬನನ್ನು ‘ನಮ್ಮ ವೀಕೆಂಡ್ ಕಲ್ಚರ್’ ಹೊಂದುವುದಿಲ್ಲ ಅನ್ನುವ ಕಾರಣಕ್ಕೆ ನಿರಾಕರಿಸಿದಳಂತೆ. ಇನ್ನೊಬ್ಬಳು ಹುಡುಗನಿಗೆ ಪಾರ್ಟಿ ಕಲ್ಚರ್ ಇಲ್ಲ ಅಂತ ಬೇಡ ಅಂದಳಂತೆ. ಇನ್ಯಾವುದೋ ಹುಡುಗಿ ನನ್ಗೆ ಜಾಯಿಂಟ್ ಫ಼್ಯಾಮಿಲಿ ಇಷ್ಟ ಇಲ್ಲ ಅಂತ ಹುಡುಗನನ್ನು ನಿರಾಕರಿಸಿದಳಂತೆ ಅಂತ ಮಾತಾಡಿಕೊಳ್ತಿದ್ದ ಹಳೆಯ ತಲೆಗಳು ‘ಹೆಣ್ಣು ಈ ಕಾರಣಕ್ಕೆಲ್ಲ ಬೇಡ ಅನ್ನೋ ಅಷ್ಟು ಸೊಕ್ಕಿದ್ದಾಳೆ’ ಅಂತ ಬಯ್ದು ಕೊಳ್ತಿದ್ದರು.
ಆ ಕೈಲಿ ಕೊಟ್ಟಿದ್ದನ್ನ ಈ ಕೈಲಿ ಈಗ ಇಸ್ಕೊಳ್ತಿದೀರಾ ಅಷ್ಟೇ ಅಂತ ನಾನು ಮನಸ್ಸಿನಲ್ಲೇ ಅಂದುಕೊಂಡೆ …

‍ಲೇಖಕರು G

January 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. sunil rao

    Eega intaha samasyegalu hecchaagive…birthday ge wish maadalla, aniversary ge gift taralla anno kaaranakke software na obba hudugi, tanna gandanige divorce kottiddaale…abba adeshtu balavaada kaarana!!

    ಪ್ರತಿಕ್ರಿಯೆ
  2. ಅಪರ್ಣ ರಾವ್

    ಭಾರತಿ..ಭಾರತಿ ..:D 😀 ಸಾಕು ಬಿಡಮ್ಮಾ.. ಇನ್ನು ಏನಾದರೂ ಬರೆದಿದ್ದರೆ ಬಾಯಿ ಹರಿದುಹೊಗುವುದೊಂದು ಬಾಕಿ.. ಅದೆಷ್ಟು ಚೆನ್ನಾಗಿ ಮನಸ್ಸಿನಲ್ಲಿ ಬೈಕೊಳ್ತೀಯೇ..ಬೈದುಕೊಳ್ಳುವುದರಲ್ಲೂ ನಿನ್ನ ಲಲಿತ ಸಾಹಿತ್ಯ ಅದ್ಭುತ.. ಸಿಕ್ಕಾ ಪತ್ತೆ ಪ್ರೇರಣೆ ಬರ್ತಿದೆ.. ಇವತ್ತೇ ಪೇಪರ್ ಮೇಲೆ ಏನೋ ಒಂದು ಆಗುತ್ತೆ ಬಿಡು..:D ಲವ್ಲೀ..

    ಪ್ರತಿಕ್ರಿಯೆ
  3. amardeep.p.s.

    ಸುಪರ್ಬ್ ….. ಮೇಡಂ …. ತುಂಬಾ ಇಷ್ಟವಾಯಿತು….ಲೇಖನ.

    ಪ್ರತಿಕ್ರಿಯೆ
  4. y k sandhya sharma

    attegondu kaala,sosegondu kaala. eega ondu vargadalli hudugiyara sankhe kadameyiruvudarinda girlsge demand! anda chenda hoytu, sadya hudugi antadare saaku anno sthiti bandide.nimma anubhava nage barisuttade. adarallu nimma shaily haagide.innuu nimma bhandaaradalli estideyamma? good..odalu unabadisi.will be waiting.

    ಪ್ರತಿಕ್ರಿಯೆ
  5. sindhu

    Bhaa….
    Very true.. ಆ ಕೈಲಿ ಕೊಟ್ಟಿದ್ದನ್ನ ಈ ಕೈಲಿ ಈಗ ಇಸ್ಕೊಳ್ತಿದೀರಾ ಅಷ್ಟೇ ಅಂತ ನಾನು ಮನಸ್ಸಿನಲ್ಲೇ ಅಂದುಕೊಂಡೆ …
    love n hugs
    sin

    ಪ್ರತಿಕ್ರಿಯೆ
  6. Anil Talikoti

    ಭಾರತಿಯರ ಬ್ಯಾಟನಿಂದ ಸಿ‌ಕ್ಸರಗಳಿಗೆಲ್ಲಿ ಬರ? ಆಕರ್ಷಕ ಬರಹ -ಒಂದು ವಿಡಿಯೋ ಕ್ಲಿಪಿಂಗ ನೋಡಿದಂತೆ ಇನ್ನೂ ಸ್ವಲ್ಪ ಬೇಕಿತ್ತು ಎನಿಸುವಂತಹ ಬರಹ -‘ಮೂರನೆಯವನು ಬಂದ, ನನ್ನನ್ನು ಮದುವೆಯಾದ’ -ಇನ್ನೊಂದಿಷ್ಟು ಓದುವ ಭಾಗ್ಯ ನಮಗರಬೇಕಿತ್ತು ಎನಿಸಿದ್ದು ಸುಳ್ಳಲ್ಲ.
    -ಅನಿಲ

    ಪ್ರತಿಕ್ರಿಯೆ
  7. Dr.D.T.Krishnamurthy.

    ಭಾರತಿಯವರೇ:ಸೂಪರ್ ಬರಹ!!! ಹೆಣ್ಣಿನ ತಂದೆಯಾಗಿ ನಾನೂ ಸಾಕಷ್ಟು ಪಾಡು ಪಟ್ಟಿದ್ದೇನೆ.ನಮ ಅನುಭವಗಳು ನಿಮ್ಮ ಬರಹದಲ್ಲಿ!!!ಇನ್ನಷ್ಟು,ಮತ್ತಷ್ಟು ನಿಮ್ಮ ಬರಹಗಳು ಬರಲಿ.ನಮಸ್ತೆ.

    ಪ್ರತಿಕ್ರಿಯೆ
  8. Veena Shivanna

    Bharathi, Super write up. neevu innondashtu hudgaranna nodbaarditta, namge innondashtu super kathe galu sigodu odokke.. 🙂 Fantastic, sense of humour!

    ಪ್ರತಿಕ್ರಿಯೆ
  9. Anonymous

    ಇದು ನಿಜವಾಗಿಯು ಆಶ್ಚರ್ಯಕರ ಸಂಗತಿ!!!!!!!!!!!!!

    ಪ್ರತಿಕ್ರಿಯೆ
  10. Anuradha.B.Rao

    ನಿನ್ನ ಇದೊಂದು ಬರಹ ಉದ್ದದ ಬರಹದ ಕೊಂಡಿ ಕನ್ಯಾಕುಮಾರಿಯಿಂದ ಹಿಮಾಲಯ ತಲುಪಿದೆ .. ಒಂದು ಪುಸ್ತಕ ಬರೆಯಬಹುದು. ಹಾರ್ದಿಕ ಅಭಿನಂದನೆಗಳು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: